Thursday, 19th September 2024

ಭಟ್ಟಿ ಇಳಿಸುವಿಕೆ ಮತ್ತು ಬಿಟ್ಟಿ ಇಳಿಸುವಿಕೆ

ತುಂಟರಗಾಳಿ

ಸಿನಿಗನ್ನಡ

ಇತ್ತೀಚೆಗೆ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಗಿ ರಿಮೇಕ್ ಸಿನಿಮಾಗಳ ಹಾವಳಿ ಕೊಂಚ ಕಡಿಮೆ ಆದಂತಿತ್ತು. ಆದರೆ ಅದು ಅಷ್ಟು ಸುಲಭವಾಗಿ ಹೋಗುವ ಚಾಳಿ ಅಲ್ಲ ಅನ್ನೋದು ಮತ್ತೆ ಪ್ರೂವ್ ಆಗ್ತಾ ಇದೆ.

ಕನ್ನಡ ಸಿನಿಮಾಗಳು ಬಿಫೋರ್ ಕೆಜಿಎಫ್, ಆಫ್ಟರ‍್ ಕೆಜಿಎಫ್ ಅನ್ನೋ ಹೊಸ ಚಾಪ್ಟರ್ ತೆರೆಯುತ್ತಿದೆ ಎಂದು ಕನಸು ಕಾಣುತ್ತಿದ್ದವರಿಗೆ ಈ ರಿಮೇಕ್ ಹಾವಳಿ ನೋಡಿ ಬೇಸರವಾಗಿದೆ. ಇತ್ತೀಚೆಗೆ ಕನ್ನಡ ಸಿನಿಮಾ ಪ್ರಿಯರ ಇಂಥ ಕನಸಿಗೆ ಇತ್ತೀಚೆಗೆ ಭಂಗ ತಂದಿದ್ದು ನಮ್ಮದೇ ಕನಸುಗಾರ ರವಿಚಂದ್ರನ್.

ಮಲಯಾಳಂನ ಜೋಸೆಫ್ ಚಿತ್ರವನ್ನು ಕನ್ನಡದಲ್ಲಿ ರವಿ ಬೋಪಣ್ಣ ಆಗಿಸಿದ್ದ ರವಿಚಂದ್ರನ್ ಅವರ ಈ ಸಿನಿಮಾ ನೋಡಿ, ನಮ್ಮ ಶೋ ಮ್ಯಾನ್ ಹಿಂಗ್ಯಾ ಕಾದ್ರು ಅಂತ ಅನೇಕರು ಮುಖ ಸಿಂಡರಿಸಿಕೊಂಡಿದ್ದರು.

ಅದ್ಯಾವ ಲೆವೆಲ್ಲಿಗೆ ಈ ಸಿನಿಮಾದಲ್ಲಿ ಬದಲಾವಣೆ ಮಾಡಿಕೊಂಡಿದ್ರು ಅಂದ್ರೆ ಚಿತ್ರವನ್ನು ಕನ್ನಡದ ನೇಟಿವಿಟಿಗೆ ತಕ್ಕಂತೆ ಅಲ್ಲದೆ, ರವಿಚಂದ್ರನ್ ಅವರ ನಾಟಿತನಕ್ಕೆ ತಕ್ಕಂತೆ ಬದಲಾವಣೆ ಮಾಡಿಕೊಂಡಿದ್ರು. ಆದರೂ ಆ ಸಿನಿಮಾ ಇನ್ನಿಲ್ಲದಂತೆ ಸೋತ ನಂತರ ಈಗ ಮತ್ತೊಂದು ರಿಮೇಕ್ ಸಿನಿಮಾ ಬಂದಿದೆ. ಅದು ಡಾಲಿ ಧನಂಜಯ ಅವರ ಮಾನ್ಸೂನ್ ರಾಗ ಸಿನಿಮಾ.

