Saturday, 14th December 2024

ನಮಗೆ ತಿಳಿದದ್ದಷ್ಟೇ ಭಗವದ್ಗೀತೆಯಾ ?

ಸಾಂದರ್ಭಿಕ 

ಕೆ.ಲೀಲಾವತಿ

ಭಗವಂತನ ಬಾಯಿಂದ ಬಂದದ್ದರಿಂದ ಭಗವದ್ಗೀತೆ. ಇದು ಮಹಾಭಾರತದ ಭೀಷ್ಮ ಪರ್ವದಲ್ಲಿ ಬರುತ್ತದೆ.

ಒಟ್ಟು 18 ಅಧ್ಯಾಯ, 700 ಶ್ಲೋಕ. ಇದರ ಮೇಲೆ ಸಾಕಷ್ಟು ಭಾಷ್ಯಗಳಿವೆ. ಪ್ರಪಂಚದ ಬೇರಾವ ಗ್ರಂಥದ ಮೇಲೂ ಇಷ್ಟೊಂದು ಸಾಹಿತ್ಯ ಬೆಳೆದಿಲ್ಲ. ಭಾಷ್ಯಗಳು ನಮಗೆ ಊರುಗೋಲಿದ್ದಂತೆ. ಗೀತೆಯ ಸೌಂದರ್ಯವನ್ನು ಹೆಚ್ಚಿಸಿವೆ. ಗೀತೆಯ ಮಾತುಗಳು ನಮಗೆ ನೇರವಾಗಿ ತಿಳಿಯುವುದಿಲ್ಲ, ಆಗ ಭಾಷ್ಯದ ಅಗತ್ಯ ಬೀಳುತ್ತದೆ.

ಆದರೆ ನಾವು ಆ ಭಾಷ್ಯದ ವಿವರಣೆಯನ್ನೂ ಮೀರಿ ಮೂಲ ಶ್ಲೋಕವನ್ನಷ್ಟೇ ಚಿಂತಿಸಬೇಕು. ಆಗ ಅದರ ಆಳ ಅಗಲ ಭಾಷ್ಯ ಗಳನ್ನೂ ಮೀರಿ ಬೆಳೆಯುತ್ತದೆ. ಯಾವುದೋ ಭಾಷ್ಯ ಓದಿಕೊಂಡು ಅದರ ಮಿತಿಯೊಳಗೆ ಗೀತೆಯ ಬಗೆಗೆ ಮಾತನಾಡುವುದು
ಸರಿಯಲ್ಲ. ಅದನ್ನು ಓದಿದ ಪ್ರತಿಯೊಬ್ಬರೂ ತಮ್ಮದೇ ಆದ ಭಾಷ್ಯವನ್ನು ಬರೆಯಬಹುದು. ಅದರ ಆಳ, ಅಗಲ ಅಷ್ಟೊಂದು ವಿಸ್ತಾರವಾಗಿದೆ. ಓದಿದಷ್ಟೂ ಹೊಸತೆನಿಸುತ್ತದೆ. ಹೊಸ ಹೊಸ ಅರ್ಥಗಳು ಹೊಳೆಯುತ್ತದೆ.

