Sunday, 15th December 2024

ಪತ್ರಿಕೆಯ ಅಂದವಾದ ಪುಟ ಉತ್ತಮ ಪೇಂಟಿಂಗ್‌ಗೆ ಸಮ!

ನೂರೆಂಟು ವಿಶ್ವ
ವಿಶ್ವೇಶ್ವರ ಭಟ್

I think that you have to have the ability to not just live in the present, but push yourself to the future, and I think that’s what I did. That’s what I do & Mario Garcia, Newspaper Designer ಮೊನ್ನೆ (ಆಗಸ್‌ಟ್‌ 31ರಂದು) ದಿಲ್ಲಿ ಮೂಲದ ‘ಹಿಂದುಸ್ತಾನ್ ಟೈಮ್ಸ್’ ಪತ್ರಿಕೆಯನ್ನು ಬೆಳಗ್ಗೆ ನೋಡುವಾಗ ಹಿತವಾದ ಅಚ್ಚರಿ. ಹಿಂದಿನ ದಿನ ಪತ್ರಿಕೆ ಬೇರೆ ರೀತಿಯಲ್ಲೇ ಇತ್ತು. ಇಂದು ನೋಡಿದರೆ, ಪೊರೆ ಕಳಚಿಕೊಂಡ ಹಾವಿನಂತೆ.

ಈ ಬದಲಾವಣೆಯ ಬಗ್ಗೆ ಪತ್ರಿಕೆ ಯಾವುದೇ ಮುನ್ಸೂಚನೆ ಸಹ ಕೊಟ್ಟಿರಲಿಲ್ಲ. ಸೋಜಿಗದಿಂದ ದಮ್ಮು ಕಟ್ಟಿಕೊಂಡು ಪತ್ರಿಕೆಯ ಪುಟವನ್ನು ಒಂದೊಂದಾಗಿ ಮಗುಚಿ ಹಾಕುತ್ತಿದ್ದರೆ, ಹಿತವಾದ ಅನುಭವ. ಪತ್ರಿಕೆ ತನ್ನ ಅಂದ ಬದಲಿಸುವುದಕ್ಕೆ relaunching ಅಥವಾ rebranding ಅಂತ ಕರೆಯುತ್ತಾರೆ. ಇದು ಒಂಥರಾ ಆಪಲ್ ಅಥವಾ ಐಫೋನ್ ತನ್ನ ವರ್ಷನ್ ಬದಲಿಸಿ, ಹೊಸ ಗೆಟಪ್ಪಿನಲ್ಲಿ ಬಂದಂತೆ, ಇನ್ನಷ್ಟು ಸುಧಾರಿಸಿದಂತೆ. ಹೊಸ ಹೊಸ ವೈಶಿಷ್ಟ್ಯ, ಗುಣಗಳನ್ನು ಧರಿಸಿ ಬಂದಂತೆ.

ಪತ್ರಿಕೆಯೊಂದು ತನ್ನ ಅಂದ ಬದಲಿಸಿದೆ ಅಂದರೆ, ಆ ಪತ್ರಿಕೆಯ ಸುದ್ದಿಮನೆಯಲ್ಲಿ ಬಹಳ ಚಿಂತನ-ಮಂಥನ, ಚರ್ಚೆ -ಸಂವಾದ, brain- storming ನಡೆದಿದೆಯೆಂದರ್ಥ. ಒಂದು ಪತ್ರಿಕೆಯನ್ನು ಬದಲಿಸುವುದರಂಥ ಕಠಿಣ ಮತ್ತು ಸವಾಲಿನ ಕೆಲಸ ಮತ್ತೊಂದಿಲ್ಲ. ಮೊದಲಿಗೆ, ಪತ್ರಕರ್ತರು ಇಡೀ ಜಗತ್ತು ಬದಲಾಗಬೇಕೆಂದು ಬಯಸುತ್ತಾರೆ, ಆದರೆ ಯಾವತ್ತೂ ತಾವು ಬದಲಾ ಗುವುದಿಲ್ಲ. ಅದರಲ್ಲೂ ಪತ್ರಿಕೆ ಬದಲು ಮಾಡಲು ಮುಂದಾಗುವುದೇ ಇಲ್ಲ. ಹಾಗಂತ ಓದುಗರು ಬದಲಾವಣೆಯನ್ನು ಬಯಸುತ್ತಾರೆ . ತಾವು ನಿತ್ಯ ಓದುವ ಪತ್ರಿಕೆ ಚೆಂದವಾಗಿರಬೇಕು, ಆಧುನಿಕವಾಗಿರಬೇಕು, ಟ್ರೆಂಡಿ ಆಗಿರಬೇಕು, ಕಾಲಕ್ಕೆ ತಕ್ಕದಾಗಿರಬೇಕು ಎಂದು ಭಾವಿಸುತ್ತಾರೆ. ನಿತ್ಯವೂ ಅವರು ಓದುವ ಪತ್ರಿಕೆಯ ಜತೆ ಭಾವನಾತ್ಮಕ ಸಂಬಂಧ ಬೆಳೆಸಿಕೊಂಡಿರು ತ್ತಾರೆ. ದಿನದ ಕೆಲ ಹೊತ್ತು ಪತ್ರಿಕೆಯ ಜತೆಗೆ ಕಳೆಯುತ್ತಾ, ಕಳೆಯುತ್ತಾ ಒಂದು ಬಂಧ-ಸಂಬಂಧ ಏರ್ಪಟ್ಟಿರುತ್ತದೆ. ಅದು ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಾ ಹೋಗುವ ಸಂಬಂಧ.

