Thursday, 12th December 2024

ಅಷ್ಟಕ್ಕೂ ಏನು ಅರ್ಜೆಂಟ್‌ ಇತ್ತು ಈ ಭೂತಾಯಮ್ಮನಿಗೆ ?

ಸುಪ್ತ ಸಾಗರ

rkbhadti@gmail.com

ಮೆಟಾ ಸಂಸ್ಥೆಯ ಮಾಹಿತಿ ಪ್ರಕಾರ 24 ಗಂಟೆಗಳಿಗೆ ತಕ್ಕ ಹಾಗೆ ಮಾಹಿತಿ ಮತ್ತು ತಂತ್ರಜ್ಞಾನ ಜಗತ್ತು ಸಮಯ ಹೊಂದಾಣಿಕೆ ಮಾಡಿರುತ್ತೆ. ಭೂಮಿ ಮಿಲಿ ಸೆಕೆಂಡ್ ವೇಗವಾಗಿ ಅಥವಾ ನಿಧಾನವಾಗಿ ತಿರುಗಿದರೆ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುವ ಕೆಲವು ಕಂಪ್ಯೂಟರ್ ಪ್ರೋಗ್ರಾಂಗಳು ಕ್ರಾಷ್ ಆಗಬಹುದು!

ಆ ನ್ಯೂಟನ್ ಮಹಾಶಯ ಅದೇನು ಹೇಳಿ ಹೋದನೋ, ಏನೋ, ಅಂತೂ ಈ ಬಾರಿ ನಮ್ಮ ಭೂಮಿಯನ್ನು ಯಾರೋ ಬಲ ವಾಗಿ ನೂಕಿಬಿಟ್ಟದ್ದಂತೂ ಹೌದು. ಅದಿಲ್ಲದಿದ್ದರೆ ಭೂಮಿಯ ಚಲನೆಯ ವೇಗ ಈ ಪಾಟಿ ಹೆಚ್ಚಾಗಲಿಕ್ಕೆ ಸಾಧ್ಯವೇ ಇರಲಿಲ್ಲ. ಕೋಟ್ಯಂತರ ವರ್ಷಗಳಿಂದಲೂ, ಅಂದ್ರೆ ಯುಗಯುಗಗಳಿಂದಲೂ ಒಂದಿನಿತೂ ತಾಳ-ಲಯ-ವೇಗ ತಪ್ಪದೇ ಒಂದೇ ಸ್ಪೀಡಲ್ಲಿ ತಿರುಗ್ತಾ ಇರೋ ಭೂಮಿ ಹೀಗೆ ಏಕಾಏಕಿ ತನ್ನ ಆಕ್ಸಲರೇಟರ್ ಅನ್ನು ಜಾಸ್ತಿ ಮಾಡಿಬಿಟ್ಟಿದೆ ಅಂದರೆ? ಬಹುಶಃ ಆ ಶಿವ ಚಾಟಿ ಯನ್ನು ಸ್ವಲ್ಪ ಬಲವಾ ಗಿಯೇ ಬೀಸಿ ಭೂಮಿಯೆಂಬ ಬುಗುರಿಯನ್ನು ಒಗೆದಿರಬೇಕು.

ಅದಕ್ಕಾಗಿಯೇ ಇಪ್ಪತ್ತ ನಾಲ್ಕು ಗಂಟೆಯೊಳಗೇ ಭೂಮಿ ಒಂದು ಸುತ್ತು ಸುತ್ತಿ, ತನ್ನಡ್ಯೂಟಿ ಮುಗಿಸಿಬಿಟ್ಟಿತು. ಇದಕ್ಕೂ ನ್ಯೂಟನ್ನನಿಗೂ ಏನು ಸಂಬಂಧ ಅಂತಾನಾ? ಚಲನೆಯ ನಿಯಮವನ್ನು ಕಂಡು ಹಿಡಿದದ್ದು ಸರ್ ಐಸಾಕ್ ನ್ಯೂಟನ್ನನೇ ಅಲ್ವೇ? ಅದೇ ಪ್ರಾಥಮಿಕ ಶಾಲೆಯಲ್ಲಿ ಓದಿದ ನೆನಪು, ಎರಡು ರೀತಿ ಚಲನೆಗಳಂತೆ. ಕ್ಲಾಸಿಕಲ್ ಮೆಕ್ಯಾನಿಕ್ಸ್, ಕ್ವಾಮ ಟಮ್ ಮೆಕ್ಯಾನಿಕ್ಸ್ ಅಂತ.

ವಿಶ್ವದಲ್ಲಿನ ಬೃಹದಾಕಾರ ವಸ್ತುಗಳಾದ ದೊಡ್ಡ ದೊಡ್ಡ ಯಂತ್ರಗಳ, ಗ್ರಹಗಳ, ನಕ್ಷತ್ರಗಳ, ನಕ್ಷತ್ರ ಕೂಟಗಳ, ಅಂತರಿಕ್ಷ ವಾಹನ ಗಳ ಚಲನೆಯನ್ನು ಕ್ಲಾಸಿಕಲ್ ಮೆಕ್ಯಾನಿಕ್ಸ್ ನಿಯಮದಲ್ಲಿ ಆತ ವಿವರಿಸಿದನಂತೆ. ಕಣಗಳಾದ ಅಣು, ಪರಮಾಣು ಉಪಪರ ಮಾಣು ಇತ್ಯಾದಿಗಳ ಚಲನೆಯನ್ನು ಕ್ವಾಂಟಮ್ ಮೆಕ್ಯಾನಿಕ್ಸ್ ಅಂತ ಅವನೇನೋ ಹೋಗಿಬಿಟ್ಟ. ಈ ಪರೀಕ್ಷೆಗಳಲ್ಲಿ ಇಂಥವ ನ್ನೆಲ್ಲ ನೆನಪಿಟ್ಟುಕೊಂಡು ಬರೆಯಲಾಗದೇ ಇಂದಿಗೂ ನನ್ನಂಥ ದಡ್ಡ ವಿದ್ಯಾರ್ಥಿಗಳು ಅವನಿಗೆ ಹಿಡಿಶಾಪ ಹಾಕುತ್ತಲೇ ಇದ್ದೇವೆ.

