ಮೂರ್ತಿ ಪೂಜೆ
ಪಕ್ಷದ ಕೇಂದ್ರ ಸಂಸದೀಯ ಮಂಡಳಿಗೆ ಯಡಿಯೂರಪ್ಪ ನೇಮಕಗೊಳ್ಳುವುದರೊಂದಿಗೆ ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಪವರ್ ಸೆಂಟರ್ ಮೇಲೆ ದ್ದಂತಾಗಿದೆ. ಹಾಗೆ ನೋಡಿದರೆ ಕಳೆದೊಂದು ವರ್ಷದಿಂದ ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಶಕ್ತಿ ಕುಸಿಯುತ್ತಾ ಬಂದಿತ್ತು.
ಪ್ರಧಾನಿ ನರೇಂದ್ರ ಮೋದಿ ಪದೇಪದೆ ವಂಶಪಾರಂಪರ್ಯ ರಾಜಕಾರಣದ ವಿರುದ್ಧ ಗುಡುಗುತ್ತಿರುವುದರಿಂದ ಇನ್ನು ಯಡಿಯೂರಪ್ಪ ಯುಗ ಮುಗಿಯಿತು ಅಂತ ಬಿಜೆಪಿಯ ಬಹುತೇಕರು ನಿರ್ಧರಿಸಿದ್ದರು. ಹೀಗಾಗಿ ಏನೇ ಕೆಲಸವಿದ್ದರೂ ಬಿ.ಎಲ. ಸಂತೋಷ್, ಕೇಂದ್ರ ಸಚಿವ ಪ್ರಲ್ಹಾದ್ ಜೋಷಿಯವರಿಗೆ ಅಂಟಿಕೊಳ್ಳುವ ಪ್ರವೃತ್ತಿ ಶುರುವಾಗಿತ್ತು.
ಈ ಕೆಲಸ ರಾಜ್ಯ ಸರಕಾರದ ಮಟ್ಟದ ಇರಲಿ, ಕೇಂದ್ರ ಮಟ್ಟದ ಇರಲಿ, ಒಟ್ಟಿನಲ್ಲಿ ಬಿ.ಎಲ. ಸಂತೋಷ್ ಮತ್ತು ಪ್ರಲ್ಹಾದ್ ಜೋಷಿ ಬಳಿ ಹೋದರೆ ಕೆಲಸ ಆಗುತ್ತದೆ ಎಂಬ ಭಾವನೆ ಬಹುತೇಕರಲ್ಲಿ ದಟ್ಟವಾಗಿತ್ತು. ಇವರಿಬ್ಬರ ಮಧ್ಯೆ ನಿಂತು ಯಡಿಯೂರಪ್ಪ ನಮ್ಮ ಹಿತ ಕಾಯುವುದಿರಲಿ, ತಮ್ಮ ಹಿತವನ್ನೂ ರಕ್ಷಿಸಿಕೊಳ್ಳಲಾಗದ ಸ್ಥಿತಿಗೆ ತಲುಪಿದ್ದಾರೆ ಅಂತ ಅವರ ಆಪ್ತರೆನ್ನಿಸಿಕೊಂಡ ವರೇ ಮಾತನಾಡತೊಡಗಿದರು.
ಇದಕ್ಕೆ ಸಾಕ್ಷಿ ಎಂಬಂತೆ ತಮ್ಮ ಪುತ್ರ ವಿಜಯೇಂದ್ರ ಅವರಿಗೆ ವಿಧಾನ ಪರಿಷತ್ ಚುನಾವಣೆಯ ಟಿಕೆಟ್ ಕೊಡಿ ಅಂತ ಯಡಿಯೂರಪ್ಪ ಲಾಬಿ ಮಾಡಿದರೂ ಪ್ರಯೋಜನವಾಗಿರಲಿಲ್ಲ. ಇಂತಹ ಕಾಲದ ಬಿಜೆಪಿ ವರಿಷ್ಠರು ಯಡಿಯೂರಪ್ಪ ಅವರನ್ನು ಕೇಂದ್ರ ಸಂಸದೀಯ ಮಂಡಳಿಗೆ ನೇಮಕ ಮಾಡಿದ ಮೇಲೆ ಕ್ರಮೇಣ ಚಿತ್ರ ಬದಲಾಗ ತೊಡಗಿದೆ. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಮತ್ತೊಂದು ಪವರ್ ಸೆಂಟರ್ ಆಗಿ ಕೂರುವುದು ನಿಶ್ಚಿತವಾಗಿದೆ.
