ಸಂಸ್ಮರಣೆ
ಜಯಪ್ರಕಾಶ ಪುತ್ತೂರು
ವಿಶ್ವವಿಖ್ಯಾತ ‘ಏರ್ ಶೋ’ ಬೆಂಗಳೂರಿನಲ್ಲಿ ೨ ವರ್ಷಗಳಿಗೊಮ್ಮೆ ಜರುಗುವ ಅದ್ಭುತ ಪ್ರದರ್ಶನ. ಇದು ೨೦೧೯ರ ಸಾಲಿನ ಫೆಬ್ರವರಿ ತಿಂಗಳಲ್ಲಿ ನಡೆಯು ತ್ತಿತ್ತು. ಈ ವಿಶ್ವಮಟ್ಟದ ವಿಮಾನ ಪ್ರದರ್ಶನದ ಚಮತ್ಕಾರಿಕ, ವಿಸ್ಮಯಕಾರಿ ಯುದ್ಧವಿಮಾನಗಳ ಹಾರಾಟ ನಿಜವಾಗಿಯೂ ಮೈನವಿರೇಳಿಸುವಂಥದ್ದು. ಆಬಾಲ ವೃದ್ಧರಿಗೆ ಬಲು ರೋಚಕ ಅನುಭವವನ್ನು ನೀಡುವಂಥದ್ದು ಎಂಬುದರಲ್ಲಿ ಸಂಶಯವೇ ಇಲ್ಲ.
ಎಂದಿನಂತೆ ಈ ಪ್ರದರ್ಶನದಲ್ಲಿ ಪಾಲ್ಗೊಳ್ಳಲು ಬೇಕಾದ ಸಿದ್ಧತೆಯೊಂದಿಗೆ ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಒಳಾಂಗಣ ಪ್ರವೇಶಿಸಿ ಆ ಬಳಿಕ ಕೆಲವೇ ಆಮಂತ್ರಿತರಿಗೆ ಸೀಮಿತವಾದ ವಿವಿಐಪಿ ಪ್ರದೇಶಕ್ಕೆ ವಿಶೇಷ ಬ್ಯಾಜ್ ಧರಿಸಿ, ಬಹು ಕೌತುಕದಿಂದ ನೋಡುತ್ತಾ ಎಲ್ಲಾ ಭದ್ರತಾ ತಪಾಸಣೆ ಮುಗಿಸಿ, ವಿವಿಧ ಹಂತಗಳ ಆಸನಗಳು ಹಾಗೂ ವೀಕ್ಷಕ ಗ್ಯಾಲರಿಗಳತ್ತ ಮುಂದುವರಿದೆ.
ಕೆಲವು ತಿಂಗಳ ಹಿಂದೆ ನಮ್ಮ ದೇಶ ಹಿಂದೆಂದೂ ಕೇಳಿರದ ‘ಸರ್ಜಿಕಲ್ ಸ್ಟ್ರೈಕ್’, ಬಹು ವಿಖ್ಯಾತ ಕಾರ್ಗಿಲ್ ಕಾರ್ಯಾಚರಣೆ ಮುಂತಾದವುಗಳನ್ನು ಕಂಡಿದ್ದು, ಅವುಗಳ ಬಗ್ಗೆ ಎಲ್ಲೆಡೆ ಚರ್ಚೆ ಹಾಗೂ ಅಭಿಮಾನಪೂರ್ವಕ ಮಾತುಗಳನ್ನು ಕೇಳುತ್ತಾ ಆನಂದಿಸುವ ಕ್ಷಣಗಳಾಗಿದ್ದವು. ಆಗಲೇ ಜನರಲ್ ಬಿಪಿನ್ ರಾವತ್ ಭಾರತ ಸೈನ್ಯದ ಬಹುಚರ್ಚಿತ ದಂಡ ನಾಯಕರಾಗಿ ಮೂಡಿಬಂದು ಓರ್ವ ಸಮರ್ಥ ‘ನ್ಯಾಷನಲ್ ಹೀರೋ’ ಆಗಿಬಿಟ್ಟಿದ್ದರು!
