Friday, 22nd November 2024

ವಿಶ್ವದ ಮುಂದೆ ವಿಷಣ್ಣ ಭಾವ ಹೊತ್ತು ಚಿಕ್ಕಣ್ಣನಾದ ದೊಡ್ಡಣ್ಣ!

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

ಅಮೆರಿಕ ಅಧ್ಯಕ್ಷ ಚುನಾವಣಾ ಫಲಿತಾಂಶ ಇನ್ನೂ ಬಂದಿರಲಿಲ್ಲ, ಆಗಲೇ ಹಾಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಾನೇ ಗೆದ್ದಿರುವು ದಾಗಿ ಘೋಷಿಸಿಬಿಟ್ಟರು.

ಆದರೆ ಅದೆಂಥ ವಿಚಿತ್ರ ಅಂದರೆ, ಚುನಾವಣಾ ಮುಗಿದು ಒಂದು ವಾರವಾಗುತ್ತಾ ಬಂತು. ಫಲಿತಾಂಶ ಮಾತ್ರ ಇನ್ನೂ ಘೋಷಣೆ ಯಾಗಿಲ್ಲ. ಘೋಷಣೆಯಾದರೂ ಟ್ರಂಪ್ ಕುರ್ಚಿ ಬಿಟ್ಟುಕೊಡುವಂತೆ ಕಾಣುತ್ತಿಲ್ಲ. ಅವರು ಈ ಫಲಿತಾಂಶವನ್ನು ಪ್ರಶ್ನಿಸಿ ಕೋರ್ಟಿಗೆ ಹೋಗಲಿದ್ದಾರೆ. ಕೋರ್ಟಿಗೆ ಹೋದರೆ ತೀರ್ಪು ಏನು ಬರಬಹುದು ಎಂಬುದು ಎಲ್ಲರಿಗೂ ಗೊತ್ತಿದೆ. ಅಂದರೆ ಅಲ್ಲಿಗೆ ಎಲ್ಲವೂ ಅಯೋಮಯ.

ಡೆಮಾಕ್ರೆಟಿಕ್ ಪಕ್ಷದ ಜೋ ಬೈಡನ್, ರಿಪಬ್ಲಿಕನ್ ಪಕ್ಷದ ಟ್ರಂಪ್ ಅವರಿಗಿಂತ ಮುಂದಿದ್ದಾರೆ. ನ್ಯಾಯಯುತವಾಗಿ ಅವರೇ ಅಧ್ಯಕ್ಷರಾಗಬೇಕು. ಆದರೆ ಇಡೀ ದೇಶ ಮತ್ತು ಸಮಸ್ತ ವಿಶ್ವದ ಮುಂದಿರುವ ಪ್ರಶ್ನೆಯೆಂದರೆ, ಬೈಡನ್ ಅವರಿಗೆ ಸಹಜವಾಗಿ, ಸಮರ್ಥವಾಗಿ, ಅಡ್ಡಿ ಆತಂಕಗಳಿಲ್ಲದೇ, ಅಧಿಕಾರ ನಡೆಸಲು ಸಾಧ್ಯವಾ ಎಂಬುದು. ಅದಕ್ಕೆ ಟ್ರಂಪ್ ಬಿಡುತ್ತಾರಾ ಎಂಬುದು. ಕಾರಣ, ಅಮೆರಿಕದ ಜನರನ್ನು ಸರಿಯಾಗಿ ಪ್ರತಿನಿಧಿಸದ ಸಿನೆಟ್‌ನಲ್ಲಿ ಟ್ರಂಪ್ ಪಕ್ಷ ಪ್ರಾಬಲ್ಯವನ್ನು ಹೊಂದಿರುವುದು.

