Sunday, 15th December 2024

ಭಟ್ಟಂಗಿಗಳು ಸೋಲಲು ಭಟ್ಟರು ಗೆಲ್ಲಬೇಕು !

ಅಭಿಪ್ರಾಯ

ರವೀ ಸಜಂಗದ್ದೆ

ಈಗ ಮೋದಿ ಹೆಸರು ಹೇಳಿಕೊಂಡು ರಾಜಕಾರಣ ಮಾಡಿ ದಕ್ಕಿಸಿಕೊಳ್ಳುವ ದೊಡ್ಡ ಪಡೆಯೇ ಭಾಜಪಾದಲ್ಲಿ ಸೃಷ್ಟಿಯಾಗಿದೆ. ಪಕ್ಷದ ಚಿಹ್ನೆ ಮತ್ತು ಮೋದಿಯವರ ಹೆಸರಿಲ್ಲದಿದ್ದರೆ, ವೈಯಕ್ತಿಕ ಸಾಮರ್ಥ್ಯದಿಂದ ಅವರದೇ ಕಾರಿನ ಡ್ರೈವರ್ ಇಂಥವರಿಗೆ ಓಟ್ ಮಾಡಲಾರ. ಪರಿಸ್ಥಿತಿ ಹಾಗಿದೆ!

ಯಾವುದೇ ಪ್ರತಿಫಲಾಪೇಕ್ಷೆಯಿಲ್ಲದೆ ಬೇರುಮಟ್ಟದಲ್ಲಿ ದುಡಿಯುವ ಕಾರ್ಯಕರ್ತರನ್ನು, ದಶಕಗಳಿಂದ ಸೇವೆಯೆಂಬ ಯಜ್ಞದಲ್ಲಿ ಸಮಿಧೆಯಾಗಿ ಉರಿಯುವ ದೇವ ದುರ್ಲಭ ಸೈದ್ಧಾಂತಿಕ ಅನುಯಾಯಿಗಳನ್ನು, ಜನರ ನಡುವೆ ಇರುವ ನಿಜಾರ್ಥದ ಜನ ನಾಯಕರನ್ನು ಕಡೆಗಣಿಸುವ, ಜನಾನುರಾಗಿ ಯಾಗಿರುವ ‘ಜನರ ಸೇವಕ’ರೆನಿಸಿರುವ ಅನೇಕರನ್ನು ವ್ಯವಸ್ಥಿತವಾಗಿ ತುಳಿಯುವ, ಸಕಾರಣವಿಲ್ಲದೆ – ಕಾರಣ ಹೇಳದೇ ಮೂಲೆಗುಂಪಾಗಿಸುವ ಕೆಟ್ಟ ಚಾಳಿ ಮತ್ತು ಸಂಪ್ರದಾಯ ಕರ್ನಾಟಕ ಭಾಜಪಾದಲ್ಲಿ ಇತ್ತೀಚೆಗೆ ಹಾಸುಹೊಕ್ಕಾಗಿದೆ.

ಈ ಸಾಲಿಗೆ, ಈ ಅಗ್ಗಳಿಕೆಗೆ ಎರಡನೇ ಬಾರಿ ಹೊಸದಾಗಿ ಸೇರ್ಪಡೆಯಾದವರು ಉಡುಪಿಯ ರಘುಪತಿ ಭಟ್ಟರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ತಾನು ಮೂರು ಬಾರಿ ಪ್ರತಿನಿಧಿಸಿದ ಉಡುಪಿ ವಿಧಾನಸಭಾ ಕ್ಷೇತ್ರದಿಂದ ಟಿಕೇಟು ನಿರಾಕರಿಸಲು ಕಾರಣವೇ ಇಲ್ಲದಿದ್ದರೂ, ‘ಹೊಸಬರಿಗೆ ಅವಕಾಶ’ ಕೊಡುವ ನಿಟ್ಟಿನಲ್ಲಿ ಅವರನ್ನು ಪಕ್ಕಕ್ಕಿಡಲಾಯಿತು. ಆಗ ಮುಂದಿನ ಪದವೀಧರ ಕ್ಷೇತ್ರದ ಚುನಾವಣೆಯ ನೈರುತ್ಯ ಪದವೀಧರ ಕ್ಷೇತ್ರದ ಅಭ್ಯರ್ಥಿ ನೀವೇ! ಎಂದು ಆಶ್ವಾಸನೆ ಕೊಟ್ಟು, ‘ಹೊಸ ಹೊಸ ಅರ್ಹ ಪದವೀಧರ ಮತದಾರರನ್ನು ಸದಸ್ಯರನ್ನಾಗಿ ಮಾಡಿ’ ಎಂದು ಹೊಸ ಕೆಲಸ ಹಂಚಲಾಯಿತು.

