Saturday, 14th December 2024

ಭೂತಾಯಮ್ಮನ ದಿನಕ್ಕೆ ಕಾಡಿದ ಅಮ್ಮನ ನೆನಕೆ

ಸುಪ್ತ ಸಾಗರ

ರಾಧಾಕೃಷ್ಣ ಎಸ್.ಭಡ್ತಿ

rkbhadti@gmail.com

ತಾಯಿಯಲ್ಲಿಯಂತೇ ಭೂಮಿಯಲ್ಲೂ ಪ್ರೀತಿ- ವಾತ್ಸಲ್ಯಗಳ ಜೀವಧಾರೆ ನಿರಂತರ ಪ್ರವಾಹ. ತಾಯ್ತನದ ಎಲ್ಲ ತುಡಿತಗಳೂ ಭೂಮಿಯ ಮೂಲ ಸೊಗಡಿನಲ್ಲಿ ಬೆರೆತು ಹೊರಹೊಮ್ಮುತ್ತವೆ. ಬರುವ ಶುಕ್ರವಾರ(ಏಪ್ರಿಲ್22) ವಿಶ್ವ ಮಾತೆ ಎನಿಸಿದ ‘ಭೂ ದಿನ’. ನಮ್ಮನ್ನು ಮಡಿಲಲ್ಲಿಟ್ಟು ಪೊರೆಯುವ ‘ಭೂತಾಯಮ್ಮ’ನ ಬಗ್ಗೆ ಹೀಗೊಂದು ನೆನಕೆ.

ಅದು ಕಡಲು. ಅಲ್ಲಿ ವಾತ್ಸಲ್ಯದ ಅಲೆ ಉಕ್ಕುಕ್ಕಿ ಬಂದು ಬದುಕಿಗಪ್ಪಳಿಸುತ್ತದೆ. ಆದರೆ ಕಡಲ್ಕೊರೆತವಿಲ್ಲ. ಬಂದೊತ್ತಿ ಕುಳಿತ ದುಗುಡ- ಜಾವಡದ ಕಲ್ಮಶಗಳನ್ನು ತೆಕ್ಕೆಗೆಳೆದುಕೊಂಡು ತನ್ನೊಡಲೊಳಗೆ ತುಂಬಿಟ್ಟು ನಗುವ ಉಬ್ಬರವ ಹೊಮ್ಮಿಸುವ ಆ ವಿಶಾಲ ಕಡಲಿನ ಹೆಸರು ತಾಯಿ! ಪೃಥ್ವಿ- ತಾಯಿ ಒಂದಕ್ಕೊಂದು ಪರ್ಯಾಯ.

ಜಗತ್ತಿನ ಅತಿ ಸುರಕ್ಷಿತ ತಾಣ ತಾಯ ಮಡಿಲು. ಈ ನೆಲದ ವ್ಯಕ್ತಿತ್ವದ ಮೂಲ ಪ್ರೇರಣೆಯದು. ತ್ಯಾಗ, ಪ್ರೀತಿ, ಸಂಯಮ, ದಯೆ, ಔದಾರ್ಯ ಸೀತ್ವದ ಸಹಜ ಸ್ವಾಭಾವಿಕ ಗುಣಗಳು. ಅವುಗಳ ಜತೆ ಮಾತೃತ್ವದ ಮಹಾಗುಣ ಸೇರಿದಾಗಲೇ ಸೀಯೊಬ್ಬಳು ದೈವಿಕ ಸ್ಥಿತಿಗೆ ತಲುಪುತ್ತಾಳೆ. ಅವಳು ಅಮ್ಮ; ಕಾಮ, ಭೋಗ, ಆಸೆಗಳ ಆಕರ್ಷಣೆಗಳನ್ನು ಮೀರಿ, ರಮ್ಯತೆಯನ್ನು ದಾಟಿ ನಿಲ್ಲುವ ಶಕ್ತಿರೂಪಿಣಿ. ಭಾರತೀಯ ಸೀ ಮಾತೃತ್ವವನ್ನೂ, ಆ ಮೂಲಕ ದೈವತ್ವನ್ನೂ ಗಳಿಸಿಕೊಂಡಿದ್ದು ಅಕಾರಣಕ್ಕಲ್ಲ.

ಮಾತೆ ಚೈತನ್ಯ ಸ್ವರೂಪಿ. ಆಕೆ ಪ್ರಕೃತಿ. ಜೀವಸೃಷ್ಟಿಯೊಂದಿಗೆ ಅವುಗಳ ಪೋಷಣೆಯೇ ಆಕೆಯ ಜನ್ಮಗುಣ. ಮಾತೃತ್ವ ಆಕೆಯ ಸಂಕೇತ. ಸೃಷ್ಟಿಯ ಅತ್ಯಪೂರ್ವ ಕೊಡುಗೆ ಯಾಗಿ ಎಲ್ಲ ಜೀವಿಗಳ ಮೂಲಾಧಾರವಾಗಿ ನಿಲ್ಲುವ ಈ ಭೂಮಿ ತಾಯ್ತನದ ಪರ್ಯಾಯ. ಎಲ್ಲ ಕ್ರಿಯಾಶೀಲತೆಯ ಮೂಲ ಸೆಲೆಯಾಗಿ ಗೋಚರಿಸುವ ಈ ಪೃಥ್ವಿ ತಾಯ್ತನದ ಮುಖ್ಯ ನೆಲೆಗಳಾದ ಪ್ರೀತಿ ಮತ್ತು ಸುರಕ್ಷೆಯನ್ನು ತನ್ನೊಳಗೆ ಒಂದಾಗಿಸಿ ಕೊಂಡುಬಿಟ್ಟಿದೆ.

