Sunday, 1st December 2024

ಅಲ್ಲೂ, ಇಲ್ಲೂ, ಎಲ್ಲೆಲ್ಲೂ ಸಲ್ಲುವ ಸೈಕಲ್ಲು !

ವಿದೇಶವಾಸಿ

dhyapaa@gmail.com

ಮನುಷ್ಯರಿಗಿಂತಲೂ ಸೈಕಲ್ ಸಂಖ್ಯೆಯೇ ಹೆಚ್ಚಿರುವ ನೆದರ್‌ಲ್ಯಾಂಡ್ ದೇಶದ ಆಮ್‌ಸ್ಟರ್‌ಡ್ಯಾಮ್ ನಗರದ ಕೆಲವು ಭಾಗಗಳಲ್ಲಿ ಸೈಕಲ್
ನಿಲ್ಲಿಸುವುದಕ್ಕೆ ಸ್ಥಳ ಹುಡುಕುವುದೇ ದೊಡ್ಡ ಸವಾಲಾಗಿತ್ತು. ಜನ ನೆಲವನ್ನು ಬಿಡಿ, ನಾಲೆಗಳಲ್ಲೂ ಸೈಕಲ್ ಬಿಟ್ಟು ಹೋಗುತ್ತಿದ್ದರು.

ಬಡವರಿಗೆ ಬಂಧು, ಮಧ್ಯಮ ವರ್ಗ ದವರಿಗೆ ಸಾರಿಗೆಯ ಮಾಧ್ಯಮ, ಶ್ರೀಮಂತರಿಗೆ ಹವ್ಯಾಸ, ಸೈಕಲ್. ಇಂದಿಗೂ ಕರ್ನಾಟಕದ ಕೆಲವು ಕಡೆಗಳಲ್ಲಿ ‘ದಿನವಿಡೀ ಕಷ್ಟಪಡುತ್ತಾನೆ’ ಎನ್ನುವುದಕ್ಕೆ ‘ಬೆಳಗಿನಿಂದ ಸಾಯಂಕಾಲದವರೆಗೂ ಸೈಕಲ್ ಹೊಡೆಯುತ್ತಾನೆ’ ಎಂದು ಹೇಳುವುದಿದೆ. ಹಾಲು
ಮಾರುವವರಿಂದ ಹಿಡಿದು ಮೀನು ಮಾರುವವರವರೆಗೆ, ಮುಂಜಾನೆ ದಿನಪತ್ರಿಕೆ ಹಂಚುವವರಿಂದ ಹಿಡಿದು ಆರೋಗ್ಯ ಕಾಪಾಡಿಕೊಳ್ಳಬೇಕೆಂದು ಬಯಸುವ ‘ಫಿಟ್ನೆಸ್ ಫ್ರೀಕ್’ಗಳ ಸಾಯಂಕಾಲದ ‘ಬೈಕ್ ರೈಡ್’ ವರೆಗೆ ಶತಮಾನದಿಂದ ಜನರ ಜತೆಗಾರ- ಸೈಕಲ್.

