Sunday, 15th December 2024

ಅನುಕರಣೀಯ ಅರಬ್‌ ಬಿಮಾರಿಸ್ತಾನ್‌ಗಳು

ಹಿಂದಿರುಗಿ ನೋಡಿದಾಗ

ಮಧ್ಯಯುಗದ ಮುಸ್ಲಿಮರು ಮಹಾ ಬುದ್ಧಿವಂತರು. ಬಹುಪಾಲು ಮುಸ್ಲಿಂ ದೇಶಗಳು ನಮ್ಮ ಭೂಮಿಯ ಪೂರ್ವಾರ್ಧ ಗೋಳ ಹಾಗೂ ಪಶ್ಚಿಮಾರ್ಧಗೋಳಗಳ ಸಂಧಿಸ್ಥಳದಲ್ಲಿವೆ. ಹಾಗಾಗಿ ಇವನ್ನು ಮಧ್ಯಪ್ರಾಚ್ಯ ದೇಶಗಳು ಅಥವ ಮಿಡ್ಲ್ ಈಸ್ಟ್
ಕಂಟ್ರೀಸ್ ಎಂದು ಕರೆಯುವುದುಂಟು. ಮುಸ್ಲಿಮರು ತಮ್ಮ ಭೌಗೋಳಿಕ ಸ್ಥಾನಮಾನದ ಕಾರಣ, ಪಶ್ಚಿಮದ ಯೂರೋಪ್ ದೇಶಗಳ ಹಾಗೂ ಪೂರ್ವದ ಭಾರತ ಮತ್ತು ಚೀನಾದೇಶಗಳ ಜತೆಯಲ್ಲಿ ನಿಕಟ ಸಂಪರ್ಕವನ್ನು ಬೆಳೆಸಿಕೊಂಡರು.

ಹಾಗಾಗಿ ಈ ಎರಡೂ ಭೂಭಾಗಗಳಲ್ಲಿ ನಡೆದ ಎಲ್ಲ ರೀತಿಯ ಸಂಶೋಧನೆಗಳ ಲಾಭವನ್ನು ಪಡೆದರು. ಗ್ರೀಕ್ ಮತ್ತು ಲ್ಯಾಟಿನ್ ಭಾಷೆಗಳಲ್ಲಿ ಯೂರೋಯನ್ ವೈದ್ಯಕೀಯ ಜ್ಞಾನವನ್ನು ಹಾಗೂ ಸಂಸ್ಕೃತ ಮತ್ತು ಚೀನೀಗಳಲ್ಲಿದ್ದ ಭಾಷೆ ಗಳಲ್ಲಿದ್ದ ಆರೋಗ್ಯ ತಿಳಿವನ್ನು ಅರೇಬಿಕ್ ಭಾಷೆಗಳಿಗೆ ಅನುವಾದ ಮಾಡಿ, ತಮ್ಮ ಆರೋಗ್ಯ ಜ್ಞಾನವನ್ನು ಹೆಚ್ಚಿಸಿಕೊಂಡರು.

ಪ್ರಾಚೀನ ಈಜಿಪ್ಷಿಯನ್, ಮೆಸೊಪೊಟೋಮಿಯನ್, ಗ್ರೀಕ್, ರೋಮ್, ಭಾರತ ದೇಶಗಳಲ್ಲಿ ಅಸ್ತಿತ್ವದಲ್ಲಿದ್ದ ಆಸ್ಪತ್ರೆಗಳು ಮುಸ್ಲಿಮ್ ಸುಲ್ತಾನರಿಗೆ ಸೂರ್ತಿಯನ್ನು ನೀಡಿದವು. ಅವರು ತಮ್ಮದೇ ಆದ ಆಸ್ಪತ್ರೆಗಳನ್ನು ಕಟ್ಟಿದರು. ವೈದ್ಯಕೀಯ ಸವಲತ್ತುಗಳು ಶ್ರೀಸಾಮಾನ್ಯನಿಗೆ ದೊರೆಯುವಂತೆ ಮಾಡಿದರು. ಪ್ರಾಚೀನ ಮುಸ್ಲಿಮ್ ದೇಶಗಳ ಬಾಗ್ದಾದ್, ಕೈರೋ, ಡಮಾಸ್ಕಸ್, ಮೊರಾಕೊ ಮತ್ತು ಟರ್ಕಿ ದೇಶಗಳಲ್ಲಿ ಅತ್ಯುತ್ತಮ ಆಸ್ಪತ್ರೆಗಳಿದ್ದವು. ಅವುಗಳತ್ತ ಒಂದು ಪಕ್ಷಿನೋಟವನ್ನು ಹರಿಸೋಣ.