ಇದೇ ತಾಯ್ತನ ಭಾರತೀಯ ಸಂಸ್ಕೃತಿಯ ಆಧಾರಸ್ತಂಭವಾಗಿ ನಿಂತಿದೆ. ಭಾರತೀಯ ಮನಸ್ಸಿನ ಮೇಲೆ ಅತ್ಯಂತ ಗಾಢ ಪರಿಣಾಮ ವೊಂದನ್ನು ಬೀರುವಲ್ಲಿ ಯಶಸ್ವಿಯಾಗಿದ್ದರೆ ಅದು ತಾಯ್ತನದ ಸಂಬಂಧ. ಇದರ ಅಭಿವ್ಯಕ್ತಿ ವ್ಯಕ್ತಿಯ ಬದುಕಿನ ಎಲ್ಲ ನೆಲೆಗಳಲ್ಲಿ ಪ್ರಭಾವ ಶಾಲಿಯಾಗಿ ಬಿಟ್ಟಿದೆ. ಧರ್ಮದ ನೆಲೆಯಲ್ಲಿ ನೋಡಿದಾಗಲೂ ಭೂಮಿಯ ಮಾತೃದಾಯಿತ್ವ ಪ್ರತಿಮೆಯಾಗಿ ನಿಲ್ಲುತ್ತದೆ. ಇದೇ ಕಾರಣಕ್ಕೆ ನಾವು ಭಾರತೀಯರು ಇಂಥ ತಾಯ್ತನಕ್ಕೆ ಅತ್ಯಂತ ಉತ್ಕಟವಾಗಿ ಸ್ಪಂದಿಸುತ್ತೇವೆ.

ಮಹಾಮಾತೆಯವಳು. ತಾಯಿ ಮತ್ತು ಭೂಮಿಯಲ್ಲಿನ ಎಲ್ಲ ಗುಣಗಳಲ್ಲೂ ಸಾಮ್ಯವಿದೆ. ಅವೆರಡರ ನಡುವಿನ ತನ್ಮಯತೆಯಿಂದ ಇದು ಸಾಧ್ಯವಾಗಿರಬಹುದು. ಹೀಗಾಗಿಯೇ ಭೂಮಿ ಜೀವರಾಶಿಗಳ ಮಾತೆಯಾಗಿ ಗೋಚರಿಸುತ್ತಾಳೆ. ಪ್ರೀತಿ- ವಾತ್ಸಲ್ಯಗಳ ಜೀವಧಾರೆ
ತಾಯಿಯಲ್ಲಿಯಂತೇ ಭೂಮಿಯಲ್ಲೂ ನಿರಂತರ ಪ್ರವಾಹ. ತಾಯಿಯದು ಪರಿಶುದ್ಧ ವಾತ್ಸಲ್ಯವಾಗಿದ್ದರೆ ಭೂತಾಯಿಯದು ಅಧ್ಯಾತ್ಮ ಪ್ರೇರಿತ ಮಮತೆ. ಇಬ್ಬರಲ್ಲೂ ವಾತ್ಸಲ್ಯವೇ ಮೂಲ ಸ್ಥಾಯಿಯಾಗಿ ಬಿಂಬಿತವಾಗುವುದು ಎಷ್ಟು ಸತ್ಯವೋ, ಭೂಮಿ ಎಲ್ಲ ತಾಯಂದಿರ
ತಾಯಿಯಾಗಿ ಅಧ್ಯಾತ್ಮಶಕ್ತಿಯಾಗಿ ಪೊರೆಯುತ್ತಾಳೆಂಬುದೂ ಅಷ್ಟೇ ಸತ್ಯ.

ತಾಯ್ತನದ ಎಲ್ಲ ತುಡಿತಗಳೂ ಭೂಮಿಯ ಮೂಲ ಸೊಗಡಿನಲ್ಲಿ ಬೆರೆತು ಆಂತರಿಕ ಪ್ರeಯೊಂದಿಗೆ ಹೊರಹೊಮ್ಮುವುದು ಪ್ರಕೃತಿ ವಿಶೇಷ. ಈ ಹಂತದಲ್ಲಿ ನಮಗರಿವಿಲ್ಲದೇ ಆರಾಧನಾಶೀಲತೆಯೊಂದನ್ನು ಮೈಗೂಡಿಸಿಕೊಂಡು ಭೂಮಿಯನ್ನು ಪೂಜನೀಯವಾಗಿ ಕಾಣಲು ಅಡಿ ಇಡುತ್ತೇವೆ. ಅಂತಿಮವಾಗಿ ಮಹಾಮಾತೆಯಾಗಿ ಭೂಮಿ ಅನ್ವಯಗೊಳ್ಳುತ್ತಾಳೆ. ಅನುಭವಗಳ ನಿಗೂಢತೆಯನ್ನು ಅರಗಿಸಿ ಕೊಳ್ಳಲು ಆ ತಾಯಿಗೆ ಪ್ರತೀಕವಾಗಿ ಭೂಮಿ ನಿಲ್ಲುತ್ತಾಳೆ.

