Sunday, 15th December 2024

’ಭಗವದ್ಗೀತಾ ಕಿಂಚಿದಧೀತಾ…’ ಮಾಡಿಕೊಳ್ಳುವುದು ಹೇಗೆ ?

ತಿಳಿರು ತೋರಣ

ಶ್ರೀವತ್ಸ ಜೋಶಿ

ಅದು, ಆದಿಶಂಕರಾಚಾರ್ಯರು ರಚಿಸಿದ ಅತಿ ಜನಪ್ರಿಯವಾದ ‘ಭಜಗೋವಿಂದಮ್’ ಸ್ತೋತ್ರದಲ್ಲಿ ಬರುವ ಸಾಲು. ಪೂರ್ತಿ ಚರಣ ಇರುವುದು ಹೀಗೆ:
‘ಭಗವದ್ಗೀತಾ ಕಿಂಚಿದಽತಾ| ಗಂಗಾಜಲಲವಕಣಿಕಾ ಪೀತಾ| ಸಕೃದಪಿ ಯೇನ ಮುರಾರಿಸಮರ್ಚಾ| ಕ್ರಿಯತೇ ತಸ್ಯ ಯಮೇನ ನ ಚರ್ಚಾ||’ ಅಂದರೆ, ಯಾರು ಸ್ವಲ್ಪ ಮಟ್ಟಿಗಾದರೂ ಭಗವದ್ಗೀತೆಯನ್ನು ಅಧ್ಯಯನ ಮಾಡಿರುತ್ತಾರೋ, ಗಂಗೆಯ ನೀರನ್ನು ಒಂದು ಹನಿಯಷ್ಟನ್ನಾದರೂ ಕುಡಿದಿರುತ್ತಾರೋ, ರಾಕ್ಷಸರನ್ನು ಸಂಹಾರ ಮಾಡಿದ ಮುರಾರಿ (ಶ್ರೀಹರಿ)ಯನ್ನು ಕಡೇಪಕ್ಷ ಒಮ್ಮೆಯಾದರೂ ಪೂಜಿಸಿರುತ್ತಾರೋ, ಅಂಥವರ ವಿಷಯದಲ್ಲಿ ಯಮನೂ ಯಾವ ಚರ್ಚೆಯನ್ನೂ
ಮಾಡುವುದಿಲ್ಲ.

ಅತಿ ಸುಲಭವಾಗಿ ಅವರು ಮೋಕ್ಷವನ್ನು ಸಾಧಿಸುತ್ತಾರೆ. ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಭಗವದ್ಗೀತೆಯ ಪಾವಿತ್ರ್ಯ- ಪಾರಮ್ಯಗಳನ್ನು ಇಲ್ಲಿ ಶಂಕರಾ ಚಾರ್ಯರು ಎತ್ತಿತೋರಿಸಿದ್ದಾರೆ. ಭಗವದ್ಗೀತೆಯು ನಮಗೆ ಭಗವಂತನನ್ನು ಅರಿಯುವ ಹಾದಿಯಾದ ಯೋಗಗಳ ಬಗ್ಗೆ ಸಂಪೂರ್ಣ ಜ್ಞಾನವನ್ನು ನೀಡುತ್ತದೆ. ಗೀತೆಯನ್ನು ಶ್ರದ್ಧೆಯಿಂದ ಕಲಿತರೆ ಮೋಹದಿಂದ ಬಿಡುಗಡೆ ಹೊಂದಿ ಸಾಧನೆಯನ್ನು ಪ್ರಾರಂಭಿಸಲು ಪ್ರೇರಣೆ ಸಿಗುತ್ತದೆ. ಗೀತೆಯ ಬಗ್ಗೆ ಸ್ವಲ್ಪ ಜ್ಞಾನವಿದ್ದರೂ ಸಾಕು ಸತ್-ಚಿತ್-ಆನಂದವನ್ನು ಅರಿಯಲು, ಮತ್ತು ಜನನ – ಮರಣಗಳ ಚಕ್ರದಿಂದ ಪಾರಾಗಲು ಸಹಕಾರಿಯಾಗುತ್ತದೆ.

ಸರಿ, ಕಿಂಚಿತ್ ಅಧ್ಯಯನ ಎಂದರೆ ಎಷ್ಟು? ರಾಮಕೃಷ್ಣ ಪರಮಹಂಸರು ಹೇಳಿದ್ದೆನ್ನಲಾದ ಒಂದು ಮಾತಿದೆ: ‘ಇಡೀ ಭಗವದ್ಗೀತೆಯನ್ನು ಅಧ್ಯಯನ ಮಾಡಿದಾಗ ಅರಿಯುವ ಸಾರವನ್ನು, ‘ಗೀತಾ’, ‘ಗೀತಾ’… ಎಂದು ಹತ್ತು ಸಲ ಹೇಳಿಕೊಂಡರೂ ಸಾಕು, ಅದು ‘ತಾಗೀ’, ‘ತಾಗೀ’… ಎಂದಾಗಿ ಕೊನೆಗೆ ‘ತ್ಯಾಗೀ’ ಎಂಬ ಪದದ ಬದಲಾದ ರೀತಿಯಲ್ಲಿ ಕೇಳಿಬರುತ್ತದೆ. ತ್ಯಾಗೀ ಅಂದರೆ ಪ್ರಾಪಂಚಿಕ ಭೋಗಗಳನ್ನು ಹೊರಗಿನಿಂದ ಮತ್ತು ಮನಸ್ಸಿನಿಂದ ತ್ಯಾಗ ಮಾಡಿದವನು ಎಂದರ್ಥ.