****
ಅಂದ ಹಾಗೆ, ವಯಸ್ಸಿನ ಕಾರಣ ನೀಡಿ ಯಡಿಯೂರಪ್ಪ ಅವರನ್ನು ಸಿಎಂ ಹುದ್ದೆಯಿಂದ ಕೆಳಗಿಳಿಸಿದ್ದ ಬಿಜೆಪಿ ವರಿಷ್ಠರು
ಇದ್ದಕ್ಕಿದ್ದ ಹಾಗೆ ಅವರಿಗೆ ಈ ಉಡುಗೊರೆ ಯಾಕೆ ಕೊಟ್ಟರು? ಈ ಪ್ರಶ್ನೆಗೆ ಉತ್ತರ ಹುಡುಕುವುದು ಕಷ್ಟವಲ್ಲ. ಕರ್ನಾಟಕದ
ರಾಜಕಾರಣದಲ್ಲಿ ಬಂದ ಬಿಜೆಪಿ ಏನೇ ಸರ್ಕಸ್ಸು ಮಾಡಿದರೂ ಕಾಂಗ್ರೆಸ್ ಪಕ್ಷದ ಗ್ರಾಫ್ ಏರುತ್ತಲೇ ಇದೆ. ಆಗಸ್ಟ್ ೩ರಂದು
ದಾವಣಗೆರೆಯಲ್ಲಿ ನಡೆದ ಸಿದ್ದರಾಮಯ್ಯ ಜನ್ಮೋತ್ಸವ ಕಾರ್ಯಕ್ರಮ ಅದಕ್ಕೆ ಸಾಕ್ಷಿ. ಈ ಉತ್ಸವಕ್ಕೆ ಜನ ಬಂದ ರೀತಿಯೇ ಬಿಜೆಪಿ ವರಿಷ್ಠರ ನಿದ್ದೆಗೆಡಿಸಿದೆ.
ಅಷ್ಟೇ ಅಲ್ಲ, ಸಿದ್ದರಾಮಯ್ಯ ಅನುಸರಿಸುತ್ತಿರುವ ಜಾತಿಸೂತ್ರಕ್ಕೆ ಪ್ರತಿಯುತ್ತರ ನೀಡುವ ಶಕ್ತಿ ಇದ್ದರೆ ಅದು ಯಡಿಯೂರಪ್ಪ ಅವರಿಗೆ ಮಾತ್ರ ಎಂಬ ತೀರ್ಮಾನಕ್ಕೆ ಬರುವಂತೆ ಮಾಡಿದೆ. ಹಾಗೆ ನೋಡಿದರೆ, ಮೋದಿ-ಅಮಿತ್ ಶಾ ಜೋಡಿಗೆ ಯಡಿಯೂರಪ್ಪ ಅವರ ಬಗ್ಗೆ ಅಕ್ಕರಾಸ್ಥೆ ಏನಿಲ್ಲ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಯಡಿಯೂರಪ್ಪ ಅವರನ್ನು ಸೈಡ್‌ಲೈನಿಗೆ ತಳ್ಳುವುದು ಕಷ್ಟ ಅಂತ ಅರಿವಾಗಿದೆ. ಇದೇ ಕಾರಣಕ್ಕಾಗಿ ಆಗಸ್ಟ್ ೪ರಂದು ಕರ್ನಾಟಕಕ್ಕೆ ಬಂದ ಅಮಿತ್ ಶಾ ಸುಮಾರು ೪೦ ನಿಮಿಷಗಳ ಕಾಲ ಚರ್ಚಿಸಿದ್ದರು. ಈ ಚರ್ಚೆಯ ಸಂದರ್ಭದಲ್ಲಿ ಅವರು ತಮಗೆ ನೀಡಿದ ಭರವಸೆ ಯಡಿಯೂರಪ್ಪ ಅವರಿಗೂ ಸಮಾಧಾನ ತಂದಿದೆ. ಹೀಗಾಗಿ ಅಮಿತ್ ಶಾ ಬಳಿ, ರಾಜ್ಯದಲ್ಲಿ ಬಿಜೆಪಿ ಮರಳಿ ಅಧಿಕಾರಕ್ಕೆ ತರಲು ನಾನು ಸರ್ವ ಪ್ರಯತ್ನ ಮಾಡುತ್ತೇನೆ ಎಂದಿದ್ದಾರೆ.
