ರಾಜಬೀದಿ
ವಿನಾಯಕ ಮಠಪತಿ
ಭಾರತೀಯ ರಾಜಕೀಯ ಇತಿಹಾಸದಲ್ಲಿ ಅದೆಷ್ಟೋ ನಾಯಕರು ಬಂದು ಹೋಗಿದ್ದಾರೆ; ಆದರೆ ಜನಮಾನಸದಲ್ಲಿ ಉಳಿದಿರುವ ಬೆರಳೆಣಿಕೆಯಷ್ಟು ನಾಯಕರಲ್ಲಿ
ಆಡ್ವಾಣಿ ಒಬ್ಬರು. ರಾಷ್ಟ್ರೀಯತೆ ಮತ್ತು ಭಾರತ ಸಂಸ್ಕೃತಿಯೇ ಜೀವಾಳ ಎಂಬ ಪರಿಕಲ್ಪನೆ ಇಟ್ಟುಕೊಂಡು ಸುದೀರ್ಘಕಾಲ ಬಿಜೆಪಿ ರಥವನ್ನು ಎಳೆದ ಸಾರಥಿ ಆಡ್ವಾಣಿ.
ಅದು ೧೯೫೭ರ ಕಾಲಘಟ್ಟ. ದೇಶಾದ್ಯಂತ ಜನಸಂಘದ ಪ್ರಭಾವ ಕೊಂಚ ಏರು ಮುಖದಲ್ಲೇ ಸಾಗಿತ್ತು. ಆಗಲೇ ಅಟಲ್ ಬಿಹಾರಿ ವಾಜಪೇಯಿ ಲೋಕಸಭೆ
ಪ್ರವೇಶಿಸಿದ್ದರು. ಈ ಸಂದರ್ಭದಲ್ಲಿ ಪಕ್ಷದ ದೆಹಲಿ ಕಚೇರಿಯ ಕಾರ್ಯಚಟುವಟಿಕೆ ನೋಡಿಕೊಳ್ಳಲು ಸಮರ್ಥರ ಅವಶ್ಯಕತೆ ಎದುರಾದಾಗ, ಜನಸಂಘದ ಅಂದಿನ ಅಧ್ಯಕ್ಷ ಪಂಡಿತ್ ದೀನದಯಾಳ್ ಉಪಾಧ್ಯಾಯರಿಗೆ ತಕ್ಷಣವೇ ಹೊಳೆದ ಹೆಸರು ತರುಣ ಲಾಲ್ ಕೃಷ್ಣ ಆಡ್ವಾಣಿಯವರದ್ದು. ಅಲ್ಲಿಂದ ಪ್ರಾರಂಭವಾದ ಅವರ ರಾಜಕೀಯ ರಥಯಾತ್ರೆ ಮಾರ್ಗ ಮಧ್ಯದಲ್ಲಿ ಅವರಿಗೆ ‘ಬಿಜೆಪಿ ಭೀಷ್ಮ’ ಎಂಬ ಅಭಿದಾನವನ್ನು ಕರುಣಿಸಿದ್ದರ ಜತೆಗೆ ‘ಭಾರತ ರತ್ನ’ ಪುರಸ್ಕಾರಕ್ಕೆ ಅವರು ಪಾತ್ರರಾಗುವವರೆಗೆ ಸಾಗಿಬಂದಿದ್ದು ಒಂದು ರೋಚಕ ಪಯಣವೇ ಸರಿ.