ಇಲ್ಲದಿದ್ದರೆ ಇಷ್ಟೊಂದು ಸಾಹಿತ್ಯ ಈ ಗ್ರಂಥದ ಕೇವಲ 700 ಶ್ಲೋಕಗಳ ಬಗೆಗೆ ಬರಲು ಸಾಧ್ಯವಾಗುತ್ತಿತ್ತೆ? ಕೆಲವರು ಗೀತೆಯ ಬಗೆಗೆ ಸಲ್ಲದ ಟೀಕೆಗಳನ್ನು ಮಾಡುತ್ತಿದ್ದಾರೆ. ಅವರ ತಕರಾರಿಗೆ ಕಾರಣವಾಗಿರುವುದು ಒಂದೆರಡು ಶ್ಲೋಕಗಳಷ್ಟೇ, ಅದನ್ನೇ
ಹಿಡಿದುಕೊಂಡು ಇಡೀ ಗೀತೆ ಬಗೆಗೆ ಟೀಕೆ ಮಾಡಬೇಕೆ? ಅವರ ಟೀಕೆಗೆ ಗುರಿಯಾಗಿರುವ ಶ್ಲೋಕ, ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮಭಾಗಶಃ|
ತಸ್ಯ ಕರ್ತಾರಮಪಿ ಮಾಂ ವಿದ್ಧ ಕರ್ತಾರ
ಮವ್ಯಯಮ್|| 4-13 ||
ಗುಣ ಕರ್ಮಗಳನುಸಾರವಾಗಿ ನಾಲ್ಕು ವರ್ಣಗಳು
ನನ್ನಿಂದ ಸೃಷ್ಟಿಸಲ್ಪಟ್ಟಿವೆ. ನಾನು ಅದರ ಕತೃವಾಗಿದ್ದರೂ ನನ್ನನ್ನು ಅವ್ಯಯನೆಂದು ಅಕರ್ತೃವೆಂದು ತಿಳಿ. ಇಲ್ಲಿ ಇದೊಂದು ಸಾಮಾಜಿಕ ವ್ಯವಸ್ಥೆ. ಇಲ್ಲಿ ಗುಣ ಎಂದರೆ ಸತ್ವ ರಜಸ್ಸು ತಮಸ್ಸು. ಇದು ಎಲ್ಲರಲ್ಲಿಯೂ ಎಲ್ಲಾ ಕಾಲದಲ್ಲಿಯೂ ಒಂದೇ ಸಮನಾಗಿರುವುದಿಲ್ಲ, ಈ ಗುಣಗಳು ಬೇರೆ ಬೇರೆಯವರಲ್ಲಿ ಬೇರೆ ಬೇರೆ ಪ್ರಮಾಣದಲ್ಲಿರುತ್ತದೆ. ಆ ಪ್ರಕಾರವಾಗಿ ವರ್ಣ ವ್ಯವಸ್ಥೆ ಯಿದೆ.

ಇದು ಈಗಿನ ಕಾಲದಲ್ಲಿನ ಜಾತಿಪದ್ಧತಿಯಂತಲ್ಲ. ಎಲ್ಲರಿಗೂ ಎಲ್ಲಾ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಅವರವರ ಗುಣ ಕರ್ಮಗಳಿಗನುಸಾರವಾಗಿ ಕೆಲಸ ವಿಂಗಡಣೆಯಾಗುತ್ತದೆ. ವಿಚಾರವಾದಿಗಳು ಈಗಿನ ಕಾಲದ ಜಾತಿ ವ್ಯವಸ್ಥೆಗೆ ಇದನ್ನು ಹೋಲಿಸಿ ಹೇಳುವುದಾದರೆ, ಗೀತೆಯನ್ನು ಹೇಳಿದ ಕೃಷ್ಣ ಗೊಲ್ಲ, ಅದನ್ನು ಬರೆದ ವ್ಯಾಸರು ಬೆಸ್ತರವಳ ಮಗ. ಹಿಂದುಳಿದವರ ಪಂಗಡದವ ರಾದರೇ ಆದ ಕೃಷ್ಣ – ವ್ಯಾಸರೂ ತಮ್ಮನ್ನು ತಾವು ಪಾಪ ಯೋನಿಜರೆಂದು ಹೇಳಿಕೊಂಡರೆ? ಅವರೇ ಹೀಗೆ ಹೇಳಿರುವಾಗ ಇದು ಬ್ರಾಹ್ಮಣರ ಗ್ರಂಥ, ಬ್ರಾಹ್ಮಣರೇತರರನ್ನು ಅವಹೇಳನ ಮಾಡಿದೆ ಅಂತ ದೂರುವುದಾದರೂ ಏತಕ್ಕೆ? ಬ್ರಾಹ್ಮಣ ಪದದ ಅರ್ಥವೇ
ಬೇರೆ, ಇದನ್ನು ತಿಳಿಯಲು ಬೇರೆಯದೇ ಆದ ಅಧ್ಯಯನದ ಅಗತ್ಯವಿದೆ.

