Saturday, 21st September 2024

Ranjith H Ashwath Column: ಒಡೆದ ಕನ್ನಡಿಯಾದ ರಾಜ್ಯ ಬಿಜೆಪಿ

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ಯಾವುದೇ ಒಂದು ವ್ಯವಸ್ಥೆ ಒಬ್ಬರಿಂದ ನಡೆಯಲು ಸಾಧ್ಯವಿಲ್ಲ. ಭಾರತದಲ್ಲಿರುವ ರಾಜಕೀಯ ವ್ಯವಸ್ಥೆ ಯಲ್ಲಂತೂ ಇದು ಸಾಧ್ಯವೇ ಇಲ್ಲ ಎನ್ನುವುದು ಪದೇಪದೆ ರುಜುವಾತಾಗುತ್ತದೆ. ಅದರಲ್ಲಿಯೂ ರಾಷ್ಟ್ರೀಯ ಪಕ್ಷಗಳಲ್ಲಿ ಒಗ್ಗಟ್ಟಿನ ಹೋರಾಟ ಅಗತ್ಯ. ಸಂಘಟಿತ ಹೋರಾಟವಿದ್ದರೆ ಏನಾಗುತ್ತದೆ? ಸಂಘಟಿತ ಹೋರಾಟ ವಿಲ್ಲದೇ ‘ಏಕಚಕ್ರಾಧಿಪತ್ಯ’ವೆಂದು ಹೊರಟರೆ ಏನಾಗುತ್ತದೆ ಎನ್ನುವುದಕ್ಕೆ ಸರಳ ಉದಾಹರಣೆಯೆಂದರೆ ರಾಜ್ಯ ದಲ್ಲಿರುವ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಎಂದರೆ ತಪ್ಪಾಗುವುದಿಲ್ಲ.

ಹೌದು, ಸಂಘಟಿತ ಹೋರಾಟದಿಂದ ಏನು ಸಾಧ್ಯ ಎನ್ನುವುದನ್ನು ರಾಜ್ಯ ಕಾಂಗ್ರೆಸ್ ತೋರಿಸಿದ್ದರೆ, ಸಂಘಟನೆ
ಯಿಲ್ಲದೇ ಪಕ್ಷವೊಂದು ಮೂರು ಬಾಗಿಲಾಗಿದರೆ, ಅತ್ಯುತ್ತಮ ಸಂಘಟನೆಯನ್ನು ಹೊಂದಿದ್ದರೂ ಪಕ್ಷವೊಂದು ಕೆಲವೇ ವರ್ಷದಲ್ಲಿ ಯಾವ ರೀತಿಯಲ್ಲಿ ಅಧೋಗತಿಗೆ ಹೋಗಲಿದೆ ಎನ್ನುವುದಕ್ಕೆ ರಾಜ್ಯ ಬಿಜೆಪಿ ಸಾಕ್ಷಿಯಾಗಿ ನಿಲ್ಲುತ್ತಿದೆ. ಹಾಗೆ ನೋಡಿದರೆ, ಆಡಳಿತಾರೂಢ ಕಾಂಗ್ರೆಸ್ ವಿರುದ್ಧ ಇತ್ತೀಚಿನ ತಿಂಗಳಲ್ಲಿ ಕೇಳಿ ಬಂದಿದ್ದ ಆರೋಪಗಳನ್ನು ಸರಿಯಾಗಿ ಬಳಸಿಕೊಂಡಿದ್ದರೆ ಸರಕಾರವನ್ನು ಒಂಟಿ ಕಾಲಿನಲ್ಲಿ ನಿಲ್ಲಿಸಬಹುದಾಗಿತ್ತು.