ಭಗವದ್ಗೀತೆಯ ಮಹಿಮೆಯನ್ನು ಶಂಕರಾಚಾರ್ಯರು ಹೇಳಿದ್ದಾರೆ; ರಾಮಕೃಷ್ಣ ಪರಮಹಂಸರು ಹೇಳಿದ್ದಾರೆ; ಸ್ವಾಮಿ ವಿವೇಕಾನಂದರು ಹೇಳಿದ್ದಾರೆ; ಪ್ರಭುಪಾದರು ಹೇಳಿದ್ದಾರೆ; ಆರೋಬಿಂದೊ ಹೇಳಿದ್ದಾರೆ; ಮಹಾತ್ಮ ಗಾಂಧಿ ಹೇಳಿದ್ದಾರೆ; ಆಲ್ಬರ್ಟ್ ಐನ್‌ಸ್ಟೈನ್ ಹೇಳಿದ್ದಾರೆ; ಬರಾಕ್ ಒಬಾಮ ಹೇಳಿದ್ದಾರೆ; ಕಾರ್ಲ್ ಜಂಗ್, ಹೆನ್ರಿ ಡೇವಿಡ್ ಥೊರೊ, ರುಡೋಲ್ ಸ್ಟೇನರ್ ಮುಂತಾದ ಪಾಶ್ಚಾತ್ಯ ಚಿಂತಕರೂ ಹೇಳಿದ್ದಾರೆ… ಅಂತೆಲ್ಲ ನೇಮ್ – ಡ್ರಾಪಿಂಗ್ ಮಾಡಿ
ಬೀಗುವುದನ್ನು ನಾವು ಭಾರತೀಯರು ಎಷ್ಟು ಬೇಕಾದರೂ ಮಾಡುತ್ತೇವೆ. ಪರಂತು, ‘ಮನೆಯಲ್ಲಿ ಭಗವದ್ಗೀತೆಯ ಪುಸ್ತಕ ಇದೆ. ಒಮ್ಮೆ ತೆರೆದು ಒಂದೇಒಂದು ಶ್ಲೋಕವನ್ನಾದರೂ ಓದಿದ್ದೇವೆಯೇ?’ ಎಂದು ಕೇಳಿದರೆ 100ರಲ್ಲಿ 98 ಮಂದಿ ಭಾರತೀಯರ ಉತ್ತರ ‘ಇಲ್ಲ!’ ಎಂದೇ ಆಗಿರುತ್ತದೆ.

ಹೆಚ್ಚೆಂದರೆ ಕೆಲವರಿಗೆ ಆ ಬಗ್ಗೆ ಒಂಚೂರು ತಪ್ಪಿತಸ್ಥ ಭಾವವಿರಬಹುದು, ಉಳಿದವರಿಗೆ ಅದೂ ಇಲ್ಲ. ಬಹುಶಃ ತುಸು ಹೆಮ್ಮೆಯೇ. ನಾನೇನೂ ಇದನ್ನು ದೊಡ್ಡ ಯೋಗಿಯಂತೆ, ಅಧ್ಯಾತ್ಮ ಸಾಧಕನಂತೆ ಹೇಳುತ್ತಿಲ್ಲ. ಗೀತೆಯನ್ನು ಮುಟ್ಟಿಯೂ ನೋಡದ ೯೮ರಲ್ಲಿ ಕ್ರಮಸಂಖ್ಯೆ ನನ್ನದೇ ಅಂತಿರಲಿ. ನೆಪಗಳಿಗೇನೂ
ಕೊರತೆಯಿಲ್ಲ. ಬ್ರಿಟಿಷರ ಆಡಳಿತ ಮತ್ತು ಶಿಕ್ಷಣ ಪದ್ಧತಿಯಿಂದಾಗಿ ಹೀಗಾಯ್ತು, ಪಾಶ್ಚಾತ್ಯರನ್ನು ಅನುಕರಿಸಿದ್ದರಿಂದ ಹೀಗಾಯ್ತು, ಮೆಟೀರಿಯಲಿಸ್ಟಿಕ್ ಮನೋಭಾವದಿಂದ ಹೀಗಾಯ್ತು… ಕಾರಣಗಳು ಏನೇ ಇರಬಹುದು, ಎಷ್ಟೇ ಇರಬಹುದು, ವಿಷಯ ಮಾತ್ರ ಅಪ್ಪಟ ಸತ್ಯ.

ಹಾಗಂತ, ಇನ್ನೊಂದು ದೃಷ್ಟಿಕೋನದ ಮಾತೂ ಒಪ್ಪಿಕೊಳ್ಳಬೇಕಾದ್ದೇ. ಏನೆಂದರೆ, ಭಗವದ್ಗೀತೆ 5-10 ನಿಮಿಷಗಳಲ್ಲಿ ಪಟಪಟನೆ ಹೇಳಿಬಿಡುವುದಕ್ಕಾಗುವ ಸ್ತೋತ್ರವಲ್ಲ; ಹದಿನೆಂಟು ಅಧ್ಯಾಯಗಳಲ್ಲಿ ಒಟ್ಟು 700 ಶ್ಲೋಕಗಳು. ಸಂಸ್ಕೃತದ ಗಂಧಗಾಳಿಯಿಲ್ಲದವರಿಗೆ ಅವುಗಳ ಉಚ್ಚರಣೆ ದೊಡ್ಡ ಸವಾಲು. ಸಾಲು ಸಾಲು ಒತ್ತಕ್ಷರ ಮಹಾಪ್ರಾಣ ಹ್ರಸ್ವ-ದೀರ್ಘ ಅನುಸ್ವಾರ ವಿಸರ್ಗಗಳ ಸರಮಾಲೆ. ಶ್ಲೋಕದ ಒಂದೊಂದು ಪಾದವೂ ಟಂಗ್ ಟ್ವಿಸ್ಟರ್ ಇದ್ದಂತೆ. ಮನಸ್ಸು ಮಾಡಿ ಒಮ್ಮೆ ಯತ್ನಿಸಿದರೂ ಇದು ನನ್ನಿಂದ ಆಗುವಂಥದ್ದಲ್ಲಪ್ಪಾ ಎಂದು ಕೈಚೆಲ್ಲುವ ಪರಿಸ್ಥಿತಿ. ಯಾರಾದರೂ ಕಲಿಸಿಕೊಡುತ್ತಾರೆಯೇ ಎಂದು ಯಾರನ್ನಂತ
ಹುಡುಕಿಕೊಂಡು ಹೋಗುವುದು? ಹೀಗಾಗಿ 100ರಲ್ಲಿ 98 ಮಂದಿಗೆ ‘ಗೀತೆ ಪುಸ್ತಕದೊಳಗೇ ಅಡಗಿ ಕುಳಿತಿದೆ’ ಆಗುತ್ತದೆಯೇ ಹೊರತು ‘ಗೀತೆ ನಾಲಗೆ ಮೇಲೆ ನಲಿದಾಡಿದೆ’ ಆಗುವುದೇ ಇಲ್ಲ.

