Friday, 22nd November 2024

ಬಿಜೆಪಿ ಹೈಕಮಾಂಡ್ದು ಅತಿಯಾಯ್ತು ?!

Nalin Kumar Kateel

ಹಂಪಿ ಎಕ್ಸ್’ಪ್ರೆಸ್

ದೇವಿ ಮಹೇಶ್ವರ ಹಂಪಿನಾಯ್ಡು

1336hampiexpress1509@gmail.com

ನಳೀನ್ ಕುಮಾರ್ ಕಟೀಲರು ಸಂಘ ಪರಿವಾರದ ಸಿಪಾಯಿ ಆಗಿರಬಹುದು. ಆದರೆ ಕಳೆದ ಮೂರು ವರ್ಷಗಳಿಂದ ಶುಭ ಕಾರ್ಯಗಳಿಗೆ ಕರೆಯಲೇಬೇಕಾದ ಮುತ್ತೈದೆಯಂತೆ ಅವರನ್ನು ಪಕ್ಷದ ವೇದಿಕೆಗಳಲ್ಲಿ ಕರೆಸಿ ಅರಿಷಿಣ ಕುಂಕುಮ ನೀಡುವುದಕ್ಕೆ ಸೀಮಿತ ಮಾಡಿದ್ದಾರೆ.

ಬಿಜೆಪಿ ನೇತೃತ್ವದ ಕರ್ನಾಟಕ ಸರಕಾರದ ಆಡಳಿತದ ವೈಖರಿಗಿಂತ ಬಿಜೆಪಿ ಪಕ್ಷದ ಹೈಕಮಾಂಡ್ ವರ್ತಿಸು ತ್ತಿರುವ ರೀತಿಯೇ ಜನಗಳ ಗಮನ ಸೆಳೆಯುತ್ತಿದೆ. ಮಾತ್ರವಲ್ಲ, ಮತದಾರರಲ್ಲಿ, ಪಕ್ಷದ ಕಾರ್ಯಕರ್ತರಲ್ಲಿ, ದೇಶಭಕ್ತ ವರ್ಗದಲ್ಲಿ ನಿರಾಶೆ ಅಸಹನೆ ಮೂಡಿಸುತ್ತಿದೆ. ಪಕ್ಷದ ವಿಚಾರ ಅತ್ಲಾಗಿರಲಿ, ಸಂವಿಧಾನಾತ್ಮಕ ಸರಕಾರವು ಯಾವುದೇ ಪಕ್ಷಗಳದ್ದಾಗಿರಲಿ ಶಾಸಕಾಂಗದ ಯಂತ್ರ ಸಮರ್ಪಕವಾಗಿ ಕೆಲಸ ಮಾಡುತ್ತಾ, ಕಾರ್ಯಾಂಗಕ್ಕೆ ಚುರುಕು ಮುಟ್ಟಿಸುತ್ತಾ ಆಡಳಿತ ವ್ಯವಸ್ಥೆ ಸುಗಮವಾಗಿ ಪ್ರಜಾಪ್ರಭುತ್ವದ ಪೂರಕವಾಗಿ ಸಾಗಬೇಕಿರುವುದು ಸಂವಿಧಾನದ ಆಶಯ.