ಡಮಾಸ್ಕಸ್ ನಗರವು ಇಂದಿನ ಸಿರಿಯ ದೇಶದ ರಾಜಧಾನಿ. ಕ್ರಿ.ಪೂ.9000ರಲ್ಲಿ ಮನುಷ್ಯನು ಮೊದಲು ಇಲ್ಲಿ ನೆಲೆಸಿದ.6300 ವರ್ಷಗಳಷ್ಟು ಹಿಂದೆಯೇ ಇಲ್ಲಿ ಜನವಸತಿಯಿದ್ದ ಪುರಾವೆಯು ದೊರೆತಿದೆ. ಈಜಿಪ್ಷಿಯನ್ನರು, ಗ್ರೀಕರು, ರೋಮನ್ನರು, ಮುಂದಿನ ದಿನಗಳಲ್ಲಿ ರಷಿದುನ್, ಉಮಯ್ಯಾದ್, ಅಬ್ಬಾಸಿದ್, ಸೆಲ್ಜುಕ್, ಅಯ್ಯುಬಿದ್, ಮಾಮ್ಲುಕ್, ಒಟ್ಟೋಮಾನ್ ಸಾಮ್ರಾಜ್ಯಗಳು ಡಮಾಸ್ಕಸ್ ನಗರವನ್ನೇ ತಮ್ಮ ರಾಜಧಾನಿಯನ್ನಾಗಿ ಹಾಗೂ ಮುಖ್ಯ ವಾಣಿಜ್ಯ ಕೇಂದ್ರವನ್ನಾಗಿ ಬೆಳೆಸಿದವು. ಇಲ್ಲಿ ಅರಬ್ ಜಗತ್ತಿನ ಮೊತ್ತ ಮೊದಲ ಆಸ್ಪತ್ರೆ, ಅಲ್-ವಾಲಿದ್ ಆಸ್ಪತ್ರೆಯು ಕ್ರಿ.ಶ.706-7007ರಲ್ಲಿ ಸ್ಥಾಪನೆಯಾಯಿತು.

ಇದನ್ನು ಸ್ಥಾಪಿಸಿದವರು ಅಲ್-ವಾಲಿದ್ ಇಬ್ನ್ ಅಬ್ದ್ ಅಲ್-ಮಲಿಕ್ ಇಬ್ನ್ ಮರವಾನ್ (674-715). ಈ ಆಸ್ಪತ್ರೆಯನ್ನು ಕಟ್ಟಲು ಮುಖ್ಯ ಕಾರಣ ಕುಷ್ಠ ರೋಗಿಗಳು. ಕುಷ್ಠ ಪೀಡಿತ ರೋಗಿಗಳನ್ನು ಯಾರೂ ಮನೆಯಲ್ಲಿ ಇಟ್ಟು ಕೊಳ್ಳುತ್ತಿರಲಿಲ್ಲ.
ಹಾಗಾಗಿ ಆಶ್ರಯಹೀನರಾದ ಅವರು ಬೀದಿ ಪಾಲಾಗುತ್ತಿದ್ದರು. ಅವರು ಇಡೀ ನಗರದ ತುಂಬಾ ಓಡಾಡುತ್ತಾ ಭಿಕ್ಷೆಯನ್ನು ಬೇಡಿ ತಮ್ಮ ಹೊಟ್ಟೆಯನ್ನು ಹೊರೆದುಕೊಳ್ಳುತ್ತಿದ್ದರು.

ಹೀಗೆ ಓಡಾಡುವಾಗ ಅವರು ಕುಷ್ಠರೋಗವನ್ನು ನಗರವಾಸಿಗಳಿಗೆ ಹರಡುವ ಸಾಧ್ಯತೆಯಿತ್ತು. ಹಾಗಾಗಿ ವಾಲಿದ್ ಇವರಿಗಾಗಿ ಒಂದು ಆಸ್ಪತ್ರೆ ಯನ್ನು ಕಟ್ಟಿಸಿದ. ಈ ಆಸ್ಪತ್ರೆಯಲ್ಲಿ ಪ್ರಧಾನವಾಗಿ ಕುಷ್ಠ ರೋಗಿಗಳು ದಾಖಲಾಗುತ್ತಿದ್ದರು. ಇಲ್ಲಿ ಅವರಿಗೆ ಅನ್ನ, ಆಶ್ರಯ ಹಾಗೂ ಚಿಕಿತ್ಸೆಯು ಉಚಿತವಾಗಿ ದೊರೆಯುತ್ತಿತ್ತು. ಮುಕ್ತವಾಗಿ ಓಡಾಡುವ ಸ್ವಾತಂತ್ರ್ಯವೊಂದನ್ನು ಬಿಟ್ಟು ಎಲ್ಲ ರೀತಿಯ ಅನುಕೂಲಗಳು ಅಲ್ಲಿ ಲಭ್ಯವಿದ್ದವು. ಅಂಧರಿಗೂ ಸಹ ಪ್ರತ್ಯೇಕ ವ್ಯವಸ್ಥೆಯಿತ್ತು. ಈ ಆಸ್ಪತ್ರೆಯನ್ನು ಬೈಜ಼ಂಟೈನ್ ನೋಸೋಕಾಮಿಯ ಆಸ್ಪತ್ರೆಗೆ ಹೋಲಿಸುತ್ತಿದ್ದರು.