ಸೈಕಲ್‌ನ ವಿಶೇಷತೆಯೆಂದರೆ, ಒಮ್ಮೆ ಕಲಿತರೆ ಮುಗಿಯಿತು, ಜೀವನ ಪೂರ್ತಿ ನೆನಪಿರುವ ವಿದ್ಯೆ ಅದು. It is one time investment. (ಈ ಪಟ್ಟಿಗೆ ಈಜುವುದನ್ನೂ ಸೇರಿಸಿಕೊಳ್ಳ ಬಹುದು.) ಸೈಕಲ್ ತುಳಿಯುವುದು ಬಿಟ್ಟು ದಶಕಗಳೇ ಕಳೆದಿರಲಿ, ಕಲಿಯುವಾಗ ಇದ್ದ ೨೫ ಕಿಲೋ ದೇಹದ ತೂಕಕ್ಕೆ ಇನ್ನೂ ನೂರು ಸೇರಿ ೧೨೫ ಕಿಲೋ ತೂಕದ ಶರೀರವೇ ಆಗಲಿ, ಸೈಕಲ್ ತಾರತಮ್ಯ ತೋರಿಸುವುದಿಲ್ಲ. ಒಮ್ಮೆ ಸೈಕಲ್ ಮೇಲೆ ನಮ್ಮ ದೇಹದ ಸಮತೋಲನ ಕಾಪಾಡಿಕೊಳ್ಳುವು ದನ್ನು (ಬ್ಯಾಲೆನ್ಸಿಂಗ) ಕಲಿತರೆ ಅದು ಜೀವನ ಪರ್ಯಂತ. ಎಪ್ಪತ್ತು-ಎಂಬತ್ತರ ದಶಕದಲ್ಲಿ ಶಾಲೆಗೆ ಹೋಗುತ್ತಿದ್ದ ಮಕ್ಕಳಲ್ಲಿ ಬಹುತೇಕ ಎಲ್ಲರ ಕಣ್ಣಿಗೂ ಸಾಮಾನ್ಯವಾಗಿ ಕಾಣುತ್ತಿದ್ದುದು ಸೈಕಲ್.

ಕೆಲವೊಮ್ಮೆ ಮಕ್ಕಳು ಬೆರಗುಗಣ್ಣಿನಿಂದ ನೋಡುತ್ತಿದ್ದ ದ್ವಿಚಕ್ರ ವಾಹನವೂ ಅದೇ ಸೈಕಲ. ಶಾಲೆಯ ಬಾಗಿಲಲ್ಲಿ ಬಂದು ಐಸ್ ಕ್ಯಾಂಡಿ ಮಾರು ವುವರಿಗೆ, ಗೋಲಿ ಸೋಡಾ ಮಾರುವವರಿಗಂತೂ ಸಾರಿಗೆಯ ಸಾಧನವೂ ಸೈಕಲ್, ಮಾರುವ ಅಂಗಡಿಯೂ ಸೈಕಲ್. ಆಗಂತೂ ಹಾಲು, ಸೋಡಾ ಬಾಟಲಿ ಮಾರುವವರ ಸೈಕಲ್ ನೋಡುವುದೇ ಒಂದು ಸೋಜಿಗ. ಬಾಟಲಿ ಇಡಲಿಕ್ಕೆಂದೇ ಅವರು ಸೈಕಲ್ ಹಿಂದಿರುವ ’ಕ್ಯಾರಿಯರ್’ ಮೇಲೆ ಅಳವಡಿಸ್ಕೊಳ್ಳುತ್ತಿದ್ದ ‘ಟ್ರೇ’, ಕುಳಿತುಕೊಳ್ಳುವ ‘ಸೀಟ್’ ಮತ್ತು ‘ಹ್ಯಾಂಡಲ್’ ನಡುವಿನ ಕಂಬಿಯ ಮೇಲೆ ತೂಗಿ ಬಿಡುತ್ತಿದ್ದ ಗೋಣಿ ಪಾಟಿನ ಚೀಲ, ಇವೆಲ್ಲ ಅಂದಿನ ಬಾಲ್ಯದ ಕಂಗಳಿಗೆ ಬೆರಗು.

ಅದರೊಂದಿಗೆ ಕೆಲವರು ಸೈಕಲ್‌ನಲ್ಲಿ ಮಾಡುವ ವಿವಿಧ ಸರ್ಕಸ್, ಕಸರತ್ತುಗಳು ವಿಸ್ಮಯ. ಸೈಕಲ್ ನಡೆಸುವಾಗ ಎರಡೂ ಕೈ ಬಿಟ್ಟರಂತೂ ಮುಗಿಯಿತು, ಅವತ್ತಿಗೆ ಅವರೇ ಹೀರೋಗಳು. ‘ನನ್ನ ಪ್ರಿಯತಮ ಕೈ ಬಿಟ್ಟು ಸೈಕಲ್ ನಡೆಸುತ್ತಾನೆ’ ಎಂಬುದು ಕೆಲವು ಯುವತಿಯರ ಅಪ್ರಕಟಿತ,
ಅಘೋಷಿತ ಬಯೋಡಾಟಾದಲ್ಲಿ ಸೇರಿಕೊಳ್ಳುತ್ತಿತ್ತು. ಕೆಲವೊಮ್ಮೆ ಪ್ರೇಮ ಪಾಶದಲ್ಲಿ ಸಿಲುಕಿಕೊಳ್ಳಲು ಅದೂ ಒಂದು ಕಾರಣವಾಗುತ್ತಿತ್ತು.
ಹಲವಾರು ಯುವಕ ಯುವತಿಯರ ನಡುವೆ ಪ್ರೇಮಾಂಕುರಗೊಳಿಸುವಲ್ಲಿ, ಪ್ರೇಮಬಂಧವನ್ನು ಭದ್ರವಾಗಿಸುವಲ್ಲಿ ಸೈಕಲ್ ಮಹತ್ತರ ಪಾತ್ರ ವಹಿಸುತ್ತಿತ್ತು.