ಈ ಬೃಹತ್ ‘ಏರ್ ಶೋ’ ಉದ್ಘಾಟನೆಗೆ ನಮ್ಮ ದೇಶದ ಮೂರು ಸೇನಾವಿಭಾಗಗಳ ಮಹಾದಂಡನಾಯಕರು ಅಲ್ಲದೇ, ವಿಶ್ವದ ವಿವಿಧ ರಾಷ್ಟ್ರಗಳ ಮಿಲಿಟರಿ ಅಧಿಕಾರಿಗಳು ಸಕಲ ವೇಷಭೂಷಣಗಳಿಂದ ಅಲಂಕೃತರಾಗಿ ಆಗಮಿಸಿ ಸಾಗುವುದನ್ನು ನೋಡುವುದೇ ಒಂದು ಸೊಗಸಾದ ನೋಟ. ಅಂಥವರು ಅಲ್ಲೆಲ್ಲಾ ಕರಾರುವಾಕ್ಕಾಗಿ ಸಮಯಕ್ಕೆ ಸರಿಯಾಗಿ ಆಗಮಿಸಿ ಭದ್ರತಾಪಡೆ, ಬೆಂಗಾವಲು ಹಾಗೂ ಎಸ್‌ಪಿಜಿ ಕಮಾಂಡೋಗಳಿಂದ ಆವೃತ್ತ ರಾಗಿ ಆಸೀನರಾಗುತ್ತಿದ್ದರು. ನನಗೋ ನಮ್ಮ ದಂಡನಾಯಕ ಬಿಪಿನ್ ರಾವತ್‌ಅವರನ್ನು ಕಣ್ತುಂಬಾ ಕಾಣುವ ಆಸೆ ಖಂಡಿತಾ ಮನಸ್ಸಿನಲ್ಲಿ ಮೂಡಿತ್ತು.
ಹೀಗಾಗಿ ಮಾಧ್ಯಮ ಮಂದಿಯ ಗ್ಯಾಲರಿಗಳತ್ತ ಸಾಗುವ ಮೊದಲು, ವಿವಿಧ ದೇಶಗಳ ಮಿಲಿಟರಿ ಶ್ರೇಷ್ಠರ ವಿಶೇಷ ಸ್ಟ್ಯಾಂಡ್‌ಗಳ ಸಾಲಿನತ್ತ ಕಣ್ಣುಹಾಯಿಸಿದೆ. ನಮ್ಮ ದೇಶದ ಮೂವರು ಮಹಾದಂಡನಾಯಕರು ಅಗ್ರಸ್ಥಾನದಲ್ಲಿ ಜತೆಯಲ್ಲಿ ಪ್ರಥಮ ಸಾಲಿನಲ್ಲಿ ಆಗಲೇ ಆಸೀನರಾಗಿದ್ದರು. ಅದೋ ನೋಡಿ..! ಅಲ್ಲಿ ಇದ್ದಾರೆ ಜನರಲ್ ರಾವತ್! ಎಲ್ಲರ ಕಣ್ಮಣಿಯಾಗಿ ರಾರಾಜಿಸುತ್ತಾ ಕುಳಿತುಕೊಂಡು ಎಲ್ಲೆಡೆ ಕಣ್ಣುಹಾಯಿಸುತ್ತಿದ್ದರು.