ವಿಕಾಸದ ನೆಲೆಯಲ್ಲಿ ಭಾರತೀಯರಿಗೆ ಭೂಮಿಯೇ ಜೀವನದರ್ಶನದ ಮೂಲ ವಾಂಛೆಯಾಗುತ್ತದೆ. ಪ್ರೀತಿ, ವಾತ್ಸಲ್ಯಭರಿತ ಉದಾತ್ತ ಧಾರ್ಮಿಕತೆ ಇದರ ಹಿಂದಿರುವ ಪ್ರೇರಣೆ. ಜೀವಿಗಳ ಹಿಂಸಾಗುಣಗಳ ನಡುವೆಯೂ ದಿನಕ್ಕೊಂದು ಪುನರುತ್ಥಾನ ಸಾಧಿಸುತ್ತ, ತಾಳ್ಮೆಯ ಉತ್ತುಂಗಕ್ಕೆ ಉದಾಹರಣೆಯಾಗುವ ಭೂಮಿ ಸಹಜವಾಗಿಯೇ ನಮ್ಮೊಳಗಿನ ಸಂಘರ್ಷವನ್ನು ಸಂತೈಸುವ ತಾಯಿಯಾಗಿ ಗೋಚರಿಸು ತ್ತಾಳೆ. ವೈಜ್ಞಾನಿಕವಾಗಿಯೂ ಈ ಭೂಮಿ ಜೀವನ ದರ್ಶನಕ್ಕಿರುವ ಪ್ರಯೋಗಶಾಲೆ. ಇದೇ ಸಂವೇದನೆ ಮಾತೃತ್ವದ ಸ್ವರೂಪ ಪಡೆದು ಕೊಂಡಿದ್ದರೆ ಆಶ್ಚರ್ಯವಿಲ್ಲ.

ತಾಯಿಯ ಮಡಿಲ ವಾತ್ಸಲ್ಯದಲ್ಲಿಯೇ ಜೀವಿಗಳು ಬೆಳವಣಿಗೆ ಕಾಣಬೇಕು. ಇದು ನಿಸರ್ಗನಿಯಮ. ತಾಯ್ತನಕ್ಕೆ ಸುರಕ್ಷೆಯ ಎಲ್ಲ ಚೇತನ ವನ್ನೂ ಈ ಸೃಷ್ಟಿಯಲ್ಲಿ ಧಾರೆ ಎರೆಯಲಾಗಿದೆ. ಭೂಮಿಯ ಮೂಲತತ್ವವೂ ಇದೇ; ಜೀವರಕ್ಷಣೆ. ಭೂಮಿಯಲ್ಲಿ ಅಂತರ್ಗತವಾದ ಈ ಸಂರಕ್ಷಣೆಯ ಆಶಯವೇ ತಾಯ್ತನಕ್ಕೆ ಆರೋಪಗೊಳ್ಳುವುದರಿಂದ ಭೂಮಿಯೂ ಮಾತೃ ಸ್ವರೂಪಿಣಿಯೇ. ಮೂಲಭೂತವಾಗಿ ತಾಯಿ- ಮಗುವಿನ ನಡುವಿನ ಸಂಬಂಧಕ್ಕೆ ಪರ್ಯಾಯವೆಂಬುದೇ ಇಲ್ಲ. ಈ ಸೃಷ್ಟಿಯ ಮೇಲಿನ ಜೀವಿಗಳನ್ನು ಶಿಶುಗಳೆಂದು ಪರಿಗಣಿಸಿ ದಲ್ಲಿ, ಜೀವರಾಶಿಗಳು ಅದರಲ್ಲೂ ಮಾನವನ ಹಾಗೂ ಭೂಮಿಯ ನಡುವೆ ಇಂಥದೇ ಒಂದು ಅವಿನಾಭಾವ ಸಂಬಂಧ ತೆರೆದುಕೊಳ್ಳು ತ್ತದೆ.

ಮಾನವನ ಎಲ್ಲ ವಿಕೃತಿಗಳ, ವಿನಾಶಕಾರಿ ಗುಣಗಳ ನಡುವೆಯೂ ಭೂಮಿ ತನ್ನ ಅಗಾಧ ಶಕ್ತಿ, ವಿರಾಟ್ ರೂಪವನ್ನು ಮೆರೆಯುತ್ತದೆ. ಹೀಗಾಗಿ ತಾಯಿಯ ಆಂತರಿಕ ಆಶಯ ಸ್ವರೂಪವನ್ನು ಭೂಮಿಯಲ್ಲಿ ನಾವು ಭಾರತೀಯರು ಕಾಣುತ್ತೇವೆ. ಮಗುವಿನ ಎಲ್ಲ ಹಠಮಾರಿ ತನ, ತುಂಟಾಟ, ರಚ್ಚೆ, ಮುಗ್ಧತೆ, ಮೌಢ್ಯಗಳನ್ನು ಸಹಿಸಿಯೂ ಅದನ್ನು ವ್ಯಕ್ತಿತ್ವದ ನೆಲೆಯತ್ತ ಕೊಂಡೊಯ್ಯುವ ಪರಿಯಲ್ಲಿಯೇ ಈ ಭೂಮಿ, ಮನುಷ್ಯನ ಎಲ್ಲ ಗುಣಹೇಡಿತನವನ್ನು ಸಹಿಸಿಯೂ ಆತನನ್ನು ವಿಕಾಸಪಥದತ್ತ ಕೊಂಡೊಯ್ಯುತ್ತಾಳೆ. ಈ ಕಾರಣಕ್ಕೆ ಭೂಮಿ ಕೇವಲ ಮಣ್ಣಿನ ಉಂಡೆಯಾಗಿ ಉಳಿದುಬಿಡುವುದಿಲ್ಲ. ಅದು ಸಕಲ ಜೀವಂತಿಕೆಯ ಜನ್ಮತಾಣ; ಅರಿವಿನ ಆಗರ.