ಪಕ್ಷನಿಷ್ಠೆಯಿಂದ ವಿಧಾನಸಭಾ ಚುನಾವಣೆಯಲ್ಲಿ ದುಡಿದು ಪಕ್ಷದ ಹೊಸ ಅಭ್ಯರ್ಥಿ ಗೆಲ್ಲಲು ಕಾರಣರಾದರು. ತನಗೆ ಪಕ್ಷ ವಹಿಸಿದ ಕೆಲಸವನ್ನು ಶ್ರದ್ಧೆಯಿಂದ ಮಾಡಿ, ನೈರುತ್ಯ ಪದವೀಧರ ಕ್ಷೇತ್ರದ ಅರ್ಹ ಮತದಾರರ ಸಂಖ್ಯೆಯಲ್ಲಿ ಮೂರುಪಟ್ಟು ಜಾಸ್ತಿ ಮಾಡಿಸಿದರು. ನಿರಂತರ ಸಂಪರ್ಕ, ಓಡಾಟದ ಮೂಲಕ ಅರ್ಹರನ್ನು ನೋಂದಾಯಿಸಿ ಈ ಕ್ಷೇತ್ರ ದಲ್ಲಿ ಭಾಜಪಾ ತನ್ನ ಭದ್ರಕೋಟೆಯನ್ನು ಮುಂದಿನ ಕೆಲ ದಶಕಗಳಿಗೂ ವಿಸ್ತರಿಸುವಂತೆ ದಣಿವರಿಯದೆ ದುಡಿದರು. ಪದವೀಧರ ಕ್ಷೇತ್ರಗಳಿಗೆ ಚುನಾವಣೆ ಘೋಷಣೆಯಾಯಿತು.

ಟಿಕೆಟ್ ಬೇರೆಯವರ ಪಾಲಾಯಿತು. ಭಟ್ಟರಿಗೆ ಮತ್ತೆ ನಿರಾಸೆ. ದುಡ್ಡು, ಜಾತಿ, ಹೊಂದಾಣಿಕೆ ರಾಜಕಾರಣ ಕರ್ನಾಟಕ ಭಾಜಪಾದ ‘ಕೇವವ ಕೃಪಾ’ದ
ಸಭಾಂಗಣಕ್ಕೆ ನುಗ್ಗಿ ಭಾಜಪಾ ದಕ್ಷಿಣ ಭಾರತದಲ್ಲಿ ಪ್ರಥಮ ಸರಕಾರ ರಚಿಸಿದಷ್ಟು ವರುಷಗಳೇ ಸಂದುವಲ್ಲ! ಅದು ತನ್ನ ವ್ಯಾಪ್ತಿ-ಆಳ-ಅಗಲವನ್ನು
ಕರೋನಾ ಪಸರಿಸುವುದಕ್ಕಿಂತ ಹೆಚ್ಚಿನ ವೇಗದಲ್ಲಿ ಪಸರಿಸಿ ಹಲವು ದೇವದುರ್ಲಭರನ್ನು ನಿವಾಳಿಸಿ, ಬದಿಗೊತ್ತಿ ತಣ್ಣೀರು ಕುಡಿಸಿ ಕೇಕೆ ಹಾಕಿ ಹುಸಿ ನಗೆ
ಬೀರುತ್ತಿರುವುದು latest ugly trend in Karnataka BJP. ಗೌಡರ ಕುಟುಂಬದ ಪ್ರಾದೇಶಿಕ ಪಕ್ಷದೊಂದಿಗೆ ’Love Affair’ ನಿಕ್ಕಿಯಾದ ನಂತರವಂತೂ ಭಾಜಪಾದ ಹಲವರು ವನವಾಸದಲ್ಲಿದ್ದಾರೆ, ಮನದ ಬೇಗುದಿಯನ್ನು ಉಗುಳಲೂ ಆಗದೆ ನುಂಗಲೂ ಆಗದೆ ಮೌನಿಯಾಗಿದ್ದಾರೆ, ಹಲವು ನಿಷ್ಠಾವಂತ ತಲೆಗಳು ತರಗೆಲೆಗಳಂತೆ ಹಸಿಯಾಗಿರುವಾಗಲೇ ಕರ್ನಾಟಕ ಭಾಜಪಾ ಎನ್ನುವ ದೊಡ್ಡಾಲದಮರದಿಂದ ಉದುರುತ್ತಿವೆ.

