Sunday, 15th December 2024

ಭೂಮಿ ಮೇಲಿನ ನರಕ ಬೆಡ್ಲಾಮ್‌ ಆಸ್ಪತ್ರೆ

ಹಿಂದಿರುಗಿ ನೋಡಿದಾಗ

ನಮ್ಮ ಭೂಮಿಯ ಮೇಲೆ ಪ್ರತ್ಯಕ್ಷ ನರಕ ಎನ್ನುವುದು ಎಲ್ಲಾದರೂ ಇದ್ದರೆ, ಅದು ಬೆಥ್ಲೆಮ್ ರಾಯಲ್ ಹಾಸ್ಪಿಟಲ್, ಸೈಂಟ್ ಮೇರಿ ಬೆಥ್ಲೆಮ್, ಬೆಥ್ಲೆಮ್ ಹಾಸ್ಪಿಟಲ್ ಇತ್ಯಾದಿ ಹೆಸರುಗಳಿಂದ ಕುಖ್ಯಾತವಾಗಿದ್ದ ಆಸ್ಪತ್ರೆಯಲ್ಲಿಯೇ ಇದ್ದಿರಬೇಕು.

ಇದು ಲಂಡನ್ ನಗರದಲ್ಲಿದ್ದ ಮನೋವೈದ್ಯಕೀಯ ಆಸ್ಪತ್ರೆ. ಜನರು ಈ ಆಸ್ಪತ್ರೆಯ ಮೂಲ ಹೆಸರನ್ನೇ ಮರೆತುಹೋಗಿ, ಇದನ್ನು ಬೆಡ್ಲಾಮ್ ಎಂದು ಕರೆಯಲು ಆರಂಭಿಸಿ ದರು. ಕನ್ನಡದಲ್ಲಿ ಬೆಡ್ಲಾಮ್ ಎಂದರೆ ಅಟ್ಟಹಾಸ, ಕೋಲಾಹಲ, ಅವ್ಯವಸ್ಥೆ ಎನ್ನಬ ಹುದು. ಸರಿಸುಮಾರು ಹುಚ್ಚರ ಸಂತೆ ಇಲ್ಲವೇ ಗೊಂದಲ ನಗರಿಎನ್ನುವ ಅರ್ಥಕ್ಕೆ ಸಮೀಪವಾಗಿರುವ ಶಬ್ದ.

ಇಲ್ಲಿನ ಪ್ರತ್ಯಕ್ಷ ಘಟನೆಗಳು ಅನೇಕ ಹಾರರ್ ಕಾದಂಬರಿಗಳಿಗೆ ವಸ್ತುವನ್ನು ಒದಗಿಸಿ ದವು. ಚಲನಚಿತ್ರಗಳ ನಿರ್ಮಾಣಕ್ಕೆ ಪ್ರೇರಣೆಯನ್ನು ನೀಡಿದವು. ಅವುಗಳಲ್ಲಿ ೧೯೪೬ರಲ್ಲಿ ಬೋರಿಸ್ ಕರ್ಲಾ- ಅಭಿನಯದ ಬೆಡ್ಲ್ಯಾಮ್ ಟಿವಿ ಸೀರಿಯಲ್ ಮುಖ್ಯವಾದುದು. ಬೆಥ್ಲೆಮ್ ರಾಯಲ್ ಆಸ್ಪತ್ರೆಯನ್ನು ೧೨೪೭ರಲ್ಲಿ ಕಟ್ಟಿದರು. ಈಗ ಇರುವ ಕಟ್ಟಡವು ನಾಲ್ಕನೆಯ ಕಟ್ಟಡ. ಮೊದಲ ಕಟ್ಟಡವು ಲಂಡನ್ ನಗರದ ಹೊರಗಡೆ ಇತ್ತು. ೧೬೭೬ರಲ್ಲಿ ಈ ಆಸ್ಪತ್ರೆಯು ಮೂರ್‌ಫೀಲ್ಡ್ ಎಂಬಲ್ಲಿಗೆ, ೧೮೧೫ ರಲ್ಲಿ ಸೌತ್ ವಾರ್ಕ್‌ಗೆ ಬದಲಾವಣೆಯಾಗಿ, ಕೊನೆಗೆ ೧೯೩೦ರಲ್ಲಿ ಪ್ರಸ್ತುತ ಮಾಂಕ್ಸ್ ಆರ್ಚರ್ಡ್ ಕಟ್ಟಡಕ್ಕೆ ವರ್ಗಾವಣೆಯಾಯಿತು.