‘ತಾಯಿ’ಯೆಂಕೆ ಮಗುವಿನ ಮನಸ್ಸಿನೊಳಗಣ ಸರ್ವಶಕ್ತ ಸ್ವರೂಪ ಮಾತ್ರವಲ್ಲ ಎಳವೆಯಲ್ಲಿನ ಭ್ರಮೆಯಲ್ಲ, ಮುಗ್ಧತೆಯ ಜತೆಗಿನ ಆರ್ತತೆಯಲ್ಲ. ಆಕೆ ಎಲ್ಲ ಪ್ರಬುದ್ಧರ ಬದುಕಿಗೂ ಮೂಲಸ್ಥಾಯಿಯಾಗುತ್ತಾಳೆ. ವ್ಯಕ್ತಿಯ ಅಂತರ್ಗತ ಅಹಂಕಾರವನ್ನು ಹತ್ತಿಕ್ಕಿ ವಿನಯಶೀಲ ಭಾವದೊಂದಿಗೆ ಆಕೆಯ ಅಡಿಯಲ್ಲಿ ನಿಂತಾಗ ಮಾತ್ರ ತಾಯ್ತನದ ನೈಜ ಕ್ರಿಯಾಶೀಲತೆಯ ಅರಿವಾದೀತು. ತನ್ನ ಭಾಗವಾಗಿ ಭೂಮಿ ಗಿಳಿಯುವ ಮಗುವನ್ನು ಉನ್ನತ ವ್ಯಕ್ತಿಯನ್ನಾಗಿ, ಸದೃಢ ಮನುಷ್ಯನನ್ನಾಗಿ ರೂಪಿಸುವ ಆಶಯ ಆಕೆಯಲ್ಲಿ ಹುದುಗಿ ಕುಳಿತಿರುತ್ತದೆ. ಇಂಥದೇ ಒಂದು ಹೃದಯ ವೈಶಾಲ್ಯದ ಕಲ್ಪನೆಯನ್ನು ಭೂಮಿಗೆ ಆರೋಪಿಸುವುದು ಭಾರತೀಯ ಮನಸ್ಸಿನ ಭಾವುಕತೆಯ ಪ್ರತೀಕ.

ನಮ್ಮ ಇಡೀ ಬದುಕೆಂಬುದು ಈ ಮಣ್ಣಿನಿಂದ ಆವೃತಗೊಂಡಿರುತ್ತದೆ. ಯಾವ ಮಣ್ಣಿನಲ್ಲಿ ಜನಿಸಿ ಬದುಕನ್ನು ಪಡೆದಿರುತ್ತೇವೋ ಅದೇ ಮಣ್ಣಿನಲ್ಲಿ ಒಂದಾಗುವುದು ಮಾತ್ರ ಕೇವಲ ಭಾವುಕ ಕಲ್ಪನೆಯಲ್ಲ. ಇದು ಜೈವಿಕ ಸಂವಾದಿ ಶಕ್ತಿಯ ಫಲ. ಏಕೆಂದರೆ ನಮಗೆ ಭೂಮಿ ತಾಯಿ ಮಾತ್ರವಲ್ಲ, ಆಕೆ ದೈವಸ್ವರೂಪಿ; ಅಂತೆಯೇ ನಮ್ಮ ತಾಯಿಯೂ ಹೌದು. ತಾಯಿ ತನ್ನ ಮಕ್ಕಳನ್ನು ಸದಾ ತನ್ನ ಮಡಿಲಲ್ಲಿ
ಅಡಗಿಸಿಟ್ಟುಕೊಳ್ಳುತ್ತಾಳೆ. ಗಾಳಿ, ಬಿಸಿಲು, ನೀರು ಹೆಚ್ಚಾಗಿ ಬಾಽಸದಂತೆ ಕಾಪಿಟ್ಟುಕೊಳ್ಳುತ್ತಾಳೆ.

ಮಗುವನ್ನು ಇಷ್ಟು ಜೋಪಾನ ಮಾಡುವ ತಾಯಿಯನ್ನು ಮಾತ್ರ ನಾವು ಹೇಗೆಂದರೆ ಹಾಗೆ ಬಿಸಿಲಿಗೆ ಒಡ್ಡುತ್ತೇವೆ, ಮಳೆಯಲ್ಲಿ
ತೋಯಿಸುತ್ತೇವೆ. ಗಾಳಿಗೆ ಹಿಡಿಯುತ್ತೇವೆ. ಭೂತಾಯಿಯ ಹಸಿರ ಸೆರಗನ್ನು ಮನಬಂದಂತೆ ಹರಿದು, ಹಚ್ಚಡವನ್ನು ತೆಗೆದು ಬೆತ್ತಲೆಯಾಗಿಸಿ ಶೋಷಸುತ್ತಿದ್ದೇವೆ. ಭೂಯಿಯ ಮೇಲೆ ಬೆಳೆದು ನಿಂತ ಹಸಿರು ವನರಾಶಿಯೆಂದರೆ ಅದು ತಾಯಿಯ ಸೆರಗು ಇದ್ದಂತೆ.
ಹಾಗೆಯೇ ಮರಗಳಿಂದ ಉದುರುವ ಎಲೆ, ದರಗು, ಕಸ, ಕಡ್ಡಿಗಳೂ ಆಕೆಯ ಚರ್ಮವನ್ನು (ಮೇಲ್ಮಣ್ಣು) ಸವಕಳಿಯಿಂದ ರಕ್ಷಿಸುತ್ತಿರುತ್ತವೆ. ಕಳೆಗಳು ದೇಹದ ಕಾಂತಿಯನ್ನು ಕಾಪಿಡುತ್ತಿರುತ್ತವೆ. ಇದಕ್ಕೆ ಮುಚ್ಚಿಗೆ ಎಂದು ಹೆಸರು. ಅಂಥ ಮುಚ್ಚಿಗೆಯನ್ನು ತೆಗೆದು ಹಾಕಿ ಬೆತ್ತಲೆ
ತಾಯಿಯನ್ನು ಹೊರಗೆ ಆಂಗಳದಲ್ಲಿ ಮಲಗಿಸಿ ಬಂದು ಎಷ್ಟೋ ಕಾಲವಾಗಿ ಹೋಗಿದೆ.