ಹಳತಾಗುತ್ತಾ ಹೋದಂತೆ ಸೆಳೆತ ಹೆಚ್ಚಾಗುವ ದಾಂಪತ್ಯ ಸಂಬಂಧವದು. ಎಲ್ಲವೂ ಸರಿಯಾಗಿ ನಡೆದುಕೊಂಡು ಹೋಗುತ್ತಿರುವಾಗ, ಬದಲಾವಣೆ ಏಕೆ ಬೇಕು ಎಂಬುದು ಸಂಪಾದಕರ ತಲೆಯಲ್ಲಿ ಸದಾ ಕಾಡುವ ಯೋಚನೆ. ಹೀಗಾಗಿ ಯಾವ ಸಂಪಾದಕರೂ ಬದಲಾವಣೆಗೆ ಕೈ ಹಾಕುವುದಿಲ್ಲ. ಪತ್ರಿಕೆಯೆಂದರೆ ದೇಗುಲದ ಗರ್ಭಗುಡಿಯಿದ್ದಂತೆ, ಅದನ್ನೇನು ಪದೇ ಪದೆ ಬದಲಿಸುವುದು ಎಂಬುದು ಅವರ ವಾದ. ಹೀಗಾಗಿ ಕೆಲವು ಪತ್ರಿಕೆಗಳು ಹತ್ತು- ಹದಿನೈದು ವರ್ಷಗಳಾದರೂ ಬದಲಾಗುವುದಿಲ್ಲ. ಅಂತರ್ಗತ ಗುಣಗಳನ್ನು ಶಾಶ್ವತವಾಗಿ ಕಾಪಾಡಿಕೊಳ್ಳಬೇಕು ಎಂಬ ಚಿರಂತನ ನಿಯಮದಲ್ಲಿ ನಂಬಿಕೆಯಿಟ್ಟಿರುವ ಭಾರತೀಯ ರೈಲಿನಂತೆ, ಅದೇ ಹಳಿಯ ಮೇಲೆ ಓಡುತ್ತಲೇ ಇರುತ್ತದೆ, ಬದಲಾವಣೆಗೆ ಮುಖ ಮಾಡದೇ.

ಪತ್ರಿಕೆಗಳು ತಮ್ಮ ಅಂದವನ್ನು ಬದಲಿಸದಿರಲು ಮುಖ್ಯ ಕಾರಣವೆಂದರೆ, ಹೊಸ ಸ್ವರೂಪ ಓದುಗರಿಗೆ ಇಷ್ಟವಾಗದಿದ್ದರೆ ಏನು ಮಾಡುವುದು, ಅಷ್ಟಕ್ಕೂ ಈ ಸ್ವರೂಪ ಇಷ್ಟವಿಲ್ಲವೆಂದು ಯಾರಾದರೂ ತಕರಾರು ತೆಗೆದಿದ್ದಾರಾ, ಏನೋ ಮಾಡಲು ಹೋಗಿ ಇನ್ನೇನೋ ಆದರೆ, ಹೊಸ ಸ್ವರೂಪಕ್ಕೆ ಓದುಗರು ಒಗ್ಗಿಕೊಳ್ಳದಿದ್ದರೆ, ಅದೇ ಅವರಿಗೆ ಕಿರಿಕಿರಿಯಾದರೆ, ಈ ಅಂಶವೇ ಓದುಗರು
ದೂರವಾಗಲು ಕಾರಣವಾದರೆ… ಈ ಯೋಚನೆಗಳೇ ಸಂಪಾದಕರ ಕೈಕಟ್ಟಿ ಹಾಕುತ್ತವೆ.

ಬಹುತೇಕ ಪತ್ರಿಕೆಗಳಲ್ಲಿ ಸಂಪಾದಕ ಕೂಡ ಆ ಪತ್ರಿಕೆಯ ನೌಕರ. ಸಂಪಾದಕ ಮತ್ತು ಮಾಲೀಕರಿಬ್ಬರ ನಡುವೆ ಹೊಸ ಅಂದ, ಬದಲಾವಣೆ ವಿಷಯದಲ್ಲಿ ತಾಳ – ಮೇಳವಾಗುವುದಿಲ್ಲ. ಎಷ್ಟೆಂದರೂ ಮಾಲೀಕನಿಗೇನು ಗೊತ್ತು ಪತ್ರಿಕೋದ್ಯಮದ ಬದನೇಕಾಯಿ ಎಂಬ ಭಾವನೆ ಸಂಪಾದಕರದ್ದು. ಈ ಸಂಪಾದಕ ಎಷ್ಟೆಂದರೂ ತನ್ನ ನೌಕರ, ತಾನು ಹೇಳಿದ್ದೇ ಸರಿ ಎಂಬುದು ಮಾಲೀಕನ ಮನಸ್ಥಿತಿ. ಹೊಸ ಬದಲಾವಣೆಯಿಂದ ಎಡವಟ್ಟಾಾದರೆ, ಅದರ ಉತ್ತರದಾಯಿ ಯಾರು ಎಂಬುದು ಇಬ್ಬರಲ್ಲೂ ಕಾಡುವ ಪ್ರಶ್ನೆ. ಹೀಗಾಗಿ ಇಬ್ಬರ ನಡುವೆ ಸಮನ್ವಯ ಮೂಡುವುದು ಬಹಳ ಅಪರೂಪ. ಹೀಗಾಗಿ ಈ ಉಸಾಬರಿಯೇ
ಬೇಡ ವೆಂದು ಸಂಪಾದಕ ಬದಲಾವಣೆಗೆ ಕೈಹಾಕುವುದಿಲ್ಲ.