ಆದರೆ ರಾಜ್ಯ ಬಿಜೆಪಿಯಲ್ಲಿನ ‘ಒಳ ಜಗಳ’, ಪ್ರತಿಷ್ಠೆಯಿಂದಾಗಿ ಸರಕಾರದ ವಿರುದ್ಧ ಆರೋಪ ಕೇಳಿಬಂದಿದ್ದರೂ ಕಾಂಗ್ರೆಸಿಗರೇ ಬಿಜೆಪಿಗರ ವಿರುದ್ಧ ಸವಾರಿ ಮಾಡುವಂತಾಗುತ್ತಿದೆ. ಬಿಜೆಪಿಯಲ್ಲಿನ ಹಲವು ಹುಳುಕುಗಳು ವಿವಿಧ ರೀತಿಯಲ್ಲಿ, ಹಲವು ಸನ್ನಿವೇಶದಲ್ಲಿ ಬಹಿರಂಗವಾಗಿದ್ದವು. ಆದರೆ ರಾಜ್ಯ ಬಿಜೆಪಿ ಘಟಕದ ಸಂಘಟನೆಯಲ್ಲಿ ಆಗಿರುವ ಡ್ಯಾಮೇಜ್ ಪ್ರಮಾಣಕ್ಕೆ ಸಾಕ್ಷಿಯಾಗಿದ್ದು, ಭಿನ್ನಮತಕ್ಕೆ ಸಂಬಂಧಿಸಿದಂತೆ ಓಡಾಡುತ್ತಿದ್ದ ಎಲ್ಲ ‘ಅಂತೆ-ಕಂತೆ’ಗಳಿಗೆ ಸ್ಪಷ್ಟನೆ ನೀಡಿದ್ದು ಕಳೆದ ವಾರ ಸದಾಶಿವನಗರದ ರಾಷ್ಟ್ರೋತ್ಥಾನದಲ್ಲಿ ನಡೆದ ಸಂಘ ಪರಿವಾರದವರ ‘ಮಧ್ಯಸ್ಥಿಕೆ’ಯ ಸಭೆಯಲ್ಲಿ ಎನ್ನುವುದು ಸ್ಪಷ್ಟ.

ವಿಜಯೇಂದ್ರ ಹಾಗೂ ಬಸನಗೌಡ ಪಾಟೀಲ್ ಯತ್ನಾಳ್ ಆಂಡ್ ಟೀಂ ವಿರುದ್ಧದ ಮುಸುಕಿನೊಳಗಿನ ಗುದ್ದಾಟ
ಇಂದು-ನಿನ್ನೆಯದ್ದಲ್ಲ. ಅವರು ಇವರ ವಿರುದ್ಧ ದೂರು ನೀಡುವುದು, ಇವರು ಅವರ ವಿರುದ್ಧ ದೂರು ನೀಡುವುದು
ಕಳೆದೊಂದು ವರ್ಷದಿಂದ ನಡೆಯುತ್ತಲೇ ಬಂದಿತ್ತು. ಆದರೆ ಇದು ತಾರಕಕ್ಕೇರಿದ್ದು, ಪಕ್ಷದ ವರಿಷ್ಠರು ಎಂಟ್ರಿ ಯಾಗುವಷ್ಟು ಗಂಭೀರವಾಗಿದ್ದು, ‘ಪ್ರತ್ಯೇಕ ಪಾದಯಾತ್ರೆ’ಯ ಘೋಷಣೆಯ ಬಳಿಕ.

ವಿಜಯೇಂದ್ರ ನೇತೃತ್ವದಲ್ಲಿ ನಡೆದ ಬೆಂಗಳೂರು-ಮೈಸೂರು ಪಾದಯಾತ್ರೆಯು ಮುಗಿಯುವ ಮೊದಲೇ ಯತ್ನಾಳ್, ಅರವಿಂದ ಲಿಂಬಾವಳಿ, ರಮೇಶ್ ಜಾರಕಿಹೊಳಿ ಸೇರಿದಂತೆ ಹಿರಿಯ ಬಿಜೆಪಿಗರೆಲ್ಲ ಸೇರಿ ಬಳ್ಳಾರಿ ಪಾದಯಾತ್ರೆ ಯನ್ನು ಘೋಷಿಸಿದರು. ಈ ರೀತಿ ಪ್ಯಾರಲಲ್ ಆಗಿ ತೀರ್ಮಾನಗಳನ್ನು ಕೈಗೊಳ್ಳುತ್ತಾ ಹೋದರೆ ಮುಂದಿನ ಚುನಾವಣೆ ವೇಳೆಗೆ ಪಕ್ಷದ ಸಂಘಟನೆ ನೆಲಕಚ್ಚಲಿದೆ ಎನ್ನುವ ಕಾರಣಕ್ಕೆ ಆರ್‌ಎಸ್‌ಎಸ್ ಮಧ್ಯಸ್ಥಿಕೆಯಲ್ಲಿ ಸಂಧಾನ ಸಭೆಯನ್ನು ಕರೆಯಲಾಗಿತ್ತು.