ಸಿಂಪಲ್ಲಾಗಿ ಇಷ್ಟೇ ಅರ್ಥ ಆಗಿದ್ದು, ಯಾವುದೇ ವಸ್ತುವೂ ಹೊರಗಿನಿಂದ ಯಾರೂ ತಳ್ಳದಿದ್ದರೆ ಅಲ್ಲಿಂದ ಕದಲಲ್ಲ ಅನ್ನೋ ದನ್ನು ನ್ಯೂಟನ್ ಜುಲೈ 5ರಂದು (1987) ಘೋಷಿಸಿದ್ದ. ಅದಾಗಿ ಇಪ್ಪತ್ತನಾಲ್ಕೇ ದಿನಕ್ಕೆ ಜುಲೈ 29ರಂದು(2022) ಭೂಮಿ ತನ್ನ ಒಂದು ರೌಂಡ್ ಹಾಕಲು ಎಂದಿನ 24 ಗಂಟೆ ತೆಗೆದುಕೊಳ್ಳುವ ಬದಲು 23 ಗಂಟೆಗ 56 ನಿಮಿಷದಲ್ಲೇ ಕೆಲಸ ಮುಗಿಸಿ, ಮಲಗಿಲ್ಲ ನೆಕ್ಸ್ಟ್ ರೌಂಡ್‌ಗೆ ಹೊರಟಿದೆ.

ಅದೆಲ್ಲ ಇರಲಿಬಿಡಿ, ಒಂದಷ್ಟು ಮಂದಿ ದಿನಕ್ಕೆ ಇಪ್ಪತ್ತ ನಾಲ್ಕು ಗಂಟೆ ಸಾಲದು ಅಂತ ದುಡಿತಾ ಇರ್ತಾರೆ. ಇನ್ನು ಕೆಲವರು ಇಪ್ಪತ್ತನಾಲ್ಕು ಗಂಟೆನೂ ನಿದ್ದೆ ಮಾಡು ಅಂದ್ರೂ ಮಾಡ್ತಾರೆ ಅನ್ನೋದು ಬೇರೆ ಪ್ರಶ್ನೆ. ಏನೇ ಇರಲಿ, ಕೆಲವೊಂದು ಸಲ ದಿನಕ್ಕೆ ಇನ್ನೊಂದೆರಡು ಗಂಟೆ ಹೆಚ್ಚಿಗೆ ಇರಬೇಕಿತ್ತು ಅಂತ ಅನ್ನಿಸೋದು ಸುಳ್ಳಲ್ಲ. ಪರಿಸ್ಥಿತಿ ಹಾಗಿರೋವಾಗ, ಇರೋ ಇಪ್ಪತ್ತನಾಲ್ಕು ಗಂಟೇಲೂ ಒಂದಷ್ಟು ಡಿಸ್ಕೌಂಟ್ ಹೋಗಿಬಿಟ್ಟರೇ? ಇತ್ತಿತ್ತಲಾಗಿ ಈ ಭೂಮಿ ಸುತ್ತೋ ಸ್ಪೀಡು ನೋಡಿದ್ರೆ, ಯಾಕೋ ದಿನದ ಸಮಯದಲ್ಲಿ ಇನ್ನು ಒಂದಷ್ಟು ತ್ಯಾಮಾನ ಬರೋದು ಕಟ್ಟಿಟ್ಟಿದ್ದು ಅನ್ನಿಸುತ್ತೆ.

ಹಾಗಂತ ಭೂ ವಿಜ್ಞಾನಿಗಳು ಅಲ್ಲ, ಭೂಮಿಯ ಬಗೆಗೆ ಅಧ್ಯಯನ ಮಾಡುತ್ತಿರುವ ವಿಜ್ಞಾನಿಗಳು ಅಂದರೆ ಖಗೋಳಜ್ಞರು ಹೇಳುತ್ತಿದ್ದಾರೆ. ಮೊನ್ನೆಮೊನ್ನೆ ಅದೇನು ಅರ್ಜಿಂಟಿತ್ತೋ ಏನೋ, ಅಂತೂ ಭೂಮಿ ಸ್ವಲ್ಪ ಬೇಗನೇ ಒಂದು ಸುತ್ತ ಸುತ್ತಿ ಮುಗಿಸಿ ದ್ದಂತೂ ನಿಜ ಎನ್ನುವ ವಿಜ್ಞಾನಿಗಳು, ಹೀಗೇ ಆದರೆ ಪರಿಸ್ಥಿತಿ ನೆಟ್ಟಗಿರಲ್ಲ ಅಂತ ಬೇರೆ ಹೇಳಿಬಿಟ್ಟಿದ್ದಾರೆ. ನೆಟ್ಟಗಿರುತ್ತೋ ಸೊಟ್ಟ ಗಾಗುತ್ತೋ ಈಗ ತನ್ನ ವೇಗವನ್ನು ಹೆಚ್ಚಿಸಿಕೊಂಡಿರುವುದಂತೂ ಸತ್ಯ.