ಆದರೆ ಈಗ ಆಗುತ್ತಿರುವುದೇನು? ಬಾಕಿ ಉಳಿಸಿರುವ ಆರು ಸ್ಥಾನಗಳಿಗೆ ಮಂತ್ರಿಗಳನ್ನು ನೇಮಿಸಿ ಎಲ್ಲ ಇಲಾಖೆ ಗಳು ವ್ಯವಸ್ಥಿತವಾಗಿ ಕಾರ್ಯನಿರ್ವಹಿಸುವಂತೆ ಮಾಡುವುದು ಯಾವ ಸಂಕಷ್ಟಕ್ಕೆ ತಲುಪಿದೆಯೆಂದರೆ ಸಂಪುಟ ವಿಸ್ತರಣೆ ಅಥವಾ ಪುನಾರಚನೆ ಎಂಬುದು ಸಾರ್ವತ್ರಿಕ ಚುನಾವಣೆಯನ್ನೇ ಎದುರಿಸಿ ಗೆದ್ದು ಬಂದು ಸರಕಾರ ರಚಿಸಬೇಕೆಂಬಂಥ ಸವಾಲಿನಂತ್ತಾಗಿದೆ. ದೂರದಿಂದ ಬೆಂಗಳೂರಿನ ಅಣ್ಣಮ್ಮನ ದರ್ಶನಕ್ಕೆ ಬಂದವನನ್ನು ಕಪಾಲಿ ಅಪರ್ಣ ನರ್ತಕಿ ಚಿತ್ರಮಂದಿರದ ಹೊರಗೆ ಮಾತನಾಡಿಸಿ, ನವಯುಗ ಹೊಟೇಲ್‌ನಲ್ಲಿ ಊಟ ಮಾಡಿ ಕಳಿಸುವಂತೆ ಒಂದು ರಾಜ್ಯದ ಮುಖ್ಯಮಂತ್ರಿಯನ್ನು ಬಿಜೆಪಿ ವರಿಷ್ಠರು ಕರೆಸಿಕೊಂಡು ಯಾರೊಬ್ಬರೂ ಸರಿಯಾಗಿ ಸ್ಪಂದಿಸದೆ ವಾಪಸ್ಸು ಕಳಿಸುತ್ತಿರುವುದು ಯಾವ ದೊಡ್ಡಸ್ತಿಕೆ? ರಾಷ್ಟ್ರೀಯತೆಯನ್ನು ಪ್ರತಿಪಾದಿಸುವ ಧ್ಯೇಯ ಹೊಂದಿರುವ ದೇಶಭಕ್ತ ಪಕ್ಷ ಎನಿಸಿಕೊಂಡಿರುವ ಬಿಜೆಪಿಯ ಗುರಿ ದೇಶದಲ್ಲಿ ಕಳೆದ ಏಳು ದಶಕಗಳಿಂದ ಪಿತೃಪಕ್ಷಗಳು ಹೇರಿಕೊಂಡು ಬಂದಿದ್ದ ಅಘೋಷಿತ ಗುಲಾಮಗಿರಿ ಭ್ರಷ್ಟಾಚಾರ ಅಸಮಾನತೆಗಳನ್ನು ಗುಡಿಸಿ ಹಾಕಿ, ಜಾಗತಿಕ ಮಟ್ಟದಲ್ಲಿ ದೇಶಕ್ಕೆ ಒಂದು ಗಂಡಸುತನ, ಘನತೆ ಗಾಂಭೀರ್ಯ, ಸ್ವಾಭಿಮಾನವನ್ನು ತಂದು ವಿಶ್ವಗುರುವಾಗಿ ನಿಲ್ಲುವಂತೆ ಮಾಡುತ್ತಿದೆ.

ದೇಶದ ದರಿದ್ರ ರಾಜಕಾರಣ ಮತ್ತು ಕುಲಗೆಟ್ಟ ಚುನಾವಣಾ ವ್ಯವಸ್ಥೆಯನ್ನು ಬದಲಾಯಿಸುವ ಮಹತ್ತರ ಯೋಜನೆಯ ಭಾಗವಾಗಿ ರಾಜ್ಯಗಳಲ್ಲಿರುವ ಬಿಜೆಪಿ ಆಡಳಿತದ ಸರಕಾರಗಳನ್ನು ತನ್ನ ನಿಯಂತ್ರಣದಲ್ಲಿಟ್ಟುಕೊಂಡು ಜಿಡ್ಡುಗಟ್ಟಿದ ವ್ಯವಸ್ಥೆಯನ್ನು ಬದಲಿಸಿ ಸ್ವಚ್ಛ ಆಡಳಿತವನ್ನು ನೀಡಿ ಪ್ರಜೆಗಳ ವಿಶ್ವಾಸವನ್ನು ಗಳಿಸಿಕೊಂಡು ದೇಶವನ್ನು ಒಂದೊಳ್ಳೆಯ ದಿಕ್ಕಿನತ್ತ ಕೊಂಡೊಯ್ಯುವ ಸಂಕಲ್ಪ ಹೊಂದಿದೆ.