ಇನ್ನು ಈ ವಿಷಯದಲ್ಲಿ ಮಾಲೀಕನಾದವ ಸಂಪಾದಕನಿಗೆ ಸಂಪೂರ್ಣ ಸ್ವಾತಂತ್ರ್ಯ ಕೊಟ್ಟರೂ, ಅದನ್ನು ಚಲಾಯಿಸುವ ಗಟ್ಟಿತನವನ್ನು ಎಲ್ಲಾ ಸಂಪಾದಕರೂ ಮೆರೆಯುವುದಿಲ್ಲ. ಈ ಎಲ್ಲಾ ಕಾರಣಗಳಿಂದ, ಪತ್ರಿಕೆ ರೈಲು ಬೋಗಿಯಂತೆ ಓಡುತ್ತಲೇ ಇರುತ್ತದೆ.  ಪತ್ರಿಕೆ ಅಂದ, ಸ್ವರೂಪ ಬದಲಿಸುವುದೆಂದರೆ, relaunch ಆಗುವುದೆಂದರೆ, ಓದುಗರನ್ನು ಹೊಸತನಕ್ಕೆ ಅಣಿಗೊಳಿಸಿ ದಂತೆ. ಇಷ್ಟು ದಿನ ನೋಡುತ್ತಿದ್ದ ಪತ್ನಯನ್ನು ನಾಳೆಯಿಂದ ಬೇರೆ ರೂಪದಲ್ಲಿ ಕಾಣಲು, ಗಂಡನಾದವನು ಬೇರೆಯದೇ ಮನಸ್ಥಿತಿಯನ್ನು ರೂಪಿಸಿಕೊಳ್ಳಬೇಕು, ರೂಢಿಸಿಕೊಳ್ಳಬೇಕು.

ತನ್ನ ದೃಷ್ಟಿಕೋನ, ಗ್ರಹಿಕೆಯನ್ನು ಬದಲಿಸಿಕೊಳ್ಳಬೇಕು ಮತ್ತು ತಾನು ನೋಡುತ್ತಿರುವುದು ಮೊದಲಿಗಿಂತ ಉತ್ತಮವಾದುದು ಎಂದು ನಂಬಿಸಿಕೊಳ್ಳಬೇಕು. ಈ ನಂಬಿಕೆಯನ್ನು ಮೂಡಿಸುವುದೇ relaunching ಅಥವಾ rebranding. ಈ ಕಸರತ್ತು ಇಷ್ಟೆಲ್ಲಾ ಪ್ರಕ್ರಿಯೆಗಳನ್ನು ಒಳಗೊಂಡಿರುವುದರಿಂದ, ಯಾವ ಸಂಪಾದಕನೂ ಬದಲಾವಣೆಯ ಹುತ್ತಕ್ಕೆ ಕೈ ಹಾಕುವುದಿಲ್ಲ.

ಆದರೆ ಒಂದು ಪತ್ರಿಕೆ ಈ ಎಲ್ಲಾ ಹಂತಗಳನ್ನು ದಾಟಿ ಹೊಸ ಅಂದ ಹೊದ್ದುಕೊಂಡಿದೆಯೆಂದರೆ, ಅದು ಓದುಗರ ಪಾಲಿಗೆ ಪಂಚಾಮೃತ. ಅಷ್ಟರಮಟ್ಟಿಿಗೆ ಆ ಸುದ್ದಿಮನೆಯಲ್ಲಿ ಪರಿವರ್ತನೆಯ ಬಗ್ಗೆ ಪತ್ರಕರ್ತರ ಮನಸ್ಸಿನಲ್ಲಿ ಬಿರುಗಾಳಿಯೇಳುವ ಚರ್ಚೆಗಳಾಗಿವೆ ಎಂದರ್ಥ. ಓದುಗರನ್ನು ಹೊಸತನಕ್ಕೆ ಅಣಿಗೊಳಿಸುವ ಮುನ್ನ, ಸಂಪಾದಕನಾದವ ತನ್ನ ಸಂಪಾದಕೀಯ ಸಿಬ್ಬಂದಿಯನ್ನು ಮೊದಲು ಆ ಶಿಸ್ತಿಗೆ ಅಣಿಗೊಳಿಸಬೇಕು. ಅದೇ ದೊಡ್ಡ ಸವಾಲು. ಪತ್ರಕರ್ತರು ಇಲಿ ಪಾಷಾಣದ ಡಬ್ಬದಂತೆ,
ಜಾಲಿಮಲೋಶನ ಗಜಕರ್ಣದ ಔಷಧದ ಜಾಹೀರಾತಿನಂತೆ.