ಕಾರ್ಯಕರ್ತ ಸೋಲುತ್ತಿದ್ದಾನೆ, ನೋವನುಭವಿಸುತ್ತಿದ್ದಾನೆ. ರಘುಪತಿ ಭಟ್ಟರಿಗೆ ಟಿಕೇಟು ನಿರಾಕರಿಸುವುದಾದರೆ ಅವರ ಸಂಸಾರದಲ್ಲಿ ಎರಡು ದಶಕಗಳ ಹಿಂದೆ ಅಲ ಕಲ ಆದಾಗ ಮತ್ತು ನಂತರದ ವರ್ಷಗಳಲ್ಲಿ ಇನ್ಯಾವುದೋ ಭಟ್ಟರದ್ದು ಎನ್ನಲಾದ ಖಾಸಗಿ ಕ್ಷಣಗಳ ವೀಡಿಯೋ ತುಣುಕು
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದಾಗ ಆಗಬೇಕಿತ್ತು ಮತ್ತದು ಸೂಕ್ತವಾಗಿತ್ತು. ಆಗ, ಆ ಕಾಲದಲ್ಲಿ ಇವರದು ‘ವಿಶ್ವದ ಅತಿದೊಡ್ಡ ರಾಜಕೀಯ ಪಕ್ಷವೂ ಆಗಿರಲಿಲ್ಲ’ ಮತ್ತು ‘ಕೇಂದ್ರದಲ್ಲಿ ಮೋದಿಯವರು ಅಽಕಾರದಲ್ಲಿಯೂ ಇರಲಿಲ್ಲವಲ್ಲ!’ ರಘುಪತಿ ಭಟ್ಟರು ಬಿಟ್ಟರೆ ಉಡುಪಿಯಲ್ಲಿ ಭಾಜಪಾ ವನ್ನು ಗೆಲ್ಲಿಸಿಕೊಂಡು ಬರುವ ಛಾತಿ, ತಾಕತ್ತು, ಹಕೀಕತ್ತು, ಖ್ಯಾತಿ ಇದ್ದವರು ಇನ್ಯಾರೂ ಇರಲಿಲ್ಲ ಅಥವಾ ಭಾಜಪಾ ಥಿಂಕ್ ಟ್ಯಾಂಕ್ ತಂಡದ ಕಣ್ಣಿಗೆ ಬಿದ್ದಿರಲಿಲ್ಲ! ಹಾಗಾಗಿ ಭಟ್ಟರ ಅಪದ್ಧಗಳು ಯಾವುದೂ ಚರ್ಚೆಯಾಗಲೇ ಇಲ್ಲ. ಆಗ ‘ಶ್ವಾನ ಹಸಿದಿತ್ತು, ಹಿಟ್ಟು ಹಳಸಿತ್ತು’. ಭಟ್ಟರನ್ನೇ ಕಣಕ್ಕಿಳಿಸ ಲಾಯಿತು, ಗೆದ್ದರು. ಮತ್ತೂ ಎರಡು ಬಾರಿ ಗೆದ್ದರು.