ಓದುವುದಕ್ಕೆ ಅಚ್ಚರಿ ಎನಿಸಿದರೂ ಇಂಥದೊಂದು ಸತ್ಯವನ್ನು ವಿಜ್ಞಾನಿಗಳು ಸಾಕ್ಷಿ ಸಮೇತವಾಗಿ ತೆರೆದಿಟ್ಟಿದ್ದಾರೆ. ವೇಗವಾಗಿ ತಿರುಗುತ್ತಿರುವ ಭೂಮಿ 24 ಗಂಟೆಗೂ ಮೊದಲೇ ಒಂದು ಸುತ್ತು ಹಾಕಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಭೂಮಿಯ ತಿರುಗುವಿಕೆಯ ವೇಗ ಹೆಚ್ಚಾಗಿರುವುದು ಭೂಕಂಪನ ಸೇರಿದಂತೆ ಪ್ರಕೃತಿಯಲ್ಲಿನ ಬದಲಾವಣೆ ಲಕ್ಷಣಗಳನ್ನು ತೋರಿಸುತ್ತಿದೆ. ಅಸಲಿಗೆ ಸೂರ್ಯನನ್ನು ಸುತ್ತುವುದಕ್ಕೆ ಭೂಮಿ ತೆಗೆದುಕೊಳ್ಳುವ ಅವಧಿ ಎಷ್ಟು? ಭೂಮಿಯ ವೇಗ ಹೆಚ್ಚಾಗಿರುವುದರಿಂದ ಈಗ ತೆಗೆದುಕೊಳ್ಳುತ್ತಿರುವ ಸಮಯ ಎಷ್ಟು? ಯಾವ ದಿನದಂದು ಭೂಮಿಯು ಅತಿ ಹೆಚ್ಚು ವೇಗವಾಗಿ ತಿರುಗಿತು ಎಂಬೆಲ್ಲ ಜನರಲ್ ನಾಲೆಡ್ಜ್ ಕ್ವಶ್ಚನ್ನಿಗೆ ಉತ್ತರ ಕೊಡ್ತಾ ಕೂತ್ಕೋಬೇಕಾ? ಎನಿ ವೇ, ಒಂದು ಸಲ ಕನ್ನಡಶಾಲೇಲಿ (ನಮ್ಮೂರಲ್ಲಿ ಪ್ರೈಮರಿ ಸ್ಕೂಲ್ ಅನ್ನು ಹಾಗೇ ಕರೆಯೋದು-ಬಹುಶಃ ೫ನೇ ಕ್ಲಾಸಿಂದ ಇಂಗ್ಲೀಷ್ ಇರುತ್ತೇ ಅಂತ ಹಾಗೆ ಗುರುತಿಸಿರಬಹುದು) ನಾವು ಕಲಿತದ್ದ ನ್ನೆಲ್ಲ ಒಂದು ಸರ್ತಿ ರಿವಿಷನ್ ಮಾಡೋಣ.

ಭೂಮಿಯು ಸೂರ್ಯನ ಸುತ್ತ ಸುತ್ತುತ್ತದೆ. ಹಾಗೆಯೇ ತನ್ನ ಅಕ್ಷದ ಮೇಲೆ ಪಶ್ಚಿಮದಿಂದ ಪೂರ್ವಕ್ಕೆ ಮೇಲ್ಭಾಗದಂತೆ
ಸುತ್ತುತ್ತದೆ. ಈ ಚಲನೆಯನ್ನು ಭೂಮಿಯ ಪ್ರದಕ್ಷಿಣೆ ಎಂದು ಕರೆಯಲಾಗುತ್ತದೆ. ಹೀಗೆ ಸುತ್ತುವುದರಿಂದಲೇ ಹಗಲೂ ರಾತ್ರಿಗಳು ಆಗುವುದು. ತನ್ನ ಅಕ್ಷದ ಮೇಲೆ ತಿರುಗುತ್ತಿರುವಾಗ, ಭೂಮಿಯು ಅಂಡಾಕಾರದ ಪಥದಲ್ಲಿ ಸೂರ್ಯನನ್ನು ಸುತ್ತುತ್ತದೆ ಮತ್ತು ೩೬೫ ದಿನಗಳು ಮತ್ತು ೬ ಗಂಟೆಗಳಲ್ಲಿ ಒಂದು ಸುತ್ತನ್ನು ಪೂರ್ಣಗೊಳಿಸುತ್ತದೆ.

ಭೂಮಿಯಿಂದ ಗುರುತಿಸಲ್ಪಟ್ಟ ದೀರ್ಘವೃತ್ತದ ಮಾರ್ಗವನ್ನು ಅದರ ಕಕ್ಷೆ ಎಂದು ಕರೆಯಲಾಗುತ್ತದೆ. ಭೂಮಿಯ
ಈ ಚಲನೆಯನ್ನು ಕ್ರಾಂತಿ ಎಂದು ಕರೆಯಲಾಗುತ್ತದೆ. ಇದಲ್ಲದೇ ಪೆರಿಹೆಲಿಯನ್ ಅಂತ ಬೇರೆ ಇದೆ. ಹಾಗೆಂದರೆ ಭೂಮಿಯು ಸೂರ್ಯನಿಂದ ಕನಿಷ್ಠ ದೂರದಲ್ಲಿರುವಾಗ, ಕಕ್ಷೆಯಲ್ಲಿರುವಾಗ, ಈ ಸ್ಥಾನ. ಸಾಮಾನ್ಯವಾಗಿ ಜುಲೈ 4 ರಂದು ಭೂಮಿಯು ಈ ಸ್ಥಾನದಲ್ಲಿರುತ್ತದಂತೆ. ಈಗಾಗಲೇ ಹೇಳಿದಂತೆ ಭೂಮಿಯು ತನ್ನ ಅಕ್ಷದ ಮೇಲೆ ಮಾತ್ರವಲ್ಲದೆ ಸೂರ್ಯನ ಸುತ್ತ ತನ್ನ ಕಕ್ಷೆ ಯಲ್ಲಿಯೂ ಚಲಿಸುತ್ತದೆ.

