Saturday, 14th December 2024

ಲಾಡೆನ್ ಹತ್ಯೆ: ಕಾರ್ಯಾಚರಣೆಯ ರೋಚಕ ಕತೆ

ಡಾ.ಶ್ರೀಕಾಂತ್ ಭಟ್ (ಜರ್ಮನಿ)

ಒಬಾಮಾ ಅವರ ಹೊಸ ಪುಸ್ತಕ A Promised Land ಬಿಡುಗಡೆಗೂ ಮುನ್ನ ಮತ್ತು ನಂತರ ಭಾರತದಲ್ಲಿಯೂ ಬಹಳ ಸುದ್ದಿ ಯಲ್ಲಿತ್ತು. ಇದೇ ಪುಸ್ತಕದಲ್ಲಿ ಒಬಾಮಾ ಅವರು ರಾಹುಲ್ ಗಾಂಧಿಯವರನ್ನು ‘ಇನ್ನೂ ಎಳಸು’ ಎಂಬರ್ಥದಲ್ಲಿ ನಮೂದಿ ಸಿದ್ದು, ಮತ್ತೊಂದೆಡೆ ಮಾಜಿ ಪ್ರಧಾನಿ ಮನೋಹನ್ ಸಿಂಗ್ ಅವರನ್ನು ಅತ್ಯಂತ ಮೇಧಾವಿ ಎಂದು ಬಣ್ಣಿಸಿದ್ದು ಬಹುವಾಗಿ ಚರ್ಚೆಗೆ ಒಳಪಟ್ಟಿತ್ತು.

ಕಾಂಗ್ರೆಸ್ ಪಕ್ಷಕ್ಕೆೆ ಮಗುವನ್ನು ಚಿವುಟಿ ತೊಟ್ಟಿಲು ತೂಗಿದ ಅನುಭವ. ತಮ್ಮ ಯುವ ನೇತಾರನ ಬಗೆಗಿನ ದೂಷಣೆಯನ್ನು ಮುಚ್ಚಿಕೊಳ್ಳಲು ಹರಸಾಹಸಪಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸೋನಿಯಾ ಗಾಂಧಿಯವರ ಬಗೆಗೂ ತನಗನ್ನಿಸಿದ ಅಭಿಪ್ರಾಯವನ್ನು ಯಾರ ಮುಲಾಜಿಲ್ಲದೆ ಈ ಪುಸ್ತಕದಲ್ಲಿ ನಮೂದಿಸಿದ್ದಾರೆ ಒಬಾಮಾ. ಬೇರೆ ಯಾರೋ ಏನೋ ಹೇಳಿದ್ದರೆ ಅದು ಅಷ್ಟರಮಟ್ಟಿಗೆ ಸುದ್ದಿಯಾಗುತ್ತಿರಲಿಲ್ಲ. ಒಬಾಮಾ ಅಮೆರಿಕ ರಾಷ್ಟ್ರಾಧ್ಯಕ್ಷ ಪದವಿಗೆ ಗರಿಮೆ, ಗೌರವ ತಂದು ಕೊಟ್ಟವರು.
ಅವರ ಕೆಲವು ಧೋರಣೆಗಳನ್ನು (ನಿಯಮ ಅಥವಾ ಒಪ್ಪಂದಗಳನ್ನು) ಎಲ್ಲರಿಗೂ ಒಪ್ಪಲು ಸಾಧ್ಯವಿಲ್ಲದೇ ಇರಬಹುದು. ಆದರೆ ಒಬಾಮಾ ಅವರನ್ನು ಯಾರೂ ನೇರವಾಗಿ ದೂಷಿಸಲಾರರು.

ಅವರ ನಿಷ್ಠೆ, ಪ್ರಾಮಾಣಿಕತೆಯ ಬಗ್ಗೆ ಅಷ್ಟಾಗಿ ಯಾರೂ ಬೊಟ್ಟು ಮಾಡಿ ತೋರಿಸಲು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಕಾಂಗ್ರೆಸ್ ಪಕ್ಷದ ಇಂಗ್ಲಿಷ್ ಡಿಕ್ಷನರಿ ಎಂದೇ ಖ್ಯಾತರಾಗಿರುವ ಶಶಿ ತರೂರ್, ತಾರಾತುರಿಯಲ್ಲಿ ಈ ಪುಸ್ತಕವನ್ನು ತರಿಸಿಕೊಂಡು ಓದಿ ಒಂದು ಟ್ವೀಟ್ ಮಾಡಿದರು.