ತನ್ನ ಹುಡುಗಿ ಬರುವ ಹಾದಿಯಲ್ಲಿ ಕಾಯುತ್ತ ಕುಳಿತಿರುವ ಹುಡಗನ ಜತೆಗಾರನಾಗಿ ಸೈಕಲ್ ನಿಲ್ಲುತ್ತಿತ್ತು. ಸ್ನೇಹಿತರನ್ನು ‘ಡಬ್ಬಲ್ ರೈಡ್’
‘ಟ್ರಿಬ್ಬಲ್ ರೈಡ್’ ಮೂಲಕ ಚಿತ್ರ ಮಂದಿರಕ್ಕೆ ಕೊಂಡೊಯ್ಯುತ್ತಿತ್ತು. ಅದೆಷ್ಟೋ ಲಕ್ಷ ಜನರನ್ನು ಕಚೇರಿಗೆ ತಲುಪಿಸುತ್ತಿತ್ತು. ರೈತರ ಬಾಳೆಗೊನೆ
ಯಾಗಲಿ ಜೋಳದ ತೆನೆಯಾಗಲಿ, ಮಾರುಕಟ್ಟೆಗೆ ಹೊರುತ್ತಿತ್ತು. ಹೊಸದಾದರೆ ಒಳಿತು. ಇಲ್ಲವಾದರೆ, ಚಪ್ಪು ಹತ್ತಿದರೂ ಸರಿ, ಬುಕಣಾ ಎದ್ದರೂ ಸರಿ, ಒಂದು ಸೈಕಲ್ ಇದೆಯೆಂದರೆ ಆತನ ಕಿಮ್ಮತ್ತೇಬೇರೆ. ಲೆಕ್ಕವಿಲ್ಲದಷ್ಟು ಪ್ರೇಮದ, ಸ್ನೇಹದ, ಉದ್ಯೋಗದ, ಕೆಲಸದ ಕತೆಗೆ (ಕೆಲಸಕ್ಕೆ ಬಾರದ
ಕತೆಗೂ) ಈ ಸೈಕಲ್ ಸಾಕ್ಷಿಯಾಗುತ್ತಿತ್ತು.

ಇರಲಿ, ಈಗ ಮೋಟರ್ ಬೈಕ್‌ನಲ್ಲಿ ಮುಂದಿನ ಗಾಲಿಯನ್ನು ಗಾಳಿಗೆ ತೂರಿಕೊಂಡು ಹೋಗುವ ‘ವ್ಹೀಲಿ’ ಇದೆಯಲ್ಲ, ಆ ಕಸರತ್ತುಗಳೆಲ್ಲ ಸೈಕಲ್‌ನಲ್ಲಿ ಕೆಲವು ದಶಕ ಹಳತು. ಅಂದಹಾಗೆ, ಇಂದಿನ ‘ಮೋಟರ್ ಬೈಕ್’ಗೆ ಮೂಲ ಪ್ರೇರಣೆಯೂ ಅದೇ ಸೈಕಲ್. ಶಾಲಾ ದಿನಗಳಲ್ಲಿ ನಮ್ಮ ಮನೆಯ ಹತ್ತಿರ
‘ಮಾರ್ಷಲ’ ಎಂಬ ಹೆಸರಿನವರು ಸುಮಾರು ಹತ್ತು ಸೈಕಲ್ ಬಾಡಿಗೆಗೆ ಇಟ್ಟಿದ್ದರು. ಅದರಲ್ಲಿ ಎರಡು ವಿಧದ ಸೈಕಲ್ ಇದ್ದವು. ಒಂದು, ಯಾವುದೇ ಅಲಂಕಾರ, ಹಿಂದೆ ಕ್ಯಾರಿಯರ್ ಮುಂದೆ ಡೈನಮೋ, ಸೀಟ್‌ಗೆ ಕವರ್ ಇಲ್ಲದ, ಕೊನೆ ಪಕ್ಷ ಬಾರಿಸಲು ಬೆಲ್ ಕೂಡ ಇಲ್ಲದ ಹಳೆಯ ಬೋಳು ಸೈಕಲ್.

