Thursday, 12th December 2024

ಜೇನುತುಪ್ಪದ ಕನಸಿನಲ್ಲಿ ಬಿಜೆಪಿ..

ಮೂರ್ತಿಪೂಜೆ

ಹಿಂದೆ ಸಿದ್ದರಾಮಯ್ಯ ಬಾರಿಸಿದ ಮಾಸ್ಟರ್ ಸ್ಟ್ರೋಕುಗಳು ಇಡೀ ದಲಿತ ಸಮುದಾಯದ ಶಕ್ತಿಯನ್ನು ಹೆಚ್ಚಿಸಿದ್ದವೇ ಹೊರತು ವಿಶೇಷವಾಗಿ ಬಲಗೈ ಸಮುದಾಯದ ಶಕ್ತಿಯನ್ನಲ್ಲ. ಹೀಗಿದ್ದರೂ ಅದು 2018ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವರವಾಗಲಿಲ್ಲ. ಇದು ಬಿಜೆಪಿಗೆ ಅರ್ಥವಾದಂತಿಲ್ಲ.

ಕಾಂಗ್ರೆಸ್‌ನ ಪೇಸಿಎಂ ಅಭಿಯಾನ ಮತ್ತು ಭಾರತ್ ಜೋಡೋ ಯಾತ್ರೆಗೆ ಟಕ್ಕರ್ ಕೊಟ್ಟ ಸಂಭ್ರಮ ಬಿಜೆಪಿ ಪಾಳಯದಲ್ಲಿ ಕಾಣತೊಡಗಿದೆ. ಪೇಸಿಎಂ ಹೊಡೆತ ಹೇಗಿತ್ತೆಂದರೆ ಖುದ್ದು ಮುಖ್ಯಮಂತ್ರಿಗಳೇ ಬಸವಳಿದಂತೆ ಕಾಣುತ್ತಿದ್ದರು. ‘ಭ್ರಷ್ಟಾಚಾರದ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್‌ ಗಿಲ್ಲ’ ಅಂತ ತಿರುಗೇಟು ನೀಡಲು ಅವರು ಯತ್ನಿಸಿದರೂ ಅದಕ್ಕೊಂದು ಒಳಶಕ್ತಿಯೇ ಇರಲಿಲ್ಲ.

ಏಕೆಂದರೆ ಅಂಥ ಮಾತಾಡುವುದಕ್ಕಿಂತ ಮುಂಚೆ, ‘ನಾವು ಭ್ರಷ್ಟಾಚಾರ ಮಾಡುವುದೇ ಇಲ್ಲ’ ಅಂತ ಅವರು ಹೇಳಿದ್ದರೆ ಅದಕ್ಕೊಂದು ಶಕ್ತಿ ಇರುತ್ತಿತ್ತು. ಆದರೆ, ಭ್ರಷ್ಟಾಚಾರ ಮಾಡಿದ ಕಾಂಗ್ರೆಸ್ಸಿಗೆ ತಾವು ಮಾಡಿದ ಭ್ರಷ್ಟಾಚಾರ ವನ್ನು ಟೀಕಿಸುವ ಹಕ್ಕಿಲ್ಲ ಎಂಬಂತಿತ್ತು ಬೊಮ್ಮಾಯಿಯವರ ಮಾತಿನ ಧಾಟಿ. ಅಂದ ಹಾಗೆ, ರಾಜಕಾರಣದಲ್ಲಿ ಒಂದು ಆರೋಪ ಬಂದಾಗ ಅದು ಸುಳ್ಳು ಅಂತ ಸಾಬೀತು ಮಾಡಬೇಕೇ ಹೊರತು, ಅದರ ಬಗ್ಗೆ ಮಾತನಾಡಲು ನಿಮಗೆ ನೈತಿಕ ಹಕ್ಕಿಲ್ಲ ಎಂದರೆ ಸಾಲದು.