‘ನಮ್ಮ ಕೆಲವು ನಾಯಕರ ಬಗ್ಗೆ ಒಬಾಮಾ ಪ್ರಸ್ತಾಪಿಸಿದ್ದಾರೆ ನಿಜ. ಆದರೆ 750ಕ್ಕೂ ಹೆಚ್ಚು ಪುಟಗಳಿರುವ ಈ ಪುಸ್ತಕದಲ್ಲಿ,
ಮೋದಿಯವರ ಹೆಸರೇ ಇಲ್ಲ’ ಎಂದು ಟೀಕಿಸಿ, ತೇಪೆ ಹಾಕಿದ್ದರು. ಈ ಪುಸ್ತಕದಲ್ಲಿ 2011ರ ವರೆಗಿನ ಅಂಶ ಮಾತ್ರ ಇವೆ ಎಂದು
ಮುನ್ನುಡಿಯಲ್ಲೇ ಒಬಾಮಾ ಹೇಳುತ್ತಾರೆ. ಅಂದರೆ ಅಲ್ಲಿಯವರೆಗೆ ಮೋದಿ-ಒಬಾಮಾ ಭೇಟಿಯ ಪ್ರಮೇಯವೇ ಬಂದಿಲ್ಲ.
ಶಶ್ ತರೂರ್ ಅವರು ಇವೆಲ್ಲವನ್ನೂ ಜಾಣತನದಿಂದ ಮರೆಮಾಚುತ್ತಾರೆ. ಇರಲಿ ಬಿಡಿ, ಇಲ್ಲಿ ನಾನು ಹೇಳಲು ಹೊರಟಿದ್ದು
ಒಬಾಮಾ ರಾಜಕೀಯದ ಠಾಕು-ಠೀಕು ಮಜಲುಗಳನ್ನು ಅಲ್ಲ. ಒಸಾಮಾ ಹತ್ಯಾ ಕಾರ್ಯಾಚರಣೆಯ ಬಗ್ಗೆ! ಅದೂ, ಒಬಾಮಾ
ಅವರ ಧಾಟಿಯಲ್ಲಿಯೇ!

A Promised Land ಪುಸ್ತಕದಲ್ಲಿ ಒಬಾಮಾ ಸವಿವರ ಟಿಪ್ಪಣಿ
ಒಬಾಮಾ ಅಧಿಕಾರಾವಧಿಯ ಮೊದಲನೇ ಅವಧಿಯಲ್ಲಿ ಜರುಗಿದ ಮಹತ್ತರ ಘಟನೆಗಳಲ್ಲಿ ‘ಒಸಾಮಾ ಬಿನ್ ಲಾಡೆನ್ ಹತ್ಯಾ ಕಾರ್ಯಾಚರಣೆ’ ಪ್ರಮುಖವಾದುದು. ರಾತ್ರೋ ರಾತ್ರಿ ಎರಡು ಹೆಲಿಕಾಪ್ಟರ್‌ನಲ್ಲಿ ಪಾಕಿಸ್ತಾನದ ಗಡಿಯನ್ನು ಉಲ್ಲಂಘಿಸಿ,  ಪಕ್ಕದಲ್ಲೇ ಇದ್ದ ಪಾಕಿಸ್ತಾನಿ ಮಿಲಿಟರಿಗೆ ಸಣ್ಣ ಸುಳಿವನ್ನೂ ನೀಡದೆ, ಒಸಾಮಾ ಬಿನ್ ಲಾಡೆನ್‌ನನ್ನು ಕೊಂದು, ಹೆಣವನ್ನು
ಹೊತ್ತುಕೊಂಡು ಹೋಗಿ ಜಲಚರಗಳಿಗೆ ಆಹಾರವಾಗಿ ಕೊಟ್ಟಿದ್ದು ಇಂದಿಗೆ ಇತಿಹಾಸ.