ಇದಾದ ಕೆಲವೇ ದಿನಗಳಲ್ಲಿ ಯಡಿಯೂರಪ್ಪ ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕಗೊಂಡಿದ್ದಾರೆ. ಅರ್ಥಾತ್, ಸಿದ್ದರಾಮಯ್ಯ ಅವರ ಬರ್ತ್‌ಡೇ ಸಮಾವೇಶ ಕಾಂಗ್ರೆಸ್ ಪಕ್ಷಕ್ಕಷ್ಟೇ ಅಲ್ಲ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಟಿಆರ್
ಪಿಯನ್ನೂ ಹೆಚ್ಚಿಸಿದೆ, ಮತ್ತದರ ಫಲಿತಾಂಶ ಕಣ್ಣೆದುರಿಗಿದೆ.
****
ಈಗ ಪಕ್ಷದ ಸಂಸದೀಯ ಮಂಡಳಿಗೆ ನೇಮಕವಾಗಿರುವುದರಿಂದ ಯಡಿಯೂರಪ್ಪ ಅವರಿಗೆ ‘ಫುಲ್ ಪವರ್’ ಬಂದಿದೆ ಅಂತೇನಲ್ಲ. ಸಂಸದೀಯ ಮಂಡಳಿಯಲ್ಲಿ ಪ್ರಧಾನಿ ಮೋದಿ ಹಾಗೂ ಅಮಿತ್ ಶಾ ಅವರ ಮಾತೇ ನಿರ್ಣಾಯಕವಾದ್ದರಿಂದ
ಉಳಿದ ಬಹುತೇಕರು ಡಮ್ಮಿಗಳು ಅಷ್ಟೇ. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ರಕ್ಷಣಾ ಸಚಿವ ರಾಜ್‌ನಾಥ್ ಸಿಂಗ್ ಹೇಳಿಕೇಳಿ ‘ಮೋದಿ-ಶಾ’ ಇಶಾರೆಯಂತೆ ನಡೆಯುತ್ತಾರೆ. ಉಳಿದವರು ಹೆಚ್ಚೆಂದರೆ ತಮಗಿರುವ ಫೀಡ್ ಬ್ಯಾಕಿನ ಆಧಾರದ ಮೇಲೆ ಸಲಹೆ ಕೊಡಬಹುದು. ಹೀಗಾಗಿ ಸಂಸದೀಯ ಮಂಡಳಿ ಸದಸ್ಯರಾಗಿ ಯಡಿಯೂರಪ್ಪ ಹೆಚ್ಚು ಮಾಡುವುದೇನೂ ಇಲ್ಲ. ಸಾಲದೆಂಬಂತೆ ಸಂಸದೀಯ ಮಂಡಳಿ ಸಭೆ ನಡೆಯುವುದೇ ಅಪರೂಪ. ಅದು ಸೇರುವ ಮುನ್ನವೇ ಇತ್ಯರ್ಥವಾಗಬೇಕಾದ ವಿಷಯ ಯಾವುದು ಅಂತ ಮೋದಿ-ಶಾ ನಿರ್ಧರಿಸಿರುತ್ತಾರೆ. ಹೀಗಾಗಿ ಸಂಸದೀಯ ಮಂಡಳಿಯ ಮೆಂಬರ್‌ಷಿಪ್ಪು ಯಡಿಯೂರಪ್ಪ ಅವರ ಪೊಲಿಟಿ ಕಲ್ ‘ಷಿಪ್’ಗೆ ಲಾಭದಾಯಕವೇನೂ ಅಲ್ಲ.
****
ಇಷ್ಟಾದರೂ ಯಡಿಯೂರಪ್ಪ ಅವರಿಗೆ ಕೇಂದ್ರ ಸಂಸದೀಯ ಮಂಡಳಿಯಲ್ಲಿ ಜಾಗ ಸಿಕ್ಕಿರುವುದರಿಂದ ರಾಜ್ಯ ಬಿಜೆಪಿಯಲ್ಲಿ ಮತ್ತೊಂದು ಸುತ್ತಿನ ಆಂತರಿಕ ಸಂಘರ್ಷ ಶುರುವಾಗುವುದು ಗ್ಯಾರಂಟಿ. ಯಾಕೆಂದರೆ ಕರ್ನಾಟಕದಲ್ಲಿ ಪಕ್ಷವನ್ನು ಮರಳಿ ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಅಂತ ಅಮಿತ್ ಶಾಗೆ ಅವರು ಹೇಳಿದ್ದಾರಲ್ಲ? ಈ ಕೆಲಸ ಮಾಡಲು ಅವರು ತಮ್ಮ ಕಾರ್ಯ ತಂತ್ರವನ್ನು ನೆಚ್ಚಿಕೊಳ್ಳುತ್ತಾರೆಯೇ ಹೊರತು ಬಿ.ಎಲ್.ಸಂತೋಷ್ ಅವರ ಕಾರ್ಯತಂತ್ರವನ್ನಲ್ಲ. ಹೀಗೆ ಅವರು ತಮ್ಮ ಕಾರ್ಯತಂತ್ರದ ಅನುಸಾರ ಹೆಜ್ಜೆ ಇಡುವಾಗ ಸಹಜವಾಗಿಯೇ ಅದು ಸಂತೋಷ್ ಅವರ ಕಾರ್ಯತಂತ್ರಕ್ಕೆ ಡಿಕ್ಕಿ ಹೊಡೆಯುತ್ತದೆ.