ಆಕೆಯ ದೇಹಕ್ಕೆ ಸುರಿಯುತ್ತಿರುವ ರಾಸಾಯನಿಕ ಔಷಧಗಳ, ವಿಟಮಿನ್‌ಗಳ ಹೆಸರಿನ ಗೊಬ್ಬರದ ಪ್ರಮಾಣ ಗಮನಿಸಿದರೆ ದಂಗುಬಡಿದು ಹೋಗಬೇಕು. ಪ್ರಗತಿಯ ಭ್ರಮೆಗೆ ಸಿಲುಕಿದ ಮನುಜ, ತಂತ್ರಜ್ಞಾನವನ್ನು ಪ್ರಗತಿಯ ಬದಲಾಗಿ ಗತಿಗೆ ಬಳಸಿಕೊಳ್ಳುತ್ತಿರುವುದಕ್ಕೆ ಇದಕ್ಕಿಂತ ಸ್ಪಷ್ಟ ಉದಾಹರಣೆ ಮತ್ತೊಂದಿಲ್ಲ. ಇದು ಯಾರೋ ಹೇಳುತ್ತಿರುವ ಮಾತಲ್ಲ. ತತ್ರಜ್ಞಾನ, ಆಧುನಿಕ ಕೃಷಿ ವಿರೋಧಿಗಳ
ಬಡಬಡಿಕೆಯಲ್ಲ. ಅಮೆರಿಕದ ಕೃಷಿ ವಿಜ್ಞಾನಿ ಮೈಖೆಲ್ ರೆನಾಲ್ಡ್ಸ್‌ನ ಸಂಶೋಧನೆಯಲ್ಲಿ ಸಾಬೀತಾಗಿರುವ ಸಂಗತಿ.

ಸ್ವಾತಂತ್ರ್ಯದ ಹೊಸ್ತಿಲಲ್ಲಿ, ಅಂದರೆ 50 ರದಶಕದಲ್ಲಿ ಭಾರತದಲ್ಲಿ ಕೇವಲ 5 ಲಕ್ಷ ಟನ್ ರಸಗೊಬ್ಬರ ಬಳಕೆಯಾಗುತ್ತಿತ್ತು. ಈಗ ಅದು 1.75 ಕೋಟಿ ಟನ್, ಅಂದರೆ ಸರಿ ಸುಮಾರು ಮೂವತ್ತೈದುಪಟ್ಟು ಹೆಚ್ಚು. ಮಾರುಕಟ್ಟೆಯಲ್ಲಿ ಇಂದು 150ಕ್ಕೂ ಹೆಚ್ಚು ಬಗೆಯ ಕ್ರಿಮಿ ನಾಶಕಗಳು ರಾರಾಜಿಸುತ್ತಿವೆ. ಪ್ರತಿ ವರ್ಷ ನಾವು ಬಳಸುತ್ತಿರುವ ಕೀಟ ನಾಶಕದ ಪ್ರಮಾಣ ೬೦ ಸಾವಿರ ಟನ್ ಗೆ ಕಡಿಮೆ ಇಲ್ಲ. ಬಹುಶಃ ಭೂತಾಯಿಯ ಲಿವರ್, ಕಿಡ್ನಿಗಳು ಈಗಾಗಲೇ ಸುಟ್ಟು ಕರಕಲಾಗಿ ಹೋಗಿದ್ದಿರಬಹುದು.

ನಮಗೆ ಒಂದು ತಲೆ ನೋವಿನ ಮಾತ್ರೆ ತೆಗೆದುಕೊಂಡರೇ ಹೇಳಿಕೊಳ್ಳಲಾಗದ ಸಂಕಟ. ನೀರು ಕುಡಿದಷ್ಟೂ ಸಮಾಧಾನಲ್ಲ. ಅಂಥದ್ದರಲ್ಲಿ ಈ ಪ್ರಮಾಣದ ರಾಸಾಯನಿಕದ ಬೇಗುದಿ, ಸಂಕಟವನ್ನು ತಾಳಿಕೊಳ್ಳಲು ಆ ತಾಯಿಗೆ ಅದೆಷ್ಟು ನೀರು ಬೇಕಿದ್ದೀತು? ಹಾಗೆ ಕುಡಿಯುವ
ನೀರಿನಲ್ಲೂ ಮತ್ತದೇ ರಾಸಾಯನಿಕ. ಏಕೆಂದರೆ ನಾವು ಮಿತಿ ಮೀರಿ ಬಳಸಿದ ರಾಸಾಯನಿಕಗಳು ನಮ್ಮ ಕೆರೆ, ಬಾ, ಕೊಳವೇಬಾ ಗಳನ್ನೇ ತಾನೆ ಹೋಗಿ ಸೇರುವುದು? ಇದು ಒಳಗಿನ ಗೋಳಾದರೆ ಹೊರಗಿನ ಬಾಧೆ ಕಣ್ಣ ದೇ ಇದೆ. ದೌರ್ಜನ್ಯದಿಂದ ಬೆತ್ತಲೆಯಾಗಿಸಿದ ಅಮ್ಮ ನ ಚರ್ಮ ಸಂಪೂರ್ಣ ಶುಷ್ಕವಾಗಿ ಹೋಗಿದೆ. ಅಮ್ಮನ ಸೆರಗಲ್ಲಿ ಅಡಗಿದ್ದ ಸೂಕ್ಷಾಣು, ಜೀವತಂತುಗಳು ಇದೀಗ ಬಿಸಿಲಿಗೆ ಗಾರುತ್ತಿದೆ. ಹೀಗಾಗಿ ಆಕೆಯ ದೇಹದ ಚರ್ಮ ಒಂದು ಹಾಸು ಹಪ್ಪಳಕೆಯಾಗಿ ಬರುತ್ತಿದೆ.