ನೋಸೋಕಾಮಿಯ ಆಸ್ಪತ್ರೆಯು ಸೋಂಕುರೋಗಗಳನ್ನು ತಡೆಗಟ್ಟಲು, ಸೋಂಕುರೋಗಿಗಳನ್ನು ಸಕ್ರಿಯ ಸಮಾಜ
ದಿಂದ ಬೇರ್ಪಡಿಸಿ, ಅವರಿಗೆ ಸೂಕ್ತ ಚಿಕಿತ್ಸೆಯನ್ನು ನೀಡುವ ಒಂದು ಅದ್ಭುತ ಪ್ರಯೋಗವನ್ನು ಪೂರ್ವ ರೋಮ್ ಅಥವ
ಬೈಜ಼ಂಟೈನ್ ಸಾಮ್ರಾಜ್ಯದಲ್ಲಿ ದೊರೆಯುತ್ತಿತ್ತು. ಡಮಾಸ್ಕಸ್ ನಗರದ ಮತ್ತೊಂದು ಮುಖ್ಯ ಆಸ್ಪತ್ರೆ ಅಲ್ -ನೂರಿ ಆಸ್ಪತ್ರೆ. ಕ್ರಿ.ಶ.1154ರಲ್ಲಿ ಆರಂಭವಾದ ಈ ಆಸ್ಪತ್ರೆ ಯನ್ನು ನೂರ್ ಅಲ್-ದಿನ್ ಜ಼ಂಜಿ ಕಟ್ಟಿಸಿದ. ಹಾಗಾಗಿ ಈ ಆಸ್ಪತ್ರೆಯು ನೂರ್ ಅಲ್-ದಿನ್ ಆಸ್ಪತ್ರೆ ಎಂದೂ ಹೆಸರಾಗಿದೆ. ಇದು ಸುಮಾರು 700 ವರ್ಷಗಳ ಕಾಲ ಸಕ್ರಿಯವಾಗಿತ್ತು.

ಇದು ಸಮಕಾಲೀನ ಜಗತ್ತಿನ ಅತ್ಯುತ್ತಮ ಆಸ್ಪತ್ರೆ ಯಾಗಿತ್ತು. ಅಲ್-ಮನ್ಸೂರ್ ಕಲಾವನ್ ಎಂಬಾತ ಈ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದ. ಇಲ್ಲಿನ ಅದ್ಭುತ ವ್ಯವಸ್ಥೆ ಯನ್ನು ನೋಡಿ ಮಾರುಹೋದ. ನಂತರ ಆತನು, ತನ್ನ ಕೈರೋ ನಗರಕ್ಕೆ ಹೋಗಿ ಅಲ್ಲಿ ಅಲ್-ನೂರಿಗಿಂತಲೂ ಸೊಗಸಾದ ಆಸ್ಪತ್ರೆಯನ್ನು ಕಟ್ಟಿಸಿದ. ಇಲ್ಲಿ ಆಸ್ಪತ್ರೆಯ ಜತೆಯಲ್ಲಿ ವೈದ್ಯಕೀಯ ವಿದ್ಯಾಲ ಯವೂ ಇತ್ತು. ರೋಗಿಗಳ ವೈದ್ಯಕೀಯ ದಾಖಲೆಗಳನ್ನು ಕಾದಿಡುವ ವ್ಯವಸ್ಥೆಯು ಮೊದಲ ಬಾರಿಗೆ ಇಲ್ಲಿ ಆರಂಭವಾಯಿತು.

