Sunday, 24th November 2024

ತಿರುಗಾಲು ತಿಪ್ಪನ ವಿದೇಶ ಪ್ರವಾಸ, ಭಾಲ್ಕಿ ಮಠದ ವಾಸ್ತವ್ಯ !

ನೂರೆಂಟು ವಿಶ್ವ

vbhat@me.com

ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ. ನಿಜಾಮರ ಆಳ್ವಿಕೆಯಲ್ಲಿ ಉರ್ದು ಪ್ರಭಾವ ಹಾಗೂ ಕನ್ನಡಕ್ಕಿಂತಲೂ ಮರಾಠಿ ಪ್ರಭಾವ ಹೆಚ್ಚಿದ್ದ ಸಮಯದಲ್ಲಿ, ಅಲ್ಲಿ ಕನ್ನಡ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಿ, ಹಲವು ಸಮಸ್ಯೆಗಳ ನಡುವೆಯೇ ಹೋರಾಟಗಳನ್ನು ಮಾಡಿ, ಕನ್ನಡ ಶಾಲೆಗಳನ್ನು ಸ್ಥಾಪಿಸಿ ಯಶಸ್ವಿಗೊಳಿಸಿದ ಶ್ರೇಯಸ್ಸು ಮಠದ ಸಂಸ್ಥಾಪಕ ರಾದ ಚನ್ನಬಸವ ಪಟ್ಟದ್ದೇವರುಶ್ರೀಗಳಿಗೆ ಸಲ್ಲುತ್ತದೆ.

ಮೋದಿಯವರ ಬಗ್ಗೆ ಇರುವಂತೆ, ನನ್ನ ಬಗ್ಗೆಯೂ ಇರುವ ಒಂದು ಆರೋಪವೆಂದರೆ, ಆಗಾಗ ವಿದೇಶ ಪ್ರಯಾಣ ಮಾಡುತ್ತೇನೆ ಅನ್ನೋದು. ಹಾಗಂತ ಈ ಆರೋಪದಲ್ಲಿ ಸತ್ಯಾಂಶ ಇಲ್ಲವೆಂದಲ್ಲ. ಆದರೆ ಈ ಆರೋಪಕ್ಕೆ ಕಾಣದ ಮತ್ತೊಂದು ಮಗ್ಗುಲು ಇದೆ.
ಅದೇನೆಂದರೆ, ನಾನು ವಿದೇಶ ಪ್ರಯಾಣ ಮಾಡುವ ಹತ್ತು ಪಟ್ಟು ರಾಜ್ಯ ಮತ್ತು ರಾಷ್ಟ್ರ ಪ್ರವಾಸ ಮಾಡುತ್ತೇನೆಂಬುದು.

ಆದರೆ ಅದು ಯಾರ ಗಮನಕ್ಕೂ ಬರುವುದಿಲ್ಲ. ಈ ಮಾತು ಮೋದಿಯವರಿಗೂ ಅನ್ವಯ. ಮೂರು ತಿಂಗಳ ಕಾಲ ಯಾವ ದೇಶಕ್ಕೂ ಹೋಗದೇ ಒಂದೆಡೆ ಇರಲು ನನಗೆ ಸಾಧ್ಯವಿಲ್ಲ. ಕೋವಿಡ್‌ಗಿಂತ ಮುನ್ನ ನಾನು ತಿಂಗಳಿಗೊಮ್ಮೆ ವಿದೇಶಕ್ಕೆ ಹೋಗಿದ್ದುಂಟು. ಒಮ್ಮೆ ಒಂದೇ ತಿಂಗಳಲ್ಲಿ ಮೂರು ಸಲ ವಿದೇಶಕ್ಕೆ ಹೋಗಿ ಬಂದಿದ್ದುಂಟು. ಬೆಳಗ್ಗೆ ವಿಮಾನ ನಿಲ್ದಾಣದಿಂದ ಮನೆಗೆ ಬಂದು, ಸಾಯಂಕಾಲ ಸೂಟ್ ಕೇಸ್ ಕಟ್ಟಿಕೊಂಡು ಇನ್ನೊಂದು ದೇಶಕ್ಕೆ ಹಾರಿದ್ದುಂಟು.

