Tuesday, 15th October 2024

ಲಾಕ್’ಡೌನ್ ಆದರೂ ಸಂಯಮ ಅರಿಯುವ ಕಾಲವಿದು

ಪ್ರಚಲಿತ

ಪ್ರೊ.ಮಂಜುನಾಥ ಉಲವತ್ತಿ ಶೆಟ್ಟರ್‌

ವೈರಾಣುವನ್ನು ಮಣಿಸಲು ಏಕಚಿತ್ತರಾಗಿ ನಿಲ್ಲುವುದು ಈ ಕ್ಷಣದ ಅಗತ್ಯವಾಗಿದೆ. ಇಷ್ಟಾಗಿಯೂ ನಮ್ಮ ವರ್ತನೆಯಲ್ಲಿ ಬದಲಾವಣೆಯಾಗದಿದ್ದರೆ, ನಮ್ಮನ್ನು ನಾವು ನಿಯಂತ್ರಣ ಮಾಡಿಕೊಳ್ಳದೇ ಹೋದರೆ ಪೊಲೀಸ್, ಮಿಲಿಟರಿ ಬಲಪ್ರಯೋಗದಂಥ ಉಗ್ರಕ್ರಮಗಳು ವ್ಯವಸ್ಥೆಯ ಆದ್ಯತೆಗಳಾಗಿ ಬದಲಾಗಬಹುದು. ಅಂಕಿ ಅಂಶದ ಪ್ರಕಾರ ಭಾರತದಲ್ಲಿ ಸುಮಾರು ೬೦ ಕೋಟಿ ಇಂಟರ್‌ನೆಟ್ ಬಳಕೆದಾರರು, ೪೬ ಕೋಟಿ ವಾಟ್ಸ್‌ಆಪ್ ಬಳಕೆದಾರರು, ೩೨ ಕೋಟಿ ಫೇಸ್‌ಬುಕ್ ಬಳಕೆದಾರರು, ೪೨ ಕೋಟಿ ಯೂಟ್ಯೂಬ್ ಬಳಕೆದಾರ ರಿದ್ದಾರೆ. ದಿನದಲ್ಲಿ ಒಬ್ಬ ವ್ಯಕ್ತಿ ಸರಾಸರಿ ೨.೫೦ ಗಂಟೆ ಗಳಷ್ಟು ಕಾಲ ಸಾಮಾಜಿಕ ಮಾಧ್ಯಮಗಳಲ್ಲಿ ಕಳೆಯು ತ್ತಿದ್ದಾನೆ. ಕತ್ತಲಾವರಿಸಿದ ನಂತರ ದಿನ ಮಾನಕ್ಕೆ ಹೋಲಿಸಿದರೆ ಸರಾಸರಿ ೩ ಗಂಟೆಗಳಷ್ಟು ಹೆಚ್ಚಾಗಿ ಕಾಲ ಕಳೆಯುತ್ತಿದ್ದಾನೆ.

ಕರೋನಾ ವೈರಸ್‌ನಿಂದಾಗಿ ನಾವೀಗ ಒಂದು ರೀತಿಯ ಯುದ್ಧದ ಪರಿಸ್ಥಿತಿಯಲ್ಲಿದ್ದೇವೆ. ಕಣ್ಣಿಗೆ ಕಾಣುವ ವೈರಿಯ ವಿರುದ್ಧದ ಹೋರಾಟ ಸುಲಭ. ಆದರೆ, ಅದೃಶ್ಯ ವೈರಿ ವಿರುದ್ಧದ ಹೋರಾಟ ಕಷ್ಟ. ಹಾಗಂತ, ಮೈಮರೆತು ಕೂರುವಂತಿಲ್ಲ.

ಇಡೀ ಮನುಕುಲಕ್ಕೆ ಕಂಟಕವಾಗುತ್ತಿರುವ ಈ ಕರೋನಾ ವಿರುದ್ಧ ಮಾಡಿ ಕೊಂಡ ವ್ಯವಸ್ಥೆಯ ಜತೆಗೆ ಕೈಜೋಡಿಸುತ್ತಲೇ ನಮ್ಮ ನೆಲೆಯಲ್ಲಿ ನಾವು ಮಾಡಬೇಕಾದ ಕರ್ತವ್ಯಗಳನ್ನು ಚಾಚೂ ತಪ್ಪದೆ ಪಾಲಿಸಿ ಸೋಂಕು ಮತ್ತಷ್ಟು ವಿಸ್ತರಿಸದಂತೆ ನೋಡಿಕೊಳ್ಳಬೇಕಿದೆ.