ಯಾರೇನೇ ಹೇಳಲಿ, ಯಡಿಯೂರಪ್ಪ ಅವರು ಅಧಿಕಾರದಿಂದಿಳಿದ ನಂತರ ಪಕ್ಷ ಹಾಗೂ ಸರ್ಕಾರದ ಮೇಲೆ ಸಂತೋಷ್
ದೊಡ್ಡ ಹಿಡಿತ ಸಾಧಿಸಿದ್ದಾರೆ. ಈಗ ಒಂದಷ್ಟು ಶಕ್ತಿಯೊಂದಿಗೆ ಯಡಿಯೂರಪ್ಪ ಮೇಲೆದ್ದು ನಿಂತಿರುವುದರಿಂದ ತಮಗೆ ಎಲ್ಲಿ ಡಿಚ್ಚಿ ಕೊಡಲು ಯತ್ನಿಸುತ್ತಾರೆ ಅಂತ ಬಿ.ಎಲ್. ಸಂತೋಷ್ ಅವರಿಗೆ ಗೊತ್ತಿದೆ. ಹೀಗಾಗಿ ಯಡಿಯೂರಪ್ಪ ದಾಳಿ ನಡೆಸುವ ಜಾಗಗಳನ್ನು ಗುರುತಿಸಿ ಅವರು ತಡೆಬೇಲಿ ಹಾಕುತ್ತಾರೆ. ಇಂತಹ ತಡೆಬೇಲಿ ಕಂಡರೆ ಯಡಿಯೂರಪ್ಪ ಗುರುಗುಡುವುದು ಸಹಜ.
ಅಲ್ಲಿಗೆ ರಾಜ್ಯ ಬಿಜೆಪಿಯಲ್ಲಿ ಆಂತರಿಕ ಸಂಘರ್ಷ ಭುಗಿಲೇಳುತ್ತದೆ. ಪರಿಣಾಮ? ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಲೆನೋವು ಮತ್ತಷ್ಟು ಹೆಚ್ಚುತ್ತದೆ. ಅವರ ಕುರ್ಚಿ ಚಳಿ ಜ್ವರದಿಂದ ನಡುಗುತ್ತಲೇ ಇರುತ್ತದೆ.
****
ಅಂದ ಹಾಗೆ, ಪಕ್ಷ ಮತ್ತು ಸರಕಾರದ ಈಗಿನ ಸ್ವರೂಪ ಸಂತೋಷ್ ಇಶಾರೆಯಂತೆ ಇರುವುದರಿಂದ ಇದು ಬದಲಾಗಬೇಕು ಅನ್ನುವುದೇ ಯಡಿಯೂರಪ್ಪ ಅವರ ಮೊದಲ ಅಜೆಂಡಾ. ಎಲ್ಲಕ್ಕಿಂತ ಮುಖ್ಯವಾಗಿ ಸರಕಾರದ ಮೇಲೆ ಹಿಡಿತ ಸಾಧಿಸಲು ಬಯಸುವ ಯಡಿಯೂರಪ್ಪ ಅವರು ಸಂಪುಟದಲ್ಲಿರುವ ತಮ್ಮ ವಿರೋಽಗಳ ಕಾಲಿಗೆ ಹಗ್ಗ ಕಟ್ಟಲು ಬಯಸುತ್ತಿದ್ದಾರೆ. ವಸತಿ ಸಚಿವ ಸೋಮಣ್ಣ, ಭಾರಿ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ ಐದಾರು ಮಂತ್ರಿಗಳನ್ನು ಕಂಡರೆ ಅವರಿಗೆ ಸಹನೆಯಿಲ್ಲ.
