ಅಲೆಮಾರಿಯ ಡೈರಿ
ಸಂತೋಷಕುಮಾರ ಮೆಹೆಂದಳೆ
ಇಲ್ಲಿ ಲೆಕ್ಕ ಹಾಕಿ ನೀರು ಹಿಡಿದುಕೊಂಡು ಬದುಕೋದು ಕಲಿತರೆ ಮಾತ್ರ ಬದುಕು ಸಾಧ್ಯ’ ಎಂದಿದ್ದ ಅನಾಮತ್ತು ಹತ್ತು ಸಾವಿರ ಅಡಿಗೂ ಎತ್ತರದ ಮೇಲೆ, ಫೈನ್ ವೃಕ್ಷದ ಮರದ ಹಲಗೆಗಳ ಮನೆಯಲ್ಲಿ ಬೆಚ್ಚಗೆ ಕಾಲು ಚಾಚಿ ಕೂತು ಆ ಮೂಲೆಯ ಊರಿನ ಬಗ್ಗೆ ಮಾತಾಡುತ್ತಿದ್ದವ. ನಾನೂ ಅನಿರೀಕ್ಷಿತವಾಗಿ ಆ ಮನೆಗೆ ಗೆಸ್ಟ್ ಆಗಿದ್ದು.
2008ರ ಸರ್ಕುಂಡಿ ಚಾರಣದ ಕೊನೆಯ ಎರಡ್ಮೂರು ದಿನಗಳಿದ್ದವು. ದಿನಕ್ಕೆ ಸರಾಸರಿ ಹದಿನೈದು ಕಿ.ಮೀ. ಇದ್ದಿದ್ದು ಕೊನೆಗೆ ವಾಪಸ್ಸು ಬರುವಾಗ ಐದಾರಕ್ಕಿಳಿದಿತ್ತು. ಬೇಸ್ಕ್ಯಾಂಪ್ ನಲ್ಲಿ ಒಂದೇ ಸಲ ಮೂರ್ನಾಲ್ಕು ತಂಡ ನುಗ್ಗಿದರೆ ನಿರ್ವಹಣೆ ಮತ್ತು ಸ್ಥಳಾವಕಾಶ ಪೂರೈಕೆ ಸುಲಭ ಸಾಧ್ಯವಿರುವುದಿಲ್ಲವಲ್ಲ.
ಹಾಗಾಗಿ ಇಳಿಯುವ ತಂಡಗಳಿಗೆ ನಿಗದಿತ ಅಂತರಕ್ಕಿಂತಲೂ ಕಡಿಮೆ ಅಂತರ ಗುರಿ ನಿರ್ಧರಿಸಿರುತ್ತಾರೆ. ಹಾಗಾಗಿ ಅಲ್ಲೇ ಸಿಗುವ ಸಮಯದಲ್ಲಿ, ಇಲ್ಲೇ ವಾಪಸ್ಸು ಎಡಕ್ಕೆ ತಿರುಗಿ ಮೇಲೇರಿದರೆ ಹೀಗೆ ಒಂದು ಮನೆ ಇದೆ. ವಿಭಿನ್ನ ಎಂದೆಲ್ಲ ಗೈಡ್ ಮಾಹಿತಿ ತೆಗೆದುಕೊಟ್ಟಿದ್ದ. ಸೋ ಬೇಸ್ಕ್ಯಾಂಪ್ಗೆ ಹಿಂದಿರುಗುವುದು ಬಿಟ್ಟು ಮತ್ತೆ ಮೇಲೆಕ್ಕೇರಿ ಬಂದುಬಿಟ್ಟಿದ್ದೆ. ಅಂದು ದಿನ ಎದರೂ ಕಳೆದು ಅಲ್ಲಿಂದ ಮಧ್ಯಾಹ್ನವೇ ಹೊರಟು, ಮರುದಿನ ರಾತ್ರಿಗೆ ಮನಾಲಿ ತಲುಪುವ ಯೋಜನೆ ನನ್ನದಾಗಿತ್ತು. ಆದರೆ ಮೇಲೇರಬೇಕಿದ್ದ ನಾಲ್ಕು ತಾಸಿನ ದಾರಿ ಇನ್ನು ಬಾಕಿ ಇರುವಾಗಲೇ ವಾತಾವರಣ ತೀವ್ರ ಹದಗೆಟ್ಟು ಮಳೆ, ವಿಪರೀತ ಹಿಮ, ಮೂಳೆ ಕೊರೆಯುವ ಚಳಿ ಎಲ್ಲಾ ಸೇರಿ, ಅಂಥಾ ಸಂದರ್ಭದಲ್ಲಿ ತತಕ್ಷಣಕ್ಕೆ ಲಭ್ಯವಿರುವ ಹತ್ತಿರದ ಮನೆಯ ಕಡೆ ಕಾಲು ಹರಿಸಿದ್ದೆ.
