Gallstones: ಅಪರೂಪದ ಶಸ್ತ್ರಚಿಕಿತ್ಸೆ- ವೃದ್ಧನ ಹೊಟ್ಟೆಯಿಂದ 8,000ಕ್ಕೂ ಹೆಚ್ಚು ಪಿತ್ತಗಲ್ಲುಗಳ ಹೊರತೆಗೆದ ವೈದ್ಯರು
ಗುರುಗ್ರಾಮ್ ಮೂಲದ ವೃದ್ಧರೊಬ್ಬರಿಗೆ ಸುಮಾರು 1 ಗಂಟೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲುಗಳನ್ನು ಹೊರತೆಗೆದ ವೈದ್ಯರಿಗೆ ಅದನ್ನು ಎಣಿಸಲು ಸುಮಾರು ಆರು ಗಂಟೆಗಳು ಬೇಕಾಯಿತು. ಒಟ್ಟು 8,125 ಕಲ್ಲುಗಳು ವೃದ್ಧನ ಹೊಟ್ಟೆಯಲ್ಲಿತ್ತು. ಎರಡು ದಿನಗಳಲ್ಲಿ ವೃದ್ಧನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.


ಗುರುಗ್ರಾಮ: ವ್ಯಕ್ತಿಯೊಬ್ಬರ ಹೊಟ್ಟೆಯಿಂದ ಬರೋಬ್ಬರಿ 8,000 ಕ್ಕೂ ಹೆಚ್ಚು ಕಲ್ಲುಗಳನ್ನು (Gallstones) ಶಸ್ತ್ರಚಿಕಿತ್ಸೆಯ (Rare Surgery) ಮೂಲಕ ಗುರುಗ್ರಾಮ್‌ನ (Gurugram) ಖಾಸಗಿ ಆಸ್ಪತ್ರೆಯ (Fortis Memorial Research Institute) ವೈದ್ಯರು ಗುರುವಾರ ಹೊರತೆಗೆದಿದ್ದಾರೆ. ಇದು ಭಾರತದಲ್ಲಿ ಇದುವರೆಗೆ ಹೊರತೆಗೆಯಲಾದ ಪಿತ್ತಗಲ್ಲುಗಳಲ್ಲಿ ಮೂರನೇ ಅತಿ ಹೆಚ್ಚಿನದ್ದಾಗಿದೆ. ನಿರಂತರ ಹೊಟ್ಟೆ ನೋವು, ಅನಿಯಮಿತ ಜ್ವರದಿಂದ ಬಳಲುತ್ತಿದ್ದ ಗುರುಗ್ರಾಮ್ ಮೂಲದ 70 ವರ್ಷದ ರೋಗಿಯ ಹೊಟ್ಟೆಯಲ್ಲಿ ಪಿತ್ತಕೋಶ ಕಲ್ಲಿರುವುದು ಇತ್ತೀಚೆಗೆ ದೃಢಪಟ್ಟಿತ್ತು. ಅದನ್ನು ಈಗ ಸಂಪೂರ್ಣವಾಗಿ ಹೊರತೆಗೆಯಲಾಗಿದ್ದು ರೋಗಿ ಚೇತರಿಸಿಕೊಳ್ಳುತ್ತಿರುವುದಾಗಿ ವೈದ್ಯರು ತಿಳಿಸಿದ್ದಾರೆ.