ಬಹಳ ಬೇಗ ಬದಲಾಗುವುದಿಲ್ಲ. ಹಾಗೆ ನೋಡಿದರೆ, ಓದುಗರನ್ನು ಅಣಿಗೊಳಿಸುವುದು ಸುಲಭ. ನಾಳೆಯಿಂದ ಅವರು ಬದಲಾವಣೆಗೆ ಒಗ್ಗಿಕೊಳ್ಳುತ್ತಾರೆ. ಆದರೆ ಪತ್ರಕರ್ತರು ಹಾಗಲ್ಲ. ಅವರ ಮನಸ್ಸಿಗೆ ಇಸ್ತ್ರಿ ಹೊಡೆದು ತಿಕ್ಕುತ್ತಾ ಇರಬೇಕಾಗುತ್ತದೆ.
ಆದರೂ ಅಲ್ಲಲ್ಲಿ ಐಡಿಯಾ, ಮನಸ್ಸು ಸುಕ್ಕಾಗುತ್ತದೆ. ಈ ಎಲ್ಲಾ ಸರಗೋಲುಗಂಬಗಳನ್ನು ದಾಟಿ, ಅವರನ್ನೂ ಕೈಹಿಡಿದು ದಾಟಿಸಿ, ಪರಿವರ್ತನೆಯ ಪರ್ವಕ್ಕೆ ಸಿದ್ಧರನ್ನಾಗಿಸುವ ಹೊತ್ತಿಗೆ ಸಂಪಾದಕ ಐಸ್ಸಾ !

ಪತ್ರಿಕೆಯ ಅಂದವನ್ನು ಬದಲಿಸುವುದು ಅಥವಾ ಹೊಸ ಸ್ವರೂಪ ನೀಡುವುದು ಅಂದ್ರೆ ಬರೀ ಬಾಹ್ಯ ಸೌಂದರ್ಯ ಬದಲಾವಣೆ ಅಲ್ಲ. ಪ್ರತಿ ಪತ್ರಿಿಕೆಗೂ ಅದರದೇ ಆದ ವೈಶಿಷ್ಟ್ಯ, ಇತಿಹಾಸ, ಹಿನ್ನೆಲೆ, ಪರಂಪರೆ ಇರುತ್ತದೆ. ನೂರು ವರ್ಷಗಳಿಗಿಂತ ಹೆಚ್ಚು ವರ್ಷಗಳ ಇತಿಹಾಸವಿರುವ ಪತ್ರಿಕೆಗೆ ಹೊಸ ಲುಕ್ ಕೊಡುವ ಭರದಲ್ಲಿ, ಆಧುನಿಕಗೊಳಿಸುವ ಪುಟುಕಿಯಲ್ಲಿ, ಅದರ ‘ಶತಮಾನದ ಶ್ರೇಷ್ಠತೆ’ಯ ಹೆಗ್ಗುಣವನ್ನು ಮರೆಯುವಂತಿಲ್ಲ. ಆ ಪತ್ರಿಕೆಗೆ ಅದರ ದೀರ್ಘಾಯುಷ್ಯವೇ ಮುಕುಟಪ್ರಾಯ.

ಹೀಗಿರುವಾಗ ಮುಕುಟವನ್ನೇ ಕತ್ತರಿಸಿಬಿಡಬಾರದು. ಅದಕ್ಕೊಂದು ಇನ್ನೂ ಚೆಂದದ ಕಿರೀಟವಿಡುವ ಕೆಲಸ ಮಾಡಬೇಕು. ಅಷ್ಟು ವರ್ಷಗಳ ಇತಿಹಾಸವಿರುವ ಪತ್ರಿಿಕೆಯ ಓದುಗರ ವಯಸ್ಸನ್ನೂ ಮರೆಯುವಂತಿಲ್ಲ. ಅವರು ಸಹ ಆ ಪತ್ರಿಕೆಯ ಜತೆಗೇ ಬೆಳೆದವರು. ಅದರೊಂದಿಗೇ ಅಕ್ಷರಾಭ್ಯಾಸ, ಭಾಷಾಭ್ಯಾಸ ಮಾಡಿದವರು.

ಇಂಥ ಪತ್ರಿಕೆಯನ್ನುrelaunching ಮಾಡುವಾಗ ಎಚ್ಚರ, ಎಚ್ಚರಿಕೆ ಬೇಕೇ ಬೇಕು. ಅದು ಹುಡುಗಾಟಿಕೆಯಲ್ಲ. ಕನ್ನಡದ ಪ್ರಮುಖ
ಪತ್ರಿಿಕೆಯೊಂದು ಏಕಾಏಕಿ ವೇಷ ಬದಲಿಸಿದಾಗ, ಓದುಗರಿಗೆ ತುಸು ಕಿರಿಕಿರಿಯಾಗಿ, ಪುನಃ ಹಳೆಯ ಅಂಶಗಳನ್ನು ಉಳಿಸಿ ಕೊಂಡಿದ್ದು ಕಟ್ಟರ್ ಓದುಗರಿಗೆ ನೆನಪಿರಬಹುದು. ಮೊದಲೆಲ್ಲಾ ಸಂಪಾದಕರೇ ಪತ್ರಿಕೆಯ ವಿನ್ಯಾಸಕಾರರೂ ಆಗಿರುತ್ತಿದ್ದರು. ಅದು ಅಪೇಕ್ಷಣೀಯವೂ ಹೌದು. ಯಾವ ಸಂಪಾದಕ ಮೂಲತಃ ವಿನ್ಯಾಾಸಕಾರನ ಮನಸ್ಸನ್ನೂ ಹೊಂದಿರುತ್ತಾನೋ, ಆತ ತನ್ನ ಪತ್ರಿಕೆಗೆ ಕಲಾತ್ಮಕತೆಯ ಸ್ಪರ್ಶ ನೀಡುತ್ತಾನೆ. ವಿನ್ಯಾಸದ ಗಂಧ-ಗಾಳಿಯೇ ಇಲ್ಲದ ಸಂಪಾದಕ, ಕೋಣ ಉಚ್ಚೆ ಹೊಯ್ದಂತೆ, ಪತ್ರಿಿಕೆಯನ್ನು ತರುತ್ತಾನೆ. ಈ ಮಾತು ಅರ್ಥವಾಗಲು ಮೂವತ್ತು ವರ್ಷಗಳ ಹಿಂದಿನ ಪತ್ರಿಕೆಗಳನ್ನು ನೋಡಬೇಕು. ಆಗ ಪತ್ರಿಕೆಯಲ್ಲಿ ಡಿಸೈನ್‌ಗೆ ಮಹತ್ವವನ್ನೇ ನೀಡುತ್ತಿಿರಲಿಲ್ಲ.