ಇಂತಿರಲು ಗೀತೆಯ ಕಲಿಕೆ ಸೌಲಭ್ಯವನ್ನು ಅರಸುತ್ತ ನಾವು ಎಲ್ಲೆಲ್ಲೋ ಅಲೆದಾಡುವುದಕ್ಕಿಂತ, ಗೀತೆಯ ಕಲಿಕೆ ಸೌಲಭ್ಯವೇ ನಮ್ಮ ಮನೆಗೆ ಬಂದರೆ? ಕೃಷ್ಣ ಪರಮಾತ್ಮನನ್ನು ಅರಸುತ್ತ ನಾವು ಹೋಗುವುದಲ್ಲ, ಕೃಷ್ಣಪರಮಾತ್ಮನೇ ನಮ್ಮ ಮನೆಯಂಗಳಕ್ಕೆ ಬಂದು ‘ಬಂದಿದ್ದೀನಿ!’ ಎಂದು ಬಾಗಿಲು ತಟ್ಟಿದರೆ? ಇದು
ಸಾಧ್ಯವೇ?! ಯಾಕಿಲ್ಲ, ಖಂಡಿತ ಸಾಧ್ಯ! ಎನ್ನುತ್ತದೆ ‘ಗೀತಾ ಪರಿವಾರ’. ನಿಮಗೆ ನೆನಪಿರಬಹುದು, ಇದೇ ಅಂಕಣದ 4 ಏಪ್ರಿಲ್ 2021ರ ಲೇಖನದಲ್ಲಿ ನಾನು ಗೀತಾ ಪರಿವಾರದ ಬಗ್ಗೆ ಬರೆದಿದ್ದೆ.

‘ಗೀತೆ ಕಲಿಯಿರಿ, ಕಲಿಸಿರಿ, ಜೀವನದಿ ಅಳವಡಿಸಿಕೊಳ್ಳಿರಿ’ ಎಂಬ ಧ್ಯೇಯವಾಕ್ಯವನ್ನೇ ಅಂಕಣಬರಹದ ಶೀರ್ಷಿಕೆಯಾಗಿಸಿದ್ದೆ. ನಾನು ಆಗಷ್ಟೇ ಗೀತಾ ಪರಿವಾರದಿಂದ ಭಗವದ್ಗೀತೆ ಕಲಿಕೆಯ ಮೊದಲ ಸ್ತರವನ್ನು ಮುಗಿಸಿದ್ದೆ. 12ನೆಯ ಮತ್ತು 15ನೆಯ ಅಧ್ಯಾಯಗಳನ್ನು ಶುದ್ಧ ಉಚ್ಚರಣೆಯ ಸಂಸ್ಕೃತ ನಿಯಮಗಳ ಪ್ರಕಾರ ಓದುವುದನ್ನು ಕಲಿತ ಧನ್ಯತೆಯಿಂದಿದ್ದೆ. ಗೀತಾ ಪರಿವಾರದ ಕಲಿಕೆ ವಿಧಾನವನ್ನು ಸಾಕಷ್ಟು ವಿಸ್ತಾರವಾಗಿಯೇ ಆ ಲೇಖನದಲ್ಲಿ ಬಣ್ಣಿಸಿದ್ದೆ. ಕಲಿಕೆಯನ್ನು ಒಂದನೆಯ ಅಧ್ಯಾಯದಿಂದ ಆರಂಭಿಸುವ ಬದಲಿಗೆ 12ನೆಯ ಮತ್ತು 15 ನೆಯ ಅಧ್ಯಾಯಗಳನ್ನೇಕೆ ಆಯ್ದುಕೊಳ್ಳಲಾಗುತ್ತದೆ ಎಂಬುದನ್ನೂ ವಿವರಿಸಿದ್ದೆ. ಲೇಖನದ ಕೊನೆಯಲ್ಲಿ ಒಂದು ಸಣ್ಣ ಬೇಸರವನ್ನೂ ವ್ಯಕ್ತಪಡಿಸಿದ್ದೆ.

ಏನೆಂದರೆ – ಗೀತಾ ಪರಿವಾರದ ತರಗತಿಗಳು ಮರಾಠಿ, ಗುಜರಾತಿ, ಹಿಂದೀ, ಮತ್ತು ಇಂಗ್ಲಿಷ್ ಭಾಷೆಯಲ್ಲಿ ನಡೆಯುತ್ತಿರುವುದಕ್ಕೆ ಸಿಕ್ಕಾಪಟ್ಟೆ ಬೇಡಿಕೆ ಇದೆ. ಸಹಸ್ರಸಹಸ್ರ ಸಂಖ್ಯೆಯಲ್ಲಿ ಜನರು ಉಚಿತವಾಗಿ ಆನ್‌ಲೈನ್‌ನಲ್ಲಿ ತಮಗೆ ಅನುಕೂಲದ ಭಾಷೆಯಲ್ಲಿ ಗೀತಾಪಠಣ ಕಲಿಕೆ ಮಾಡುತ್ತಿದ್ದಾರೆ. ಆದರೆ ಕನ್ನಡ ಭಾಷೆಯಲ್ಲೂ ಕಲಿಕೆಯನ್ನು ಒದಗಿಸಿದ್ದರೂ ಕನ್ನಡಿಗರಿಗೆ ಆ ಬಗ್ಗೆ ಗೊತ್ತೂ ಇಲ್ಲ, ಸಹಜವಾಗಿ ಕನ್ನಡದಲ್ಲಿ ತರಗತಿಗೆ ಬೇಡಿಕೆಯೂ ಇಲ್ಲ – ಇದು ನನ್ನ ನೋವು ಆಗಿತ್ತು.