ಭಾರತೀಯ ರಾಜಕೀಯ ಇತಿಹಾಸದಲ್ಲಿ ಅದೆಷ್ಟೋ ನಾಯಕರು ಬಂದು ಹೋಗಿದ್ದಾರೆ; ಆದರೆ ಜನಮಾನಸದಲ್ಲಿ ಉಳಿದಿರುವ ಬೆರಳೆಣಿಕೆ ಯಷ್ಟು ನಾಯಕರಲ್ಲಿ ಎಲ್.ಕೆ.ಆಡ್ವಾಣಿ ಒಬ್ಬರು. ರಾಷ್ಟ್ರೀಯತೆ ಮತ್ತು ಭಾರತ ಸಂಸ್ಕೃತಿಯೇ ಜೀವಾಳ ಎಂಬ ಪರಿಕಲ್ಪನೆ ಇಟ್ಟುಕೊಂಡು ಸುದೀರ್ಘ ಅವಧಿಯವರೆಗೆ ಭಾರತೀಯ
ಜನತಾ ಪಕ್ಷದ ರಥವನ್ನು ಎಳೆದ ‘ಸಾರಥಿ’ ಆಡ್ವಾಣಿ ಎಂದರೆ ತಪ್ಪಾಗಲಾರದು. ಇಂದಿನ ಪಾಕಿಸ್ತಾನದ ಕರಾಚಿಯಲ್ಲಿ ೧೯೨೭ರ ನವೆಂಬರ್ ೮ರಂದು ಜನಿಸಿದವರು ಆಡ್ವಾಣಿ (ಭಾರತ ವಿಭಜನೆಯ ಮುಂಚೆ ಆಡ್ವಾಣಿ ಅವರ ಪೂರ್ವಿಕರು ಕರಾಚಿಯಲ್ಲೇ ನೆಲೆಸಿದ್ದರು). ಹಾಗೆ ನೋಡಿದರೆ ಆಡ್ವಾಣಿಯವರ ಆಪ್ತಸ್ನೇಹಿತ ಅಟಲ್ ಬಿಹಾರಿ ವಾಜಪೇಯಿಯವರು ಇವರಿಗಿಂತ ಕೇವಲ ೩ ವರ್ಷ ಹಿರಿಯರು.
ಬಾಲ್ಯದಲ್ಲೇ ಕ್ರಿಕೆಟ್, ಟೆನಿಸ್, ಪುಸ್ತಕ ಹಾಗೂ ಸಿನಿಮಾ ಹುಚ್ಚು ಹೊಂದಿದ್ದ ಬಾಲಕ ಆಡ್ವಾಣಿ, ಕರಾಚಿಯ ಸೇಂಟ್ ಪ್ಯಾಟ್ರಿಕ್ಸ್ ಶಾಲೆ ಯಲ್ಲಿ ವಿದ್ಯಾಭ್ಯಾಸ ಪೂರೈಸಿದರು. ಹದಿನಾಲ್ಕರ ಹರೆಯದಲ್ಲಿದ್ದಾಗ ರಾಷ್ಟ್ರೀಯ ಸ್ವಯಂಸೇವಕ ಸಂಘವು ಬೀರಿದ ಪರಿಣಾಮದಿಂದಾಗಿ ಸಂಘದ ಸ್ವಯಂ ಸೇವಕರಾಗಿ ಸೇರಿಕೊಂಡರು. ಇದೇ ಸಂದರ್ಭ ದಲ್ಲಿ ಭಾರತೀಯ ಇತಿಹಾಸದ ಅಧ್ಯಯನಕ್ಕೂ ಮುಂದಾದರು.
ಆಡ್ವಾಣಿಯವರ ರಾಜಕೀಯ ಬದುಕಿಗೆ ಮಹತ್ವದ ತಿರುವು ಸಿಕ್ಕಿದ್ದು ೧೯೫೭ರಲ್ಲಿ. ಭಾರತೀಯ ಜನಸಂಘದಿಂದ ವಾಜಪೇಯಿಯವರು ಮೊದಲ ಬಾರಿಗೆ ಸಂಸದರಾಗಿ ಲೋಕಸಭೆಯನ್ನು ಪ್ರವೇಶಿ ಸಿದ ಕಾಲಘಟ್ಟವದು. ಆಗ ಜನಸಂಘದ ದೆಹಲಿ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಮತ್ತು ವಾಜಪೇಯಿ
ಯವರ ಸಹಾಯಕರಾಗಿ ಕಾರ್ಯ ಪ್ರಾರಂಭಿಸಿದ ವರು ಆಡ್ವಾಣಿ. ತಮ್ಮ ಚುರುಕುತನದ ಕೆಲಸ, ವಿಭಿನ್ನ ಚಿಂತನೆ, ಸಂಘಟನಾ ಶಕ್ತಿಯಿಂದಾಗಿ ಸಂಘದ ಹಿರಿಯರ ‘ನೀಲಿಗಣ್ಣಿನ ಹುಡುಗ’ನಾಗಿ ಗುರುತಿಸಿಕೊಂಡ ಆಡ್ವಾಣಿಯವರು ರಾಜಕೀಯ ವಲಯದಲ್ಲಿ ಬಹುಬೇಗನೆ ಬೆಳೆದರು.