ಆದ್ದರಿಂದ, ಭೂಮಿಯು ಸೂರ್ಯನಿಗೆ ಸಂಬಂಧಿಸಿದಂತೆ ತನ್ನ ಸ್ಥಾನವನ್ನು ನಿರಂತರವಾಗಿ ಬದಲಾಯಿಸುತ್ತದೆ. ಭೂಮಿಯ ನಾಲ್ಕು ಪ್ರಮುಖ ಸ್ಥಾನಗಳಿವೆ, ಆದರೆ ಅದು ಸೂರ್ಯನ ಸುತ್ತ ಸುತ್ತುತ್ತದೆ. ಅವುಗಳಾವುವು ನೋಡೋಣ. ಜೂನ್ 21 ರಂದು ಸೂರ್ಯನು ಕರ್ಕಾಟಕ ರಾಶಿಯ ಮೇಲೆ ಲಂಬವಾಗಿ ಹೊಳೆಯುತ್ತಾನೆ. ಈ ಸ್ಥಾನವನ್ನು ಬೇಸಿಗೆಯ ಅಯನ ಸಂಕ್ರಾಂತಿ ಎಂದು
ಕರೆಯಲಾಗುತ್ತದೆ. ಪಂಚಾಂಗದ ಪ್ರಕಾರ ಅವತ್ತಿಂದ ದಕ್ಷಿಣಾಯಣ. ಅದನ್ನು ಕರ್ಕ ಸಂಕ್ರಮಣ ಅಂತಲೂ ಕರೆಯುತ್ತಾರೆ.

ಇದು ಉತ್ತರ ಗೋಳಾರ್ಧದಲ್ಲಿ ಬೇಸಿಗೆಯ ಸಮಯವಾಗಿದ್ದರೆ, ದಕ್ಷಿಣ ಗೋಳಾರ್ಧದಲ್ಲಿ ಇದು ಚಳಿಗಾಲದ ಅವಧಿ. ಉತ್ತರ
ಗೋಳಾರ್ಧದಲ್ಲಿ ಆ ದಿನ ಅಂದರೆ ಹಗಲು ದೀರ್ಘವಾಗಿರುತ್ತದೆ. ಇನ್ನು ಡಿಸೆಂಬರ್ 22 ರಂದು ನಮ್ಮ ಸನ್ನು ಮಕರ ಸಂಕ್ರಾಂತಿಯ ಮೇಲೆ ಲಂಬವಾಗಿ ಹೊಳೆಯುತ್ತಾನೆ. ಈ ಸ್ಥಾನವನ್ನು ಚಳಿಗಾಲದ ಅಯನ ಸಂಕ್ರಾಂತಿ ಎಂದು ಕರೆಯ ಲಾಗುತ್ತದೆ.

ಈ ಅವಧಿಯಲ್ಲಿ, ದಕ್ಷಿಣ ಗೋಳಾರ್ಧದಲ್ಲಿ ಹಗಲುಗಳು ದೀರ್ಘವಾಗಿರುತ್ತವೆ ಮತ್ತು ರಾತ್ರಿಗಳು ಚಿಕ್ಕದಾಗಿರುತ್ತವೆ. ಈ ಸ್ಥಾನವು ದಕ್ಷಿಣ ಗೋಳಾರ್ಧದಲ್ಲಿ ಬೇಸಿಗೆಯನ್ನು ಮತ್ತು ಉತ್ತರ ಗೋಳಾರ್ಧದಲ್ಲಿ ಚಳಿಗಾಲವನ್ನು ಸೂಚಿಸುತ್ತದೆ. ಇದಲ್ಲದೇ ಮಾರ್ಚ್ 21 ಮತ್ತು ಸೆಪ್ಟೆಂಬರ್ 23 ರಂದು ಸ್ಥಾನಗಳು ಸೂರ್ಯನು ಸಮಭಾಜಕ ರೇಖೆಯ ಮೇಲೆ ನೇರವಾಗಿ ಹೊಳೆಯುತ್ತಾನೆ. ಆದ್ದರಿಂದ, ಎಲ್ಲ ಅಕ್ಷಾಂಶಗಳ ಅರ್ಧ ಭಾಗವು ಈ ಸಮಯದಲ್ಲಿ ಸೂರ್ಯನ ಬೆಳಕನ್ನು ಪಡೆಯುತ್ತದೆ. ಆದ್ದರಿಂದ, ಎಡೆ, ಹಗಲು ಮತ್ತು ರಾತ್ರಿಯ ಅವಧಿಯು ಸಮಾನವಾಗಿರುತ್ತದೆ.

