Saturday, 14th December 2024

ಬಿಜೆಪಿ ವರಿಷ್ಠರ ಮೌನದ ಹಿಂದಿನ ಮರ್ಮವೇನು ?

ವರ್ತಮಾನ

maapala@gmail.com

ರಾಜ್ಯ ಸರಕಾರದ ಆಡಳಿತ ವೈಖರಿಗೆ ವರಿಷ್ಠರು ಅಸಮಾಧಾನಗೊಂಡಿರುವುದು ಸ್ಪಷ್ಟ. ಆದರೆ, ಏನೂ ಕ್ರಮ ಕೈಗೊಳ್ಳದೆ ಏಕೆ ಮೌನವಾಗಿದ್ದಾರೆ ಎಂಬುದೇ ಯಕ್ಷ ಪ್ರಶ್ನೆ. ಪಕ್ಷವನ್ನು ಅಧಿಕಾರಕ್ಕೆ ತಂದ ಕಾರ್ಯಕರ್ತರು ರಾಜ್ಯದಲ್ಲಿರುವಾಗ ವರಿಷ್ಠರು ಸುಮ್ಮನಿರಲಂತೂ ಸಾಧ್ಯವಿಲ್ಲ. 

2019 ರಲ್ಲಿ ಮೈತ್ರಿ ಸರಕಾರ ಉರುಳಿಸಿ ಬಿಜೆಪಿಯನ್ನು ಅಧಿಕಾರಕ್ಕೆ ತಂದು ಮುಖ್ಯಮಂತ್ರಿಯಾದ ಬಿ.ಎಸ್.ಯಡಿಯೂರಪ್ಪ ಅವರನ್ನು 2021ರಲ್ಲಿ ಅಧಿಕಾರದಿಂದ ಕೆಳಗಿಳಿಸಿ ಬಸವರಾಜ ಬೊಮ್ಮಾಯಿ ಅವರನ್ನು ಮುಖ್ಯಮಂತ್ರಿ ಮಾಡುವಾಗ ಬಿಜೆಪಿ ವರಿಷ್ಠರಿಗೆ ಸ್ಪಷ್ಟ ಗುರಿಗಳಿದ್ದವು. ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಅವರಿಗೆ ಪರ್ಯಾಯವಾಗಿ ಮತ್ತೊಂದು ಶಕ್ತಿ ಕೇಂದ್ರ ವನ್ನು ಸ್ಥಾಪಿಸಿ, ಒಂದಕ್ಕಿಂತ ಹೆಚ್ಚು ಪ್ರಬಲ ನಾಯಕರನ್ನು ಸೃಷ್ಟಿ ಮಾಡುವುದು ಮತ್ತು 2023ರಲ್ಲಿ ಮತ್ತೆ ರಾಜ್ಯದಲ್ಲಿ ಅಧಿಕಾರಕ್ಕೆ ಬರಲು ಅಗತ್ಯ ವೇದಿಕೆ ಸಿದ್ಧಪಡಿಸಿಕೊಳ್ಳುವುದು. ಈ ಕಾರಣಕ್ಕಾಗಿ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲು ಎರಡು ಬಾರಿಯೂ ಕಾರಣರಾದ ಯಡಿಯೂ ರಪ್ಪ ಅವರನ್ನು ಎರಡನೇ ಬಾರಿಯೂ ನಿಷ್ಠುರವಾಗಿ ನಡೆಸಿಕೊಂಡಿತು.

ಬಿಜೆಪಿಯಲ್ಲಿ ವ್ಯಕ್ತಿಗಿಂತ ಪಕ್ಷ ಮುಖ್ಯ ಎಂಬುದನ್ನು ಮತ್ತೊಮ್ಮೆ ಸ್ಪಷ್ಟ ಪಡಿಸಿತು. ಆರಂಭದಲ್ಲಿ ಆ ನಿರೀಕ್ಷೆ ಈಡೇರುವ ಲಕ್ಷಣಗಳು ಕಾಣಿಸಿ ಕೊಳ್ಳಲಾರಂಭಿಸಿತು. ಆದರೀಗ ಬಿಜೆಪಿ ವರಿಷ್ಠರ ನಡೆ ನೋಡಿದರೆ ರಾಜ್ಯದ ಬಗ್ಗೆ ಇದ್ದ ಭರವಸೆ ಕಳೆದುಕೊಂಡಂತೆ ಕಾಣಿಸುತ್ತಿದೆ. ರಾಜ್ಯದ ಬಿಜೆಪಿ ನಾಯಕರಿಂದ ತಮ್ಮ ನಿರೀಕ್ಷೆ ಈಡೇರುವ ಲಕ್ಷಣಗಳು ಅವರಿಗೆ ಕಾಣಿಸುತ್ತಿಲ್ಲ. ಪಕ್ಷ ಅಽಕಾರದಲ್ಲಿದ್ದರೂ ಸಂಘಟನೆಯನ್ನು ಬಲಪಡಿಸುವ ಕಾರ್ಯ ಸಮರ್ಪಕವಾಗಿ ನಡೆಯುತ್ತಿಲ್ಲ.