ತುರ್ತುಸ್ಥಿತಿಯ ಕರಾಳ ದಿನಗಳು: ಜನಸಂಘ ಸೇರಿದಂತೆ ಕಾಂಗ್ರೆಸ್-ವಿರೋಧಿ ಪಕ್ಷಗಳು ಸ್ವಾತಂತ್ರ್ಯಾ ನಂತರದಲ್ಲಿ ಒಗ್ಗೂಡಿ ಹೋರಾಟ ಮಾಡಿದ ಮಹತ್ವದ ಸಂದರ್ಭವೆಂದರೆ ಇಂದಿರಾ ಗಾಂಧಿಯವರ ಆಡಳಿತಾವಽಯ ‘ತುರ್ತು ಪರಿಸ್ಥಿತಿ’ ಸಮಯ. ೧೯೭೫ರಲ್ಲಿ ಚುನಾವಣಾ ಅಕ್ರಮ ಆರೋಪದಲ್ಲಿ ಇಂದಿರಾ ಗಾಂಽಯವರ ಸಂಸದೆ ಸ್ಥಾನವನ್ನು ಅನರ್ಹಗೊಳಿಸಿದ ಅಲಹಾಬಾದ್ ಹೈಕೋರ್ಟ್, ಲೋಕಸಭಾ ಚುನಾವಣೆಗೆ ಸ್ಪಽಸದಂತೆ ನಿಷೇಧ ಹೇರಿ ತೀರ್ಪುನೀಡಿತು. ಇದಾದ ಕೆಲವೇ ದಿನಗಳಲ್ಲಿ ದೇಶವು ತುರ್ತು ಪರಿಸ್ಥಿತಿಯ ಸಂಕಷ್ಟಕ್ಕೆ ಸಿಲುಕಿ ನರಳಾಡುವಂತಾಯಿತು. ಸರಕಾರದ ವಿರುದ್ಧ ಮಾತನಾಡುವವರ ಬಾಯಿ ಮುಚ್ಚಿಸಲಾಯಿತು. ಈ ಸಂದರ್ಭದಲ್ಲಿ ಆಡ್ವಾಣಿ ಜನಸಂಘದ ಅಧ್ಯಕ್ಷರಾಗಿದ್ದರು.
ತುರ್ತು ಪರಿಸ್ಥಿತಿಯು ಆಡ್ವಾಣಿಯವರ ರಾಜಕೀಯ ಬದುಕಿನ ಮಹತ್ತರ ಕಾಲಘಟ್ಟ. ಇಂದಿರಾ ಗಾಂಧಿಯವರ ನಿರ್ಧಾರದ ವಿರುದ್ಧ ದನಿಯೆತ್ತಿ ಹೋರಾಡುತ್ತಿದ್ದ ಆಡ್ವಾಣಿಯವರನ್ನು ೧೯೭೫ರ ಜೂನ್ ೨೬ರಂದು ಬಂಧಿಸಿ ಬೆಂಗಳೂರಿನ ಕೇಂದ್ರ ಕಾರಾಗೃಹದಲ್ಲಿ ಇರಿಸಲಾಯಿತು. ಆಗ ಅವರಿಗೆ ಜತೆಯಾದವರು ವಾಜಪೇಯಿ. ಮುಂದಿನ ರಾಜಕೀಯ ಚಟುವಟಿಕೆಗಳ ಕುರಿತಾಗಿ ಅಲ್ಲಿ ಇಬ್ಬರೂ ಪರಸ್ಪರ ಚರ್ಚಿಸಿದರು. ಇದರ ಜತೆಗೆ, ಜೈಲಿನಲ್ಲಿ ತಾಂಡವವಾಡುತ್ತಿದ್ದ ಅವ್ಯವಸ್ಥೆ ವಿರುದ್ಧ ದನಿಯೆತ್ತುವ ಮೂಲಕ ತಮ್ಮ ಹೋರಾಟದ ಮನೋಭಾವವನ್ನು ತೋರ್ಪಡಿಸಿದ ಆಡ್ವಾಣಿಯವರು, ತುರ್ತು ಪರಿಸ್ಥಿತಿಯ ಕರಾಳ ದಿನಗಳ ವಿರುದ್ಧ ದನಿಯೆತ್ತಿದ್ದಕ್ಕೆ ಅನುಭವಿಸಬೇಕಾಗಿ ಬಂದ ಈ ಜೈಲುವಾಸದಿಂದ ೧೯೭೭ರ ಜನವರಿ ೧೮ರಂದು ಮುಕ್ತರಾದರು.
