Sunday, 15th December 2024

Prof C Shivaraju Column: ಕೆಟ್ಟ ನಡೆಯಿಂದ ಸನ್ನಡತೆಗೆ ಬದಲಾಗುವುದೇ ಜೀವನದ ನಿಯಮ

ಅಭಿಮತ

ಪ್ರೊ.ಸಿ.ಶಿವರಾಜು

ಸಂಕಲ್ಪ ವಿಕಲ್ಪಾತ್ಮಕಂ ಮನಃ ಎಂಬುದು ಮನಸ್ಸಿನ ಲಕ್ಷಣ. ಅಂದರೇ ಸಂಕಲ್ಪ ಹಾಗೂ ವಿಕಲ್ಪಗಳನ್ನು ಮಾಡುವುದು ಮನಸ್ಸಿನ ಕಾರ್ಯ ಎಂದರ್ಥ. ಅಂತೆಯೇ ಮನಸ್ಸಿನಿಂದಲೇ ಅಳಿವು ಹಾಗು ಉಳಿವು. ಎಲ್ಲದಕ್ಕೂ ಮನಸ್ಸೇ ದಿವ್ಯೌಷಧಿ. ಸಕಾರಾತ್ಮಕ ಮನಸ್ಸು ಉತ್ತಮ ಬೆಳವಣೆಗೆಗೆ ಕಾರಣವಾಗುತ್ತದೆ.

ಮನಸ್ಸಿದ್ದರೆ ಮಾರ್ಗ ಎಂಬ ಮಾತಿದೆ. ಮನುಷ್ಯ ಯಾವುದೇ ಕಾರ್ಯಕ್ಕೆ ಮನಸ್ಸು ಮಾಡದಿದ್ದರೆ ಯಾವ ಕ್ರಿಯಯೂ ಜರುಗುವುದಿಲ್ಲ. ಪ್ರಶಾಂತವಾದ ಮನಸ್ಸು ಆರೋಗ್ಯಕರವಾದ ಲಕ್ಷಣ. ಈ ಮನಸ್ಸಿನ ಸಕಾರಾತ್ಮಕ ಬದಲಾವಣೆ ಮನಷ್ಯನನ್ನು ಬಾನೆತ್ತರಕ್ಕೆ ಕೊಂಡೊಯ್ಯುತ್ತದೆ. ಮನಸ್ಸನ್ನು ತೊಡಗಿಸುವ ಮಾರ್ಗ ಉತ್ತಮ ವಾಗಿರಬೇಕು. ಬದಲಾವಣೆಯೇ ಆರೋಗ್ಯಕರ ಜೀವನ ನಡೆಸಲು ನಾಂದಿಯಾಗುತ್ತದೆ. ಬದುಕನ್ನು ಸಾರ್ಥಕತೆ ಮಾಡಿಕೊಳ್ಳಲು, ಸಮಾಜದ ಒಳಿತಿಗಾಗಿ, ಬದಲಾಗುವಿಕೆ ಅನಿವಾರ್ಯ ಹಾಗೂ ಇಂದಿನ ಅಗತ್ಯತೆಯಾಗಿದೆ. ನಾವು ಬದಲಾವಣೆಯ ಯುಗದಲ್ಲಿದ್ದೇವೆ. ಜಗತ್ತು ಬದಲಾದಂತೆ ನಾವು ಅದಕ್ಕೆ ಪೂರಕವಾಗಿ ಬದಲಾಗಬೇಕು. ಹೀಗೆ ಬದಲಾಗುತ್ತಿರುವ ಜಗತ್ತಿನಲ್ಲಿ ಬದಲಾವಣೆ ಪೂರಕವಾಗಿ ಮನುಷ್ಯ ತನ್ನನ್ನು ತಾನು ಬದಲಾಯಿಸಿಕೊಳ್ಳಬೇಕಾಗಿದೆ.

ಬದಲಾವಣೇ ನಮ್ಮ ಅಸ್ತಿತ್ವದ ಒಂದು ಅಂತರ್ಗತ ಭಾಗವಾಗಿದೆ. ಬದಲಾವಣೆ ವಿವಿಧ ರೂಪಗಳಲ್ಲಿ ಪ್ರಕಟ ವಾಗುತ್ತದೆ. ಇಂದಿನ ವೇಗದ ಜಗತ್ತಿಗೆ ಹೊಂದಿ ಕೊಳ್ಳುವುದು ನಿರ್ಣಾಯಕವಾಗಿದೆ. ಬದಲಾವಣೆಗೆ ಹೊಂದುಕೊಳ್ಳು ವವರು ಅಭಿವೃದ್ಧಿ ಹೊಂದುತ್ತಾರೆ. ಇದು ನಮ್ಮ ಸಂಬಂಧ ಮತ್ತು ಕೌಶಲ್ಯಗಳನ್ನು ಹೆಚ್ಚಿಸುತ್ತದೆ. ಹಾಗೂ ಹೊಸದಿಗಂತ ಮತ್ತು ಆಳವಾದ ತಿಳುವಳಿಕೆಗೆ ನಮ್ಮನ್ನು ಕರೆದೊಯ್ಯುತ್ತದೆ. ಜಗತ್ತು ಯಾವಾಗಲೂ ಬದಲಾಗು ತ್ತಲೇ ಇರುತ್ತದೆ ಹಾಗೆಯೇ ಸದಾ ಬದಲಾವಣೆಯನ್ನು ಬಯಸುತ್ತಲೇ ಇರುತ್ತದೆ. ಬದಲಾಗುತ್ತಾ ಇರುವುದರಿಂದಲೇ ಜಗತ್ತು ನಡೆಯುತ್ತಿದೆ.