ಅದಕ್ಕೆ ತಾಸಿಗೆ ಐದು ರುಪಾಯಿ ಬಾಡಿಗೆ. ಇನ್ನೊಂದು, ಕ್ಯಾರಿರ್ಯ, ಡೈನಮೋ ಜತೆಗೆ, ಸ್ಪಂಜ್ ಇರುವ ಕುಶನ್ ಹಾಕಿದ ಸೀಟ್, ಬೆಲ್ಟ್, ಹ್ಯಾಂಡಲ್‌ಗೆ ನೇತು ಬಿದ್ದ ಬಣ್ಣದ ರಿಬ್ಬನ್, ಪ್ಯಾಡೆಲ್ ಮತ್ತು ಗಾಲಿಗೆ ಜೋಡಿಸಿದ ಹೊಳೆಯುವ ರಿಫ್ಲೆಕ್ಟರ್, ಇತ್ಯಾದಿ, ಇತ್ಯಾದಿ ಇರುವ ಹೊಸ ಸೈಕಲ್. ಅದಕ್ಕೆ ಹತ್ತು ರುಪಾಯಿ ಬಾಡಿಗೆ. ಮನೆಯಲ್ಲಿ ಕಿಸೆ ಖರ್ಚಿಗೆ ಎಂದು ಕೊಟ್ಟ ಸಣ್ಣ ಹಣ, ಕಾಡಿ-ಬೇಡಿ ಪಡೆದ ದುಡ್ಡು, ಅಜ್ಜ-ಅಜ್ಜಿ ಕೊಟ್ಟ ಭಕ್ಷೀಸು ಎಲ್ಲವೂ ಹೆಚ್ಚಾಗಿ ಹೋಗಿ ಸೇರುತ್ತಿದ್ದುದು ಅದೇ ಮಾರ್ಷಲ್‌ನ ಅಂಗಡಿಗೆ.

ಅದು ತಾಸಿಗೆ ಐದು ರುಪಾಯಿ ಬಾಡಿಗೆಯ ಸೈಕಲ್‌ಗೆ ಎಂದು ಬೇರೆ ಹೇಳಬೇಕಿಲ್ಲವಲ್ಲ. ಸೈಕಲ್ ಕಲಿಯುವ ಮಕ್ಕಳಿಗೆ ಎಂದರೆ ಮಾರ್ಷಲ್ ಹೊಸ
ಸೈಕಲ್ ಕೊಡುತ್ತಲೂ ಇರಲಿಲ್ಲ ಬಿಡಿ. ಆದರೂ ಐದು ರುಪಾಯಿಯಲ್ಲಿಯೇ ಒಳ ಪೆಡಲ್ (ಕತ್ರಿ) ತುಳಿದೇ ರಾಜ ದರ್ಬಾರ್ ಮೆರೆಯುತ್ತಿದ್ದೆವು.
ಅದಕ್ಕೂ ಗತಿಯಿಲ್ಲವೆಂದರೆ ಹಳೆಯ ಚಕ್ರವನ್ನೇ ಉರುಳಿಸಿ, ಹಿಂದಿನಿಂದ ಪೆಟ್ಟುಕೊಡುತ್ತಾ ಓಡುತ್ತಿದ್ದೆವು. ಕ್ರಮೇಣ ಮೋಟರ್ ಬೈಕ್‌ಗಳು
ಮಾರು ಕಟ್ಟೆಗೆ ಬಂದು ಜನಪ್ರಿಯವಾಗತೊಡಗಿದವು.