ಪ್ರತಿಸಲ ವಿದೇಶ ಪ್ರವಾಸದಲ್ಲಿ ನನ್ನ ಭಾರವಾದ ಲಗೇಜ್ ಅಂದ್ರೆ ಆರು ಪುಸ್ತಕಗಳ ದಪ್ಪ ಪಾಸ್ ಪೋರ್ಟ್! ಈಗ ಅದರ ಗಾತ್ರವನ್ನು
ಎರಡೇ ಪುಸ್ತಕಕ್ಕೆ ಇಳಿಸಿಕೊಂಡಿರುವುದು ಬೇರೆ ಮಾತು. ನನ್ನ ಕೆಲಸ, ಸಂಪರ್ಕ, ಸಂಬಂಧ, ಕಟ್ಟುಪಾಡು, ವರಾತ, ಹವ್ಯಾಸ, ಅಭಿರುಚಿಗಳು ನನ್ನನ್ನು ಮೂನ್ನೂರೈವತ್ತಕ್ಕೂ ಹೆಚ್ಚು ಸಲ ವಿದೇಶಯಾನ ಮಾಡುವಂತೆ ಮಾಡಿವೆ. ರಾಷ್ಟ್ರಪತಿ, ಪ್ರಧಾನಿ, ವಿದೇಶಾಂಗ ಸಚಿವರ ಜತೆ ಸುತ್ತಿದ್ದಲ್ಲದೇ, ನಾನೊಬ್ಬನೇ ಸುತ್ತಿದ ದೇಶಗಳು ಕೂಡ ಅವೆಷ್ಟೋ. ಪ್ರತಿ ಸಲ ವಿದೇಶಕ್ಕೆ ಹೋದಾಗಲೂ ನಾನು ಸುಮ್ಮನೆ ಬಂದಿಲ್ಲ ಅಥವಾ ಮೋಜು ಮಾಡಿ ಬಂದಿಲ್ಲ, ಮೋದಿಯವರ ಹಾಗೆ.

ಅಲ್ಲಿಂದಲೇ ಪತ್ರಿಕೆಗಳಿಗೆ ದಂಡಿಯಾಗಿ ಬರೆದಿದ್ದೇನೆ. ಕೆಲವೊಮ್ಮೆ ಭಾರತದ ಕಾಲಮಾನದ ಪ್ರಕಾರ, ಡೆಡ್‌ಲೈನ್ ಒಳಗೆ ಬರೆದು
ಕಳಿಸಲು ಪಟ್ಟ ಹರಸಾಹಸ ಅಷ್ಟಿಷ್ಟಲ್ಲ. ‘ಕನ್ನಡಪ್ರಭ’ದಲ್ಲಿದ್ದಾಗ ಇಸ್ರೇಲಿನ ಕೃಷಿ ಮೇಳದಲ್ಲಿ ಭಾಗವಹಿಸಲು ಹೋದಾಗ, ಒಂದೇ ದಿನ ನಾಲ್ಕು ಪೂರ್ತಿ ಪುಟಗಳಿಗೆ ಆಗುವಷ್ಟು ಬರೆದು ಕಳಿಸಿದ್ದೆ. ಹೀಗಾಗಿ ನನ್ನ ವಿದೇಶ ಪ್ರವಾಸಗಳೆಲ್ಲ ಒಂದಲ್ಲ ಒಂದು ರೀತಿಯಲ್ಲಿ ಲಿಖಿತ ವಾಗಿ ದಾಖಲಾಗಿವೆ. ಯಾವ ದೇಶಕ್ಕೂ ಸುಮ್ಮನೆ ಹೋಗಿ, ಸುಮ್ಮನೆ ಬಂದಿಲ್ಲ.

ಹೀಗಾಗಿ ನಾನು ವಿದೇಶ ಪ್ರವಾಸಕ್ಕೆ ಹೋಗುವುದು ಗೊತ್ತಾಗುತ್ತದೆ. ಈ ಕಾರಣದಿಂದ ನನ್ನ ವಿದೇಶ ಪ್ರವಾಸ, ಬೇಕೋ-ಬೇಡವೋ, ನಾಲ್ಕು ಜನರಿಗೆ ಗೊತ್ತಾಗದೇ ಹೋಗುವುದಿಲ್ಲ. ಇದಕ್ಕಿಂತ ಹೆಚ್ಚು ನಾನು ಕರ್ನಾಟಕವನ್ನೂ ತಿರುಗುತ್ತೇನೆ. ಸಾಮಾನ್ಯವಾಗಿ ನಾನು ನನ್ನ ಮನೆಯಲ್ಲಿ ನಾಲ್ಕು ದಿನ ಸತತ ಮಲಗುವುದಿಲ್ಲ. ಐದನೇ ದಿನ ಕಾಲಿನ ಚಕ್ರ ಯಾವುದೋ ಊರಿನತ್ತ ಉರುಳಲಾ ರಂಭಿಸುತ್ತದೆ.