ಕರೋನಾ ವೈರಾಣು ಸೃಷ್ಟಿಸಿರುವ ಈ ಸಂದಿಗ್ಧ ಪರಿಸ್ಥಿತಿಯೂ ನಮ್ಮ ಶಿಸ್ತು, ಸಂಯಮ, ಸ್ವಯಂ ನಿಯಂತ್ರಣ, ಸಾಮಾಜಿಕ ಕಾಳಜಿ, ತಿಳಿವಳಿಕೆ ಅರಿಯುವ ಪರೀಕ್ಷೆಯನ್ನು ಮತ್ತೊಮ್ಮೆ ತಂದುಕೊಳ್ಳ
ಬೇಕಿದೆ. ಈ ಪರೀಕ್ಷೆಯಲ್ಲಿ ನಾವು ಗೆಲ್ಲಬೇಕಿದೆ ಮತ್ತು ನಮ್ಮೊಂದಿಗಿರುವವರನ್ನು, ನಾವಿರುವ ಸಮಾಜವನ್ನೂ
ಗೆಲ್ಲಿಸಬೇಕಿದೆ. ಇದಕ್ಕೆ ಇರುವ ಏಕೈಕ ಪರಿಹಾರ ಅಂದರೆ, ನಾವು ಇದ್ದಲ್ಲೇ ಇರುವ ಮೂಲಕ ರೋಗ
ಹರಡುವುದನ್ನು ತಡೆಯುವುದು. ಇದು ತುಂಬ ಸರಳವಾದ ಮಾರ್ಗ ಮತ್ತು ಸದ್ಯಕ್ಕೆ ಇಡೀ ಜಗತ್ತು ಕಂಡು ಕೊಂಡಿರುವ ಪರಿಣಾಮಕಾರಿಯಾದ ಮಾರ್ಗವೂ ಹೌದು.

ಸೋಂಕುಪೀಡಿತ ಬಹುತೇಕ ರಾಷ್ಟ್ರಗಳು ಈ ದೈಹಿಕ ಅಂತರ, ಲಾಕ್‌ಡೌನ್‌ನಂಥ ಉಪಕ್ರಮಗಳ ಮೂಲಕವೇ ಎಷ್ಟು ಸಾಧ್ಯವೇ ಆಷ್ಟು ಪ್ರಯತ್ನ ಮಾಡಿ ರೋಗಮುಕ್ತವಾಗಲು ಪ್ರಯತ್ನಿಸುತ್ತಿವೆ (ಉದಾ: ಮಹಾರಾಷ್ಟ್ರ). ನಾವು ಕೂಡ ಈ ಹಾದಿಯಲ್ಲಿ ಸಾಗಬೇಕಾದ ಅನಿವಾರ್ಯತೆ ಇದೆ.

ಇದೊಂದು ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿ ಎಂಬುದನ್ನು ಮರೆಯಬಾರದು. ದೇಶದ ಮೇಲೆ ವೈರಿಗಳು ದಾಳಿ ಮಾಡಿದಾಗ ಹೇಗೆ ಎಲ್ಲರೂ ಜಾತಿ ಮತಭೇದ ಮರೆತು ಒಟ್ಟಾಗಿ ನಿಲ್ಲುತ್ತೇವೋ ಅದೇ ರೀತಿ, ಹಿಡಿತ ತಪ್ಪಿ ಕೈಮೀರುವ ಹಂತಕ್ಕೆ ಹೋಗುತ್ತಿರುವ ಈ ವೈರಾಣುವನ್ನು ಮಣಿಸಲು ಏಕಚಿತ್ತರಾಗಿ ನಿಲ್ಲುವುದು ಈ ಕ್ಷಣದ ಅಗತ್ಯವಾಗಿದೆ. ಇಷ್ಟಾಗಿಯೂ ನಮ್ಮ ವರ್ತನೆಯಲ್ಲಿ ಬದಲಾವಣೆಯಾಗದಿದ್ದರೆ, ನಮ್ಮನ್ನು ನಾವು ನಿಯಂತ್ರಣ ಮಾಡಿಕೊಳ್ಳದೇ ಹೋದರೆ ಪೊಲೀಸ್, ಮಿಲಿಟರಿ ಬಲಪ್ರಯೋಗದಂಥ ಉಗ್ರಕ್ರಮಗಳು ವ್ಯವಸ್ಥೆಯ ಆದ್ಯತೆಗಳಾಗಿ ಬದಲಾಗಬಹುದು.