ರಾಜ್ಯದ ನಾಯಕರು ಹೊರಗಿನಿಂದ ಬಂದವರಿಗೆ ಆದ್ಯತೆ ನೀಡಿ ಪಕ್ಷದಲ್ಲೇ ಇದ್ದು ಅದನ್ನು ಕಟ್ಟಿ, ಬೆಳೆಸುವಲ್ಲಿ ಶ್ರಮಿಸಿದವರನ್ನು ಮೂಲೆಗುಂಪು ಮಾಡಿದ್ದೇ ಇದಕ್ಕೆ ಕಾರಣ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ದಕ್ಷಿಣ ಕನ್ನಡ ಜಿಲ್ಲೆ ಬೆಳ್ಳಾರೆ ಬಳಿ ಪ್ರವೀಣ್ ನೆಟ್ಟಾರು ಹತ್ಯೆ ಬಳಿಕ ಸಂಭವಿಸಿದ ವಿದ್ಯಮಾನಗಳು, ಬಿಜೆಪಿಯ ವಿವಿಧ ಮೋರ್ಚಾಗಳ ಪದಾಧಿಕಾರಿಗಳ ರಾಜೀನಾಮೆಯೇ ಇದನ್ನು ಸಾಬೀತುಪಡಿಸುತ್ತದೆ.

ಏಕೆಂದರೆ, ಆ ವೇಳೆ ರಾಜೀನಾಮೆಗೆ ಮುಂದಾದ ಬಹುತೇಕರು ಮೊದಲಿನಿಂದಲೂ ಪಕ್ಷದಲ್ಲಿ ಇದ್ದವರು. ಮತ್ತೊಂದೆಡೆ ಬಿಜೆಪಿ ಸರಕಾರದ ಆಡಳಿತ ವೈಖರಿಯೂ ತೃಪ್ತಿಕರವಾಗಿಲ್ಲ. ಹಾಗೆಂದು ಸರಕಾರ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಿಲ್ಲ ಎಂದೇನಲ್ಲ. ಬಸವರೊಜ ಬೊಮ್ಮಾಯಿ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುತ್ತಿದ್ದಂತೆ ರೈತರ ಮಕ್ಕಳಿಗೆ ವಿದ್ಯಾರ್ಥಿ ವೇತನ ನೀಡುವ ವಿದ್ಯಾನಿಧಿ ಯೋಜನೆ ಜಾರಿಗೆ ತಂದರು. ಮಾಸಾಶನ ಹೆಚ್ಚಿಸಿದರು. ನಂತರ ಬಜೆಟ್ ನಲ್ಲೂ ಹಲವು ಉತ್ತಮ ಕಾರ್ಯಕ್ರಮಗಳನ್ನು ಘೋಷಿಸಿದರು. ಅದನ್ನು ಅನುಷ್ಠಾನಕ್ಕೆ ತರುವ ಪ್ರಯತ್ನಗಳೂ ತ್ವರಿತವಾಗಿ ನಡೆಯುತ್ತಿವೆ. ಆದರೆ, ಅದಕ್ಕಿಂತ ಹೆಚ್ಚಾಗಿ ಸರಕಾರದ ವಿರುದ್ಧ ಆರೋಪಗಳೇ ಹೆಚ್ಚು ರಾರಾಜಿಸುತ್ತಿವೆ.