ಭಗವದ್ಗೀತೆಯು ಕನ್ನಡಿಗರಿಗೂ ಜೀವನದಿ ಅಮೃತವಾಹಿನಿ ಆಗಲಿ ಎಂದು ಹಾರೈಸುತ್ತ, ಗೀತಾ ಪರಿವಾರದಲ್ಲಿ ನೋಂದಣಿಗೆ ಲಿಂಕ್ ಕೊಡುತ್ತ, ನಾನು ಆ ಲೇಖನವನ್ನು ಮುಗಿಸಿದ್ದೆ. ಆಮೇಲೇನಾಯ್ತು ಎಂಬುದನ್ನು ನಿಮಗೆ ಸಂಕ್ಷಿಪ್ತ ಸಾರಾಂಶ ರೂಪದಲ್ಲಿ ತಿಳಿಸಲಿಕ್ಕೆ ಈ ವಾರದ ಲೇಖನ. ಮೊದಲೇ ಹೇಳಿಬಿಡುತ್ತೇನೆ: ಇದು ‘ನನ್ನಿಂದಾಯ್ತು’ ಧಾಟಿಯದು ಖಂಡಿತ ಅಲ್ಲ. ಇದು ನನ್ನದಲ್ಲ, ನನ್ನಿಂದ ಆದದ್ದಲ್ಲ. ಎಲ್ಲವೂ ಕೃಷ್ಣಪರಮಾತ್ಮನ ಅನುಗ್ರಹದಂತೆ ನಡೆದದ್ದು, ನಡೆಯುತ್ತಿರುವುದು.

ಏಪ್ರಿಲ್ 4ರಂದು ಲೇಖನ ಪ್ರಕಟವಾದ ಮಾರನೆ ದಿನದಿಂದಲೇ ನನಗೆ ಎರಡನೆಯ ಸ್ತರದ ತರಗತಿಗಳ ಆರಂಭ. ಅದರಲ್ಲಿ ಎಂಟು ವಾರಗಳ ಅವಧಿಯಲ್ಲಿ ನಾಲ್ಕು ಹೊಸ ಅಧ್ಯಾಯಗಳ ಕಲಿಕೆ. ಮುಂಬೈಯಲ್ಲಿ ನೆಲೆಸಿರುವ ಕನ್ನಡಿತಿ ಶ್ರುತಿ ನಾಯಕ್ ನಮಗೆ ಪ್ರಶಿಕ್ಷಕಿ. ಸದಾ ಹಸನ್ಮುಖಿ ತಾಳ್ಮೆಯ ಗಣಿ. ಪುಣೆ ನಿವಾಸಿ ಕನ್ನಡಿತಿ ಸೀಮಾ ಕುಲಕರ್ಣಿ ಝೂಮ್ ತರಗತಿಗಳ ನಿರ್ವಹಣೆಗೆ ತಾಂತ್ರಿಕ ಸಹಾಯಕಿ. ಭಾರತೀಯ ಸಮಯ ಅಪರಾಹ್ನ ಮೂರುವರೆಗೆ, ಅಂದರೆ ನನಗಿಲ್ಲಿ ಬೆಳಗಿನ ಆರು ಗಂಟೆಗೆ ತರಗತಿ. ಗೀತಾ ಪರಿವಾರದ ಕಲಿಕೆ ವಿಧಾನಕ್ಕೆ ಒಗ್ಗಿಹೋಗಿದ್ದೆನಾದ್ದರಿಂದ ಅದು ನನಗೊಂದು ನಿತ್ಯದ ರುಟೀನ್ ಆಯ್ತು. ಈಮಧ್ಯೆ ಏಪ್ರಿಲ್ 12ಕ್ಕೆ ಹೊಸದಾಗಿ ಸ್ತರ 1ರ ತರಗತಿಗಳ ಆರಂಭ.

ಅಂಕಣಬರಹವನ್ನೋದಿದ ಕೆಲವಷ್ಟು ಉತ್ಸುಕರು ನೋಂದಣಿ ಮಾಡಿಕೊಂಡು ಆ ತರಗತಿಗಳಿಗೆ ಸೇರಿದರು. ಅದುವರೆಗೆ ದಿನಕ್ಕೆ ಮೂರು ಬ್ಯಾಚ್‌ಗಳಂತೆ
ನಡೆಯುತ್ತಿದ್ದ ಕನ್ನಡ ತರಗತಿಗಳ ಸಂಖ್ಯೆ ಐದಕ್ಕೇರಿತು. ಮುಂಬೈಯಲ್ಲಿರುವ ನನ್ನ ಪುರುಷೋತ್ತಮಣ್ಣನೂ ಮೊತ್ತಮೊದಲ ಬಾರಿಗೆ ಕನ್ನಡ ತರಗತಿಯೊಂದಕ್ಕೆ ಪ್ರಶಿಕ್ಷಕನಾಗಿ ಸೇವೆಗೆ ತೊಡಗಿದರು. ಮೈಸೂರಿನಲ್ಲಿರುವ ನನ್ನ ಅಕ್ಕ ಭಗವದ್ಗೀತೆಯ ಒಂದೆರಡು ಅಧ್ಯಾಯಗಳನ್ನು ಮೊದಲೇ ಕಂಠಪಾಠ ಕಲಿತಿದ್ದರಾದರೂ ಗೀತಾಪರಿವಾರದ ಕಲಿಕೆ ಹೇಗಿರುತ್ತದೆ ನೋಡುವಾ ಎಂದು ವಿದ್ಯಾರ್ಥಿಯಾಗಿ ಸೇರಿಕೊಂಡರು. ಊರಲ್ಲಿರುವ ನನ್ನ ಅತ್ತಿಗೆಗೂ ಉಮೇದು ಬಂದು ಅವರೂ ನೋಂದಣಿ ಮಾಡಿಕೊಂಡರು.

ಅಂಕಣದ ಓದುಗರ ಪೈಕಿ ಸೇರಿಕೊಂಡವರಿಗೆಲ್ಲ ಒಂದೆರಡು ತರಗತಿಗಳಲ್ಲೇ ರುಚಿಹತ್ತಿತು. ತುಂಬ ಇಷ್ಟವಾಗುತ್ತಿದೆ ಎಂದು ಕೆಲವರು ನನಗೆ ಸಂದೇಶದಲ್ಲಿ ತಿಳಿಸಿದರು. ನನ್ನ ಅತ್ತಿಗೆಗಂತೂ ಮಂಗಳೂರಿನ ಮಾಲತಿ ಕಿಣಿ ಅವರು ಪ್ರಶಿಕ್ಷಕಿಯಾಗಿದ್ದರಿಂದ ಅವರ ಕಂಚಿನ ಕಂಠದಿಂದಲೇ ಆಕರ್ಷಿತರಾಗಿ, ಊರಲ್ಲಿ ಗುಡುಗು – ಸಿಡಿಲಿಂದ ಸರಿಯಾಗಿ ನೆಟ್‌ವರ್ಕ್ ಸಿಗದಿದ್ದರೂ ಝೂಮ್ ತರಗತಿಗಳನ್ನು ಒಮ್ಮೆಯೂ ತಪ್ಪಿಸಿಕೊಳ್ಳದೆ ಕಲಿತರು. ಆಗಲೇ ಕೋವಿಡ್‌ನ ಎರಡನೆಯ ಅಲೆಯ ಅಬ್ಬರ. ಕರ್ನಾಟಕವಿಡೀ ಲಾಕ್‌ಡೌನ್.

