ಶಶಾಂಕಣ
shashidhara.halady@gmail.com
ಮಳೆಕೋಂಗಿಲ ಎಂಬುದು ನಮ್ಮ ಹಳ್ಳಿಯಲ್ಲಿ ಕಾಣಸಿಗುವ ವಿಶಿಷ್ಟ ಹಕ್ಕಿ. ಜನಪದರು ಇದನ್ನು ಹೆಸರಿಸಿದ ರೀತಿ ಬಹಳ ವಿಶೇಷ. ಮಳೆಗಾಲ ಆರಂಭವಾಗಿ ನಾಲ್ಕಾರು ವಾರಗಳ ನಂತರ ಇವು ಅತ್ತಿಂದಿತ್ತ ಹಾರಾಡುವುದನ್ನು ನೋಡಬಹುದು. ಸಂಜೆ ಹೊತ್ತಿನಲ್ಲಿ ಒಮ್ಮೆಗೇ ಮನೆಯ ಹಿಂದಿನ ಹಾಡಿಯಲ್ಲೋ, ಗದ್ದೆ ಯಾಚೆಗಿನ ಹಕ್ಕಲಿನಲ್ಲೋ ಸಾಕಷ್ಟು ಹಕ್ಕಿಗಳು ಸದ್ದು ಮಾಡುತ್ತಾ ಪ್ರತ್ಯಕ್ಷವಾಗುತ್ತವೆ.
ಅವು ಹೀಗೆ ಕಾಣಿಸಿಕೊಳ್ಳುವ ದಿನ ಸಾಮಾನ್ಯವಾಗಿ ಮಳೆ ಕಡಿಮೆಯಾಗಿರುವ, ಹೊಳವಾದ ದಿನವೇ ಆಗಿರುತ್ತದೆ. ಅವುಗಳ ಸಂಚಾರ ಕಂಡು ‘ಹಾಂ, ಮಳೆ ಕೋಂಗಿಲ ಬಂದೊ ಕಾಣಿ, ನಾಳೆ ಇನ್ನೂ ಜಾಸ್ತಿ ಮಳೆ ಬತ್ತತಾ ಕಾಣತ್’ ಎನ್ನುತ್ತಿದ್ದರು ನಮ್ಮ ಹಳ್ಳಿಯ ಜನ. ಇಲ್ಲಿ ಅವುಗಳ ‘ಸಂಚಾರ’ ಎಂದದ್ದು ಸುಮ್ಮನೆ
ಅಲ್ಲ, ಹಾಗಿರುತ್ತದೆ ಅವುಗಳ ಆಗಮನ, ನಿರ್ಗಮನ! ಒಂದು ಕಾಡಿನಿಂದ ಇನ್ನೊಂದಕ್ಕೆ ಸ್ಥಳೀಯವಾಗಿ ವಲಸೆ ಹೋಗಲು ಅವು ಆರಿಸಿಕೊಳ್ಳುವುದು ಇದೇ ಶ್ರಾಯವನ್ನು. ಮಳೆಕೋಂಗಿಲ ಹಕ್ಕಿಗಳು ಒಂದು ರೀತಿಯಲ್ಲಿ ಪಕ್ಷಿಲೋಕದ ವಿದೂಷಕರು.
ಇಂಗ್ಲಿಷ್ ನಲ್ಲಿ ಅವನ್ನು ಮಲಬಾರ್ ಪೈಡ್ ಹಾರ್ನ್‌ಬಿಲ್ ಎಂದಿದ್ದಾರೆ. ಅವನ್ನು ಹಳ್ಳಿಯ ಜನಪದರು ಕೋಂಗಿಲ ಎಂದರೂ, ಅವುಗಳ ದನಿ ಕರ್ಕಶ. ಕ್ರಾಂಯ್ ಕ್ರಾಂಯ್ ಎಂಬ ಅವುಗಳ ಕೂಗು, ಹಳ್ಳಿಯ ಜನರಿಗೆ ನಗು ಬರಿಸಿರಬಹುದು. ಅದಕ್ಕೇ, ವಿರುದ್ಧಾರ್ಥಕವಾಗಿ ಕೋಂಗಿಲ ಎಂದರೋ ಏನೋ. ಇನ್ನು ಅವುಗಳ ಕೊಕ್ಕು ಸಹ ವಿದೂಷಕನ ಸ್ವರೂಪಕ್ಕೆ ಅನ್ವರ್ಥಕ. ನಸು ಹಳದಿಯ, ಉದ್ದನೆಯ, ಡೊಂಕಾದ ಕೊಕ್ಕು, ಅದರ ತುದಿಯ ಲ್ಲೊಂದು ಕೊಂಬು, ಆ ಕೊಂಬಿನಲ್ಲಿ ಕರಿಬಣ್ಣದ ಅಲಂಕಾರ. ಕೊಕ್ಕಿನ ಮೇಲೊಂದು ಕೊಕ್ಕಿರುವುದು ಈ ಹಕ್ಕಿಯ ಹೆಗ್ಗಳಿಕೆಯಾದರೂ, ನೋಡಲು ಅದು ಅಷ್ಟೊಂದು ಚಂದವಲ್ಲ.