ಕರ್ನಾಟಕದ ಯಾವ ತಾಲೂಕನ್ನೂ ನಾನು ಬಿಟ್ಟವನಲ್ಲ. ನಕಾಶೆಯಲ್ಲಿರುವ ಎಲ್ಲ ತಾಲೂಕು, ಬಹುತೇಕ ಹೋಬಳಿಯನ್ನೆಲ್ಲ ತುಳಿದು, ಅಲ್ಲಿನ ನೀರು ಕುಡಿದು ಬಂದಿದ್ದೇನೆ. ಪುಸ್ತಕ ಬಿಡುಗಡೆ ನೆಪದಲ್ಲಿ ಹೋಗದ ಊರುಗಳಿಲ್ಲ. ಅದರಲ್ಲೂ ‘ವಿಜಯ ಕರ್ನಾಟಕ’ದಲ್ಲಿದ್ದಾಗ ಪತ್ರಿಕೆಯ ಪ್ರಸಾರ ಹೆಚ್ಚಳ, ಓದುಗರ ಸಂವಾದ, ಇನ್ನಿತರ ಕಾರ್ಯಕ್ರಮ ನೆಪದಲ್ಲಿ, ಯಡಿಯೂರಪ್ಪನವರು ರಾಜ್ಯ ಪ್ರವಾಸ ಮಾಡಿ ದಂತೆ, ರಾಜ್ಯದ ಉದ್ದಗಲಕ್ಕೂ ಹಲವು ಸಲ ಸಂಚರಿಸಿದ್ದೇನೆ.

ರಾಜ್ಯದ ಯಾವ ಊರಿಗೆ ಹೋದರೂ, ಎರಡು ಹೊತ್ತು ಊಟಕ್ಕೆ ಸಂಚಕಾರವಿಲ್ಲ. ಅಕ್ಕರೆಯಿಂದ ಪ್ರೀತಿಯನ್ನು ಉಣಿಸುತ್ತಾರೆ.
ಅಕ್ಷರಗಳ ಅಕ್ಕರೆ ಎಲ್ಲ ಸಂಬಂಧವನ್ನೂ ಮೀರಿದ್ದು ಎಂದು ಅನೇಕ ಸಲ ಮನವರಿಕೆಯಾಗಿದೆ. ಮೂರು ವರ್ಷಗಳ ಹಿಂದೆ, ಶಿವಮೊಗ್ಗ ದಿಂದ ತೀರ್ಥಹಳ್ಳಿಗೆ ಹೋಗುವಾಗ ರಾತ್ರಿ ಎಂಟೂವರೆ ಸಮಯದಲ್ಲಿ ನನ್ನ ಕಾರು ಕೆಟ್ಟು ಹೋಯಿತು. ಸನಿಹದಲ್ಲಿ ಯಾವ ಮನೆ
ಯಾಗಲಿ, ಅಂಗಡಿಯಾಗಲಿ ಇರಲಿಲ್ಲ. ದಾರಿಯಲ್ಲಿ ಬರುತ್ತಿರುವ ಕಾರಿಗೆ ಅಡ್ಡ ಕೈ ಮಾಡಿದೆ. ಕಾರು ನನ್ನ ಬಳಿ ನಿಂತಿತು.

‘ಭಟ್ರಲ್ಲವಾ?’ ಎಂದು ಕೇಳಿದರು. ನಾನು ‘ಹೌದು’ ಎಂದೆ. ಕಾರಿನಿಂದ ಇಳಿದ ಮಧ್ಯವಯಸ್ಕ ದಂಪತಿ, ‘ಭಟ್ರೇ, ನಿಮ್ಮ ಕಾರು ಕೆಟ್ಟು ನಿಂತಿದ್ದು ಒಳ್ಳೆಯದೇ ಆಯ್ತು. ಇಲ್ಲದಿದ್ದರೆ ನೀವು ನಮ್ಮ ಮನೆಗೆ ಬರ್ತಾ ಇದ್ರಾ? ಹತ್ತಿರದ ನಮ್ಮ ಮನೆ ಇದೆ. ಇಂದು ರಾತ್ರಿ ನಮ್ಮ ಮನೆಯಲ್ಲಿ ಉಳಿಯಿರಿ, ನಾಳೆ ಕಾರು ರಿಪೇರಿ ಮಾಡಿಸಿ ಕೊಡುವ ಜವಾಬ್ದಾರಿ ನಮ್ಮದು. ಬನ್ನಿ ಹೋಗೋಣ’ ಎಂದು ಆ ದಂಪತಿ ತಮ್ಮ
ಮನೆಗೆ ಕರೆದುಕೊಂಡು ಹೋದರು.