ಈಗ ಮೋದಿ ಹೆಸರು ಹೇಳಿಕೊಂಡು ರಾಜಕಾರಣ ಮಾಡಿ ದಕ್ಕಿಸಿಕೊಳ್ಳುವ ದೊಡ್ಡ ಪಡೆಯೇ ಭಾಜಪಾದಲ್ಲಿ ಸೃಷ್ಟಿಯಾಗಿದೆ. ಪಕ್ಷದ ಚಿಹ್ನೆ ಮತ್ತು ಮೋದಿಯವರ ಹೆಸರಿಲ್ಲದಿದ್ದರೆ, ವೈಯಕ್ತಿಕ ಸಾಮರ್ಥ್ಯದಿಂದ ಅವರದೇ ಕಾರಿನ ಡ್ರೈವರ್ ಇಂಥವರಿಗೆ ಓಟ್ ಮಾಡಲಾರ. ಪರಿಸ್ಥಿತಿ ಹಾಗಿದೆ! ಆದರೂ ಇವರೆಲ್ಲ ದೊಡ್ಡ, ಪ್ರಭಾವೀ ಮುಖಂಡರು. ಕೆಲವರಂತೂ ಕೇಂದ್ರದಲ್ಲಿ ಪ್ರಭಾವ ಇರುವಂತೆ ಪೋಸು ಕೊಡುತ್ತಾರೆ!

ಹಾಗಂತ ‘ಮೋದಿ, ಶಾ, ನಡ್ಡಾ ನಿಮ್ಮಲ್ಲಿ ಮಾತನಾಡಬೇಕಂತೆ’ ಎಂದು ಫೋನು ಅವರ ಕೈಗೆ ಕೊಟ್ಟು ನೋಡಿ! ಅನುಮಾನವೇ ಇಲ್ಲ – ಪ್ಯಾಂಟ್
ಒz! ಸಾಮಾನ್ಯರಂತೆ ಓಡಾಡುತ್ತಿದ್ದವರೂ ಈಗ ಕೋಟು ಏರಿಸಿಕೊಂಡು, ಕೂಲಿಂಗ್ಲಾಸು ಹಾಕಿಕೊಂಡು ಕೋಟಿಗಳಲ್ಲಿ ಆಸ್ತಿ ಮಾಡಿ ಮೆರೆದಾಡುತ್ತಿದ್ದಾರೆ. ತತ್ವ, ಸಿದ್ಧಾಂತ, ಶಿಸ್ತು, ಗೌರವ, ಹಿರಿತನ, ಸ್ವಾಭಿಮಾನ, ಅನುಭವ… ಹೀಗೆ ಒಂದೊಂದೇ ಮೌಲ್ಯ ಕಾಲಾಂತರದಲ್ಲಿ ‘ಕೇಶವ ಕೃಪಾ’ದ ಈಶಾನ್ಯ ಮೂಲೆಯಲ್ಲಿ ಇರುವ ಒಣಕಸದ ಬುಟ್ಟಿಯಲ್ಲಿ ತಣ್ಣಗೆ ಮಲಗಿ ನಿಶ್ಚಿಂತೆಯಿಂದ ವಿರಮಿಸುತ್ತಿದೆ. ಕಾಲ-ಕಾಲು ಎರಡೂ ಓಡುತ್ತಿದೆ – ಮೋದಿ ಹೆಸರಿ ನಲ್ಲಿ! ಇದೆಲ್ಲ ದರ ಜೊತೆಗೆ ಒಂದು ಕುಟುಂಬದ ರಾಜಕಾರಣ ಮತ್ತು ಈಗಿನ ದಿನಗಳಲ್ಲಿ ಮಾಮೂಲಾಗಿರುವ ಹೊಂದಾಣಿಕೆ ರಾಜಕಾರಣ ಸೇರಿಕೊಂಡು ಕರ್ನಾಟಕ ಭಾಜಪಾ ಇತರ ಪಕ್ಷಗಳಂತೇ ರಾಜಕೀಯ ಮಾಡುತ್ತಿದೆ. ಎಳ್ಳಷ್ಟೂ ವ್ಯತ್ಯಾಸವಿಲ್ಲ.