ವಿಚಾರವಾದಿಗಳೆಂದು ಕೊಂಡವರು ತಕರಾರು ಮಾಡುವ ಇನ್ನೆರಡು ಶ್ಲೋಕಗಳು, ವೂಂ ಪಾರ್ಥ ವ್ಯಪಾಶ್ರಿತ್ಯ ಯೇSಪಿ ಸ್ಯುಃ
ಪಾಪಯೋನಯಃ|
ಸೀಯೋ ವೈಶ್ಯಾಸ್ತಥಾ ಶೂದ್ರಾಸ್ತೇಖಪಿ ಯಾಂತಿ
ಪರಾಂ ಗತಿಮ್|| 9-32 ||
ಕಿಂ ಪುನರ್ಬ್ರಾಹ್ಮಣಾಃ ಪುಣ್ಯಾ ಭಕ್ತಾ
ರಾಜರ್ಷಯಸ್ತಥಾ|
ಅನಿತ್ಯಮಸುಖಂ ಲೋಕುಮಂ ಪ್ರಾಪ್ಯ ಭಜಸ್ವ
ಮಾಮ್|| 9-33 ||
ಸೀಯರು, ವೈಶ್ಯರು, ಶೂದ್ರರು ಪಾಪಯೋನಿಜರೆಂದು ಹೇಳಿದೆಯೆಂದು ಟಕಿಸುತ್ತಾರೆ. ಪ್ರಕೃತಿಯಲ್ಲೇ ಅಸಮಾನತೆ ಇದೆ. ಮಹಿಳೆಯರು ಎಷ್ಟೇ ಮುಂದುವರಿದಿದ್ದರೂ ಕೆಲವೊಂದು ಮಿತಿಗಳಲ್ಲೇ ಬದುಕಬೇಕಾಗುತ್ತದೆ.

ಮಹಿಳೆಗೆ ತನ್ನದೇ ಆದ ಸಾಮಾಜಿಕ ಹಾಗೂ ಕೌಟುಂಬಿಕ ಜವಾಬ್ದಾರಿಗಳಿರುತ್ತವೆ. ಪ್ರಾಕೃತಿಕ ವ್ಯವಸ್ಥೆಯೇ ಹಾಗಿರುವಾಗ ಯಾರೇನು ಮಾಡಲಾದೀತು. ವೈಶ್ಯರು ಅಂದರೆ ಅವರ ಗಮನವೆಲ್ಲಾ ವ್ಯಾಪಾರ, ಲಾಭ – ನಷ್ಟಗಳ ಲೆಕ್ಕಾಚಾರವೇ. ಇನ್ನು
ಶೂದ್ರರು, ಅಂದರೆ ಕಾರ್ಮಿಕ ವರ್ಗ. ಶ್ರಮದ ಕೆಲಸ ಮಾಡುವುದರಲ್ಲಿಯೇ ಅವರ ಸಮಯವೆಲ್ಲಾ ಕಳೆದುಹೋಗುವುದರಿಂದ ಇನ್ನು ಆತ್ಮನನ್ನು ಕುರಿತು ಚಿಂತಿಸಲು, ಭಗವಂತನನ್ನು ಭಜಿಸಲು ಸಾಧ್ಯವಾಗುವುದಿಲ್ಲ.

ಆದ್ದರಿಂದ ಇವರಿಗೆ ಹಲವಾರು ಧಾರ್ಮಿಕ ಕಟ್ಟುಪಾಡುಗಳಿಂದ ವಿನಾಯಿತಿ ಇದೆ. ಆದರೆ ಪುಣ್ಯಯೋನಿಜರಾದ ಬ್ರಾಹ್ಮಣರು ಮತ್ತು ರಾಜರ್ಷಿಗಳಿಗೆ ಧಾರ್ಮಿಕ ಕಟ್ಟುಪಾಡುಗಳು ಹೆಚ್ಚಾಗಿವೆ. ಈ ಎರಡು ಶ್ಲೋಕಗಳ ಹಿಂದಿನ ಶ್ಲೋಕಗಳಲ್ಲಿ ದುರಾಚಾರಿ ಯಾಗಿದ್ದರೂ ನನ್ನನ್ನು ವಿಭಜಿಸಿದರೆ ಅವನು ಸಾಧುವೇ, ಏಕೆಂದರೆ ಅವನು ನಿಶ್ವಯ ಬುದ್ಧಿಯುಳ್ಳವನಾಗಿರುತ್ತಾನೆ. ಅವನು ಬೇಗನೆ ಧರ್ಮಾತ್ಮನಾಗುತ್ತಾನೆ.