ಇದೇ ರೀತಿ, ರಾಹುಲ್ ಗಾಂಧಿ ನಡೆಸಿರುವ ಭಾರತ್ ಜೋಡೋ ಯಾತ್ರೆ ಕರ್ನಾಟಕವನ್ನು ಪ್ರವೇಶಿಸಿದ ನಂತರ ಬಿಜೆಪಿ ನಾಯಕರು ಕೂಗಾಡುತ್ತಿರುವ ರೀತಿಯೇ ಯಾತ್ರೆ ಸಕ್ಸಸ್ ಎಂಬುದರ ಕುರುಹು. ಪಕ್ಷದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಂದ ಹಿಡಿದು ರಾಜ್ಯ ಬಿಜೆಪಿಯ -ಂಟ್‌ಲೈನ್ ನಾಯಕರವರೆಗಿನ ಬಹುತೇಕರು ಈ ಯಾತ್ರೆಯ ಬಗ್ಗೆ ಅಗತ್ಯಕ್ಕಿಂತ ಹೆಚ್ಚು ಟೀಕಿಸಿದರು. ಈ ಯಾತ್ರೆ ಯಶಸ್ವಿಯಾಗಿಲ್ಲ ಎಂಬುದೇ ಹೌದಾದರೆ ಬಿಜೆಪಿ ಅದನ್ನು ನಿರ್ಲಕ್ಷಿಸಬಹುದಿತ್ತು.

ಆದರೆ ಹಾಗೆ ಮಾಡಲು ಅದಕ್ಕೆ ಸಾಧ್ಯವಾಗುತ್ತಿಲ್ಲ ಎಂದರೆ ರಾಜ್ಯದಲ್ಲಿ ತನ್ನ ಬಲ ಕುಸಿಯುತ್ತಿರುವುದರ ಆತಂಕ ಅದಕ್ಕಿದೆ ಎಂಬುದು ಸ್ಪಷ್ಟ. ಆದರೆ ಹೀಗೆ ಬಿದ್ದ ಹೊಡೆತವನ್ನು ಮೊನ್ನೆ ಪರಿಶಿಷ್ಟ ಜಾತಿ, ಪಂಗಡಗಳ ಮೀಸಲಾತಿ ಹೆಚ್ಚಿಸುವ ಮೂಲಕ
ಸರಿಪಡಿಸಿಕೊಂಡಿದ್ದೇವೆ; ಹೀಗಾಗಿ ಇದು ತಾವು ಬಾರಿಸಿದ ಮಾಸ್ಟರ್ ಸ್ಟ್ರೋಕ್ ಎಂಬ ಸಂಭ್ರಮ ಬಿಜೆಪಿ ಪಾಳಯದಲ್ಲಿ
ಕಾಣತೊಡಗಿದೆ.

***
ಅಂದ ಹಾಗೆ, ಪರಿಶಿಷ್ಟ ಜಾತಿ, ಪಂಗಡಗಳಿಗೆ ಒದಗಿಸಲಾಗಿರುವ ಮೀಸಲಾತಿಯ ಪ್ರಮಾಣ ಹೆಚ್ಚಿಸಬೇಕು ಅಂತ ನ್ಯಾಯ ಮೂರ್ತಿ ನಾಗಮೋಹನದಾಸ್ ಅವರು ವರದಿ ನೀಡಿದ್ದರಲ್ಲ? ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಜಾತಿಗೆ ಈಗಿರುವ ಶೇ. 15ರ ಮೀಸಲಾತಿಯನ್ನು ಶೇ. 17ಕ್ಕೆ ಏರಿಸಬೇಕು. ಪರಿಶಿಷ್ಟ ಪಂಗಡದ ಮೀಸಲಾತಿಯನ್ನು ಶೇ.೩ರಿಂದ ಶೇ. ೭ಕ್ಕೆ ಏರಿಸಬೇಕು ಎಂಬುದು ಈ ವರದಿಯ ಮುಖ್ಯ ಶಿಫಾರಸು.