ತಲೆಯ ಮೇಲೆ ಅರ್ಧ ಅಡಿಗಿಂತಲೂ ದೊಡ್ಡ ಕೊಕ್ಕನ್ನು ಹೊತ್ತು ಹಾರುವುದೇ ಆ ಹಕ್ಕಿಗೆ ಒಂದು ದೊಡ್ಡ ಕೆಲಸ ಎನಿಸುತ್ತದೆ! ಅವುಗಳ ವಿದೂಷಕ ಸ್ವರೂಪ ಇಷ್ಟಕ್ಕೇ ಮುಗಿಯಲಿಲ್ಲ. ಮಳೆಕೋಂಗಿಲ ಕೂಗುವುದು ಎಷ್ಟು ಕರ್ಕಶ ಎಂದರೆ, ಹತ್ತಾರು ಹಕ್ಕಿಗಳು ಕಾಡಿನ ನಿಶ್ಶಬ್ದದಲ್ಲಿ ಕೂಗಲು ಆರಂಭಿಸಿದರೆ, ಕಾಡಿನ
ಕಾಲ್ದಾರಿಯಲ್ಲಿ ಸಾಗುವ ಮಕ್ಕಳಿಗೆ ಭಯವಾದರೂ ಆದೀತು! ಇನ್ನೊಂದು ವೈಶಿಷ್ಟ್ಯ ಎಂದರೆ, ಅವು ಮರದಿಂದ ಮರಕ್ಕೆ ಹಾರುವಾಗ ರೆಕ್ಕೆಬಡಿತದ ಸದ್ದು
ಬರ ಬರ ಎಂದು ಕೇಳಿಸುತ್ತದೆ. ಇವೆಲ್ಲವೂ ಸೇರಿ, ಆ ಹಕ್ಕಿಯನ್ನು ಪಕ್ಷಿ ಲೋಕದ ವಿದೂಷಕನನ್ನಾಗಿಸಿವೆ.
ಹಳ್ಳಿಯ ಜನಪದರು ಅವನ್ನು ಮಳೆಕೋಂಗಿಲ ಎಂದರೂ, ಅವುಗಳ ವರ್ತನೆಗೆ ವಿಶೇಷ ಅರ್ಥವನ್ನೇನೂ ಕೊಟ್ಟಿಲ್ಲ. ೨ ಅಡಿಗೂ ಉದ್ದವಿರುವ, ಕಪ್ಪನೆಯ ಆ ಹಕ್ಕಿಗಳು ನಮ್ಮೂರಿನ ಕಾಡು ಪ್ರದೇಶದಲ್ಲಿ ಸ್ಥಳೀಯವಾಗಿ ವಲಸೆಹೋಗುವುದನ್ನು ಗುರುತಿಸಿದ್ದಾರಾದರೂ, ಅವುಗಳ ನಡವಳಿಕೆಗೆ ಯಾವುದೇ ಕಥೆ ಕಟ್ಟಿದಂತಿಲ್ಲ. ಇವನ್ನೇ ಹೋಲುವ, ತುಸು ಚಿಕ್ಕದಾದ, ಮೈಪೂರ್ತಿ ಬೂದುಬಣ್ಣದ ಇನ್ನೊಂದು ಹಾರ್ನ್‌ಬಿಲ್‌ನ್ನು ‘ಚಪ್ಪು ಕೋಂಗಿಲ’ ಎಂದು ಕರೆದು, ಇವೆರಡೂ ಒಂದಕ್ಕೊಂದು ಸಂಬಂಽಗಳು ಎಂಬುದನ್ನು ಗುರುತಿಸಿದ್ದಾರೆ. ಈ ಕುಟುಂಬದ ಎಲ್ಲಾ ಪ್ರಭೇದದ ಹಕ್ಕಿಗಳು ಮರಿ ಮಾಡುವ ಕ್ರಮವೇ ವಿಭಿನ್ನ; ಹೆಣ್ಣು ಹಕ್ಕಿಯು
ದೊಡ್ಡ ಮರದ ಪೊಟರೆಯೊಳಗೆ ತನ್ನನ್ನು ಬಂಧನಕ್ಕೆ ಒಳಪಡಿಸಿಕೊಂಡು, ಮೊಟ್ಟೆಯಿಟ್ಟು, ಕಾವುಕೊಟ್ಟು ಮರಿಮಾಡುತ್ತದೆ.