ಕೆಂಪು ಬಣ್ಣದ ರಾಜದೂತ್ ಬೈಕ್ ಗಳು ಸೈಕಲ್ ಜಾಗವನ್ನು ಆಕ್ರಮಿಸಿಕೊಂಡವು. ಇಂದಿನ ಯುವ ಪೀಳಿಗೆ ಅದೆಷ್ಟೋ ವಿಷಯಗಳಲ್ಲಿ ನಾವು ಅನುಭವಿಸಿದಷ್ಟು ಅವರು ಅನುಭವಿಸಲಿಲ್ಲ ಎಂದುದು ಹೇಳುವುದಿದೆ. ಎಷ್ಟೋ ವಿಷಯಗಳಲ್ಲಿ ಅದು ನಿಜ. ಬಾಡಿಗೆ ಸೈಕಲ್, ಮೋಟರ್ ಸೈಕಲ್‌ಗಳ ಅಂಗಡಿಗಳು ಮುಚ್ಚಿಹೋಗಿವೆ. ಕೆಲವು ವಸ್ತುಗಳು, ವಿಷಯಗಳು, ಆಟಗಳು ನಮ್ಮ ಕಾಲಘಟ್ಟದಲ್ಲಿ ಆಗಿ ಅಂದಿಗೇ ಮುಗಿದು ಹೋದವು ಎಂಬುದೂ ಸತ್ಯ. ಲಗೋರಿ, ಡಬಾಂಡುಬಿಯಂತಹ ಆಟಗಳು ಕೇವಲ ನಾಮಾವಶೇಷಗಳಾಗಿ ಉಳಿದುಕೊಂಡಿವೆ.

ಅದೃಷ್ಟವಶಾತ್, ಕಾರಣ ಏನೇ ಇದ್ದರೂ ಇಂದಿನ ಪೀಳಿಗೆಯವರೂ ಸೈಕಲ್ ಇಷ್ಟಪಡುತ್ತಾರೆ ಎನ್ನುವುದು ಸಮಾಧಾನದ ಸಂಗತಿ. ಹೊಸ
ಆವಿಷ್ಕಾರಗಳೊಂದಿಗೆ ನೂತನ ವಿನ್ಯಾಸದೊಂದಿಗೆ ಸೈಕಲ್ ಕೂಡ ಇಂದಿಗೂ ಮಾರುಕಟ್ಟೆಯಲ್ಲಿ ತನ್ನ ಅಸ್ತಿತ್ವ ಉಳಿಸಿಕೊಂಡಿದೆ. ಮಜಾ ಎಂದರೆ, ಆ ದಿನಗಳಲ್ಲಿ ಒಂದು ಸೈಕಲ್ ಬೆಲೆ ಒಂದೋ ಎರಡೋ ಸಾವಿರ ರೂಪಾಯಿ ಇರುತ್ತಿತ್ತು. ಇಂದು Audi, Lamborghini ಯಂತಹ ಕಾರು ತಯಾರಿಸುವ ಸಂಸ್ಥೆಗಳೂ ಸೈಕಲ್ ತಯಾರಿಸುತ್ತಿವೆ. ನೀವು ಒಂದು ಲ್ಯಾಂಬರ್ಗಿನಿ ಸೈಕಲ್ ಕೊಳ್ಳಬೇಕು ಎಂದರೆ ಸುಮಾರು ಮೂವತ್ತು
ಸಾವಿರ ಡಾಲರ್ ಎಣಿಸಬೇಕು. ಆ ದಿನಗಳಲ್ಲಿ ಸೈಕಲ್ ಸುಮಾರು ಇಪ್ಪತ್ತು ಕಿಲೋ ತೂಗುತ್ತಿತ್ತು.