ಇಲ್ಲಿನ ವಿದ್ಯಾಲಯ ದಲ್ಲಿಯೇ ಇಬ್ನ್ ಅಲ್-ನಫೀಸ್ ವೈದ್ಯಕೀಯ ಶಿಕ್ಷಣವನ್ನು ಪಡೆದ. ನಂತರ ಮುಂದಿನ ದಿನಗಳಲ್ಲಿ ಈತನು ಶ್ವಾಸಕ ಪರಿಚಲನೆಯನ್ನು (ಪಲ್ಮನರಿ ಸರ್ಕ್ಯುಲೇಶನ್) ಕಂಡುಹಿಡಿದು ಇತಿಹಾಸದಲ್ಲಿ ಅಮರನಾದ. ಬಾಗ್ದಾದ್ ಇರಾಕ್ ದೇಶದ ರಾಜಧಾನಿ. ಅರಬ್ ಜಗತ್ತಿನಲ್ಲಿ ಕೈರೋ ನಂತರದ ಅತ್ಯಂತ ದೊಡ್ಡ ಪಟ್ಟಣ. ಇದು ಟೈಗ್ರಿಸ್ ನದಿಯ ದಡದಲ್ಲಿದೆ. ಸಮೀಪದಲ್ಲಿಯೇ ಅಕ್ಕಾಡಿ ಯನ್, ಬ್ಯಾಬಿಲೋನಿಯನ್ ಮತ್ತು ಸಸ್ಸನೀಡ್ ಸಂಸ್ಕೃತಿಗಳ ಪಾಳುನಗರಗಳ ಕುರುಹುಗಳು ಉಳಿದಿವೆ.

ಕ್ರಿ.ಶ.9ನೆಯ ಶತಮಾನದಲ್ಲಿ ಬಾಗ್ದಾದ್ ನಗರದಲ್ಲಿ ಆಸ್ಪತ್ರೆಗಳಿದ್ದವು ಎನ್ನುವ ಮಾಹಿತಿಯು ದೊರೆಯುತ್ತದೆ. ಬಹುಶಃ ಮೊದಲ ಆಸ್ಪತ್ರೆಯು ಕ್ರಿ.ಶ.805ರಲ್ಲಿ ಖಲೀ- ಹಾರೂನ್-ಅಲ್ -ರಷೀದ್ ಮತ್ತು ಆತನ ವಜ಼ೀರ್ ಯಾಹ್ಯಾ ಇಬ್ನ್ ಖಾಲಿದ್
ಅವರ ಕಾಲದಲ್ಲಿ ಸ್ಥಾಪನೆಯಾಯಿತೆಂದು ಕಾಣುತ್ತದೆ. 10ನೆಯ ಶತಮಾನವು ಕೊನೆಯ ಹೊತ್ತಿಗೆ ಬಾಗ್ದಾದ್ ನಗರದಲ್ಲಿ ಮತ್ತೆ ಐದು ಆಸ್ಪತ್ರೆಗಳು ನಿರ್ಮಾಣವಾದವು.

ಬಾಗ್ದಾದ್ ನಗರದ ಪ್ರಮುಖ ಆಸ್ಪತ್ರೆ ಅಲ್-ಅದೂದಿ ಆಸ್ಪತ್ರೆ. ಕ್ರಿ.ಶ.981ರಲ್ಲಿ ಬಾಗ್ದಾದ್ ನಗರವನ್ನು ಆಳುತ್ತಿದ್ದ ಅದೂದ್ ಅಲ್-ದವಲ ಈ ಆಸ್ಪತ್ರೆಯನ್ನು ಸ್ಥಾಪಿಸಿದ. ವಿಶ್ವವಿಖ್ಯಾತ ಮುಸ್ಲಿಮ್ ವೈದ್ಯ ಅಲ್-ರಾಜ಼ಿ ಈ ಆಸ್ಪತ್ರೆಯನ್ನು ನಿರ್ವಹಿಸುತ್ತಿದ್ದ. ಅಲ್-ರಾಜ಼ಿಯು ಟೈಗ್ರಿಸ್ ನದಿಯ ದಡಲ್ಲಿ ಸೂಕ್ತವಾದ ಸ್ಥಳವನ್ನು ಹುಡುಕಿ ಅಲ್ಲಿ ಆಸ್ಪತ್ರೆಯನ್ನು ಕಟ್ಟಲು ಸೂಚಿಸಿದ. ಈತನ ತೂಗು ಮಾಂಸದ ಪ್ರಯೋಗವು ವಿಖ್ಯಾತವಾಯಿತು. ಬಾಗ್ದಾದ್ ನಗರದ ಹಲವು ಸ್ಥಳಗಳಲ್ಲಿ ಮಾಂಸವನ್ನು ತೂಗು ಹಾಕಿದ. ಹಲವು ದಿನಗಳ ನಂತರ ತೂಗು ಹಾಕಿದ ಮಾಂಸವನ್ನು ಪರೀಕ್ಷಿಸಿದ. ಟೈಗ್ರಿಸ್ ನದಿಯ ದಡದಲ್ಲಿ ತೂಗುಹಾಕಿದ್ದ ಮಾಂಸವು ಹೆಚ್ಚು ಕೆಟ್ಟಿರಲಿಲ್ಲ.