ಪೊಟರೆಯ ಸಂದಿಯಲ್ಲಿ ಕೊಕ್ಕು ತೂರಿಸಿ ಆ ತಾಯಿ ಹಕ್ಕಿಗೆ ನಿರಂತರ ಆಹಾರ ನೀಡುವುದು ಗಂಡು ಹಕ್ಕಿಯ ಕೆಲಸ. ಕೆಲವೇ ದಶಕಗಳ ಹಿಂದೆ ಸಾಕಷ್ಟು ಮಳೆಕೋಂಗಿಲಗಳು ನಮ್ಮ ಹಳ್ಳಿ ಸುತ್ತಮುತ್ತಲೂ ಇದ್ದವು; ಅವಕ್ಕೆ ಆಶ್ರಯ ನೀಡಲು ಅಂದು ನೂರಾರು ಹಳೆಯ, ಬೃಹದಾಕಾರದ ಮರಗಳು ಬೆಳೆದುಕೊಂಡಿ ದ್ದವು. ಆದರೆ ಈಚಿಗೆ ಅಂಥ ಮರಗಳು ಬಹುಮಟ್ಟಿಗೆ ಕಣ್ಮರೆಯಾಗಿ, ಅಲ್ಲೆಲ್ಲಾ ಅಕೇಶಿಯಾ ಬೆಳೆದಿರುವುದರಿಂದ, ನಮ್ಮ ಹಳ್ಳಿಯಲ್ಲಿದ್ದ ಹೆಚ್ಚಿನ ಮಳೆಕೋಂಗಿಲ ಗಳು ಬೇರೆಡೆ ಹೊರಟುಹೋಗಿವೆ!
ಹಳ್ಳಿಯ ಸುತ್ತಲಿನ ಹಕ್ಕಿಗಳ ವರ್ತನೆಯು, ಜನರ ಯೋಚನೆಯ ಮೇಲೆ ಪರಿಣಾಮ ಬೀರುತ್ತವೆ ಎಂಬುದಕ್ಕೆ, ನಮ್ಮ ಹಳ್ಳಿಯಲ್ಲಿ ಕಂಡುಬರುವ ‘ಹೋರಿ ಸತ್ತುಹೋಯಿತೋ’ ಹಕ್ಕಿಯ ಕಥೆ ಉತ್ತಮ ನಿದರ್ಶನ. ಈ ಹಕ್ಕಿಯನ್ನು ನೋಡುವುದಕ್ಕಿಂತಲೂ, ಅದು ಕೂಗುವುದನ್ನು ಕೇಳಿದ್ದೇ ಹೆಚ್ಚು. ಬಿರುಬೇಸಗೆಯ ಸಮಯ; ಎಪ್ರಿಲ್ ಕಳೆದು, ಭೂಮಿಯೆಲ್ಲಾ ಕಾದು, ಮೇ ತಿಂಗಳಿನ ತಿಳಿಗಾಳಿ ಬೀಸುವ, ಭೂಮಿ ತಂಪಾಗುವ ದಿನಗಳು. ಮನೆಯ ಹಿಂದಿನ ಹಾಡಿಯಲ್ಲಿ ಬೆಳಗಿನ ಹೊತ್ತಿನಲ್ಲಿ ಅಥವಾ ಮುಸ್ಸಂಜೆಯಲ್ಲಿ ‘ಹೋರಿ ಸತ್ತುಹೋಯಿತೋ’ ಹಕ್ಕಿ ಕೂಗತೊಡಗುತ್ತದೆ!