ಇವತ್ತು ಈ ಆಸ್ಪತ್ರೆಯು ಲಂಡನ್ನಿನ ಅತ್ಯುತ್ತಮ ಮನೋವೈದ್ಯಕೀಯ ಆಸ್ಪತ್ರೆಗಳಲ್ಲಿ ಒಂದಾಗಿದೆ. ಆದರೆ ಇದರ ಹಿಂದಿನ ಇತಿಹಾಸ ಮಾತ್ರ ಕರಾಳ, ಕಠೋರ! ೧೨೪೭. ಮುಮ್ಮಡಿ ಹೆನ್ರಿಯ ರಾಜ್ಯಭಾರ. ಸೈಮನ್ ಫಿಟ್ಜ್‌ಮೇರಿ ಎಂಬುವವರು ಒದಷ್ಟು ಹಣವನ್ನು ದಾನ
ಮಾಡಿದರು. ಆ ಹಣವನ್ನು ಬಳಸಿಕೊಂಡು ಬಿಶಪ್ -ಎಲೆಕ್ಟ್ ಬೆಥ್ಲೆಹೆಮ್ ಹೆಸರಿನಲ್ಲಿ ಒಂದು ಮನೋವೈದ್ಯಕೀಯ ಆಸ್ಪತ್ರೆಯನ್ನು ಕಟ್ಟಿದರು. ಇದು ಲಂಡನ್ನಿನಲ್ಲಿ ಸ್ಥಾಪನೆಯಾದ ಮೊದಲ ಮನೋರೋಗಗಳ ಆಸ್ಪತ್ರೆ. ಅಂದಿನ ದಿನದ ಬ್ರಿಟಿಷ್ ವೈದ್ಯಕೀಯಕ್ಕೆ ಮನಸ್ಸಿನ
ಬಗ್ಗೆ, ಮನೋರೋಗಗಳ ಬಗ್ಗೆ, ಮನೋರೋಗಗಳ ಚಿಕಿತ್ಸೆಯ ಬಗ್ಗೆ ಹೆಚ್ಚು ತಿಳಿದಿರಲಿಲ್ಲ.

ಶಾರೀರಿಕ ರೋಗಗಳು ಬಂದಿರುವವರನ್ನು ಹೇಗೆ ಕಾಳಜಿಯಿಂದ ನೋಡಿ ಕೊಳ್ಳುತ್ತೇವೆಯೋ ಹಾಗೆಯೇ ಮನೋರೋಗಿಗಳನ್ನು
ಪ್ರೀತಿ, ವಿಶ್ವಾಸ, ಕಕ್ಕುಲಾತಿಯಿಂದ ನೋಡಿಕೊಳ್ಳಬೇಕು ಎನ್ನುವ ಪರಿಜ್ಞಾನವು ಇರಲಿಲ್ಲ. ಲಂಡನ್ ವೈದ್ಯರು ಮನೋರೋಗಗಳು, ಮಿದುಳಿಗೆ ಅಥವ ಮನಸ್ಸಿಗೆ ಬಂದಿರುವ ಕಾಯಿಲೆ ಎನ್ನುವ ಬದಲು, ಅದು ಶರೀರಕ್ಕೆ ಸಂಬಂಧಿಸಿದ ಕಾಯಿಲೆ ಎಂದು ಭಾವಿಸಿದ್ದರು. ಹಾಗಾಗಿ ಮನೋರೋಗಗಳನ್ನು ಗುಣಪಡಿಸಲು ಚಿಕಿತ್ಸೆಯ ಹೆಸರಿನಲಿ ದೇಹವನ್ನು ದಂಡಿಸತೊಡಗಿದರು. ಈ ದಂಡನೆಯ ಚಿಕಿತ್ಸೆಯು ಶತಮಾನಗಳವರೆಗೆ ಮುಂದುವರೆದುದು ಇತಿಹಾಸವು ಎಂದಿಗೂ ಕ್ಷಮಿಸಲಾಗದ ಅಪರಾಧಕ್ಕೆ ಕಾರಣವಾಯಿತು.

