ಸೌಹಾರ್ದ ವೇದಿಕೆ
ಡಾ.ಶ್ರೀಧರ ಭಟ್ ಉಜಿರೆ
ಶ್ರೀ ಕ್ಷೇತ್ರ ಧರ್ಮಸ್ಥಳ ಹಲವು ಸಾಮಾಜಿಕ ಧಾರ್ಮಿಕ, ಸಾಂಸ್ಕೃತಿಕ, ಶೈಕ್ಷಣಿಕ, ವೈಜ್ಞಾನಿಕ ಕಾರ್ಯಕ್ರಮಗಳ ಪ್ರಯೋಗದ ತೊಟ್ಟಿಲಾಗಿದೆ. ಸನಾತನ ಧರ್ಮ ಸಂರಕ್ಷಣೆಯ ನಿಟ್ಟಿನಲ್ಲಿ, ಸಮಾಜದಲ್ಲಿ ಸಾಮರಸ್ಯವನ್ನು ಪ್ರೋತ್ಸಾಹಿಸುವ ಸಲುವಾಗಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇಂತಹ ಕಾರ್ಯಕ್ರಮಗಳಲ್ಲಿ ‘ಭಜನಾ ತರಬೇತಿ ಕಮ್ಮಟ’ ಮುಖ ವಾದದ್ದು.
ಭಜನೆಯು ವೈಯಕ್ತಿಕವಾಗಿ ಮನಸ್ಸನ್ನು ಧನಾತ್ಮಕ ಚಿಂತನೆಗಳೆಡೆಗೆ ಕೊಂಡೊಯ್ಯುವ ಸಾಧನವಷ್ಟೇ ಅಲ್ಲದೆ ಸಮಾಜದ ಸುಧಾರಣೆಯಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಭಜನೆಯನ್ನು ಉಳಿಸಿ ಬೆಳೆಸುವುದು ಅಷ್ಟೇ ಅಲ್ಲದೆ ಭಜನೆಗೆ ಶಿಸ್ತಿನ ಚೌಕಟ್ಟ ನ್ನು ನೀಡಿ ಮುಂದಿನ ಪೀಳಿಗೆಗೂ ವಿಸ್ತರಿಸುವುದು ಧರ್ಮಾಧಿಕಾರಿಗಳಾದ ಡಾ. ಡಿ ವೀರೇಂದ್ರ ಹೆಗ್ಗಡೆಯವರ ಆಶಯ. ಈ ನಿಟ್ಟಿನಲ್ಲಿ ಭಜನಾ ಮಂಡಳಿಗಳ ಸದಸ್ಯರನ್ನು ಆಹ್ವಾನಿಸಿ, ವಿಶೇಷ ತರಬೇತಿ ನೀಡುವ ಮೂಲಕ ಅದನ್ನು ಉಳಿದವರಿಗೆ ಹಂಚುವ ಕಾರ್ಯಕ್ರಮ ವನ್ನು ೧೯೯೯ ರಲ್ಲಿ ಪ್ರಾರಂಭಿಸಲಾಯಿತು. ಇದುವೇ ಭಜನಾ ಕಮ್ಮಟ ತರಬೇತಿ ಕಾರ್ಯಾಗಾರ.
ಇದರ ರಜತವರ್ಷದ ಕಮ್ಮಟ ಇದೇ ಸೆಪ್ಟೆಂಬರ್ ೨೮ರಿಂದ ಒಂದು ವಾರಗಳ ಕಾಲ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ನಡೆಯಲಿದೆ. ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರಿಗೆ ತರಬೇತಿ, ಸಂಘಟನೆ, ಶಿಸ್ತು ಹಾಗೂ ಏಕರೂಪತೆಯನ್ನು ತರುವ ದೃಷ್ಟಿಯಿಂದ ಆರಂಭ ವಾದ ಈ ಭಜನಾ ತರಬೇತಿ ಕಮ್ಮಟ ಮೊದಲ ಶಿಬಿರದಲ್ಲಿ ಬೆಳ್ತಂಗಡಿ ತಾಲೂಕಿನ ಕೇವಲ ೬೦ ಮಂದಿ ಪಾಲ್ಗೊಂಡಿದ್ದರು. ಇಂದು ರಾಜ್ಯದ ಎಲ್ಲ ಕಡೆಗಳಲ್ಲಿ ಇದು ಆಯೋಜನೆಗೊಳ್ಳುತ್ತಿದೆ. ಇದುವರೆಗೆ ೨೪೧೨ ಭಜನಾ ಮಂಡಳಿಯ ೪೫೫೧ಸದಸ್ಯರಿಗೆ ತರಬೇತಿ ನೀಡಲಾಗಿದೆ.