ಇದನ್ನು ಮೊನ್ನೆ ಒಪ್ಪುವ ಮೂಲಕ ರಾಜ್ಯದ ನಂಬರ್ ಒನ್ ವೋಟ್‌ಬ್ಯಾಂಕಿನ ಮನ ಗೆದ್ದಿದ್ದೇವೆ ಎಂಬುದು ಬಿಜೆಪಿ ನಾಯಕರ ಸದ್ಯದ ಸಂಭ್ರಮ. ಹೀಗೆ ಮೀಸಲಾತಿ ಪ್ರಮಾಣ ಹೆಚ್ಚಿಸಲು ತೀರ್ಮಾನಿಸಿದ್ದೇನೋ ಸರಿಯಾದ ಬೆಳವಣಿಗೆ; ಆದರೆ ಇದು ‘ಮಾಸ್ಟರ್ ಸ್ಟ್ರೋಕ್’ ಆಗಿ ಪರಿವರ್ತನೆಯಾಗಿ ರಾಜ್ಯ ಬಿಜೆಪಿಗೆ ಬಂಪರ್ ಲಾಭ ತಂದುಕೊಡುತ್ತದೆ ಎಂಬುದು ಮಾತ್ರ ಭ್ರಮೆ. ಏಕೆಂದರೆ ಇವತ್ತು ಎಲ್ಲ ಜಾತಿ, ವರ್ಗಗಳು ತಮ್ಮದೇ ನೆಲೆಯಲ್ಲಿ ರಾಜಕೀಯ ಪ್ರಜ್ಞೆ ಹೊಂದಿವೆ ಮತ್ತು ಇದರ ಆಧಾರದ
ಮೇಲೆಯೇ ಅವುಗಳ ನಡೆ ತೀರ್ಮಾನವಾಗುತ್ತದೆ.

ಏಕೆಂದರೆ ಈ ಹಿಂದೆ ಸಿದ್ದರಾಮಯ್ಯ ಅವರೂ ಇದೇ ಮಾದರಿಯ ೩ ಮಾಸ್ಟರ್ ಸ್ಟ್ರೋಕ್ ಹೊಡೆದ ಸಂಭ್ರಮದಲ್ಲಿದ್ದರು. ಪರಿಶಿಷ್ಟರಿಗಾಗಿ ವಿಶೇಷ ಕಾಯ್ದೆ ರೂಪಿಸಿ, ಸರಕಾರದ ಎಲ್ಲ ಇಲಾಖೆಗಳಲ್ಲಿ ಶೇ. ೧೮ರಷ್ಟು ಹಣವನ್ನು ಪರಿಶಿಷ್ಟರಿಗೆ ಮೀಸಲಿ ಡಲು ಕ್ರಮ ಕೈಗೊಂಡಿದ್ದು ಸಿದ್ದರಾಮಯ್ಯ ಅವರ ಮೊದಲನೇ ಮಾಸ್ಟರ್ ಸ್ಟ್ರೋಕ್. ಹೀಗೆ ಜನಸಂಖ್ಯೆಗನುಗುಣವಾಗಿ ಪರಿಶಿಷ್ಟರ ಪಾಲಿನ ಹಣವನ್ನು ಅವರಿಗೇ ಖರ್ಚು ಮಾಡಬೇಕೆಂಬ ನಿರ್ಧಾರ ಅಪೂರ್ವವಾದದ್ದು. ನೆರೆಯ ಆಂಧ್ರ ಪ್ರದೇಶವನ್ನು ಹೊರತುಪಡಿಸಿದರೆ ಇಂಥ ಕೆಲಸ ಮಾಡಿದ್ದು ಕರ್ನಾಟಕ ಮಾತ್ರ.