‘ವಿಜಯ ಕರ್ನಾಟಕ’ ದಿನಗಳಿಂದ ಅವರು ನನ್ನ ಓದುಗರಂತೆ. ಅವರು ಅಮರೇಶ್ ಮತ್ತು ಪುಷ್ಪಾ. ಅವರ ಪ್ರೀತಿಯನ್ನು ಮರೆಯು ವಂತೆಯೇ ಇಲ್ಲ. ಈ ರೀತಿ ಕರ್ನಾಟಕದಲ್ಲಿ ಎಲ್ಲಿಯೇ ಕಾರು ಕೆಟ್ಟು ನಿಂತರೂ, ಪೊರೆಯುವ ಅಕ್ಷರ ಜೀವಿಗಳು ಪ್ರತಿ ಊರಿನಲ್ಲಿದ್ದಾರೆ. ಅವರ ಪ್ರೀತಿ ಮಣ ಭಾರ. ಹೀಗಾಗಿ ಯಾವ ಊರಿನಲ್ಲಿ ಕಾರ್ಯಕ್ರಮಕ್ಕೆ ಕರೆದರೂ ಇಲ್ಲ ಅಂತ ಹೇಳಲು ಆಗುವುದಿಲ್ಲ. ಯಾರೂ ಸುಖಾಸುಮ್ಮನೆ ಕರೆಯುವುದಿಲ್ಲ. ಪ್ರೀತಿ, ಅಭಿಮಾನ ಇರುವಲ್ಲಿ ಮಾತ್ರ ಇಂಥ ಆಹ್ವಾನಗಳು ಸಿಗುತ್ತವೆ. ಆ ನೆಪ ಮಾಡಿಕೊಂಡು
ಹಿಂದೆ-ಮುಂದೆ ಯೋಚಿಸದೇ ಹೊರಟು ಬಿಡುತ್ತೇನೆ. ಇದು ನನ್ನನ್ನು ಕಳೆದ ಎರಡು ದಶಕಗಳಲ್ಲಿ ರಾಜ್ಯದೆಡೆ ಕರೆದುಕೊಂಡು ಹೋಗಿದೆ, ಹಲವು ಬಾರಿ ಸುತ್ತು ಹಾಕಿಸಿದೆ.

ಬೀದರ ಜಿಯ ಆಳಂದ ತಾಲೂಕಿನಲ್ಲಿ ಇಕ್ಕಳಕಿ ಎಂಬ ಪುಟ್ಟ ಊರಿದೆ. ಬೆಂಗಳೂರಿನಿಂದ ಸುಮಾರು ೭೪೦ ಕಿಮಿ ಅಥವಾ ಹದಿಮೂರು ಗಂಟೆ ದೂರದಲ್ಲಿದೆ. ಸುಮಾರು ನಾಲ್ಕು ವರ್ಷಗಳ ಹಿಂದೆ, ಅಲ್ಲಿನ ರಾಜು ಪಾಟೀಲ ಮತ್ತು ಸ್ನೇಹಿತರು ಕವನ ಸಂಕಲನ ಬಿಡುಗಡೆ ಕಾರ್ಯಕ್ರಮ ಇಟ್ಟುಕೊಂಡಿದ್ದರು. ತಮ್ಮ ಊರಿಗೆ ಬರಲೇಬೇಕು ಎಂದು ವರಾತಕ್ಕೆ ಬಿದ್ದರು. ಎಂಥದೇ ಕಾರ್ಯಕ್ರಮವಾದರೂ,
ಪ್ರಧಾನ ಭಾಷಣಕಾರನಾದರೂ, ನಾನು ಮುಕ್ಕಾಲು ಗಂಟೆಗಿಂತ ಹೆಚ್ಚು ಮಾತಾಡುವುದಿಲ್ಲ. ಇದೇ ಕಾರಣ ಕೊಟ್ಟು ನುಣುಚಿಕೊಳ್ಳಲು ಪ್ರಯತ್ನಿಸಿದೆ.