ನನ್ನ ಭಕ್ತನು ಎಂದಿಗೂ ನಾಶವಾಗುವುದಿಲ್ಲ. ಎಂದೆಲ್ಲಾ ಹೇಳಿದ ನಂತರವೇ ಈ ಮೇಲಿನ ಎರಡು ಶ್ಲೋಕಗಳನ್ನು ಹೇಳಲಾಗಿದೆ. ಇದರಲ್ಲಿ ಯಾವ ಆಕ್ಷೇಪಣೆಯೂ ಕಾಣುವುದಿಲ್ಲ. ವೈವಿಧ್ಯತೆ ಪ್ರಕೃತಿಯ ವೈಶಿಷ್ಟ್ಯತೆ. ಎಲ್ಲವೂ ಸಮಾನವಾಗಿರಬೇಕೆಂದು ಬಯಸುವವರು, ಭಗವಂತ ನಮ್ಮದೇ ಕೈಯಲ್ಲಿ ಐದು ಬೆರಳನ್ನು ಐದು ಬೇರೆ ಬೇರೆ ಉದ್ದಗಳನ್ನಾಗಿಯೂ ಐದು ಬೇರೆ ಬೇರೆ
ದಪ್ಪವಾಗಿಯೂ ಮಾಡಿದ್ದಾನೆ. ಆದರೆ ಐದು ಬೆರಳುಗಳು ಕೂಡಿ ಮಾಡುವ ಕೆಲಸ ಅದ್ಭುತ!

ಅದು ಬಿಟ್ಟು ಇದು ತಪ್ಪಾಗಿದೆ. ದೇವರು ಎಲ್ಲಾ ಬೆರಳು ಗಳನ್ನು ಒಂದೇ ಉದ್ದ ಒಂದೇ ದಪ್ಪನಾಗಿ ಮಾಡಬೇಕೆಂದಿದ್ದರೆ ಅದೆಷ್ಟು
ಹಾಸ್ಯಾಸ್ಪದ ವಾಗಿರುತ್ತಿತ್ತು! ಹೀಗೇ ವೈವಿಧ್ಯತೆಯಿಂದ ಕೂಡಿರುವುದೇ ಸಾಮಾಜಿಕ ವ್ಯವಸ್ಥೆ. ಇಲ್ಲಿ ಯಾರನ್ನೂ ಕೀಳು ಮೇಲೆಂದು ಹೇಳಿಲ್ಲ. ಗೀತೆಯಲ್ಲಿಯೇ ಮತ್ತೊಂದು ಕಡೆ ಶುನಿಚೈವ ಶ್ವಪಾಕೇ ಚ ಪಂಡಿತಾಃ ಸಮದರ್ಶಿನಃ ಅಂತಿದೆ.

ಎಲ್ಲರನ್ನೂ ಸಮಾನರೆಂದು ನೋಡಬೇಕೆನ್ನುವ ಗೀತೆ ವೈಶ್ವಿಕ ಗ್ರಂಥವೇ. ಇಲ್ಲಿ ಯಾವ ದೇಶ ಭಾಷೆಗಳನ್ನು ಹೇಳಿಲ್ಲ. ದೇಶ ಭಾಷೆಗಳ ಎಲ್ಲೆಯನ್ನು ಮೀರಿ ಜನರನ್ನು ಮುಟ್ಟಿದ ಗ್ರಂಥವಿದು. ಒಟ್ಟಾರೆ ಯಾಗಿ ಮಾನವ ಕೋಟಿಗೆ ಉಪದೇಶಿಸಿರುವ ಗ್ರಂಥ. ಎಲ್ಲವೂ ದಾರದಲ್ಲಿ ಪೋಣಿಸಿರುವ ಮಣಯಂತಿದೆ ಎನ್ನುವ ಮಾತೂ ಭಗವದ್ಗೀತೆಯಲ್ಲಿದೆ.