ಈ ಪೈಕಿ ಸೋಮಣ್ಣ, ಮುರುಗೇಶ್ ನಿರಾಣಿ ತಮ್ಮ ಪುತ್ರ ವಿಜಯೇಂದ್ರ ಬೆಳವಣಿಗೆಗೆ ಅಡ್ಡಿ ಅನ್ನುವುದು ಅವರ ಅನುಮಾನ. ಇದೇ ಕಾರಣಕ್ಕಾಗಿ ಸೋಮಣ್ಣ,ನಿರಾಣಿ ತಮ್ಮ ವರ್ಚಸ್ಸು ಹೆಚ್ಚಿಸಿಕೊಳ್ಳುವ ಯಾವ ಕಾರ್ಯಕ್ಕಿಳಿದರೂ ಬೊಮ್ಮಾಯಿ ಮೂಲಕ ಅದಕ್ಕೆ ಬ್ರೇಕ್ ಹಾಕಲು ಯತ್ನಿಸುತ್ತಾರೆ. ಹೀಗಾಗಿ ಸಚಿವ ಸಂಪುಟದ ಅಂಗೀಕಾರ ಪಡೆಯಲು ಅವರೇನೇ ಯೋಜನೆಗಳನ್ನು ರೂಪಿಸಿ ಮಂಡಿಸಲಿ, ಅದು ಅಂಗೀಕಾರ ಪಡೆಯುವ ಬದಲು ಪದೇ ಪದೆ ಮುಂದಕ್ಕೆ ಹೋಗುತ್ತದೆ. ತುಂಬ ಸಲ ಅವರು ಸಂಪುಟದ ಮುಂದೆ ತರಲೆತ್ನಿಸುವ ವಿಷಯಗಳು ಅಜೆಂಡಾ ಪಟ್ಟಿಗೇ ಸೇರುವುದಿಲ್ಲ. ಇದರಿಂದಾಗಿ ಸೋಮಣ್ಣ, ಮುರುಗೇಶ್
ನಿರಾಣಿಯಂತಹ ಸೀನಿಯರ್ ಮಂತ್ರಿಗಳ ತಾಳ್ಮೆ ಕದಡಿಹೋಗಿದೆ.
ಹೀಗಾಗಿ ಸಂಸದೀಯ ಮಂಡಳಿ ಸದಸ್ಯರಾಗಿ, ವರಿಷ್ಠರಿಂದ ಹೊಸ ಟಾಸ್ಕು ಪಡೆದುಬಂದಿರುವ ಯಡಿಯೂರಪ್ಪ ಕಾಟ ಮತ್ತಷ್ಟು ಹೆಚ್ಚಾಗುತ್ತದೆ ಎಂಬುದು ಇಂಥವರ ಅನುಮಾನ. ಹೀಗೆ ಯಡಿಯೂರಪ್ಪ ಅವರ ತಾಪಕ್ಕೆ ಗುರಿಯಾಗಿರುವ ಬಹುತೇಕರು ಬಿ.ಎಲ್.ಸಂತೋಷ್ ಅವರ ಜತೆ ಗುರುತಿಸಿಕೊಂಡವರು. ಇಂಥವರಿಗೆ ಯಡಿಯೂರಪ್ಪ ಕಾಟ ಅತಿಯಾದರೆ ಸಂತೋಷ್ ನೋಡಿಕೊಂಡು ಸುಮ್ಮನಿರಲು ಸಾಧ್ಯವೇ? ಪರಿಣಾಮ? ಸರಕಾರದ ಮಟ್ಟದಲ್ಲಿ ಯಡಿಯೂರಪ್ಪ- ಸಂತೋಷ್ ಸಂಘರ್ಷ ಇನ್ನಷ್ಟು ತಾರಕಕ್ಕೇರುತ್ತದೆ.