ಅದಕ್ಕೆ ಪ್ರಜ್ಞಾವಂತ ನಾಗರಿಕರಾದ ನಾವು ಅವಕಾಶ ಮಾಡಿಕೊಡುವುದು ಬೇಡ. ಈಗ ನಾವು ಕೆಲವೇ ಕೆಲವು ದಿನಗಳ ಕಾಲ ನಮ್ಮೆಲ್ಲ ಆಸಕ್ತಿ, ಹಿತಾಸಕ್ತಿಗಳನ್ನು ತ್ಯಾಗ ಮಾಡಿದರೆ ಮುಂದಿನ ದಿನಗಳು ಸದಾವಕಾಶದಿಂದ ಕೂಡಿರಲಿವೆ.

ಚೀನಾದ್ದು ಜಗತ್ತಿನ ಪ್ರಥಮ ಲಾಕ್‌ಡೌನ್: ಕಳೆದ ವರ್ಷ ಡಿಸೆಂಬರ್ ಮಧ್ಯಭಾಗದಲ್ಲಿ ಕರೋನಾ ವೈರಸ್
ಮೊದಲ ಬಾರಿಗೆ ವುಹಾನ್ ನಗರದ ವೆಟ್ ಮಾರ್ಕೆಟ್ ನಲ್ಲಿ ಕಂಡು ಬಂತು. ದಿನದಿಂದ ದಿನಕ್ಕೆ ಸೋಂಕು
ಪೀಡಿತರ ಸಂಖ್ಯೆಯಲ್ಲಿ ಹೆಚ್ಚಳವಾಗ ತೊಡಗಿ, ಸಾಯುವವರು ಸಂಖ್ಯೆಯೂ ಹೆಚ್ಚಿತು. ಹುಬೆಯಿ ಪ್ರಾಂತ್ಯದ ಇತರ ನಗರಗಳಿಗೂ ಈ ಸೋಂಕು ಹಬ್ಬತೊಡಗಿತು. ಚೀನಾ ಸರಕಾರ ತುಂಬ ಬಿಗಿಯಾದ ಕ್ರಮಗಳಿಗೆ ಮುಂದಾಯಿತು. ಕಳೆದ ಜನವರಿ ೨೦ರಂದು ವುಹಾನ್ ನಗರದಲ್ಲಿ ಸಂಪೂರ್ಣ ಲಾಕ್ ಡೌನ್ ಘೋಷಿಸಿತು. ಈ ಘೋಷಣೆ ಹೊರಡಿಸಿ ಜಾರಿ ಮಾಡುವ ಮಧ್ಯದ ಗಂಟೆಗಳ ಅವಧಿಯಲ್ಲಿ ಸುಮಾರು ಲಕ್ಷ ಜನ ವುಹಾನ್ ಬಿಟ್ಟು ಹೊರಟು ಹೋದರು.