ಒಂದು ವೇಳೆ ತಮಗೆ ಸ್ಪಷ್ಟ ಬಹುಮತ ಬರದಿದ್ದರೆ ತಾವು ಕೋರ್ಟಿಗೆ ಹೋಗುವುದಾಗಿ, ಚುನಾವಣಾ ಫಲಿತಾಂಶ ಪ್ರಕಟವಾಗುವ ಎರಡು ವಾರಗಳ ಮೊದಲೇ ಟ್ರಂಪ್ ಹೇಳಿದ್ದರು. ಕೋರ್ಟಿಗೆ ಹೋದರೆ ತಮ್ಮ ಪರವಾಗಿ ತೀರ್ಪು ಬರುವುದು ಅವರಿಗೆ ಗೊತ್ತಿತ್ತು. ಕಾರಣ ಅಮೆರಿಕದ ಸುಪ್ರೀಂ ಕೋರ್ಟಿನಲ್ಲಿ ಒಂಬತ್ತು ನ್ಯಾಯಾಧೀಶರ ಪೈಕಿ ಆರು ಮಂದಿ, ಟ್ರಂಪ್ ನೇಮಿಸಿದವರೇ ಇದ್ದಾರೆ. ಈ ಸಂಗತಿ ಗೊತ್ತಿದ್ದೇ ಟ್ರಂಪ್ ಕೋರ್ಟಿಗೆ ಹೋಗುವ ಮಾತಾಡಿದ್ದು. ಒಂದು ವೇಳೆ, ಗೆಲುವಿಗೆ ಬೇಕಾದ 270 ಸ್ಥಾನಗಳನ್ನು ಬೈಡನ್ ಪಡೆದರೂ, ಟ್ರಂಪ್ ಕೋರ್ಟಿಗೆ ಹೋಗುವುದು ಶತಃಸಿದ್ಧ.

ಪ್ರತಿ ಮತವೂ ಎಣಿಕೆಯಾಗಬೇಕು ಎಂಬ ಹೊಸ ಬೇಡಿಕೆಯನ್ನು ಅವರು ಇಟ್ಟಿರುವುದರಿಂದ ಈ ಪ್ರಹಸನ ಬೇಗ ಮುಗಿಯುವು ದಿಲ್ಲ. ಈ ಮಧ್ಯೆ ಕೋರ್ಟಿನಲ್ಲಿ ಟ್ರಂಪ್ ಪರ ತೀರ್ಪು ಬಂದರೆ, ಅಲ್ಲಿ ಬಿಕ್ಕಟ್ಟು ನಿರ್ಮಾಣವಾಗುವುದು ನಿಶ್ಚಿತ. ಕಳೆದ ಎಂಟು
ಚುನಾವಣೆಗಳಲ್ಲಿ, ಜನಪ್ರಿಯ ಮತಗಳನ್ನು ಪಡೆದ ಪಕ್ಷದ ಅಭ್ಯರ್ಥಿಯನ್ನು ಒಂಬತ್ತರ ಪೈಕಿ ಆರು ನ್ಯಾಯಾಧೀಶರು ಆಯ್ಕೆ ಮಾಡಿದ್ದು ಒಂದೇ ಒಂದು ಸಲ. ಈ ಸಲವೂ ಕೋರ್ಟ್ ಅನಿರೀಕ್ಷಿತ ತೀರ್ಪುನ್ನು ನೀಡುವುದಿಲ್ಲ ಎಂಬುದು ಎಲ್ಲರಿಗೂ ಗೊತ್ತಿದೆ. ಅಂಥ ಸಂದರ್ಭದಲ್ಲಿ ಯಾವ ರೀತಿಯ ಪರಿಸ್ಥಿತಿ ಉದ್ಭವವಾಗಬಹುದು ಎಂಬುದನ್ನು ಈಗಲೇ ಹೇಳುವುದು ಕಷ್ಟ.

ಒಟ್ಟಾರೆ ಅಧಿಕಾರ ಹಸ್ತಾಂತರ ಮಾತ್ರ ಸುರಳೀತವಾಗಿ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ. ಇದು ಅಮೆರಿಕದ ಪ್ರಜಾ ಪ್ರಭುತ್ವ, ಆಡಳಿತ ಮತ್ತು ನ್ಯಾಾಯಾಂಗ ವ್ಯವಸ್ಥೆಯಲ್ಲಿನ ಲೋಪ – ದೋಷವನ್ನು ಜಗತ್ತಿನ ಮುಂದೆ ಬೆತ್ತಲುಗೊಳಿಸಿದೆ.
ಪಾಲ್ ಕ್ರುಗ್ಮನ್ ಸೇರಿದಂತೆ ಅನೇಕ ರಾಜಕೀಯ ವಿಶ್ಲೇಷಣಾಕಾರರು á Is America becoming a failed state? ಎಂದು ಪ್ರಶ್ನಿಸಿ ದ್ದಾರೆ.