ಅಲ್ಲೇ ಹೀಗೆ ಪೆಯಿಂಗ್ ಗೆಸ್ಟ್ಗಳಾಗೋದು ಮಾಮೂಲಿ. ಮೇಲೆ ಹೋಗಬೇಕಾದ ಮನೆಯ ಬದಲಿಗೆ ಸ್ವಲ್ಪ ಕೆಳಗಿದ್ದ ಮೂವತ್ತು ಮನೆಗಳ ಹಳ್ಳಿ ವಾಂಗ್ಜುಲಾ. ಅಕ್ಷರಶಃ ಹತ್ತು ಸಾವಿರ ಅಡಿಯ ಆಸುಪಾಸಿನಲ್ಲಿದೆ. ವ್ಯವಹಾರ, ಅಹಾರ ಎಲ್ಲದಕ್ಕೂ ಕೆಳಗಿಳಿಯಬೇಕು. ಚಾರಣಿಗರು, ಮೇಲಕ್ಕೇರಲಾಗದೆ ನಿಂತು ಬೀಡುವ ಹೈಕರ್ಸು ಮತ್ತು ನನ್ನಂಥವರು ಅವರ ಗೆಸ್ಟುಗಳು. ಆವತ್ತಿನ ಊಟ, ವಸತಿ, ಸ್ನಾನ ಎಲ್ಲ ಸೇರಿ ಬೆಳಗಿನವರೆಗಿನ ವಗಾತಿಗೆ ಹೆಚ್ಚೆಂದರೆ ಮುನ್ನೂರು ರುಪಾಯಿ.
ಸುತ್ತ ಹಿಮಾಚ್ಛಾದಿತ ಕಣಿವೆ. ರಣ ಗಾಳಿ ಮತ್ತು ಚಳಿ. ಆಗೀಗ ಸುರಿವ ಹಿಮದ ಹುಡಿ. ಹೊರಗಿನ ಮರದ ಅಡ್ಡಣಿಗೆಯ ಪಟ್ಟಿಯ ಮೇಲೆ ಮೂತು ನೆನೆದಿದ್ದ ಬಟ್ಟೆ, ಬೂಟು ಕಳಚಿ ಬೆಚ್ಚಗೆ ಬೇರೆ ಬಟ್ಟೆ ಧರಿಸುವ ಹೊತ್ತಿಗೆ, ದಾಲ್ಚಿನ್ನಿ ಬೆರೆಸಿದ ಕಡುಕಪ್ಪು ಚಹ ಆ ಕ್ಷಣಕ್ಕೆ ಸ್ವರ್ಗವೆನಿಸಿದ್ದು ಸುಳ್ಳಲ್ಲ. ಟಿ.ವಿ. ಪೇಪರು, ಮೊಬೈಲು, ಯಾವುದೆಂದರೆ ಯಾವ ಸಂಪರ್ಕವೂ ಇಲ್ಲದಿದ್ದರೂ ಮನೆ
ಜನವೆಲ್ಲ ಇದ್ದ ಚಿಕ್ಕ ಕೊಠಡಿಯೊಳಗೆ ಅವರದ್ದೇ ಪಹಾಡಿ ಭಾಷೆಯಲ್ಲಿ ಕಚಪಚ ಎನ್ನುತ್ತ ಹರಟೆಯಲ್ಲಿತೊಡಗಿದ್ದರು.