ಅಂದಮೇಲೆ ಇದರಲ್ಲಿ ಯಾರನ್ನು ದೂರಲಾಗಿದೆ? ಯಾರನ್ನು ಕೀಳಾಗಿ ಕಾಣಲಾಗಿದೆ? ಗೀತೆಯನ್ನು ಅಲ್ಲಿರುವಂತೆ ಅರ್ಥ ಮಾಡಿಕೊಳ್ಳುವವರಿಗಿಂತ ತಮಗೆ ತಿಳಿದಂತೆ ಅರ್ಥ ಮಾಡಿಕೊಳ್ಳುವವರೇ ಹೆಚ್ಚು. ಇಷ್ಟರ ಹೊರತಾಗಿಯೂ ಭಗವದ್ಗೀತೆಯಲ್ಲಿ
ಹಲವಾರು ವಿಚಾರಗಳಿವೆ. ಇದೊಂದು ಮನಶಾಸ್ತ್ರೀಯ ಜೀವನ ಗ್ರಂಥ. ಪ್ರಾಯೋಗಿಕ ಗ್ರಂಥ. ಹಲವಾರು ಮಂದಿ ಇದರಿಂದ ಬೆಳಕನ್ನು ಕಂಡಿದ್ದಾರೆ. ಇದು ಖಂಡಿತವಾಗಿಯೂ ಧಾರ್ಮಿಕ ಗ್ರಂಥವಷ್ಟೇ ಅಲ್ಲ.

ವ್ಯಕ್ತಿತ್ವ ವಿಕಸನದ ಗ್ರಂಥ. ಗೀತೆ ಒಮ್ಮೆ ಓದಿಬಿಟ್ಟರೆ ತಿಳಿಯಿತೆಂದು ಹೇಳಲಾಗುವು ದಿಲ್ಲ. ಇದರ ಪ್ರತಿ ಶ್ಲೋಕವನ್ನೂ ಧ್ಯಾನಿಸ ಬೇಕು. ಮತ್ತೆ ಮತ್ತೆ ಚಿಂತಿಸಬೇಕು. ಇದಕ್ಕೆ ಪೂರಕವಾಗಿ ಪೂಜ್ಯ ಸಿದ್ಧಶ್ವರ ಸ್ವಾಮಿಗಳು ಹೇಳಿದ ಕತೆಯಂತಿದೆ – ಒಬ್ಬ ಗುರುವಿನ ಬಳಿ ವಿದ್ಯೆ ಕಲಿತು ಪಂಡಿತನಾಗಿದ್ದ. ತನಗೆ ಸಾಕಷ್ಟು ತಿಳಿದಿದೆ, ಅದನ್ನು ಯಾರಿಗಾದರೂ ತಿಳಿಸಬೇಕು ಅಂತ ಚಿಂತಿಸಿದ.