ಗುರುಗ್ರಾಮ್ ಮೂಲದ ವೃದ್ಧರೊಬ್ಬರು ನಿರಂತರ ಹೊಟ್ಟೆ ನೋವು, ಅನಿಯಮಿತ ಜ್ವರದೊಂದಿಗೆ ಹಸಿವಿನ ಕೊರತೆ, ದೌರ್ಬಲ್ಯವನ್ನು ಹೊಂದಿದ್ದರು. ಇದರೊಂದಿಗೆ ನಾಲ್ಕು ವರ್ಷಗಳಿಗೂ ಹೆಚ್ಚು ಕಾಲ ಎದೆ ಮತ್ತು ಬೆನ್ನಿನಲ್ಲಿ ಭಾರವಾದ ಭಾವನೆಯನ್ನು ಅನುಭವಿಸುತ್ತಿದ್ದರು. ಅನೇಕ ವೃದ್ಧ ರೋಗಿಗಳಂತೆ ತಿಂಗಳುಗಳ ಕಾಲ ಹೊಟ್ಟೆಯ ಅಸ್ವಸ್ಥತೆ ಇದ್ದರೂ ಅವರು ಚಿಕಿತ್ಸೆ ಪಡೆಯಲು ಮತ್ತು ವೈದ್ಯರನ್ನು ಭೇಟಿ ಮಾಡಲು ಹಿಂಜರಿಯುತ್ತಿದ್ದರು. ಆದರೆ ತಡೆಯಲಾಗದ ನೋವು ಪ್ರಾರಂಭವಾದಾಗ ಅವರನ್ನು ಅವರ ಕುಟುಂಬವು ಗುರುಗ್ರಾಮದ ಫೋರ್ಟಿಸ್ ಸ್ಮಾರಕ ಸಂಶೋಧನಾ ಸಂಸ್ಥೆಗೆ (ಎಫ್‌ಎಂಆರ್‌ಐ) ದಾಖಲಿಸಿತ್ತು. ಅಲ್ಲಿ ಹೊಟ್ಟೆಯ ಅಲ್ಟ್ರಾಸೌಂಡ್ ನಡೆಸಿದಾಗ ಪಿತ್ತಕೋಶದಲ್ಲಿ ಕಲ್ಲು ತುಂಬಿರುವುದು ದೃಢಪಟ್ಟಿದೆ.
ಅಲ್ಟ್ರಾಸೌಂಡ್ ಸ್ಕ್ಯಾನ್ ನಿಂದ ತೀವ್ರವಾದ ಕೊಲೆಸಿಸ್ಟೈಟಿಸ್ ಸಮಸ್ಯೆ ಇರುವುದನ್ನು ಪತ್ತೆಹಚ್ಚಲಾಗಿದೆ. ಇದು ಪಿತ್ತಕೋಶದ ಸೋಂಕು, ಗ್ಯಾಂಗ್ರೀನ್, ಕೀವು ಮತ್ತು ದೀರ್ಘಕಾಲದ ಕಾಯಿಲೆಯ ಲಕ್ಷಣವನ್ನು ತೋರಿಸಿತ್ತು. ತುಂಬಾ ಅಪಾಯಕಾರಿಯಾಗಿದ್ದರೂ ಪಿತ್ತಗಲ್ಲು ತೆಗೆಯುವ ಶಸ್ತ್ರಚಿಕಿತ್ಸೆಯನ್ನು ಮಾಡಲು ವೈದ್ಯರ ತಂಡ ನಿರ್ಧರಿಸಿದ್ದರು ಎಂದು ಜಠರಗರುಳಿನ ಆಂಕೊಲಾಜಿಯ ಹಿರಿಯ ನಿರ್ದೇಶಕ ಡಾ. ಅಮಿತ್ ಜಾವೇದ್ ತಿಳಿಸಿದ್ದಾರೆ.
ಸುಮಾರು 1 ಗಂಟೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸೆ ನಡೆಸಿ ಕಲ್ಲುಗಳನ್ನು ಹೊರತೆಗೆದ ವೈದ್ಯರಿಗೆ ಅದನ್ನು ಎಣಿಸಲು ಸುಮಾರು ಆರು ಗಂಟೆಗಳು ಬೇಕಾಯಿತು. ಒಟ್ಟು 8,125 ಕಲ್ಲುಗಳು ವೃದ್ಧನ ಹೊಟ್ಟೆಯಲ್ಲಿತ್ತು. ಎರಡು ದಿನಗಳಲ್ಲಿ ವೃದ್ಧನ ಆರೋಗ್ಯದಲ್ಲಿ ಚೇತರಿಕೆ ಕಂಡಿದ್ದು, ಬಳಿಕ ಅವರನ್ನು ಆಸ್ಪತ್ರೆಯಿಂದ ಬಿಡುಗಡೆ ಮಾಡಲಾಯಿತು.
2015ರಲ್ಲಿ, ಕೋಲ್ಕತ್ತಾದ ವೈದ್ಯರ ತಂಡವು 51 ವರ್ಷದ ಮಹಿಳೆಯ ಪಿತ್ತಕೋಶದಿಂದ 11,950 ಪಿತ್ತಗಲ್ಲುಗಳನ್ನು ತೆಗೆದಿದ್ದು ದಾಖಲೆಯಾಗಿದೆ. ಈ ಸಾಧನೆಯನ್ನು ಗಿನ್ನೆಸ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ದಾಖಲಿಸಲಾಗಿದೆ. 2016 ರಲ್ಲಿ ಜೈಪುರದ ಸವಾಯಿ ಮಾನ್ ಸಿಂಗ್ (ಎಸ್ಎಂಎಸ್) ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸಕರು 46 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 11,816 ಪಿತ್ತಗಲ್ಲುಗಳನ್ನು ಹೊರತೆಗೆದಿದ್ದರು.