ಬಾಗಿಲಿಗೆ ತೆರೆದುಕೊಂಡಿರುವ ಅಡುಗೆ ಮನೆಯ ಶಾಖ ಒಳಭಾಗ ಬೆಚ್ಚಗಿಡುತ್ತಿದೆ. ಪಕ್ಕದಲ್ಲಿಯೇ ಬೂದಿ ತುಂಬಿದ ದೊಡ್ಡ ಬುಟ್ಟಿ. ಇದ್ಯಾಕೆ ಎಂದೆ? ಬೆಳಗ್ಗೆಗೆ ಬೇಕು ಎಂದ. ಅರ್ಥವಾಗದೆ ಸುಮ್ಮನಾಗಿದ್ದೆ. ಯಾವ ಪೂರ್ವಾಗ್ರಹವಿಲ್ಲದೆ ಜೀವನ ಅನುಭವಿ ಸುತ್ತಿರುವವರ ಸಂತಸದ ಹಿಂದೆ ಪರಿಶ್ರಮದ ಬದುಕು. ರಾತ್ರಿಗೆ ಸಪ್ಪೆ ತೋವೆ, ಮುದ್ದೆ ಬಿಸಿ ಅನ್ನ, ಜತೆಗೆ ನನಗ್ಯಾವತ್ತೂ ಹಿಡಿಸದ ಹಿಟ್ಟುಬಡಕ ಪುಲ್ಖಾ. ಅದನ್ನು ಹೇಗೆ ತಿನ್ನುತ್ತಾರೋ ಗೊತ್ತಿಲ್ಲ. ನನ್ನ ಬ್ಯಾಕ್ಪ್ಯಾಕ್ನಲ್ಲಿ ಇರುವ ಬಿಸ್ಕೇಟುಗಳೆ ಅನ್ನದಾತರು.
ಟೀ ಮಾಡಿಸಿಕೊಂಡು ಬಿಸ್ಕೀಟು ಅದ್ದಿಕೊಂಡು ತಿಂದು ಮಲಗಿದ್ದೆ. ಅವರು ಮಿಕ ಮಿಕ ನೋಡುತ್ತಿದ್ದರು. ಮನಸ್ಸಿಗೆ ಬಂದಂತೆ ವ್ಯವಸ್ಥೆಯನ್ನು ಬಯ್ಯುತ್ತಾ ಬದುಕುತ್ತಿರುವ ನಮಗೆ, ಕಡಿದಾದ ಅಂಚಿನಲ್ಲಿ ಪ್ರಕೃತಿಯ ರೌದ್ರತೆಯ ನಡುವೆಯೂ ಹೇಗೆ ಜೀವನ ತೆವಳುತ್ತಿರುತ್ತದೆ ಎನ್ನುವುದರ ಅರಿವಿಲ್ಲ. ನಮ್ಮದೇನಿದ್ದರೂ ನಲ್ಲಿ ತಿರುಗಿಸಿದರೆ ನೀರು ಬರಬೇಕೆನ್ನುವ ಧಾವಂತ. ನೀರೇ ಇಲ್ಲದಿದ್ದರೆ..? ಈ ಅನುಭವಕ್ಕೆ ಪಕ್ಕಾದದ್ದು ಮರುದಿನ ಬೆಳಗ್ಗೆ. ತೀರ ನಾಲ್ಕೂವರೆಗೆ ಬೆಳಗಾಗುವ ತುಂಬ ಚೆಂದದ ಪರಿಸರ. ಎಲ್ಲಿ ನೋಡಿದರೂ ಕ್ಲಿಕ್ಕಿಸಲು ಪೂರಕ ಎನ್ನಿಸುವ ಅಲ್ಲಲ್ಲಿ ಹಸಿರು ಮತ್ತು ಆಕಾಶದ ಅದ್ಭುತ ನೀಲಿ ಬಾನಿನ ಸಂವಹನ. ಪರ್ವತಗಳು ಮಾತ್ರ ಸ್ವಚ್ಛ.
ಹಿಮ ಬಿದ್ದು ಹಾಳಾಗುವ ಮೇಲ್ಮೈ ಅದರದ್ದು. ಸುತ್ತಲೂ ಎರಡಡಿ ಸಮತಟ್ಟು ಕೊರೆದು ನಿರ್ಮಿಸಿರುವ ಏರಿಳಿತದ ಹೊಲ ಎನ್ನುವ ಪಟ್ಟಿಗಳಲ್ಲಿ ಆಲೂ, ಹಸಿರು ಕಡಲೆ ಬೆಳೆ. ತಗಡಿನ ಶೀಟುಗಳ ಎರಡಂತಸ್ತಿನ ಮನೆಯ ಅಂಗಳದಲ್ಲಿ ಎಲ್ಲ ಕಡೆ ಯಿಂದಲೂ ಮನೆಯ ಕಡೆ ಮುಖಮಾಡಿದ್ದ ಪ್ಲಾಸ್ಟಿಕ್ ಪೈಪುಗಳು. ಹತ್ತಾರು ಕಡೆಯಿಂದ ಮನೆಗೆ ರಕ್ತನಾಳದಂತೆ ಸಂಪರ್ಕಿಸಿ ದ್ದವು. ಉಳಿದ ಪರಿಸರ ಹೊಸದಲ್ಲವಾದರೂ ಈ ಪೈಪುಗಳ ವ್ಯವಸ್ಥೆ ಅರ್ಥವಾಗಲಿಲ್ಲ.