ಸಾಂಪ್ರದಾಯಿಕ ಮಹಾ ಉದ್ಘಾಟನಾ ಕಾರ್ಯಕ್ರಮಕ್ಕೆ ಇನ್ನೂ ಕೆಲವು ನಿಮಿಷಗಳಿದ್ದವು. ಒಮ್ಮೆ ಆ ಮಹಾದಂಡನಾಯಕರ ಬಳಿ ಸಾಗಿ, ಅದರಲ್ಲಿಯೂ ಜನರಲ್ ರಾವತ್ ಅವರನ್ನು ಅಭಿನಂದಿಸಿದರೆ ಹೇಗೆ? ಎಂಬ ಆಲೋಚನೆ ಮೂಡಿದ ಕೂಡಲೇ ಅವರ ಸುತ್ತ ಆವರಿಸಿದ್ದ ವಿವಿಧ ಹಂತದ ಭದ್ರತಾ ಕೋಟೆಯನ್ನು ಕಂಡು
ಅವ್ಯಕ್ತ ಭಯವಾಗಿದ್ದು ಸುಳ್ಳಲ್ಲ. ಆದರೂ ನಾನು ಎದೆಗುಂದಲಿಲ್ಲ. ಹೇಗಪ್ಪಾ ಅಲ್ಲಿಯವರೆಗೆ ಸಾಗಲಿ? ಒಂದು ವೇಳೆ ಏನಾದರೂ ಆಭಾಸವಾಗಿ ನನ್ನನ್ನು ಅಧಿಕಾರಿ ಗಳು ಮುತ್ತಿಕೊಂಡು ಸಂಶಯ ವ್ಯಕ್ತಪಡಿಸುವಂತಾದರೆ? ತಮ್ಮ ಜತೆಯಲ್ಲಿ ಹೊರಗೆ ಕರೆದೊಯ್ಯುವಂತಾದರೆ? ಎಂದು ಕಲ್ಪಿಸಿಕೊಂಡು, ನನ್ನ ಪರಿಚಯವಿರುವ ಅಧಿಕಾರಿವರ್ಗ ಹಾಗೂ ಮಾಧ್ಯಮ ಸಮೂಹದ ಎದುರು ಅವಮಾನಿತ ನಾಗಿಬಿಡಬಹುದಾದ ಆ ಘೋರದೃಶ್ಯ ಕಣ್ಣಿಗೆ ಕಟ್ಟಿದಂತಾಗಿ ನಾನು ಬೆವರಿಹೋದೆ!
ಕೊನೆಗೂ ಧೈರ್ಯದಿಂದ ಜನರಲ್ ಬಿಪಿನ್ ರಾವತ್ ಅವರತ್ತ ನಿಧಾನವಾಗಿ ಸಾಗಿದೆ. ಹತ್ತಿರಕ್ಕೆ ಹೋಗುತ್ತಿದ್ದಂತೆಯೇ ಭದ್ರತಾ ದಳದವರೆಲ್ಲಾ ಅಲರ್ಟ್ ಆದವ ರಂತೆ ನನ್ನೆಡೆಗೆ ದೃಷ್ಟಿ ಹಾಯಿಸಿದರು. ಅಲ್ಲಿಯೇ ನಿಂತು ರಾವತ್‌ರ ಕಡೆಗೆ ಕಾತರದ ನೋಟ ಹರಿಸಿದೆ. ಆಗ ಅವರು ಅಚಾನಕ್ಕಾಗಿ ನನ್ನ ಕಡೆ ನೋಡಿದಾಗ ಅವರಿಗೆ ಕೈಮುಗಿದು ‘ಅಲ್ಲಿಗೆ ಬರಲೇ‘ ಎಂದು ಯಾಚಿಸಿದೆ. ನಸುನಕ್ಕ ಅವರು ತಮ್ಮ ಸುತ್ತಲಿದ್ದ ಸಿಬ್ಬಂದಿಗೆ ಕಣ್ಣುಸನ್ನೆ ಮಾಡಿ ಸುಮ್ಮನಾಗಿಸಿದರು. ಎದ್ದು ನಿಂತ ಆ ಮಹಾಪುರುಷನ ಬಳಿ ಸರಿದು ತಡವರಿ ಸುವ ದನಿಯಲ್ಲೇ, ‘ನಾವೆಲ್ಲ ನಾಗರಿಕರೂ ನಿಮ್ಮ ಅಮೋಘ ಕಾರ್ಯಾಚರಣೆ ಯಿಂದ ಸಂತೋಷಗೊಂಡಿದ್ದೇವೆ.
ಅಭಿನಂದನೆಗಳು ಸರ್. ಇಡೀ ದೇಶ ನಿಮಗೆ ಸಲಾಂ ಎನ್ನುತ್ತಿದೆ’ ಎಂದೆ ಖುಷಿಯಿಂದ. ಆ ತಕ್ಷಣವೇ ಅವರು ನನ್ನ ಭುಜದ ಮೇಲೆ ಕೈಇರಿಸಿ ನಸುನಕ್ಕು,
‘ನಾವು ನಮ್ಮ ಕರ್ತವ್ಯ ಮಾಡಿದ್ದೇವೆ. ಆ ಬಗ್ಗೆ ನಮಗೆ ತೃಪ್ತಿ ಇದೆ’ ಎಂದರು.