ಚರ್ಮ ರಂಧ್ರಗಳಲ್ಲಿ ಕ್ರಿಯಾಶೀಲವಾಗಿದ್ದು ನಿರೋಧಕ ಶಕ್ತಿಯನ್ನು ಒದಗಿಸುತ್ತಿದ್ದ ಜೀವ ತಂತುಗಳು ನಾಶವಾಗಿವೆ. ಕನಿಷ್ಠ 25 ರಿಂದ ೩೦ ಡಿಗ್ರಿ ಸೆಂಟಿಗ್ರೇಡ್ ತಾಪಮಾನ ಹಾಗೂ ಶೇ. ೬೦ ರಿಂದ ಶೇ.೭೦ರಷ್ಟು ತೇವಾಂಶಲ್ಲದೇ ಈ ಜೀವತಂತುಗಳು ಮಣ್ಣಿನಲ್ಲಿ ಜೀವಂತ ವಾಗಿರಲು ಸಾಧ್ಯವೇ ಇಲ್ಲ. ಇಂಥದ್ದೊಂದು ಸಮತೋಲನ ಕಾಯ್ದುಕೊಳ್ಳಲು ಭೂತಾಯಿಗೆ ಮುಚ್ಚಿಗೆ ಅತ್ಯವಶ್ಯಕ.

ಭೂಮಿ ಸುರದ್ರೂಪಿ, ಸೌಂದರ್ಯದ ಖನಿ, ಆಕೆಯೊಂದಿಗೆ ನಿಂತಾಗ ಒಂಟಿತನವೆಂಬುದು ಬಾಧಿಸಲು ಸಾಧ್ಯವೇ ಇಲ್ಲ. ಥರಹೇವಾರಿ ರೂಪದೊಂದಿಗೆ ಮನಸೆಳೆಯುವ ಭೂತಾಯ ಒಡಲು ಸಹ ಸಮೃದ್ಧ. ಮಾತೃತ್ವವೆಂಬುದೇ ಹಾಗೆ. ಅದು ಅತಿ ಆಕರ್ಷಣೀಯ. ಅದ್ಭುತ
ಸೌಂದರ್ಯಗಳ ಸಂಗ್ರಹಿತ ರೂಪ. ತಾಯ ಆಂತರ್ಯದ ಸೌಂದರ್ಯದ ಮುಂದೆ ಆಕೆಯ ಬಾಹ್ಯ ಸ್ವರೂಪಗಳೆಲ್ಲವೂ ಗೌಣವಾಗಿ ಬಿಡುತ್ತದೆ. ತಾಯಿ ಎಂತಿದ್ದರೂ ಸುಂದರಿಯೇ. ಆ ಸೌಂದರ್ಯವೆಂಬುದೊಂದು ಅನುಭಾವ.

ಜೀವ ಪ್ರೀತಿಯ ಸಿದ್ಧಾಂತ ಆಕೆ. ಮನುಷ್ಯನ ಔನ್ನತ್ಯಕ್ಕೆ ಭೂಮಿಯೇ ಆದರ್ಶ. ಸ್ವರ್ಗ ಸುಖಗಳೆಲ್ಲವೂ ಇಲ್ಲಿಯದೇ ಕಲ್ಪನೆ. ಇದರ  ನಿರಾಕರಣೆಯೆಂದರೆ ಅದು ವಾಸ್ತವದ ನಿರಾಕರಣೆಯೇ ಆಗಿರುತ್ತದೆ. ಅದನ್ನು ಮೌಢ್ಯವೆನ್ನದೇ ವಿಧಿಯಿಲ್ಲ. ಜೀವನದ ಸತ್ವ ಸಮಸ್ತವನ್ನೂ ತನ್ನೊಳಗೇ ಅಡಗಿಸಿಕೊಂಡಿರುವ ಭೂತಾಯಿ ಜೀವನ ಪ್ರೀತಿಯ ಮಹಾ ಸಿದ್ಧಾಂತವೊಂದನ್ನು ಮಾನವನಿಗೆ ಬೋಧಿಸುತ್ತಾಳೆ.

ಆ ಮೂಲಕ ವಿಕಾಸವಾದವನ್ನು ಪ್ರತಿಪಾದಿಸುತ್ತಾಳೆ. ತನ್ನ ತಾನು ದಣಿಸಿಕೊಂಡಾದರೂ ಮಗುವನ್ನು ಸಂತೈಸುವ ತಾಯ್ತನಕ್ಕೆ ಸಾಟಿಯಾಗಿ ನಿಲ್ಲಬಲ್ಲ ಸಂಬಂಧವೊಂದು ಈ ಜಗತ್ತಿನಲ್ಲಿ ಇನ್ನೊಂದು ಕಾಣಲಾರದು. ಪ್ರೀತಿ ತುಂಬಿದ ತಾಯಿಯ ಆರೈಕೆ ಎಲ್ಲ ಮಾನವೀಯ ಸಂಬಂಧಕ್ಕೆ ನಾಂದಿ ಹಾಡುತ್ತದೆ. ತಾಯಿಯ ಹಾಲಿನ ಮೂಲಕವೇ ಮಗುವಿನ ವ್ಯಕ್ತಿತ್ವದಲ್ಲಿ ಸಂಬಂಧಗಳು ವ್ಯಕ್ತಿಗತ ವಾಗುತ್ತದೆ.