ಗುಡ್ಡದ ಆ ತುದಿ ಈ ತುದಿಯಿಂದ ಸಂಪರ್ಕವೇರ್ಪಡಿಸಿದ್ದ ಪೈಪುಗಳದ್ದು ಅಪ್ಪಟ ಲೋಕಲ್ ಎಂಜಿನಿಯರಿಂಗ್. ಏನಿದು ಎಂದೆ ಮನೆಯ ಹುಡುಗನಿಗೆ. ಅವನು ಬಾಯಿಗೆ ಇಟ್ಟು ಕಚ್ಚುತ್ತ ಹಲ್ಲುಜ್ಜುತ್ತಿದ್ದ, ಕಡ್ಡಿ ತೆಗೆಯುತ್ತಾ, ಎದ್ದು ಬಂದ. ಇಲ್ಲಿ ಕರೆಂಟು, ನೀರು ಏನಿದ್ದರೂ ನಾವೇ ಮಾಡಿಕೊಳ್ಳಬೇಕಾದ ವ್ಯವಸ್ಥೆ. ಅದಕ್ಕೆ ಅದೋ ಅಲ್ಲಿ ಕಾಣುತ್ತಿದೆಯಲ್ಲ ಅಲ್ಲಿಯವರೆಗೆ ನೀರು ಸಹಜ ವಾಗಿ ಹರಿದು ಬರುತ್ತೆ. ಅದಕ್ಕೊಂದು ದಾರಿ ಮಾಡಿ ಅದರ ಬಾಯಿಗೆ ಪೈಪು ಹಾಕಿದ್ದೇವೆ. ಬೇಸಿಗೆಯಲ್ಲಿ ಹಿಮ ಕರಗಿ ಹರಿಯುತ್ತಲೇ ಇರುತ್ತದೆ. ನೀರು ಅಷ್ಟು ಸಮಸ್ಯೆಯಾಗೋದಿಲ್ಲ.
ಅದರೆ ಮಳೆ ಮತ್ತು ಚಳಿಗಾಲದಲ್ಲಿ ಪರಿಸ್ಥಿತಿ ಗಂಭೀರ. ಬಿಸಿಲೇರಿದರೂ ಶಾಖ ಇರೋದಿಲ್ಲ ಹಾಗಾಗಿ ಹಿಮ ಕರಗುವುದೇ ಇಲ್ಲ. ತೀರ ಬೆಳಗಿನ ಹನ್ನೊಂದರ ನಂತರ ಇಷ್ಟಿಷ್ಟೇ ಹಿಮ ಕರಗಲಾರಂಭಿಸಿದೊಡನೆ ಆ ಕಡೆಯ ಪೈಪಿನಲ್ಲಿ ಬೆಳಗ್ಗೆ ಹನ್ನೊಂದರಿಂದ ಮಧ್ಯಾಹ್ನ ಮೂರರವರೆಗೆ ನಿಧಾನಕ್ಕೆ ನೀರು ಹರಿಯುತ್ತದೆ. ಈ ಕಡೆಯದ್ದು ಸಹಜ ಹರಿವಿನಲ್ಲಿ ಹನಿಹನಿಯಾಗಿ ಇತ್ತ ಕಡೆ ಬರುತ್ತಿರುತ್ತದೆ. ಹಾಗೆ ಹರಿದು ಬರುವ ಗಂಟೆಗೊಮ್ಮೆ ದಿಕ್ಕು ಬದಲಿಸುತ್ತದೆ. ಅದಕ್ಕೆ ಎಲ್ಲಿ ಕರುಗುವ ಅವಕಾಶ ಇದೆಯೋ ಅಲ್ಲ ಪೈಪು ಹಾಕಿಟ್ಟಿದ್ದೇವೆ.