ಎರಡೂ ಅರ್ಧಗೋಳಗಳಲ್ಲಿ ಋತುಗಳು ಸಹ ಒಂದೇ ಆಗಿರುತ್ತವೆ. ಈ ಎರಡು ಸ್ಥಾನಗಳನ್ನು ‘ವಿಷುವತ್ ಸಂಕ್ರಾಂತಿ’ ಎನ್ನ
ಲಾಗುತ್ತದೆ. ಮಾರ್ಚ್ 21ರ ಸಮಯ ವಸಂತ ಕಾಲವಾಗಿರುವುದರಿಂದ ಅದು ವಸಂತ ವಿಷುವತ್ ಸಂಕ್ರಾಂತಿ. ಸೆಪ್ಟೆಂಬರ್ 23ರ ಸಂದರ್ಭ ಶರತ್ಕಾಲ ವಾಗಿರುವುದರಿಂದ ಅದು ಶರತ್ ವಿಷುವತ್ ಸಂಕ್ರಾಂತಿ. ಗ್ರಹಣಗಳು ಇನ್ನೂ ಸೂರ್ಯ, ಚಂದ್ರ, ಭೂಮಿ
ಎಲ್ಲವೂ ತಿರುಗುತ್ತ ಬಂದು ಒಂದಕ್ಕೆ ಒಂದು ಅಡ್ಡ ಬಂದಾಗ ಸೂರ್ಯ-ಚಂದ್ರಗ್ರಹಗಳಾಗುವುದು ಬೇರೆಯದೇ ಪಾಠ, ಬಿಡಿ. ಈಗ ಮತ್ತೆ ಭೂಮಿ ಸುತ್ತೋದರ ಬಗ್ಗೆ, ಅದು ಅರ್ಜೆಂಟ್ ಮಾಡಿದ ಬಗ್ಗೆ ಮಾತಾಡೋಣ.

ಅದೇನಾಯ್ತು ಅಂದ್ರೆ, ಮೊದಲೇ ಹೇಳಿದಂತೆ ಭೂಮಿ ಪ್ರಕೃತಿ ನಿಯಮ ಮೀರಿ ಮೊನ್ನೆ ಜೂನ್ 29ರಂದು ಸ್ವಲ್ಪ ಬೇಗ ತಿರುಗಿ ಬಿಟ್ಟಿದೆ. ಅದೂ ಬೇಗ ಅಂದ್ರೆ ಗಂಟೆಗಟ್ಟಲೇ ಬೇಗ ಏನೂ ಅಲ್ಲ, ಕೇವಲ 1.59 ಮಿಲಿ ಸೆಕೆಂಡ್ ಬೇಗ ಅಷ್ಟೇ. ನಮಗೇನೋ
ಅದು ಮ್ಯಾಟರ್ ಆಗದೇ ಇರಬಹುದು. ಯಾಕಂದ್ರೆ ನಮ್ಮಲ್ಲಿ ಹತ್ತುಗಂಟೆಗೆ ಬರ್ತಿನಿ ಅನ್ನೋರು ಹನ್ನೊಂದಾದರೂ ಪತ್ತೆ ಇರೊಲ್ಲ. ಬಸ್ಸು, ಟ್ರೈನು, ರಾಜಕಾರಣಿಗಳು… ಹೀಗೆ ಯಾರೂ, ಯಾವೂದೂ ಟೈಮ್ ಮೇಂಟೇನ್ ಮಾಡಲ್ಲ.

ಯಾಕೆ ಅಂತ ಕೇಳಿದ್ರೆ ‘ಇಂಡಿಯನ್ ಟೈಮಿಂಗ್’  ಅಂತ ಪೆಚ್ಚುಪೆಚ್ಚಾಗಿ ಬ್ಯಾಡ್ ಜೋಕ್ ಮಾಡ್ತಾರೆ. ಆದರೆ, ಭೂಮಿಯ ಚಲನವಲನಗಳ ಮೇಲೆ ಒಂದು ಕಣ್ಣು ಇಟ್ಟುಕೊಂಡೇ ಕೂತಿರುವ(ಬೇರೆ ಇನ್ನೇನು ಕೆಲಸ ಅನ್ನಬೇಡಿ) ವಿಜ್ಞಾನಿಗಳಿಗೆ ಇದು ದೊಡ್ಡ ವಿಷಯವೇ. ಇಷ್ಟಕ್ಕೂ ಒಂದೆರಡು ಸೆಕೆಂಡ್ ಬೇಗ ಭೂಮಿ ಬಂತು ಅನ್ನೋದು ಗೊತ್ತಾಗಿದ್ದಾದರೂ ಹೇಗೆ ಅಂತೀರಾ? ಅಣು ಚಾಲಿತ ಗಡಿಯಾರವಂತೆ. ಈ ಗಡಿಯಾರವನ್ನು ಭೂಮಿಯ ಚಲನೆ, ವೇಗ ಲೆಕ್ಕ ಹಾಕಲೆಂದೇ ತಯಾರಿಸಿಟ್ಟು ಕೊಂಡಿದಾರಂತೆ ವಿಜ್ಞಾನಿಗಳು.

ಹಾಗೆ ನೋಡಿದರೆ ಈ ಭೂತಾಯಮ್ಮನ ಈ ಬೇಗ ತಿರುಗೋ ಚಾಳಿ ಹೊಸದೇನಲ್ಲ. ಇತ್ತೀಚೆಗೆ ಎರಡು-ಮೂರು ಬಾರಿ ಹೀಗೇ ಮಾಡಿದಾಳಂತೆ. ಇದನ್ನು ಆಧರಿಸಿಯೇ ಪರಮಾಣು ಗಡಿಯಾರಗಳು ಇತ್ತೀಚೆಗೆ ಭೂಮಿಯ ಪರಿಭ್ರಮಣೆಯು ವೇಗಗೊಳ್ಳುತ್ತಿದೆ ಎಂದು ಬಹಿರಂಗಪಡಿಸಿದೆ ಎಂದಿದ್ದು ವಿಜ್ಞಾನಿಗಳು. ೨೦೨೦ರ ಜುಲೈ ೧೯ರಂದೂ ಇದೇ ರೀತಿ ಆಗಿತ್ತು. ಆ ದಿನ ಭೂಮಿಯು 1.47 ಮಿಲಿ ಸೆಕೆಂಡ್ ಗಳಷ್ಟು ಬೇಗ ಒಂದು ರೌಂಡ್ ಹಾಕಿತ್ತು.