ಹರಿಯುವ ನದಿಯಿಂದ ಒಂದು ಬೊಗಸೆ ನೀರು ತೆಗೆದುಕೊಂಡು ಮತ್ತೆ ನದಿಗೆ ಬಿಟ್ಟರೆ ಆ ಬೊಗಸೆ ನೀರು ಮತ್ತೆ ನಮಗೆ ಸಿಗಬೇಕೆಂದು ಎಷ್ಟೇ ಪ್ರಯತ್ನ ಪಟ್ಟರೂ ಸಿಗುವುದಿಲ್ಲ. ಮುಂದೆ ಹರಿದು ಹೋಗಿರುತ್ತದೆ. ಕಳೆದುಹೋದ ಕ್ಷಣ ಮತ್ತೆ ಎಂದಿಗೂ ನಮಗೆ ಮರಳಿ ಸಿಗುವುದಿಲ್ಲ. ಕಾಲ ಮುಂದಕ್ಕೆ ಓಡುತ್ತಲೇ ಇರುತ್ತದೆ. ಕಾಲ ಮತ್ತು ಸಮುದ್ರದ ಅಲೆಗಳು ಯಾರಿಗೂ ಕಾಯುವುದಿಲ್ಲ. ಹಾಗೆಯೇ ನಾವು ಕೂಡ ಅಷ್ಟೇ, ನಮ್ಮ ಶರೀರವು ಕೂಡ ಕ್ಷಣ ಕ್ಷಣಕ್ಕೂ ಬದಲಾಗುತ್ತಾ ಹೋಗುತ್ತದೆ. ಶೈಶವದಿಂದ ಕಿಶೋರ, ಬಾಲ್ಯ, ಯೌವನ, ಪ್ರೌಢ ಮತ್ತು ವೃದ್ಧಾಪ್ಯದ ಸ್ಥಿತಿಯೆಡೆಗೆ
ನಿರಂತರ ಬದಲಾಗುತ್ತಲೇ ಹೋಗುತ್ತದೆ. ಯಾವುದೇ ಸ್ಥಿತಿಯನ್ನು ಯಥಾರೀತಿ ಉಳಿಸಿಕೊಳ್ಳಲು ಸಾಧ್ಯವೇ ಇಲ್ಲ. ಅದು ಸಿಗುತ್ತದೋ ಇಲ್ಲವೋ ಆದರೆ ನಾವು ಪ್ರಸ್ತುತತೆಗಿಂತ ಉತ್ತಮ ಸ್ಥಿತಿಗೆ ಬದಲಾಗಬೇಕೆಂಬ ಹಂಬಲ ಪ್ರತಿ ಯೊಬ್ಬರಲ್ಲೂ ಜೀವಂತವಾಗಿರುತ್ತದೆ. ಅಸಾಧ್ಯವಾದುದನ್ನು ಸಾಧಿಸಲು, ಭರವಸೆಯ ಈಡೇರಿಕೆಗಾಗಿ, ಸಮಾಜಕ್ಕೆ ಮಾದರಿಯಾಗಲು, ಆದರ್ಶವಾಗಲು, ಜೀವನದ ಸಾರ್ಥಕತೆಯನ್ನು ಮಾಡಿಕೊಳ್ಳಲು, ಉದಾತ್ತ ಉದ್ದೇಶಕ್ಕೋಸ್ಕರ, ಅನಿಸಿಕೆಗಳನ್ನು ಕಾರ್ಯರೂಪಕ್ಕೆ ತರಲು ಬದಲಾವಣೆ ಆಗಲೇಬೇಕೆಂದು ಬಯಸಿದ್ದಲ್ಲಿ ಫಲಿತಾಂಶ ಸಿಕ್ಕೇ ಸಿಗುತ್ತದೆ.