ಮನೋರೋಗಿಗಳಿಗೆ ಬೆಥ್ಲೆಮ್ ಆಸ್ಪತ್ರೆಯಲ್ಲಿ ನೀಡುತ್ತಿದ್ದ ಚಿಕಿತ್ಸೆಗಳನ್ನು ನೆನೆಸಿಕೊಂಡರೆ ಸಾಕು, ಈಗಲೂ ನಮ್ಮ ಮೈಮೇಲೆ ಮುಳ್ಳು ಗಳು ಏಳುತ್ತವೆ. ಕೆಲವು ಉದಾಹರಣೆಗಳು. ಅತ್ಯಂತ ಪ್ರಮುಖವಾದ ಚಿಕಿತ್ಸೆ ಎಂದರೆ ಭ್ರಮಣ ಚಿಕಿತ್ಸೆ (ರೊಟೇಶನಲ್ ಥೆರಪಿ). ಒಂದು ಕುರ್ಚಿ. ಅದನ್ನು ಹಗ್ಗದಿಂದ ತೂಗುಬಿಟ್ಟಿರುತ್ತಿದ್ದರು. ಈ ಕುರ್ಚಿಯಲ್ಲಿ ರೋಗಿಯನ್ನು ಕೂರಿಸಿ ಕಟ್ಟಿ ಹಾಕುತ್ತಿದ್ದರು. ನಂತರ ರೋಗಿ ಯನ್ನು ಕುರ್ಚಿ ಸಮೇತ ಸುಮಾರು ೪೦ ಸುತ್ತು ಸುತ್ತುತ್ತಿದ್ದರು. ಹಗ್ಗವು ತಿರುಚಿಕೊಳ್ಳುತ್ತಿತ್ತು.

ನಂತರ ಒಮ್ಮೆಲೆ ಕುರ್ಚಿಯನ್ನು ಬಿಟ್ಟುಬಿಡುತ್ತಿದ್ದರು. ಆಗ ಸುರುಳಿ ಸುತ್ತಿಕೊಂಡದ್ದ ಹಗ್ಗವು ವೇಗವಾಗಿ ಬಿಚ್ಚಿಕೊಳ್ಳುತ್ತಿತ್ತು. ಕುರ್ಚಿಯ ಸಮೇತ ರೋಗಿಯು ವೇಗವಾಗಿ ತಿರುಗುತ್ತಿದ್ದ. ಅವನಿಗೆ ತಲೆಸುತ್ತು ಬರುತ್ತಿತ್ತು. ವಾಂತಿಯಾಗುತ್ತಿತ್ತು. ಕುಳಿತಲ್ಲೇ ಮಲಮೂತ್ರಗಳನ್ನು ವಿಸರ್ಜಿಸಿಕೊಳ್ಳುತ್ತಿದ್ದ. ಈ ಪರಿಣಾಮಗಳನ್ನು ನಿರ್ಲಕ್ಷಿಸಿ, ಒಂದರಿಂದ ಎರಡು ಗಂಟೆಯವರಿಗೆ ಸುತ್ತಿಸುತ್ತಿದ್ದರು. ದಿನಕ್ಕೆ ಎರಡು ಮೂರು ಸಲ! ಹೀಗೆ ಕುರ್ಚಿ ಚಿಕಿತ್ಸೆಯನ್ನು ತಿಂಗಳುಗಟ್ಟಲೇ ನೀಡುತ್ತಿದ್ದರು. ರೋಗಿ ದಣಿದು ದಣಿದು ಪ್ರಜ್ಞೆ ಕಳೆದುಕೊಂಡು ನಿಶ್ಚೇತನಾಗುತ್ತಿದ್ದ.