ನಾನು ನನ್ನ ಕ್ಯಾಮೆರಾ ತೆರೆದು ಪಕ್ಕದಲ್ಲಿದ್ದ ಭದ್ರತಾ ಸಿಬ್ಬಂದಿಗೆ ನೀಡಿದಾಗ, ಎಲ್ಲರೂ ನೋಡುತ್ತಿರುವಂತೆಯೇ ನಮ್ಮ ‘ಫೋಟೋ ಸೆಷನ್’ ನಡೆಯಿತು.
ಕೃತಜ್ಞತಾ ಭಾವ ದಿಂದ, ಗದ್ಗದಿತ ಕಂಠದಿಂದ ‘ಥ್ಯಾಂಕ್ಯೂ ಸರ್’ ಎಂದು ಹೇಳಿದೆ. ಆಗ ಅವರು ಭುಜತಟ್ಟಿ, ‘ಗಾಡ್ ಬ್ಲೆಸ್ ಯೂ ಯಂಗ್‌ಮ್ಯಾನ್’ ಎಂದರು. ಆ ಸಂದರ್ಭದಲ್ಲಿ ತೆಗೆದ ಆ ಮಹತ್ವದ ಫೋಟೋಗಳನ್ನು ನನ್ನ ಮೊಬೈಲ್‌ನಲ್ಲಿ ಬಹುಜತ ದಿಂದ ಸಂರಕ್ಷಿಸಿಟ್ಟುಕೊಂಡಿದ್ದೇನೆ. ಆ ಬಳಿಕ ಬಿಪಿನ್ ರಾವತ್ ಅವರ ವಿಚಾರಗಳಲ್ಲಿ ಆಸಕ್ತಿ ತೋರಿಸುತ್ತಾ ಇದ್ದವರಿಗೆ, ಆ ನಂತರ ಅವರ ಹೆಸರು ಪ್ರಸ್ತಾಪಿಸುವ ಪ್ರಸಂಗ ಬಂದದ್ದು- ರಾವತ್ ಅವರ ದುರ್ಮರಣದ ಮರುದಿನವೇ
ನಡೆದದ್ದು ಅತ್ಯಂತ ವಿಷಾದನೀಯ.
ವಿಮಾನ ಪತನಗೊಂಡ ಬಳಿಕ ಬೆಂಗಳೂರಿನ ಮಾಧ್ಯಮಮಿತ್ರರು ಎಂದಿನಂತೆ ಅವರು ಪ್ರಯಾಣಿಸುತ್ತಿದ್ದ ವಿಮಾನದ ಬಗ್ಗೆ ಪ್ರಶ್ನೆ ಕೇಳಲು ಆರಂಭಿಸಿ ‘ಆನ್‌ಲೈನ್’ಗೆ ಬನ್ನಿ ಎಂದು ಆಹ್ವಾನಿಸಿದರು. ಮನದಲ್ಲಿ ಬೇಸರ ತುಂಬಿದ್ದರೂ ತೋರಿಸಿ ಕೊಳ್ಳದೆ ದೃಶ್ಯಮಾಧ್ಯಮಗಳ ಸಂವಾದದಲ್ಲಿ ಭಾಗವಹಿಸಿದೆ. ಹೀಗೆ ಅಂಥ ಮಹಾಪುರುಷನ ಕೇವಲ ಒಂದು ಭೇಟಿ ಬಳಿಕ, ಕೆಲವು ವರ್ಷಗಳಲ್ಲಿಯೇ ಮತ್ತೆ ವಿಷಾದಪೂರ್ವಕ ಪ್ರಸಂಗ ದಲ್ಲಿ ನೆನಪಿಸಿಕೊಳ್ಳುವ ದೌರ್ಭಾಗ್ಯ ಒದಗಿತು. ಆ ವೇಳೆ ಜನರಲ್ ಬಿಪಿನ್ ರಾವತ್ ಭಾರತದ ಸೇನೆಯ ಮೂರೂ ವಿಭಾಗದ ಮುಖ್ಯಸ್ಥರಾಗಿ (ಸಿಡಿಎಸ್) ನಿಯುಕ್ತಿಗೊಂಡ ಪ್ರಪ್ರಥಮ ಜನರಲ್ (೨೦೧೯)
ಎಂದು ಖ್ಯಾತಿ ಪಡೆದಿದ್ದರು.