ಎಲ್ಲರನ್ನು ನಂಬುತ್ತೇನೆ ಆದರೆ ಯಾರ ಮೇಲೂ ಅವಲಂಬಿತನಾಗುವುದಿಲ್ಲ ಎಂಬ ಮನಃಸ್ಥಿತಿಯನ್ನು ತಂದು ಕೊಳ್ಳಬೇಕು. ಸೋಲು, ಗೆಲುವು, ಹತಾಶೆ, ಒಂಟಿತನ, ಜಿಗುಪ್ಸೆಯ ನಡುವೆ ಏನನ್ನಾದರೂ ಸಾಧಿಸಬೇಕೆಂಬ ಉತ್ಸಾಹ, ಸಮಾಜದಲ್ಲಿ ನನ್ನನ್ನು ಗುರುತಿಸುವ ಮಟ್ಟಿಗೆ ಬೆಳೆಯಬೇಕೆಂಬ ಹಂಬಲ, ಸೋಲಿಗೆ ಹೆದರಿ ಕಂಗಾಲಾಗುವ ಮನಃಸ್ಥಿತಿಯಿಂದ ಹೊರ ಬಂದು ನಿಮ್ಮ ಆಲೋಚನಾ ಲಹರಿಯನ್ನು ಬದಲಾಯಿಸಿಕೊಂಡು ನಾನು ಗೆದ್ದೇ ಗೆಲ್ಲುತ್ತೇನೆ ಎಂಬ ವಿಶ್ವಾಸದಿಂದ ಮುನ್ನುಗ್ಗುವ ಮನಸ್ಸು ಮಾಡಿದರೆ ನೀವು ದಡವನ್ನು ಸೇರುತ್ತೀರಿ.

ಬದಲಾವಣೆ ಯಾವಾಗ ಆಗುತ್ತದೆಂದರೆ ಬದಲಾವಣೆ ಅನಿವಾರ್ಯ ಎನ್ನುವಷ್ಟರ ಮಟ್ಟಿಗೆ ನಿಮಗೆ ದೊಡ್ಡ ಪೆಟ್ಟು ಬಿದ್ದಾಗ ಮಾತ್ರ ಬದಲಾಗುತ್ತೀರಿ. ನಮ್ಮ ಜೀವನದಲ್ಲಿ ನೆನಪಿಡುವ ವಿಷಯದ ಆಯ್ಕೆಗಳೆಂದರೆ ಒಂದು ಒಪ್ಪಿಗೆ ಇನ್ನೊಂದು ಬದಲಾವಣೆ. ಯಾವುದನ್ನು ಬದಲಾಯಿಸಲು ಸಾಧ್ಯವಿಲ್ಲವೋ ಅದನ್ನು ಒಪ್ಪಿಕೊಳ್ಳಬೇಕು. ಯಾವುದನ್ನು ಒಪ್ಪಲು ಸಾಧ್ಯವಿಲ್ಲವೋ ಅದನ್ನು ಬದಲಾಯಿಸಬೇಕು ಎಂಬುದನ್ನು ಸ್ಪಷ್ಟವಾಗಿ ತಿಳಿಯಬೇಕಾ ಗಿರುವುದರಿಂದ ಹವ್ಯಾಸವನ್ನು ಬದಲಾಯಿಸಿಕೊಂಡರೆ ಜೀವನದ ಶೈಲಿಯೇ ಬದಲಾಗುತ್ತದೆ. ನಾವು ನೋಡುವ ದೃಷ್ಟಿಯನ್ನು ಬದಲಾಯಿಸಿಕೊಂಡರೆ ಸೃಷ್ಟಿಯೇ ಬದಲಾಗಿಬಿಡುತ್ತದೆ.

ದಡಸೇರದೆ ಇದ್ದರೆ ಬದಲಾಯಿಸಬೇಕಾದದ್ದು ದೋಣಿಯನ್ನಲ್ಲ. ಬದಲಾಗಿ ದಿಕ್ಕನ್ನು ಬದಲಾಯಿಸಿ ನೋಡಿ ಗೆಲುವು ನಿಮ್ಮದಾಗುತ್ತದೆ. ನಾಳೆಯ ಬಗ್ಗೆ ಯೋಚಿಸಿ ನೆನ್ನೆಯದನ್ನು ಮರೆಯಬೇಡಿ. ಶತ್ರುಗಳಾಗಲಿ, ಸ್ನೇಹಿತರಾಗಲಿ ಯಾರು ಶಾಶ್ವತರಲ್ಲ ಗೆಲುವೇ ಶಾಶ್ವತ. ನೆನ್ನೆಯ ಸೋಲನ್ನು ನೆನೆದು ಕೊರಗಿದರೆ ಇನ್ನೊಂದು ಸೋಲಿಗೆ ಆಹ್ವಾನ ಕೊಟ್ಟಂತೆ. ನೆನ್ನೆಯ ಗೆಲುವಿಗಾಗಿ ಅಹಂಕಾರ ಪಡದೆ ಮುನ್ನುಗ್ಗಬೇಕು. ಮನಸ್ಸನ್ನು ಬದಲಾಯಿಸಿ ಸಾಧಿಸುವ ಕಡೆಗೆ ಮುನ್ನುಗ್ಗಿ. ಬದಲಾಗು ಎಂದರೆ ಸೋಲಿನಿಂದ ಗೆಲುವಿನ ಕಡೆಗೆ, ನೋವಿನಿಂದ ಸಂಭ್ರಮದೆಡೆಗೆ, ದುಃಖದಿಂದ
ಧೈರ್ಯದ ಕಡೆಗೆ, ಒಂಟಿತನದಿಂದ ಏಕಾಂತದ ಕಡೆಗೆ, ಧೃತಿಗೆಡದೆ ನಡೆಯುವುದೇ ಜೀವನ ಎಂಬುದನ್ನು ಮನಗಾಣ ಬೇಕು.