ಗ್ರೀಕರ ಕಾಲದಿಂದಲೂ ಒಂದು ನಂಬಿಕೆಯಿತ್ತು. ನಮ್ಮ ಶರೀರದಲ್ಲಿ ಕಫ, ರಕ್ತ, ಹಸಿರು ಪಿತ್ತ ಮತ್ತು ಕಪ್ಪು ಪಿತ್ತ ಎಂಬ ನಾಲ್ಕು ರಸಗಳು ಇರುತ್ತವೆ. ಈ ನಾಲ್ಕೂ ರಸಗಳ ನಡುವೆ ಸಮತೋಲನೆಯು ಇದ್ದಾಗ ನಾವು ಆರೋಗ್ಯವಾಗಿರುತ್ತೇವೆ. ಅಸಮತೋಲನೆಯಾದಾಗ ನಾನಾ ಕಾಯಿಲೆಗಳು ಬರುತ್ತವೆ. ಹಾಗಾಗಿ ನಾಲ್ಕು ರಸಗಳ ನಡುವೆ ಸಮತೋಲನೆಯನ್ನು ಸ್ಥಾಪಿಸುವುದೇ ಚಿಕಿತ್ಸೆಯ ಮೂಲ ಆಶಯವಾಗಿತ್ತು. ಈ ಸಮತೋಲನೆಯನ್ನು ಸ್ಥಾಪಿಸಲು ವ್ಯಕ್ತಿಗೆ ಬೇಕೆಂದೇ ವಾಂತಿಯನ್ನು ಮಾಡಿಸುತ್ತಿದ್ದರು.

ಬೇಕೆಂದೇ ಭೇದಿಯನ್ನು ಮಾಡಿಸುತ್ತಿದ್ದರು. ಬೇಕೆಂದೇ ರಕ್ತವಿಮೋಚನೆಯನ್ನು (ಬ್ಲಡ್ ಲೆಟಿಂಗ್) ನಡೆಸುತ್ತಿದ್ದರು. ಮನೋರೋಗಿಯ ಮುಂದೋಳಿನಿಂದ ಇಂತಿಷ್ಟು ರಕ್ತವನ್ನು ಹೊರಹರಿಸುವುದೇ ರಕ್ತ ವಿಮೋಚನಾ ಚಿಕಿತ್ಸೆಯ ತಿರುಳು. ಈ ರಕ್ತವಿಮೋಚನೆಯೂ
ನಿಯಮಿತವಾಗಿ ನಡೆಯುತ್ತಿದ್ದ ಕಾರಣ, ರಕ್ತನಷ್ಟದಿಂದ ಮನೋರೋಗಿಯು ಬಿಳಚಿಕೊಂಡು, ದಣಿದು ಮಲಗಿ ಬಿಡುತ್ತಿದ್ದ. ಕೆಲವು ನಿರ್ದಿಷ್ಟ ರೋಗಿಗಳಿಗೆ ಗುಳಚಿಕಿತ್ಸೆಯನ್ನು ನೀಡುತ್ತಿದ್ದರು. ಗುಳಚಿಕಿತ್ಸೆಯೆಂದರೆ ಕಾದಲೋಹದಿಂದ ಬರೆಯನ್ನು ಹಾಕುವುದು ಇಲ್ಲವೇ ದಹನಶೀಲ ದ್ರವಗಳನ್ನು ಮೈಮೇಲೆ ಸುರಿದು ಸುಡುವುದು.