ಈ ಬಗೆಗಿನ ಹಲವಾರು ವಿಷಯಗಳು ಈಗಾಗಲೇ ಜನರಿಗೆ ತಿಳಿದಿದ್ದರೂ ಏನಾದರೂ ಹೊಸ ಕುತೂಹಲಕಾರಿ ಆಂಶಗಳು ಇರಬಹುದೇ? ಒಬಾಮಾ ಅವರ ನಾಯಕತ್ವದಲ್ಲಿ ನಡೆದ ದಾಳಿಯಾಗಿದ್ದರಿಂದ, ಯೋಜನೆಯ ಹಂತಗಳು ಹೇಗಿದ್ದವು? ಇಂತಹ
ಕಠಿಣ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಅವರ ಮುಂದಿನ ಆಯ್ಕೆಗಳು ಏನಿದ್ದವು? ದಾಳಿಯ ನಿರ್ಧಾರಗಳಿಗೆ ಯಾವ ಯಾವ
ತೊಡಕುಗಳು ಇದ್ದವು? ಎಂಬ ಹತ್ತು ಹಲವು ಪ್ರಶ್ನೆಗಳು ನನ್ನನ್ನು ಈ ಪುಸ್ತಕ ಓದಲು ಪ್ರೇರೇಪಿಸಿದವು.

‘ಒಸಾಮಾ ಬಿನ್ ಲಾಡೆನ್ ಹತ್ಯಾಕಾಂಡ’ದ ಅಧ್ಯಾಯವನ್ನು ವಿಶೇಷ ಕಾಳಜಿಯಿಂದ ಒಬಾಮಾ ಬರೆದಿದ್ದಾಗಿ ಅನಿಸಿತು. ಹಲವು ರೋಚಕ ವಿಷಯಗಳು ಓದುಗರನ್ನು ಇನ್ನೂ ತುದಿಗಾಲಲ್ಲಿ ನಿಲ್ಲಿಸಬಲ್ಲದು ಕೂಡ. ನಿಮಗೂ ಈ ತರಹದ ಪ್ರಶ್ನೆಗಳು ಕಾಡಿರಬಹುದು. ಈ ರೋಚಕ ಘಟನೆಯನ್ನು ಕನ್ನಡದಲ್ಲಿ ಕಟ್ಟಿಕೊಡಬಹುದೇ? ಎಂಬ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ ವನ್ನು ಇಲ್ಲಿ ಮಾಡಿದ್ದೇನೆ. ಒಸಾಮಾ ಕಾರ್ಯಾಚರಣೆಯ ಭಾಗವನ್ನು ಒಬಾಮಾ ಅವರ ಶಬ್ದಗಳಲ್ಲಿಯೇ ನಿಮ್ಮ ಮುಂದೆ ಇಡುವ ಪ್ರಯತ್ನ ಮಾಡಿದ್ದೇನೆ.

ಮೂರ್ನಾಲ್ಕು ಭಾಗಗಳಲ್ಲಿ ನಿಮ್ಮ ಮುಂದೆ ಬರಲಿ ಒಬಾಮಾ ಬಿಚ್ಚಿಟ್ಟ ಒಸಾಮಾ ಬಿನ್ ಲಾಡೆನ್ ಹತ್ಯಾಕಾಂಡದ ಸನ್ನಿವೇಶಗಳ ಸರಣಿ ಇಲ್ಲಿದೆ. ‘ಒಸಾಮಾ ಬಿನ್ ಲಾಡೆನ್’ ಅಡಗು ತಾಣಗಳು ಡಿಸೆಂಬರ್ 2001ರಿಂದ ನಿಗೂಢವಾಗಿಯೇ ಇದ್ದವು.