ಹೆಡ್ ಲೈನ್ ಇಲ್ಲದೇ, ಫೋಟೋಗಳಿಲ್ಲದೇ ಪುಟ ಕಟ್ಟುತ್ತಿದ್ದರು. ಬೆಂಗಳೂರು ನಗರಕ್ಕೆ ಕಬ್ಬನ್ ಪಾರ್ಕ್ ಅಥವಾ ಲಾಲಬಾಗ್  ಇದ್ದಂತೆ ಪತ್ರಿಕೆಯ ಪುಟಗಳಿಗೆ ಬಿಳಿ ಜಾಗ (White Space). ಈ ಬಿಳಿಜಾಗವನ್ನು ಬಿಟ್ಟಷ್ಟೂ ಪುಟಗಳಲ್ಲಿರುವ ವರದಿಗಳು
ನಿರಾಳವಾಗಿ ಉಸಿರಾಡುತ್ತವೆ. ಇಲ್ಲದಿದ್ದರೆ ಓದುಗನಿಗೆ ಕಲಾಸಿಪಾಳ್ಯದಲ್ಲಿ ಹೆಜ್ಜೆ ಹಾಕಿದ ಅನುಭವ. ಆಗ ಓದು ಸಲೀಸಾಗದು, ಸರಾಗವಾಗದು. ಪತ್ರಿಿಕೆಯೆಂದರೆ ಹತ್ತಿಮೂಟೆಯಲ್ಲ, ಎಲ್ಲಾ ಸುದ್ದಿಯನ್ನು ಹಿಡಿದು, ಗಿಡಿದು ತುರುಕಲು. ಅದು ಸಂಪೂರ್ಣ ವಾಗಿ ಮನುಷ್ಯರ ಭಾವನೆಗಳಿಂದ, ಮನುಷ್ಯರಿಗಾಗಿ ಸಿದ್ಧವಾಗುವ ಸರಕು.

ಅದು ನೂರಕ್ಕೆ ನೂರು human product.  ಹಾಗೆಂದ ಮೇಲೆ, ಅಲ್ಲಿ ಅಂದ, ಚೆಂದ, ಸೌಂದರ್ಯ, ಕಲೆ, ಕಲಾತ್ಮಕತೆ, ಸೃಜನ ಶೀಲತೆ, ಸೃಷ್ಟಿಶೀಲತೆ, ಉಪಾಸನೆ, ಮೌನ, ಧೇನಿಸುವಿಕೆ, ರಸಗ್ರಹಣಕ್ಕೆೆ ಪ್ರಾಧಾನ್ಯ ಇರಲೇಬೇಕು. ಹೀಗಾಗಿ ಒಂದು ಒಳ್ಳೆಯ ಪತ್ರಿಕೆ ನೋಡಿದಾಗ ಒಂದು ಕಲಾಕೃತಿ ನೋಡಿದ, ಪೇಂಟಿಂಗ್ ಆಸ್ವಾದಿಸಿದ, ಸಂಗೀತ ಆಲಿಸಿದ, ಹಾಡನ್ನು ಕೇಳಿದ,
ಯಕ್ಷಗಾನ ನೋಡಿದ, ಒಳ್ಳೆಯ ಭೋಜನ ಸವಿದ, ಬಾಯ್ತುಂಬಾ ಹರಟೆ ಹೊಡೆದ, ಆಪ್ತ ಸಂಗಾತಿ ಜತೆ ನಿರುಮ್ಮಳವಾಗಿ ಕಳೆದ ಅನುಭವವಾಗಬೇಕು. ಅಷ್ಟಕ್ಕೂ ಪತ್ರಿಕೆಯೆಂದರೆ, ಪತ್ರಕರ್ತರ ಕಸಾಯಿಖಾನೆಯಲ್ಲ.