ಚಲನೆಯಿಂದ ಒಂದು ಕ್ರಿಯೆ ಪ್ರಾರಂಭವಾಗುತ್ತದೆ. ಚಲನೆರಹಿತ ವಸ್ತುವಿನಿಂದ ಯಾವಕ್ರಿಯೆಯೂ ಆಗುವುದಿಲ್ಲ. ಹಾಗೆ ಮನುಷ್ಯ ಬದಲಾಗದೆ ಬದಲಾವಣೆಯನ್ನು ಬಯಸದೇ ಇದ್ದರೆ, ಯಾವ ಕಾರ್ಯವು ನಡೆಯುವುದಿಲ್ಲ. ಚಲನಶೀಲತ್ವಕ್ಕೆ ಬೆಲೆ ಇರುವುದೇ ಹೊರತು ಚಲನೆ ರಹಿತವಾಗಿರುವುದರಿಂದ ಏನೂ ಪ್ರಯೋಜನವಿಲ್ಲ. ಆದ್ದರಿಂದ ಮಾನವ ಸಕಾರಾತ್ಮಕವಾಗಿ ಬದಲಾಗಬೇಕು. ಬದಲಾಗುವ ಮನಃಸ್ಥಿತಿ ಸಾಧ್ಯವೇ ಇಲ್ಲ ಎಂದು ಕೊಂಡರೆ ಏನನ್ನು ಸಾಧಿಸಲಾಗದು, ಪ್ರಯತ್ನ ಪಡುವುದರಿಂದ ನಷ್ಟವೇನಿದೆ? ಗೆದ್ದರೆ ಸಂತೋಷವಾಗುತ್ತದೆ, ಸೋತರೆ ಅನುಭವ ವಾಗುತ್ತದೆ. ಆದ್ದರಿಂದಲೇ ನಮ್ಮ ಹಿರಿಯರು ಸೋಲೆ ಗೆಲುವಿನ ಮೆಟ್ಟಿಲು ಎಂದು ಹೇಳಿರುವುದು.

ಅದಕ್ಕಾಗಿ ಬದಲಾವಣೆಯ ಕಡೆ ಮುಖಮಾಡಿ ನಂತರ ಅದರ ಪರಿಣಾಮವನ್ನು ನಿರೀಕ್ಷಿಸಿ. ನಾವು ಮೊದಲು ಬದಲಾಗುವುದರ ಮೂಲಕ ಇತರರು ಬದಲಾಗಬೇಕೆಂದು ಬಯಸುವುದು ಸಹಜಗುಣ ಮತ್ತು ಸಾರ್ವಕಾಲಿಕ ಸತ್ಯ. ಇನ್ನೊಬ್ಬರು ಬದಲಾಗಬೇಕೆಂದು ಬಯಸುವ ನಾವು, ಬದಲಾಗಬೇಕಾದದ್ದು ನಾನೇ ಆಗಬಾರದೇಕೆ? ಎಂದು
ಆಲೋಚಿಸಬೇಕು. ನಾವು ಯಾರು ಬದಲಾಗಬೇಕೆಂದು ಬಯಸುತ್ತೇವೆಯೋ ಅವರ ಸ್ಥಾನದಲ್ಲಿ ನಮ್ಮನ್ನು ಕಲ್ಪಿಸಿಕೊಂಡು ಯೋಚಿಸುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು.

ಹೀಗೆ ಮಾಡಿದರೆ ನಮ್ಮ ನ್ಯೂನ್ಯತೆಗಳು, ಕೆಟ್ಟ ಆಲೋಚನೆಗಳು, ಇತರರ ಮೇಲಿನ ದ್ವೇಷ, ವೈಷಮ್ಯ ನಮ್ಮ ಅರಿವಿಗೆ ಬರುತ್ತದೆ. ಅಂತಹವುಗಳನ್ನು ನಿವಾರಿಸಿಕೊಳ್ಳಲು ಪ್ರಾರಂಭಿಸಿದರೆ ಬದಲಾವಣೆ ಗೋಚರವಾಗುತ್ತದೆ ಹಾಗೂ ನಮ್ಮ ಮನಸ್ಸು ಬದಲಾವಣೆಗೆ ಒಪ್ಪಿಕೊಳ್ಳುತ್ತದೆ. ನಾವು ಯಾವ ಬಣ್ಣದ ಕನ್ನಡಕದಿಂದ ಜಗತ್ತನ್ನು ನೋಡುತ್ತೇವೆಯೋ ಜಗತ್ತು ಅದೇ ಬಣ್ಣದಿಂದ ನಮಗೆ ಪ್ರತಿಫಲಿಸುತ್ತದೆ. ಬಂಡೆಕಲ್ಲನ್ನೇ ಕೆತ್ತಿ ಸುಂದರ ವಿಗ್ರಹ ಮಾಡುವ ಮನುಷ್ಯ ತನ್ನ ಜೀವನವನ್ನು ಸರಿಪಡಿಸಿಕೊಂಡು, ಸುಂದರ ಮಾಡಿ ಕೊಳ್ಳುವುದರಲ್ಲಿ ಸೋಲುತ್ತಾನೆ. ಕೊನೆಗೆ ತಾನೇ ಕೆತ್ತಿದ ವಿಗ್ರಹದ ಮುಂದೆ ನಿಂತು, ಕಾಪಾಡು ದೇವರೇ ಎಂದು ಪ್ರಾರ್ಥಿಸುತ್ತಾನೆ.