ನಗರಕ್ಕೆ ಬಂದು ಸೇರುವ ಎಲ್ಲ ಹೆದ್ದಾರಿಗಳನ್ನು ಮುಚ್ಚಿ, ರಸ್ತೆಗಳ ಮೇಲೆ ಕಣ್ಣಿಡಲಾಯಿತು. ಏರ್‌ಪೋರ್ಟ್, ರೈಲ್ವೇ, ಮೆಟ್ರೊ ವ್ಯವಸ್ಥೆಗಳನ್ನು ಬಂದು ಮಾಡಲಾಯಿತು. ವುಹಾನ್ ನಿಂದ ಯಾರೂ ಅಧಿಕಾರಿಗಳ ಒಪ್ಪಿಗೆ, ವೈದ್ಯಕೀಯ ಪರಿಶೀಲನೆ ಇಲ್ಲದೆ ಹೊರಗೆ ಹೋಗುವಂತೆಯೇ ಇರಲಿಲ್ಲ. ವುಹಾನ್‌ಗೆ ಆರೋಗ್ಯ  ಕಾರ್ಯ ಕರ್ತರು ಮಾತ್ರ ಬರಬಹುದಾಗಿತ್ತು. ನಗರಕ್ಕೆ ದೊಡ್ಡ ಸಂಖ್ಯೆಯಲ್ಲಿ ವೈದ್ಯರು, ಆರೋಗ್ಯ ಕಾರ್ಯಕರ್ತರನ್ನು ಕರೆತಂದು ದೊಡ್ಡ ಪಡೆಯನ್ನೇ ರಚಿಸಲಾಯಿತು.

ಎಲ್ಲ ಕಚೇರಿಗಳು, ಫ್ಯಾಕ್ಟರಿಗಳು ಬಂದ್ ಆದವು. ಐಟಿ ಸಿಬ್ಬಂದಿ ಮನೆಯಿಂದಲೇ ಕೆಲಸ ಮಾಡಬೇಕಾಗಿತ್ತು. ರಸ್ತೆಗಳು ಬಂದ್ ಆಗಿರುವುದರಿಂದ ಅಗತ್ಯ ಆಹಾರ, ವೈದ್ಯಕೀಯ ವಸ್ತುಗಳ ಸರಬರಾಜನ್ನು ಚೀನಾ ಸರಕಾರವೇ ಮಾಡಿತು. ಕೊರಿಯರ್‌ನವರು ಮನೆ, ಅಪಾರ್ಟ್‌ಮೆಂಟ್‌ಗಳ ಮುಂದೆ ತೆರಳಿ ಪ್ಯಾಕ್ ಗಳನ್ನು ಅಲ್ಲಿಟ್ಟು ಬರುತ್ತಿದ್ದರು. ಅವರು ಒಳಹೊಗುವಂತಿರಲಿಲ್ಲ. ಬೀದಿಗಳು ಬಿಕೋ ಎಂದವೂ, ವಾಹನಗಳು ಓಡಾಡಲಿಲ್ಲ. ಒಂದು ಮನೆಯಿಂದ ಒಬ್ಬನಿಗೆ ಮಾತ್ರ ಹೊರಬಂದು ಅವಶ್ಯಕ ಸಾಮಗ್ರಿ ಪಡೆದು ಮರಳಿ ಮನೆ ಸೇರಲು ಅವಕಾಶ ನೀಡಲಾಯಿತು ಅದೂ ಎರಡು ದಿನಕ್ಕೊಮ್ಮೆ ಮಾತ್ರ.

ಹೀಗೆ ಹೋಗಿ ಬರುವವರಿಗೂ ಕಡ್ಡಾಯ ಆರೋಗ್ಯ ಪರೀಕ್ಷೆ ಮಾಡಲಾಗುತ್ತಿತ್ತು. ವಿಶ್ವ ಆರೋಗ್ಯ ಸಂಸ್ಥೆಯ ತುರ್ತು ಪರಿಸ್ಥಿತಿ ತಜ್ಞ ಮೈಕ್‌ರ‍್ಯಾನ್ ಅವರು, ವೈರಸ್‌ನ್ನು ಎದುರಿಸಲು ಬರೀ ಲಾಕ್‌ಡೌನ್ ಸಾಲದು ಎಂದು ವಿಶ್ವ ಸಮುದಾಯವನ್ನು ಆಗ ಎಚ್ಚರಿಸಿದ್ದರು. ಲಾಕ್‌ಡೌನ್‌ನೊಂದಿಗೆ ಸರ್ವಸನ್ನದ್ಧವಾದ ಆರೋಗ್ಯ ಸೇವೆ, ಬಿಗಿಕ್ರಮಗಳೂ ಅಗತ್ಯ ಎಂದು ಅವರು ಒತ್ತಿ ಹೇಳಿದ್ದರು. ಸೋಂಕಿತರನ್ನು ಕಂಡುಹಿಡಿಯುವುದು, ಅವರನ್ನು
ಪ್ರತ್ಯೇಕವಾಗಿಡುವುದು, ಅವರೊಂದಿಗೆ ನಿಕಟ ಸಂಪರ್ಕದಲ್ಲಿ ಬಂದವರ ಮೇಲೆ ನಿಗಾ ಇಡುವುದು ಇಂದಿನ ಅಗತ್ಯ.