ಎಲ್ಲರಿಗೂ ಗೃಹಬಂಧನ. ಗೀತೆ ಕಲಿಕೆಯ 40 ನಿಮಿಷಗಳ ಝೂಮ್ ಕ್ಲಾಸ್ ಇದ್ದಾಗ ಮನೆಯೊಳಗೆ ಹಿತವಾದ ಉಲ್ಲಾಸದ ತಂಗಾಳಿ ಬೀಸಿದ ಅನುಭವ. ಎಲ್ಲೆಲ್ಲೋ ದೂರದಲ್ಲಿರುವ ಸಹಪಾಠಿಗಳ ಧ್ವನಿ, ಭಗವದ್ಗೀತೆಯ ಶ್ಲೋಕಗಳ ರೂಪದಲ್ಲಿ ಕಿವಿಗೆ ಬಿದ್ದಾಗಿನ ಅದ್ಭುತ ರೋಮಾಂಚನ. ನೋಡ ನೋಡುತ್ತಿದ್ದಂತೆಯೇ ನಾಲ್ಕು ವಾರಗಳಲ್ಲಿ ಆ ಬ್ಯಾಚ್‌ನ ಸ್ತರ-1ರ ಕಲಿಕೆ ಮುಗಿಯಿತು. ಗೀತಾ ಪರಿವಾರದ ಸಂಪ್ರದಾಯದಂತೆ ಝೂಮ್ ಮೂಲಕವೇ ‘ಆನಂದೋತ್ಸವ’ ಗಳೂ ನಡೆದವು. ಕಲಿತ ಎರಡೂ ಅಧ್ಯಾಯಗಳ ಪಠಣದ ವಿಡಿಯೊ ಒಪ್ಪಿಸಿದ ಪ್ರಶಿಕ್ಷಾರ್ಥಿಗಳೆಲ್ಲ ‘ಗೀತಾಗುಂಜನ’ ಪ್ರಶಸ್ತಿಪತ್ರ ಪಡೆದು ಸಂಭ್ರಮಿಸಿದರು.

ಮೇ 24ಕ್ಕೆ ಮತ್ತೆ ಹೊಸದಾಗಿ ಸ್ತರ-1 ಆರಂಭವಾಗುತ್ತದೆಂದು ಗೀತಾ ಪರಿವಾರ ಪ್ರಕಟಿಸಿತು. ಈಮೊದಲು ಕನ್ನಡದಲ್ಲಿ ದಿನಕ್ಕೆ ಐದು ತರಗತಿಗಳಿದ್ದವು ಎಂದಿದ್ದೆನಷ್ಟೇ? ಮರಾಠಿಯಲ್ಲಾದರೆ ದಿನಕ್ಕೆ ಬರೋಬ್ಬರಿ 74 ತರಗತಿಗಳು! ಇದು ನನ್ನನ್ನು ತೀವ್ರವಾಗಿ ಕೆಣಕಿತು. ಸೋಶಿಯಲ್ ಮೀಡಿಯಾದಲ್ಲಿ ಈಬಗ್ಗೆ ಒಂದು ಪೋಸ್ಟ್, ಕನ್ನಡಿಗರನ್ನು ಕೊಂಚ ಕೆಣಕಿಸುವ ಧಾಟಿಯಲ್ಲೇ ಹಾಕಿದೆ. ಒಂದು ಪ್ರೆಸ್ ರಿಲೀಸ್ ತಯಾರಿಸಿ ಗೀತಾ ಪರಿವಾರದ ಪರವಾಗಿ ಕನ್ನಡದ ಪ್ರಮುಖ ದಿನಪತ್ರಿಕೆಗಳಿಗೆಲ್ಲ ಕಳುಹಿಸಿದೆ. ವಿಜಯವಾಣಿ, ವಿಜಯಕರ್ನಾಟಕ, ಮತ್ತು ವಿಶ್ವವಾಣಿ ಪತ್ರಿಕೆಗಳಲ್ಲಿ ಅದು ಪ್ರಕಟವೂ ಆಯಿತು.

ಗೀತಾ ಪರಿವಾರದ ರಾಷ್ಟ್ರೀಯ ಉಪಾಧ್ಯಕ್ಷ ಡಾ.ಆಶುತೋಷ್ ಗೋಯಲ್ (ಗೀತಾ ಪರಿವಾರದಲ್ಲಿ ಎಲ್ಲರ ಮೆಚ್ಚಿನ ‘ಆಶು ಭಯ್ಯಾ’) ಅವರಿಗೂ ಈ ವಿಚಾರ ತಿಳಿಸಿದೆ. ಈಮಧ್ಯೆ ಗೀತಾ ಪರಿವಾರದಲ್ಲಿ ಸ್ವಯಂಸೇವೆ ಸಲ್ಲಿಸಲು ಉತ್ಸುಕರಾಗಿದ್ದ, ಆಗಲೇ ಕೆಲವರು ಪ್ರಶಿಕ್ಷಕರೂ ತಾಂತ್ರಿಕ ಸಹಾಯಕರೂ ಆಗಿದ್ದ ಕನ್ನಡಿಗರೊಂದಿಷ್ಟು ಜನ ಸೇರಿಕೊಂಡು ‘ಕರ್ನಾಟಕ ಗೀತಾ ಪರಿವಾರ’ ಎಂಬೊಂದು ವಾಟ್ಸಪ್ ಗ್ರೂಪ್ ಮಾಡಿಕೊಂಡೆವು. ಮುಂಬೈ ಕನ್ನಡಿತಿ ಉಷಾ
ಪ್ರದೀಪ್ ಅವರ ಆಲೋಚನೆಯ ಕೂಸು ಅದು.