ಯಾರಿಗಾದರೂ ಏಕೆ ಆ ಊರಿನ ಮಹಾರಾಜರಿಗೇ ತನಗೆ ತಿಳಿದ ವಿದ್ಯೆ ಯನ್ನು ಹೇಳಿದರೆ, ಮಹಾರಾಜರ ಗುರುವೇ ಆಗಿಬಿಡ ಬಹುದು. ಆಗ ಎಲ್ಲರೂ ತನ್ನನ್ನು ಬಹಳಷ್ಟು ಗೌರವಿಸುತ್ತಾರೆ. ಪ್ರಶಸ್ತಿಗಳು ಸಿಗುತ್ತವೆ ಅನ್ನಿಸಿತ್ತು. ಮಹಾರಾಜರ ಬಳಿ ಹೋದ, ‘ನಾನು ದೊಡ್ಡ ವಿದ್ವಾಂಸನಿದ್ದೇನೆ, ತಮಗೊಂದಿಷ್ಟು ಉಪದೇಶ ಮಾಡ್ತೀನಿ’ ಎಂದ. ಮಹಾರಾಜನೂ ತಿಳಿದವನಿದ್ದ,  ಪಂಡಿತ ನಿಗೆ, ‘ಏನು ಹೇಳ್ತೀರಿ?’ ಎಂದ. ಆಗ ಪಂಡಿತ, ‘ನನಗೆ ಭಗವದ್ಗೀತೆ ಗೊತ್ತಿದೆ, ಹೇಳ್ತೀನಿ’ ಅಂದ.

ಆಗ ರಾಜ ‘ಸರಿ, ಆದರೆ ತಾವು ಇನ್ನೊಂದಿಷ್ಟು ಓದಿಕೊಳ್ಳಿ ನಂತರ ಹೇಳುರಂತೆ’ ಎಂದ. ಪಂಡಿತನಿಗೆ ಬೇಕಾದ ವ್ಯವಸ್ಥೆಯನ್ನೆಲ್ಲಾ ರಾಜನೇ ಮಾಡಿಸಿದ. ಪಂಡಿತ ಓದಿದ, ಓದಿದ ಮತ್ತೆ ಮತ್ತೆ ಓದಿಯೇ ಓದಿದ. ಆರು ತಿಂಗಳು ಕಳೆಯಿತು, ಮತ್ತೆ ರಾಜನಲ್ಲಿಗೆ ಬಂದು ಈಗ ತಮಗೆ ಗೀತೆ ಹೇಳ್ತೀನಿ ಅಂದ. ಮಹಾರಾಜ, ‘ಮತ್ತೊಂದಿಷ್ಟು ಓದಿಕೊಳ್ಳಿ’ ಅಂದ.

ರಾಜ ಹಾಗೇಕೆ ಹೇಳಿದನೆಂದು ತಿಳಿಯ ಲಿಲ್ಲ, ಮತ್ತೆ ಓದಿದ, ಮತ್ತೆ ಆರು ತಿಂಗಳ ನಂತರ ರಾಜನಲ್ಲಿಗೆ ಬಂದು, ‘ಈಗ ನಾನು ಬಂದಿದ್ದೀನಿ, ಗೀತೆ ಹೇಳ್ತಿನಿ’ ಅಂದ. ಮತ್ತೆ ಮಹಾರಾಜ ‘ಇನ್ನೂ ನೀವು ಓದಬೇಕು ಆ ನಂತರ ಬನ್ನಿ’ ಅಂದ. ಹೀಗೇ ಪುನರಾ ವರ್ತನೆ ಆಗುವಷ್ಟರಲ್ಲಿ ಮೂರ‍್ನಾಲ್ಕು ವರ್ಷ ಕಳೆದಿತ್ತು. ತನಗೆ ಪಕ್ಕಾ ತಿಳಿಯೋತನಕ ಮಹಾರಾಜನಲ್ಲಿಗೆ ಹೋಗಲೇ ಬಾರ ದೆಂದು ತೀರ್ಮಾನಿಸಿದ, ಮತ್ತೆ ಮತ್ತೆ ಓದಲಾರಂಭಿಸಿದ, ಒಂದಿನ ಬೆಳಗಿನ ಜಾವ ನಾಲ್ಲು ಗಂಟೆ, ಗೀತೆ ಓದುತ್ತಿದ್ದ, ಯಸ್ಯ ಸರ್ವೇ ಸಮಾರಂಭಾಃ ಕಾಮಸಂಕಲ್ಪ