ವಾಂತಿ, ಭೇದಿ, ರಕ್ತ ವಿಮೋಚನೆಯು ಹಾಗೂ ಗುಳಚಿಕಿತ್ಸೆಗಳು ಮನೋರೋಗಿಯನ್ನು ನಿತ್ರಾಣವಾಗಿಸುತ್ತಿದ್ದ ಕಾರಣ, ಅವನು ಆಕ್ರಮಣ
ಶೀಲತೆ ತೋರುವುದು ಕಡಿಮೆಯಾಗುತ್ತಿತ್ತು. ಉಗ್ರವಾಗಿ ಪ್ರತಿಭಟಿಸುವ ಮನೋರೋಗಿಗಳಿಗೆ ಅಪೀಮನ್ನು ತಿನ್ನಿಸಿ ಮಲಗಿಸಿ ಬಿಡುತ್ತಿದ್ದರು. ಹೀಗಾದಾಗ ಕೂಗುವುದು, ಕಿರುಚುವುದು ಹಾಗೂ ಅಸಹಕಾರ ತೋರುವುದು ಕಡಿಮೆಯಾಗುತ್ತಿತ್ತು. ರೋಗಿಯ ಈ ಪ್ರತಿಭಟನಾ ಹೀನ ಸ್ಥಿತಿಯು ಆಸ್ಪತ್ರೆಯ ಸಿಬ್ಬಂದಿಗೆ ವರದಾಯಕವಾಗಿತ್ತು. ಹಾಗಾಗಿ ಅವರು ಈ ಚಿಕಿತ್ಸೆಯನ್ನು ಉತ್ತೇಜಿಸುತ್ತಿದ್ದರು.
ಮನೋರೋಗಿಗಳಿಗೆ ನೀಡುತ್ತಿದ್ದ ಮತ್ತೊಂದು ಮುಖ್ಯ ಚಿಕಿತ್ಸೆಯೆಂದರೆ ಶೀತಲ ಚಿಕಿತ್ಸೆ.

ಈ ಚಿಕಿತ್ಸೆಯನ್ನು ೧೬೮೦ರಲ್ಲಿ ಮೊದಲ ಬಾರಿಗೆ ಬೆಥ್ಲೆಹೆಮ್ ಆಸ್ಪತ್ರೆಯಲ್ಲಿ ಜಾರಿಗೆ ತಂದರು. ಇದು ೧೮ನೆಯ ಶತಮಾನದವರೆಗೆ ಮುಂದುವರಿಯಿತು. ಲಂಡನ್ನಿನ ಚಳಿಯಲ್ಲಿ ಮನೋರೋಗಿಗಳನ್ನು ಗಂಟೆಗಟ್ಟಲೆ ತಣ್ಣೀರಿನಲ್ಲಿ ಮುಳುಗಿಸುತ್ತಿದ್ದರು. ಇಲ್ಲವೇ ಮಂಜುನೀರಿ
ನಲ್ಲಿ ಅದ್ದಿದ ಟವಲನ್ನು ರೋಗಿಯ ಬರಿಮೈಮೇಲೆ ಸುತ್ತಿ, ಅದರ ಮೇಲೆ ನಿಯಮಿತವಾಗಿ ನೀರನ್ನು ಹಾಕುತ್ತಿದ್ದರು. ಇದು ಮನೋರೋಗ ಗಳಲ್ಲಿ ಇದ್ದಿರಬಹುದಾದ ಪ್ರತಿಭಟನಾ ಶಕ್ತಿಯನ್ನು ಸಂಪೂರ್ಣವಾಗಿ ಉಡುಗಿಸುತ್ತಿದ್ದರು.

ಮನೋರೋಗಿಗಳಿಗೆ ಚಿಕಿತ್ಸೆ ಎಂಬ ಹೆಸರಿನಲ್ಲಿ ನೀಡುತ್ತಿದ್ದ ಈ ಚಿತ್ರಹಿಂಸೆಗೆ ಕಲಶಪ್ರಾಯವಿಟ್ಟಂತೆ ಆಸ್ಪತ್ರೆಯ ಪರಿಸರವಿತ್ತು. ಇಡೀ ಆಸ್ಪತ್ರೆಯು ಕೊಳಕಿನ ತವರುಮನೆಯಾಗಿತ್ತು. ಹಲವು ರೋಗಿಗಳನ್ನು ಒಂದೆಡೆ ಕೂಡಿಹಾಕುತ್ತಿದ್ದರು. ಅನೇಕ ರೋಗಿಗಳನ್ನು ಸರಪಳಿಗಳಿಂದ ನಾಯಿಯನ್ನು ಕಟ್ಟಿಹಾಕುವಂತೆ ಕಟ್ಟುತ್ತಿದ್ದರು. ಕೋಣೆಗಳು ಕೊರೆಯುವ ಮಂಜಿನ ಪ್ರತೀಕವಾಗಿದ್ದವು. ಅವರಿಗೆ ಪೌಷ್ಟಿಕ ಆಹಾರವೂ ದೊರೆಯುತ್ತಿರಲಿಲ್ಲ. ಬೆಚ್ಚನೆಯ ಉಡುಪಂತೂ ಕನಸಿನ ಮಾತಾಗಿತ್ತು.