ಸರಿಯಾದ ಆರೋಗ್ಯ ಸೇವೆಯನ್ನು ಕಾಪಾಡದೇ ಹೋದರೆ ಉಂಟಾಗುವ ಆಪಾಯ ಇದು-ಒಮ್ಮೆ ಲಾಕ್‌ಡೌನ್ ತೆರೆದ ಕೂಡಲೇ ವೈರಸ್ ಮತ್ತೆ ತನ್ನ ಹಾವಳಿಯನ್ನು ಆರಂಭಿಸಬಹುದು ಎಂದು ರ‍್ಯಾನ್ ಹೇಳಿದ್ದನ್ನು ನೆನಪಿಸಿಕೊಳ್ಳಲು ಸಕಾಲ. ಚೀನಾ ಲಾಕ್‌ಡೌನ್‌ಗೆ ಮುನ್ನ ಆಸ್ಪತ್ರೆಗಳನ್ನು ರಚಿಸಿದ್ದುದನ್ನು ಇಲ್ಲಿ ಸ್ಮರಿಸ ಬಹುದು. ವುಹಾನ್ ನಗರವನ್ನು ಚೀನಾ ಲಾಕ್‌ಡೌನ್ ಮಾಡಿದ ರೀತಿಯನ್ನು ವಿಶ್ವ ಆರೋಗ್ಯ ಸಂಸ್ಥೆ ಊಹಾತೀತ ಎಂದು ಬಣ್ಣಿಸಿತು.

ಚೀನಾದ ಅಧಿಕಾರಿಗಳು ದೇಶವನ್ನು ವೈರಸ್ ಮುಕ್ತ ಮಾಡಲು ಎಷ್ಟು ಕಟಿಬದ್ಧರಾಗಿದ್ದಾರೆ ಎಂಬುದನ್ನು ಅದು ತೋರಿಸಿಕೊಟ್ಟಿದೆ ಎಂದಿರುವುದನ್ನು ನೆನಪಿಸಿಕೊಳ್ಳಲು ಇಂದು ಸಕಾಲ. ಒಂದು ನಗರವನ್ನು ಈ ಪರಿಯಲ್ಲಿ ಲಾಕ್‌ಡೌನ್ ಮಾಡಬಹುದು ಎಂಬುದು ವಿಜ್ಞಾನಕ್ಕೆ ಹೊಸತು ಎಂದು ಅದು ಹೇಳಿದ್ದು ವಿಶೇಷ. ಮಾನವ ಹಕ್ಕುಗಳನ್ನು ದಮನ ಮಾಡಲಾಗಿದೆ ಎಂದು ಕೆಲವರು ತಕರಾರು ತೆಗೆದರಾದರೂ, ವೈರಸ್‌ನ ಆತಂಕದ ಮುಂದೆ ಗೌಣವಾಗಿದ್ದು ಇಂದಿನ ವಿಶೇಷ.