ಪ್ರತಿವರ್ಷದ ಕೊನೆಯಲ್ಲಿ ನಡೆಯುವ ಭಜನೋತ್ಸವದಲ್ಲಿ ೭೨೯೫೫ ಭಜನಾ ಪಟುಗಳು ಪಾಲ್ಗೊಂಡಿದ್ದಾರೆ. ಇಂದು ೧೮೦೦ ಭಜನಾ ಮಂಡಳಿಗಳು ದಕ್ಷಿಣಕನ್ನಡ ಜಿಲ್ಲೆಯಲ್ಲೇ ಇವೆ. ೫ ಸಾವಿರಕ್ಕಿಂತ ಹೆಚ್ಚು ಭಜನಾಮಂಡಳಿ ಮತ್ತು ಒಂದು ಲಕ್ಷಕ್ಕಿಂತ ಹೆಚ್ಚು ಭಜಕರಿಗೆ ಧರ್ಮಸ್ಥಳ ಕ್ಷೇತ್ರದ ಭಜನಾ ತರಬೇತಿ ಕಮ್ಮಟ ಪ್ರೇರಣೆಯಾಗಿದೆ. ವರ್ಷದಿಂದ ವರ್ಷಕ್ಕೆ ಭಜನಾ ತರಬೇತಿ ಕಮ್ಮಟದಲ್ಲಿ ಭಾಗವಹಿಸುವ ಭಜನಾ ತಂಡಗಳ ಸಂಖ್ಯೆ ವೃದ್ಧಿ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಶಿಬಿರಾರ್ಥಿಗಳ ಆಯ್ಕೆಗೆ ವ್ಯವಸ್ಥಿತ ರೂಪು ನೀಡಲಾಗಿದೆ. ಇದಕ್ಕಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಜಿಲ್ಲಾಮಟ್ಟದಲ್ಲಿ ಆಯ್ಕೆ ಸಭೆಗಳನ್ನು ನಡೆಸಲಾಗುತ್ತದೆ.
ಅಲ್ಲಿ ಭಜನೆಯ ಆಸಕ್ತಿ, ರಾಗ-ತಾಳ ಜ್ಞಾನದ ಬಗ್ಗೆ ವಿಮರ್ಶಿಸಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ತರಬೇತಿಗೆ ಸಾಂಸ್ಥಿಕ ರೂಪವನ್ನು ನೀಡುವ ದೃಷ್ಟಿಯಿಂದ ‘ಶ್ರೀ ಧರ್ಮಸ್ಥಳ ಭಜನಾ ಪರಿಷತ್’ಅನ್ನುಆರಂಭಮಾಡಲಾಗಿದೆ. ಭಜನೆಯಲ್ಲಿ ರಾಗ ತಾಳದ ಜೊತೆಗೆ ಭಜಕರ ಹೃದಯದಲ್ಲಿ ಶ್ರದ್ಧಾಭಕ್ತಿ ಭಾವವು ಬಹಳ ಅವಶ್ಯಕ ಎನ್ನುವ ಪೂಜ್ಯ ಹೆಗ್ಗಡೆಯವರು ಶುದ್ಧ ಭಜನಾ ಸಾಹಿತ್ಯಕ್ಕೆ ಒತ್ತನ್ನು ನೀಡುತ್ತಾರೆ.
ದಾಸ ಸಾಹಿತ್ಯಗಳು, ವಚನಗಳು, ಸಮಕಾಲೀನ ಹಾಡುಗಳು, ಭಕ್ತಿಗೀತೆ, ದೇಶಭಕ್ತಿಗೀತೆಗಳ ಬಗೆಗೆ ತರಬೇತಿ ನೀಡಲಾಗುತ್ತದೆ. ಮಹಿಳಾ ಅಭ್ಯರ್ಥಿಗಳಿಗೆ ಸಂಪ್ರದಾಯ ಗೀತೆಗಳು, ಶೋಭಾನೆ ಹಾಡುಗಳನ್ನು ಕಲಿಸಲಾಗುವುದು. ನೃತ್ಯ ಭಜನೆ ತರಬೇತಿ, ನಗರ ಸಂಕೀರ್ತನೆ, ಸಾಂಸ್ಕೃತಿಕ ಕಾರ್ಯಕ್ರಮ, ಉಪನ್ಯಾಸ ಕಾರ್ಯಕ್ರಮಗಳು ಭಜನಾ ಕಮ್ಮಟದ ವೈಶಿಷ್ಟ್ಯ.