ಈ ಸಿನಿಮಾದ ಬಗ್ಗೆ ಪ್ರೇಕ್ಷಕ ಒಳ್ಳೆಯ ಮಾತೇ ಹೇಳುತ್ತಿದ್ದರೂ ಅವರ ಅಸಮಾಧಾನಕ್ಕೆ ಕಾರಣ ಅಂದ್ರೆ ಚಿತ್ರತಂಡ ಸಿನಿಮಾ ಬಿಡುಗಡೆಗೆ ಮುನ್ನ ಇದು ರಿಮೇಕ್ ಅಂತ ಎಲ್ಲೂ ಹೇಳದೇ ಇದ್ದಿದ್ದು. ತೆಲುಗು ಸಿನಿಮಾ ಒಂದನ್ನು ಕಾಪಿ ಮಾಡಿರುವ
ಮಾನ್ಸೂನ್ ರಾಗ ಸಿನಿಮಾ ತಂಡ ಹೀಗೆ ಮಾಡಿದ್ದು ಯಾಕೆ ಅಂತ ಎಲ್ಲರಿಗೂ ಆಶ್ಚರ್ಯ. ಸಾಮಾನ್ಯವಾಗಿ ಹಕ್ಕು ತೆಗೆದು ಕೊಂಡು ರಿಮೇಕ್ ಮಾಡುವವರು ಒಂದು ಕಡೆ ಆದ್ರೆ, ಕದ್ದು ರಿಮೇಕ್ ಮಾಡೋರು ಇನ್ನೊಂದು ಕಡೆ. ಆದರೆ ಈ ಸಿನಿಮಾ
ನೋಡಿದವರಿಗೆ ಇದು ಹಕ್ಕುಗಳನ್ನು ಖರೀದಿಸಿಯೇ ಮಾಡಿರೋ ಸಿನಿಮಾ ಅಂತ ಗೊತ್ತಾಗುತ್ತೆ. ಆದ್ರೆ ಸಿನಿಮಾ ತಂಡ ಈ ಸತ್ಯವನ್ನು ಬಚ್ಚಿಟ್ಟಿದ್ದು ಮಾತ್ರ ಯಾವ ಪುರುಷಾರ್ಥಕ್ಕೆ ಅನ್ನೋದು ಯಾರಿಗೂ ಅರ್ಥ ಆಗ್ತಿಲ್ಲ.

ಲೂಸ್ ಟಾಕ್
ನರೇಂದ್ರ ಮೋದಿ (ಕಾಲ್ಪನಿಕ ಸಂದರ್ಶನ)
ಏನ್ ಸಾರ್ ನಿನ್ನೆ ನಿಮ್ ಬರ್ತ್ ಡೇ ಅಂತೆ?
-ಏನ್ರೀ ಅದು, ಬರ್ತ್ ಡೇ ಅಂತೆ ಅಂದ್ರೆ? ನಾನು ಅದ್ರಲ್ಲೂ ಸುಳ್ಳು ಹೇಳ್ತೀನಿ ಅಂತನಾ?

ಸಾರ್, ನಾನೇನೂ ಹೇಳಿಲ್ಲ, ಸುಮ್ನೆ ನೀವೇ ಯಾಕ್ ಏನೇನೋ ಹೇಳ್ತಾ ಇದ್ದೀರಾ. ಸರಿ, ಬರ್ತ್ ಡೇ ಕೇಕ್ ಕೊಡಲ್ವಾ ಸರ್?
-ನಾ ಖಾವೂಂಗಾ, ನಾ ಖಾನೇ ದೂಂಗಾ
ಸರಿ, ಹೋಯ್ತು, ನೀವ್ ನೋಡಿದ್ರೆ ಹಿಂಗ್ ಹೇಳ್ತೀರಾ, ಆದ್ರೆ ಕರ್ನಾಟಕದಲ್ಲಿ ನಿಮ್ಮ ಸರಕಾರದೋರು ೪೦ ಪರ್ಸೆಂಟ್ ಕಮಿಷನ್ ತಿಂತಾ ಇzರಲ್ವಾ. ಅದರ ಬಗ್ಗೆ ಏನ್ ಹೇಳ್ತೀರಿ?