ವರ್ಜಿತಾಃ|
ಜ್ಞಾನಾಗ್ನಿದಗ್ಧಕರ್ಮಾಣಂ ತಮಾಹುಃ ಪಂಡಿತಂ
ಬುಧಾಃ|| 4-19 ||

ಮತ್ತೆ ಮತ್ತೆ ಇದೇ ಶ್ಲೋಕ ಓದಿದ, ಗಾಬರಿಯಾಯ್ತು, ಸುಧಾರಿಸಿಕೊಂಡ, ಏನೋ ಹೊಳೆದಂತಾಯ್ತು. ಮತ್ತೆ ಮತ್ತೆ ಇದೇ ಶ್ಲೋಕ ಓದಿದ, ಉಳಿದ ಎಲ್ಲಾ ಶ್ಲೋಕಗಳನ್ನು ಬಿಟ್ಟ. ಕೂತಲ್ಲಿ ನಿಂತಲ್ಲಿ ಇದನ್ನೇ ಓದಲಾರಂಭಿಸಿದ, ಹೇಳಲಾರಂಭಿಸಿದ, ಚಿಂತಿಸಲಾ ರಂಭಿಸಿದ.

ಯಸ್ಯ ಸರ್ವೇ ಸಮಾರಂಭಾಃ – ನಾವು ಮಾಡುವ ಎಲ್ಲಾ ಕೆಲಸಗಳು, ಕಾಮಸಂಕಲ್ಪವರ್ಜಿತಾಃ – ಆಸೆಗಳಿರಬಾರದು, ಆಸೆಗಳಿಗೆ ಪ್ರೋತ್ಸಾಹ ಕೊಡುವ ವಿಚಾರಗಳಿರಬಾರದು, ಜ್ಞಾನಾಗ್ನಿದಗ್ಧಕರ್ಮಾಣಂ – ಯಾವಾಗ ಆಸೆ ನಷ್ಟ ಆಗ್ತದೆ, ಆಸೆಗಳಿಗೆ ಪ್ರೇರಕ ವಾದ ವಿಚಾರಗಳು ಇಲ್ಲವಾಗ್ತವೆ, ಅಂದರೆ ಯಾವುದೇ ಸ್ವಾರ್ಥವಿಲ್ಲದೆ ಕೆಲಸ ಮಾಡುವವನನ್ನು, ತಂ ಪಂಡಿತಂ ಬುಧಾಃ ಆಹುಃ – ಅಂತಹವನನ್ನು ವಿಜ್ಞಾನಿಯೆಂದು ಕರೆಯಬೇಕು ಅಂತಿತ್ತು.

ಪಂಡಿತನಿಗೆ ನಾನು ಇಷ್ಟು ವರ್ಷ ಇದನ್ನೇ ಓದಿದ್ದೇನೆ, ಇಷ್ಟರವರೆಗೆ ಇದರ ಅರ್ಥ ಗೊತ್ತೇ ಆಗಿರಲಿಲ್ಲವಲ್ಲ ಅನ್ನಿಸಿತ್ತು. ಈ ಮಾತು ಗೊತ್ತಾಗಿದ್ದಿದ್ದರೆ, ರಾಜನ ಬಳಿಗೆ ಹೋಗುವ ಬಯಕೆಯೇ ಬರ‍್ತಿರಲಿಲ್ಲ. ಮಹಾರಾಜನ ಬಳಿಗೆ ಬಂದಿದ್ದೇ, ಆತನ ಗುರು ವಾಗಬೇಕು, ನಾನು ಪಂಡಿತ ನೆಂಬುದನ್ನು ತೋರಿಸಿಕೊಳ್ಳಬೇಕು. ಆತನಿಂದ ಪ್ರಶಸ್ತಿ ಪಡೆಯಬೇಕೂಂತ. ನನ್ನಲ್ಲಿ ಆಸೆ ಇತ್ತು.