ಹಾಗಾಗಿ ಈ ಸ್ಥಳವೇ ಆಸ್ಪತ್ರೆ ನಿರ್ಮಾಣಕ್ಕೆ ಸೂಕ್ತವೆಂದು ಭಾವಿಸಿದ. ಅಲ್-ರಾಜ಼ಿ ಈ ಆಸ್ಪತ್ರೆಯನ್ನು ಕಟ್ಟಿದಾಗ, ಇಲ್ಲಿ ಆಸ್ಪತ್ರೆಯ ಜೊತೆಯಲ್ಲಿ ವೈದ್ಯಕೀಯ ವಿದ್ಯಾಲಯವನ್ನೂ ಸ್ಥಾಪಿಸಿದ. ಆರಂಭದಲ್ಲಿ 25 ತಜ್ಞವೈದ್ಯರಿದ್ದರು. ಅವರು
ನೇತ್ರ ವೈದ್ಯದಿಂದ ಹಿಡಿದು ಶಸವೈದ್ಯದವರೆಗೆ, ಹಲವು ವೈದ್ಯಕೀಯ ಕ್ಷೇತ್ರದಲ್ಲಿ ಪರಿಣತಿಯನ್ನು ಪಡೆದಿದ್ದರು.

ಇವರು ರೋಗಿಗಳಿಗೆ ಚಿಕಿತ್ಸೆಯನ್ನು ನೀಡುವುದರ ಜತೆಯಲ್ಲಿ ಭಾವೀ ವೈದ್ಯರಿಗೆ ತರಬೇತಿಯನ್ನೂ ನೀಡುತ್ತಿದ್ದರು. ಕ್ರಿ.ಶ. 1184ರಲ್ಲಿ ಆಸ್ಪತ್ರೆಯ ಕಟ್ಟಡವು ಅರಮನೆಯ ಹಾಗೆ ಬೃಹತ್ತಾಗಿತ್ತು ಎಂದು ಸಮಕಾಲೀನ ದಾಖಲೆಗಳು ಹೇಳುತ್ತವೆ. ಈ ಆಸ್ಪತ್ರೆಯು ಕ್ರಿ.ಶ.12ನೆಯ ಶತಮಾನ ದವರೆಗೆ ಕಾರ್ಯನಿರ್ವಹಿಸಿತು. ಕೊನೆಗೆ 1258ರಲ್ಲಿ ಮಂಗೋಲರ ಹುಲಗೂ ಖಾನ್ (1217-1265) ಬಾಗ್ದಾದ್ ನಗರದ ಮೇಲೆ ಆಕ್ರಮಣವನ್ನು ಮಾಡಿದ.

ನಗರದ ಜತೆಯಲ್ಲಿ ಆಸ್ಪತ್ರೆಯನ್ನೂ ಧ್ವಂಸಗೊಳಿಸಿದ. ಕೈರೋ ನಗರವು ಈಜಿಪ್ಟ್ ದೇಶದಲ್ಲಿದೆ. ಈಜಿಪ್ಟಿನ ಜೀವನದಿಯಾದ ನೈಲ್ ನದಿಯು ಒಂದು ಕಣಿವೆಯಲ್ಲಿ ಹರಿದು, ಮುಖಜಭೂಮಿಯನ್ನು ಪ್ರವೇಶಿಸುವ ಸ್ಥಳದಲ್ಲಿದೆ ಕೈರೋ ನಗರ. ಈ ನಗರದ ವ್ಯಾಪ್ತಿಯಲ್ಲಿ ಗಿಜ್ ಪಿರಮಿಡ್, ಪ್ರಾಚೀನ ಮೆಂಫಿಸ್ ಮತ್ತು ಹೀಲಿಯೊಪೊಲೀಸ್ ನಗರಗಳು ಇದ್ದವು. ಪ್ರಾಚೀನ ಕೈರೋ ನಗರವನ್ನು ಪರ್ಷಿಯನ್ ಆಕ್ರಮಣಕಾರರು ನಾಶಮಾಡಿದರು.