ಕಲ್ಬುರ್ಗಿಯಿಂದ ಸಂತೋಷ್ ಸೊಮಾನಿ, ಮುಂಬೈಯಿಂದ ಸುರೇಶ ದಧಿಚ್, ಬೆಂಗಳೂರಿನಿಂದ ಬಾಲಕೃಷ್ಣ ರಾನಡೆ, ಮೈಸೂರಿನಿಂದ ಮಹೇಶ್ವರಿ, ಸಂಗೀತಾ ಗುರುರಾಜ್, ಶಿವ ಚಿರಾಂಶಿ, ಪ್ರಮೋದ ಕಲ್ಲೂರ್, ಗೋವಾದಿಂದ ಅನುಪಮಾ ಪಾಟೀಲ್, ಔರಂಗಾಬಾದ್‌ನಿಂದ ವಿದ್ಯಾ ರಾವ್, ಪುಣೆಯಿಂದ ಶ್ರುತಿ ಕದಗಾಂವಕರ್, ಗದಗದಿಂದ ರಾಧಿಕಾ ರಾವ್… ಒಬ್ಬರಿಗಿಂತ ಒಬ್ಬರು ಉತ್ಸಾಹಿ ಸ್ವಯಂಸೇವಕರು ಆ ವಾಟ್ಸಪ್ ಗ್ರೂಪ್‌ನಲ್ಲಿ. ಅದೊಂಥರ ‘ಕನ್ನಡ ಸ್ಟಾಫ್ ರೂಮ್’ ಇದ್ದಹಾಗೆ.

ಎಲ್ಲರ ಏಕೈಕ ಗುರಿ: ಹೆಚ್ಚುಹೆಚ್ಚು ಕನ್ನಡಿಗರಿಗೆ ಗೀತಾ ಪರಿವಾರವನ್ನು ಪರಿಚಯಿಸುವುದು, ತನ್ಮೂಲಕ ಗೀತೆಯನ್ನು ಅವರ ಮನೆಬಾಗಿಲಿಗೆ ಒಯ್ಯುವುದು. ಮೇ 24ರ ಬ್ಯಾಚ್‌ಗೆ ಕನ್ನಡ ಭಾಷೆ ಆಯ್ದುಕೊಂಡ ನೋಂದಣಿಗಳ ಸಂಖ್ಯೆ 1500 ಆಗಿದೆ ಎಂದು ಆಶು ಭಯ್ಯಾ ಖುದ್ದಾಗಿ ನನಗೆ ವಾಟ್ಸಪ್ ಮೆಸೇಜ್‌ನಲ್ಲಿ ತಿಳಿಸಿದರು! ಅಂದರೆ ಈಬಾರಿ ಐದಲ್ಲ, ದಿನಕ್ಕೆ 16 ಕನ್ನಡ ತರಗತಿಗಳು! ಕಲಿಯುವವರೇನೋ ಸೇರಿಕೊಂಡರು, ಆದರೆ ಕನ್ನಡ ಮಾಧ್ಯಮದಲ್ಲಿ ಕಲಿಸುವವರು? ಇದ್ದ ಎಂಟು-ಹತ್ತು ಸ್ವಯಂಸೇವಕರೇ ದಿನಕ್ಕೆ ತಲಾ ಎರಡರಂತೆ ಕನ್ನಡ ತರಗತಿಗಳನ್ನು ನಡೆಸಲಿಕ್ಕೆ ಮುಂದಾದರು.

ಬಹುಕಾಲ ಕರ್ನಾಟಕದಿಂದ ದೂರವಿದ್ದವರು ಕನ್ನಡದಲ್ಲಿ ಸಂಭಾಷಣೆ ಕಷ್ಟವಾಗಬಹುದಾದವರೂ ಅನಿವಾರ್ಯವಾಗಿ ಜವಾಬ್ದಾರಿ ಹೊತ್ತರು. ಭಾರತೀಯ ಸಮಯ ಅಪರಾಹ್ನ 3 ಗಂಟೆಯ (ನನಗಿಲ್ಲಿ ಬೆಳಗಿನ ಐದೂವರೆ) ತರಗತಿಯಾದರೆ ನಾನೂ ಕಲಿಸಬಲ್ಲೆ ಎಂದು ಒಪ್ಪಿಕೊಂಡೆ. ಬೇಗ ಮಲಗಿ ಬೇಗ ಏಳುವ
ವಿಚಿತ್ರ ಪ್ರಾಣಿ ಆದ ನನಗೆ ಅದೊಂದೇ ಕನ್ವೀನಿಯಂಟ್ ಟೈಮ್ ಸ್ಲಾಟ್. ಅಲ್ಲದೇ ನನ್ನ ಇಲ್ಲಿಯ ಸಂಜೆಹೊತ್ತು ನಾನು ವಿದ್ಯಾರ್ಥಿಯಾಗಿರುವ ಸ್ತರ-ರ ತರಗತಿ. ಅಂತೂ ಸ್ತರ-ರ ಒಂದು ಕನ್ನಡ ತರಗತಿಗೆ ನಾನೇ ಪ್ರಶಿಕ್ಷಕನಾಗಬೇಕಾಯ್ತು.

ಜೀವನದಲ್ಲಿ ಮೊತ್ತಮೊದಲ ಬಾರಿ ನನಗೆ ಆ ಅನುಭವ. ಅಪರಾಹ್ನ(ಭಾರತೀಯ) ಸಮಯವಾದ್ದರಿಂದ ಸದ್ಗೃಹಿಣಿಯರು, ಅತ್ಯುತ್ಸಾಹಿ ಮಕ್ಕಳು, ಒಂದಿಬ್ಬರು
ಪುಟಾಣಿಗಳು, ಮತ್ತೊಂದಿಷ್ಟು ಹಿರಿಯರು ಪ್ರಶಿಕ್ಷಾರ್ಥಿಗಳು. ಅವರಾರಿಗೂ ನಿರಾಶೆಯಾಗಿಲ್ಲ ಎಂಬುದನ್ನಂತೂ ಧನ್ಯತಾಭಾವದಿಂದ ಹೇಳಬಲ್ಲೆ. ಜತೆಯಲ್ಲೇ, ಗೀತಾ ಪರಿವಾರದ ಎಲ್ಲ ಪ್ರಕಟಣೆಗಳ, ಸಂದೇಶಗಳ, ಕನ್ನಡ ಅನುವಾದದ ಜವಾಬ್ದಾರಿಯನ್ನೂ ವಹಿಸಿಕೊಂಡೆ. ಆರಂಭದಲ್ಲಿ ಗೀತಾ ಪರಿವಾರದವರು ಗೂಗಲ್ ಟ್ರಾನ್ಸ್‌ಲೇಷನ್ ಬಳಸುತ್ತಿದ್ದರಾದ್ದರಿಂದ ಅಸಂಬದ್ಧ ವಾಕ್ಯರಚನೆ ಗಳಿರುತ್ತಿದ್ದವು. ಈಗ ಕನ್ನಡದ ಪ್ರಕಟಣೆಗಳು ಒಳ್ಳೆಯ, ಸ್ವಚ್ಛ ಕನ್ನಡದಲ್ಲಿಯೇ ಇರುತ್ತವೆ. ಇದನ್ನೆಲ್ಲ ಘನಂದಾರಿ ಕೆಲ್ಸ ಮಾಡುತ್ತಿದ್ದೇನೆಂದು ಹೇಳುತ್ತಿಲ್ಲ.