ಅನ್ನಾ ಸ್ಟೋನ್ ಎಂಬ ಮಹಿಳೆಗೆ ಸರಪಳಿಯನ್ನು ಬಿಗಿದು, ಸಂಪೂರ್ಣ ನಗ್ನಳನ್ನಾಗಿಸಿ, ತಣ್ಣನೆಯ ನೆಲದ ಮಲಗಿಸಿದ್ದರು. ಅಲ್ಲಿ ಸ್ವಚ್ಛತೆಯ ಪ್ರಾಥಮಿಕ ಅನುಕೂಲಗಳಿರಲಿಲ್ಲ. ಇನ್ನು ನಾಗರಿಕ ಹಕ್ಕುಗಳ ಪ್ರಶ್ನೆಯೇ ಉದ್ಭವಿಸಲು ಅವಕಾಶವಿರಲಿಲ್ಲ. ಕೆಲವು ಸಿಬ್ಬಂದಿ ವರ್ಗದವರು ಮಹಿಳೆಯರಿದ್ದ ಕಡೆ ಹೋಗಿ ಅವರನ್ನು ಲೈಂಗಿಕವಾಗಿ ದುರುಪಯೋಗಪಡಿಸಿಕೊಳ್ಳುತ್ತಿದ್ದರು. ಎಲ್ಲಕ್ಕಿಂತಲೂ ಅಮಾನವೀಯಕರ ವಿದ್ಯಮಾನವೆಂದರೆ ಬೆಥ್ಲೆಹೆಮ್ ಆಸ್ಪತ್ರೆಯು ಅಂದಿನ ಲಂಡನ್ ಪ್ರವಾಸಿಗರ ಆಕರ್ಶಕ ಕೇಂದ್ರವಾದದ್ದು. ಲಂಡನ್ನಿಗೆ ಬರುವ ಪ್ರವಾಸಿ ಗರು ಮೊದಲು ಸೈಂಟ್ ಪಾಲ್ ಕೆಥೆಡ್ರಲ್ಲಿಗೆ ಹೋಗುತ್ತಿದ್ದರು.

ಅಲ್ಲಿಂದ ನೆರವಾಗಿ ಬೆಥ್ಲೆಮ್ಮಿಗೆ ಬರುತ್ತಿದ್ದರು. ಈ ಹುಚ್ಚರ ಸಂತೆಯನ್ನು ನೋಡಲು ಟಿಕೆಟ್ ಬೇರೆ ಇಟ್ಟಿದ್ದರು. ಕ್ರಿಸ್ಮಸ್ ಮತ್ತು ಈಸ್ಟರ್ ಸಂದರ್ಭಗಳಲ್ಲಿ ಪ್ರವಾಸಿಗರ ಸಂಖ್ಯೆಯನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತಿತ್ತು. ಪ್ರಾಣಿಸಂಗ್ರಹಾಲಯಕ್ಕೆ ಬಂದ ಪ್ರವಾಸಿ ಗಳು, ಪ್ರಾಣಿಗಳನ್ನು ಹೇಗೆ ಕೆರಳಿಸುತ್ತಾರೆಯೋ, ಹಾಗೆಯೇ ಇಲ್ಲಿಯೂ ಮನೋರೋಗಿಗಳನ್ನು ಕೆರಳಿಸುತ್ತಿದ್ದರು. ಮಾತಿನಿಂದ ಕೆರಳಿಸುವುದರ ಜತೆಗೆ, ಕುಣಿಯುವಂತೆ ಕುಪ್ಪಳಿಸುವಂತೆ ಗೋಳು ಹೊಯ್ದುಕೊಳ್ಳುತ್ತಿದ್ದರು. ಚುಚ್ಚುತ್ತಿದ್ದರು. ಕಲ್ಲುಗಳಿಂದ ಹೊಡೆಯುತ್ತಿದ್ದರು. ಎಲ್ಲ ರೀತಿಯ ಕಿರುಕುಳವನ್ನು ನೀಡುತ್ತಿದ್ದರು.