ಈ ಮಧ್ಯೆ ಬಡ್ತಿ ಮೀಸಲಾತಿಗೆ ಸಂಬಂಧಿಸಿ ಶುರುವಾದ ಕಲಹ ಸರಕಾರಿ ಕೆಲಸದಲ್ಲಿದ್ದ ಪರಿಶಿಷ್ಟರಿಗೆ ಆತಂಕ ತಂದಾಗ ಕಾಯ್ದೆ ರೂಪಿಸಿದ್ದು ಸಿದ್ದರಾಮಯ್ಯ ಸರಕಾರ. ಪರಿಶಿಷ್ಟರಿಗೆ ಬಲ ನೀಡಬೇಕು ಎಂಬ ಕಾರಣಕ್ಕಾಗಿ ೧ ಕೋಟಿ ರು.ವರೆಗಿನ ಗುತ್ತಿಗೆ ಯನ್ನು ಅವರಿಗೆ ನೀಡಲು ಕಾಯ್ದೆ ರೂಪಿಸಿದ್ದು ಸಿದ್ದರಾಮಯ್ಯ ಸರಕಾರದ ಮೂರನೇ ಮಾಸ್ಟರ್ ಸ್ಟ್ರೋಕ್. ಆದರೆ ಈ ೩ ಸ್ಟ್ರೋಕುಗಳು 2018ರ ವಿಧಾನಸಭಾ ಚುನಾವಣೆಯಲ್ಲಿ ಅವರ ಕೈಹಿಡಿಯಲಿಲ್ಲ.

ಬದಲಿಗೆ ದಲಿತ ವರ್ಗದ ಬಲಗೈ ಸಮುದಾಯದ ಗಣನೀಯ ಮತಗಳು ಕಾಂಗ್ರೆಸ್ ಜತೆ ನಿಂತರೆ, ಎಡಗೈ ಸಮುದಾಯ ದವರವು ದೊಡ್ಡ ಮಟ್ಟದಲ್ಲಿ ಬಿಜೆಪಿ ಜತೆ ನಿಂತವು. ಇದಕ್ಕೊಂದು ಸೈದ್ಧಾಂತಿಕ ಕಾರಣವೂ ಇದೆ. ಅದೆಂದರೆ ದಲಿತರಿಗೆ ಒಳಮೀಸಲಾತಿ ನೀಡಬೇಕು ಎಂಬ ವಿಷಯದಲ್ಲಿ ಕಾಂಗ್ರೆಸ್ಸಿಗೆ ಸಹಮತವಿಲ್ಲ. ಕಾರಣ? ಒಳಮೀಸಲಾತಿ ಸೌಲಭ್ಯ ಕಲ್ಪಿಸಿದರೆ ದಲಿತರಲ್ಲಿ ಒಡಕುಂಟಾಗುತ್ತದೆ ಎಂಬುದು. ಆದರೆ ಮೀಸಲಾತಿಯ ದೊಡ್ಡ ಪ್ರಯೋಜನ ಪಡೆದಿರುವುದು ಬಲಗೈ ಸಮುದಾಯ.

ಒಳಮೀಸಲಾತಿ ಕಲ್ಪಿಸಿಕೊಡಬೇಕು ಎಂಬ ಎಡಗೈ ಸಮುದಾಯದ ಒತ್ತಾಯಕ್ಕೆ ಬಿಜೆಪಿಯ ಸಹಮತವಿದೆ. ಕರ್ನಾಟಕದ ನೆಲೆಯಲ್ಲಿ ದಲಿತ ಸಮುದಾಯ ರಾಜಕೀಯವಾಗಿ ಇಬ್ಭಾಗವಾಗಿ ಹಲವು ಕಾಲವಾಗಿದೆ. ಹೀಗಾಗಿ ಇಂಥ ನೆಲೆಯಲ್ಲಿ ದಲಿತ ಮತಗಳು ಚಲಾವಣೆಯಾಗುತ್ತವೆಯೇ ಹೊರತು ಮೀಸಲಾತಿಯನ್ನು ಹೆಚ್ಚಳ ಮಾಡಿದ ಕಾರಣಕ್ಕಾಗಿ ಪರಿಶಿಷ್ಟರ ಮತಬ್ಯಾಂಕು
ಸಾರಾಸಗಟಾಗಿ ಬಿಜೆಪಿ ಜತೆ ನಿಲ್ಲುವುದು ನಿಜಕ್ಕೂ ಅಸಾಧ್ಯ.