Party with difference¯í¨Ü party with difference of opinion ಆಗಿಬಿಟ್ಟಿದೆ! ಮಾಡಿದ ಕೆಲಸಕ್ಕೆ ಪಗಾರ ಕೊಡದಿರುವುದು ಮತ್ತು ಆಡಿದ/ಕೊಟ್ಟ ಮಾತಿಗೆ ತಕ್ಕಂತೆ ನಡೆಯದಿರುವುದು ಯಾರಿಗೂ,ಯಾವ ಕ್ಷೇತ್ರದಲ್ಲೂ ಶೋಭೆಯಲ್ಲ! ಕೊಟ್ಟ ಮಾತು ತಪ್ಪಿ ಅಧಿಕಾರ ಕಳೆದು ಕೊಂಡ ಉದಾಹರಣೆ ನಮ್ಮ ಮುಂದೆ ಇದ್ದೇ ಇದೆ. ಉಡುಪಿ-ಚಿಕ್ಕಮಗಳೂರಿನ ಲೋಕಸಭಾ ಸಂಸದೆಯಾದರೆ ಚಲಾವಣೆಯಲ್ಲಿದ್ದಂತೆ ಕಂಡರೂ ಯಾರಿಗೂ ಬೇಡವಾದ ಹತ್ತು ರೂಪಾಯಿ ನಾಣ್ಯದಂತೆ ಎನ್ನಲಡ್ಡಿಯಿಲ್ಲವೇನೋ?! ಕೆಲವೇ ಕೆಲವರ ಕೃಪಾಕಟಾಕ್ಷದಿಂದ ಅಂಥವರನ್ನು ಈಗ ಬೆಂಗಳೂರು ಉತ್ತರದಲ್ಲಿ ಅವಕಾಶ ಕೊಟ್ಟು, ಸದಾ ನಗುವ ಗೌಡರ ಮೊಗದಲ್ಲಿ ಬೇಸರ ಮೂಡಿಸಿ ರಾಜಕೀಯ ನಡೆಯುತ್ತಿದೆ. ಅಲ್ಲೂ ಚಲಾವಣೆಯಿಂದ ವಿಮುಖರಾಗುವಂಥಾ ಪರಿಸ್ಥಿತಿ ಇದೆ ಎನ್ನುವುದು ಸ್ಥಳೀಯ ಭಾಜಪಾ ಮುಖಂಡರ ಚುನಾವಣಾ ನಂತರದ ಲೇಟೆ ಅನಧಿಕೃತ ಅಭಿಪ್ರಾಯ! ಇರಲಿ. ಹಾಗೆ ನೋಡಿದರೆ ರಘುಪತಿ ಭಟ್ಟರಲ್ಲಿ ಉತ್ಸಾಹ, ರಾಜಕಾರಣದ ತವುಡು, ವಯಸ್ಸು, ಆರೋಗ್ಯ, ಆಸಕ್ತಿ ಇನ್ನೂ ಒಂದೂವರೆ ದಶಕಗಳಷ್ಟು ದೂರದ ವರೆಗೆ ಖಂಡಿತಾ ಇದೆ.