ನಾವೆಲ್ಲಾ ಸೇರಿ ಪತ್ರಿಕೆ ಎಂಬ ಮೃಷ್ಟಾನ್ನ ಭೋಜನವನ್ನು ಮಾಡಿ ಓದುಗನಿಗೆ ಬಡಿಸುತ್ತಿದ್ದೇವೆ, ಎದೆಗವಚಿಕೊಂಡು ಬಿಡಿಸಿದ ಚಿತ್ರವನ್ನು ಓದುಗನಿಗೆ ಸಮರ್ಪಿಸುತ್ತಿದ್ದೇವೆ ಎಂಬ ಪವಿತ್ರ ಭಾವ ಇರಬೇಕು. ಇದು ಒಂದು ದಿನ ಮಾತ್ರ ಮೂಡಿಸಿಕೊಳ್ಳಬೇಕಾದ ಭಾವವಲ್ಲ. ಪ್ರತಿನಿತ್ಯ ಏಳುವಾಗಲೇ ಈ ಭಾವದಿಂದ  ಸಿಂಗಾರಗೊಳ್ಳಬೇಕು. ಅಷ್ಟಕ್ಕೂ ಪತ್ರಿಕೆಯೆಂದರೆ ಪಂಚಾಂಗದಂತೆ predictable ಅಲ್ಲ.

ಕಾರಣದಿಂದ ಪತ್ರಿಕೆ ವಿನ್ಯಾಸಕನ ಕೈಚಳಕವನ್ನು ಬಯಸುತ್ತದೆ. ಅಂದಗಾರನ ಸೊಗಸುಗಾರಿಕೆ, ಸೃಜನಶೀಲತೆಯನ್ನು ಅಪೇಕ್ಷಿಸುತ್ತದೆ. ಕೆತ್ತಿದ ಅಕ್ಷರಗಳನ್ನು ಅಂದವಾಗಿ ಪೋಣಿಸುವ ವಿನ್ಯಾಸಕಾರ ಮತ್ತು ಕಲೆಗಾರನೂ ಅಷ್ಟೇ ಮಹತ್ವದ ಪಾತ್ರವನ್ನು ವಹಿಸುತ್ತಾನೆ. ಆತ ಪತ್ರಿಕೆಯ ಓದಿಗೆ ಕಲಾ ಸ್ಪರ್ಶವನ್ನು ನೀಡುತ್ತಾಾನೆ. ಓದಿದ ನಂತರವೂ
ಸುದ್ದಿ ಯಲ್ಲದ ಸಂಗತಿಗಳಿಂದ ಪತ್ರಿಕೆಯೊಂದು ಮನಸ್ಸಿನಲ್ಲಿರುವುದು, ವೃತ್ತಿ ಶ್ರೇಯಸ್ಸು, ಶ್ರೇಷ್ಠತೆ ಪಡೆಯುವುದು ಈ ಕಾರಣಗಳಿಗೆ. ಇದೇ ಕಾರಣಗಳಿಗೆ ಕೆಲವರು ಪತ್ರಿಕೆಯ ಪುಟಗಳಿಗೆ ಫ್ರೇಮ್ ತೊಡಿಸಿ, ಗೋಡೆಗೆ ನೇತು ಹಾಕಿರುತ್ತಾರೆ. ಪತ್ರಿಕೆಯ ಅಂದವಾದ ಪುಟ ಉತ್ತಮ ಕಲಾವಿದನ ಪೇಂಟಿಂಗ್‌ಗೆ ಸಮ. ‘ಇಂದಿನ ಸುದ್ದಿ, ನಾಳೆಗೆ ರದ್ದಿ’ ಎಂಬುದು ಗೊತ್ತಿದ್ದರೂ ಕೆಲವರು ಪತ್ರಿಕೆಗಳನ್ನು ಜೋಪಾನವಾಗಿ ಕಾಪಿಡುವುದು ಅದಕ್ಕಿರುವ ಈ ಎಲ್ಲಾ ಗುಣಕಥನಗಳಿಂದಾಗಿ.

ಹೀಗಾಗಿ ಪತ್ರಿಿಕೆಯನ್ನು ರೂಪಿಸುವಾಗ, ತಾನೊಂದು ಶಾಶ್ವತ ಕಲಾಕೃತಿಯನ್ನು ಕೆತ್ತುತ್ತಿದ್ದೇನೆ, ರೂಪಿಸುತ್ತಿದ್ದೇನೆ ಎಂಬ ಶ್ರದ್ಧೆಯಿಂದಲೇ ಅಣಿಯಾಗಬೇಕು.  ಈ ಮನಸ್ಥಿತಿ ಸಾಕಾರಕ್ಕೆ ವಿನ್ಯಾಸ, ಒಪ್ಪ-ಓರಣ, ಅಂದ-ಚೆಂದಗಳೆಲ್ಲಾ ಬೇಕು.
ಒಬ್ಬ ಸಂಪಾದಕನ ಯಶಸ್ಸಿಗೆ ಒಳ್ಳೆಯ, ಪಕ್ಕಾ ಕಸುಬಿಗಳಂತೆ, ವೃತ್ತಿನಿಷ್ಠ ಪತ್ರಕರ್ತರಂತೆ, ಒಳ್ಳೆಯ ಡಿಸೈನರ್‌ಗಳು ಬೇಕು. ಪತ್ರಿಕೆಗೆ ಮಾಂತ್ರಿಕ ಸ್ಪರ್ಶ ನೀಡುವ ಸೊಬಗುಗಾರರು ಬೇಕು. ಪತ್ರಿಕೆಯನ್ನು ಯಾವತ್ತೂ ಸುಂದರ ನೆನಪಾಗಿಸುವ ಕನಸುಗಾರರು ಬೇಕು. ಕನಸನ್ನು ಮಾರಾಟ ಮಾಡುವ ಸಗಟುದಾರರು ಬೇಕು.