ಆದರೆ ಒಂದೊಂದು ರಾಜ್ಯದಲ್ಲಿಯೂ ಅದರದೇ ಪ್ರಾದೇಶಿಕತೆಯ ಚಿತ್ರಣಗಳಿವೆ. ಉತ್ತರ ಪ್ರದೇಶದಲ್ಲಿ ಯೋಗಿಜೀ ಅವರನ್ನು ಬಿಜೆಪಿಯ ಉಳಿದೆಲ್ಲ ನಾಯಕರು ಒಪ್ಪಿಕೊಂಡು ಬೆಂಬಲವಾಗಿ ನಿಂತಿದ್ದಾರೆ. ಏಕೆಂದರೆ ಸಂನ್ಯಾಸಿಗಳಾಗಿರುವ ಯೋಗೀಜಿಯವರು ಯಾರಿಗೂ ಆಸ್ತಿ ಮಾಡಿಡಬೇಕಿಲ್ಲ ಮತ್ತು ಕುಟುಂಬದ ರಾಜ ಕಾರಣ ಮಾಡುವವರೇ ಅಲ್ಲ. ಹೀಗಾಗಿ ಅಲ್ಲಿ ಅವರು ತ್ಯಾಗಿ ಯೋಗಿಯೇ ಹೊರತು ಭೋಗಿಯಲ್ಲ. ಕರ್ನಾಟಕದ ವಿಚಾರಕ್ಕೆ ಬಂದರೆ ಬಿಜೆಪಿ ಕಟ್ಟಿ ಬೆಳೆಸಿ ಅಧಿಕಾರಕ್ಕೆ ತರಲು ಕಾರಣರಾದವರು ಮೊದಲಿಗೆ ಯಡಿಯೂರಪ್ಪ, ಅನಂತಕುಮಾರ್ ಮತ್ತು ಈಶ್ವರಪ್ಪನವರು.

ಜತೆಗೆ ಉತ್ತರ ಕರ್ನಾಟಕವೇ ನಾಡಿನ ಹೃದಯವಾಗಿದ್ದು ಬಹುಸಂಖ್ಯಾತ ವೀರಶೈವ ಲಿಂಗಾಯತ ಮತದಾರರೇ ಸರಕಾರ ರಚಿಸುವಲ್ಲಿ ನಿರ್ಣಾಯಕ.
ಯಡಿಯೂರಪ್ಪನವರು ರೈತನಾಯಕ-ಸಂಘಪರಿವಾರದ ಕಟ್ಟಾಳು, ಸರ್ವಜನ ನಾಯಕ ಎಂಬ ನೈಜ ಘನತೆಯನ್ನು ದಾಟಿ ಈಗ ಅವರನ್ನು ಕೇವಲ ಒಂದು
ಸಮುದಾಯದ ನಾಯಕನ ಮಟ್ಟಕ್ಕೆ ಇಳಿಸಲಾಗಿದೆ. ಹೀಗಾಗಿ ಬಿಜೆಪಿ ಕೇಂದ್ರ ವರಿಷ್ಠರಿಗೆ ರಾಜ್ಯದಲ್ಲಿ ಒಂದು ಸೈದ್ಧಾಂತಿಕ ಪ್ರಯೋಗ ಮಾಡಬೇಕೆಂದು
ಹೊರಟರೆ ಇಲ್ಲಿನ ಜಾತಿ ವ್ಯವಸ್ಥೆಯ ಚಕ್ರವ್ಯೂಹವನ್ನು ಭೇದಿಸಲಿಕ್ಕೆ ಆಗುತ್ತಿಲ್ಲ.

ಹೀಗಾಗಿಯೇ ಯಡಿಯೂರಪ್ಪನವರ ರಾಜೀನಾಮೆಯನ್ನು ಪಡೆದ ನಂತರ ಅಚ್ಚರಿಯ ಬದಲಾವಣೆ ತರಲಾಗದೆ ಮತ್ತೆ ಅದೇ ಸಮುದಾಯದವರಾದ
ಬಸವರಾಜ ಬೊಮ್ಮಾಯಿಯವರಿಗೇ ಪಟ್ಟಕಟ್ಟುವುದು ಅನಿವಾರ್ಯವಾಯಿತು. ಈಗ ಯಡಿಯೂರಪ್ಪನವರ ಕುಟುಂಬ ರಾಜಕಾರಣ, ಅವರ ಹಿಂದಿನ ಕೆಜೆಪಿ, ಕಾರಾಗೃಹ ಇತಿಹಾಸ, ಇನ್ನಿತರ ಆಂತರಿಕ ಕಾರಣಗಳಿಂದಾಗಿ ಯಡಿಯೂರಪ್ಪನವರು ಇಂದು ಬೇಡದ ಸೊಸೆಯಂತ್ತಾಗಿದ್ದಾರೆಂದರೆ ಸುಳ್ಳಲ್ಲ. ಯಡಿಯೂರಪ್ಪ ರಹಿತ ಬಿಜೆಪಿ ಆಡಳಿತ ಜಾರಿಗೆ ತರಲಾಗದೆ ಚಡಪಡಿಸುತ್ತಿರುವ ಹೈಕಮಾಂಡ್‌ಗೆ ವಿಜಯೇಂದ್ರರನ್ನೂ ಬಹಳ ಮಡಿಯಿಂದ ನೋಡುವಂತಾಗಿದೆ. ಬೊಮ್ಮಾಯಿ ಯವರು ಮುಖ್ಯಮಂತ್ರಿಯಾದಾಗಿನಿಂದ ಸಂಪುಟ ವಿಸ್ತರಣೆ ಮಾಡುವುದಕ್ಕೆ ಹೈಕಮಾಂಡ್ ಎಷ್ಟು ಕಂಗಾಲಾಗಿದೆಯೆಂದರೆ ಅದಕ್ಕೆ ಕೈ ಹಾಕಿದರೆ ಯಡಿಯೂರಪ್ಪ ನವರ ಮಾತಿಗೆ ಮಣೆ ಹಾಕಬೇಕಾಗುತ್ತದೆ. ಜತೆಗೆ ವಿಜಯೇಂದ್ರನನ್ನು ಗಂಟುಕಟ್ಟಿಕೊಳ್ಳಬೇಕಾಗುತ್ತದೆಂದೋ ಏನೋ ಇದುವರೆಗೂ ಸಂಪುಟ ವಿಸ್ತರಣೆಯಾಗಲಿ ಪುನಾರಚನೆಯಾಗಲಿ ಮಾಡಲಾಗುತ್ತಿಲ್ಲ.