ತನ್ನ ಕ್ಷೇತ್ರದಲ್ಲಿ ಚಲಾವಣೆಯಲ್ಲೂ ಇದ್ದಾರೆ. ದುರಂತವೆಂದರೆ ಸದಾ ಚಲಾವಣೆಯಲ್ಲಿರುವ ಮತ್ತು ಜನರ ನಡುವೆ ಇರುವ ಭಟ್ಟರಂಥವರು ಭಾಜಪಾ ದವರಿಗೆ ಬೇಡವಾದರು. ಅವರು ಪ್ರತಿನಿಧಿಸುವ ಜಾತಿಯೂ ಇದಕ್ಕೊಂದು ಕಾರಣವಾಗಿರಬಹುದೇ!? ಈ ಕುಮ್ಮಕ್ಕಿನ ಹಿಂದಿರುವ ರೂವಾರಿಗಳು ಯಾರ್ಯಾರು ಎಂದು ಭಾಜಪಾದ ಕಟ್ಟಕಡೆಯ ದೇವದುರ್ಲಭ ಕಾರ್ಯಕರ್ತನಿಗೂ ಗೊತ್ತು. ಮಾತಾಡಿದರೆ ಅದು ಸಮಂಜಸವಲ್ಲ ಮತ್ತವನು ಇಂಥದ್ದನ್ನೆಲ್ಲ ಮಾತನಾಡುವುದೂ ಇಲ್ಲ! ಅವನು ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸುತ್ತಾ, ‘ನಮಸ್ತೆ ಸದಾ ವತ್ಸಲೇ…’ ಹಾಡುತ್ತಾ ತನಗೆ ವಹಿಸಿದ ಕೆಲಸವನ್ನು ಸಂಪೂರ್ಣ ಆಸಕ್ತಿಯಿಂದ ಸೈಲೆಂಟಾಗಿ ಮಾಡುತ್ತಲೇ ಇದ್ದಾನೆ.

ನಿನ್ನೆ, ಇಂದು, ಮುಂದೂ. ‘ಏನು ಮಾಡಿದರೂ ಸುಮ್ಮನಿರಬೇಕು, ಏನೇ ಹೇಳಿದರೂ ಕೇಳಿಸಿಕೊಂಡು ಸುಮ್ಮನಿರಬೇಕು, ಯಾವುದನ್ನೂ ಪ್ರಶ್ನಿಸು ವಂತಿಲ್ಲ’ ಎಂದು ಹೇಳಿಕೊಳ್ಳುತ್ತಾ, ‘ತಾನು ನಡೆದದ್ದೇ ದಾರಿ, ತನ್ನ ಹುಕುಂ ಯಾರೂ ಮೀರಬಾರದು, ತನ್ನ ನಿರ್ಧಾರವೇ ಅಂತಿಮ ಮತ್ತು ಪ್ರಶ್ನಾತೀತ’ ಎನ್ನಲು ಇದು ಕೊರಿಯಾದ ದುರುಳ ಸರ್ವಾಧಿಕಾರಿ ಆಡಳಿತವಲ್ಲ ಮತ್ತು ವಂಶಪಾರಂಪರ್ಯ ಆಡಳಿತ ನಡೆಸುವ ರಾಜಕೀಯ ಪಕ್ಷವೂ ಅಲ್ಲ! ತತ್ವ, ಸಿದ್ಧಾಂತ ಮತ್ತು ದೇಶದ ಒಳಿತಿಗಾಗಿ ಸರ್ವಸ್ವವನ್ನೂ ಕೊಡುಗೆಯಾಗಿ ನೀಡಿದ ದಿವಂಗತ ಶ್ಯಾಮ ಪ್ರಸಾದ್ ಮುಖರ್ಜಿ ಮತ್ತು ತಂಡ ಹಗಲಿರುಳು ಶ್ರಮಿಸಿ, ಬೆವರು ಸುರಿಸಿ ಕಟ್ಟಿ ಬೆಳೆಸಿದ ಪಕ್ಷವಿದು -ನೆನಪಿರಲಿ. ಹಲವರು ನೆಟ್ಟು, ಪೋಷಿಸಿ, ಬೆಳೆಸಿದ ಮರದಲ್ಲಿ ಬೆಳೆದ ಸ್ವಾದಿಷ್ಟ ಫಲಗಳನ್ನು ಕೆಲವು ನಾಲಾಯಕ್ ಸೋ ಕಾಲ್ಡ್ ರಾಜಕಾರಣಿಗಳನ್ನೂ ಸೇರಿಸಿ ಈಗಿನವರೆಲ್ಲ ಅನುಭವಿಸುತ್ತಿದ್ದಾರೆ.