ಬ್ರಿಟಿಷ್ ಪತ್ರಿಕೆಗಳಂತೂ, ಅಮೆರಿಕ ಎಂಬ ಹಗಲುವೇಷಧಾರಿ ದೇಶ, ವಿಶ್ವದ ಮುಂದೆ ನಗ್ನವಾದ ಅಮೆರಿಕ, ಗೆದ್ದವ ಸೋತ, ಸೋತವ ಗೆದ್ದ, ಅಷ್ಟಕ್ಕೂ ಗೆದ್ದವರಾರು, ಸೋತವರಾರು ಎಂದು ಗೇಲಿ ಮಾಡಿ ಬರೆಯುತ್ತಿವೆ. ಆಫ್ರಿಕಾದಂಥ ದೇಶಗಳೂ ಅಮೆರಿಕವನ್ನು ಟೀಕಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲಂತೂ ಜನ ಅಮೆರಿಕದ ವ್ಯವಸ್ಥೆಯನ್ನು ಮನಸೋಇಚ್ಛೆ ಹಾಸ್ಯ ಮಾಡಿ ಟ್ರೋಲ್ ಮಾಡುತ್ತಿದ್ದಾರೆ. ಅಮೆರಿಕದ ಖ್ಯಾತನಾಮ ಚಿಂತಕರೇ, ‘ಹೌದು, ಅಮೆರಿಕ ‘ failed State’’ ಎಂದು ಹೇಳು ತ್ತಿದ್ದಾರೆ. ತಮ್ಮ ವೈದ್ಯಕೀಯ ವ್ಯವಸ್ಥೆೆ ಜಗತ್ತಿನಲ್ಲಿಯೇ ಅದ್ಭುತ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಿದ್ದ ಅಮೆರಿಕವನ್ನು ಕರೋನಾ ವೈರಸ್ ತಿಪ್ಪರಲಾಗ ಹಾಕುವಂತೆ ಮಾಡಿದೆ.

ಕರೋನಾ ಸೋಂಕು ನಿಯಂತ್ರಣಕ್ಕೆ ಸಿಗುತ್ತಿಲ್ಲ. ಸದ್ಯ ಉದ್ಭವಿಸಿರುವ ಅನಿಶ್ಚಿತತೆ ಕರೋನಾ ನಿಯಂತ್ರಣದ ಮೇಲೆ ಪ್ರತಿಕೂಲ ಪರಿಣಾಮ ಬೀರುವುದು ನಿಶ್ಚಿತ. ಅಂತೂ ಜಗತ್ತಿನ ಮುಂದೆ ದೊಡ್ಡಣ್ಣ, ಚಿಕ್ಕಣ್ಣನಾಗಿ ತಲೆ ತಗ್ಗಿಸಿ ನಿಂತಿದ್ದಾನೆ. (ಈ ಅಂಕಣ ಬರೆಯುವಾಗ ಅಮೆರಿಕದ ನೂತನ ಅಧ್ಯಕ್ಷರಾಗಿ ಜೋ ಬೈಡೆನ್ ಆಯ್ಕೆ ಘೋಷಣೆ ಆಗಿರಲಿಲ್ಲ) ಬರಹಗಾರನ ಪೀಕಲಾಟ ನಮ್ಮ ಕಾಲದ ಪ್ರಮುಖ ಚಿಂತಕರು ಮತ್ತು ಬರಹಗಾರರಲ್ಲಿ ರಾಮಚಂದ್ರ ಗುಹಾ ಸಹ ಒಬ್ಬರು. ಇತ್ತೀಚಿನ ವರ್ಷಗಳಲ್ಲಿ ಅವರು ಕೆಲವು ಗಮನ ಸೆಳೆಯುವ ಕೃತಿಗಳನ್ನು ಬರೆದಿದ್ದಾರೆ.