ಆ ತಾಯಿಯೊಂದು ಅಮೂರ್ತ ಸ್ವರೂಪಿ. ಬೌದ್ಧಿಕ ವರ್ಣನೆಗೆ ನಿಲುಕದ ತಾಯಿ ಅನುಭವ ಜನ್ಯ ಸಂಬಂಧವೊಂದನ್ನು ಕಟ್ಟಿಕೊಡುತ್ತಾಳೆ. ಆದ್ದರಿಂದಲೇ ನಮ್ಮೆಲ್ಲ ಸಮಸ್ಯೆಗಳಿಗೆ ಮತ್ತೆ ಮತ್ತೆ ತಾಯಿಯ ಬೆಳಕಿನಡಿಯಲ್ಲಿಯೇ ಪರಿಹಾರ ಹುಡುಕುತ್ತೇವೆ. ತಾಯಿಯ ಭರವಸೆ
ಪೂರಿತ ಆಂತರ್ಯದ ಬೆಳಕಲ್ಲಿ ನಾವು ಮೀಯಬೇಕು. ನಮ್ಮ ತುಡಿತಗಳೆಲ್ಲವೂ ಅಲ್ಲಿ ದಣಿಯೇಕು. ನಮ್ಮನ್ನಾವರಿಸಿಕೊಂಡ ಅಂಧತ್ವದ ತೆರೆ ಅಲ್ಲಿಯೇ ಸರಿಯೇಕು. ಅದೇ ಪರಮೋತ್ತಿಷ್ಟ ಸಾರ್ಥಕ ಘಟ್ಟ. ಅಂಥ ಋಣದಿಂದ ಮುಕ್ತಿಯೆಂಬುದೇ ಇಲ್ಲ.

ಮಾತೃ ಆರಾಧನೆಯೆಂದರೆ ಅದು ಅಕ್ಷರಶಃ ಈ ಯಾವತ್ತೂ ಜಗತ್ತಿನ ಸರ್ವಶಕ್ತಿಯ ಆರಾಧನೆ. ಆಂತರ್ಯದ ಎಲ್ಲ ದುಃಖ ಜಾವಡೆಗಳಿಗೆ ಅದೇ ನಿಚ್ಚಳ ಸಂತೈಕೆ. ಎಲ್ಲ ಮಾನಸಿಕ ತುಮುಲಗಳಿಗೆ ಅಂತಿಮ ಗಂತವ್ಯವೇ ಮಾತೃಪೂಜೆಯ ಆನಂದ. ಜಗದ ಎಲ್ಲ ಧರ್ಮಗಳ
ಹಂಬಲಿಕೆಯೂ ಇದೇ. ವಸುಧೆ ಖಂಡಿತಾ ಇಂಥದೊಂದು ಪವಿತ್ರತಮ ಆರಾಧನೆಗೆ ಪಾತ್ರಳು.

ಈ ಆರಾಧನೆಯ ಆನಂದದಲ್ಲಿ ತೊಯ್ಯುವುದರೊಂದಿಗೆ ನಮ್ಮೆಲ್ಲ ಹಂಬಲಗಳಿಂದ ಮುಕ್ತರಾಗಿ ಬಿಡಬೇಕು. ಬದುಕಿನ ಕೊನೆಯ ಕ್ಷಣದವರೆಗೂ ತಾಯ ತೊಡೆಯ ವಿಸ್ತರದಲ್ಲಿ ಮುಗ್ಧವಾಗಿ ವಿರಮಿಸಿಬಿಡೇಕು. ಸಾಮಾಜಿಕ ಸಂಬಂಧಗಳಲ್ಲಿ ಇಣುಕು ಹಾಕುತ್ತಿರುವ ದ್ವೇಷ, ವೈಷಮ್ಯಗಳು ತಾಯ ಪ್ರೀತಿಯ ಪ್ರವಾಹದಲ್ಲಿ ಕೊಚ್ಚಿ ಹೋಗಿಬಿಡೇಕು. ತಾಯಿಯ ಸಂಪರ್ಕ, ಆರೈಕೆ, ಪ್ರೀತಿ, ವಾತ್ಸಲ್ಯಗಳರಿಯದ ವ್ಯಕ್ತಿಯಲ್ಲಿ ಸಹಜವಾಗಿ ವಿಕೃತಿಗಳು ಮನೆ ಮಾಡುತ್ತವೆ. ಆತ ಮನುಷ್ಯತ್ವವನ್ನು ಮರೆಯುತ್ತಾನೆ. ಈ ಮರೆಯುವಿಕೆಯಿಂದ ಆತನಲ್ಲಿ ಅಸಹಜ ಧೋರಣೆಗಳು ಕಾಣಿಸಿಕೊಳ್ಳುತ್ತವೆ. ಇಂಥ ವ್ಯಕ್ತಿಗೆ ಈ ಭೂಮಿಯ ಮೇಲಿನ ಯಾವ ಸಂಬಂಧಗಳೂ ಗೋಚರವಲ್ಲ. ತಾಯಿ ಯೆಂಬುದು ಕೇವಲ ಆಕೃತಿಯಾಗಿ ಕಾಣುತ್ತಾಳೆ.

ಭೂಮಿಯನ್ನು ಮಣ್ಣಾಗಿ ಮಾತ್ರ ಭ್ರಮಿಸುತ್ತಾನೆ. ಇದರ ಒಟ್ಟಾರೆ ಫಲಿತಾಂಶ ಜೀವನ ಪ್ರೀತಿಯ ನಾಶ. ಜೀವನ ಪ್ರೀತಿಯನ್ನು ಕಾಣದ ವ್ಯಕ್ತಿಯಲ್ಲಿ ಹಿಂಸೆ ವಿಜೃಂಭಿಸುತ್ತದೆ. ವ್ಯಕ್ತಿ ಸಮಷ್ಟಿಯಲ್ಲಿ ಬೆರೆತು ಹೋದಾಗ ಸಂಬಂಧಗಳ ಸ್ವರೂಪ ಸ್ಪಷ್ಟವಾಗುತ್ತದೆ. ಜಗತ್ತಿನಲ್ಲಿ ಪ್ರತ್ಯೇಕವಾಗುಳಿಯಲು ಬಯಸುವ ಯಾವಾತನೂ ಸಂಬಂಧದ ಸವಿ ಉಣ್ಣಲು ಸಾಧ್ಯವಿಲ್ಲ. ಭೂಮಿಯ ಪ್ರೀತಿಯಲ್ಲಿ ಒಂದಾಗಿ ಹೊಂದಿ ಹೋದಾಗ ಮಾತ್ರವೇ ಬಾಳುವೆಯ ದರ್ಶನ ಆಗುತ್ತದೆ. ಅದಕ್ಕೊಂದು ಸಂಕಲ್ಪಶಕ್ತಿ ಅಗತ್ಯ.