ಹೋ ಮರೆತೆ! ನಮ್ಮ ಕರ್ನಾಟಕದಲ್ಲಿ ಹೀಗಾಗಲು ಅಪ್ಪ-ಮಗ ಅಪ್ಪ-ಮಕ್ಕಳೊಂದಿಗೆ ಸಖ್ಯ ಬೆಳೆಸಿದ ಪ್ರಭಾವವಿರಬಹುದೇನೋ! ಇದರ ಹಿಂದೆ ಯಾರ್ಯಾರಿದ್ದಾರೆ ಅವರೆಲ್ಲರೂ ಮುಟ್ಟಿ ನೋಡಿಕೊಳ್ಳುವಂತೆ ಒಂದು ಪಾಠವಾಗ ಬೇಕು. ಕೆಲಸವೇ ಮಾಡದ ಶೋಭಾ ಕರಂದ್ಲಾಜೆ, ಹಳಸಲು ಬಸವರಾಜ ಬೊಮ್ಮಾಯಿ, ಕಪ್ಪೆಯಂತಾಡುವ ಜಗದೀಶ್ ಶೆಟ್ಟರ್, ವಂಶ ರಾಜಕಾರಣದಿಂದ ಮುನ್ನೆಲೆಗೆ ಬಂದ ರಾಘವೇಂದ್ರ, ಗಾಯತ್ರಿ ಸಿದ್ದೇಶ್ವರ ಮುಂತಾದವರಿಗೆ ಕೆಂಪು ಹಾಸು ಹಾಕಿ ಟಿಕೆಟ್ ನೀಡಿರುವುದು ಸಮಂಜಸವಲ್ಲ.

ಹಾಗೊಂದು ವೇಳೆ ಅದನ್ನು ‘ಹೈಕಮಾಂಡ್’ ಹೆಸರು ಹೇಳಿ ಅಥವಾ ಇನ್ಯಾವುದೋ ವಿಶ್ಲೇಷಣೆ ಕೊಟ್ಟು ಡಿಫೆಂಡ್ ಮಾಡುವಿರೆಂದಾದರೆ, ಪ್ರತಾಪ್
ಸಿಂಹ, ಈಶ್ವರಪ್ಪ, ಸದಾನಂದ ಗೌಡ ಮತ್ತು ಈಗ ರಘುಪತಿ ಭಟ್ಟರಿಗೆ ಎರಡನೇ ಬಾರಿಯೂ ಟಿಕೆಟ್ ನಿರಾಕರಿಸಿದ್ದು ಶುದ್ಧ ತಪ್ಪು ಮತ್ತು ಅಸಂಬದ್ಧ
ನಿರ್ಣಯ! ಭಾಜಪಾದಲ್ಲಿ ಎಲ್ಲರೂ ಸಮಾನರು ಮತ್ತು ಕೆಲವರು ಹೆಚ್ಚು ಸಮಾನರು ಎನ್ನುವುದು ಅನೇಕ ಬಾರಿ ಅದಾಗಲೇ ಸಾಬೀತಾಗಿದೆ. ಭಾಜ
ಪಾವು ಕರ್ನಾಟಕದಲ್ಲಿ ಅವನತಿಯತ್ತ ಹೋಗಲು ಇದಿಷ್ಟೇ ಸಾಕಾದೀತು.