ಇದೊಂದೇ ಕಾರಣವೇ ಬೊಮ್ಮಾಯಿಯವರನ್ನು ಒಂಬತ್ತು ಬಾರಿ ಹೋದ ಪುಟ್ಟ ಬಂದ ಪುಟ್ಟ ಸ್ಥಿತಿಗೆ ತಂದು ನಿಲ್ಲಿಸಿದೆ. ಹಾಗಂತ ವಿಜಯೇಂದ್ರರೇನು ನಿಖಿಲ್ ಎಲ್ಲಿದ್ಯಪ್ಪ? ಎಂದು ಹುಡುಕಿ ತರುವಂಥ ರೆಡಿಮೇಡ್ ನಾಯಕನಲ್ಲ. ವಿಜಯೇಂದ್ರ ಹೋದ ಕಡೆಯೆಲ್ಲ ಜನ ಅವರನ್ನು ಸುತ್ತುವರೆಯುತ್ತಿರುವುದು, ಅವರಲ್ಲಿ ಯಡಿಯೂರಪ್ಪನವರನ್ನು ಕಾಣುತ್ತಿರುವುದನ್ನು ನೋಡಿದರೆ ಅವರ ಭವಿಷ್ಯ ಉಜ್ವಲವಾಗೇ ಕಾಣುತ್ತಿದೆ. ಜತೆಗೆ ಅವರು ಉಪಚುನಾವಣೆಗಳಲ್ಲಿ ಓಡಾಡಿ ಅಭ್ಯರ್ಥಿ ಗಳ ಗೆಲುವಿಗೆ ತೋರಿರುವ ಸಾಮರ್ಥ್ಯವನ್ನು ಅಲ್ಲಗಳೆಯುವಂತಿಲ್ಲ. ಇದೆಲ್ಲವೂ ಬಿಜೆಪಿ ಹೈಕಮಾಂಡಿಗೂ ಮನದಟ್ಟಾಗಿದೆ.

ಇದರ ಜತೆಗೆ ಬಿ.ಎಲ್.ಸಂತೋಷ್ ಅವರ ಮಂತ್ರದಂಡ, ಯಡಿಯೂರಪ್ಪನವರ ಜಾತಿದಂಡ, ಸಂಘಪರಿವಾರದ ಮಾನದಂಡವನ್ನು ಪರಿಗಣಿಸಿ ದಂಡಪಿಂಡ ಸಚಿವರ ತಲೆದಂಡ ಮಾಡಿ ಮುಂದಿನ ವರ್ಷ ಎದುರಾಗುತ್ತಿರುವ ಸಾರ್ವತ್ರಿಕ ಚುನಾವಣೆಗೆ ಆಡಳಿತವನ್ನು ಮತ್ತು ಪಕ್ಷವನ್ನು ಬಲಿಷ್ಠಗೊಳಿಸುವ ಯೋಜನೆಗೆ ಚಾಲನೆ ನೀಡುವುದೇ ಹೈಕಮಾಂಡ್‌ಗೆ ದೊಡ್ಡ ತಲೆನೋವಾಗಿದೆ. ದೇಶದ ಚುನಾವಣಾ ವ್ಯವಸ್ಥೆಯನ್ನು ಪವಿತ್ರಗೊಳಿಸಬೇಕಾದರೆ ಜಾತೀಯತೆ-ಕುಟುಂಬ ರಾಜಕಾರಣವನ್ನು ಹತ್ತಿಕ್ಕಲೇ ಬೇಕೆಂಬ ಅನುಭೂತಿಯನ್ನು ಕೇಂದ್ರ ಬಿಜೆಪಿ ಹೊಂದಿದೆ. ಆದರೆ ಈ ಮಾನದಂಡ ನಾಡಿನ ರಾಜಕಾರಣಕ್ಕೆ ಮ್ಯಾಚ್ ಆಗುತ್ತಿಲ್ಲ. ಹೀಗಾಗಿ ಬಿಜೆಪಿ ವರಿಷ್ಠರು ರಾಜ್ಯದಲ್ಲಿ ಯಾರ ದಂಡವನ್ನು ಮಾನದಂಡವಾಗಿ ಪರಿಗಣಿಸಬೇಕೆಂಬ ಗೊಂದಲಕ್ಕೆ ಸಿಲುಕಿ ಕಂಗಾಲಾದಂತಿದೆ.