ಭೂಮಿಯು ತನ್ನ ಕಕ್ಷೆಯಲ್ಲಿ ಒಂದು ರೌಂಡ್ ಹಾಕಿದರೆ ಅದು ನಮ್ಮ ಪಾಲಿಗೆ ಒಂದು ದಿನ. ಆದ್ರೆ, ಆ ದಿನ 24 ಗಂಟೆಗಳ ಬದಲು 1.47 ಮಿಲಿ ಸೆಕೆಂಡ್‌ಗಳಷ್ಟು ಬೇಗನೇ ತನ್ನ ಬೀಟ್ ಮುಗಿಸಿತ್ತು. ಅಂದು ಅದು ದಾಖಲೆ. 2021ರಲ್ಲಿಯೂ ಭೂಮಿ ಸಾಮಾನ್ಯ ಕ್ಕಿಂತ ತುಸು ಹೆಚ್ಚಿದ ವೇಗದಲ್ಲಿ ತಿರುಗುವುದನ್ನು ಮುಂದುವರಿಸಿತ್ತಂತೆ. ಆದರೆ ಆವಾಗ ಹೇಳಿಕೊಳ್ಳುವಂಥ ಯಾವುದೇ ಗರಿಷ್ಠ ದಾಖಲೆ ಸೃಷ್ಟಿ ಆಗಿರಲಿಲ್ಲ ಬಿಡಿ. ಇದೀಗ 2022ರ ಜೂನ್ 29ರಂದು ಭೂಮಿ ಅತ್ಯಂತ ವೇಗವಾಗಿಸುತ್ತಿತ್ತು. ಆ ಬಳಿಕ ಜುಲೈ 26, 2022ರಂದು 1.50 ಮಿಲಿಸೆಕೆಂಡುಗಳಿಗೂ ಮೊದಲೇ ಭೂಮಿ ರೌಂಡ್ಸ್ ಹೋಗಿಬಂತು.

ಇದನ್ನೆಲ್ಲ ನೋಡ್ತಾ ಇದ್ರೆ, ಹೀಗೆ ಮುಂದುವರಿದು, ಮುಂಬರುವ ವರ್ಷಗಳಲ್ಲಿ ನಮ್ಮ ದಿನಗಳೇ ಶಾರ್ಟ್ ಆಗೋ ಎಲ್ಲ ಲಕ್ಷಣ ಇದೆ ಅಂತ ಹೆದರಸ್ತಾ ಇದಾರೆ ವಿಜ್ಞಾನಿಗಳು. ಅದು ಹೆದರಿಸೋ ಮಾತೇನೂ ಅಲ್ಲ. ಸತ್ಯವನ್ನೇ ಹೇಳ್ತಿದಾರೆ ಅವರು. ಅಷ್ಟಿಲ್ಲದೇ ಹೇಳ್ತಾರಾ? ಸೆಕೆಂಡ್‌ಗಳ ವೇಗ ಲೆಕ್ಕ ಹಾಕೋರಿಗೆ ಇಂಥ ಅಪಾಯದ ಅರಿವೂ ಇರುತ್ತೆ ಅಲ್ವಾ? ಅಷ್ಟಕ್ಕೂ ಈ ಭೂಮಿಗೆ ಯಾವತ್ತೂ ಇಲ್ಲದ ಈ ಅರ್ಜೆಂಟ್ ಇವಾಗ್ಯಾಕೆ? ಇದು ಪ್ರಶ್ನೆ. ಯಾಕೆ ಅನ್ನೋದನ್ನು ಸಂಪೂರ್ಣವಾಗಿ ವಿಜ್ಞಾನಿಗಳಿಗೂ ಈ ಕ್ಷಣದವೆರೆಗ ಇನ್ನೂ ಅರ್ಥ ಆಗಿಲ್ಲ. ಆದರೆ ಮೇಲ್ನೋಟಕ್ಕೆ ಸಿಕ್ಕ ಕೆಲವು ಅಂಶಗಳ ಪ್ರಕಾರ ತಪ್ಪು ನಮ್ಮದೇ ಅನ್ನೋದಂತೂ ನಿಜ.

ಈ ಭೂಮಿ ಮೇಲೆ ಏನೆಲ್ಲ ನೈಸರ್ಗಿಕ ಅಸಹಜತೆ, ಅವಾಂತರಗಳು ಸೃಷ್ಟಿಯಾಗುತ್ತಿವೆಯೋ ಅದೆಲ್ಲಕ್ಕೂ ಕಾರಣ ನಾವೇ.
ಮಾಲಿನ್ಯ ಹೆಚ್ಚುತ್ತಿರುವುದರಿಂದ, ಭೂತಾಪಮಾನ ಮಿತಿ ಮೀರುತ್ತಿದೆ. ಹಿಮನದಿಗಳು ಕರಗುವಿಕೆಯಿಂದಾಗಿ ಧ್ರುವಗಳ ತೂಕವು ಕುಸಿದಿದೆಯಂತೆ. ಒಂದು ಕಡೆ ಭಾರ, ಇನ್ನೊಂದು ಕಡೆ ಇದ್ದಕ್ಕಿದ್ದಂತೆ ಹಗುರ ಆದರೆ ಬ್ಯಾಲೆನ್ಸ್ ತಪ್ಪಲ್ಲವೇ? ನಮ್ಮ ಬಾಡಿ ಹಾಗೆಯೇ ಭೂಮಿಯೂ ಬ್ಯಾಲೆನ್ಸ್ ತಪ್ಪಿ ಹೀಗಾಗುತ್ತಿದೆ. ನಮ್ಮ ಗ್ರಹದ ಒಳಭಾಗ ಕರಗಿದ ಕಾಲಾ ನಂತರದಲ್ಲಿ ಚಲನೆ ವೇಗ ಹೆಚ್ಚಾಗುತ್ತಿದೆ ಎಂಬುದನ್ನು ವಿಜ್ಞಾನಿಗಳು ಗಮನಿಸಿದ್ದಾರೆ.