ಗಮನಿಸಬೇಕಾದ ಸಂಗತಿಯೆಂದರೆ ತಮ್ಮ ಅವಧಿಯಲ್ಲಿ ಸಿದ್ದರಾಮಯ್ಯ ಬಾರಿಸಿದ ಮಾಸ್ಟರ್ ಸ್ಟ್ರೋಕುಗಳು ಇಡೀ ದಲಿತ ಸಮುದಾಯದ ಶಕ್ತಿಯನ್ನು ಹೆಚ್ಚಿಸಿದ್ದವೇ ಹೊರತು ವಿಶೇಷವಾಗಿ ಬಲಗೈ ಸಮುದಾಯದ ಶಕ್ತಿಯನ್ನಲ್ಲ. ಹೀಗಿದ್ದರೂ ಅದು ೨೦೧೮ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ವರವಾಗಲಿಲ್ಲ ಎಂಬುದು ಅರ್ಥವಾಗಿದ್ದರೆ, ಬಿಜೆಪಿ ಪಾಳಯ ಇಷ್ಟೊಂದು ಸಂಭ್ರಮದಲ್ಲಿರುತ್ತಿರಲಿಲ್ಲ.

***

ಅಂದ ಹಾಗೆ, ಪರಿಶಿಷ್ಟರಿಗೆ ಮೀಸಲಾತಿ ಹೆಚ್ಚಳ ಮಾಡಲು ತನಗಿರುವ ಸಾಮಾಜಿಕ ನ್ಯಾಯದ ಕಾಳಜಿಯೇ ಮುಖ್ಯ ಕಾರಣ ಅಂತ ಬೊಮ್ಮಾಯಿ ಸರಕಾರ ಹೇಳಿಕೊಂಡರೆ ಅದರಲ್ಲಿ ತಪ್ಪೇನಿಲ್ಲ. ಆದರೆ ಈ ಬೆಳವಣಿಗೆಯ ಹಿನ್ನೆಲೆಯಲ್ಲಿ ಬೇರೊಂದು ಬಗೆಯ ಒತ್ತಡಗಳು ಹೆಚ್ಚಾಗುತ್ತವೆ. ತಮ್ಮನ್ನು ‘ಪ್ರವರ್ಗ ೨ಎ’ಗೆ ಸೇರಿಸಬೇಕು ಅಂತ ಹೋರಾಟಕ್ಕಿಳಿದಿರುವ ಪಂಚಮಸಾಲಿ ಲಿಂಗಾಯತರು ಈಗ ಮತ್ತಷ್ಟು ಅಗ್ರೆಸಿವ್ ಆಗಿ ವರ್ತಿಸುತ್ತಾರೆ. ಇದೇ ರೀತಿ ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸ ಬೇಕು ಎಂದು ಬೀದಿಗಿಳಿದಿರುವ ಕುರುಬ ಸಮುದಾಯ ಕೂಡ ಜಿದ್ದಿಗೆ ಬೀಳುತ್ತದೆ. ತಮ್ಮನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕು ಎಂಬ ಮಡಿವಾಳರ ಕೂಗೂ ಮತ್ತಷ್ಟು ಹೆಚ್ಚಾಗುತ್ತದೆ.

ಈ ಮಧ್ಯೆ ಹಲವಾರು ಜಾತಿಗಳು ತಮ್ಮನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕು ಅಂತ, ತಮ್ಮನ್ನು ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಿಸಬೇಕು ಅಂತ ಹೋರಾಡುತ್ತಲೇ ಇವೆ. ಮೀಸಲಾತಿ ಹೆಚ್ಚಳಕ್ಕೂ, ಬೇರೆ ಬೇರೆ ಪ್ರವರ್ಗಗಳ ಪಟ್ಟಿಗೆ ಸೇರಿಸುವು ದಕ್ಕೂ ವ್ಯತ್ಯಾಸವಿದೆ ನಿಜ. ಆದರೆ ಈ ಕೆಲಸಕ್ಕೆ ಕೈಹಾಕಿದರೆ ತಮಗಿರುವ ಮೀಸಲಾತಿ ಪ್ರಮಾಣ ಕಡಿಮೆಯಾಯಿತು ಎಂಬ ಆಕ್ರೋಶ ಶುರುವಾಗುತ್ತದೆ.