ಕ್ರಿಕೆಟ್, ರಾಜಕೀಯ, ಇತಿಹಾಸ ಮತ್ತು ಪರಿಸರ ಅವರ ಆಸಕ್ತ ವಿಷಯಗಳು. ಈ ವಿಷಯಗಳ ಬಗ್ಗೆ ಅವರು ಸಾಕಷ್ಟು ಪುಸ್ತಕ
ಮತ್ತು ಲೇಖನಗಳನ್ನು ಬರೆದಿದ್ದಾರೆ. ಮಹಾತ್ಮ ಗಾಂಧಿ ಸಹ ಅವರ ಆಸಕ್ತ ವಿಷಯವೇ. ಗಾಂಧೀಜಿ ಜೀವನ ಮತ್ತು ವಿಚಾರ
ಬಗ್ಗೆ ಅವರು ಮಹತ್ವಪೂರ್ಣ ಸಂಶೋಧನೆ ಮಾಡಿದ್ದಾರೆ.

ಇತ್ತೀಚಿಗೆ ಅವರು, ತಮಗೆ ಆಪ್ತ ವಿಷಯಗಳಲ್ಲೊಂದಾದ ಕ್ರಿಕೆಟ್ ಬಗ್ಗೆ ಹೊಸ ಕೃತಿ ರಚಿಸಿದ್ದಾರೆ. ಅದರ ಹೆಸರು – The Common wealth of Cricket ; A lifelong love affair with the most subtle and sophisticated game.. ತಮಾಷೆಯೆಂದರೆ, ಇತಿಹಾಸ ಕಾರರ ವಲಯದಲ್ಲಿ ಇವರನ್ನು ರಾಜಕೀಯ ವಿಶ್ಲೇಷಕ, ಪರಿಸರ ತಜ್ಞ ಮತ್ತು ಕ್ರಿಕೆಟ್ ಪರಿಣತ ಎಂದು ಭಾವಿಸುತ್ತಾರೆ. ಪರಿಸರತಜ್ಞರ ವಲಯದಲ್ಲಿ ಇವರನ್ನು ಕ್ರಿಕೆಟ್ ಲೇಖಕ, ರಾಜಕೀಯ ಪಂಡಿತ ಮತ್ತು ಇತಿಹಾಸಕಾರ ಎಂದು ಪರಿಗಣಿಸುತ್ತಾರೆ. ರಾಜಕೀಯ ವಿಶ್ಲೇಷಕರು ಇವರನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ.

ಕ್ರಿಕೆಟ್, ಪರಿಸರ, ಇತಿಹಾಸದ ಬಗ್ಗೆ ಬರೆಯುವವರು ಎಂದು ತಮ್ಮ ಹತ್ತಿರಕ್ಕೆ ಸೇರಿಸಿಕೊಳ್ಳುವುದಿಲ್ಲ. ಇನ್ನು ಕ್ರಿಕೆಟ್ ಬರಹಗಾರರ ಮತ್ತು ಆಟಗಾರರ ವಲಯದಲ್ಲಿ ಇವರು ಇತಿಹಾಸಕಾರ, ರಾಜಕೀಯ ವಿಶ್ಲೇಷಕ ಮತ್ತು ಪರಿಸರ ಬರಹಗಾರ. ಅಂದರೆ ಈ ನಾಲ್ಕೂ ಕ್ಷೇತ್ರಗಳ ಪಂಡಿತರು, ವಿಷಯ ತಜ್ಞರು ಅವರನ್ನು ಬೇರೆ ಕ್ಷೇತ್ರಗಳ ಪರಿಣತ ಎಂದು ಭಾವಿಸುತ್ತಾರೆಯೇ ಹೊರತು ತಮ್ಮ ಕ್ಷೇತ್ರದ ತಜ್ಞರಲ್ಲೊಬ್ಬ ಎಂದು ಪರಿಗಣಿಸುವುದಿಲ್ಲ. ಅಂದರೆ, ಇದು ಒಂದು ರೀತಿಯಲ್ಲಿ, ಬರಹಗಾರರಾಗಿ ಗುಹಾ ಅವರ ಪೀಕಲಾಟ. ಬರಹಗಾರನಿಗೆ ವಿಷಯ ಆಸಕ್ತಿಯಿರಬೇಕು, ಆದರೆ ಎಲ್ಲಾ ವಿಷಯಗಳ ಬಗ್ಗೆಯೂ ಬರೆಯಲು ಕೈಯಿಡಬಾರದು. ಇಲ್ಲದಿದ್ದರೆ ಗುಹಾ ಪರಿಸ್ಥಿತಿಯೇ ಆಗುತ್ತದೆ.