40 ಪರ್ಸೆಂಟ್ ಕಮಿಷನ್ ಆರೋಪ ಸೇರಿದಂತೆ ವಿವಿಧ ಹಗರಣಗಳು, ಸರಕಾರದ ನೇಮಕ ಅಕ್ರಮಗಳು, ವರ್ಗಾವಣೆ
ದಂಧೆ, ಇತ್ತೀಚೆಗಿನ ಮತದಾರರ ಪಟ್ಟಿ ಪರಿಷ್ಕರಣೆ ಅಕ್ರಮ ಮತ್ತಿತರೆ ವಿಚಾರಗಳಿಂದಾಗಿ ಬಿಜೆಪಿ ಸರಕಾರದ ಬಗ್ಗೆ ಧನಾತ್ಮಕ
ಪರಿಣಾಮಗಳಿಗಿಂತ ಋಣಾತ್ಮಕ ಪರಿಣಾಮಗಳೇ ಹೆಚ್ಚಾಗುತ್ತಿವೆ. ಇದರಲ್ಲಿ ರಾಜ್ಯ ಬಿಜೆಪಿ ನಾಯಕರ ಪಾಲೂ ಇದೆ. ಆರೋಪಗಳು ಬಂದಾಗ ಅದನ್ನು ತಳ್ಳಿಹಾಕಿ, ಆರೋಪ ಸುಳ್ಳು ಎಂದು ಸಾಬೀತುಪಡಿಸುವುದಕ್ಕಿಂತ ಹಿಂದೆ ಕಾಂಗ್ರೆಸ್
ಸರಕಾರದಲ್ಲಿ ಅಕ್ರಮಗಳು ನಡೆದಿಲ್ಲವೇ ಎಂದು ಪ್ರಶ್ನಿಸುವ ಮೂಲಕ ಆರೋಪಗಳನ್ನು ಸಮರ್ಥಿಸಿಕೊಳ್ಳುವುದಕ್ಕೆ ಆದ್ಯತೆ
ನೀಡಲಾಗುತ್ತಿದೆ. ಋಣಾತ್ಮಕ ಪರಿಣಾಮಗಳು ಹೆಚ್ಚಾಗಲು ಇದೂ ಒಂದು ಕಾರಣ.

ಇಲ್ಲಿ ಮತ್ತೊಂದು ವಿಚಾರವನ್ನು ಪ್ರಸ್ತಾಪಿಸಲೇ ಬೇಕು. ಬಿಜೆಪಿ ಶಕ್ತಿಯುತವಾಗಿ ಬೆಳೆಯಲು ಯಡಿಯೂರಪ್ಪ ಎಷ್ಟು ಕಾರಣವೋ, ಅದಕ್ಕಿಂತ ಮುಖ್ಯವಾಗಿ ತಳಮಟ್ಟದ ಕಾರ್ಯಕರ್ತರು ಕಾರಣ. ಸರಕಾರದ ಯೋಜನೆಗಳನ್ನು ಜನರಿಗೆ
ತಲುಪಿಸಿ ಅವರಲ್ಲಿ ಪಕ್ಷದ ಬಗ್ಗೆ ಒಳ್ಳೆಯ ಅಭಿಪ್ರಾಯ ಬರಲು ಈ ಕಾರ್ಯಕರ್ತರ ಶ್ರಮವೇ ಕಾರಣವಾಗಿದೆ. ಈ ಕೆಲಸವನ್ನು
ಈಗಲೂ ಕಾರ್ಯಕರ್ತರು ಸಮರ್ಪಕವಾಗಿ ಮಾಡುತ್ತಿದ್ದಾರಾದರೂ ಅವರು ರಾಜ್ಯ ಬಿಜೆಪಿ ಸರಕಾರದ ಬಗ್ಗೆ ಗಂಭೀರವಾಗಿ
ಪರಿಗಣಿಸುತ್ತಲೇ ಇಲ್ಲ. ಅವರ ಗುರಿ ಏನಿದ್ದರೂ ನರೇಂದ್ರ

ಮೋದಿ ನೇತೃತ್ವದ ಕೇಂದ್ರ ಸರಕಾರವೇ ಆಗಿದೆ. ಹೀಗಾಗಿ ಜನರಿಗೆ ಕೇಂದ್ರದ ಬಗ್ಗೆ ಇರುವಷ್ಟು ಒಳ್ಳೆಯ ಅಭಿಪ್ರಾಯಗಳು
ರಾಜ್ಯ ಸರಕಾರದ ಬಗ್ಗೆ ಇಲ್ಲ. ಇದಕ್ಕೆ ಕಾರಣ ಕಾರ್ಯಕರ್ತರಿಗೆ ಪಕ್ಷದ ರಾಜ್ಯ ನಾಯಕರು ಮತ್ತು ಸ್ಥಳೀಯ ಮುಖಂಡರ
ಮೇಲಿರುವ ಸಿಟ್ಟು. ಅನ್ಯ ಪಕ್ಷಗಳಿಂದ ಬಂದವರು, ತಮ್ಮ ಹಿಂಬಾಲಕರು, ತಮಗೆ ಬಹುಪರಾಕ್ ಹೇಳುವವರನ್ನು
ಹೊರತು ಪಡಿಸಿ ಪಕ್ಷಕ್ಕಾಗಿ ನಿಷ್ಠೆಯಿಂದ ದುಡಿಯುವ, ಪಕ್ಷಕ್ಕೆ ಏನಾದರೂ ಸಮಸ್ಯೆಯಾಗುತ್ತದೆ ಎಂದಾದರೆ ಅದನ್ನು
ನಿಷ್ಠುರವಾಗಿ ಹೇಳುವ ಕಾರ್ಯಕರ್ತರನ್ನು ಈ ನಾಯಕರು, ಸ್ಥಳೀಯ ಮುಖಂಡರು ಕಡೆಗಣಿಸಿದ್ದಾರೆ.