ಆಸ್ಪತ್ರೆಯ ಸಿಬ್ಬಂದಿಯು ತಮಗೆ ದೊರೆಯುತ್ತಿದ್ದ ಪುಡಿಗಾಸಿಗಾಗಿ ಪ್ರವಾಸಿಗರು ಏನೇ ಮಂಗಾಟವನ್ನಾಡಿದರೂ ಆ ಕಡೆ ಗಮನ ಹರಿಸುತ್ತಿರಲಿಲ್ಲ. ಆಸ್ಪತ್ರೆಯ ವೈದ್ಯರು ಸದಾ ಪಾನಮತ್ತರಾಗಿ ಅವರದ್ದೇ ಲೋಕದಲ್ಲಿರುತ್ತಿದ್ದರು. ಆಸ್ಪತ್ರೆಗೆ ಒಬ್ಬ ಮನೋರೋಗಿಯನ್ನು ದಾಖಲು ಮಾಡಬೇಕಾದರೆ, ರೋಗಿಯ ಕಡೆಯವರು ವರ್ಷಕ್ಕೆ ೪೮೦ ಪೌಂಡುಗಳ ಶುಲ್ಕವನ್ನು ಪ್ರತಿವರ್ಷವೂ ನೀಡಬೇಕಾಗಿತ್ತು. ಬೆಥ್ಲೆಮ್ ಆಸ್ಪತ್ರೆಯಲ್ಲಿ ೧೨೦ ಮನೋರೋಗಿಗಳಿಗೆ ಮಾತ್ರ ಅವಕಾಶವಿದ್ದ ಕಾರಣ, ಅನೇಕ ಖಾಸಗಿ ಹುಚ್ಚರ ಸಂತೆಗಳು ಲಂಡನ್ನಿನಲ್ಲಿ
ಆರಂಭವಾದವು. ಈ ಖಾಸಗೀ ಆಸ್ಪತ್ರೆಗಳು ಬೆಥ್ಲೆಮ್ ಗಿಂತಲೂ ಯಾವುದೇ ರೀತಿಯಲ್ಲಿ ಉತ್ತಮವಾಗಿರಲಿಲ್ಲ.

೧೭೫೦. ಬೆಥ್ಲೆಹೆಮ್ ಆಸ್ಪತ್ರೆಯ ಅಮಾನವೀಯ ಪರಿಸರವನ್ನು ನೋಡಿ, ಪರಿಸ್ಥಿತಿಯನ್ನು ಸುಧಾರಿಸಲು, ಬೆಥ್ಲೆಮ್ ಆಸ್ಪತ್ರೆಯ ಎದುರಿನಲ್ಲಿಯೇ ಸೈಂಟ್ ಲ್ಯೂಕ್ ಆಸ್ಪತ್ರೆಯನ್ನು ಆರಂಭಿಸಿದರು. ಈ ಆಸ್ಪತ್ರೆಯ ಪರಿಸರವು ಬೆಥ್ಲೆಮ್ ಆಸ್ಪತ್ರೆಗೆ ಸಂಪೂರ್ಣವಾಗಿ ವಿರುದ್ಧವಾಗಿತ್ತು. ವಿಲಿಯಂ ಬ್ಯಾಟ್ಟಿ ಎನ್ನುವ ವೈದ್ಯನು ಆಸ್ಪತ್ರೆಯ ಮುಖ್ಯಸ್ಥನಾಗಿ ಮನೋರೋಗಿಗಳನ್ನು ಇತ್ಯಾತ್ಮಕವಾದ ಪರಿಸರದಲ್ಲಿ ಚಿಕಿತ್ಸಾ ನೀಡಿದೆ. ವಾಂತಿ, ಭೇದಿ, ರಕ್ತವಿಮೋಚನೆ, ಸುಡುವುದು, ಅಪೀಮನ್ನು ತಿನ್ನಿಸುವುದು, ತಣ್ಣೀರಿನಲ್ಲಿ ಮುಳುಗಿಸುವುದು ಇತ್ಯಾದಿ ಕ್ರೂರ ಚಿಕಿತ್ಸೆಗಳನ್ನು ನಿಲ್ಲಿಸಿದ. ಸಾರ್ವಜನಿಕವಾಗಿ ಪ್ರಚುರಪಡಿಸಿದ.