ಕೂಕೂ ಕೂಕೂ ಕೋಕೋ ಎಂದು ಅದು ಕೂಗಲು ಆರಂಭಿಸಿದಾಕ್ಷಣ, ಹಳ್ಳಿಯ ಜನ ಪದರು ಉದ್ಗರಿಸುತ್ತಾರೆ ‘ಹೋರಿ ಸತ್ತು ಹೋಯಿತೋ ಹಕ್ಕಿ ಕೂಗತ್ ಕಾಣಿ. ಇನ್ನು ಗದ್ದೆ ಹೂಟಿ ಮಾಡಲಕ್’. ಬಹುಶಃ ಸ್ಥಳೀಯವಾಗಿ ವಲಸೆ ಹೋಗುವ ಒಂದು ಪ್ರಭೇದದ ಕುಕೂ ಹಕ್ಕಿ ಅದು. ಬೇಸಗೆಯಲ್ಲಿ ಮಧುರ ದನಿಯಲ್ಲಿ, ಏರಿಳಿತ
ಗಳೊಂದಿಗೆ ಸಂಗಾತಿಯನ್ನರಸಲು ಕೂಗಲಾರಂಭಿಸಿದಾಗ, ಜನರಿಗೆ ಕೃಷಿ ಕೆಲಸದ ಸಂಕಟ-ಸವಾಲುಗಳು ನೆನಪಾಗುತ್ತವೆ.
ಈ ಹಕ್ಕಿಯ ಕೂಗಿನ ಹಿಂದೆ, ಹಳ್ಳಿಯ ಬಡ ಕೃಷಿಕರು ಅನುಭವಿಸಿದ ನೋವಿನ ಕಥೆಯಿದೆ. ಒಮ್ಮೆ ಬಡ ರೈತನೊಬ್ಬ ಒಂದು ಜೊತೆ ಕೋಣಗಳನ್ನು ಪಕ್ಕದ ಹಳ್ಳಿಯ ಬಲಾಢ್ಯ ರೈತನಿಂದ ಖರೀದಿಸುತ್ತಾನೆ; ಕಷ್ಟಪಟ್ಟು ಹಣ ಸಂಗ್ರಹಿಸಿ, ಬೆಲೆ ಮಾತನಾಡಿ, ಹಣ ಕೊಟ್ಟುಬರುತ್ತಾನೆ; ಒಂದು ಮಳೆಯಾದ ಕೂಡಲೇ ಕೋಣಗಳನ್ನು ಮನೆಗೆ ತಂದರಾಯಿತು, ಅಷ್ಟರಲ್ಲಿ ಕೊಟ್ಟಿಗೆಯ ದುರಸ್ತಿ ಮಾಡಿಸುವ ಎಂದುಕೊಳ್ಳುತ್ತಾನೆ. ಒಂದೆರಡು ವಾರಗಳ ನಂತರ ಹೋಗಿ ಕೇಳಿದರೆ, ‘ಕೋಣ ಸತ್ತುಹೋದವು’ ಎಂದು ಆ ಬಲಾಢ್ಯ ರೈತ ಈತನನ್ನು ಬೆದರಿಸಿ, ವಾಪಸು ಕಳಿಸುತ್ತಾನೆ. ಆ ಮಾತನ್ನು ಪ್ರಶ್ನಿಸುವ, ತಿರುಗಿ ಮಾತನಾಡುವ ಶಕ್ತಿ ಬಡರೈತನಲ್ಲಿ ಎಲ್ಲಿದೆ? ಹಳ್ಳಿಯ ಬಡರೈತರು ಸದಾಕಾಲ ಶೋಷಿತರು; ಬಲಾಢ್ಯ ರೈತರಿಗೆ ಎದುರಾಡದಂಥ ಬಡಪಾಯಿಗಳು. ಆ ಬಡರೈತನು, ಪಕ್ಕದ ಹಳ್ಳಿಯಿಂದ ವಾಪಸಾಗುತ್ತಾ, ತನ್ನ ಹಣವೂ ಹೋಯಿತು, ಇತ್ತ ಹೋರಿಯೂ ಸತ್ತುಹೋಯಿತು ಎಂದು ಖಿನ್ನನಾಗಿ, ಕಾಡಿನಲ್ಲೇ ಆತ್ಮಹತ್ಯೆ ಮಾಡಿಕೊಳ್ಳುತ್ತಾನಂತೆ.