ನಾವೀಗ ಗಮನಿಸಬೇಕಿರುವ ಮತ್ತೊಂದು ಸಂಗತಿ ಇದೆ. ಕರೋನಾ ನಿಯಂತ್ರಣಕ್ಕೆ ಇಡೀ ರಾಜ್ಯ ಲಾಕ್’ಡೌನ್ ಒಳಗಾದ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರ ಮಹಾ ವಲಸೆ ಆರಂಭವಾಗಿದೆ. ಮಹಾನಗರಗಳಿಂದ ತಮ್ಮ ಹಳ್ಳಿಗಳಿಗೆ, ಅನ್ಯ ರಾಜ್ಯಗಳಿಂದ ತಮ್ಮ ರಾಜ್ಯಗಳಿಗೆ ಸಾಮೂಹಿಕ ವಲಸೆಯನ್ನು ನಾವು ಕಾಣುತ್ತಿದ್ದೇವೆ. ಅದು ಸಹಜವೂ ಹೌದು. ಕುಟುಂಬದ ನಿರ್ವಹಣೆಗೆ ಉದ್ಯೋಗ ಆರಸಿ ಬಂದವರಿಗೆ ತುತ್ತು ಊಟವೂ ಸಿಗದಿದ್ದಾಗ ಅವರು ತಮ್ಮ ಮೂಲ ಸ್ಥಳಗಳಿಗೆ ತೆರಳುತ್ತಾರೆ. ಆದರೆ, ಹೀಗೆ ವಲಸೆ ಹೋಗುವಾಗ ಕರೋನಾ ವೈರಾಣು ಹರಡುವ ಸಾಧ್ಯತೆಗಳು ಇನ್ನೂ ಹೆಚ್ಚಾಗಿರುತ್ತದೆ.

ಆದ್ದರಿಂದ ಕೂಲಿ ಕಾರ್ಮಿಕರು ಯಾವ ರಾಜ್ಯದಲ್ಲಿದ್ದಾರೋ ಆ ರಾಜ್ಯಗಳೇ ಈ ಕಠಿಣ ಪರಿಸ್ಥಿತಿ ಮುಗಿಯೋ ವರೆಗೂ ನೋಡಿಕೊಳ್ಳುವ ವ್ಯವಸ್ಥೆ ಮಾಡಕೊಳ್ಳಬೇಕಿದೆ. ಜತೆಗೆ, ಇಂಥವರ ನೆರವಿಗಾಗಿಯೇ ನಮ್ಮ ವ್ಯವಸ್ಥೆ ಅನೇಕ ಸವಲತ್ತುಗಳನ್ನು ಘೋಷಣೆ ಮಾಡುತ್ತಿವೆ. ಅದರ ಪ್ರಯೋಜನ ಈ ಕಾಲದಲ್ಲಿ ಅಸಹಾಯಕರಿಗೆ
ದಕ್ಕುವಂತೆ ಮಾಡುವ ವ್ಯವಸ್ಥೆಯಾಗಬೇಕಿದೆ.

ಹಾಗಾದಾಗ, ಸಾಮೂಹಿಕ ವಲಸೆಯೂ ತಪ್ಪುತ್ತದೆ ಮತ್ತು ಅದರ ಜೊತೆಗೆ ವೈರಾಣು ಹರಡುವುದನ್ನು
ಪರಿಣಾಮಕಾರಿಯಾಗಿ ತಡೆಯಬಹುದು. ನಾವೀಗ ಅನಗತ್ಯವಾಗಿ ಆತಂಕಕ್ಕೆ ಒಳಗಾಗುವುದು ಬೇಡ. ಈಗಾಗಲೇ ಬೇಕಾದಷ್ಟು ಕಷ್ಟಗಳ ಬಂದಿವೆ ಮತ್ತು ಅವುಗಳನ್ನು ಎದುರಿಸಿಯೂ ಆಗಿದೆ. ಹಾಗಾಗಿ, ಇದಕ್ಕಿಂತ ಹೆಚ್ಚು ಕಷ್ಟ ಬರಲಾರದು. ಜೀವವೊಂದು ಉಳಿದರೆ ಮುಂದಿನ ದಿನಗಳನ್ನು ನಾವು ನಮ್ಮ ಜೀವನಮಟ್ಟ ವನ್ನು ಸುಧಾರಿಸಿಕೊಳ್ಳಬಹುದು.