ಅವೆಲ್ಲವುಗಳನ್ನು ಪಳಗಿದ ವಿನ್ಯಾಸಕಾರ ಮಾಡಬಲ್ಲ. ‘ನೋಟವೇ ಪತ್ರಿಕೆಯ ಮಾಟ’ ಎಂದು ಸಂಪಾದಕನನ್ನು ನಂಬಿಸುವ, ಆತನ ಮನಪರಿವರ್ತನೆ ಮಾಡುವ ಪಾಂಗಿತ ಡಿಸೈರ್ನ ಮಾಡಬಲ್ಲ. ಆತ ಸಿನಿಮಾ ನಿರ್ದೇಶಕನಿಗೆ ಆರ್ಟ್ ಡೈರೆಕ್ಟರ್ ಇದ್ದಂತೆ. ನಿರ್ದೇಶಕನ ಕಲ್ಪನೆಗಳನ್ನು ಇನ್ನಷ್ಟು ಅರಳಿಸಿ, ಕೊನೆಯಲ್ಲಿ ಅವನಲ್ಲಿಯೇ ಬೆರಗು ಮೂಡಿಸುವ ಚೆಲುವನಾತ. ಡಿಸೈನ್ ಗಳಿಂದ ಆಕರ್ಷಿತವಾಗಿ ಗೆದ್ದ ಎಲ್ಲ ಪತ್ರಿಕೆಗಳ ಸಂಪಾದಕರ ಕೋಟಿನೊಳಗೆ ಇಂಥ ಒಬ್ಬ ವಿನ್ಯಾಸಕಾರ ಇದ್ದೇ ಇರುತ್ತಾನೆ. ಖ್ಯಾತ ಸಂಪಾದಕ ವಿನೋದ ಮೆಹತಾ ಜತೆ ಮೊಯುದ್ದೀನ್ ಇದ್ದ. ಮೆಹತಾ ಯಾವುದೇ ಪತ್ರಿಕೆ ಅಥವಾ ಮ್ಯಾಗಜಿನ್ ಗೆ ಹೋಗಲಿ, ಮೊಯುದ್ದೀನ್ ಅವರನ್ನು ಜತೆಯಲ್ಲೇ ಕರೆದುಕೊಂಡು ಹೋಗುತ್ತಿದ್ದರು. ಮೊಯುದ್ದೀನ್ ಗೆ ಕಿವಿ ಕೇಳುತ್ತಿಿರಲಿಲ್ಲ.

ಆದರೆ ಆತನಿಗೆ ಅದ್ಭುತ ಕಣ್ಣುಗಳು (ಸೌಂದರ್ಯ ದೃಷ್ಟಿ) ಇದ್ದವು. ಆತನ ಕಣ್ಣುಗಳ ಮೂಲಕವೇ ಮೆಹತಾ ಪತ್ರಿಕೆಯನ್ನು ರೂಪಿಸಿದರು. ತಮ್ಮ ಯಶಸ್ಸಿಿನಲ್ಲಿ ಒಂದಷ್ಟು ಪಾಲನ್ನು ಅವರು ಮೊಯುದ್ದೀನ್ ಗೆ ನೀಡಿದ್ದಾರೆ. ಇದು ವಿನ್ಯಾಸಕಾರರ ಸುವರ್ಣಯುಗ. ಕಂಪ್ಯೂಟರ್ ತಂತ್ರಜ್ಞಾನ, ಮುದ್ರಣ ತಂತ್ರಜ್ಞಾನದಲ್ಲಾದ ಸ್ಫೋಟಗಳಿಂದ ಹೊಸ ಹೊಸ ಸಾಧ್ಯತೆಗಳು ತೆರೆದುಕೊಂಡಿವೆ. ಅಮೆರಿಕದ ಪತ್ರಿಕೆಯ ಓದುಗನ ಮುಂದೆ, ಶಿರಸಿಯ, ಜಮಖಂಡಿಯ ಓದುಗ ಯಾವ ಪಾಪ ಮಾಡಿದ್ದಾನೆ? ಆತ ಓದುವ ಪ ತ್ರಿಕೆಯ ವೈಶಿಷ್ಟ್ಯಗಳನ್ನೆಲ್ಲ ಇವನಿಗೂ ನೀಡುವುದು ಸಾಧ್ಯವಿದೆ.