ಆತನ ಆತ್ಮವು ‘ಹೋರಿ ಸತ್ತುಹೋಯಿತೋ ಹಣ ಕೊಟ್ಟಾಯ್ತೋ’ ಎಂದು ಕೂಗುತ್ತಾ, ಹಕ್ಕಿಯ ರೂಪ ತಾಳಿ, ಕೃಷಿ ಕೆಲಸ ಆರಂಭವಾಗುವ ಮುಂಚಿನ ವಾರಗಳಲ್ಲಿ ಸುತ್ತಾಡುತ್ತಿರುತ್ತದೆ ಎಂಬುದು ಹಳ್ಳಿಯ ಜನರ ನಂಬಿಕೆ. ಒಂದೆರಡು ತಿಂಗಳ ಕಾಲ ಮಾತ್ರ ಆ ಹಕ್ಕಿಯ ನೋವಿನ ಹಾಡು ಕೇಳುವಂಥದ್ದು; ಅದನ್ನು ಕೇಳಿದಾ
ಗಲೆಲ್ಲಾ, ಹಳ್ಳಿಯಲ್ಲಿ ಹಿಂದಿದ್ದ ಶೋಷಣೆ, ಬಡವರು ಬಲಾಢ್ಯರ ಗದ್ದೆಯಲ್ಲಿ ಬಿಟ್ಟಿಯಾಗಿ ಪ್ರತಿವರ್ಷ ಕೆಲಸ ಮಾಡುತ್ತಿದ್ದ ಪದ್ಧತಿ ಎಲ್ಲವೂ ನೆನಪಾಗುತ್ತವೆ. ಈಗ ಅಂಥ ದಬ್ಬಾಳಿಕೆ ಕಡಿಮೆಯಾಗಿದೆ ಎನ್ನಬಹುದು.
ವೈವಿಧ್ಯಮಯ ಕೊಕ್ಕರೆಗಳು ನಮ್ಮ ಹಳ್ಳಿಯ ಗದ್ದೆ ಬಯಲನ್ನು ಸಿಂಗರಿಸುವ ರೀತಿ ಅನನ್ಯ. ಬತ್ತದ ಬೆಳೆಗಾಗಿ ಗದ್ದೆ ಹೂಟಿ ನಡೆದು, ಇನ್ನೂ ನಾಟಿಯಾಗದೇ ಇರುವ ದಿನಗಳಲ್ಲಿ, ಗದ್ದೆಯ ತುಂಬಾ ನೀರು ನಿಂತು, ಪ್ರತಿಯೊಂದು ಗದ್ದೆಯೂ ವಿಶಾಲ ಕನ್ನಡಿಯಾಗಿ ಆಗಸದ ನೀಲಿಯನ್ನು ಪ್ರತಿಫಲಿಸುತ್ತಿರುತ್ತದೆ. ಆ ಗದ್ದೆಯಂಚಿನಲ್ಲಿ ಸಾಲಾಗಿ ಕುಳಿತುಕೊಳ್ಳುವ ಬಿಳೀ ಕೊಕ್ಕರೆಗಳ ಪ್ರತಿಬಿಂಬ ನೀರಿನಲ್ಲಿ ಮೂಡಿ, ಸುಂದರಚಿತ್ರವನ್ನು ಕಟ್ಟಿಕೊಡುತ್ತವೆ. ಒಮ್ಮೆಗೇ ಹಾರುವ ಹತ್ತಾರು
ಕೊಕ್ಕರೆಗಳು, ನೀರಲ್ಲಿ ಕಾಣುವ ಅವುಗಳ ಪ್ರತಿಬಿಂಬ ಗಳು ಪುಟ್ಟ ಕಾವ್ಯವನ್ನೇ ರೂಪಿಸುವ ಪರಿ ಅದ್ಭುತ.