೧೯೫೮ರಲ್ಲಿ ಜನಿಸಿದ ಬಿಪಿನ್ ರಾವತ್, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹಾಗೂ ಮಿಲಿಟರಿ ಅಕಾಡೆಮಿಯಲ್ಲಿ ತರಬೇತಿ ಪಡೆದು, ೧೧ನೇ ಘೂರ್ಖಾ ರೈಫಲ್ಸ್‌ನ ಬೆಟಾಲಿಯನ್‌ಗೆ (೧೯೭೮) ಸೇರ್ಪಡೆಯಾದರು. ವೆಲಿಂಗ್ಟನ್ ಡಿಫೆನ್ಸ್ ಸರ್ವಿಸ್ ಸ್ಟಾಫ್ ಕಾಲೇಜಿನಿಂದ ಪದವೀಧರರಾಗಿ ಹೊರಬಂದು, ಮುಂದೆ ಅಮೆರಿಕದ -ರ್ಟ್ ಲಿವೆನ್‌ವರ್ಸ್‌ನಿಂದಲೂ ಮೇಲ್ದರ್ಜೆಯ ತರಬೇತಿ ಪಡೆದರು. ಜ್ಞಾನವನ್ನು ಹೆಚ್ಚಿಸಿ ಕೊಳ್ಳುವ ತವಕ ಹೊಂದಿದ್ದ ಇವರು ಮದ್ರಾಸ್ ವಿಶ್ವವಿದ್ಯಾಲಯದಿಂದ ಎಂಎಫ್ ಪಿ ಗಳಿಸಿದರು. ಆಡಳಿತ ಶಾಸ್ತ್ರ ಹಾಗೂ ಕಂಪ್ಯೂಟರ್ ವ್ಯವಸ್ಥೆಗಳಲ್ಲಿ ಕೂಡ ಡಿಪ್ಲೊಮಾ ಪದವಿ ಹೊಂದಿದರು. ಅಲ್ಲದೆ ಮೀರತ್‌ನ ಚೌಧರಿ ಚರಣ್‌ಸಿಂಗ್
ವಿಶ್ವವಿದ್ಯಾಲಯದಿಂದಲೂ ಡಾಕ್ಟರೇಟ್ ಸಂಪಾದಿಸಿದ ಬಿಪಿನ್ ರಾವತ್, ದೇಶದ ಅತ್ಯಂತ ದುರ್ಗಮ, ಕಷ್ಟದಾಯಕ, ಆಯಕಟ್ಟಿನ ಪ್ರದೇಶಗಳ ಕಮಾಂಡ್ ಅನ್ನು ನಡೆಸಿದರು.
ತಮ್ಮ ೩೮ ವರ್ಷಗಳ ಅಪ್ರತಿಮ ಸಾಧನೆಯ ಸೇವೆಗಾಗಿ ಎಲ್ಲಾ ಮಟ್ಟದ ಗರಿಷ್ಠ ಪದವಿ, ಸನ್ಮಾನ ಹಾಗೂ ಗೌರವಗಳನ್ನು ಪಡೆದರು. ವಿಶ್ವಸಂಸ್ಥೆಯ ಶಾಂತಿ ಸುವ್ಯವಸ್ಥೆ ಕಾರ್ಯಾಚರಣೆ ಯಲ್ಲಿ ವಿದೇಶಗಳಲ್ಲೂ ಸ್ತುತ್ಯರ್ಹ ಸೇವೆ ಸಲ್ಲಿಸಿ ಪ್ರಶಂಸೆಗೆ ಪಾತ್ರರಾದರು. ಡೆಹರಾಡೂನ್ ಮಿಲಿಟರಿ ಕಾಲೇಜಿನಿಂದ ‘ಸೋರ್ಡ್
ಆ- ಆನರ್’ ಗಳಿಸಿದ ಕೆಲವೇ ಪ್ರಮುಖರಲ್ಲಿ ರಾವತ್ ಕೂಡ ಒಬ್ಬರಾಗಿದ್ದರು. ೨೦೧೫ರಲ್ಲಿ ಬರ್ಮಾ ದೇಶದ ಗಡಿಪ್ರದೇಶ ದಲ್ಲಿ ಭಯೋತ್ಪಾದಕರನ್ನು ನಿಗ್ರಹಿಸಿ, ಬಹುಖ್ಯಾತಿಯ ೨೦೧೬ರ ‘ಸರ್ಜಿಕಲ್ ಸ್ಟ್ರೈಕ್’ನ ರೂವಾರಿಗಳಲ್ಲಿ ಓರ್ವರಾದ ಬಿಪಿನ್ ರಾವತ್, ರಾಷ್ಟ್ರೀಯ ಭದ್ರತೆ ಹಾಗೂ ಸೇನಾ ನಾಯಕತ್ವದ ಕುರಿತು ಹಲವು ವಿಚಾರಪೂರ್ಣ ಲೇಖನ ಗಳನ್ನು ಬರೆದು, ತಮ್ಮ ಲೇಖನಿ ಖಡ್ಗದಂತೆಯೇ ಹರಿತ ವಾಗಿದೆ ಎಂಬುದನ್ನು ತೋರಿಸಿದರು.