ಈಗ ನೋಡಿ, ವಿಧಾನ ಪರಿಷತ್ತಿಗೆ ನಾಲ್ಕು ಮಂದಿ ಯೋಗ್ಯರನ್ನು ಅಂತಿಮಗೊಳಿಸಲು ಪಟ್ಟ ಅವಸ್ಥೆ ಹೇಳತೀರದು. ಅಭ್ಯರ್ಥಿ ಹೇಮಲತಾ ನಾಯಕ್
ಅವರನ್ನು ಅಚಾನಕ್ಕಾಗಿ ಕೊಪ್ಪಳದಿಂದ ಹಾರಿಸಿಕೊಂಡು ಬಂದು ಆಂಬ್ಯುಲೆನ್ಸ್ ಮಾದರಿಯಲ್ಲಿ ಕರೆತರುವಂಥ ಗತಿ ತಲೆದೋರಿದೆಯೆಂದರೆ ಹೈಕಮಾಂಡ್ ಇನ್ನೆಷ್ಟು ಪಾಡುಪಟ್ಟಿರಬೇಕು! ನಾಲ್ಕು ಅಭ್ಯರ್ಥಿಗಳಲ್ಲಿ ಮೂವರೂ ಓಕೆ. ಆದರೆ ಪಿಂಚಣಿ ಗಿರಾಕಿಯಂತಿರುವ ಲಕ್ಷಣ್ ಸವದಿ ಯಾಕೆ? ಇವರನ್ನು ಯಾವ ಮಾನದಂಡದ ಆಧಾರದಲ್ಲಿ ಹೈಕಮಾಂಡ್ ಪರಿಗಣಿಸಿದೆ ಎಂಬುದೇ ಆಶ್ಚರ್ಯ.

ಮೊದಲೇ ಸೋತಿದ್ದರೂ ಉಪಮುಖ್ಯಮಂತ್ರಿಯನ್ನಾಗಿಸಿತ್ತು. ಈಗ ಅವರಿಗಿಂತ ಶ್ರೇಷ್ಠ ಅಭ್ಯರ್ಥಿಗಳನ್ನು ಪತ್ತೆಹಚ್ಚುವುದನ್ನು ಬಿಟ್ಟು ಸವೆದು ಹೋದಂತಿರುವ ಸವದಿಗೇ ಮಣೆಹಾಕುವುದಕ್ಕಿಂತ ಅದೇ ಸಮುದಾಯದ ವಿಜಯೇಂದ್ರರಿಗೇ ಅವಕಾಶ ನೀಡಬಹುದಿತ್ತಲ್ಲವೇ? ಇನ್ನು ಬಸವರಾಜ ಹೊರಟ್ಟಿ ಸಂಭಾವಿತ ವ್ಯಕ್ತಿ, ಶುದ್ಧ ರಾಜಕಾರಣಿ. ಈಗಾಗಲೇ 7 ಬಾರಿ ಪರಿಷತ್ ಪ್ರವೇಶಿಸಿರುವ ಅವರನ್ನು ಬಿಜೆಪಿಗೆ ಕರೆತಂದು ನಿಲ್ಲಿಸುವ ಅನಿವಾರ್ಯತೆ ಏನು? ಅವರಿಗೂ ಬಿಜೆಪಿಯ ನಿಯಮದಂತೆ ವಯೋಮಿತಿ 75 ದಾಟಿದೆ. ಹೋಗಲಿ, ಮುಂದಿನ ಚುನಾವಣೆಯಲ್ಲಿ ಹೊರಟ್ಟಿಯವರು ಎಷ್ಟು ಮಂದಿ ಶಾಸಕರನ್ನು ಗೆಲ್ಲಿಸಿಕೊಂಡು ಬರುತ್ತಾರೆ? ಹುಡುಕಿದರೆ ಅವರಷ್ಟೇ ಸಂಭಾವಿತರು ಯೋಗ್ಯರು ನೂರುಮಂದಿ ಸಿಗುತ್ತಾರೆ.