ಆದರೆ, ಹಳ್ಳಿಯ ಕೊಕ್ಕರೆಗಳನ್ನು ಕೆಲವರು ಸಾಯಿಸುತ್ತಿದ್ದ ದಿನಗಳೂ ಇದ್ದವು! ಚರೆ ಕೋವಿಯಿಂದ ಒಂದು ಢಂ ಎನಿಸಿದರೆ, ಗದ್ದೆಯಂಚಿನಲ್ಲಿ ಕುಳಿತಿದ್ದ ನಾಲ್ಕಾರು ಕೊಕ್ಕರೆಗಳು ಒಮ್ಮೆಗೇ ಸತ್ತುಬಿದ್ದಾವು! ೧೯೭೦ರ ದಶಕದಲ್ಲಿ ಜಾರಿಗೊಂಡ ವನ್ಯಜೀವಿ ರಕ್ಷಣಾ ಕಾಯಿದೆಯಿಂದಾಗಿ, ಅಂಥ ಹಕ್ಕಿಬೇಟೆ ಬಹುಮಟ್ಟಿಗೆ ನಿಂತುಹೋಯಿತು. ಆದರೇನು ಮಾಡುವುದು, ೧೯೭೦ರ ದಶಕದಲ್ಲಿ ಆರಂಭಗೊಂಡ ಕ್ರಿಮಿನಾಶಕಗಳ ಬಳಕೆಯಿಂದಾಗಿ, ಬದುಕಿಗೆ ಗದ್ದೆಯನ್ನೇ ಆಶ್ರಯಿಸಿದ್ದ ಕೊಕ್ಕರೆಗಳಿಗೆ ಬೇರೊಂದೇ ತೆರನ ಅಪಾಯ ಒದಗಿದೆ. ಆದರೂ ಈಗಲೂ ಹಳ್ಳಿಯಲ್ಲಿ ಸಾಕಷ್ಟು ಕೊಕ್ಕರೆಗಳಿವೆ. ಹಿಂದೆ ನಮ್ಮೂರಿನಲ್ಲಿ ಸ್ಮಾಲ್ ಈಗ್ರೆಟ್, ಬಿಗ್ ಈಗ್ರೆಟ್, ಕ್ಯಾಟಲ್ ಈಗ್ರೆಟ್‌ಗಳು ಅಧಿಕವಾಗಿದ್ದವು.
ಈಗ ಅವುಗಳೊಂದಿಗೆ ಓಪನ್ ಬಿಲ್, ಬಣ್ಣದ ಕೊಕ್ಕರೆ, ಕಪ್ಪು ಐಬೀಸು, ಅಡು ಜಾಂಟ್ (ಅಪೂರ್ವಕ್ಕೆ), ಗ್ರೇ ಪೆಲಿಕನ್‌ಗಳೂ ಕಾಣಿಸಿಕೊಳ್ಳುತ್ತಿವೆ. ನಮ್ಮ ಪರಿಸರದಲ್ಲಿ ಕಳೆದ ೫ ದಶಕದಲ್ಲಿ ಅದೇನು ಬದಲಾವಣೆಯಾಯಿತೋ ಗೊತ್ತಿಲ್ಲ, ದೊಡ್ಡ ದೊಡ್ಡ ಕೊಕ್ಕರೆಗಳು ಸಹ ನಮ್ಮ ಹಳ್ಳಿಗೆ ಈಗ ವಲಸೆ ಬರತೊಡಗಿವೆ. ಇವನ್ನು ಕಂಡು ಸಂತೋಷ ವಾದರೂ, ಹಿಂದೆಂದೂ ಬಾರದ ಈ ಊರಿಗೆ ಅವು ಬರಬೇಕು ಅಂದರೆ, ಅವುಗಳ ಜೀವನಕ್ರಮದಲ್ಲಿ ವ್ಯತ್ಯಯವಾಗಿರಲೇಬೇಕು ಮತ್ತು ಅದು ನಿಜವಾಗಿದ್ದಲ್ಲಿ, ಒಟ್ಟೂ ಪರಿಸರದ ಹಿತದೃಷ್ಟಿಯಿಂದ ಇದು ಒಳ್ಳೆಯ ಬೆಳವಣಿಗೆಯಂತೂ ಅಲ್ಲ.