ಚೀನಾ ಹಾಗೂ ಪಾಕಿಸ್ತಾನ ಆಯಾ ಗಡಿ ಪ್ರದೇಶಗಳಲ್ಲಿ ನೀಡುತ್ತಿರುವ ಕಿರುಕುಳದ ವ್ಯಾಪ್ತಿಯನ್ನು ಗಮನಿಸಿ, ಇಂಥ ಆತಂಕಕಾರಿ ಕಳ್ಳತನದ ಆಕ್ರಮಣಗಳನ್ನು ಸದೆಬಡಿದು, ಒಂದು ವಿಶೇಷ ವಾದ ಸರ್ವಸಜ್ಜಿತ ತಂಡದ ರಚನೆಯ ವಿಷಯದಲ್ಲಿ ಯಶಸ್ಸು ಪಡೆದಿದ್ದರು ಬಿಪಿನ್ ರಾವತ್. ೨೦೨೨ರ ಡಿಸೆಂಬರ್ ೮ರಂದು ತಮಿಳುನಾಡಿನಲ್ಲಾದ ವೈಮಾನಿಕ ದುರಂತದಲ್ಲಿ ದುರ್ಮರಣ ಹೊಂದಿದ ಬಿಪಿನ್ ರಾವತ್, ಮಿಲಿಟರಿ ವಲಯದಲ್ಲಿ ಓರ್ವ ಮಹಾಯೋಧ ನಂತೆ ಪರಿಗಣಿಸ ಲ್ಪಟ್ಟಿದ್ದು, ವ್ಯೂಹರಚನೆ, ಪೂರ್ವಸಿದ್ಧತೆ, ತಯಾರಿ, ನಿರ್ವಹಣೆ, ಕಾರ್ಯಾಚರಣೆ, ನಾಯಕತ್ವದ ಶೈಲಿಗಳು, ಪರಿಸ್ಥಿತಿಗಳನ್ನು ನಿಭಾಯಿಸುವ ಚಾಣಾಕ್ಷತೆ, ವಿದೇಶಾಂಗ ನೀತಿಯ ಜ್ಞಾನ, ಸೇನಾವ್ಯವಸ್ಥೆಯ ಪುನಾರಚನೆ, ಕಾರ್ಯತಂತ್ರ ಹಾಗೂ ಸ್ಪಷ್ಟತೆ, ನಿಖರತೆ, ಧೈರ್ಯ, ಎದೆಗಾರಿಕೆ ಹೀಗೆ ಹಲವು ವಿಚಾರಗಳಲ್ಲಿ ಸರ್ವೋತ್ತಮ ಜನರಲ್ ಆಗಿ ಮೂಡಿಬಂದದ್ದು ಇದೀಗ ಇತಿಹಾಸ.
ಈ ಮಹಾಯೋಧನಿಗೆ ಎಂದೂ ಸಾವಿಲ್ಲ, ಅವರು ಎಲ್ಲರ ನೆನಪಿನಲ್ಲಿ ಸದಾ ಉಳಿಯುತ್ತಾರೆ. ಬಿಪಿನ್ ರಾವತ್ ಅಮರ್ ರಹೇ…
(ಲೇಖಕರು ರಕ್ಷಣಾ ಸಂಶೋಧನೆ ಮತ್ತು
ಅಭಿವೃದ್ಧಿ ಸಂಸ್ಥೆಯ ಮಾಜಿ ಅಧಿಕಾರಿ)