ಒಂದಾದ ಮೇಲೊಂದರಂತೆ ಬಿಸಿಲು ಬಿದ್ದಲ್ಲ ಕರಗಿ ನಿಧಾನವಾಗಿ ಕೆಳಕ್ಕೆ ಹರಿಯುತ್ತದೆ. ಮಧ್ಯೆ ಸಣ್ಣ ಸಣ್ಣ ಹಿಮ ಕುಸಿತ, ಮಣ್ಣು ಕುಸಿತ ಕಾಮನ್ನು. ಆಗೆಲ್ಲ ಮೇಲೆ ಹತ್ತಿ ಸರಿಪಡಿಸಿ ಪೈಪಿನ ದಿಶೆ ಬದಲಿಸುತ್ತೇವೆ. ಮತ್ತೊಂದು ಬಕೇಟು ತುಂಬುತ್ತದೆ. ಹೀಗೆ ದಿನದ ನೀರಿನ ಅವಶ್ಯಕತೆಯನ್ನು ಪೂರೈಸಿಕೊಳ್ಳುತ್ತಾ ದಿನಕ್ಕೆ ಲಭ್ಯವಾಗುವ ಐದಾರು ತಾಸಿನ ವ್ಯವಸ್ಥೆ ಮಾಡಿಕೊಳ್ಳಲು ಹನಿ ಹನಿ ನೀರು ಹಿಡಿದು ಹಳ್ಳ ಮಾಡಿಕೊಳ್ಳುವ ಯೋಜನೆಗಾಗಿ ಈ ಪೈಪುಗಳ ಬಲೆ ಮನೆಯ ಸುತ್ತಲೂ.
ಇದೆಲ್ಲ ಸರಿ. ಬಿಸಿಲು ಬಿದ್ದಾಗ ಆಗ ಹಿಮ ಕರಗಿ ನೀರು ಸಿಗುತ್ತೆ. ಅದರೆ ಮಳೆ ಚಳಿಯಲ್ಲಿ ನೀರು ಕರಗುವುದೇ ಇಲ್ವಲ್ಲ. ಪೈಪಿ ನಲ್ಲೂ ಹಿಮ ಗಡ್ಡೆಯಾಗಿಬಿಡುತ್ತದಲ್ಲ ಆಗ..? ಎಂದೆ, ‘ನೀರು ಇಲ್ಲ. ಏನೂ ಇಲ್ಲ. ಕಮೋಡಿಗೂ ಕೂಡಿಟ್ಟಿರುವ ಬೂದಿಯೇ ಗತಿ.’ ಎಂದು ಬಿಟ್ಟ. ಅಯ್ಯೋ ಮತ್ತೆ ನೀರೆ ಇಲ್ಲದಿದ್ದರೆ..? ಅದರಲ್ಲೂ ನಮಗೆ ಬೆಳಗ್ಗೆ ಪೇಪರ್ ಉಪಯೋಗಿಸಿ ಅಭ್ಯಾಸ ಬಿಡಿ, ಟ್ರೈಯ್ಯೂ ಮಾಡಿಲ್ಲದ ಪರಿಸ್ಥಿತಿ. ಹಿಂದಿನ ದಿನ ನೋಡಿದ್ದ ಬೂದಿಯ ಬುಟ್ಟಿಯ ರಹಸ್ಯ ಗೊತ್ತಾಗಿತ್ತು. ಬೆಳಗ್ಗೆಗೆ ಬಿಸಿ ಬಿಸಿ ಬೂದಿಯೇ ಸ್ವಚ್ಛತಾ ಅಭಿಯಾನಕ್ಕೆ ಸಹಾಯಕ. ಬುಡಕ್ಕೂ ಹಿತವಂತೆ.
ಇಷ್ಟೆಲ್ಲ ಕಷ್ಟ ಪಟ್ಟು ಇಲ್ಲ ಯಾಕಿರಬೇಕು. ಕೆಳಗೆ ಊರಿನ ಹತ್ತಿರ ಮನೆ ಕಟ್ಟಿಕೊಂಡು ಏನಾದರೂ ಮಾಡಬಹುದಲ್ಲ..? ಹೀಗೆ ಏನೂ ಇಲ್ಲದ, ಊರೂ ಎನ್ನಿಸಿಕೊಳ್ಳದ, ಅಂಗಡಿ, ಗಾಡಿ, ಸಂತೆ ಏನಿಲ್ಲದಿದ್ದರೂ ಯಾಕಿzರೆ..? ಏನಂಥಾ ಆಕರ್ಷಣೆ..?