ಅದಕ್ಕೆ ಆ ಸ್ನೇಹಿತರು, ‘ಹೌದು ಸಾರ್, ನೀವು ಅರ್ಧ ಗಂಟೆ ಭಾಷಣ ಮಾಡಲು ಎರಡು ದಿನ ವ್ಯಯಿಸಬೇಕು. ವಾಪಸ್ ಬಂದ ಬಳಿಕ, ಒಂದು ದಿನ ದಣಿವಾರಿಸಿಕೊಳ್ಳಲು ಬೇಕು. ನಮ್ಮ ಕಾರ್ಯಕ್ರಮಕ್ಕಾಗಿ ನಿಮ್ಮ ಮೂರು ದಿನ ಹೋಗುತ್ತದೆ. ಅಷ್ಟೇ ಅಲ್ಲ, ಆ ಕಾರ್ಯಕ್ರಮ ದಲ್ಲಿ ಹೆಚ್ಚೆಂದರೆ, ಇನ್ನೂರು ಜನ ಭಾಗವಹಿಸಬಹುದು. ಹೀಗಾಗಿ ನಿಮ್ಮ ದೃಷ್ಟಿಯಲ್ಲಿ ಈ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಅಷ್ಟೇನೂ ಆಕರ್ಷಕವೆನಿಸಲಿಕ್ಕಿಲ್ಲ. ಆದರೆ ನಾವು ಇನ್ನೂರು ಜನರೂ ನಿಮ್ಮನ್ನು ಇಷ್ಟಪಡುವವರು, ನಿಮ್ಮ ಬರಹಗಳನ್ನು ಓದಿಕೊಂಡು ಬಂದವರು. ನೀವು ಬರದಿದ್ದರೂ ನಾವು ನಿಮ್ಮನ್ನು, ನಿಮ್ಮ ಬರಹಗಳನ್ನು ಇಷ್ಟಪಡುವುದನ್ನು ನಿಲ್ಲಿಸುವುದಿಲ್ಲ.

ನೀವು ನಮ್ಮ ಮನಸ್ಸಿನಲ್ಲಿ ಹಾಗೆಯೇ ಇರುತ್ತೀರಿ’ ಎಂದು ಹೇಳಿದರು. ನಾನು ಮರು ಮಾತಾಡದೇ, ‘ಖಂಡಿತವಾಗಿಯೂ ಬರ್ತೇನೆ. ನನಗಾಗಿ ಏನೂ ವ್ಯವಸ್ಥೆ ಮಾಡುವುದು ಬೇಡ. ನನ್ನ ಖರ್ಚಿನಲ್ಲಿ ಬರುತ್ತೇನೆ’ ಎಂದು ಹೇಳಿದೆ. ಅವರಿಗೆ ಮಾತು ಕೊಟ್ಟಂತೆ, ಇಕ್ಕಳಕಿ ಊರಿಗೆ ಹೋದೆ. ಆ ಕಾರ್ಯಕ್ರಮದಲ್ಲಿ ಇನ್ನೂರೇ ಜನ ಪಾಲ್ಗೊಂಡಿದ್ದರು. ಆದರೆ ಅವರು ತೋರಿದ ಪ್ರೀತಿ, ಅಭಿಮಾನ ಮತ್ತು ಗೌರವವನ್ನು ಮರೆಯುವಂತೆಯೇ ಇಲ್ಲ. ಒಂದು ವೇಳೆ ಯಾವುದೋ ನೆಪ ಹೇಳಿ, ಆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳದಿದ್ದರೆ, ನನ್ನ ಜೀವ
ನದ ಅತ್ಯಂತ ಸ್ಮರಣೀಯ ಕ್ಷಣಗಳನ್ನು ಕಳೆದುಕೊಳ್ಳುತ್ತಿದ್ದಾನೇನೋ ಎಂದು ಈಗಲೂ ಅನಿಸುತ್ತದೆ.

ಹೀಗಾಗಿ ಯಾವುದೇ ಊರಿಗೆ ಹೋಗುವ ಅವಕಾಶ ತೆರೆದುಕೊಂಡರೆ, ಇಲ್ಲ ಎಂದು ಹೇಳಲು ಆಗುವುದಿಲ್ಲ.  A journey is measured in friends rather than miles ಎನ್ನುವುದನ್ನು ನಾನು ಕಂಡುಕೊಂಡಿರುವುದು. ಪ್ರವಾಸವೊಂದೇ ನನ್ನನ್ನು ಕ್ರಿಯಾ ಶೀಲವಾಗಿಡಬಲ್ಲದು. I want to travel because I want to forget my password ಎಂದು ನಾನು ಆಗಾಗ ತಮಾಷೆಗೆ ಹೇಳುತ್ತಿರುತ್ತೇನೆ. ಪ್ರವಾಸ ಕೊಡುವ ಅನುಭವವನ್ನು ಮತ್ಯಾವುದೂ ಕೊಡಲಿಕ್ಕಿಲ್ಲ. ಹೀಗಾಗಿ ನಮ್ಮ ರಾಜ್ಯ, ರಾಷ್ಟ್ರ ಅಥವಾ ವಿದೇಶವೇ ಇರಬಹುದು, ಒಂದು ಸಣ್ಣ ನೆಪ ಸಿಕ್ಕರೂ ಕೈಬೀಸಿಕೊಂಡು ಹೊರಟು ಬಿಡುತ್ತೇನೆ.