ಬಡವರ ಮನೆ ಮತ್ತು ಹೃದಯ
ಒಂದು ಕಾಡು. ಅಲ್ಲೊಂದು ಪುಟ್ಟ ಗುಡಿಸಲು. ಅಲ್ಲಿ ಬಡ ಸೌದೆಗಾರ ಮತ್ತು ಅವನ ಹೆಂಡತಿ ವಾಸಿಸುತ್ತಿದ್ದರು. ಆತ ಅಡವಿ ಯಲ್ಲಿ ಕಡಿದ ಸೌದೆಯನ್ನು ಕತ್ತೆಯ ಮೇಲೆ ಪಟ್ಟಣಕ್ಕೆರಿಕೊಂಡು ಮಾರುತ್ತಿದ್ದ. ಆ ಹಣದಿಂದಲೇ ಅವರ ಜೀವನ ಸಾಗುತ್ತಿತ್ತು. ಒಂದು ಮಳೆಗಾಲದ ರಾತ್ರಿ. ಹೊರಗೆ ಮಳೆ ಜೋರಾಗಿ ಸುರಿಯುತ್ತಿತ್ತು. ಗಂಡ-ಹೆಂಡತಿ ಗುಡಿಸಲಲ್ಲಿ ಮಲಗಿದ್ದರು. ಆ ರಾತ್ರಿ ಯಾರೋ ಬಾಗಿಲು ಬಡಿದ ಸದ್ದು. ‘ಮಳೆಯಲ್ಲಿ ನೆನೆಯುತ್ತಿದ್ದೇವೆ. ಈ ರಾತ್ರಿ ನಿಮ್ಮ ಗುಡಿಸಲಲ್ಲಿ ಕಳೆಯಬಹುದೇ?’ ಎಂದು ಅಪರಿಚಿತ ಕೇಳಿದ. ಗಂಡ ಬಾಗಿಲು ತೆರೆಯಲು ಹೊರಟಾಗ, ಅವನ ಪತ್ನಿ, ‘ಇಲ್ಲಿ ನಮ್ಮಿಬ್ಬರು ಮಲಗಲು ಮಾತ್ರ ಜಾಗವಿದೆ. ಮತ್ತೊಬ್ಬರು ಬಂದರೆ ನಾವುಹೇಗೆ ಮಲಗುವುದು?’ ಎಂದು ಕೇಳಿದಳು.

ಆಗ ಗಂಡ, ‘ಪಾಪ, ಮಳೆಯಲ್ಲಿ ನೆನೆಯುತ್ತಿದ್ದಾನೆ. ಬಾಗಿಲು ತೆಗೆಯೋಣ. ನಾವಿಬ್ಬರೂ ಮಲಗಿ ರಾತ್ರಿ ಕಳೆಯುವ ಬದಲು,
ಕುಳಿತು ಕಳೆಯೋಣ’ ಎಂದು ಬಾಗಿಲು ತೆರೆದ. ಅಪರಿಚಿತ ದಾರಿಹೋಕ ಗುಡಿಸಲೊಳಗೆ ಬಂದ. ಮೂವರೂ ಕುಳಿತುಕೊಂಡರು. ಚಳಿ ಸ್ವಲ್ಪ ಕಡಿಮೆಯಾದಂತನಿಸಿತು. ಸ್ವಲ್ಪ ಹೊತ್ತಿನ ನಂತರ ಪುನಃ ಬಾಗಿಲು ಬಡಿದ ಸದ್ದು. ಸೌದೆಗಾರ ಬಾಗಿಲು ತೆರೆಯಲು ಎದ್ದಾಗ, ಪತ್ನಿ ಸುಮ್ಮನಿದ್ದಳು. ಆದರೆ ಆಗ ತಾನೇ ಬಂದ ದಾರಿಹೋಕ, ‘ಸ್ವಾಮೀ, ಬಾಗಿಲು ತೆರೆಯಬೇಡಿ. ಇಲ್ಲಿ ಮೂವರಿಗೇ ಇಕ್ಕಟ್ಟಾಗಿದೆ. ನಾಲ್ಕನೆಯವನು ಬಂದರೆ ಎಲ್ಲಿ ಕುಳ್ಳಿರಿಸುತ್ತೀರಿ?’ ಎಂದ.