ಪ್ರತಿದಿನ ಬೆಳಗ್ಗೆ ಒಂದು ಗಂಟೆ ಯೋಗ, ಪ್ರಾಣಾಯಾಮ ನಡೆಸಲಾಗುತ್ತದೆ. ನಿತ್ಯಕರ್ಮ ಮತ್ತು ಉಪಾಹಾರದ ನಂತರ ಭಜನಾ ತರಬೇತಿ ವೇಳಾಪಟ್ಟಿಯಂತೆ ಓಂಕಾರ ಶಾಂತಿಮಂತ್ರದಿಂದ ಪ್ರಾರಂಭ. ಧಾರ್ಮಿಕ ಉಪನ್ಯಾಸ, ಪ್ರತಿದಿನ ಸಂಜೆ ೫-೩೦ರಿಂದ ನಗರ ಸಂಕೀರ್ತನೆ ಕಾರ್ಯಕ್ರಮ, ಕುಣಿತ ಭಜನಾ ತರಬೇತಿ, ಸಂಜೆ ೭-೩೦ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಇರುತ್ತವೆ. ಇವುಗಳ ಜತೆಗೆ ಭಜನಾ ಮಂಡಳಿಗಳ ಕಾರ್ಯವೈಖರಿ, ಸಂಘಟನೆಯ ಬಗ್ಗೆಯೂ ತರಬೇತಿ ನೀಡಲಾಗುತ್ತದೆ. ಅಗತ್ಯ ಮೂಲ ಸೌಕರ್ಯಗಳ ಮಾಹಿತಿ ನೀಡಿ, ಅದಕ್ಕೆ ಬೇಕಾದ ಸಹಕಾರವನ್ನು ಕ್ಷೇತ್ರದ ವತಿಯಿಂದಲೇ ನೀಡಲಾಗುತ್ತಿದೆ.
ವಾರಕ್ಕೊಮ್ಮೆ ನಿರ್ದಿಷ್ಟ ಸಮಯದಲ್ಲಿ ಭಜನೆ ಕಡ್ಡಾಯ. ಆರಂಭ, ಮುಕ್ತಾಯದ ಹೇಗಿರಬೇಕು, ಭಜನೆಗೆ ಆಯ್ಕೆಮಾಡುವ ಹಾಡುಗಳು, ದೋಷರಹಿತ ಹಾಡುಗಾರಿಕೆ ಇತ್ಯಾದಿ ಬಗ್ಗೆಯೂ ಮಾರ್ಗದರ್ಶನ ನೀಡಲಾಗುತ್ತದೆ. ಭಜನೆಯ ಸಂದರ್ಭದಲ್ಲಿ ಮಾತುಕತೆ ನಡೆಸುವುದು ಅಥವಾ ದುರ್ವ್ಯಸನಗಳ ತ್ಯಜಿಸುವ ಸೂಚನೆ ನೀಡಲಾಗುತ್ತದೆ. ಭಜನೆಯನ್ನು ಆಕರ್ಷಣೀಯ ವಾಗಿಸಲು ನೃತ್ಯ ಸಂಯೋಜನೆ, ವೇಷಭೂಷಣಗಳನ್ನು ಅಳವಡಿಸುವುದೂ ಉಂಟು.
ಇದಲ್ಲದೆ ಊರಿನಲ್ಲಿ ನಡೆಯುವ ಧಾರ್ಮಿಕ ಕಾರ್ಯಕ್ರಮಗಳ ಸಂದರ್ಭದಲ್ಲಿ, ಮನೆಮನೆಯಲ್ಲಿ ಭಜನೆಯ ಸಂಸ್ಕಾರ ಬೆಳೆಸಲು ಹಮ್ಮಿಕೊಳ್ಳಬಹುದಾದ ಕಾರ್ಯಕ್ರಮ, ಸಾಮಾಜಿಕ ಪ್ರಗತಿಗಾಗಿನ ಯೋಜನೆ ಬಗ್ಗೆಯೂ ಮಾಹಿತಿ ನೀಡಲಾಗುವುದು. ಭಜನಾ ಮಂಡಳಿಗಳ ಆಡಳಿತ ವ್ಯವಸ್ಥೆ ಮತ್ತು ಲೆಕ್ಕಪತ್ರ ನಿರ್ವಹಣೆ ಬಗ್ಗೆ ಕೂಡ ಸಾಕಷ್ಟು ನುರಿತವರಿಂದ ತರಬೇತಿಯನ್ನು ನೀಡಲಾಗುತ್ತದೆ. ಈ ಎಲ್ಲ ಮಾಹಿತಿಗಳನ್ನು ಒಳಗೊಂಡ ಭಜನಾ ಕಿಟ್‌ಗಳನ್ನು ಶಿಬಿರಾರ್ಥಿಗಳಿಗೆ ನೀಡಲಾಗುತ್ತದೆ.