ಪಿತ್ತಗಲ್ಲು ಯಾಕೆ ಉಂಟಾಗುತ್ತದೆ ?
ಹೆಚ್ಚಿನ ಬೊಜ್ಜು, ಕೊಲೆಸ್ಟ್ರಾಲ್ ಇದಕ್ಕೆ ಮುಖ್ಯ ಕಾರಣವಾದರೂ ನಮ್ಮ ಆಹಾರ ಪದ್ಧತಿ ಕೂಡ ಇದರಲ್ಲಿ ಸೇರಿದೆ. ಸಾಮಾನ್ಯವಾಗಿ ಹೆಚ್ಚಿನ ಸಂಖ್ಯೆಯ ಪಿತ್ತಗಲ್ಲುಗಳನ್ನು ತೆಗೆಯುವುದು ಅಪಾಯಕಾರಿಯಾಗಿರುತ್ತದೆ. ಯಾಕೆಂದರೆ ಇದರಿಂದ ಸಾವಿರಾರು ಕಲ್ಲುಗಳು ಹೊಟ್ಟೆಯಲ್ಲಿ ಬಿಡುಗಡೆಯಾಗುವ ಸಾಧ್ಯತೆ ಇರುತ್ತದೆ. ಇದು ಸೋಂಕು ಅಥವಾ ಹೆಚ್ಚಿನ ತೊಡಕುಗಳ ಅಪಾಯವನ್ನು ಉಂಟುಮಾಡುತ್ತದೆ ಎನ್ನುತ್ತಾರೆ ಡಾ. ಜಾವೇದ್.
ಇದನ್ನೂ ಓದಿ: IndiGo Flight: ದಿಲ್ಲಿ- ಶ್ರೀನಗರ ಇಂಡಿಗೋ ವಿಮಾನದ ಹಾರಾಟದಲ್ಲಿ ಅಡಚಣೆ ; ತನ್ನ ವಾಯುಪ್ರದೇಶ ಬಳಸಲು ಪಾಕ್ ನಕಾರ
ಈ ಕಲ್ಲುಗಳು ಉಂಟಾಗಲು ನಿಖರ ಕಾರಣ ತಿಳಿದಿಲ್ಲವಾದರೂ ಅಧಿಕ ತೂಕ, ಮಧುಮೇಹ ಮತ್ತು ದೀರ್ಘಕಾಲದ ಕಾಯಿಲೆಯಿಂದ ಇದು ಕಂಡುಬರುತ್ತದೆ ಎನ್ನಲಾಗುತ್ತದೆ. ಈ ರೋಗಿಯು ಕಳೆದ ನಾಲ್ಕರಿಂದ ಐದು ವರ್ಷಗಳಿಂದ ರೋಗಲಕ್ಷಣಗಳನ್ನು ಹೊಂದಿದ್ದರು. ಲಕ್ಷಣಗಳು ಪ್ರಾರಂಭವಾಗುವ ಮೊದಲೇ ಪಿತ್ತಗಲ್ಲುಗಳು ಹೊಂದಿದ್ದಿರಬಹುದು ಎನ್ನುತ್ತಾರೆ ವೈದ್ಯರು.
ಇದಕ್ಕೆ ಸಕಾಲಿಕ ಚಿಕಿತ್ಸೆಯ ಅತ್ಯಗತ್ಯ ಎನ್ನುವ ವೈದ್ಯರು ಪಿತ್ತಕೋಶಕ್ಕೆ ಸಂಬಂಧಿಸಿದ ರೋಗಲಕ್ಷಣಗಳನ್ನು ನಿರ್ಲಕ್ಷಿಸಿದರೆ ಕೆಲವು ಜೀವಕ್ಕೆ ಅಪಾಯಕಾರಿಯಾಗಬಹುದು. ಆದ್ದರಿಂದ ಹೊಟ್ಟೆಯ ಅಸ್ವಸ್ಥತೆಯನ್ನು ನಿರ್ಲಕ್ಷಿಸಬಾರದು ಎನ್ನುತ್ತಾರೆ ಡಾ. ಜಾವೇದ್.