ಪಂಚಮಸಾಲಿ ಲಿಂಗಾಯತರನ್ನು ‘ಪ್ರವರ್ಗ ೨ಎ’ಗೆ ಸೇರಿಸುವುದಕ್ಕೆ ಹಿಂದುಳಿದ ವರ್ಗಗಳ ಕೋಟೆಯಿಂದ ಈಗಾಗಲೇ ಅಪಸ್ವರ ಎದ್ದಿದೆ. ಇದೇ ರೀತಿ ಕುರುಬರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ವಾಲ್ಮೀಕಿ ಸಮುದಾಯ ಕೆರಳುತ್ತದೆ. ಈಗ ಜನಸಂಖ್ಯೆಯ ಆಧಾರದ ಮೇಲೆ ಪರಿಶಿಷ್ಟ ಪಂಗಡದ ಮೀಸಲಾತಿ ಪ್ರಮಾಣವನ್ನು ಶೇ.೭ಕ್ಕೆ ಏರಿಸಿರುವುದೇನೋ ಸರಿ. ಹೀಗೆ ಏರಿಸಿದ ನಂತರ ರಾಜ್ಯದ ಜನಸಂಖ್ಯೆಯ ಶೇ. ೮ರಷ್ಟಿರುವ ಕುರುಬರನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ ಹೇಗೆ? ಅನ್ನುವುದು ನಾಯಕರ ಆಕ್ರೋಶ.

ಒಂದು ವೇಳೆ ಸರಕಾರವು ಇದನ್ನು ಗಮನದಲ್ಲಿಟ್ಟುಕೊಂಡು ಮೌನವಾಗಿದ್ದರೆ ಪಂಚಮಸಾಲಿಗಳು ಮತ್ತು ಕುರುಬರ ಕೋಪಕ್ಕೆ ಗುರಿಯಾಗುತ್ತದೆ. ಇದನ್ನೆಲ್ಲ ಬೊಮ್ಮಾಯಿ ಸರಕಾರ ಹೇಗೆ ನಿಭಾಯಿಸುತ್ತದೆ ಅನ್ನುವುದೇ ದೊಡ್ಡ ಸವಾಲು.
***

ಅಂದ ಹಾಗೆ, ಮತಬ್ಯಾಂಕುಗಳ ಮೇಲೆ ಪ್ರಭಾವ ಬೀರುವಂಥ ಕೆಲಸಗಳನ್ನು ಮಾಡುವುದು ಉತ್ತಮ ನಡೆ. ಆದರೆ ಮತ ಬ್ಯಾಂಕನ್ನು ಸೆಳೆಯುವ ಸಲುವಾಗಿಯೇ ಇದನ್ನು ಮಾಡುತ್ತೇವೆ ಎಂಬುದು ನಿಜವಾದ ಕಾಳಜಿ ಅಲ್ಲ. ಜನರ ಹಿತವನ್ನು ಕಾಪಾಡಲು ಒಂದು ಸರಕಾರ ಏನು ಕೆಲಸ ಮಾಡುತ್ತದೆ ಎಂಬುದು ಇಲ್ಲಿ ಮುಖ್ಯವಾಗುತ್ತದೆ. ಈ ವಿಷಯದಲ್ಲಿ ಅದು ಯಾವುದೇ ರಾಜಿ ಮಾಡಿಕೊಳ್ಳಬಾರದು. ಉದಾಹರಣೆಗೆ, ಮೋದಿ ನೇತೃತ್ವದ ಕೇಂದ್ರ ಸರಕಾರ ಈ ವರ್ಷದಿಂದ ರಾಜ್ಯಕ್ಕೆ ಬರಬೇಕಿದ್ದ ಜಿಎಸ್‌ಟಿ ಬಾಬ್ತಿನ ಪರಿಹಾರವನ್ನು ನಿಲ್ಲಿಸಿದೆ.