-ಅಯ್ಯೋ, ಹೌದಾ, ನಂಗೊತ್ತಿಲ್ಲ ಇರಿ, ನಮ್ಮ ವಿವೇಕ್ ಅಗ್ನಿಹೋತ್ರಿ ಗೆ ಹೇಳಿ ‘ಕಮಿಷನ್ ಇಂಪಾಸಿಬಲ್’ ಅಂತ ಸಿನಿಮಾ ಮಾಡಿಸ್ತೀನಿ.

ಹೋಗ್ಲಿ ಬಿಡಿ,, ದೇಶದ ಹಣಕಾಸಿನ ಪರಿಸ್ಥಿತಿ ಸರಿ ಮಾಡೋ ವಿಷಯದಲ್ಲಿ ಏನಾದ್ರೂ ಪ್ರೋಗ್ರೆಸ್ ಆಗ್ತಾ ಇದೆಯಾ?
-ಪ್ರೋಗ್ರೆಸ್ ಆಗೋಕೆ ಈ ಕಾಂಗ್ರೆಸ್ ನೋರು ಬಿಟ್ರೆ ತಾನೇ?

ಅಂತೂ ಎಲ್ಲದಕ್ಕೂ ಕಾಂಗ್ರೆಸ್ ಕಾರಣ ಅಂತೀರಾ?

-ಹೌದು ಮತ್ತೆ, ನಾವು ಎಷ್ಟೋ ರಾಜ್ಯಗಳಲ್ಲಿ ಅಧಿಕಾರಕ್ಕೆ ಬರೋಕೂ ಅವರ ಶಾಸಕರೇ ಕಾರಣ ಅಲ್ವಾ?

ನೆಟ್ ಪಿಕ್ಸ್
ಖೇಮು ಮತ್ತು ಖೇಮುಶ್ರೀ ಮದುವೆ ಆಗಿ ೩೦ ವರ್ಷಗಳೇ ಆಗಿದ್ದವು. ಮಗ ಮತ್ತು  ಮಗಳು ವಿದೇಶದಲ್ಲಿ ಕೆಲಸ ಸಿಕ್ಕಿದ್ದರಿಂದ ಅಲ್ಲಿಯೇ ವಾಸವಾಗಿದ್ದರು. ಒಂದು ದಿನ ಖೇಮು ತನ್ನ ಮಗನಿಗೆ ಕಾಲ್ ಮಾಡಿದ. ಅತ್ತ ಮಗ ಕಾಲ್ ರಿಸೀವ್ ಮಾಡುತ್ತಿದ್ದಂತೆ,
ನೋಡಪ್ಪಾ, ಈ ವಿಷಯ ಹೇಳೋಕೆ ನನಗೆ ಕಷ್ಟ ಆಗ್ತಿದೆ, ನಿಂಗೂ ಬೇಜಾರಾಗಬಹುದು.

ಬೆಳಗ್ಗೆ ಬೆಳಗ್ಗೆ ನಿನ್ನ ಮೂಡು ಹಾಳು ಮಾಡುತ್ತಿರೋದಕ್ಕೆ ಸಾರಿ, ಆದರೆ ನಿನಗೆ ಒಂದು ವಿಷಯ ಹೇಳಲೇಬೇಕಿದೆ. ನಾನು ನಿಮ್ಮ ಅಮ್ಮನಿಗೆ ಡಿವೋರ್ಸ್ ಕೊಡ್ತಾ ಇದ್ದೀನಿ. ೪೦ ವರ್ಷ ಅವಳನ್ನು ಸಹಿಸಿಕೊಂಡಿದ್ದು ಸಾಕಾಗಿದೆ ಅಂದ. ಖೇಮು ಮಗನಿಗೆ ಆಶ್ಚರ್ಯ. ಇಷ್ಟ್ ದಿನ ಚೆನ್ನಾಗೇ ಇದ್ರಲ್ಲ ಏನಾಯ್ತು? ಅಂತ ಕೇಳಿದ. ಅದಕ್ಕೆ ಖೇಮು, ನನಗೆ ನಿಮ್ಮಮ್ಮನ ಮುಖ ನೋಡಿದ್ರೆ ಆಗ್ತಾ ಇಲ್ಲ. ಅದ್ ಬಿಡು, ಈಗ ಅದನ್ನೆ ಮಾತಾಡೋಕೆ ನನಗೆ ಮೂಡಿಲ್ಲ, ನಾನು ನಾಳೆನೇ ಡಿವೋರ್ಸ್‌ಗೆ ಅಪ್ಲೈ ಮಾಡ್ತೀನಿ.