ಇದು ಎಂತಹ ವಿಪರ್ಯಾಸ ನೋಡಿ ಇಂತಹ ಸತ್ಯವನ್ನು ಮರೆಮಾಚಲು ಯಾರಿಂದಲು ಸಾಧ್ಯವಿಲ್ಲ. ಆದ್ದರಿಂದ ವಿವೇಕಾನಂದರು ನಿನ್ನ ಏಳ್ಗೆಗೆ ನೀನೆ ಶಿಲ್ಪಿ ಎಂದು ಹೇಳಿದ್ದಾರೆ. ಬದಲಾವಣೆ ಎಷ್ಟರಮಟ್ಟಿಗೆ ಆಗಬೇಕೆಂದರೆ ಸಾಧಿಸುವ ದಾರಿಯಲ್ಲಿ ಭಯವಿರಬಾರದು. ಹೆದರಿಕೆ ಇರಬಾರದು, ಹೆದರಿಕೆಗೆ ಹೆದರಿಕೆ ಹುಟ್ಟುವಷ್ಟು ಧೈರ್ಯ ದಿಂದ ಮುನ್ನುಗ್ಗಬೇಕು. ಗೆಲುವಿನ ದಾರಿಯಲ್ಲಿ ಗೆಲುವೇ ನಾಚಿ ಹೆದರಿ ನಮ್ಮ ಗೆಲುವಿಗೆ ದಾರಿಯಾಗಬೇಕು. ನಮ್ಮ ಆಲೋಚನೆಗಳಿಗೆ ನಡುಗಿ ಆಲೋಚನಾ ಶಕ್ತಿಗೆ ಎಡೆ ಮಾಡಿಕೊಡಬೇಕು. ಇಂತಹ ಬದಲಾವಣೆಯ ಮಾರ್ಗವನ್ನು ಕಂಡುಕೊಂಡರೆ ಮಾತ್ರ ಬದಲಾಗುವ ಸ್ಥಿತಿಗೆ ತಲುಪಲು ಸಾಧ್ಯ.

ಬದಲಾವಣೆಯ ದಿಕ್ಕಿನಲ್ಲಿ ಸಾಗಿ ಏನನ್ನಾದರೂ ಜೀವನದಲ್ಲಿ ಸಾಧಿಸಿ ಸಮಾಜಕ್ಕೆ ಮಾದರಿಯಾಗಿ ನಿಲ್ಲಲು ಸಾಧ್ಯವಾಗುತ್ತದೆ. ಚಳಿ, ಮಳೆ, ಗಾಳಿಗೆ ಹೆದರಿ ಕುಳಿತರೆ ನಮ್ಮನ್ನು ಕುಬ್ಜನನ್ನಾಗಿ ಮಾಡಿಬಿಡುತ್ತದೆ. ಈಜಬೇಕು ಎಂಬ
ಮನಃಸ್ಥಿತಿ ಇದ್ದರೆ ಈಜಿ ದಡ ಸೇರಲು ಸಾಧ್ಯ. ಈಜಿಗೆ ಹೆದರಿ ಮುಳುಗಿ ಹೋಗುತ್ತೇನೆ ಎಂಬ ಭಯವಿದ್ದರೆ ಜೀವನದಲ್ಲಿ ಏನೂ ಸಾಧಿಸಲು ಸಾಧ್ಯವಿಲ್ಲ. ಈಜಬೇಕು ಇದ್ದು ಜಯಿಸಬೇಕು, ಎಂಬ ಗಾದೆಮಾತಿಗೆ ಮನ್ನಣೆ ಸಿಗುತ್ತದೆ.