****
ಕುತೂಹಲದ ಸಂಗತಿ ಎಂದರೆ, ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಪವರ್ ಹೆಚ್ಚಾಗಿರುವುದರಿಂದ ತುಂಬ ಖುಷಿ ಯಾಗಿರುವುದು ಕಾಂಗ್ರೆಸ್ ಪಕ್ಷವಲ್ಲ. ಯಾಕೆಂದರೆ ಬಿಜೆಪಿಯಲ್ಲಿ ಯಡಿಯೂರಪ್ಪ ಅವರ ಶಕ್ತಿ ಕುಗ್ಗಿದಷ್ಟೂ ತಮಗೆ ಲಾಭ ಅನ್ನುವುದು ಕಾಂಗ್ರೆಸ್ ನಾಯಕರ ಲೆಕ್ಕಾಚಾರ. ಬಿಜೆಪಿಯಲ್ಲಿ ಯಡಿಯೂರಪ್ಪ ಮೂಲೆಗುಂಪಾದರೆ ಪ್ರಬಲ ಲಿಂಗಾಯತ ಸಮುದಾಯ ಬಿಜೆಪಿಗೆ ತಿರುಗೇಟು ನೀಡುತ್ತದೆ. ಅದರ ಲಾಭ ಒಂದು ಮಟ್ಟದದರೂ ಕಾಂಗ್ರೆಸ್ ಗೆ ದೊರಕುತ್ತದೆ. ಹೀಗೆ ಅಹಿಂದ ಪ್ಲಸ್ ಲಿಂಗಾಯತ ಮತಗಳು ಕ್ರೋಡೀಕರಣಗೊಂಡರೆ ತಾವು ಸರಳ ಬಹುಮತದೊಂದಿಗೆ ಅಧಿಕಾರಕ್ಕೆ ಬರಬಹುದು ಎಂಬುದು ಕಾಂಗ್ರೆಸ್ ಥಿಂಕ್ ಟ್ಯಾಂಕ್ ಲೆಕ್ಕಾಚಾರ. ಆದರೆ ಬದಲಾದ ಸನ್ನಿವೇಶದಲ್ಲಿ ಯಡಿಯೂರಪ್ಪ ಅವರ ಗೆಟಪ್ಪು ಬದಲಾಗಿರುವು ದರಿಂದ ಲಿಂಗಾಯತ ಮತಗಳು ಕಾಂಗ್ರೆಸ್ ಭಾವಿಸಿದಷ್ಟು ಪರಿಣಾಮಕಾರಿಯಾಗಿ ಒಡೆಯುವುದಿಲ್ಲ.
ಆದರೆ ಯಡಿಯೂರಪ್ಪ ಅವರಿಗೆ ಸಿಕ್ಕ ಲೇಟೆಸ್ಟು ಗೌರವ ಲಿಂಗಾಯತ ಮತದಾರರನ್ನು ಉಬ್ಬಿಸಿಲ್ಲ. ಹೀಗಾಗಿ ಬಿಜೆಪಿ ಪಾಳಯ ಕೂಡಾ ದೊಡ್ಡ ಮಟ್ಟದಲ್ಲಿ ಲಿಂಗಾಯತರ ಬೆಂಬಲ ಪಡೆಯುವುದು ಕಷ್ಟ. ಹೀಗಾಗಿ ಕಾಂಗ್ರೆಸ್ ಮತ್ತು ಬಿಜೆಪಿ ಗಳಿಕೆ ಎಂಭತ್ತ ರಿಂದ ತೊಂಭತ್ತು ಸೀಟುಗಳ ಗಡಿ ತಲುಪಿದರೆ ಜಾಸ್ತಿ. ಹಾಗಾದಾಗ ಕರ್ನಾಟಕದಲ್ಲಿ ಮತ್ತೊಮ್ಮೆ ಅತಂತ್ರ ವಿಧಾನಸಭೆ
ರೂಪುಗೊಳ್ಳುವುದು ನಿಶ್ಚಿತ.ಪರಿಣಾಮ? ೨೦೨೩ರ ಚುನಾವಣೆಯ ನಂತರ ತಾನೇ ಕಿಂಗ್‌ಮೇಕರ್ ಎಂಬುದು ಜೆಡಿಎಸ್
ಲೆಕ್ಕಾಚಾರ. ಅಂದರೆ? ಬಿಜೆಪಿಯಲ್ಲಿ ಹೆಚ್ಚಿರುವ ಯಡಿಯೂರಪ್ಪ ಅವರ ಪವರ್, ಮೂರನೇ ಬಾರಿ ಮುಖ್ಯಮಂತ್ರಿಯಾಗುವ ತಮ್ಮ ಕನಸನ್ನು ನನಸು ಮಾಡುತ್ತದೆ ಅಂತ ಎಚ್.ಡಿ. ಕುಮಾರಸ್ವಾಮಿ ಲೆಕ್ಕಾಚಾರ. ಒಂದು ಬೆಳವಣಿಗೆ ಎಷ್ಟು ಲೆಕ್ಕಾಚಾರಗಳು ಬದಲಾಗುವಂತೆ ಮಾಡುತ್ತದೆ ಎಂಬುದಕ್ಕೆ ಇದು ಸಾಕ್ಷಿ.