ಅದನ್ನ ಮತ್ತೆ ನಿನ್ನ ತಂಗಿಗೆ ಹೇಳುವಷ್ಟು ಪೇಶ ನಂಗಿಲ್ಲ. ನೀನೇ ಅವಳಿಗೆ ಕಾಲ್ ಮಾಡಿ ಹೇಳು ಅಂತ ಫೋನಿಟ್ಟ. ಖೇಮು ಮಗ ತಕ್ಷಣ ತನ್ನ ತಂಗಿಗೆ ಕಾಲ್ ಮಾಡಿ ಹಿಂಗೆ ಅಪ್ಪ, ಅಮ್ಮನಿಗೆ ಡಿವೋರ್ಸ್ ಕೊಡ್ತಾ ಇದ್ದಾರೆ. ನಾಳೆನೇ ಡಿವೋರ್ಸ್ ಫೈಲ್ ಮಾಡ್ತಾ ಇದ್ದಾರೆ ಅಂತ ಹೇಳಿದ. ಖೇಮು ಮಗಳಿಗೆ ಸಿಕ್ಕಾಪಟ್ಟೆ ಸಿಟ್ಟು ಬಂತು. ಅದೆಂಗಾಗುತ್ತೆ, ನಾನು ಅವರತ್ರ ಮಾತಾಡ್ತೀನಿ, ನೀನೂ ನನ್ನ ಜೊತೆ ಬಾ, ಯಾವುದೇ ಕಾರಣಕ್ಕೂ ನಾನು ಅಪ್ಪ ಡಿವೋರ್ಸ್ ಕೊಡೋಕೆ ಬಿಡಲ್ಲ ಅಂತ ಹೇಳಿ ಮರುಕ್ಷಣವೇ ಅಪ್ಪನಿಗೆ ಫೋನ್ ಮಾಡಿ ಹೇಳಿದಳು, ನೋಡಪ್ಪಾ, ಈ ವಯಸ್ಸಲ್ಲಿ ಸುಮ್ನೆ ಹೆಂಗೆಂಗೋ ಆಡಬೇಡ.

ನೀನು ನಮ್ಮ ಜೊತೆ ಮಾತಾಡದೆ ಯಾವ ನಿರ್ಧಾರವನ್ನೂ ತೆಗೆದುಕೊಳ್ಳೋಹಾಗಿಲ್ಲ, ನಾವು ನಾಳೆನೇ ಇಂಡಿಯಾಗೆ ಬರ್ತಾ ಇದ್ದೀವಿ, ಅ ಕುಳಿತು ಮಾತಾಡೋಣ, ಅಷ್ಟೇ ಅಂತ ಫೋನಿಟ್ಟಳು. ಈ ಕಡೆ ಕಾಲ್ ಕಟ್ ಮಾಡಿದ ಖೇಮು, ಖೇಮುಶ್ರೀ ಕಡೆ ತಿರುಗಿ ಹೇಳಿದ, ಲೇ, ಇವಳೇ, ದಸರಾ ಹಬ್ಬಕ್ಕೇನೋ ವ್ಯವಸ್ಥೆ ಆಯ್ತು, ದೀಪಾವಳಿಗೆ ಏನ್ ಸುಳ್ ಹೇಳೋದು?

ಲೈನ್ ಮ್ಯಾನ್

ಗಂಡ ಹೆಂಡ್ತಿ ಮ್ಯಾಟ್ರು
-ಅಲ್ಲ ಕಣೇ, ಊಟಕ್ಕೆ ಉಪ್ಪಿನಕಾಯಿನೇ ಹಾಕಲ್ವಲ್ಲ ನೀನು, ಅದನ್ನ ಹಂಗೇ ಇಟ್ಕೊಂಡು ಏನ್ ಮಾಡ್ತಿಯಾ.. ಏನ್ ಉಪ್ಪಿನಕಾಯಿ ಹಾಕ್ಕೊಂಡ್ ನೆಕ್ತೀಯಾ?