ಅಂಥವರನ್ನೆಲ್ಲ ಬಿಟ್ಟು ಇಂಥವರನ್ನೆಲ್ಲ ಆಯ್ಕೆ ಮಾಡುವುದಕ್ಕೆ ವಿಧಾನ ಪರಿಷತ್ ಎಂಬುದೇನು ವ್ಹೀಲ್‌ಚೇರ್ ವ್ಯವಸ್ಥೆಯೇ? ಇನ್ನು ಬಿಜೆಪಿಯ ರಾಜ್ಯಾಧ್ಯಕ್ಷರ ಹುದ್ದೆಯೂ ಕೇವಲ ಅಲಂಕಾರಿಕವಾಗಿದೆ. ನಳೀನ್ ಕುಮಾರ್ ಕಟೀಲರು ಸಂಘ ಪರಿವಾರದ ಸಿಪಾಯಿ ಆಗಿರಬಹುದು. ಆದರೆ ಕಳೆದ ಮೂರು ವರ್ಷಗಳಿಂದ ಶುಭಕಾರ್ಯಗಳಿಗೆ ಕರೆಯಲೇಬೇಕಾದ ಮುತ್ತೈದೆಯಂತೆ ಅವರನ್ನು ಪಕ್ಷದ ವೇದಿಕೆಗಳಲ್ಲಿ ಕರೆಸಿ ಅರಿಷಿಣ ಕುಂಕುಮ ನೀಡುವುದಕ್ಕೆ ಸೀಮಿತ ಮಾಡಿದ್ದಾರೆ.
ಆದರೆ ಇಂಗ್ಲಿಷು ಹಿಂದಿ ಬಾರದ ಸಿ.ಟಿ. ರವಿಯಂಥ ಖಡಕ್ ವಿಚಾರವಾದಿ, ದಿಟ್ಟ ವಾಗ್ಮಿಯನ್ನು ದೆಹಲಿ ಮಟ್ಟಕ್ಕೆ ಕಳುಹಿಸಲಾಗಿದೆ.

ಬಿಜೆಪಿಯಂಥ ರಾಷ್ಟ್ರೀಯತೆಯ ದೃಷ್ಟಿಕೋನ ಹೊಂದಿರುವ ಪಕ್ಷದ ಅಧ್ಯಕ್ಷರಾದವರು ಸಾಮಾನ್ಯ ಕಾರ್ಯಕರ್ತರಿಂದ ಹಿಡಿದು ಬಿಜೆಪಿಯನ್ನು ನಿರಾಕರಿಸುವ ಮತದಾರರನ್ನೂ ಓಲೈಸಿಕೊಳ್ಳುವ ಸುಲಭ ಸರಳವ್ಯಕ್ತಿಯಾಗಿರಬೇಕು. ಯಡಿಯೂರಪ್ಪವನರು ಹಾಗಿದ್ದುಕೊಂಡೇ ಊರೂರು ಅಲೆದು ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತಂದದ್ದು. ಇದನ್ನು ಬಿಜೆಪಿಯ ಪ್ರತಿ ನಾಯಕರು ಕಾರ್ಯಕರ್ತರು ಮಾದರಿಯಾಗಿಸಿಕೊಳ್ಳುವಂಥದ್ದು. ಸಿ.ಟಿ. ರವಿ, ಅನಂತಕುಮಾರ ಹೆಗಡೆ, ಬಸವನಗೌಡ ಪಾಟೀಲ್ ಯತ್ನಾಳ್, ಶ್ರೀರಾಮುಲು ಅಥವಾ ವಿಜಯೇಂದ್ರರಿಗೇ ರಾಜ್ಯಾಧ್ಯಕ್ಷ ಹೊಣೆಗಾರಿಕೆ ನೀಡಿದರೆ ಜನರನ್ನು ಹೇಗೆ ಸೆಳೆಯಬಹು ದೆಂದು ತೋರಿಸುತ್ತಾರೆ.