ಆಧುನಿಕ ಕೈರೋ ಪಟ್ಟಣಕ್ಕೆ ಕ್ರಿ.ಪೂ.641-42 ಮತ್ತೆ ಅಸ್ತಿಭಾರವನ್ನು ಹಾಕಿದರು. ಇತಿಹಾಸದಾದ್ಯಂತ ಅತ್ಯಂತ ಮಹತ್ವವನ್ನು ಪಡೆದಿದ್ದ ಈ ನಗರದಲ್ಲಿ ಸ್ಥಾಪನೆಯಾದ ಆಸ್ಪತ್ರೆಗಳಲ್ಲಿ ಅಲ್ -ಫಸ್ತಾತ್ ಆಸ್ಪತ್ರೆಯು ಮುಖ್ಯವಾದದ್ದು. ಅಲ್–ಸ್ತಾತ್ ಆಸ್ಪತ್ರೆಯನ್ನು ಕ್ರಿ.ಶ.872ರಲ್ಲಿ ಸ್ಥಾಪಿಸಿದರು. ಇದನ್ನು ಅಹಮದ್ ಬಿನ್ ತುಲೂನ್ (ಕ್ರಿ.ಶ.835-ಕ್ರಿ.ಶ.884)
ನಿರ್ಮಿಸಿದ. ಸಮಕಾಲೀನ ಆಸ್ಪತ್ರೆಗಳಲ್ಲಿ ಅತ್ಯುತ್ತಮವಾಗಿದ್ದ ಈ ಆಸ್ಪತ್ರೆಯಲ್ಲಿ, ಇಂದಿನ ಆಧುನಿಕ ಆಸ್ಪತ್ರೆಗಳಲ್ಲಿರುವ
ಹಲವು ಸೌಲಭ್ಯಗಳಿದ್ದವು.

ಸ್ತ್ರೀ ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಿದ್ದವು. ಹಾಗೆಯೇ ಆಸ್ಪತ್ರೆಯಲ್ಲಿ ದಾಖಲಾಗುವ ರೋಗಿಗಳಿಗೆ ಪ್ರತ್ಯೇಕ ಸ್ನಾನದ ವ್ಯವಸ್ಥೆಯಿತ್ತು. ಜತೆಗೆ ರೋಗಿಗಳು ತಮ್ಮ ವೈಯುಕ್ತಿಕ ವಸ್ತುಗಳನ್ನು ಕಾಪಾಡಿಕೊಳ್ಳಲು, ನಮ್ಮ ಇಂದಿನ ಲಾಕರ್‌ಗಳನ್ನು ಹೋಲುವಂತಹ, ವ್ಯವಸ್ಥೆಯಿತ್ತು. ವಿಶೇಷವೆಂದರೆ, ಈ ಆಸ್ಪತ್ರೆಯಲ್ಲಿ ಶಾರೀರಿಕ ರೋಗಗಳಿಗೆ ಚಿಕಿತ್ಸೆಯನ್ನು ನೀಡುವುದರ ಜತೆಯಲ್ಲಿ ಮಾನಸಿಕ ಅನಾರೋಗ್ಯಗಳಿಗೂ ಚಿಕಿತ್ಸೆಯನ್ನು ನೀಡುವ ಪ್ರತ್ಯೇಕ ವ್ಯವಸ್ಥೆಯಿತ್ತು. ಈ ಆಸ್ಪತ್ರೆಯಲ್ಲಿದ್ದ ಗ್ರಂಥ ಭಂಡಾರದಲ್ಲಿ ಸಮಕಾಲೀನ ೧,೦೦,೦೦೦ಕ್ಕೂ ಹೆಚ್ಚಿನ ಶ್ರೇಷ್ಠ ಗ್ರಂಥಗಳಿದ್ದವು.