ಹೀಗಾಗಿ ಸರಕಾರದ ಬಗ್ಗೆ ಜನರಲ್ಲಿ ಒಳ್ಳೆಯ ಅಭಿಪ್ರಾಯ ಮೂಡಿಸುವ ಕಾರ್ಯಕರ್ತರು ತಮ್ಮ ಪಾಡಿಗೆ ತಾವು ಎನ್ನು ವಂತಿದ್ದಾರೆ. ರಾಜ್ಯ ಸರಕಾರದ ಬಗ್ಗೆ ಜನರಲ್ಲಿ ಸಕಾರಾತ್ಮಕ ಭಾವನೆ ಇಲ್ಲದಿರಲು ಇದು ಪ್ರಮುಖ ಕಾರಣವಾಗಿದೆ.
ಹೀಗಾಗಿ ಸಂಘಟನಾತ್ಮಕವಾಗಿಯೂ ಯಾವುದೇ ಪರಿಣಾಮ ಉಂಟಾಗಿಲ್ಲ. ಯಡಿಯೂರಪ್ಪ ಅವರಿಗೆ ಪರ್ಯಾಯ ಶಕ್ತಿಕೇಂದ್ರವನ್ನು ಸೃಷ್ಟಿಸುವ ಪ್ರಯತ್ನ ವಿಫಲವಾಗಿದೆ.

ಎರಡನೇ ಹಂತದ ನಾಯಕರನ್ನು ಬೆಳೆಸಲು ಅವಕಾಶವೇ ಸಿಕ್ಕಿಲ್ಲ. ಹೀಗಾಗಿ ಮತ್ತೆ ಯಡಿಯೂರಪ್ಪ ಅವರಿಗೆ ಮಣೆ ಹಾಕಲೇ ಬೇಕಾದ ಪರಿಸ್ಥಿತಿ ನಿರ್ಮಾಣವಾಗಿ ಅವರಿಗೆ ಕೇಂದ್ರ ಸಂಸದೀಯ ಮಂಡಳಿ ಮತ್ತು ಚುನಾವಣಾ ಸಮಿತಿಗಳಲ್ಲಿ ಅವಕಾಶ ಕಲ್ಪಿಸಿ, ಮುಂಬರುವ ಚುನಾವಣೆಯಲ್ಲಿ ಅಭ್ಯರ್ಥಿ ಆಯ್ಕೆಯಲ್ಲಿ ಆದ್ಯತೆ ನೀಡಲಾಗಿದೆ.

ಜತೆಗೆ ರಾಜ್ಯದಲ್ಲಿ ಸಂಕಲ್ಪ ಯಾತ್ರೆ, ಸಮಾವೇಶಗಳನ್ನು ಆಯೋಜಿಸಲಾಗುತ್ತಿದೆ. ಆದರೂ ಪರಿಸ್ಥಿತಿ ಹೆಚ್ಚು ಸುಧಾರಣೆ
ಕಂಡುಬಂದಿಲ್ಲ. ಈ ಕಾರಣದಿಂದಾಗಿ ರಾಜ್ಯದ ಬಿಜೆಪಿ ಸರಕಾರ ಮತ್ತು ನಾಯಕರ ಬಗ್ಗೆ ವರಿಷ್ಠರಿಗೆ ಭ್ರಮನಿರಸನವಾ ಗಿದ್ದಂತೂ ಸುಳ್ಳಲ್ಲ. ಒಂದು ವರ್ಷವಾದರೂ ಮುಖ್ಯಮಂತ್ರಿ ತನ್ನ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಮಾಡಲು ಸಾಧ್ಯವಾಗಿಲ್ಲ. ಮುಖ್ಯಮಂತ್ರಿ ಬಯಸಿದಾಗ ವರಿಷ್ಠರು ಅವರ ಕೈಗೆ ಸಿಗುತಿಲ್ಲ. ರಾಜ್ಯದ ಬಿಜೆಪಿ ಮತ್ತು ಸರಕಾರದ ಬಗ್ಗೆ ವರಿಷ್ಠರು ಎಷ್ಟು ಅತೃಪ್ತರಾಗಿದ್ದಾರೆ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕಿಲ್ಲ.