ಈಗ, ಹೊಸ ಸೈಕಲ್‌ಗಳ ತೂಕ ಹತ್ತು ಕಿಲೋ ಒಳಗೆ. ಲ್ಯಾಂಬರ್ಗಿನಿ ಸೈಕಲ್ ಹೇಳಿದೆನಲ್ಲ, ಅದು ಏಳು ಕಿಲೋಗಿಂತಲೂ ಕಮ್ಮಿ ತೂಕದ್ದು. ಇಂದು
ವಿಶ್ವದ ಅತಿ ದುಬಾರಿ ಸೈಕಲ್ ಬೆಲೆ ಸುಮಾರು ಒಂದೂಮುಕ್ಕಾಲು ಮಿಲಿಯನ್ ಡಾಲರ್ ಎಂದು ದಾಖಲಾಗಿದೆ. ‘ಅದೇನು ಬಂಗಾರದ್ದೆ? ಅದರನು ವಜ್ರದ ತುಂಡು ಇದೆಯೇ?’ ಎಂದು ಕೇಳಬೇಡಿ. ಅದು ಇಪ್ಪತ್ನಾಲ್ಕು ಕ್ಯಾರೆಟ್ ಅಪ್ಪಟ ಬಂಗಾರದ್ದೇ, ಅದರಲ್ಲಿ ವಜ್ರದ ಹರಳುಗಳನ್ನೂ
ಸೇರಿಸಿzರೆ. ಅದೂ ಒಂದೆರಡಲ್ಲ, ಬರೊಬ್ಬರಿ ಆರು ನೂರು ಹರಳನ್ನು ಜೋಡಿಸಿದ್ದಾರೆ.

ಇದೆಲ್ಲದರೊಂದಿಗೆ ಇಂದಿನ ಬಹುತೇಕ ಸೈಕಲ್‌ಗಳನ್ನು ಮಡಚಿ, ಕಾರಿನ ಡಿಕ್ಕಿಯಲ್ಲಿ ತುಂಬಿಕೊಂಡು ಹೋಗಬಹುದು. ಆ ದಿನಗಳಲ್ಲಿ ಹೊಗೆ ಉಗುಳುವ ಯಂತ್ರಗಳಿಂದ ಆಗುವ ದುಷ್ಪರಿಣಾಮಗಳ ಬಗ್ಗೆಯಾಗಲಿ, ವಾಯು ಮಾಲಿನ್ಯದ ಕುರಿತಾಗಲಿ ಹೆಚ್ಚಿನ ಮಾಹಿತಿಯಂತೂ ಇರಲಿಲ್ಲ. ಆಗ ಮಾಲಿನ್ಯ ಈ ಪ್ರಮಾಣದಲ್ಲಿ ಇರಲೂ ಇಲ್ಲ ಬಿಡಿ. ಈಗ ತಿಳಿದ ಮೇಲೂ ನಾವು ಎಷ್ಟು ಕಾಳಜಿ ವಹಿಸುತ್ತಿದ್ದೇವೆ? ಇಂದು ಪೆಟ್ರೋಲ್ ದರ ನೂರರ ಮನೆ ದಾಟಿದರೂ ಬೈಕ್ ಬಿಟ್ಟು ಪುನಃ ಬೈಸಿಕಲ್ಲಿಗೆ ಬಂದಿಲ್ಲ. ಬಾಯಲ್ಲಿ ’ಇನ್ನು ಮುಂದೆ ಬೈಸಿಕ ಗತಿ’ ಎಂದು ಹೇಳುತ್ತೇವಾದರೂ ವಾಸ್ತವದಲ್ಲಿ
ನಮಗೆ ಮನಸ್ಸಿಲ್ಲ.