ನಾನು ಬರೀ ವಿದೇಶಕ್ಕೆ ಮಾತ್ರ ಹೋಗುತ್ತೇನೆ ಎಂದು ಭಾವಿಸಬೇಕಿಲ್ಲ. ಕಳೆದ ಇಪ್ಪತ್ತೆಂಟು ವರ್ಷಗಳಿಂದ ನಾನು ವಾಸಿಸುತ್ತಿರುವ ಬೆಂಗಳೂರಿನ ರಾಜರಾಜೇಶ್ವರಿನಗರವನ್ನು ನಿಮಗೆ ತೋರಿಸುತ್ತೇನೆ ಅಂದರೂ ಸೈ, ನಾನು ರೆಡಿ. ‘ವೀರಲೋಕ’ ಪ್ರಕಾಶನದ ಸ್ನೇಹಿತ ವೀರಕಪುತ್ರ ಶ್ರೀನಿವಾಸ, ತಮ್ಮ ಪ್ರಕಾಶನದಿಂದ ಪ್ರಕಟಿಸಿದ ಹತ್ತು ಪುಸ್ತಕಗಳ ಮರುಬಿಡುಗಡೆ ಕಾರ್ಯಕ್ರಮವನ್ನು ಬೀದರಿನಲ್ಲಿ
ಸಂಘಟಿಸುತ್ತಿದ್ದೇನೆಂದು ಮೈಸೂರಿನ ಕಾರ್ಯಕ್ರಮದಲ್ಲಿ ಘೋಷಿಸಿದಾಗ, ನಾನು ತಕ್ಷಣ ಒಪ್ಪಿಕೊಂಡೆ.

ಬೀದರಿಗೆ ಹೋಗದೇ ಎಂಟು ತಿಂಗಳುಗಳಾಗಿದ್ದವು. ನನ್ನ ದೃಷ್ಟಿಯಲ್ಲಿ ಅದು ಸುದೀರ್ಘ (long gap) ಅಂತರ. ಬೀದರಿಗೆ ಹೋಗಲು ನಿರ್ಧರಿಸಿದಾಗ, ನನಗೆ ತಕ್ಷಣ ನೆನಪಾಗಿದ್ದು ಭಾಲ್ಕಿಯಲ್ಲಿರುವ ಹಿರೇಮಠ ಸಂಸ್ಥಾನದ ಡಾ.ಬಸವಲಿಂಗ ಪಟ್ಟದ್ದೇವರು ಮತ್ತು ಕಿರಿಯ ಸ್ವಾಮೀಜಿಯವರಾದ ಗುರುಬಸವ ಪಟ್ಟದ್ದೇವರು. ‘ನನಗೆ ಬೀದರಿನಲ್ಲಿ ವಾಸ್ತವ್ಯದ ಯಾವ ವ್ಯವಸ್ಥೆಯನ್ನೂ ಮಾಡಬೇಡಿ, ನಾನು ಭಾಲ್ಕಿಯ ಹಿರೇಮಠಕ್ಕೆ ಹೋಗುತ್ತೇನೆ.

ಎಂಟು ತಿಂಗಳ ಹಿಂದೆ, ಆ ಮಠಕ್ಕೆ ಹೋದಾಗ ಕಿರಿಯ ಸ್ವಾಮೀಜಿಯವರಾದ ಗುರುಬಸವ ಪಟ್ಟದ್ದೇವರು ಅವರಿಗೆ ‘ಎರಡು ದಿನ ತಮ್ಮೊಂದಿಗೆ ಕಳೆಯಲು ಬರುತ್ತೇನೆ ಎಂದು ಹೇಳಿದ್ದೆ’ ಎಂದು ವೀರಕಪುತ್ರ ಶ್ರೀನಿವಾಸ ಅವರಿಗೆ ಹೇಳಿದೆ. ಅವರು ಬೀದರಿನಲ್ಲಿ ಉತ್ತಮ ವಾಸ್ತವ್ಯ ಮಾಡಿದ್ದರು. ಅಲ್ಲದೇ ನನ್ನ ಸ್ನೇಹಿತರಿಬ್ಬರು ಸಹ ತಮ್ಮ ಗೆಸ್ಟ್ ಹೌಸಿನಲ್ಲಿ ಉಳಿಯಲು ವರಾತ ಮಾಡಿದ್ದರು. ಆದರೆ ಹಿರೇಮಠ ಸಂಸ್ಥಾನದಲ್ಲಿ ಉಳಿಯಲು ನಿರ್ಧರಿಸಿದ್ದೆ. ಆನಂತರ ನಾನು ಬರುವ ವಿಷಯವನ್ನು ‘ವಿಶ್ವವಾಣಿ’ ಸಂಪಾದಕೀಯ ಸಲಹೆಗಾರ ಮತ್ತು ಸ್ನೇಹಿತರಾದ ನಂಜನಗೂಡು ಮೋಹನ್ ಅವರು, ಗುರುಬಸವ ಪಟ್ಟದ್ದೇವರು ಅವರಿಗೆ ತಿಳಿಸಿದಾಗ, ಅವರು ಹರ್ಷಚಿತ್ತರಾಗಿ ಸ್ಪಂದಿಸಿದರು.