ಹೊಗಳಿಕೆಗೆ ಹಿಗ್ಗದೆ, ತೆಗಳಿಕೆಗೆ ಕುಗ್ಗದೆ, ಸೋಲು-ಗೆಲುವುಗಳು ಮತ್ತು ಮಾನ, ಅಪಮಾನಗಳು, ಸಾಮಾಜಿಕ ಜೀವನದಲ್ಲಿ ಮನುಷ್ಯರಿಗೆ ಬರುವ ವಾಸ್ತವಗಳೆಂಬುದನ್ನು ಅರಿತು ಸಮಚಿತ್ತದಿಂದ ಅಂದರೆ ಮನಸ್ಸಿನಲ್ಲಿ ಉಂಟಾಗುವ ಆತಂಕ, ತಲ್ಲಣ, ಕಳವಳ, ಉದ್ವೇಗ ಮತ್ತು ಅಹಂಕಾರದ ಒಳ ಮಿಡಿತಗಳಿಗೆ ಒಳಗಾಗದೇ ‘ಬದಲಾವಣೆ ಜೀವನದ ನಿಯಮ’ ಎಂಬುದನ್ನು ಮನಸ್ಸಿನಲ್ಲಿ ಮನನ ಮಾಡುವುದರ ಮೂಲಕ ಮನದಲ್ಲಿ ಕೋಪವ ತಾಳದೆ ಸಮಧಾನಿವಾಗಿರಬೇಕು. ನೀವು ಫಲಿತಾಂಶಗಳ ಮೇಲೆ ನಿಮ್ಮ ಮನಸ್ಸನ್ನು ಕೇಂದ್ರೀಕರಿಸಿದರೆ ನೀವು ಎಂದಿಗೂ ಬದಲಾಗುವುದಿಲ್ಲ.

ನಿಮ್ಮನ್ನು ನೀವು ಬದಲಾಯಿಸಿಕೊಳ್ಳುವತ್ತಾ ಗಮನಹರಿಸಿದರೆ ತಾನಾಗಿಯೇ ಫಲಿತಾಂಶಗಳು ಸಿಗುತ್ತವೆ. ನಿಮ್ಮನ್ನು ನೀವು ಬದಲಾಯಿಸಿಕೊಳ್ಳಿ ಯಶಸ್ವೀ ಜೀವನ ನಡೆಸಲು, ನಿಮ್ಮ ಕೆಟ್ಟ ಗುಣಗಳನ್ನು ಬಿಟ್ಟು, ಒಳ್ಳೆಯ ಗುಣಗಳಿಗಾಗಿ
ಬದಲಾಗಿ ಅಭಿವೃದ್ಧಿಯನ್ನು ಹೊಂದಲು, ಉತ್ತಮರಲ್ಲೇ ಉತ್ತಮರಾಗಲು, ಒಳ್ಳೆಯ ನಡೆ ನುಡಿಗಾಗಿ ಬದಲಾವಣೆ ಯನ್ನು ಬಯಸೋಣ. ಇತರರೊಂದಿಗೆ ಹೊಂದಿಕೊಳ್ಳುವ ಭಾವನೆ ಯನ್ನು ಬೆಳೆಸಿಕೊಳ್ಳುವುದು ಕೂಡ ಇಂದಿನ ಅಗತ್ಯವಾಗಿದೆ. ಸುಂದರವಾದ ಉಡುಪು ನಮ್ಮ ರೂಪವನ್ನು ಬದಲಾಯಿಸಬಹುದು, ಆದರೆ ಸುಂದರವಾದ ಗುಣವು ನಮ್ಮ ಬದುಕನ್ನೇ ಬದಲಾಯಿಸುತ್ತದೆ. ಆದ್ದರಿಂದ ಒಳ್ಳೆಯಗುಣವನ್ನು ಅಳವಡಿಸಿ
ಕೊಳ್ಳಲು ಬದಲಾವಣೆಯನ್ನು ಬಯಸಬೇಕಾಗಿದೆ.

ಬದಲಾವಣೆ ಎಷ್ಟರಮಟ್ಟಿಗೆ ಇರಬೇಕೆಂದರೆ ಸಮಯವಿಲ್ಲವೆಂದು ನಿಮ್ಮನ್ನು ತಿರಸ್ಕರಿಸಿದವರು ಮುಂದೊಂದು
ದಿನ ನಿಮ್ಮ ಸಮಯಕ್ಕಾಗಿ ಕಾದು ಕೂರುವಂತೆ ಬದಲಾಗಿ ಎಂದಿದ್ದಾರೆ. ಪರಿವರ್ತನೆ ಎನ್ನುವುದು ನಿಮ್ಮ ಆಲೋ ಚನಾ ಶಕ್ತಿ ಮತ್ತು ಏನನ್ನಾದರೂ ಪಡೆಯುವ ದಿಕ್ಕಿನಲ್ಲಿ ಸಾಗಬೇಕು. ಬುದ್ಧಿವಂತಿಕೆ ಹಾಗೂ ಹೃದಯವಂತಿಕೆಗಾಗಿ ಬದಲಾಗಬೇಕು. ನಿಮ್ಮ ಬದಲಾವಣೆಯು ಆದರ್ಶ ಗುಣಗಳನ್ನು ಒಳಗೊಳ್ಳದಿದ್ದರೆ ನೀವು ಪಡೆದಿರುವ ಶಿಕ್ಷಣ ವ್ಯರ್ಥವೆನಿಸುತ್ತದೆ. ಎಂಬ ಸಂದೇಶವನ್ನು ಬಾಬಾಸಾಹೇಬರು ನಮಗೆ ನೀಡಿದ್ದಾರೆ.