This is beginning of end. ಆಗ ಜೊತೆಯಿರಲು ದೇವದುರ್ಲಭ ಕಾರ್ಯಕರ್ತರೂ ಇರಲಾರರು, ದುಡ್ಡಿನಿಂದ-ದುಡ್ಡಿಗಾಗಿ ರಾಜಕಾರಣ ಮಾಡುವ ಪಾರ್ಟೈಂ ಉದ್ಯಮಿ ಮತ್ತು ರಿಯಲ್ ಎಸ್ಟೇಟ್ ಏಜೆಂಟಗಳು… ಭಾಜಪಾದ ತತ್ವ-ಸಿದ್ಧಾಂತ- ಶಿಸ್ತು ಸೋಲಬಾರದು, ಹಾಗಾಗಿ ರಘುಪತಿ ಭಟ್ಟರು ಗೆಲ್ಲಬೇಕು! ಇದು ಸ್ವಾಭಿಮಾನದ ಪ್ರಶ್ನೆ. ಭಟ್ಟಂಗಿಗಳು, ಗೌಪ್ಯ ಉದ್ದೇಶ ಮತ್ತು ವೈಯಕ್ತಿಕ ಲಾಭದ ದೃಷ್ಟಿಯಿಂದ ಇತ್ತೀಚೆಗೆ ಪ್ರಚಲಿತಕ್ಕೆ ಬಂದ ಪುಢಾರಿಗಳು ಸೋಲಲೇಬೇಕು. ಉಡುಪಿಯ ಅಷ್ಟ ಮಠಗಳಲ್ಲಿ ಮುಂಚೂಣಿಯಲ್ಲಿ ಇರುವ ಪೇಜಾವರ ಸ್ವಾಮೀಜಿ ಶ್ರೀ ಶ್ರೀ ವಿಶ್ವೇಶತೀರ್ಥರು ಶುಭ ಕೋರಿ ಆಶೀರ್ವದಿಸಿದ್ದಾರೆ; ಉಡುಪಿ ಪುರವಾಸಿ ಪೊಡವಿಯೊಡೆಯನೂ ನಿಸ್ಸಂಶಯವಾಗಿ ಹರಸಿಯಾನು; ಅಲ್ಲಿನ ಪ್ರಬುದ್ಧ ಪದವೀಧರ ಮತದಾರರು ಹರಸಬೇಕಷ್ಟೇ, ಅದೂ ಸಂಪನ್ನವಾದೀತು – ಹಾಗಾಗಲಿ. ಭಟ್ಟರ ಗೆಲುವಿನೊಂದಿಗೆ ದೇವದುರ್ಲಭ ಕಾರ್ಯಕರ್ತನೂ ಗೆಲ್ಲಲಿ.

ಭಟ್ರೇ ಗೆದ್ದು ಬನ್ನಿ! ಅನಂತರ ಉಡುಪಿಯ ತಾಲೂಕು ಆಫೀಸಿನಿಂದ ತೊಡಗಿ, ಕಡಿಯಾಳಿಯಲ್ಲಿರುವ ನಿಮ್ಮನ್ನು ಉಚ್ಛಾಟಿಸಿದ ಉಡುಪಿ ಭಾಜಪಾ ಕಚೇರಿಗೆ ಓಪನ್ ಜೀಪ್ ಮೆರವಣಿಗೆಯಲ್ಲಿ ಸಂಭ್ರಮಾಚರಣೆಯಿಂದ ತೆರಳುವುದು ಇದ್ದೇ ಇದೆ! ಅದಕ್ಕೂ ಮೊದಲು ಜೊತೆಯಾಗಿ ಉಡುಪಿ ಕೃಷ್ಣ ಮಠಕ್ಕೆ ತೆರಳಿ ವಿನಮ್ರತೆಯಿಂದ ಶುಭಾಶೀರ್ವಾದ ಪಡೆದು ಅನ್ನ ಪ್ರಸಾದ ಸ್ವೀಕರಿಸೋಣ. ಶ್ರೀಪಾದರನ್ನೂ ಭೇಟಿ ಯಾಗೋಣ. ರಘುಪತಿ ರಾಘವ ರಾಜಾರಾಮ. ಕೃಷ್ಣಂ ವಂದೇ ಜಗದ್ಗುರುಂ. ವಿಜಯೀಭವ!

(ಲೇಖಕರು: ಹವ್ಯಾಸಿ ಬರಹಗಾರರು)