ಒಂದು ಪತ್ರಿಕೆ ಸುದ್ದಿಯ ಜತೆಗೆ ಮಾತಾಡುವಂತೆ, ವಿನ್ಯಾಾಸದಂಥ ಕಾರಣದಿಂದ ಪತ್ರಿಕೆಯೇ ಸುದ್ದಿಯಾಗುವುದು ಸಾಧ್ಯವಿದೆ. ಆಗ ಓದುಗನಿಗೆ ಪತ್ರಿಕೆಗಳ ಓದು ಒಂದು ಅನುಪಮ, ಅನೂಹ್ಯ ಅನುಭವ ನೀಡುವುದು ಸಾಧ್ಯವಿದೆ. ಈ ಕಾರಣಗಳಿಂದ ನನಗೆ ಕ್ಯೂಬಾ ಮೂಲದ ಅಮೆರಿಕನ್ ಡಿಸೈನರ್ ಮಾರಿಯೋ ಗಾರ್ಸಿಯ ಇಷ್ಟವಾಗುತ್ತಾನೆ. ಜಗತ್ತಿನ ಸುಮಾರು ಏಳು ನೂರು
ಪತ್ರಿಿಕೆಗಳು, ನಿಯತಕಾಲಿಕಗಳ ಜತೆ ಒಂದಿಲ್ಲೊಂದು ರೀತಿಯಲ್ಲಿ ಸಂಬಂಧ ಇಟ್ಟುಕೊಂಡ ಲೋಕವಿಖ್ಯಾತ ವಿನ್ಯಾಸಕಾರನೀತ. ದಿ ವಾಲ್ ಸ್ಟ್ರೀಟ್ ಜರ್ನಲ್, ವಾಷಿಂಗ್ಟನ್ ಪೋಸ್‌ಟ್‌, ಮಿಯಾಮಿ ಹೆರಾಲ್ಡ್, ಗಲ್ಫ್ ನ್ಯೂಸ್, ಪ್ಯಾರಿಸ್ ಮ್ಯಾಚ್, ನಾರ್ವೆಯ ಆಫ್ಟನ್ ಪೋಸ್ಟನ್, ಡೈ ಜಿಯ್ಟ್ , ಭಾರತದ ದಿ ಹಿಂದೂ, ಮಲಯಾಳಂ ಮನೋರಮಾ, ತೆಲುಗಿನ ಸಾಕ್ಷಿ ಪತ್ರಿಕೆಗಳನ್ನೆಲ್ಲಾ ರೀಡಿಸೈನ್ ಮಾಡಿದವ. ಇಂದು ಮಾರಿಯೋ ಗಾರ್ಸಿಯ ಡಿಸೈನ್ ಮಾಡಿದ ಪತ್ರಿಕೆಯೆಂದರೆ ಅದರ ತೂಕ, ಕಿಮ್ಮತ್ತೇ ಬೇರೆ. ವಿಶ್ವಸಂಸ್ಥೆ , ವಾಲ್ ಮಾರ್ಟ್‌ಗೂ ಈತನೇ ವಿನ್ಯಾಸ ಸಲಹೆಗಾರ.

ಈತನ ವಿನ್ಯಾಸದಿಂದಲೇ ಕೆಲವು ಪತ್ರಿಕೆಗಳು ಮರುಜನ್ಮ ಕಂಡಿವೆ. ‘ಒಂದು ಪತ್ರಿಕೆಯ ವೈಶಿಷ್ಟ್ಯ, ಮಹತ್ವವನ್ನು ಅದರ ಸಂಪಾದಕೀಯ ಬಳಗಕ್ಕೆ ಮತ್ತು ಓದುಗ ಸಮೂಹಕ್ಕೆ ಮನನ ಮಾಡಿಕೊಡುವುದು ನನ್ನ ಕೆಲಸ’ ಎಂದು ಮಾರಿಯೋ ಗಾರ್ಸಿಯ ಹೇಳುತ್ತಾನೆ. ಅಂದರೆ ಪತ್ರಿಕೆಯನ್ನು ರೂಪಿಸುವ ಕಾಯಕದಲ್ಲಿ ವಿನ್ಯಾಸದ ಪಾತ್ರವೇನು ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು.  If you asked me if the print (newspaper) is going to die, the answer is no, but it’s going to have to be rethought ಎಂಬ ಈ ಮಾತಿನಲ್ಲಿ ಅವನ ತಂತ್ರಗಾರಿಕೆಯ ರಹಸ್ಯವಿದೆ. ಅಂದರೆ ಪತ್ರಿಕೋದ್ಯಮದ ಭವಿಷ್ಯದ ನೆಲೆಗಟ್ಟಿನಲ್ಲಿ ಆತ ವಿನ್ಯಾಸವನ್ನು ನೋಡಿದ್ದಾನೆ. ಒಂದು ಪತ್ರಿಕೆಯನ್ನು ರೀಡಿಸೈನ್ ಮಾಡಲು ಮಾರಿಯೋ ಗಾರ್ಸಿಯ ಎರಡು-ಮೂರು ಕೋಟಿ ರುಪಾಯಿ ಪೀಕಿಸುತ್ತಾನೆ.

If you think good design is expensive, you should look at the cost of bad design ಎಂಬ ಅನುಭಾವಿಗಳ ಮಾತಿದೆ. ಇಂದು ಪತ್ರಿಕೆಯ ಉಳಿವಿಗೆ ಗಾರ್ಸಿಯನಂಥವರು ಯಾಕೆ ಮುಖ್ಯವಾಗುತ್ತಾರೆ ಎಂಬುದನ್ನು ಅರ್ಥ ಮಾಡಿಕೊಳ್ಳಬಹುದು. ಅಂದ ಹಾಗೆ,
ಒಂದು ಒಳ್ಳೆಯ ಪುಟ ವಿನ್ಯಾಸ ಕಂಡಾಗ ಅದಕ್ಕೆ ಫ್ರೇಮ್ ತೊಡಿಸಿ ನೇತು ಹಾಕಲು ಮರೆಯಬೇಡಿ. ಪತ್ರಿಕೆಯಂಥ ಸುಂದರ ಕಲಾಕೃತಿ ಮತ್ತೊಂದಿಲ್ಲ.