ಕಾಮಸಂಕಲ್ಪವಾದ ಪ್ರಶಸ್ತಿಯ ಬಯಕೆ ಇರೋತನಕ ನಾನು ಹೇಗೆ ಪಂಡಿತನಾದೇನು, ಅನ್ನಿಸಿತ್ತು. ಯಸ್ಯ ಸರ್ವೇ ಸಮಾ ರಂಭಾಃ. ಶ್ಲೋಕವನ್ನು ಮತ್ತೆ ಮತ್ತೆ ಹೇಳಿಕೊಳ್ಳಲಾರಂಭಿಸಿದ, ಅವನ ಬಳಿಗೆ ಜನ ಬರಲಾರಂಭಿಸಿದರು. ಎಲ್ಲಾ ಬಯಕೆ ಗಳಿಂದ ಮುಕ್ತನಾಗಿ ಆನಂದಕ್ಕಾಗಿ ಗೀತೆ ಹೇಳಲಾರಂಭಿಸಿದ್ದ. ರಾಜನಿಗೆ ವಿಷಯ ತಿಳಿಯಿತು. ಆ ಪಂಡಿತನನ್ನು ಕರೆತರಲು ಮಂತ್ರಿ ಯನ್ನು ಕಳುಹಿಸಿದ. ಆಗ ಪಂಡಿತ ನಾನೀಗ ಆ ಪಂಡಿತ ಅಲ್ಲ, ಆ ಮನುಷ್ಯನಿಗೆ ರಾಜನಿಂದ ಪ್ರಶಸ್ತಿ ಬೇಕಾಗಿತ್ತು. ಆ ಬಯಕೆ ಈಗಿಲ್ಲ, ಮಹಾರಾಜರಿಗೇ ಇಚ್ಛೆ ಇದ್ದರೆ ಬಂದು ಕೇಳಬಹುದು, ಇಚ್ಛೆ ಇಲ್ಲದಿದ್ದರೆ ಅವಶ್ಯವಿಲ್ಲವೆಂದು ಹೇಳಿ ಮಂತ್ರಿಯನ್ನು ವಾಪಸ್ಸು ಕಳುಹಿಸಿದ.

ಮಹಾರಾಜನೇ ಪಂಡಿತನ ಬಳಿಗೆ ಬಂದ. ಆತ ಮಹಾರಾಜ ಬಂದು ಕೂತರೂ ಅಷ್ಟೇ, ಸಾಮಾನ್ಯ ಜನ ಬಂದು ಕುಳಿತರೂ ಅಷ್ಟೇ, ಅವನ ಮಾತುಗಳಲ್ಲಿ, ಭಾವದಲ್ಲಿ ಯಾವುದೇ ಬದಲಾವಣೆ ಇರಲಿಲ್ಲ. ಗೀತಾ ಪ್ರವಚನ ಮುಗಿದ ಬಳಿಕ ರಾಜ ಪಂಡಿತನ ಬಳಿಗೆ ಬಂದು ಈಗ ತಮಗೆ ತಿಳಿದಿದೆ, ನನಗೆ ಉಪದೇಶ ಮಾಡಬೇಕೆಂದ.

ಆಗ ಪಂಡಿತ ರಾಜನಿಗೆ ಹೇಳಿದ, ‘ನಿಜವಾಗಿ ಹೇಳಬೇಕೂಂದ್ರೆ ನೀನೇ ನನ್ನ ಗುರು. ನಾನು ತಿಳಿದಿದೆ ಅಂತ ನಿನ್ನ ಬಳಿಗೆ ಬಂದೆ, ನಾನು ತಿಳಿದಿಲ್ಲ ಅನ್ನುವುದ ನನಗೆ ತೋರಿಸಿಕೊಟ್ಟೆ.’ ಅಂದ. ಆಗ ರಾಜ, ‘ನಾನು ಆಗ ತಿಳಿಲಾರದೆ ಗುರುವಾಗಿದ್ದೆ, ಈಗ ನಾನು ತಿಳಿದ ಶಿಷ್ಯನಾಗಿದ್ದೇನೆ. ದಯಟ್ಟು ಉಪದೇಶಿಸಿ’ ಎಂದು ಕೇಳಿಕೊಳ್ಳುವಲ್ಲಿಗೆ ಪೂಜ್ಯ ಸಿದ್ದೇಶ್ವರ ಸ್ವಾಮಿಗಳು ಕತೆ ಮುಗಿಸುತ್ತಾರೆ.