ಆಗ ಸೌದೆಗಾರ, ‘ಯಾರೋ ಮಳೆಯಲ್ಲಿ ನಿಮ್ಮ ಹಾಗೆ ನೆನೆಯುತ್ತಿದ್ದಾರೆ. ಅವರನ್ನೂ ಒಳಕ್ಕೆ ಬರಮಾಡಿಕೊಳ್ಳೋಣ. ನಾವು ಮೂರು ಜನ ಕುಳಿತು ರಾತ್ರಿ ಕಳೆಯುವ ಬದಲು ನಿಂತು ಕಳೆಯೋಣ’ ಎಂದು ಬಾಗಿಲು ತೆರೆದ. ಈ ಪುಟ್ಟ ಗುಡಿಸಲಲ್ಲಿ ನಾಲ್ವರು ಹತ್ತಿರ ಹತ್ತಿರ ನಿಂತುಕೊಂಡರು. ಚಳಿ ಮತ್ತಷ್ಟು ಕಡಿಮೆಯಾಯಿತು.

ಹೊರಗಡೆ ಮಳೆ ನಿಂತಿರಲಿಲ್ಲ. ಪುನಃ ಗುಡಿಸಲಿನ ಬಾಗಿಲನ್ನು ಯಾರೋ ನೂಕಿದ ಸದ್ದು. ಸೌದೆಗಾರ ಬಾಗಿಲು ತೆರೆಯಲು
ಮುಂದಾದಾಗ, ಇಬ್ಬರು ದಾರಿಹೋಕರು ‘ಬಾಗಿಲು ತೆರೆಯಬೇಡ, ನಮಗೇ ನಿಂತುಕೊಳ್ಳಲು ಜಾಗವಿಲ್ಲ’ ಎಂದು ಹೇಳಿದರು. ಅವರ ಮಾತನ್ನು ಕೇಳದ ಆತ ಬಾಗಿಲು ತೆರೆದ. ನೋಡಿದರೆ, ಅವನ ಕತ್ತೆ! ಆತ ಕತ್ತೆಯನ್ನು ಒಳಗೆಳೆದುಕೊಂಡ. ನಾಲ್ವರೂ ಕತ್ತೆಯ ಮೈಗೆ ಒರಗಿಕೊಂಡು ನಿಂತರು. ಕತ್ತೆಯ ಮೈ ಶಾಖದಿಂದಅವರಿಗೆ ಚಳಿ ಮತ್ತಷ್ಟು ಕಡಿಮೆಯಾಯಿತು. ಒಂದು ವೇಳೆ
ಇನ್ನೂ ಇಬ್ಬರು ದಾರಿಹೋಕರು, ಇನ್ನೊಂದು ದನ, ನಾಯಿ ಬಂದಿದ್ದರೂ ಸೌದೆಗಾರ ಇಲ್ಲ ಎನ್ನುತ್ತಿರಲಿಲ್ಲ. ಬಡವರ ಮನೆ
ಗುಡಿಸಲು ಎಷ್ಟೇ ಚಿಕ್ಕದಾಗಿದ್ದರೂ, ಹೊರಗಿನಿಂದ ಬರುವವರಿಗೆ ಕಿರಿದಾಗುವುದಿಲ್ಲ. ಅವರಿಗೆ ಎಂದೂ ಸ್ಥಳಾಭಾವ ಕಾಡುವು ದಿಲ್ಲ.