ಕರೋನಾ ವೈರಸ್ ವಿರುದ್ಧ ಹೋರಾಡಲು ಇಡೀ ದೇಶವನ್ನು ಲಾಕ್‌ಡೌನ್ ಮಾಡಿದ ನಂತರ ಸ್ಥಳೀಯವಾಗಿ ಹಲವು ಬೆಳವಣಿಗೆಗಳು ಆಗಿರುವುದು ನಮ್ಮ ಕಣ್ಣು ಮುಂದಿದೆ. ಕೋವಿಡ್ ವಿರುದ್ಧದ ನಮ್ಮ ಸಮರದಲ್ಲಿ ನಾವು ಮನಗಾಣಬೇಕಿರುವುದು ಏನೆಂದರೆ, ಇದು ಒಬ್ಬಿಬ್ಬರಿಂದ ಸಾಧ್ಯವಾಗುವ ಯುದ್ಧವಲ್ಲ. ನಾವೆಲ್ಲರೂ ಒಗ್ಗಟ್ಟಾಗಿ ಹೋರಾಡಿದರೆ ಮಾತ್ರ ಇದನ್ನು ಮಣಿಸಲು ಸಾಧ್ಯ. ಲಾಕ್‌ಡೌನ್‌ನ ಉದ್ದೇಶವೇ ಇದು. ಯಾರೂ ಅನಗತ್ಯವಾಗಿ ತಿರುಗಾಡದೆ, ಮನೆಯಲ್ಲಿದ್ದು, ಲಾಕ್‌ಡೌನ್ ಪಾಲಿಸಿದರೆ ಈ ಕಾಯಿಲೆಯನ್ನು ಪರಿಣಾಮ ಕಾರಿಯಾಗಿ ತಡೆಗಟ್ಟಬಹುದು.

ನಾವೀಗ ಗಂಭೀರವಾಗಿ ಪರಿಗಣಿಸದಿದ್ದರೆ ಏನಾಗುತ್ತದೆ ಎಂಬುದಕ್ಕೆ ನಮ್ಮಲ್ಲಿನ ನೇ ಅಲೆ, ಇಟಲಿ, ಸ್ಪೇನ್‌ಗಳ ನಿದರ್ಶನ ನಮ್ಮ ಕಣ್ಣು ಮುಂದೆಯೇ ಇದೆ. ಖಾಲಿ ರಸ್ತೆಗಳಲ್ಲಿ ವ್ಹೀಲಿಂಗ್ ಮಾಡುವವರು, ಗುಂಪುಗೂಡಿ ಹರಟೆ ಹೊಡೆಯುವ ಪಡ್ಡೆಗಳು, ಅನಗತ್ಯವಾಗಿ ದಿನಕ್ಕೆ ನಾಲ್ಕಾರು ಬಾರಿ ಅಂಗಡಿಗೆ ಎಡತಾಕುವವರು, ಅಗತ್ಯ ವಸ್ತುಗಳು ಲಭ್ಯವಿದ್ದರೂ ಗಾಬರಿ ಬಿದ್ದು ಅವುಗಳನ್ನು ಖರೀದಿಸಲಲು ನೂಕುನುಗ್ಗಲು ನಡೆಸುವವರು- ಇವೆಲ್ಲ ವಿವೇಚನೆರಹಿತವಾಗಿ ವರ್ತಿಸುವುದಕ್ಕೆ ಉದಾಹರಣೆ.

ಉಡಾಫೆಯಿಂದ ಬೀದಿಗಿಳಿಯುವವರನ್ನು, ಕಾನೂನನ್ನು ಗೌರವಿಸದವರನ್ನು ಮಣಿಸಲು ಪೊಲೀಸರು ಲಘು
ಲಾಠಿ ಪ್ರಹಾರ ಮಾಡಿದರೆ ಅದರಲ್ಲಿ ತಪ್ಪೇನೂ ಕಾಣಿಸುವುದಿಲ್ಲ. ಈ ರೋಗ ಬಗ್ಗು ಬಡಿಯಲು ಆರೋಗ್ಯ ಸಿಬ್ಬಂದಿ, ಬೇರೆ ಬೇರೆ ಇಲಾಖೆಗಳಿಂದ ನಿಯೋಜನೆಗೊಂಡ ಸಿಬ್ಬಂದಿ ಮತ್ತು ಪೊಲೀಸರೂ ಊಟ ತಿಂಡಿ ಬಿಟ್ಟು, ಬಿಸಿಲಿನಲ್ಲಿ ನಿಂತು ತಮ್ಮ ಜೀವಕ್ಕೂ ರಿಸ್ಕ್ ಇರುವುದನ್ನು ಅರಿತುಕೊಂಡೇ ಕರ್ತವ್ಯ ನಿರ್ವಹಿತ್ತಿರು ವವರು. ನಮ್ಮ ದೇಶದಲ್ಲಿ ದುರಾದೃಷ್ಟವಶಾತ್, ಸ್ವಇಚ್ಛೆಯಿಂದ ಕಾನೂನು ಪಾಲಿಸುವವರು ಕಡಿಮೆ.