‘ಇಷ್ಟು ಎತ್ತರದಲ್ಲಿ ಮನೆ ಕಟ್ಟಿಕೊಳ್ಳುವುದರಿಂದ ತೆರಿಗೆ ಬೀಳುವುದಿಲ್ಲ. ಭೂಮಿ ಕಟ್ಟಿಗೆ ಫ್ರೀ ಸಿಗುತ್ತದೆ. ಹತ್ತು ಸಾವಿರ ಅಡಿ ಮೇಲಕ್ಕೆ ಇರೋದಾದರೆ ಅದಕ್ಕೆ ತಗಲುವ ಖರ್ಚು ಏನೇನೂ ಅಲ್ಲ. ಸರಕಾರ ಇವರ ಮೇಲೆ ಸಾಮಾನ್ಯವಾಗಿ ಯಾವ ತೆರಿಗೆನೂ ಹಾಕೋದಿಲ್ಲ. ಕೆಳಗೆ ಹೋದಷ್ಟೂ ರೇಟು ಜಾಸ್ತಿ. ನಮ್ಮ ಕುರಿ, ಕುದುರೆ, ಕಾರ್ಪೇಟ್ ಬಿಜಿನೆಸ್ಸು, ಆಗಿಗೊಮ್ಮೆ ಕೆಳಗೆ ಹೋಗಿ ಸಾಮಾನು ತರುವ ಸಹಜ ಅಭ್ಯಾಸ..’ ಎಂದೆಲ್ಲ ಅವನು ಮಾತಾಡುತ್ತಿದ್ದರೆ ನಾನು ತೆಪ್ಪಗಾಗಿಬಿಟ್ಟಿದ್ದೆ.
ಇನ್ನುಳಿದದ್ದು ಕೇಳುವ ಮೊದಲೇ ಮನಸ್ಸು ಬಗ್ಗಡವಾಗಿತ್ತು. ನಾಲ್ಕಾರು ಜನರಿರುವ ಪುಟಾಣಿ ಕುಟುಂಬ, ಸ್ಥಳೀಯ ಇಂಥ ಕೋಟಲೆಗಳ ಮಧ್ಯೆ ನನ್ನಂಥ ಅಲೆಮಾರಿಗಳಿಗೆ ದಾಲ್ಚಿನ್ನಿ ಚಹ, ಮುದ್ದೆ ಅನ್ನ, ಮ್ಯಾಗಿ ಮಾಡಿಕೊಡುತ್ತಾ ಆಗೀಗ ಒಂದಿಷ್ಟು ಗಳಿಸುತ್ತಾರೆ. ಕೆಲವೊಮ್ಮೆ ವಿದೇಶಿಗರೂ ಬಂದರೆ ಜಾಕ್ಪಾಟ್ ಹೊಡೆಯುವುದೂ ಇದೆ. ಮನೆಯಲ್ಲಿ ಕೂತೆದ್ದು ಬೆಳಗಿನ ಶೌಚಕ್ಕೆ ಬೆಚ್ಚಗಿನ ಬೂದಿಯನ್ನು ಬಳಸುವ ಕಲ್ಪನೆಯಲ್ಲಿ, ಒಂದು ಪುಟಿಕೆ ನೋಟುಗಳನ್ನಿರಿಸಿ ಸುಮ್ಮನೆ ಕೈಕುಲುಕಿ ಹೊರಡುವಾಗ, ..ಇನ್ನೆಂದೂ ನಲ್ಲಿ ತಿರುಗಿಸಿಟ್ಟು ಹಲ್ಲುಜ್ಜುವುದೂ, ಶೇವ್ ಮಾಡುವುದೂ ಮಾಡಲಾರೆ..’ಎಂದೆ ಪ್ರಾಮಾಣಿಕವಾಗಿ.
ಅವನು ಬರಿದೇ ನಕ್ಕ. ಪ್ರಕೃತಿ ಎಲ್ಲ ಕಲಿಸುತ್ತಿರುತ್ತದೆ. ಕಲಿಯಬೇಕಷ್ಟೆ. ಹಾಗೊಂದು ಅನುಭವದ ನಂತರವೂ ಬದಲಾಗದಿದ್ದರೆ, ಯಾವಾಗ ಯಾರ ಬುಡಕ್ಕೆ ನೀರು ಅಲ್ಲಲ್ಲ ಬೂದಿ ಬರುತ್ತದೋ ಯಾರಿಗೆ ಗೊತ್ತು.