ಬದಲಾಗು ಎಂದರೆ ಕೆಟ್ಟನಡತೆಯಿಂದ-ಸನ್ನಡತೆಯೆಡೆಗೆ, ಅಶಾಂತಿಯಿಂದ-ಶಾಂತಿಯಕಡೆಗೆ, ಅಗೌರವದಿಂದ –
ಗೌರವದಕಡೆಗೆ, ಅಜ್ಞಾನದಿಂದ-ಜ್ಞಾನದಕಡೆಗೆ, ಅತೃಪ್ತಿಯಿಂದ-ತೃಪ್ತಿಯೆಡೆಗೆ, ಸ್ವಾರ್ಥದಿಂದ-ನಿಸ್ವಾರ್ಥದೆಡೆಗೆ,
ನಕರಾತ್ಮಕಚಿಂತನೆಯಿಂದ – ಸಕರಾತ್ಮಕಚಿಂತನೆಯಕಡೆಗೆ, ಅಮಾನವೀಯತೆಯಿಂದ-ಮಾನವೀಯತೆಯಕಡೆಗೆ, ಅಪ್ರೀತಿಯಿಂದ ಪ್ರೀತಿಯಕಡೆಗೆ, ಅವೈಜ್ಞಾನಿಕತೆಯಿಂದ – ವೈಜ್ಞಾನಿಕತೆಯೆಡೆಗೆ, ಅವೈಚಾರಿಕತೆಯಿಂದ – ವೈಚಾರಿಕತೆಕಡೆಗೆ, ನಾನು ಎನ್ನುವುದಕ್ಕಿಂತ-ನಾವು ಎನ್ನುವಕಡೆಗೆ, ನಿಷ್ಕರುಣೆಯಿಂದ- ಕರುಣೆಯಕಡೆಗೆ, ಅಪನಂಬಿಕೆಯಿಂದ-ನಂಬಿಕೆಯಕಡೆಗೆ, ನಮ್ಮನ್ನು ನಾವು ಬದಲಾಯಿಸಿಕೊಳ್ಳಬೇಕಾಗಿದೆ. ಮೂಢನಂಬಿಕೆಯಿಂದ ಏನನ್ನು ಸಾಽಸಲಾಗದು, ವೈಚಾರಿಕತೆಯನ್ನು ಮೈಗೂಡಿಸಿ ಕೊಳ್ಳಬೇಕಾಗಿದೆ.

ಪ್ರೀತಿ, ಕರುಣೆ, ಮಮತೆ, ದಯೆ, ಮಾನವೀಯತೆ, ನಂಬಿಕೆಯನ್ನು ಬೆಳಸಿಕೊಂಡು ಸನ್ನಡತೆಯಿಂದ ಸ್ವಾಭಿಮಾನ ದಿಂದ ಬದುಕಬೇಕು. ತಾವು ಬದುಕಬೇಕು ಇತರರನ್ನು ಬದುಕುವಂತೆ ಬಡಿದೆಬ್ಬಿಸಬೇಕು. ಹೀಗೆ ಮೊದಲು
ನೀನು ಬದಲಾಗು ತದನಂತರ ನಿನ್ನ ಕುಟುಂಬವನ್ನು ಬದಲಾಯಿಸು, ನಂತರ ಸಮಾಜ ಬದಲಾಗುತ್ತದೆ ಎಂಬುದು
ಪ್ರಕೃತಿಯಷ್ಟೇ ಸತ್ಯ.

ಮನಸ್ಸು ದುರ್ಬಲವಾಗಿದ್ದಾಗ ಪರಿಸ್ಥಿತಿ ಸಮಸ್ಯೆಯಾಗಿ ಕಾಣುತ್ತದೆ. ಮನಸ್ಸು ಸಮತೋಲನದಲ್ಲಿದ್ದಾಗ ಸಮಸ್ಯೆ ಸವಾಲಾಗಿ ಕಾಣುತ್ತದೆ. ಮನೋಸ್ಥೈರ್ಯ ಹೆಚ್ಚಾದಾಗ ಸಮಸ್ಯೆಯೇ ಅವಕಾಶವಾಗುತ್ತದೆ. ಆದ್ದರಿಂದ ಮನಸ್ಸಿನ ಸ್ಥಿರತೆಗಾಗಿ ಮನಸ್ಸನ್ನು ಬದಲಾಯಿಸಿ, ಬದಲಾವಣೆಯ ಫಲಿತಾಂಶವನ್ನು ನೋಡಿ ನಿಮ್ಮ ಮನಸ್ಸನ್ನು ನಿಯಂತ್ರಿಸಿ ಇಲ್ಲವಾದಲ್ಲಿ ಮನಸ್ಸು ನಿಮ್ಮನ್ನು ನಿಯಂತ್ರಿಸುತ್ತದೆ. ಅನಗತ್ಯವಾದದ್ದನ್ನು ಹೊರಗೆ ಹಾಕಿದಾಗ ಮಾತ್ರ ಅತ್ಯಗತ್ಯವಾಗಿರುವುದಕ್ಕೆ ಜಾಗ ದೊರಕುತ್ತದೆ.