ನಮ್ಮ ಹಳ್ಳಿಯ ಜನರು ಹಕ್ಕಿಗಳ ಬೇಟೆಯಾಡಿ ತಿನ್ನುವುದು ಕಡಿಮೆ. ಮಳೆಗಾಲದಲ್ಲಿ, ಆಹಾರಕ್ಕೆ ತೀರಾ ಕೊರತೆಯಾದಾಗ, ಗೆರೆಹಕ್ಕಿಗಳು (ಗೀಜಗ)
ಒಮ್ಮೊಮ್ಮೆ ಬೇಟೆಗೆ ಬಲಿಯಾಗುವುದುಂಟು. ಆಷಾಢದ ದಿನಗಳು; ಮನೆಯ ಹಿಂದಿನ ಗದ್ದೆಯಂಚಿನ ೪ ತೆಂಗಿನ ಮರಗಳ ತುದಿಯಲ್ಲಿ ಒಂದಷ್ಟು ಗೆರೆಹಕ್ಕಿಗಳು ಸುಂದರ, ನಾಜೂಕಾದ ಗೂಡುಗಳನ್ನು ಕಟ್ಟುತ್ತಿದ್ದವು. ಪ್ರತಿದಿನ ಮಳೆ ಸುರಿವಂಥ ಕಾಲವದು; ಆ ಹಕ್ಕಿಗಳಿಗೂ ಪಾಪ ಆಹಾರದ ಕೊರತೆ. ಮನೆಯಂಗಳದಲ್ಲಿದ್ದ ಹುಲ್ಲುಕುತ್ರಿಯ ಬಳಿ ಬಂದು, ಬತ್ತ ಬಡಿದ ನಂತರ ಒಣಹುಲ್ಲಿನಲ್ಲಿ ಉಳಿದಿರುವ ಬತ್ತದ ಕಾಳನ್ನು ಹುಡುಕಿ ಹುಡುಕಿ ತಿನ್ನುತ್ತಿದ್ದವು. ಹಸುಗಳಿಗೆ ಹುಲ್ಲನ್ನು ಕುತ್ರಿಯ
ಬುಡದಿಂದಲೇ ತೆಗೆಯುವುದರಿಂದ, ನೆಲದ ಮೇಲೆ ಒಂದಷ್ಟು ಬತ್ತ ಬಿದ್ದಿರುತ್ತಿತ್ತು. ಹತ್ತಾರು ಗೆರೆಹಕ್ಕಿಗಳು ಅಲ್ಲಿ ಹುಲ್ಲನ್ನು ಹುಡುಕುವಾಗ, ಓರೆಯಾಗಿ ಅಲ್ಲೊಂದು ಬುಟ್ಟಿಯಿಟ್ಟು ದೂರದಲ್ಲಿ ಕುಳಿತ ಕುಯಿರನಾಯಕನು ಬುಟ್ಟಿಗೆ ಕಟ್ಟಿದ್ದ ಹಗ್ಗ ಎಳೆದು, ಆ ಹಕ್ಕಿಗಳನ್ನು ಹಿಡಿದೊಯ್ಯುತ್ತಿದ್ದ.
ಒಂದು ಬೆರಳಿನಷ್ಟಿರುವ ಆ ಹಕ್ಕಿಗಳನ್ನು ತಿಂದರೆ ಹಸಿವು ಅದೆಷ್ಟು ನೀಗೀತು ಎಂದು ಅವರಿವರು ಉದ್ಗರಿಸುತ್ತಿದ್ದರೂ, ಅಂದು ಕೃಷಿಕಾರ್ಮಿಕರಿಗಿದ್ದ ಹಸಿವು-
ಸಂಕಷ್ಟಗಳನ್ನು ಈ ವಿದ್ಯಮಾನ ಪ್ರತಿನಿಧಿಸುತ್ತದೆ ಎಂದೇ ನನ್ನಭಿಪ್ರಾಯ. ಈಚಿನ ದಶಕಗಳಲ್ಲಿ ಸರಕಾರ ಅಕ್ಕಿಯನ್ನು ಉಚಿತವಾಗೋ ಕಡಿಮೆ ಬೆಲೆಗೋ ಹಂಚುತ್ತಿರುವುದರಿಂದ, ಅಂಥ ಕಡು ಬಡತನ ತುಸು ಕಡಿಮೆಯಾಗಿದೆ, ಮಳೆಗಾಲದಲ್ಲೂ ಕೃಷಿ ಕಾರ್ಮಿಕರಿಗೆ ಊಟ ಸಿಗುತ್ತಿದೆ, ಅವರು ಗೆರೆಹಕ್ಕಿಯನ್ನು ಹಿಡಿದು ತಿನ್ನುವ ಅನಿವಾರ್ಯತೆ ದೂರಾಗಿದೆ.