ಆಸ್ಪತ್ರೆಗೆ ಹೊಂದುಕೊಂಡಂತೆ ಅಗತ್ಯ ಔಷಧಗಳನ್ನು ಉತ್ತಮ ಔಷಧಾಲಯ- ಫಾರ್ಮಸಿಯೂ ಸಹ ಇತ್ತು. ಮತ್ತೊಂದು ಆಶ್ಚರ್ಯಕರ ಮಾಹಿತಿಯೆಂದರೆ, ಈ ಆಸ್ಪತ್ರೆಯಲ್ಲಿ ಚಿಕಿತ್ಸೆಯು ಸಂಪೂರ್ಣವಾಗಿ ಉಚಿತವಾಗಿತ್ತು. ಆಸ್ಪತ್ರೆಯ ನಿರ್ವಹಣೆ ಹಾಗೂ ರೋಗಿಗಳ ಚಿಕಿತ್ಸಾ ವೆಚ್ಚವನ್ನು ವಕ್ ರೆವೆನ್ಯೂ ಇಂದ ನಿರ್ವಹಿಸುತ್ತಿದ್ದರು. ವಕ್ ಎಂದರೆ ಧಾರ್ಮಿಕ, ಶೈಕ್ಷಣಿಕ ಅಥವಾ ದತ್ತಿ ಉದ್ದೇಶಕ್ಕಾಗಿ ಮುಸ್ಲಿಮರು ನೀಡಿದ ದೇಣಿಗೆ. ಬಹುಶಃ, ಪ್ರಾಚೀನ ಅರಬ್ ಜಗತ್ತಿನಲ್ಲಿ ವಕ್ ದೇಣಿಗೆಯಿಂದ
ನಿರ್ವಹಣೆಯಾಗುತ್ತಿದ್ದ ಮೊತ್ತ ಮೊದಲ ಆಸ್ಪತ್ರೆಯು ಇದಾಗಿರಬಹುದು. ಈ ಅಲ್-ಫಸ್ತಾತ್ ಆಸ್ಪತ್ರೆಯು ಸುಮಾರು 600 ವರ್ಷಗಳ ಕಾಲ ಕಾರ್ಯನಿರ್ವಹಿಸಿತು.

ಕೈರೋ ನಗರದ ಮತ್ತೊಂದು ಮುಖ್ಯವಾದ ಆಸ್ಪತ್ರೆಯನ್ನು ಅಲ್-ಮನ್ಸೂರಿ ಆಸ್ಪತ್ರೆ ಎಂದು ಕರೆಯುತ್ತಿದ್ದರು. ಇದನ್ನು 1284ರಲ್ಲಿ ಕಟ್ಟಿ ಮುಗಿಸಿದರು. ಇದನ್ನು ಅಲ್ -ಮನ್ಸೂರ್ ಕಲಾವುನ್ (1222-1290) ನಿರ್ಮಿಸಿದ. ಈತನು ಡಮಾಸ್ಕಸ್ ನಗರದ ಅಲ್-ನೂರಿ ಆಸ್ಪತ್ರೆಯಲ್ಲಿ ಒಳರೋಗಿಯಾಗಿ ದಾಖಲಾಗಿದ್ದ. ಅಲ್ಲಿದ್ದ ಅನುಕೂಲತೆಗಳನ್ನು ಸ್ವಯಂ ಅನುಭವಿಸಿ, ಅದಕ್ಕಿಂತಲೂ ಉತ್ತಮವಾದ ಆಸ್ಪತ್ರೆಯನ್ನು ಕೈರೋದಲ್ಲಿ ಕಟ್ಟಬೇಕೆಂದು ನಿರ್ಧರಿಸಿ, ಅಲ್ -ಮನ್ಸೂರಿ ಆಸ್ಪತ್ರೆಯನ್ನು ಪೂರ್ಣಗೊಳಿಸಿದ.

ಅಲ್ -ಮನ್ಸೂರಿ ಆಸ್ಪತ್ರೆಯು ಬಡವರಿಗೆ-ಶ್ರೀಮಂತರಿಗೆ- ಸಮಾಜದ ಲ್ಲ ಸ್ತರದ ಜನರಿಗೆ ಏಕರೂಪದ ಚಿಕಿತ್ಸೆಯನ್ನು
ನೀಡಿತು. ಚಿಕಿತ್ಸೆಗೆ ಯಾವುದೇ ರೀತಿಯ ಶುಲ್ಕವನ್ನು ವಿಧಿಸುತ್ತಿರಲಿಲ್ಲ. ಬದಲಿಗೆ ಒಬ್ಬ ಬಡವನ್ನು ಆಸ್ಪತ್ರೆಯಿಂದ ಬಿಡುಗಡೆಯಾಗುವಾಗ, ಅವನಿಗೆ ಆಹಾರ ಪದಾರ್ಥಗಳನ್ನು ಹಾಗೂ ಹಣವನ್ನು ಕೊಡುತ್ತಿದ್ದರು. ಅವನು ಆಸ್ಪತ್ರೆಯಲ್ಲಿ
ಇದ್ದಷ್ಟು ದಿನಗಳ ಕಾಲ ಅವನಿಗೆ ಕೆಲಸವಿರುವುದಿಲ್ಲ. ದುಡಿಮೆಯಿರುವುದಿಲ್ಲ. ಹಾಗಾಗಿ ಒಂದಷ್ಟು ಹಣವನ್ನು ಕೈಗೆ
ನೀಡಿ ಬದುಕನ್ನು ಹೊಸದಾಗಿ ಆರಂಭಿಸಲು ಅವಕಾಶವನ್ನು ಮಾಡಿಕೊಡುತ್ತಿದ್ದರು. ಈ ಆಸ್ಪತ್ರೆಯು ಎಷ್ಟು ಬೃಹತ್ತಾಗಿದ್ದು, ಅತ್ಯುತ್ತಮ ಸೇವೆಯನ್ನು ಸಲ್ಲಿಸುತ್ತಿತೆಂದರೆ, ಪ್ರತಿದಿನ ಸುಮಾರು ೪೦೦೦ ಜನರು ಇಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಹೀಗೆ ಅಲ್-ಮನ್ಸೂರಿ ಆಸ್ಪತ್ರೆಯು ಒಂದು ಮಾದರಿ ಆಸ್ಪತ್ರೆಯಾಗಿ ಬೆಳೆಯಿತು.