೧೯೭೭ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಽ ನೇತೃತ್ವದ ಕಾಂಗ್ರೆಸ್ ಹೀನಾಯ ಸೋಲು ಅನುಭವಿಸಿತು. ಜನತಾ ಪಕ್ಷವು ೨೯೫ ಸ್ಥಾನ ಗೆಲ್ಲುವ ಮೂಲಕ ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಕೇಂದ್ರದಲ್ಲಿ ದೇಶದ ಮೊದಲ ಕಾಂಗ್ರೆಸ್ಸೇತರ ಸರಕಾರವನ್ನು ರಚಿಸಿತು. ಈ ಸರಕಾರದಲ್ಲಿ ಆಡ್ವಾಣಿಯವರು ವಾರ್ತಾ ಮತ್ತು ಪ್ರಸಾರ ಖಾತೆ ಸಚಿವರಾಗಿ ಅಧಿಕಾರ ಸ್ವೀಕರಿಸಿ ದರು. ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ದೇಶದ ಪತ್ರಿಕಾ ವ್ಯವಸ್ಥೆಯ ಮೇಲೆ ಬಿದ್ದಿದ್ದ
ಹೊಡೆತವನ್ನು ಮನಗಂಡಿದ್ದ ಮತ್ತು ಸ್ವತಃ ಪತ್ರಕರ್ತರಾಗಿ ಸೇವೆ ಸಲ್ಲಿಸಿದ ಅನುಭವವಿದ್ದ ಆಡ್ವಾಣಿಯವರು, ಮಾಧ್ಯಮ ಕ್ಷೇತ್ರವನ್ನು ಮರಳಿ ಮೇಲೆತ್ತುವ ಕೆಲಸವನ್ನು ಅಲ್ಪಸಮಯ ದಲ್ಲೇ ಮಾಡಿದರು.
ತರುವಾಯದ ರಾಜಕೀಯ ಬೆಳವಣಿಗೆಗಳ ಕಾರಣದಿಂದಾಗಿ ಮತ್ತು ಜನತಾ ಪಕ್ಷದ ನಾಯಕರ ಆಂತರಿಕ ಕಚ್ಚಾಟದಿಂದಾಗಿ ಬೇಸರ ಗೊಂಡ ಸಮಾನಮನಸ್ಕರ ಗುಂಪು ಜನತಾ ಪರಿವಾರದಿಂದ ನಿರ್ಗಮಿಸಲು ನಿರ್ಧರಿಸಿತು. ರಾಷ್ಟ್ರೀಯತೆಯ ಸ್ಪಷ್ಟ ಪರಿಕಲ್ಪನೆ ಹೊಂದಿದ್ದ ಜನಸಂಘದ ನಾಯಕರು ಹೊಸ ಪಕ್ಷವನ್ನು
ಹುಟ್ಟುಹಾಕಲು ನಿರ್ಧರಿಸಿದರು. ಪ್ರಮುಖವಾಗಿ ವಾಜಪೇಯಿ ಮತ್ತು ಆಡ್ವಾಣಿ ಯವರ ನಿರ್ಧಾರದ ಫಲವಾಗಿ ೧೯೮೦ರಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ಹುಟ್ಟಿಕೊಂಡಿತು. ಆದರೆ ಬಿಜೆಪಿಯನ್ನು ಸಮರ್ಥವಾಗಿ ಕಟ್ಟಲು ಆಡ್ವಾಣಿಯವರು ಪಟ್ಟ ಶ್ರಮ ಅಷ್ಟಿಷ್ಟಲ್ಲ. ಬಿಜೆಪಿ ಯನ್ನು ಹುಟ್ಟುಹಾಕಿದ ನಂತರ ಪಕ್ಷದ ಪ್ರಧಾನ
ಕಾರ್ಯದರ್ಶಿ ಹುದ್ದೆಯನ್ನು ಅಲಂಕರಿಸಿದ ಆಡ್ವಾಣಿಯವರು ಪಕ್ಷದ ಸಂಘಟನೆಯಲ್ಲಿ ನಿರಂತರವಾಗಿ ತೊಡಗಿಸಿಕೊಂಡರು.