ಹೀಗಾಗಿ ರಾಜ್ಯದ ನಾಯಕರನ್ನು ನೆಚ್ಚಿಕೊಂಡು ಹೇಚ್ಚೇನೂ ಪ್ರಯೋಜನವಿಲ್ಲ ಎಂಬುದು ಅವರಿಗೆ ಸ್ಪಷ್ಟವಾಗಿದೆ. ಈ ಕಾರಣಕ್ಕಾಗಿಯೇ ಸದ್ಯಕ್ಕೆ ಅವರು ಮೌನವಾಗಿದ್ದಾರೆ. ಈ ಮೌನದ ಹಿಂದಿನ ಕಾರಣ, ಉದ್ದೇಶ, ಗುರಿ ಏನು ಎಂಬ ಸಣ್ಣ ಸುಳಿವು ಕೂಡ ಯಾರಿಗೂ ಸಿಗದಂತೆ ನೋಡಿಕೊಂಡಿದ್ದಾರೆ. ಏಕೆಂದರೆ, ನರೇಂದ್ರ ಮೋದಿ, ಅಮಿತ್ ಶಾ ಅವರಂಥ ನಾಯಕರು ರಾಜ್ಯದ ಇತ್ತೀಚಿನ ರಾಜಕೀಯ ವಿದ್ಯಮಾನಗಳ ಬಗ್ಗೆ ತಲೆಕೆಡಿಸಿಕೊಳ್ಳದೆ, ರಾಜ್ಯ ನಾಯಕರಿಗೆ ಯಾವುದೇ ಸಲಹೆ, ಸೂಚನೆಗಳನ್ನು ನೀಡದೆ ಮೌನವಾಗಿದ್ದಾರೆ ಎಂದರೆ ಅದರ ಹಿಂದೆ ಪ್ರಬಲ ಕಾರಣ ಇದ್ದೇ ಇರುತ್ತದೆ. ಹೀಗಾಗಿ ಈ ಮೌನವೇ ರಾಜ್ಯ ನಾಯಕರ ತಲೆಬಿಸಿಗೆ ಕಾರಣವಾಗಿರುವುದು. ಹಾಗೆಂದು ವರಿಷ್ಠರು ಸುಮ್ಮನೆ ಕುಳಿತುಕೊಳ್ಳುವ ಜಾಯಮಾನದವರಂತೂ ಖಂಡಿತಾ ಅಲ್ಲ.

ಇದಕ್ಕೆ ಕೇರಳದ ಉದಾಹರಣೆ ನೀಡಬಹುದು. ಕಳೆದ ವರ್ಷ ಕೇರಳ ವಿಧಾನಸಭೆಗೆ ನಡೆದ ಚುನಾವಣೆಗೆ ಬಿಜೆಪಿ 113 ಕ್ಷೇತ್ರಗಳಲ್ಲಿ ಸ್ಪರ್ಧಿಸಿತ್ತು. ಚುನಾವಣಾ ಪ್ರಚಾರಕ್ಕೆಂದು ಕೇರಳಕ್ಕೆ ಹೋಗುವ ಮಧ್ಯೆ ಅಮಿತ್ ಶಾ ಮಂಗಳೂರಿಗೆ ಬಂದು ಕೇರಳ ಚುನಾವಣೆಯ ಉಸ್ತುವಾರಿ ವಹಿಸಿದ್ದ ರಾಜ್ಯದ ಬಿಜೆಪಿ ನಾಯಕರೊಂದಿಗೆ ಚರ್ಚೆ ನಡೆಸಿದರು. ಈ ವೇಳೆ ಉಸ್ತುವಾರಿ ವಹಿಸಿದ್ದ ನಾಯಕರು, ೮ರಿಂದ ೧೫ ಕ್ಷೇತ್ರಗಳಿಗೆ ಒತ್ತು ನೀಡಿದ ಬಗ್ಗೆ ಹೇಳಿದಾಗ, ಹಾಗಿದ್ದರೆ 113 ಕ್ಷೇತ್ರಗಳಲ್ಲಿ ಅಭ್ಯರ್ಥಿ ಗಳನ್ನು ಕಣಕ್ಕಿಳಿಸಿದ್ದೇಕೆ? ನಾವು ಗೆಲ್ಲುತ್ತೇವೋ, ಸೋಲುತ್ತೇವೋ ಎಂಬುದು ಮುಖ್ಯವಲ್ಲ.