ಇನ್ನು ಯಡಿಯೂರಪ್ಪನವರಾದರೂ ರಾಜ್ಯದ ಹಿತದೃಷ್ಟಿಯನ್ನು ಗಣ್ಯವಾಗಿಸಿಕೊಂಡು ‘ನೋಡ್ರಪ್ಪಾ, ನನಗೆ ನನ್ನ ಮಕ್ಕಳ ಭವಿಷ್ಯಕ್ಕಿಂತ ರಾಜ್ಯದ ಮತ್ತು ಪಕ್ಷದ ಶ್ರೇಯಸ್ಸೇ ಮುಖ್ಯ, ವಿಜಯೇಂದ್ರ ನನ್ನಂತೆಯೇ ಜನರ ಪ್ರೀತಿಯಿಂದ ಗೆದ್ದು ಬರಲಿ ಆ ಯೋಗ್ಯತೆ ಆತನಿಗಿದೆ. ನನಗೇನು ಬೇಸರವಿಲ್ಲ. ದೈಹಿಕ ಶಕ್ತಿ ಇರುವ ವರೆಗೂ ಪಕ್ಷಕ್ಕಾಗಿ ಜತೆಯಾಗಿರುವೆ’ ಎಂದು ಉತ್ಸಾಹಭರಿತ ಉದಾರತೆಯ ಹೇಳಿಕೆ ನೀಡಿ ಕಾರ್ಯಕರ್ತರನ್ನು ಹಿಡಿದಿಡುವ ಹಿರಿತನವನ್ನು ತೋರಬೇಕಿದೆ. ಹಾಗೆಯೇ ಹೈಕಮಾಂಡ್ ಕೂಡ ಯಡಿಯೂರಪ್ಪನವರನ್ನು ಒಂದು ಕಾಲದಲ್ಲಿ ವಂಶ ಬೆಳಗಿದ ಸೊಸೆಯಂತೆಯೇ ಪರಿಗಣಿಸಿ ಅವರನ್ನು ಯಾವುದೇ ಕಾಲಕ್ಕೂ ಮೂಲೆಗುಂಪು ಮಾಡಬಾರದು.

ದೇಶದ್ರೋಹಿಗಳು, ದೇಶದ ಸಂವಿಧಾನ ನ್ಯಾಯಾಲಯಗಳನ್ನೇ ವಿರೋಧಿಸುವ, ಭಯೋತ್ಪಾದಕರನ್ನು ಬ್ರದರ್ಸ್‌ಗಳೆಂದು ಮುದ್ದಿಸುವ, ಈ ದೇಶದ ಪರಂಪರೆ, ಸಂಸ್ಕೃತಿ, ನಂಬಿಕೆ, ಭಾವನೆಗಳಿಗೆ ಸದಾ ಬೆಂಕಿಹಚ್ಚುವ, ಪಕ್ಕದ ಮನೆಗೆ ಹೋಗಿ ಹೆತ್ತ ಅಪ್ಪನ ಮೇಲೆ ದೂರು ನೀಡುತ್ತಾ ಬೈಯುತ್ತಾ ಮನೆಯ ಮಾನ ಮರ್ಯಾದೆ ಹರಾಜಾಕುವಂತೆ ಪರದೇಶದಲ್ಲಿ ಕೂತು ತನ್ನ ದೇಶದ ವಿರುದ್ಧವೇ ಅಪಪ್ರಚಾರ ಮಾಡುವ ಅರೆಬೆಂದ ಬೆರಕೆ ಕಚ್ಚಾ- ಗೂಬೆ ಕುಲದ ಜೋಕರ್‌ಗಳ ನ್ನೆಲ್ಲ ಪಲ್ಲಕ್ಕಿ ಏರಿಸಿ ಚಟ್ಟ ಹೊರುವ ಚಟ ಹೊಂದಿರುವ ಮಂದಿಗಳಿಗೆ ರಾಜ್ಯವನ್ನು ದೇಶವನ್ನು ಆಳಲು ಬಿಟ್ಟರೆ ಭವಿಷ್ಯದಲ್ಲಿ ಉಳಿಗಾಲವಿಲ್ಲವೆಂಬ ಸತ್ಯವನ್ನು ಅರಿತಿರುವ ಮತದಾರರಿಗೆ ದೇಶದ ಭವಿಷ್ಯದ ಹಿತದೃಷ್ಟಿ ಮತ್ತು ಭದ್ರತೆಗಾಗಿ ಬಿಜೆಪಿ ಪಕ್ಷವೇ ಅನಿವಾರ್ಯವೆಂಬುದು ಮನದಟ್ಟಾಗುತ್ತಿದೆ.