ಸಂಘಟನಾತ್ಮಕ ಶಕ್ತಿ ಮತ್ತು ಸಂಚಲನೆ ಹುಟ್ಟುಹಾಕುವ ಶಕ್ತಿ ಹೊಂದಿದ್ದ ಆಡ್ವಾಣಿಯವರು ಬಿಜೆಪಿಯನ್ನು ಸ್ಥಳೀಯ ಮಟ್ಟದವರೆಗೆ ತಲುಪಿಸುವ ಕೆಲಸ
ವನ್ನು ಯಶಸ್ವಿಯಾಗಿ ನಿರ್ವಹಿಸಿದರು. ಇದಾದ ನಂತರ ೧೯೮೬ರಲ್ಲಿ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಪಕ್ಷವನ್ನು ಮತ್ತಷ್ಟು ಸದೃಢಗೊಳಿಸಿದರು. ಲೋಕ ಸಭೆಯಲ್ಲಿ ಕೇವಲ ೨ ಸ್ಥಾನ ಹೊಂದಿದ್ದ ಬಿಜೆಪಿಯು ೮೦ರ ಗಡಿ ಮುಟ್ಟು ವಂತಾಗುವಲ್ಲಿ ಮಹತ್ವದ ಯೋಗದಾನ ನೀಡಿದ ವರು ಮತ್ತು ತನ್ಮೂಲಕ ದೇಶದ ರಾಜಕೀಯ ವಲಯಕ್ಕೆ ಹೊಸದಿಕ್ಕು ತೋರಿಸಿದವರು ಆಡ್ವಾಣಿ.
ರಥಯಾತ್ರೆಯ ಸಾರಥಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವುದರ ಹಿಂದೆ ಆಡ್ವಾಣಿಯವರ ಪರಿಶ್ರಮ ಸಾಕಷ್ಟಿದೆ. ಮಂದಿರ ನಿರ್ಮಾಣದ ಸಂಕಲ್ಪ ತೊಟ್ಟಿದ್ದ ಅವರು ೧೯೯೦ರಲ್ಲಿ ಗುಜರಾತಿನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯೆವರೆಗೆ ರಾಮ ರಥಯಾತ್ರೆ ಆರಂಭಿಸಿದರು. ದೇಶದ
ಉದ್ದಗಲಕ್ಕೂ ಸಂಚರಿಸಿ ಮಂದಿರ ನಿರ್ಮಾಣದ ಕಿಚ್ಚು ಹಚ್ಚಿದರು. ಅಷ್ಟೇಕೆ, ಬಿಜೆಪಿಯ ಪ್ರಣಾಳಿಕೆ ಯಲ್ಲೂ ಮಂದಿರ ನಿರ್ಮಾಣದ ವಿಚಾರವನ್ನೇ
ಮುಂದುಮಾಡಿ ಇಡೀ ದೇಶದಲ್ಲಿ ಹೊಸ ಸಂಚಲನ ಹುಟ್ಟುಹಾಕಿದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಗರಡಿ ಯಿಂದ ಬಂದಿದ್ದ ವಾಜಪೇಯಿ ಹಾಗೂ ಆಡ್ವಾಣಿ ಯವರು ೪೦ ವರ್ಷಕ್ಕೂ ಮೀರಿದ ಸ್ನೇಹ ಹೊಂದಿದ್ದರು ಮತ್ತು ಅಧಿಕಾರಕ್ಕಾಗಿ ಯಾವತ್ತೂ ಕಚ್ಚಾಟ ನಡೆಸಲಿಲ್ಲ. ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದರಲ್ಲಿ ಆಡ್ವಾಣಿಯವರ ಪಾತ್ರ ಹೆಚ್ಚಾಗಿದ್ದರೂ, ಪ್ರಧಾನಿ ಹುದ್ದೆ ಅಲಂಕರಿಸುವ ವಿಷಯ ಬಂದಾಗ ವಾಜಪೇಯಿಯವರ ಹೆಸರನ್ನೇ ಅವರು ಸೂಚಿಸಿದರು. ಅಧಿಕಾರದ ವಿಷಯದಲ್ಲಿ ಸಹೋದರರೇ ವೈರಿಗಳಾಗುವ ಅದೆಷ್ಟೋ ಸನ್ನಿವೇಶವನ್ನು ಈ ದೇಶ ಕಂಡಿದೆ; ಆದರೆ ಆಡ್ವಾಣಿ ಎಂಬ ‘ತುಂಬಿದ ಕೊಡ’ವು ಪಕ್ಷ ಹಾಗೂ ರಾಷ್ಟ್ರೀಯತೆಯನ್ನೇ ಬದುಕಾಗಿಸಿಕೊಂಡು ರಾಜಕೀಯದ ಹಾದಿ
ಸವೆಸಿದ್ದು ಗಮನಾರ್ಹ.