ಇದರಲ್ಲಿ ಬ್ಯಾಗ್, ಭಜನಾ ಸಾಹಿತ್ಯ ಹಾಗೂ ಮಾಹಿತಿಯ ಕೈಪಿಡಿ, ಪೆನ್ನು, ಪುಸ್ತಕ, ಟೀಶರ್ಟ್, ಸೀರೆ, ಬಾಚಣಿಗೆ, ಶಲ್ಯ, ಟಮ್ಕಿ, ತಾಳ ಇತ್ಯಾದಿಗಳಿರುತ್ತವೆ. ತರಬೇತಿ ಸಂದರ್ಭದಲ್ಲಿ ಉಚಿತ ಊಟ,ವಸತಿ ವ್ಯವಸ್ಥೆಯನ್ನೂ ಮಾಡಲಾಗುತ್ತದೆ. ಗುಣಮಟ್ಟದ ಶಾಸೀಯ ತರಬೇತಿಯ ದೃಷ್ಟಿಯಿಂದ ರಾಜ್ಯಮಟ್ಟದ ಶ್ರೇಷ್ಠ ಸಂಪನ್ಮೂಲ ವ್ಯಕ್ತಿಗಳನ್ನು ಆಹ್ವಾನಿಸಲಾಗುತ್ತದೆ. ಶಂಕರ ಶ್ಯಾನಭಾಗ್, ಎಂ ಎಸ್ ಗಿರಿಧರ್, ರಾಮಕೃಷ್ಣ ಕಾಟುಕುಕ್ಕೆ, ಉಷಾ ಹೆಬ್ಬಾರ್, ಸಂಗೀತಾ ಬಾಲಚಂದ್ರ, ಮನೋರಮಾ ತೋಳ್ಪಡಿ ತ್ತಾಯ ಮೊದಲಾದವರು ತರಬೇತಿ ನೀಡುತ್ತಿದ್ದಾರೆ. ವಿಶೇಷವಾಗಿ ಕುಣಿತ ಭಜನೆಗೆ ರಮೇಶ್ ಕಲ್ಮಾಡಿ, ಶಂಕರ್, ಕುಮಾರಿ ಚೈತ್ರ ತರಬೇತಿ ನೀಡುತ್ತಾರೆ.
ಕಮ್ಮಟದ ಸಮಾರೋಪದ ದಿನ ಅವಿಭಜಿತ ಜಿಲ್ಲೆಯ ಆಯ್ದ ೩೦೦ ಭಜನಾ ತಂಡಗಳ ೫ ಸಾವಿರಕ್ಕೂ ಹೆಚ್ಚು ಪಟುಗಳಿಂದ ಶೋಭಾಯಾತ್ರೆ ಹಾಗೂ ಶ್ರೀ ಕ್ಷೇತ್ರ ಧರ್ಮಸ್ಥಳದ ಅಮೃತವರ್ಷಿಣಿ ಸಭಾಭವನದಲ್ಲಿ ಭಜನೆಯೊಂದಿಗೆ ನೃತ್ಯ ಭಜನೆ ನಡೆಯು ತ್ತದೆ. ಕಣ್ಮನ ಸೆಳೆಯುವ ಈ ಭಜನೋತ್ಸವದಲ್ಲಿ ಕಳೆದ ೨೪ ವರ್ಷಗಳಲ್ಲಿ ೭೫ ಸಾವಿರಕ್ಕಿಂತ ಹೆಚ್ಚು ಭಜನಾಪಟುಗಳು ಭಾಗವಹಿ ಸಿರುವುದು ವಿಶೇಷ.