ಅಂದಿನ ಇಸ್ಲಾಂ ಜಗತ್ತಿನಲ್ಲಿ ಯಾರೇ ಆಗಲಿ, ಒಂದು ಹೊಸ ಬಿಮಾರಿಸ್ತಾನ್ ಆರಂಭಿಸುವ ಮೊದಲು, ಅಲ್-ಮನ್ಸೂರಿ ಆಸ್ಪತ್ರೆಯನ್ನು ಪ್ರಮಾಣಬದ್ಧವಾಗಿ ಪರಿಗಣಿಸಿ, ಅದಕ್ಕಿಂತಲೂ ಉತ್ತಮ ಸೌಲಭ್ಯಗಳನ್ನು ಒದಗಿಸಲು ಪ್ರಯತ್ನಿಸುತ್ತಿದ್ದರು.
ಅಲ್-ಫಸ್ತಾತ್ ಆಸ್ಪತ್ರೆಯಂತೆ, ಅಲ್-ಮನ್ಸೂರಿ ಆಸ್ಪತ್ರೆಯ ಕಟ್ಟಡವು ಬೃಹತ್ತಾಗಿತ್ತು. ಹಾಗೆಯೇ ಪ್ರತಿ ವರ್ಷ ಆಸ್ಪತ್ರೆಗೆ ದೊರೆಯುತ್ತಿದ್ದ ಹಣವು ಒಂದು ದಶಲಕ್ಷ ದಿರ್ಹ್ಯಾಂಗಿಂತಲೂ ಹೆಚ್ಚಿರುತ್ತಿತ್ತು. ಆಸ್ಪತ್ರೆಯಲ್ಲಿ 80000 ಒಳರೋಗಿಗಳಿಗೆ ಹಾಸಿಗೆಗಳಿದ್ದವು. ಇಲ್ಲಿಯೂ ಸಹ ಶಾರೀರಿಕ ರೋಗಗಳ ಜತೆಯಲ್ಲಿ ಮಾನಸಿಕ ರೋಗಗಳಿಗೆ ಚಿಕಿತ್ಸೆಯು ದೊರೆಯುತ್ತಿತ್ತು. ಇಲ್ಲಿ ಮನೋರೋಗಿಗಳ ಚಿಕಿತ್ಸೆಯಲ್ಲಿ ಸಂಗೀತ ಪ್ರಾಧಾನ್ಯತೆಯು ದೊರೆಯಿತು.

ಇಲ್ಲೂ ಉತ್ತಮ ಗ್ರಂಥಾಲಯವಿತ್ತು. ಇಸ್ಲಾಂ ಜಗತ್ತಿನ ಪ್ರಮುಖ ವೈದ್ಯರಲ್ಲಿ ಒಬ್ಬನಾದ ಇಬ್ನ್ ಅಲ್-ನಫೀಸ್ ತನ್ನ ಮರಣಾನಂತರ (12598), ತನ್ನಲ್ಲಿದ್ದ ಬೃಹತ್ ವೈದ್ಯಕೀಯ ಗ್ರಂಥಗಳನ್ನು ಇದೇ ಆಸ್ಪತ್ರೆಗೆ ದಾನ ಮಾಡಿದ. ಈ ಆಸ್ಪತ್ರೆ
ಯು 15ನೆಯ ಶತಮಾನದವರೆಗೆ ಕೆಲಸವನ್ನು ಮಾಡಿತು. ಈಗಲೂ ಈ ಆಸ್ಪತ್ರೆಯ ಕಟ್ಟಡವು ಕೈರೋ ನಗರದಲ್ಲಿದೆ.
ಈಗ ಅದನ್ನು ಮುಸ್ತಷ ಕಲಾವೂನ್ ಎಂದು ಹೆಸರಾಗಿದೆ.