ವಾಜಪೇಯಿ ಹಾಗೂ ಆಡ್ವಾಣಿಯವರ ಮಧ್ಯೆ ಸಣ್ಣ ಮಟ್ಟದ ಸೈದ್ಧಾಂತಿಕ ಭಿನ್ನಾಭಿಪ್ರಾಯ ವಿತ್ತು. ಕಂದಹಾರ್ ವಿಮಾನ ಅಪಹರಣ, ಅಯೋಧ್ಯೆ ಹೋರಾಟ, ಈಗಿನ ಪ್ರಧಾನಿ ನರೇಂದ್ರ ಮೋದಿಯವರು ಹಿಂದೆ ಗುಜರಾತಿನ ಮುಖ್ಯಮಂತ್ರಿಯಾಗಿದ್ದಾಗ ನಡೆದ ಗೋಧ್ರಾ ಹತ್ಯಾಕಾಂಡ ಸೇರಿದಂತೆ ಹಲವು ವಿಚಾರ
ಗಳಿಗೆ ಅದು ಸಂಬಂಽಸಿತ್ತು. ಆದರೆ ಆಡ್ವಾಣಿ ಮಾತ್ರ ಇವೆಲ್ಲವನ್ನೂ ಪಕ್ಷದ ಪರಿಧಿಯ ಆಚೆ ಚರ್ಚಿಸಲಿಲ್ಲ. ಯಾವತ್ತೂ ಪರಸ್ಪರ ಆರೋಪ-ಪ್ರತ್ಯಾರೋಪಕ್ಕೆ ಇಳಿಯದೆ, ವೈಯಕ್ತಿಕ ಲಾಭಕ್ಕಾಗಿ ಪಕ್ಷದ ಹಿತವನ್ನು ಬಲಿ ಗೊಡದೆ ಪಕ್ಷನಿಷ್ಠೆ ಮೆರೆದವರು ಆಡ್ವಾಣಿ. ಸದಾಕಾಲವೂ ವಾಜಪೇಯಿಯವರ ಹೆಗಲಿಗೆ ಹೆಗಲಾಗಿ ನಿಂತಿದ್ದ ಆಡ್ವಾಣಿ, ದೇಶಾದ್ಯಂತ ಹೋರಾಟಗಳನ್ನು ರೂಪಿಸುತ್ತಾ ಪಕ್ಷ ಸಂಘಟನೆ ಯಲ್ಲಿ ನಿರಂತರವಾಗಿ ತೊಡಗಿಸಿಕೊಂಡವರು.
ಎರಡನೇ ಪೂರ್ಣಾವಽಗೆ ವಾಜಪೇಯಿ ಪ್ರಧಾನಿಯಾಗಿ ಆಯ್ಕೆಯಾದಾಗಲೂ ಆಡ್ವಾಣಿಯವರು ಉಪಪ್ರಧಾನಿ ಹುದ್ದೆಗೇ ಸಂತೃಪ್ತಿಪಡುವ ಮೂಲಕ ‘ಬಿಜೆಪಿ ಭೀಷ್ಮ’ರಾಗಿಯೇ ಉಳಿದರು. ಆಡ್ವಾಣಿಯವರು ಬಿಜೆಪಿಗೆ ಭದ್ರ ಬುನಾದಿ ಹಾಕಿ ಹೋರಾಟ ಮಾಡಿದ್ದರ ಫಲವಾಗಿ ಅದು ಇಂದು ಜಗತ್ತಿನ ಅತಿದೊಡ್ಡ ರಾಜಕೀಯ ಪಕ್ಷವಾಗಿ ಹೊರಹೊಮ್ಮಿದೆ. ಇಂಥ ಮಹಾನ್ ನಾಯಕನಿಗೆ ಪ್ರಧಾನಿ ಮೋದಿಯವರು ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರವಾದ ‘ಭಾರತ ರತ್ನ’ವನ್ನು
ಘೋಷಿಸಿ ಗೌರವಿಸಿರುವುದು ಶ್ಲಾಘನೀಯ.
(ಲೇಖಕರು ಪತ್ರಕರ್ತರು)