ಭಾರತೀಯ ಚಿಂತನಾ ಪರಂಪರೆಯಲ್ಲಿ ಕಾಣುವ ಜೀವನ ದರ್ಶನವೂ ಇದೇ. ಈ ನೆಲದಲ್ಲಿ ಪ್ರಾಚೀನದಿಂದಲೂ ಬೇರೂರಿರುವ ಸಂಬಂಧ ಗಳು ಸಮಷ್ಟಿ ಕೇಂದ್ರಿತ. ಪರಿಣಾಮ ಪಾಶ್ಚಾತ್ಯ ಸಂಸ್ಕೃತಿಗಳಿಂದ ತೀರಾ ಭಿನ್ನವಾಗಿ ವೈಶಿಷ್ಯ ಪೂರ್ಣವಾಗಿ ಭಾರತೀಯತೆ ಗೋಚರಿಸು ತ್ತದೆ. ಅಂತರಂಗದ ವಿಶ್ಲೇಷಣೆಯ ಜತೆ ಜತೆಗೇ ವೈಯಕ್ತಿಕ ವಿಕಾಸದ ಹರವನ್ನು ಖಚಿತಗೊಳಿಸಿಕೊಳ್ಳುವಾಗ ಭಾರತೀಯ ಚಿಂತನೆಗಳು ಉತ್ಕಟವೆನಿಸುತ್ತದೆ.

ಕೆಲವೊಮ್ಮೆ ಧಾರ್ಮಿಕ ಅತಿರೇಕಗಳು ಪ್ರಕಟಗೊಂಡರೂ ಅದರ ಹಿಂದಿನ ಭಾವನಾತ್ಮಕ ತುಡಿತಗಳಿಂದಾಗಿ ಅವು ಸಹ್ಯವೆನಿಸುತ್ತವೆ. ವಾಸ್ತವದ ಅರಿವಿನ ಪ್ರಜ್ಞೆಯನ್ನು ನಾವು ಕಳೆದುಕೊಂಡಿದ್ದೇವೆಂಬ ಶಂಕೆ ಮೂಡುವುದೂ ಇದೇ ಕಾರಣಕ್ಕೆ. ಆದರೆ, ಒಟ್ಟಾರೆ ಆಂತರಂಗಿಕ ಅರಿವಿನ ಉದ್ದೇಶ ವಿಕಾಸವಾದದ ಹೊರಳು ಪಡೆಯುವುದರಿಂದ ತಾಯಿ-ಮಗುವಿನಂಥ ಸಂಬಂಧಗಳ ಪರಿಕಲ್ಪನೆ ಬೇರೆಲ್ಲ ಪ್ರದೇಶಗಳಿ ಗಿಂತ ಭಾರತೀಯ ನೆಲದಲ್ಲಿ ಚೇತೋಹಾರಿಯಾಗಿ ಕಾಣಿಸುತ್ತದೆ.

ಭೂಮಿ ಮತ್ತು ಮನುಷ್ಯನ ನಡುವಿನ ಸಂಬಂಧಗಳ ವಿಭಿನ್ನ ದೃಷ್ಟಿಕೋನಗಳನ್ನು ಶೋಧಿಸಿದಾಗ ಭಾವನಾತ್ಮಕ ನೆಲೆಯಿಂದ ಹೊರ ತಾದ, ತೀರಾ ಕೃತಘ್ನವೆನಿಸುವ ಮನುಷ್ಯನ ವಾಸ್ತವ ಗುಣವೊಂದರ ಪರಿಚಯವೂ ಆಗುತ್ತದೆ. ತಾಯಿಗೆ ಮಗು ನೀಡುವ ಸಂಕಷ್ಟ ಗಳಾಗಲೀ, ನೋವಾಗಲೀ ತೀರಾ ಮುಗ್ಧತೆಯ ಸ್ಪರ್ಶವನ್ನು ಪಡೆದಿರುತ್ತದೆ. ಆದರೆ ಭೂಮಿಯ ಮೇಲೆ ಮಾನವ ನಡೆಸುವ ದೌರ್ಜನ್ಯ ಪ್ರಜ್ಞಾಪೂರ್ವಕವೆಂದೇ ಹೇಳಬಹುದು. ಅಲ್ಲಿ ಮಗುವಿನ ಮುಗ್ಧತೆಗೆ ಅವಕಾಶವಿಲ್ಲ. ತನ್ನ ಕೃತ್ಯದಿಂದಾಗಬಹುದಾದ ಅನಾಹುತ ಗಳ ಪ್ರಜ್ಞೆಯಿದ್ದರೂ ಭೂಮಿ, ಪ್ರಕೃತಿಗಳ ಮೇಲೆ ನಾವು ನಡೆಸುತ್ತಿರುವ ದ್ರೋಹ ನಮ್ಮ ವಿಸ್ಮೃತಿಯ ಫಲ. ಆದರೆ ಇಷ್ಟಾಗಿಯೂ ಭೂಮಿಯೂ ತಾಯಿಯಂತೆಯೇ ಆಶಾವಾದದ ಪ್ರತೀಕವಾಗುತ್ತಾಳೆ. ಈ ಆಶಾವಾದದಲ್ಲಿ ವಿಕಾಸದ ಪ್ರತಿಪಾದನೆಯೂ ಇದೆ. ಇದೇ ಭಾರತೀಯತೆ.