ಇಂಥ ಪಕ್ಷದ ವರಿಷ್ಠರು ತಮ್ಮದೇ ಪಕ್ಷದ ಒಬ್ಬ ಮುಖ್ಯಮಂತ್ರಿಯನ್ನು ದೆಹಲಿಗೆ ಕರೆಸಿಕೊಂಡು ಸತಾಯಿಸುತ್ತಿರುವುದು ಶೋಭೆಯಲ್ಲ. ರಾಜ್ಯದ ಗೃಹ ಇಲಾಖೆಗೆ ಸಮರ್ಥ ಮಂತ್ರಿಯನ್ನು ನೇಮಿಸಬೇಕಾದ ಅನಿವಾರ್ಯತೆ ತಲೆದೋರಿದೆ. ಅನೇಕ ಇಲಾಖೆಗಳಿಗೆ ಸಮರ್ಥ ಮಂತ್ರಿಗಳ ಕೊರತೆಯಿದೆ. ಮುಖ್ಯ ಮಂತ್ರಿಗಳ ಬಳಿಯೇ ಮಿತಿಮೀರಿದ ಇಲಾಖೆಗಳಿವೆ. ಪಿಎಸ್‌ಐ ನೇಮಕಾತಿ ವ್ಯವಸ್ಥೆ ಕಿತ್ತು ಕೆರಹಿಡಿದಿದೆ. ಕೆದಕುತ್ತಾ ಹೋದರೆ ಅನೇಕ ಇಲಾಖೆಗಳಲ್ಲಿ ಭ್ರಷ್ಟಾಚಾರದ ಎಳೆಗಳು ಕಾಣಸಿಗುತ್ತಲೇ ಇದೆ. ಬಿಜೆಪಿಯ ಅದೃಷ್ಟವೆಂದರೆ ವಿರೋಧ ಪಕ್ಷಗಳೂ ಇಂಥದ್ದೇ ಹೊಲಸುಗಳನ್ನು ತುಳಿದುಕೊಂಡು ನಡೆಯುತ್ತಿದೆ. ಹೀಗಾಗಿ ಪುಟಗೋಸಿ ಉದುರಿದವನ ಮುಂದೆ ಅಂಗಿ ಹರಿದುಕೊಂಡವನಂತ್ತಾಗಿದೆ ರಾಜ್ಯ ಬಿಜೆಪಿಯ ಪರಿಸ್ಥಿತಿ.

ಇಂಥ ವಾಸ್ತವತೆಗಳನ್ನು ಬಿಟ್ಟು ದೆಹಲಿಯಲ್ಲಿ ಕೂತು ಯಾರೋ ಒಂದಿಬ್ಬರ ತುತ್ತೂರಿಯನ್ನು ಆಲಿಸಿ ಅವಾಸ್ತವಿಕವಾಗಿ ಅವೈಜ್ಞಾನಿಕವಾಗಿ ಅಚ್ಚರಿಗಳನ್ನು ನೀಡಿದರೆ ಪಕ್ಷಕ್ಕೆ ಮೈಲೇಜು ದೊರಕುವುದಿಲ್ಲ. ಬಿ.ಎಲ್. ಸಂತೋಷ್, ಪ್ರಹ್ಲಾದ್ ಜೋಶಿ, ಸದಾನಂದಗೌಡರು, ಶೋಭಾ ಕರಂದ್ಲಾಜೆಯಂಥವರು ಕ್ಲಾಸ್ ನಾಯಕರಾಗಿರಬಹುದು. ಆದರೆ ಪಕ್ಷವನ್ನು ಅಧಿಕಾರಕ್ಕೆ ತರಬೇಕಾದರೆ ರಸ್ತೆಗಿಳಿದು ಬೀದಿ ಅಲೆದು ಮತದಾರರ ಮನೆಯನ್ನು ತಟ್ಟುವಂಥ, ಮನವನ್ನು ಮುಟ್ಟು ವಂಥ ಮಾಸ್ ನಾಯಕರಾಗಿರಬೇಕು. ರಾಜ್ಯದ ಸಾಧನೆಯಲ್ಲದಿದ್ದರೂ ರಾಷ್ಟ್ರದ ಸಾಧನೆಯನ್ನಾದರೂ ಜನಸಾಮಾನ್ಯನಿಗೆ ಅರ್ಥೈಸುವಂಥ ಜನಸ್ನೇಹಿ ನಾಯಕರಿಗೆ ಅವಕಾಶ ನೀಡಬೇಕಿದೆ.