ಸೆಪ್ಟೆಂಬರ್ 11ರ ದಾಳಿಯ ನಂತರ ಹುಡುಕಾಟದಲ್ಲಿ ಕೂದಲೆಳೆಯ ಅಂತರದಲ್ಲಿ ಒಸಾಮಾ ಅಫ್ಘಾನಿಸ್ತಾನದ ತೊರಾ-ಬೊರಾ ಪ್ರಾಂತದಿಂದ ತಪ್ಪಿಸಿಕೊಂಡಿದ್ದ. ಅಂದಿನಿಂದ 2009ರ ವರೆಗೂ ಯಾವುದೇ ಮಹತ್ತರ ಸುಳಿವು ಇರಲಿಲ್ಲ. ನಾನು 2008 ರ ಚುನಾವಣಾ ಪ್ರಚಾರ ಸಂದರ್ಭದಲ್ಲಿ, ಒಸಾಮಾ ಪಾಕಿಸ್ತಾನದಲ್ಲಿ ಅಡಗಿದ್ದರೂ ಬಿಡುವುದಿಲ್ಲ. ಅಲ್ಲಿಯ ಸರಕಾರದ ಸಹಾಯ
ಅಥವಾ ಒಪ್ಪಿಗೆಗೆ ಕಾದು ಕುಳಿತಿರುವುದಿಲ್ಲ ಎಂದು ಹೇಳಿದ್ದೆ.

ನನ್ನ ಸಹೋದ್ಯೋಗಿ ಮಿತ್ರರಾದ ಹಿಲರಿ ಕ್ಲಿಂಟನ್, ಜೋ ಬೈಡನ್, ಜಾನ್ ಮೆಕ್ಕೇನ್ ಮತ್ತು ಇನ್ನೂ ಹಲವರು ಈ ವಾದವನ್ನು ಒಪ್ಪಿರಲಿಲ್ಲ. ಬಹುತೇಕ ಜನ ಇದನ್ನು ಚುನಾವಣಾ ಗಿಮಿಕ್ ಎಂದು ಭಾವಿಸಿದ್ದರು. ನಾನು ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಸಿಚುಯೇಶನ್ ರೂಮ್ ಮೀಟಿಂಗ್‌ನಲ್ಲಿ ಬಿನ್ ಲಾಡೆನ್ ಶೋಧನಾ ಕಾರ್ಯಕ್ಕೆ ಪ್ರಮುಖ ಆದ್ಯತೆ ನೀಡುವುದಾಗಿ ತಿಳಿಸಿದ್ದೆ.

ನನಗೆ ಈ ಕಾರ್ಯಸಾಧನೆಗೆ ಸವಿಸ್ತಾರವಾದ ವಿಧ್ಯುಕ್ತ ಯೋಜನೆ ಬೇಕು. ಕಾರ್ಯಾಚರಣೆಯ ಪ್ರಗತಿಯ ಕುರಿತು ಪ್ರತಿ ಮೂವತ್ತು ದಿನಗಳಿಗೊಮ್ಮೆ ವರದಿ ನನ್ನ ಟೇಬಲ್ ಮೇಲೆ ಇರಬೇಕು ಎಂದು ಕಟ್ಟಾಜ್ಞೆ ಹೊರಡಿಸಿದ್ದೆ. ನನ್ನ ಕಟು ಧೋರಣೆಗೆ ಹಲವಾರು ಕಾರಣಗಳು ಇದ್ದವು.

ಪ್ರಮುಖವಾದ ಕಾರಣ: ಸಾವಿರಾರು ಅಮೆರಿಕನ್ನರ ಹತ್ಯೆೆ ಮಾಡಿದ ಉಗ್ರಗಾಮಿಯೊಬ್ಬ ಸ್ವತಂತ್ರವಾಗಿ ವಿಹರಿಸುತ್ತಿರುವುದು. ಪ್ರೀತಿ ಪಾತ್ರರನ್ನು ಕಳೆದುಕೊಂಡವರಿಗಾಗಲೀ, ಅಮೆರಿಕದ ಶಕ್ತಿಶಾಲಿ ಮಿಲಿಟರಿಗಾಗಲೀ ಸಹಿಸಲು ಸಾಧ್ಯವಿಲ್ಲ ಎಂಬುದು ಸತ್ಯವಾಗಿತ್ತು. 2010 ಸೆಪ್ಟೆೆಂಬರ್ 10ನೇ ತಾರೀಕು, ನಮ್ಮ ನಮ್ಮ ಗುಪ್ತಚರ ವಿಭಾಗ CIA ದ ಪ್ರಮುಖ ‘ಲಿಯೋನ್ ಪೆನೆಟ್ಟಾ’ ಮತ್ತು ಉಪಸಹಾಯಕ ‘ಮೈಕ್ ಮೊರೆಲ್’ ನನ್ನ ಭೇಟಿಗೆ ಬಂದಿದ್ದರು.