ಹೀಗಾಗಿ ಪೊಲೀಸರೂ ಬಿಗಿಯಾಗಿ ವರ್ತಿಸಿರಬಹುದು. ಅರ್ಥ ಮಾಡಿಕೊಂಡು ಲಾಕ್‌ಡೌನ್‌ನ ನಿಯಮ ಗಳನ್ನು ಪಾಲಿಸುವುದರಲ್ಲಿ ಎಲ್ಲರ ಹಿತವಿದೆ. ಇನ್ನೂ ಕೆಲವು ವದಂತಿಗಳಿಗೆ ಸಂಬಂಧಿಸಿದಂತೆ, ವಿವೇಚನೆಯೇ ಇಲ್ಲಿ ಪ್ರಮುಖ ಪಾತ್ರವಹಿಸಬೇಕು. ಕರೋನಾ ವೈರಸ್‌ಗೆ ಸಂಬಂಧಿಸಿದ ಯಾವುದೇ ಸುದ್ದಿಗಳನ್ನು ಪಡೆಯ ಬೇಕಿದ್ದರೂ ಆರೋಗ್ಯ ಇಲಾಖೆಯ ಬುಲೆಟಿನ್ ಅಧಿಕೃತ.

ವಿಶ್ವಾಸಾರ್ಹ ಮಾಧ್ಯಮಗಳಾದ ಪತ್ರಿಕೆಗಳು ಮತ್ತು ದೃಶ್ಯ ಮಾಧ್ಯಮಗಳು ಸುದ್ದಿ ವಿಶ್ಲೇಷಣೆಗಳನ್ನು ಜನತೆಗೆ
ಹೊಣೆಯರಿತು ತಲುಪಿಸುತ್ತಿವೆ. ಕೋವಿಡ್‌ಗೆ ಖಚಿತ ಔಷಧವಿಲ್ಲದಿದ್ದರೂ ಲಸಿಕೆಯನ್ನು ಸರ್ಕಾರ ನಿಗದಿ ಪಡಿಸಿದ ವಯೋಮಾನಕ್ಕನುಗುಣವಾಗಿ ಪಡೆದುಕೊಳ್ಳುವುದು ಇನ್ನೂ ಒಳಿತು. ಈ ಕುರಿತು ನಿಖರ ಸಂಶೋಧನೆಗಳು ನಡೆಯುತ್ತಿದ್ದು, ವಿಶ್ವ ಆರೋಗ್ಯ ಸಂಸ್ಥೆ ಖಚಿತಪಡಿಸಿದರೆ ಮಾತ್ರ ಅದು ಅಧಿಕೃತ ಔಷಧ ವೆನಿಸುತ್ತದೆ. ಸ್ಥಳೀಯ ವೈದ್ಯ ಪದ್ದತಿಗಳು ರೋಗ ಪ್ರತಿರೋಧಕ ಶಕ್ತಿ ಬೆಳೆಸಲು ಅವುಗಳದೇ ಅದ ವಿಧಾನ ಗಳನ್ನು ಅನುಸರಿಸುತ್ತವೆ.

ಸತ್ಯ ಗೆಲ್ಲಬೇಕಾದರೆ ಸುಳ್ಳನ್ನು ತಡೆಯುವುದು ಮೊದಲ ಅಗತ್ಯ. ಕೊರೊನಾ ವಿರುದ್ಧದ ಯುದ್ಧದಲ್ಲಿ ಈ ಕೆಲವು ಸಣ್ಣಪುಟ್ಟ ಅವಗಡಗಳನ್ನು ಮರೆತು, ಅದರಲ್ಲಿನ ಮಹತ್ವದ ಸಂಗತಿಗಳನ್ನು ಪಾಲಿಸಿ ನಮ್ಮನ್ನು ನಾವೇ ಕಾಪಾಡಿಕೊಳ್ಳೋಣ.