ಈ ವಿಷಯದಲ್ಲಿ ಪಾಶ್ಚಿಮಾತ್ಯ ದೇಶಗಳು ಒಂದು ಹೆಜ್ಜೆ ಮುಂದು ಎಂದೇ ಹೇಳಬಹುದು. ನೆದರ್ ಲ್ಯಾಂಡ್, ಜರ್ಮನಿ, ಡೆನ್ಮಾರ್ಕ್, ಅಮೆರಿಕ
ಮೊದಲಾದ ದೇಶಗಳು ಸೈಕಲ್ ಬಳಸುವುದನ್ನು ಹೆಚ್ಚು ಪ್ರೋತ್ಸಾಹಿಸುತ್ತವೆ. ಅನೇಕ ಮುಂದುವರಿದ ದೇಶಗಳಲ್ಲಿ ಕಚೇರಿಗೆ ಹೋಗಲು ಕಾರು, ಬಸ್ಸಿನ ಬದಲು ಸೈಕಲ್‌ನಲ್ಲಿ ಹೋಗುತ್ತಾರೆ. ಕೆಲಸ ಮಾಡುವ ಸ್ಥಳ ನಾಲ್ಕರಿಂದ ಎಂಟು ಕಿಲೋಮೀಟರ್ ದೂರದಲ್ಲಿದ್ದರೆ ಶೇಕಡಾ ಇಪ್ಪತ್ತರಿಂದ ಎಪ್ಪತ್ತರಷ್ಟು ಮಂದಿ ಕಚೇರಿಗೆ ಹೋಗಿ ಬರಲು ಸೈಕಲ್ ಬಳಸುತ್ತಾರೆ. ಕೆಲವು ದೇಶಗಳಲ್ಲಿ ಪ್ರಧಾನಿ, ರಾಷ್ಟ್ರಪತಿಗಳೂ ಸೈಕಲ್ ಸವಾರಿ ಮಾಡುತ್ತಾರೆ.

ಅಲ್ಲಿಯ ಮೆಟ್ರೊ, ರೈಲುಗಳ ಒಳಗೂ ಸೈಕಲ್ ಕೊಂಡೊಯ್ಯಬಹುದಾಗಿದ್ದು, ಅದಕ್ಕಾಗಿಯೇ ವಿಶೇಷ ಬೋಗಿ, ಸ್ಥಳವನ್ನು ಕಲ್ಪಿಸಲಾಗಿದೆ. ಸಾಕಷ್ಟು
ಜನ ರೈಲಿನಲ್ಲಿ ಸೈಕಲ್ ಒಯ್ಯುವುದನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗೆಯೇ, ರೇಲ್ವೆ ನಿಲ್ದಾಣದ ಬಳಿ ಸೈಕಲ್ ನಿಲ್ಲಿಸಲು ಬೇಕಾದಷ್ಟು ಪಾರ್ಕಿಂಗ್
ವ್ಯವಸ್ಥೆಗಳೂ ಇರುತ್ತವೆ. ಕೆಲವು ದೇಶಗಳಲ್ಲಿ ಸೈಕಲ್ ಸವಾರರಿಗೆ ಪ್ರತ್ಯೇಕ ಲೇನ್ ಇದೆ. ಸೈಕಲ್ ಸವಾರರು ರಸ್ತೆ ದಾಟುವಾಗ ದೊಡ್ಡ ವಾಹನ ದವರು ತಮ್ಮ ವಾಹನ ನಿಲ್ಲಿಸಿ, ಸೈಕಲ್‌ಗೆ ಆದ್ಯತೆ ನೀಡುತ್ತಾರೆ.