‘ಮಿಸ್ಟರ್ ಪ್ರೆಸಿಡೆಂಟ್, ಈ ವಿಚಾರ ತುಂಬಾ ಪ್ರಾಥಮಿಕವಾದುದು, ಸದ್ಯಕ್ಕೆ ಯಾವುದೇ ನಿಖರತೆ ಇಲ್ಲ. ಆದರೂ ಒಂದು
ಸುಳಿವಿನ ಪ್ರಕಾರ, ಲಾಡೆನ್ ಅಡಗು ತಾಣದ ಕುರುಹು ಸಿಕ್ಕಿದೆ. ಇದು ತೊರ-ಬೊರ ಪ್ರಾಂತ್ಯದ ನಂತರದ ಮೊದಲ ಉತ್ತಮ ಮಾಹಿತಿ’ ಅಂದರು. ಶಾಂತಿಯಿಂದ ಅವರ ಮಾತನ್ನೇ ಕೇಳುತ್ತೇನೆ. ಕೋಣೆಯಲ್ಲಿ ಒಂದು ಕ್ಷಣ ಮೌನ ಆವರಿಸಿತ್ತು. ಸಾವಿರಾರು ತುಣುಕು-ತುಣುಕು ಮಾಹಿತಿಗಳ ಕೂಲಂಕಷ ವಿಶ್ಲೇಷಣೆಯ ಸಹಾಯದಿಂದ ಒಂದು ಸುಳಿವು ದೊರಕಿತ್ತು.

ಮೇಲ್ನೋಟಕ್ಕೆ ‘ಅಬು ಅಹಮದ್ ಅಲ್-ಕುವೈತಿ’ ಎಂಬುವವನು ಅಲ್-ಖೈದಾ ಸಂಘಟನೆಯ ಕೊರಿಯರ್ ಆಗಿ ಕೆಲಸ ನಿರ್ವಹಿ ಸುತ್ತಿರುವುದು ಮತ್ತು ಇವನಿಗೆ ಬಿನ್ ಲಾಡೆನ್ ಜತೆ ನೇರ ಸಂಬಂಧ ಇದೆ ಎಂದು ಮೇಲ್ನೋಟಕ್ಕೆ ಭಾಸವಾಗಿದೆ. ನಮ್ಮ ಗುಪ್ತಚರ ವಿಭಾಗ ‘ಅಲ್-ಕುವೈತಿಯ’ ಫೋನ್ ಟ್ರ್ಯಾಕ್ ಮಾಡಿದೆ ಮತ್ತು ಚಲನವಲನದ ಮೇಲೆ ನಿಗಾ ಇಟ್ಟಿದೆ. ಈ ಮೂಲಕ ತಿಳಿದ ಮಾಹಿತಿ ಎಂದರೆ; ಪ್ರಕಿಸ್ತಾನದ ‘ಅಬೊಟ್ಟಾಬಾದ್’ ಎಂಬ ನಗರದಲ್ಲಿ ಯಾರೋ ಅಲ್-ಖೈದಾ ಪ್ರಮುಖರು
ವಾಸಿಸುತ್ತಿದ್ದಾರೆ.

ನಗರದ ಹತ್ತಿರದ ಹೊರವಲಯದಲ್ಲಿ ಒಂದು ಮನೆಯನ್ನು ಗುರುತಿಸಲಾಗಿದೆ.

ಮುಂದುವರಿಯುವುದು…