ಗ್ರಾಮೀಣಭಾಗದಲ್ಲಿ ನಡೆಯುವ ದೇವಸ್ಥಾನದ ಉತ್ಸವಗಳು, ಗಣೇಶೋತ್ಸವ, ಕೃಷ್ಣಾಷ್ಟಮಿ ಮೊದಲಾದಂತಹ ಪರ್ವದಿನಗಳಲ್ಲಿ ಮೊದಲೆಲ್ಲ ಕರ್ಕಶ ಧ್ವನಿಯ, ಡಿಜೆ ಮುಖಾಂತರದ ಚಿತ್ರಗೀತೆಯೋ, ರಸಮಂಜರಿಯೋ ನಡೆಯುತ್ತಿತ್ತು. ಅಲ್ಲೆಲ್ಲ ಇವತ್ತು
ಭಜನೆಯ ಮೆರವಣಿಗೆ ಹಾಗೂ ಭಜನೆಯ ಮುಖಾಂತರ ಸಾತ್ವಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಸಣ್ಣ ಸಣ್ಣ ಮಕ್ಕಳಿಂದ ಪ್ರಾರಂಭಮಾಡಿ ಹಿರಿಯರವರೆಗೆ ಎಲ್ಲರೂ ಬಹಳ ಸಂತೋಷದಿಂದ ಕುಳಿತ ಮತ್ತು ಕುಣಿತ ಭಜನೆಯಲ್ಲಿ ಭಾಗವಹಿಸುತ್ತಿದ್ದಾರೆ.
ಇದಲ್ಲದೆ ಮನೆಮನೆಗಳಲ್ಲಿ ಇದರ ಪ್ರಭಾವ ಆಗುತ್ತಿರುವುದನ್ನು ನಾವು ಗಮನಿಸಿದ್ದೇವೆ. ಮನೆಗಳಲ್ಲಿ ನಡೆಯುವ ಧಾರ್ಮಿಕ, ಮದುವೆ ಇತ್ಯಾದಿ ಉತ್ಸವ ಕಾರ್ಯಕ್ರಮಗಳಲ್ಲೂ ಭಜನಾ ತಂಡಗಳನ್ನು ಆಹ್ವಾನಿಸಲಾಗುತ್ತಿದೆ. ದಿನಚರಿಗೆ ಅಧ್ಯಾತ್ಮಿಕ ಸ್ಪರ್ಶ ನೀಡಿ, ಸಮಾಜದಲ್ಲಿ ಪರಿವರ್ತನೆ ತರುವ ಮಾರ್ಗವಾಗಿದೆ.
ವಾರದ ಭಜನೆಯಲ್ಲಿ ಯಾವುದೇ ಜಾತಿ-ಧರ್ಮ-ಭಾಷೆ ತಾರತಮ್ಯವಿಲ್ಲದೆ ಎಲ್ಲರೂ ಭಾಗವಹಿಸುತ್ತಾರೆ. ಕಾರ್ಯಕ್ರಮವು ರಾಜಕೀಯ ರಹಿತವಾಗಿ ನಡೆಯುತ್ತವೆ. ಇವತ್ತು ಭಜನಾ ಮಂಡಳಿಗಳಲ್ಲಿ ಶೇ.೪೦ರಷ್ಟು ಮಹಿಳೆಯರು ಭಾಗವಹಿಸುತ್ತಿದ್ದಾರೆ.
ಸಮಾಜದಲ್ಲಿನ ಮೂಢನಂಬಿಕೆ, ಅಜ್ಞಾನ, ದುರ್ವ್ಯಸನಗಳನ್ನು ದೂರಮಾಡಿ ಸಾತ್ವಿಕ ಜೀವನಕ್ಕೆ ಪ್ರೇರಣೆಯಾಗಿದೆ. ನೈತಿಕ ಮೌಲ್ಯ ವೃದ್ಧಿಸಿ, ಸಂಸ್ಕಾರವನ್ನು ಬೆಳೆಸುತ್ತಿದೆ. ವಿಭಜನೆ ಮನಸ್ಥಿತಿ ದೂರಮಾಡಿ, ಸಂಘಟಿತ, ಸಹಾಕರಿ ಸಮಾಜ ನಿರ್ಮಾಣ ವಾಗುತ್ತಿದೆ.
ಭಜಿಸು, ಜಪಿಸು ಹಾಗೂ ನೆನೆಸು ಎಂಬ ಮೂರು ತತ್ವ ದಡಿ ಮೂಲನಂಬಿಕೆಗಳ ತಳಹದಿಯಲ್ಲಿ ಜೀವನವನ್ನು ರೂಪಿಸ ಲಾಗುತ್ತಿದೆ. ಭಜನೆ ಒಂದು ದೊಡ್ಡ ತಪಸ್ಸು. ಶುದ್ಧ ಭಾವನೆಗಳಿಂದ ಸ್ವಸ್ಥ ಮನಸ್ಸು, ಸ್ವಸ್ಥ ಮನಸ್ಸುಗಳಿಂದ ಸ್ವಚ್ಛ ಪರಿಸರ, ಸ್ವಚ್ಛ ಪರಿಸರದ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ವೀರೇಂದ್ರ ಹೆಗ್ಗಡೆಯವರ ಸಂಕಲ್ಪ.