ಈ ಬಾಬ್ತಿನಲ್ಲಿ ನಮಗೆ ನೀಡಬೇಕಾಗಿದ್ದ 20 ಸಾವಿರ ಕೋಟಿಯಷ್ಟು ಹಣ ಬಂದಿಲ್ಲ. ಯಾವ ಕಾರಣಕ್ಕಾಗಿ ನಮಗೆ ಜಿಎಸ್‌ಟಿ ಪರಿಹಾರ ನೀಡುವುದಿಲ್ಲ? ಹಾಗೆ ನೀಡಬಾರದು ಎನ್ನುವುದಾದರೆ ರಾಜ್ಯದಿಂದ ಇನ್ನು ಮುಂದೆ ಜಿಎಸ್‌ಟಿ ಸಂಗ್ರಹವನ್ನು ಸ್ಥಗಿತಗೊಳಿಸುತ್ತೀರಾ? ‘ಇಲ್ಲ, ನಾವು ಮಾಮೂಲಿಯಂತೆ ಜಿಎಸ್‌ಟಿ ಹಣ ಸಂಗ್ರಹಿಸುತ್ತೇವೆ, ನಿಮಗಷ್ಟೇ ಪಾಲು ಕೊಡು ವುದಿಲ್ಲ’ ಎನ್ನುವುದಾದರೆ ರಾಜ್ಯಗಳ ಕೆಲಸ ಏನು? ಅಂತ ಧ್ವನಿಯೆತ್ತಿ ಕೇಳುವ ಕೆಲಸ ಬೊಮ್ಮಾಯಿ ಸರಕಾರದಿಂದ ಆಗಬೇಕು.

ನೀವು ಕೊಡುತ್ತಿರುವುದು ಧರ್ಮದ ಹಣವಲ್ಲ, ನಮ್ಮಿಂದಲೇ ಪಡೆದಿರುವ ಹಣದ ಪಾಲು ಎಂದು ಹೇಳುವ ತಾಕತ್ತು ಬರಬೇಕು. ಇದನ್ನು ಬಿಟ್ಟು ಕಾಂಗ್ರೆಸ್ಸಿನ ಮುಂದೆ ತಾಕತ್ತಿನ ಸವಾಲನ್ನು ಹಾಕಿ ಮೀಸೆ ತಿರುವಿಕೊಳ್ಳುವುದಲ್ಲ. ಜಿಎಸ್‌ಟಿ ಅಂತಲ್ಲ, ರಾಜ್ಯದ ವಿವಿಧ ಯೋಜನೆಗಳಿಗೆ ಕೇಂದ್ರದಿಂದ ಬರಬೇಕಾದ ಪಾಲೂ ಕಡಿಮೆಯಾಗುತ್ತಿದೆ.

ಹೀಗಾಗಿ ರಾಜ್ಯದಿಂದ ಪ್ರತಿವರ್ಷ ಮೂರು ಲಕ್ಷ ಕೋಟಿ ರೂಪಾಯಿ ಎತ್ತಿಕೊಂಡು ಹೋಗುವ ಕೇಂದ್ರ ಸರಕಾರ, ಅದರಲ್ಲಿ ಕಾಲುಭಾಗದಷ್ಟು ಹಣವನ್ನೂ ಹಿಂದಿರುಗಿಸುವುದಿಲ್ಲ ಎಂಬ ಸಿದ್ದರಾಮಯ್ಯ ಅವರ ಆರೋಪ ಏನಿದೆ, ಅದಕ್ಕೆ ಪುಷ್ಟಿ ನೀಡುವಂಥ ಘಟನೆಗಳೇ ನಡೆಯುತ್ತಿವೆ. ಆದರೆ ಈ ಬಗ್ಗೆ ಮಾತನಾಡದ ಬಿಜೆಪಿ ಸರಕಾರ ಜೇನುಗೂಡಿಗೆ ಕೈಹಾಕಿ ತುಪ್ಪ ಸಿಗುತ್ತದೆ ಅಂತ ಕನಸು ಕಾಣುತ್ತಿದೆ. ಅದೇ ಸದ್ಯದ ವಿಪರ್ಯಾಸ.