ಗೀತಾ ಪರಿವಾರದಲ್ಲಿ ನನಗಿಂತ ಹೆಚ್ಚು ಸಮಯ, ಶ್ರಮ ಸೇವೆಯ ರೂಪದಲ್ಲಿ ಸಲ್ಲಿಸುತ್ತಿರುವ ಸ್ವಯಂಸೇವಕರಿದ್ದಾರೆ. ಡಾ.ಸುರೇಶ ಕುಂಬಾರರಂತೂ ಗೀತಾ
ಪರಿವಾರದ ‘ಗೀತಾಗಂಗೆ’ಯನ್ನು ಕನ್ನಡನಾಡಿಗೆ ತಂದ ಭಗೀರಥ. ಸ್ತರ-ರಲ್ಲಿ ಕಲಿಕೆಗೆ ಎರಡು ಅಧ್ಯಾಯಗಳ ಬೋಧನಾಸಾಮಗ್ರಿ, ಪಿಡಿಎಫ್‌ಗಳನ್ನು ಅವರು ಆಗಲೇ ಕನ್ನಡದಲ್ಲಿ ತಯಾರಿಸಿದ್ದರು. ಆದರೆ ಮುಂದಿನ ಸ್ತರಗಳ ಕನ್ನಡ ತರಗತಿಗಳು ಆರಂಭವಾದಾಗ ಆ ಎಲ್ಲ ಅಧ್ಯಾಯಗಳದೂ ಕನ್ನಡದಲ್ಲೇ ಆಗಬೇಕಲ್ಲ?
ಛಲಬಿಡದೆ ಹಗಲಿರುಳೂ ದುಡಿದ ಡಾ.ಕುಂಬಾರ ಈಗ ಎಲ್ಲ ೧೮ ಅಧ್ಯಾಯಗಳ ಪಿಡಿಎಫ್ ಕನ್ನಡದಲ್ಲಿ ತಯಾರಿಸಿದ್ದಾರೆ. ಸ್ತರ-1ರ ತರಗತಿಗಳಿಗೆ ಅನುಕೂಲ ವಾಗುವಂತೆ ಕನ್ನಡದಲ್ಲಿ ಶ್ಲೋಕಗಳ ಭಾವಾರ್ಥ ಕೆಲಸವನ್ನು ಶಿವ ಚಿರಾಂಶಿ ಮಾಡಿದ್ದಾರೆ.

ಪ್ರತಿದಿನದ ತರಗತಿಯ ಬಳಿಕ ಆ ದಿನದ ಕಲಿಕೆಯ ಶ್ಲೋಕಗಳ ಆಡಿಯೊ ವಿವರಣೆ ವಾಟ್ಸಪ್‌ನಲ್ಲಿ ವಿತರಿಸುವುದು ಕನ್ನಡ ತರಗತಿಗಳಿಗೂ ಹಿಂದೀ/ಇಂಗ್ಲಿಷ್‌ ನಲ್ಲಿದ್ದದ್ದನ್ನೇ ಬಳಸಲಾಗುತ್ತಿತ್ತು. ಅವೆಲ್ಲವನ್ನೂ ಅತ್ಯಂತ ತಾಳ್ಮೆಯಿಂದ, ಸುಶ್ರಾವ್ಯ ಸ್ವರದಿಂದ, ವಿದ್ಯಾ ರಾವ್ ಕನ್ನಡದಲ್ಲಿ ಮಾಡಿಟ್ಟಿದ್ದಾರೆ. ಗೀತಾ ಪರಿವಾರದಿಂದಲೇ ಪಿಡಿಎಫ್ ವಿತರಣೆಗಿಂತ ಮಾರುಕಟ್ಟೆಯಲ್ಲಿ ಸಿಗುವ ಭಗವದ್ಗೀತೆ ಪುಸ್ತಕಗಳನ್ನು ಕೊಳ್ಳುವಂತೆ ಪ್ರಶಿಕ್ಷಾರ್ಥಿಗಳಿಗೆ ಹೇಳಬಹುದಲ್ಲ? ಅಲ್ಲೇ ಇರುವುದು ಗೀತಾ ಪರಿವಾರದ ವೈಶಿಷ್ಟ್ಯ. ಭಗವದ್ಗೀತೆ ಕಲಿಕೆಗೆ ಗೀತಾ ಪರಿವಾರವು ಒದಗಿಸುವ ಪಿಡಿಎಫ್‌ಗಳನ್ನೇ ಉಪಯೋಗಿಸುವಂತೆ, ಆಡಿಯೊ
ಮಾರ್ಗದರ್ಶಿಗಳನ್ನು ಬಳಸಿ ನಿರ್ದಿಷ್ಟ ಉಚ್ಚಾರ ಶೈಲಿ ಮತ್ತು ಧಾಟಿಯಲ್ಲೇ ಪಠಿಸುವಂತೆ ಸೂಚಿಸುವುದು ಏಕೆಂದರೆ ಆ ಪಿಡಿಎಫ್‌ಗಳನ್ನು, ಆಡಿಯೊಗಳನ್ನು ಸಂಸ್ಕೃತದ ಶುದ್ಧ ಮತ್ತು ಸ್ಪಷ್ಟ ಉಚ್ಚಾರದ ವ್ಯಾಕರಣ ನಿಯಮಗಳೆಲ್ಲವನ್ನೂ ಪಾಲಿಸಿ ರಚಿಸಲಾಗಿದೆ.