ನಾವೇ ನಮ್ಮ ಜೀವನದ ಲೇಖಕರು. ಸ್ಕ್ರಿಪ್ಟನ್ನು ಎಡಿಟ್ ಮಾಡಲು ಅಳಿಸಲು ಅಥವಾ ಬದಲಾಯಿಸಲು ಭಯಪಡುವುದು ಬೇಡ. ಆತ್ಮ ವಿಶ್ವಾಸವನ್ನು ಬೆಳೆಸಿಕೊಳ್ಳುವ ಕಡೆಗೆ ಬದಲಾಗಿ ಏಕೆಂದರೆ ಆತ್ಮ ವಿಶ್ವಾಸ ಒಂದು ಮಹಾ ಆಯುಧ. ಅದು ಎಲ್ಲ ಸಂದರ್ಭದಲ್ಲಿ ಜಯ ತಂದು ಕೊಡದಿರಬಹುದು ಆದರೆ ಯಾವುದೇ ಸವಾಲನ್ನು ಎದುರಿಸಲು ಧೈರ್ಯತುಂಬುತ್ತದೆ. ಬದಲಾವಣೆ ಕಬ್ಬಿಣದ ಕಡಲೆಯಿದ್ದಹಾಗೆ ಬದಲಾಗಬೇಕು ಎಂದು ಬಯಸುವವರು ಎಷ್ಟೇ ನೋವುಗಳಿದ್ದರೂ ಬದಲಾವಣೆ ಯನ್ನು ಬಯಸಿ ಬದಲಾವಣೆಯ ದಿಕ್ಕಿನಲ್ಲಿ ಸಾಗಬೇಕು. ಬದಲಾಗು ಎಂದರೆ ಸಕಾರಾತ್ಮಕವಾಗಿ ಬದಲಾಗು ಎಂದರ್ಥ. ಹೀಗೆ ನಮ್ಮ ಆಲೋಚನಾಲಹರಿ, ನಾವು ನಡೆಯುವಮಾರ್ಗ, ಒಳ್ಳೆಯ ನಡವಳಿಕೆಗಳನ್ನು ಬದಲಾಯಿಸಿಕೊಳ್ಳುವಕಡೆ ನಡೆಯಬೇಕಾಗಿದೆ.

ಬದುಕನ್ನು ಕುರಿತು ನಮ್ಮ ದೃಷ್ಟಿಕೋನ, ಆದ್ಯತೆಗಳು ಮತ್ತು ಸಮಾಜವನ್ನು ನೋಡುವನೋಟ ಬದಲಾಗ ಬೇಕಾಗಿದೆ. ನಮ್ಮನ್ನು ನಾವು ಕಂಡುಕೊಳ್ಳುವ ಸರಿದಾರಿಗೆ ತಂದುಕೊಳ್ಳಲು, ಅರ್ಥೈಸಿಕೊಳ್ಳಲು, ಬದಲಾವಣೆ ಯನ್ನು ಬಯಸಬೇಕಾಗಿದೆ. ‘ಬದಲಾವಣೆ ಜಗದ ನಿಯಮ’ ಎಂಬುದು ವೇದಾಂತವಾಗಿ ಉಳಿಯದೆ, ಕ್ರಿಯೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ಆಗ ಮಾತ್ರ ವಯಕ್ತಿಕ ಸುಧಾರಣೆಯ ಜೊತೆಗೆ ಸಾಮಾಜಿಕ ಸುಧಾರಣೆಯ ಮೆಟ್ಟಿಲನ್ನು ಏರಲು ಸಾಧ್ಯವಾಗಿ ಬದಲಾವಣೆಯ ನಿಯಮಕ್ಕೆ ಒಂದು ಮೌಲ್ಯಸಿಗುತ್ತದೆ.

ಮನುಷ್ಯನ ಮನಃಸ್ಥಿತಿ ಸುಧಾರಿಸದ ಹೊರತು ಪ್ರಪಂಚದ ಸುಧಾರಣೆ ಸಾಧ್ಯವಿಲ್ಲ. ಆದ್ದರಿಂದ ನಮ್ಮ ದೃಷ್ಟಿಕೋನ ವನ್ನು ಬದಲಾಯಿಸಿಕೊಂಡು ಸಾಮಾಜಿಕ ಪರಿವರ್ತನೆಗೆ ಮುನ್ನುಡಿ ಬರೆಯೋಣ.

(ಲೇಖಕ: ಬೆಂಗಳೂರು ವಿಶ್ವವಿದ್ಯಾಲಯ
ಸಂಸ್ಕೃತ ವಿಭಾಗದ ಅಧ್ಯಕ್ಷರು)