ಇನ್ನೂ ಒಂದು ವಲಯದ ಪ್ರಕಾರ, ಸಮುದ್ರದೊಳಗೆ ಭೂಫಲಕಗಳು ಅಸಹಜ ಚಲನೆಗೀಡಾಗಿ ಇತ್ತೀಚೆಗೆ ಭೂಕಂಪನ ಹೆಚ್ಚುತ್ತಿ ರುವುದರಿಂದ ಭೂಮಿ ಒಂದು ಸೆಕೆಂಡ್ ಕುಪ್ಪಳಿಸಿ ಮುಂದೋಡಿದೆ. ಅದೂ ಇರಬಹುದು. ಭೂಮಿಯ ಮೇಲಿನ ಮಿತಿಮೀರಿದ ಕೃಷಿ ಚಟುವಟಿಕೆಗಳು, ಕೈಗಾರಿಕೀಕರಣ ಇತ್ಯಾದಿಗಳ ಪರಿಣಾಮ ಸಮುದ್ರದ ಮೇಲಿನ ಒತ್ತಡ ಹೆಚ್ಚಾಗಿದ್ದು, ಭೂಪಲಕಗಳು ಮೇಲಿಂದ ಮೇಲೆ ಸಹನೆ ತಪ್ಪುತ್ತಿವೆ. ಇದು ಭೂಮಿಯ ವೇಗದ ಮೇಲೆ ಪರಿಣಾಮ ಬೀರುತ್ತಿರಬಹುದು. ಇನ್ನೂ ಒಂದು ವಾದದ ಪ್ರಕಾರ ಚಾಂಡ್ಲರ್ ವೊಬಲ ಕಾರಣವಂತೆ.

ಅಂದರೆ ಮೇಲ್ಮೈಯಲ್ಲಿ ಭೂಮಿಯ ಭೌಗೋಳಿಕ ಧ್ರುವಗಳಲ್ಲಿನ ಸಣ್ಣ ವಿಚಲನ ಉಂಟಾಗಿದ್ದೇ ವೇಗ ಹೆಚ್ಚಲು ಕಾರಣ. ಏನೇ ಇದ್ದರೂ ಸಮುದ್ರಗಳ ಆಳದಲ್ಲಿ ನೀರಿನ ಚಲನೆ, ಅಲೆಗಳು, ಹವಾಮಾನ ಬದಲಾವಣೆ, ಭೂ ಖಂಡಗಳ ಅಲೆದಾಟ ಹೀಗೆ ನಮ್ಮ ತಪ್ಪುಗಳ ಸುತ್ತಲೇ ಸುತ್ತುತ್ತದೆ ಕಾರಣ. ಕೆಲವೊಮ್ಮೆ ಸಮುದ್ರದ ಆಳದ ಒತ್ತಡಗಳೂ ಭೂಮಿಯ ಚಲನೆ ಮೇಲೆ ಪರಿಣಾಮ ಬೀರಬಹುದು ಎಂದೂ ವಿಜ್ಞಾನಿಗಳು ಊಹಿಸಿದ್ದಾರೆ. ಅಂತೂ ಭೂಮಿ ಬೇಕ ಟಾರ್ಗೆಟ್ ರೀಚ್ ಆಗಿದ್ದಂತೂ ಸತ್ಯ.

ಆಗಲಿ ಬಿಡಿ, ಏನಾಯಿತೀಗ? ಒಂದೆರಡು ಮಿಲಿ ಸೆಕೆಂಡ್ ಬೇಗ ಮಲಗಿದರಾಯಿತು, ಅಥವಾ ಒಂದೆರಡು ಮಿಲಿ ಸೆಕೆಂಡ್ ಬೇಗ ಎದ್ದರಾಯ್ತು ಅನ್ನೋ ಹಾಗೇ ಇಲ್ಲ. ಅಷ್ಟಕ್ಕೂ ಅದು ನಮಗೆ ಗೋತ್ತಾಗಿದ್ದೇ ವಿಜ್ಞಾನಿಗಳು ಹೇಳಿದ್ದರಿಂದ. ಅದಿಲ್ಲದೇ ಹೋಗಿದ್ದರೆ ಕೆಲವು ಮಿಲಿ ಸೆಕೆಂಡ್ ಗಳಷ್ಟು ಕಾಲ ಭೂಮಿ ವೇಗವಾಗಿ ತಿರುಗಿದರೆ ಅಥವಾ ನಿಧಾನವಾಗಿ ಚಲಿಸಿದರೆ ನಮಗೇನೂ ಗೊತ್ತಾಗೋದೇ ಇಲ್ಲ.