ಬೆಂಗಳೂರಿನಿಂದ ಬೀದರ ದೂರವಿರಬಹುದು. ಗುಲ್ಬರ್ಗ ಮತ್ತು ಬೀದರ, ಬೆಂಗಳೂರಿನಲ್ಲಿರುವವರ ಪಾಲಿಗೆ punishment places  ಎಂದು ಕರೆಯಿಸಿಕೊಂಡಿರಬಹುದು. ಆದರೆ ಅಲ್ಲಿನ ಜನರ ಪ್ರೀತಿ ಮಾತ್ರ ಹತ್ತಿರ ಮತ್ತು ಆಪ್ತ. ಅವರಲ್ಲಿ ಬೆಂಗಳೂರಿನ ಕೃತಕತೆಯ ಲವಲೇಶವನ್ನೂ ಹುಡುಕಲು ಸಾಧ್ಯವಿಲ್ಲ. ಆ ದಿನ ನಾನು ಬೀದರಿನಲ್ಲಿ ಪುಸ್ತಕ ಮರುಬಿಡುಗಡೆ ಕಾರ್ಯಕ್ರಮದಲ್ಲಿ ಭಾಗವಹಿಸಿ, ಭಾಲ್ಕಿಯ ಹಿರೇಮಠಕ್ಕೆ ಹೋದಾಗ ರಾತ್ರಿ ಹನ್ನೊಂದು ಗಂಟೆ. ಗುರುಬಸವ ಪಟ್ಟದ್ದೇವರು ಸ್ವಾಮೀಜಿ, ಮಠದ ಪಡಸಾಲೆಯಲ್ಲಿ ಮಲಗಿದ್ದ ನೂರಾರು ಮಕ್ಕಳಿಗೆ ಹೊದಿಕೆ ಹೊದಿಸುತ್ತಿದ್ದರು.

‘ನೀವಾಗಿಯೇ ಮಠಕ್ಕೆ ಬರುತ್ತೇನೆ ಎಂದಿದ್ದು ನಮಗೆ ಬಹಳ ಸಂತಸವನ್ನುಂಟು ಮಾಡಿದೆ. ಅದು ನಿಮಗೆ ಮಠದ ಮೇಲಿರುವ ಪ್ರೀತಿಯನ್ನು ತೋರಿಸುತ್ತದೆ’ ಎನ್ನುತ್ತಲೇ ಸ್ವಾಮೀಜಿಯವರು ಸ್ವಾಗತಿಸಿದರು. ನಾವು ಊಟ ಮಾಡಿರಲಿಲ್ಲ. ಆ ರಾತ್ರಿ ಸ್ವಾಮೀಜಿ ಯವರು ಒಳ್ಳೆಯ ಭೋಜನ ಮಾಡಿಸಿದ್ದರು. ಮರುದಿನ ಬೆಳಗ್ಗೆ ಆರು ಗಂಟೆಗೆ ಗುರುಕುಲದಲ್ಲಿ ಉಪನ್ಯಾಸ. ಅಲ್ಲಿನ ಸಾವಿರಾರು
ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಉದ್ದೇಶಿಸಿ ಮಾತಾಡುವಂತೆ ಸ್ವಾಮೀಜಿಯವರು ಹೇಳಿದರು. ಜತೆಗೆ -.ಗು. ಹಳಕಟ್ಟಿಯವರ ಜಯಂತಿ ಕಾರ್ಯಕ್ರಮ. ಅಲ್ಲಿಯೂ ಉಪನ್ಯಾಸ ಮಾಡುವಂತೆ ಹೇಳಿದರು. ನಂತರ ತಮ್ಮ ಕ್ಯಾಂಪಸ್ಸಿನಲ್ಲಿ ಒಂದು ಸುತ್ತು ಹೊಡೆಸಿದರು. ಅನಾಥ ಮಕ್ಕಳ ಪೋಷಣೆ ಕೇಂದ್ರವನ್ನೂ ತೋರಿಸಿದರು.

ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಭಾಲ್ಕಿಯ ಹಿರೇಮಠ ಸಂಸ್ಥಾನಕ್ಕೆ ವಿಶೇಷ ಸ್ಥಾನಮಾನ. ನಾಡಿನ ಗುರುಸ್ಥಲ ಮಠಗಳಿಗೆ ಭಾಲ್ಕಿ ಮಠ ಮಾದರಿ. ನಿಜಾಮರ ಆಳ್ವಿಕೆಯಲ್ಲಿ ಉರ್ದು ಪ್ರಭಾವ ಹಾಗೂ ಕನ್ನಡಕ್ಕಿಂತಲೂ ಮರಾಠಿ ಪ್ರಭಾವ ಹೆಚ್ಚಿದ್ದ ಸಮಯದಲ್ಲಿ, ಅಲ್ಲಿ ಕನ್ನಡ ಭಾಷೆಯಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಕಂಕಣತೊಟ್ಟು, ಹಲವು ಸಮಸ್ಯೆಗಳ ನಡುವೆಯೇ ಹೋರಾಟಗಳನ್ನು ಮಾಡಿ, ಕನ್ನಡ ಶಾಲೆ ಗಳನ್ನು ಸ್ಥಾಪಿಸಿ ಯಶಸ್ವಿಗೊಳಿಸಿದ ಶ್ರೇಯಸ್ಸು ಮಠದ ಸಂಸ್ಥಾಪಕರಾದ ಚನ್ನಬಸವ ಪಟ್ಟದ್ದೇವರುಶ್ರೀಗಳಿಗೆ ಸಲ್ಲುತ್ತದೆ.

‘ನಡೆದಾಡುವ ದೇವರು’ ಎಂದೇ ಕರೆಯಿಸಿಕೊಂಡ ಅವರು, ನಿಜಾಮರ ಕಾಲದಲ್ಲಿ ಶಾಂತಿವರ್ಧಕ ಶಿಕ್ಷಣ ಸಂಸ್ಥೆ ಸ್ಥಾಪಿಸಿ ಕನ್ನಡ ಪ್ರಸಾರ ಮಾಡಿದವರು. ಉರ್ದು ಬೋರ್ಡು ಹಾಕಿ, ಕನ್ನಡ ಕಲಿಸಿದವರು. ಈ ಮಠವನ್ನು ‘ಕನ್ನಡದ ಮಠ’ ಎಂದೂ ಕರೆಯುವುದುಂಟು. ಅವರ ಕನ್ನಡ ಅಭಿಮಾನವನ್ನು ನೋಡಿ, ‘ಕನ್ನಡದ ಪಟ್ಟದೇವರು’ ಎಂದೂ ಕರೆಯುತ್ತಿದ್ದರಂತೆ. ಬಸವ ಮತ್ತು ಶರಣ ಚಳವಳಿಯ ಪ್ರಸಾರಕ್ಕೆ
ಕರ್ನಾಟಕ ಮಾತ್ರವಲ್ಲದೇ, ಮಹಾರಾಷ್ಟ್ರ, ಆಂಧ್ರ ಮತ್ತು ತೆಲಂಗಾಣ ರಾಜ್ಯಗಳಲ್ಲಿಯೂ ಅವಿರತವಾಗಿ ದುಡಿಯುತ್ತಿರುವ ಮಠ ಇದು. ಈ ಮಠಕ್ಕೆ ಉತ್ತಮ ನಾಯಕತ್ವವನ್ನು ನೀಡಿದವರು ಡಾ.ಬಸವಲಿಂಗ ಪಟ್ಟದ್ದೇವರು.

ಈಗ ಅವರ ಉತ್ತರಾಽಕಾರಿಯಾಗಿ ನಿಯುಕ್ತರಾಗಿರುವ ಗುರುಬಸವ ಪಟ್ಟದ್ದೇವರು, ತಮ್ಮ ಕ್ರಿಯಾಶೀಲತೆ ಮತ್ತು ಮಠನಿಷ್ಠೆಯಿಂದ
ಅಲ್ಪಕಾಲದ ಭರವಸೆ ಮೂಡಿಸಿzರೆ. ಹಿರೇಮಠ ಸಂಸ್ಥಾನದ ಸ್ವಾಮೀಜಿಗಳ ಸಾನ್ನಿಧ್ಯದಲ್ಲಿ ಕಳೆದ ಕ್ಷಣಗಳು ಧನ್ಯತೆ ಮೂಡಿಸುವಂಥದ್ದು. ಸುಮ್ಮನೆ ಪ್ರವಾಸದ ಬೆನ್ನೇರಿ ಹೊರಟುಬಿಡಬೇಕು. ಸಿಗುವವರೆಲ್ಲ ಶಿರ ತುಂಬಾ ಪ್ರೀತಿ, ಅಭಿಮಾನ ಹೊರಿಸಿ ಕಳಿಸುತ್ತಾರೆ.