ಯಾಕೆಂದರೆ ಅವರ ಹೃದಯ ವಿಶಾಲವಾಗಿರುತ್ತದೆ. ಈ ಕತೆಯನ್ನು ಹೇಳಿದವರು ಓಶೋ. ಇದನ್ನು ನನಗೆ ಹೇಳಿದವರು ಎಸ್. ಷಡಕ್ಷರಿ. ಪ್ರೇರಣೆ ಮತ್ತು ರಕ್ಷಣೆ ನೀವು ಜೆರ್ರಿ ಪರ್‌ರ್‌ ಹೆಸರನ್ನು ಕೇಳಿದ್ದೀರೋ ಇಲ್ಲವೋ ಗೊತ್ತಿಲ್ಲ. ಈತ 1962ರಿಂದ 1985 ಅಮೆರಿಕದ ಸೀಕ್ರೆಟ್ ಸರ್ವಿಸ್‌ನಲ್ಲಿದ್ದ. ಈತ ಅಧ್ಯಕ್ಷ ರೊನಾಲ್ಡ್ ರೇಗನ್ ಅಂಗರಕ್ಷಕನಾಗಿದ್ದ. 1981ರ ಮಾರ್ಚ್‌ನಲ್ಲಿ ರೇಗನ್ ಹತ್ಯೆಗೆ ವಿಫಲ ಸಂಚು ನಡೆಯಿತು. ಜೆರ್ರಿ ಪರ್‌ರ್‌ ರೇಗನ್ ಅವರನ್ನು ಅಕ್ಷರಶಃ ಬಚಾವ್ ಮಾಡಿದ. ಅಮೆರಿಕ ಅಧ್ಯಕ್ಷರ ಜೀವ
ಉಳಿಸಿದವ’ ಎಂದೇ ಈತ ಪ್ರಸಿದ್ಧನಾದ. ತನ್ನ ಸೇವಾ ಅವಧಿಯಲ್ಲಿ ನಾಲ್ವರು ಅಧ್ಯಕ್ಷರಿಗೆ ಅಂಗರಕ್ಷಕನಾಗಿದ್ದ.

ಈತ ಬರೆದ In the Secret Service: The True Story of the Man Who Saved President Reagan’s Life ಎಂಬ ಪುಸ್ತಕ ಆ ದಿನಗಳಲ್ಲಿ ಸಾಕಷ್ಟು ಸುದ್ದಿ ಮಾಡಿತ್ತು. ಆ ದಿನಗಳಲ್ಲಿ ಅಧ್ಯಕ್ಷ ರೇಗನ್ ಅವರ ಜೀವ ಕಾಪಾಡಿದ ಜೆರ್ರಿ ಪರ್‌ರ್‌ ಸಂದರ್ಶನವನ್ನು ಪ್ರಕಟಿಸಲು ಪತ್ರಿಕೆಗಳು ಹಾತೊರೆಯುತ್ತಿದ್ದವು. ಈತ ಅಷ್ಟು ಜನಪ್ರಿಯ ವ್ಯಕ್ತಿಯಾಗಿದ್ದ. ಒಮ್ಮೆ ಒಂದು ಪತ್ರಿಕಾ ಸಂದರ್ಶನದಲ್ಲಿ, ‘ನೀನ್ಯಾಕೆ ಅಮೆರಿಕ ಸೀಕ್ರೆಟ್ ಸರ್ವಿಸ್ ಸೇರಿದೆ ? ಯಾರು ಪ್ರೇರಣೆ?’ ಎಂದು ಕೇಳಿದಾಗ ಈತ ಹೇಳಿದ – ‘ನಾನು ಕಾಲೇಜು ದಿನಗಳಲ್ಲಿ ನೋಯೆಲ್ ಸ್ಮಿತ್ ನಿರ್ದೇಶನದ Code of the Secret Service ನೋಡಿದೆ. ಆ ಸಿನಿಮಾ ನನ್ನ ಮೇಲೆ ಬಹಳ ಪ್ರಭಾವ
ಬೀರಿತು. ನಾನು ಸೀಕ್ರೆೆಟ್ ಸೇರಲು ಆ ಸಿನಿಮಾವೇ ಕಾರಣ’ ಅಂದ ಹಾಗೆ ಆ ಸಿನಿಮಾದ ನಾಯಕ ನಟ ರೊನಾಲ್ಡ್ ರೇಗನ್ !
ಖಾಲಿ ಬಂದೂಕು – ಶೀಟಿ !