ಶ್ಲೋಕಗಳನ್ನು ಶುದ್ಧ ಉಚ್ಚಾರದಲ್ಲಿ ಪಠಿಸಿದರೆ ಹೆಚ್ಚು ಪರಿಣಾಮಕಾರಿ. ಅನುಸ್ವಾರ, ವಿಸರ್ಗ, ಒತ್ತಕ್ಷರ, ಹ್ರಸ್ವ, ದೀರ್ಘ, ಅವಗ್ರಹ ಇತ್ಯಾದಿ ಉಚ್ಚಾರಗಳು ನಿರ್ದಿಷ್ಟ ರೀತಿಯಲ್ಲಿದ್ದರೇನೇ ಸರಿ. ಇವುಗಳಿಂದಾಗುವ ಕಂಪನದಿಂದ ಶರೀರಕ್ಕೆ ಆರೋಗ್ಯಲಾಭವೂ ಇದೆ. ಇನ್ನೂ ಒಂದು ಕಾರಣ ವೆಂದರೆ ನಾವು ಹೇಳುವ ಬೇರೆ ಕೆಲವು ಸ್ತೋತ್ರಗಳಿಗೂ ಭಗವದ್ಗೀತೆಗೂ ಒಂದು ಮುಖ್ಯ ವ್ಯತ್ಯಾಸವಿದೆ. ಬೇರೆ ಸ್ತೋತ್ರಗಳನ್ನು ನಾವು ದೇವರ ಸ್ತುತಿ, ಪ್ರಶಂಸೆ, ಪ್ರಾರ್ಥನೆ ರೀತಿಯಲ್ಲಿ ಹೇಳುತ್ತೇವೆ. ಅವುಗಳ ಉಚ್ಚಾರದಲ್ಲಿ ಚಿಕ್ಕಪುಟ್ಟ ತಪ್ಪುಗಳಾದರೂ ಕೊನೆಯಲ್ಲೊಂದು ಶ್ಲೋಕದ ಮೂಲಕವೇ ತಪ್ಪೊಪ್ಪಿಗೆ ಹೇಳುವ ಕ್ರಮವೂ ಇದೆ. ಭಗವದ್ಗೀತೆಯಲ್ಲಿ ಹಾಗಲ್ಲ.

ಇದರಲ್ಲಿ ಅರ್ಧಕ್ಕಿಂತಲೂ ಹೆಚ್ಚು (574) ಶ್ಲೋಕಗಳು ಶ್ರೀಕೃಷ್ಣ ಪರಮಾತ್ಮನ ಬಾಯಿಯಿಂದ ಬಂದಿರುವಂಥವು. ದೇವರು ಹೇಳಿದ್ದರಲ್ಲಿ ತಪ್ಪುಗಳಿರುವುದಿಲ್ಲ. ನಾವೂ ಈ ಶ್ಲೋಕಗಳನ್ನು ಉಚ್ಚರಿಸುವಾಗ ತಪ್ಪುಗಳಾಗದಂತೆ ನೋಡಿಕೊಳ್ಳಬೇಕು. ಮೊದಮೊದಲಿಗೆ ಕಷ್ಟವಾಗುತ್ತದೆ. ಸತತ ಅಭ್ಯಾಸದಿಂದ ಸಾಧ್ಯವಾಗು ತ್ತದೆ. ಇದೊಂಥರದಲ್ಲಿ ಸೈಕಲ್ ಅಥವಾ ಈಜು ಕಲಿತಂತೆ. ಮೊದಮೊದಲು ಕಷ್ಟ, ಯಾರದಾದರೂ ಆಧಾರ ಬೇಕಾಗುತ್ತದೆ. ಒಮ್ಮೆ ಕಲಿತ ಮೇಲೆ ನಾವೇ ಮಾಡಲಿಕ್ಕಾಗುತ್ತದೆ.

ಮನಸ್ಸಿಗೆ ಸಂತೋಷ, ತೃಪ್ತಿ ಸಿಗುತ್ತದೆ. ಇಷ್ಟೆಲ್ಲ ಸಮಾಚಾರ ನಿಮಗೆ ತಿಳಿಸಿದ್ದೇಕೆಂದರೆ ಈಗಿನ್ನು ಜುಲೈ ೫ರಂದು ಹೊಸದಾಗಿ ಮತ್ತೊಮ್ಮೆ ಸ್ತರ-1ರ ತರಗತಿಗಳನ್ನು ಗೀತಾ ಪರಿವಾರ ಆರಂಭಿಸುತ್ತಿದೆ. ಈ ಬಾರಿ ಕನ್ನಡಕ್ಕೆ ದಿನದ ಹತ್ತು ಬೇರೆಬೇರೆ ಟೈಮ್ ಸ್ಲಾಟ್‌ಗಳ ಆಯ್ಕೆ ಇದೆ! ಬೆಳಗ್ಗೆ 6, 7, 8,
ಅಪರಾಹ್ನ 1 2, 3, ಸಂಜೆ 5, 6, 7, ಮತ್ತು ರಾತ್ರಿ 10 ಗಂಟೆಗೆ ಆರಂಭವಾಗುವ ತಲಾ 40 ನಿಮಿಷಗಳ ಕ್ಲಾಸ್. ವಯಸ್ಸು, ಲಿಂಗ, ಪ್ರಾದೇಶಿಕತೆ, ಸಾಮಾಜಿಕ ಹಿನ್ನೆಲೆ ಯಾವ ಭೇದವೂ ಇಲ್ಲದೆ ಎಲ್ಲರಿಗೂ ಉಚಿತ ಪ್ರವೇಶ. ಗೀತೆಯನ್ನು ಹುಡುಕಿಕೊಂಡು ನೀವು ಹೋಗಬೇಕಾದ್ದಿಲ್ಲ, ಗೀತೆಯೇ ನಿಮ್ಮ ಮನೆಗೆ ಬರುತ್ತಿದೆ.

ಅಂದಮೇಲೆ ನೀವೂ ‘ಭಗವದ್ಗೀತಾ ಕಿಂಚಿದಧಿತಾ’
ಎನ್ನಲೇಬೇಕು. ನೋಂದಣಿಗೆ ಕೊನೆಯ ದಿನಾಂಕ 30 ಜೂನ್.
ಕ್ಲಿಕ್ಕಿಸಬೇಕಾದ ಕೊಂಡಿ: learngeeta.com/reg