ಮನುಷ್ಯರಿಗಿಂತಲೂ ಸೈಕಲ್ ಸಂಖ್ಯೆಯೇ ಹೆಚ್ಚಿರುವ ನೆದರ್‌ಲ್ಯಾಂಡ್ ದೇಶದ ಆಮ್‌ಸ್ಟರ್ ಡ್ಯಾಮ್ ನಗರದ ಕೆಲವು ಭಾಗಗಳಲ್ಲಿ ಸೈಕಲ್
ನಿಲ್ಲಿಸುವುದಕ್ಕೆ ಸ್ಥಳ ಹುಡುಕುವುದೇ ದೊಡ್ಡ ಸವಾಲಾಗಿತ್ತು. ಜನ ನೆಲವನ್ನು ಬಿಡಿ, ನಾಲೆಗಳಲ್ಲೂ ಸೈಕಲ್ ಬಿಟ್ಟು ಹೋಗುತ್ತಿದ್ದರು. ಅಲ್ಲಿಯ ಸರಕಾರ
ಅದಕ್ಕೆ ಪರಿಹಾರ ಮಾರ್ಗವೊಂದನ್ನು ಹುಡುಕಿದೆ. ಇದೇ ಬರುವ ಜನೆವರಿ ಇಪ್ಪತ್ತಾರಕ್ಕೆ ನಗರದ ಕೇಂದ್ರ ಸ್ಥಾನದಲ್ಲಿ ಸೈಕಲ್ ನಿಲ್ದಾಣವೊಂದು
ಉದ್ಘಾಟನೆಗೊಳ್ಳುತ್ತಿದೆ. ನಿಜ, ದಿನದ ಇಪ್ಪತ್ನಾಲ್ಕು ಗಂಟೆಯೂ ತೆರೆದಿರುವ, ಸಾವಿರಾರು ಸೈಕಲ್ ನಿಲ್ಲಿಸಬಹುದಾದ ಉಚಿತ ಸೈಕಲ್ ನಿಲ್ದಾಣ ಅದು.

ಕೆರೆಯ ಕೆಳಗೆ ನಿರ್ಮಿಸಲಾದ ಈ ನಿಲ್ದಾಣಕ್ಕೆ ಅಲ್ಲಿಯ ಸರಕಾರ ಅರವತ್ತು ಮಿಲಿಯನ್ ಯೂರೋ ಹಣ ಖರ್ಚುಮಾಡಿದೆ. ಅದಕ್ಕೆ ಸಮೀಪದಲ್ಲಿಯೇ ೨೫ ಮಿಲಿಯನ್ ಯುರೋ ವೆಚ್ಚದ ಪಾರ್ಕಿಂಗ್ ಸ್ಥಳ ಈಗಾಗಲೇ ಇದೆ. ಸೈಕಲ್ ನಿಲ್ಲಿಸಲೆಂದು ೮೫ ಮಿಲಿಯನ್ ಯೂರೋ (ಸುಮಾರು ಏಳುನೂರ ಐವತ್ತು ಕೋಟಿ ರುಪಾಯಿ) ಒಂದು ಸರಕಾರ ಖರ್ಚು ಮಾಡುತ್ತದೆ ಎಂದರೆ ಮತ್ತೇನಾದರೂ ಹೇಳಬೇಕೇ? ಅದು ಸರಕಾರದ ಬದ್ಧತೆಯನ್ನು ತೋರಿಸುತ್ತದೆ. ಭಾರತದಲ್ಲೂ ಸಾರ್ವಜನಿಕ ಸ್ಥಳಗಳ ಬಳಿ, ಸಾರಿಗೆ ಸಂಪರ್ಕದ ನಿಲ್ದಾಣದ ಬಳಿ ಸೈಕಲ್ ನಿಲ್ಲಿಸುವ ವ್ಯವಸ್ಥೆಯ ಕುರಿತು ಸರಕಾರ ತೀವ್ರವಾಗಿ ಯೋಚಿಸಬೇಕಿದೆ.

ಅದರಿಂದ ಹಲವು ಸೈಕಲ್ ಸವಾರರಿಗೆ ಪ್ರೋತ್ಸಾಹ ದೊರೆತರೆ, ಕೆಲವರಿಗೆ ಪ್ರೇರಣೆ ದೊರಕುತ್ತದೆ. ತನ್ಮೂಲಕ ವಾಯು ಮಾಲಿನ್ಯ, ಶಬ್ದ ಮಾಲಿನ್ಯದಿಂದ ಒಂದಷ್ಟು ದೂರವಿರಲು ಸಹಾಯವಾಗುತ್ತದೆ. ಒಂದಂತೂ ನಿಜ, ಅಂದಿಗಾಗಲಿ, ಇಂದಿಗಾಗಲಿ, ಪೂರ್ವವಾಗಲಿ, ಪಶ್ಚಿಮವಾಗಲಿ, ಸೈಕಲ್ ಎಲ್ಲ ಕಡೆ ಸಲ್ಲುತ್ತದೆ.