ನಮ್ಮ ತಂತ್ರಗಾರಿಕೆ ಏನಿದ್ದರೂ ಎಲ್ಲಾ ಕ್ಷೇತ್ರಗಳಲ್ಲಿ ಗೆಲ್ಲಬೇಕು ಎಂಬಂತೆ ಇರಬೇಕು. ಆದ್ದರಿಂದ ಎಲ್ಲಾ 113 ಕ್ಷೇತ್ರಗಳಿಗೂ
ಆದ್ಯತೆ ನೀಡಿ ಪ್ರಚಾರಕ್ಕೆ ಕ್ರಮ ಕೈಗೊಳ್ಳಿ ಎಂದು ಸೂಚಿಸಿದ್ದರು. ನಂತರ ಕೇರಳದಲ್ಲಿ ಬಿಜೆಪಿ ಒಂದು ಸ್ಥಾನ ಗಳಿಸುವಲ್ಲಿಯೂ ವಿಫಲವಾಗಿದ್ದು ಬೇರೆ ಮಾತು. ಆದರೆ, ತನ್ನ ಮತ ಗಳಿಕೆ ಪ್ರಮಾಣವನ್ನು ಹೆಚ್ಚಿಸಿಕೊಂಡಿತ್ತು. 2016ರಲ್ಲಿ ಶೇ. 10.53 ರಷ್ಟು ಮತಗಳನ್ನು ಪಡೆದಿದ್ದ ಬಿಜೆಪಿ 2021ರಲ್ಲಿ ಶೇ. 11.30ರಷ್ಟು ಮತಗಳನ್ನು ಪಡೆದಿತ್ತು.

ಇದು ಪಕ್ಷಕ್ಕೆ ಅಡಿಪಾಯವೇ ಇಲ್ಲದ ಕೇರಳದ ಪರಿಸ್ಥಿತಿಯಾದರೆ, ಇನ್ನು ಗಟ್ಟಿ ನೆಲೆ ಹೊಂದಿರುವ, ಪಕ್ಷಕ್ಕಾಗಿ ತ್ಯಾಗ ಮಾಡುವ ಕಾರ್ಯಕರ್ತರಿರುವ ಕರ್ನಾಟಕದಲ್ಲಿ ವಿಶೇಷ ತಂತ್ರಗಾರಿಕೆ ರೂಪಿಸುವುದೇನೂ ವರಿಷ್ಠರಿಗೆ ಕಷ್ಟದ ಕೆಲವೇನೂ ಅಲ್ಲ. ಹೀಗಾಗಿಯೇ ಬಿಜೆಪಿ ವರಿಷ್ಠರ ಮೌನದ ಕುರಿತಾಗಿ ರಾಜ್ಯ ಬಿಜೆಪಿಯವರಿಗೆ ಪ್ರಶ್ನೆಗಳು ಉದ್ಭವವಾಗಿವೆ. ಗುಜರಾತ್ ಚುನಾವಣಾ ಫಲಿತಾಂಶ ಹೊರಬಿದ್ದ ಬಳಿಕ ಅವರು ಕರ್ನಾಟಕದ ಬಗ್ಗೆ ಗಮನ ಕೇಂದ್ರೀಕರಿಸುವುದು ಸ್ಪಷ್ಟ. ಈ ವೇಳೆ ಯಾರಿಗೇ ಏನು ಅಪಾಯ ಕಾದಿದೆಯೋ ಎಂಬ ಆತಂಕ ಕಾಣಿಸಿಕೊಂಡಿದೆ.

ಲಾಸ್ಟ್ ಸಿಪ್: ಒಳ್ಳೆಯದು ಮಾಡಲು ಸಾಧ್ಯವಾಗದೇ ಇದ್ದರೆ ಸುಮ್ಮನೆ ಇರಿ. ಕೆಟ್ಟದ್ದನ್ನಂತೂ ಮಾಡಲು ಹೋಗಬೇಡಿ
ಎಂಬುದನ್ನು ಇತಹದ್ದನ್ನು ನೋಡಿಯೇ ಹೇಳಿರಬೇಕು.