ಬೆಂಗಳೂರಿನಲ್ಲಿ ಅತ್ಯಂತ ದಪ್ಪ ಇರೋ ಹುಡುಗಿ ಯಾರು ಅನ್ನೋ ಸ್ಪರ್ಧೆ ನಡೆದರೆ ಅದರಲ್ಲಿ ಕೊಡುವ ಪ್ರಶಸ್ತಿ
-ಬೃಹತ್ ಬೆಂಗಳೂರು ನಗರ ಬಾಲಿಕೆ
೫ ಬಾಲ್ ಬೋಲ್ ಮಾಡಿ, ೬ ಬಾಲ್ ಆಯ್ತು ಅಂತ ವಾದ ಮಾಡೋದು
– ‘ಓವರ್’ ಕಾನಿಡೆ
ಫೇಸ್ ಬುಕ್ ಸತ್ಯ
-ಕೆಲವ್ರು ಪ್ರೊಫೈಲ್ ಪಿಕ್‌ನಲ್ಲಿ ಎಲ್ಲಾ ಸೀರಿಯಸ್ಸಾಗ್ ಇರ್ತಾರೆ ಅಂದ್ರೆ, ನಮ್ ಪೋಸ್ಟಿಗೆ ಅವ್ರು ಸ್ಮೈಲ್ ರಿಯಾಕ್ಷನ್ ಕೊಟ್ರೆ ನಂಬೋಕೇ ಆಗಲ್ಲ ಒಂದು ಮುಖ್ಯವಾದ ವಿಷಯದಿಂದ ನಮ್ಮನ್ನು ಹೊರಗಿಡ್ತಾರೆ ಅನ್ನುವ ಆತಂಕ
omitting sensation

ಸುದೀಪ್ ಹೆಸರಲ್ಲಿ ಅಂಚೆ ಲಕೋಟೆ
ಸುದೀಪ್ – ಕೋಟಿಗೊಬ್ಬ
ವೀರ ಮದಕರಿಯಲ್ಲಿ – ಮದಕರಿನಾಯಕನ ಕೋಟೆಗೊಬ್ಬ
ಈಗ – ಲಕೋಟೆಗೊಬ್ಬ
ಇನ್ನೊಬ್ಬರಿಗೆ ತೊಂದರೆ ಕೊಡುವ ಸಂಸ್ಕೃತಿ
-‘ಕಾಟಾ’ಚಾರ
ಇಂಗ್ಲಿಷ್‌ಗೂ ಕನ್ನಡಕ್ಕೂ ಅಂಥ ವ್ಯತ್ಯಾಸ ಏನಿಲ್ಲ
-ಕನ್ನಡದ ಹಟ್ಟಿಯಲ್ಲಿ ಇಂಗ್ಲಿಷಿನ ಹಟ್‌ಗಳು ಇರುತ್ತವೆ.
ಆಶ್ಚರ್ಯ ಮತ್ತು ಅಸಹ್ಯಗಳ ನಡುವಿನ ವ್ಯತ್ಯಾಸ
-ಒಂದು ಮೂಗಿನ ಮೇಲೆ ಬೆರಳಿಟ್ಟುಕೊಳ್ಳೋದು, ಇನ್ನೊಂದು ಮೂಗಿನ ಒಳಗೆ ಬೆರಳಿಟ್ಟುಕೊಳ್ಳೋದು.
ಪರಭಾಷೆಯ ಚಿತ್ರವನ್ನು ನೇರ ರಿಮೇಕ್ ಮಾಡಿದ್ರೆ– ಭಟ್ಟಿ ಇಳಿಸುವಿಕೆ
ಕದ್ದು ರಿಮೇಕ್ ಮಾಡಿದ್ರೆ- ಬಿಟ್ಟಿ ಇಳಿಸುವಿಕೆ