ಮೊದಲ ಬಾರಿಗೆ ಪ್ರಧಾನಿ ಮನೆಯ ಸುತ್ತ ಭದ್ರತೆಗೆ ನಿಯೋಜಿಸಿದ ಭದ್ರತಾ ಪಡೆ ಸಿಬ್ಬಂದಿಗೆ ಬಂದೂಕು ಮತ್ತಿ ವಿಶಲ್ (ಶೀಟಿ) ನೀಡಲಾಯಿತು. ಆತ ಶೀಟಿ ಓದಿದ. ಬಂದೂಕನ್ನು ಪರೀಕ್ಷಿಸಿದ. ನೋಡಿದರೆ, ಬಂದೂಕಿನೊಳಗೆ ಗುಂಡುಗಳೇ ಇಲ್ಲ. ಆತನಿಗೆ ಗಾಬರಿಯಾಯಿತು.ತಕ್ಷಣ ತನ್ನ ಮೇಲಾಧಿಕಾರಿಯನ್ನು ಭೇಟಿ ಮಾಡಿದ ಆತ, ಸಾರ್, ನನ್ನ ಬಂದೂಕಿನಲ್ಲಿ ಗುಂಡುಗಳೇ ಇಲ್ಲ. ಒಂದು ವೇಳೆ ಭಯೋತ್ಪಾದಕರು ದಾಳಿ ಮಾಡಿದರೆ ಏನು ಮಾಡೋದು?’ ಎಂದು ಕೇಳಿದ.

ಅದಕ್ಕೆ ಮೇಲಾಧಿಕಾರಿ ಶಾಂತಚಿತ್ತನಾಗಿ ಹೇಳಿದ – ‘ನಿನಗೆ ಶೀಟಿ ಕೊಟ್ಟಿರೋದು ಯಾಕೆ ಎಂದು ತಿಳಿದಿದ್ದೀಯಾ ?’ ಕುಜ ದೋಷ – ಕಾಗುಣಿತ ದೋಷ ಒಮ್ಮೆ ಸಹೋದ್ಯೋಗಿಯೊಬ್ಬ ‘ಕನ್ನಡ ಪ್ರಭ’ ಸಂಪಾದಕರಾಗಿದ್ದ ವೈಎನ್ಕೆ ಅವರಿಗೆ ತನ್ನ ಮದುವೆ ಆಹ್ವಾನ ಪತ್ರಿಕೆ ನೀಡಿದನಂತೆ. ಅದನ್ನು ಓದಿದ ಅವರು ಅದರ ಮೇಲೆ ಬರೆಯಲಾರಂಭಿಸಿದರಂತೆ. ಸಹೋದ್ಯೋಗಿಗೆ ಆಶ್ಚರ್ಯ. ಏನ್
ಸಾರ್? ಏನೋ ಬರೆಯುತ್ತಿದ್ದೀರಿ ?’ ಎಂದು ಕೇಳಿದನಂತೆ.

ಏನಿಲ್ಲ, ನಿಮ್ಮ ಆಹ್ವಾನ ಪತ್ರಿಕೆಯಲ್ಲಿ ಎಷ್ಟೆಲ್ಲಾ ಕಾಗುಣಿತ ದೋಷಗಳಿವೆಯಲ್ಲ, ಅವೆಲ್ಲವನ್ನೂ ಮಾರ್ಕ್ ಮಾಡುತ್ತಿದ್ದೇನೆ
ಅಂದರಂತೆ. ಸಾರ್, ಅವೆಲ್ಲವನ್ನೂ ನೋಡಿ ಸರಿಪಡಿಸಿದ್ದೆ. ಆದರೂ ಹಾಗೇ ಪ್ರಿಂಟ್ ಆಗಿಬಿಟ್ಟಿದೆ. ಆ ತಪ್ಪುಗಳನ್ನು ಯಾರೂ ಗಂಭೀರವಾಗಿ ಪರಿಗಣಿಸೊಲ್ಲ’ ಎಂದನಂತೆ.

ಅದಕ್ಕೆ ಸ್ವಲ್ಪ ಸಿಡಿಮಿಡಿಗೊಂಡ ವೈಎನ್ಕೆ, ಜೀವನದಲ್ಲಿಮದುವೆಗಿಂತ ದೊಡ್ಡ ಕಾಗುಣಿತ ದೋಷ ಮತ್ತೊಂದಿಲ್ಲ. ಮದುವೆ ಎಂದು ಎಷ್ಟೇ ಸರಿ ಬರೆದರೂ ಎಲ್ಲರೂ ಮುಗ್ಗರಿಸುತ್ತಾರೆ. ಕುಜ ದೋಷ ಸರಿ ಇಲ್ಲದಿದ್ದರೆ, ಕಾಗುಣಿತ ಸರಿ ಬರೆದೂ ಪ್ರಯೋಜನ ವಿಲ್ಲಾ’ ಎಂದರಂತೆ.