ಹಾಗನ್ನವಂತಿದ್ದರೆ ಇಷ್ಟೆಲ್ಲಾ ರಾಮಾಯಣ ಬರೀ ಬೇಕಾಗಿರಲಿಲ್ಲ. ಇದು ಜೀವನದ ಮೇಲೆ ಖಂಡಿತಾ ಪರಿಣಾಮ ಬೀರುತ್ತೆ..! ಮೆಟಾ ಸಂಸ್ಥೆ ನೀಡಿರುವ ಮಾಹಿತಿ ಪ್ರಕಾರ ದಿನದ 24 ಗಂಟೆಗಳಿಗೆ ತಕ್ಕ ಹಾಗೆ ಮಾಹಿತಿ ಮತ್ತು ತಂತ್ರಜ್ಞಾನ ಜಗತ್ತು ಸಮಯ
ಹೊಂದಾಣಿಕೆ ಮಾಡಿರುತ್ತೆ. ಒಂದು ವೇಳೆ ಭೂಮಿ ಕೆಲವು ಮಿಲಿ ಸೆಕೆಂಡ್ ವೇಗವಾಗಿ ಅಥವಾ ನಿಧಾನವಾಗಿ ತಿರುಗಿದರೆ ಸ್ವಾಯತ್ತವಾಗಿ ಕಾರ್ಯ ನಿರ್ವಹಿಸುವ ಕೆಲವು ಕಂಪ್ಯೂಟರ್ ಪ್ರೋಗ್ರಾಂಗಳು ಕ್ರಾಷ್ ಆಗಬಹುದು!

ಏಕೆಂದರೆ, ಕೆಲವು ಮಿಲಿ ಸೆಕೆಂಡ್‌ಗಳ ಸಮಯದ ಕಡಿತವನ್ನು ಅವು ಗ್ರಹಿಸುವಲ್ಲಿ ಸೋಲುತ್ತವೆ. ಸಮಯ ಜಿಗಿದ ರೀತಿ ಭಾಸವಾಗುತ್ತದೆ. ಆಗ ಡೇಟಾ ಕರೆಪ್ಟ್ ಆಗುವ ಸಾಧ್ಯತೆಗಳು ಹೆಚ್ಚಿವೆ. ಏಕೆಂದರೆ, ಜಿಪಿಎಸ್ ಉಪಗ್ರಹಗಳಲ್ಲಿ ಬಳಸಲಾಗುವ ಪರಮಾಣು ಗಡಿಯಾರಗಳ ಮೇಲೆ ಭೂಮಿಯ ಈ ವೇಗ ಪರಿಣಾಮಗಳನ್ನು ಉಂಟು ಮಾಡಬಹುದು. ಅರ್ಥ ಆಗಲಿಲ್ವಾ? ಜಿಪಿಎಸ್ ಉಪಗ್ರಹಗಳು-ಐನ್‌ಸ್ಟೇನ್‌ನ ಸಾಪೇಕ್ಷತಾ ಸಿದ್ಧಾಂತದ ಪರಿಣಾಮಕ್ಕಾಗಿ ಈಗಾಗಲೇ ಸರಿಪಡಿಸಬೇಕಾಗಿದೆ.

ಇದರ ಹೊರತಾಗಿ, ಸ್ಮಾರ್ಟ್ ಫೋನ್‌ಗಳು, ಕಂಪ್ಯೂಟರ್‌ಗಳು ಮತ್ತು ಇತರ ಸಂವಹನ ವ್ಯವಸ್ಥೆಗಳು ನೆಟ್‌ವರ್ಕ್ ಟೈಮ್
ಪ್ರೋಟೋಕಾಲ್ (ಎನ್ಟಿಪಿ) ಸರ್ವರ್‌ಗಳು ಸಿಂಕ್ರೊನೈಸ್ ಆಗಿರುವುದರಿಂದ ಅವು ಅನುಪಯುಕ್ತವಾಗುತ್ತವೆ. ಗಡಿಯಾರವು ೦೦:೦೦:೦೦ಗೆ ಮರುಹೊಂದಿಸುವ ಮೊದಲು 23:59:59 ರಿಂದ 23:59:60ಕ್ಕೆ ಮುಂದುವರಿಯುತ್ತವೆ. ಇದರಿಂದ ಈ ರೀತಿಯ ಸಮಯ ಜಂಪ್ ಪ್ರೋಗ್ರಾಂಗಳನ್ನು ಕ್ರ್ಯಾಶ್ ಮಾಡಬಹುದು ಮತ್ತು ಡೇಟಾವನ್ನು ಭ್ರಷ್ಟಗೊಳಿಸಬಹುದು ಎಂದು ಹೇಳಲಾಗುತ್ತಿದೆ.

ಏನೇನಾಗುತ್ತೋ, ಬಿಡುತ್ತೋ, ಅಂತೂ ನಾವೆಲ್ಲ ಸಮಯದ ಗೊಂಬೆಗಳೇ..! ಭೂಮಿಯ ತಿರುಗುವಿಕೆಯಿಂದ ಸೃಷ್ಟಿಯಾದ ಗುರುತ್ವಾಕರ್ಷಣ ಶಕ್ತಿಯೇ ನಮ್ಮೆಲ್ಲರ ಬದುಕನ್ನು ಹಿಡಿದಿಟ್ಟಿರೋದು. ಹಾಗಾಗಿ ನಮ್ಮ ಬದುಕು ಭೂಮಿಯ ತಿರುಗುವಿಕೆ ಜೊತೆಗೆ, ಗಡಿಯಾರದ ಜೊತೆಗೆ, ಸಮಯದ ಜೊತೆಗೆ ಓಡುತ್ತಲೇ ಇರೋದಂತೂ ಸತ್ಯ. ಕಾಲಕ್ಕೆ ತಕ್ಕಂತೆ, ಭೂಮಿಯ ವೇಗಕ್ಕೆ ಸರಿಯಾಗಿ ನಾವೂ ಜೀವನದಲ್ಲಿ ಓಡುತ್ತಲೇ ಇರಬೇಕು. ಅದೇ ಬದುಕಿನ ಓಟ. ಅಲ್ವೇ ಮತ್ತೇ?