ಬೆಥ್ಲೆಮ್ ಆಸ್ಪತ್ರೆಯ ಮುಖ್ಯಸ್ಥನಾಗಿದ್ದ ಜಾನ್ ಮನ್ರೋ (ನಾಲ್ಕು ತಲೆಮಾರಿನವರು ಇಲ್ಲಿಯೇ ವೈದ್ಯರಾಗಿದ್ದರು), ಬ್ಯಾಟಿ ಹೇಳಿದ್ದೆಲ್ಲವೂ ಸುಳ್ಳು ಎಂದು ವಾದಿಸಿದ. ತಲೆತಲೆಮಾರುಗಳಿಂದ ನೀಡುತ್ತ ಬಂದಿರುವ ಚಿಕಿತ್ಸೆಯೇ ಸರ್ವಶ್ರೇಷ್ಠವೆಂದ. ವೈದ್ಯರ ನಡುವೆ ಒಂದು
ಸಾರ್ವಜನಿಕ ಮಾತಿನ ಯುದ್ಧವೇ ನಡೆಯಿತು. ಅಮೆರಿಕದ ನ್ಯೂಯಾರ್ಕಿನಲ್ಲಿಯೂ ಒಂದು ಮನೋವೈದ್ಯಕೀಯ ಆಸ್ಪತ್ರೆಯಿತ್ತು. ಅದರ ಸ್ಥಿತಿಗತಿಯು ಬೆಥ್ಲೆಮ್ ಗಿಂತ ಉತ್ತಮವಾಗೇನೂ ಇರಲಿಲ್ಲ. ಅಲ್ಲಿನ ಪ್ರತಿನಿಽಗಳು ಸರಕಾರದ ವಿರುದ್ಧ ತಿರುಗಿಬಿದ್ದರು. ಮನೋರೋಗಿಗಳಿಗೆ ಉತ್ತಮ ಚಿಕಿತ್ಸೆಯನ್ನು ನೀಡುವಂತೆ ಒತ್ತಡವನ್ನು ಹಾಕಿದರು.

ಈ ಸುದ್ಧಿಯು ಲಂಡನ್ ನಗರವನ್ನೂ ತಲುಪಿತು. ಕೆಲವು ಸುಧಾರಕರು ಲಂಡನ್ ಪಾರ್ಲಿಮೆಂಟಿನಲ್ಲಿ ಈ ಬಗ್ಗೆ ಪ್ರಸ್ತಾಪಿಸಿ, ಹೋರಾಟಕ್ಕಿಳಿ ದರು. ಅದರ -ಲವಾಗಿ ಬೆಥ್ಲೆಮ್ ಆಸ್ಪತ್ರೆಯು ಶಿಥಿಲಗೊಂಡಿದ್ದ ಮೂರ್ಸ್‌ಫೀಲ್ಡ್ ಕಟ್ಟಡವನ್ನು ತೊರೆದು, ಲಂಡನ್ನಿನ ಥೇಮ್ಸ್ ನದಿಯ ದಕ್ಷಿಣಕ್ಕಿದ್ದ ಸೌತ್ ವಾರ್ಕಿನ ಸೈಂಟ್ ಜಾರ್ಜ್ಸ್‌ಫೀಲ್ಡ್ಸ್ ಕಟ್ಟಡಕ್ಕೆ ಬಂದಿತು. ಇಲ್ಲಿ ಮೊದಲ ಬಾರಿಗೆ ಮನೋರೋಗಿಗಳ ಸ್ಥಿತಿಗತಿಗಳು ಸುಧಾರಣೆಯಾದವು. ಮಾನವೀಯ ಚಿಕಿತ್ಸೆಯು ದೊರೆಯಲಾರಂಭಿಸಿತು.