ಹಗಲಿಡೀ ಹಾಡಿಯ ಮರದ ನೆರಳಿನಲ್ಲಿ ಕಳೆದು, ಸಂಜೆಯಾಗುತ್ತಲೇ ಬೇಟೆಗೆ ಹೊರಡುವ ಗುಮ್ಮ ಗೂಬೆಗಳು ಹಳ್ಳಿಯ ಬದುಕಿನ ಮೇಲೆ ಬೀರಿದ ಪರಿಣಾಮ ವಿಶಿಷ್ಟ. ಮನುಷ್ಯನಂತೆಯೇ ಕಣ್ಣುಗಳನ್ನು ಹೊರಳಿಸಿ ಅತ್ತಿತ್ತ ನೋಡುವ ಅವನ್ನು ಕಂಡರೆ ಮಕ್ಕಳಿಗೆಲ್ಲಾ ಭಯ; ಮಕ್ಕಳನ್ನು ಹೆದರಿಸಲು ದೊಡ್ಡವರು ಗುಮ್ಮದ ಹೆಸರನ್ನು ಪದೇ ಪದೆ ಹೇಳಿ, ಗುಮ್ಮ ಎಂದರೆ ಅಶುಭಸೂಚಕ ಎಂಬ ಭಾವನೆಯೇ ನಮ್ಮೂರಲ್ಲಿದೆ. ಗೂಬೆಯ ಇನ್ನೊಂದು ಪ್ರಭೇದವಾದ ಭೂತಹಕ್ಕಿಯ ಕೂಗು ಭಯ ಹುಟ್ಟಿಸುವಂತಿದ್ದು, ಮುಂಜಾನೆ ಅದು ಕೂಗಿದರೆ, ಸನಿಹದ ಮನೆಯಲ್ಲಿ ಸಾವು ಸಂಭವಿಸುತ್ತದೆ ಎಂಬ ಮೂಢನಂಬಿಕೆಯೂ ಇದೆ!
ಚೌಳಿಹರ ಎಂಬ ಇನ್ನೊಂದು ಪ್ರಭೇದದ, ದೊಡ್ಡ ಗಾತ್ರದ ಗೂಬೆ ನಡುರಾತ್ರಿಯಲ್ಲಿ ಕೂಗಿದರೆ, ಅದನ್ನು ಕೇಳಿದ ಧೈರ್ಯಶಾಲಿಗಳೂ ಒಮ್ಮೆಗೆ ನಡುಗಬೇಕು- ತೀಕ್ಷ್ಣ ಸ್ವರ, ದೀರ್ಘ ಪ್ರಲಾಪದ ಆ ಕೂಗು ಅಷ್ಟು ವಿಶಿಷ್ಟ. ನಮ್ಮೂರಿನಲ್ಲಿ ಮೀನು ಗೂಬೆ, ಕೊಂಬಿನ ಗೂಬೆ, ಚಿಟ್ಟು ಗೂಬೆ, ಭೂತ ಹಕ್ಕಿ, ಚೌಳಿಹರ ಹೆಸರಿನ ಐದು
ಪ್ರಭೇದದ ಗೂಬೆಗಳಿರುವುದನ್ನು ಗುರುತಿಸಿದ್ದೇನೆ. ಆದರೆ, ಈಚಿನ ೨ ದಶಕಗಳಲ್ಲಿ, ಹಳ್ಳಿಯ ಸುತ್ತಲಿನ ಸಹಜಕಾಡು ಸಾಕಷ್ಟು ಕಮ್ಮಿಯಾಗಿ ಅಕೇಶಿಯಾ
ಹಬ್ಬಿರುವುದರಿಂದ, ಇಂಥ ಎಲ್ಲಾ ಜೀವಿಗಳ ಸಂಖ್ಯೆ ಕ್ರಮೇಣ ಕಡಿಮೆಯಾಗುತ್ತಿರುವುದಂತೂ ನಿಜ.