ಸಂಘದ ಮುಕುಂದ್ ಜೀ, ತಿಪ್ಪೇಸ್ವಾಮಿ ಸೇರಿದಂತೆ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಹಾಗೂ ವಿಜಯೇಂದ್ರ ವಿರುದ್ಧ ಧ್ವನಿ ಎತ್ತಿದ್ದ ಯತ್ನಾಳ್, ಲಿಂಬಾವಳಿ, ಸಿದ್ದೇಶ್ವರ್‌ರಂಥ ಪ್ರಮುಖರು ಹಾಗೂ ಬಿಜೆಪಿ ಕೋರ್ ಕಮಿಟಿ ಸದಸ್ಯರು ಸೇರಿದಂತೆ ಒಟ್ಟು ೩೮ ಜನರನ್ನು ಆಹ್ವಾನಿಸಲಾಗಿತ್ತು. ಈ ಸಭೆ ಆಯೋಜನೆಗೊಳ್ಳುತ್ತಿದ್ದಂತೆ, ಇದೊಂದು ‘ಸಂಧಾನ ಸಭೆ’ ಎಂದೇ ನಿರೀಕ್ಷಿಸಲಾಗಿತ್ತು.

ಇನ್ನು ಕೆಲವರು ಸಂಘದ ಮಧ್ಯಸ್ಥಿಕೆಯಿರುವುದರಿಂದ ವಿಜಯೇಂದ್ರ ಟೀಂ ಹಾಗೂ ಯತ್ನಾಳ್ ಟೀಂ ನಡುವಿನ ವೈರತ್ವ ದೂರವಾಗಿ ಸ್ನೇಹ ವೃದ್ಧಿಸಲಿದೆ ಎನ್ನುವ ವ್ಯಾಖ್ಯಾನಗಳು ಕೇಳಿಬಂದಿದ್ದವು. ಆದರೆ ಸುದೀರ್ಘ ಸಭೆಯಲ್ಲಿ ಸ್ನೇಹ ವೃದ್ಧಿಸುವ ಬದಲು ನೇರಾನೇರ ಟೀಕಾಪ್ರಹಾರ ಶುರುವಾಗಿ ವಿಜಯೇಂದ್ರ ‘ಟಾರ್ಗೆಟ್’ ಆಗಿದ್ದು ಅನೇಕರ ಅಚ್ಚರಿಗೆ ಕಾರಣವಾಯಿತು. ಇದಕ್ಕಿಂತ ಹೆಚ್ಚಿನ ಅಚ್ಚರಿಗೆ ಕಾರಣವಾಗಿದ್ದು, ಸುಮಾರು ಐದು ತಾಸು ನಡೆದ ಸಭೆಯಲ್ಲಿ ವಿಜಯೇಂದ್ರ ವಿರುದ್ಧ ಬಂಡಾಯ ನಾಯಕರು ಮಾತ್ರವಲ್ಲದೇ ಅವರದ್ದೇ ಪದಾಧಿಕಾರಿಗಳ
ಪಟ್ಟಿಯಲ್ಲಿರುವ ನಾಯಕರೂ ವಿಜಯೇಂದ್ರ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು!

ಸಾಮಾನ್ಯವಾಗಿ ಯಾವುದೇ ಪಕ್ಷದಲ್ಲಾದರೂ ಆಯಕಟ್ಟಿನ ಸ್ಥಾನದಲ್ಲಿರುವವರ ವಿರುದ್ಧ ಆರೋಪ, ಆಕ್ರೋಶ ವಿರುತ್ತದೆ. ಆದರೆ ಬಹಿರಂಗ ಸಭೆಗಳಲ್ಲಿ, ಪಕ್ಷದ ಮುಖಂಡರ ಸಮ್ಮುಖದಲ್ಲಿ ಈ ರೀತಿ ಬಹಿರಂಗ ಆಕ್ರೋಶಗಳು ವ್ಯಕ್ತವಾಗುವುದು ತೀರಾ ಕಡಿಮೆ. ಅದರಲ್ಲಿಯೂ ‘ರಾಜ್ಯಾಧ್ಯಕ್ಷನಾಗುವ ಅರ್ಹತೆ ಏನಿದೆ?’ ಎಂದು ಅವರ ಮುಂದೆಯೇ ಕೇಳುವುದು ಪಕ್ಷದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಇದಿಷ್ಟೇ ಅಲ್ಲದೇ, ಸಭೆಯಲ್ಲಿ ಭಾಗವಹಿಸಿದ್ದ ೩೮ ಜನರ ಪೈಕಿ ೩೬ ಮಂದಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಕಿಡಿಕಾರಿದರು.

ಇಷ್ಟಾದರೂ, ಸಂಘಪರಿವಾರದ ಯಾವೊಬ್ಬ ನಾಯಕರೂ ತಡೆಯುವ ಪ್ರಯತ್ನವನ್ನು ಮಾಡಿಲ್ಲವಂತೆ. ಅಂದರೆ ಬಂಡಾಯ ನಾಯಕರಾಡುತ್ತಿದ್ದ ಮಾತುಗಳಿಗೆ ಹಿರಿಯ ನಾಯಕರ ‘ಪರೋಕ್ಷ’ ಸಮ್ಮತಿಯಿದೆ ಎನ್ನುವುದು ಸ್ಪಷ್ಟ.
ಸುದೀರ್ಘ ಐದು ತಾಸಿನ ಸಭೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ವಿರುದ್ಧ ಟೀಕಾಪ್ರಹಾರ ನಡೆಸಿದರೂ ಬಂಡಾಯ ನಾಯಕರಿಗೆ ಏನೂ ಹೇಳದ ಸಂಘ ಪರಿವಾರದವರು ‘ನೀವು ಎಲ್ಲವನ್ನೂ ನಿಭಾಯಿಸಬೇಕು. ಈ ಹಂತದಲ್ಲಿ ಸರಿಪಡಿಸುವುದು ಕಷ್ಟದ ಕೆಲಸ. ಆದರೂ ಇರುವಷ್ಟು ದಿನ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯಿರಿ’ ಎಂದು ವಿಜಯೇಂದ್ರ ಅವರಿಗೆ ಹೇಳಿರುವುದು ಇದೀಗ ಚರ್ಚೆಗೆ ಕಾರಣವಾಗಿದೆ.

ಅದರಲ್ಲಿಯೂ ‘ಇರುವಷ್ಟು ದಿನ’ ಎನ್ನುವುದು ಇದೀಗ ನಾನಾ ರೀತಿಯ ಚರ್ಚೆಗಳಿಗೆ ನಾಂದಿ ಹಾಡಿದೆ. ಕೇವಲ ಇಲ್ಲಿಗೆ ನಿಂತಿಲ್ಲ. ದೆಹಲಿಯಿಂದ ಇದೇ ಸಭೆಗೆಂದು ಆಗಮಿಸಿದ್ದ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು, ‘ಪಕ್ಷ ಇದೀಗ ಒಡೆದ ಕನ್ನಡಿಯಾಗಿದೆ. ಈ ಹಂತದಲ್ಲಿ ಸರಿಪಡಿಸುವುದು ಕಷ್ಟ’ ಎನ್ನುವ ಮಾತನ್ನು ಹೇಳಿ ದ್ದಾರೆ. ಲೋಕಸಭಾ ಚುನಾವಣಾ ಫಲಿತಾಂಶದ ಬಳಿಕ ಬಿಜೆಪಿಯಲ್ಲಿ ಸಂತೋಷ್ ಅವರಿಗೆ ಮತ್ತೆ ಕೆಲ ಜವಾಬ್ದಾರಿ ಗಳನ್ನು ನೀಡಲಾಗಿದೆ.

ವಿಧಾನಸಭಾ ಚುನವಣೆಯ ಬಳಿಕ ಕರ್ನಾಟಕದ ವಿಷಯದಲ್ಲಿ ಸಂತೋಷ್‌ಜೀ ಮಾತು ಕೇಳುತ್ತಿರಲಿಲ್ಲ. ಆದರೆ ಲೋಕಸಭಾ ಚುನಾವಣೆಯಲ್ಲಿ ಪೂರ್ಣ ಬಹುಮತ ಪಡೆಯದೇ ಇರುವುದರಿಂದ ಮತ್ತೆ ಸಂತೋಷ್ ಅವರನ್ನು ಕೇಂದ್ರ ನಾಯಕರು ‘ವಿಶ್ವಾಸಕ್ಕೆ ತೆಗೆದುಕೊಳ್ಳುವ’ ಪ್ರಯತ್ನ ಮಾಡುತ್ತಿದ್ದಾರೆ. ಆದ್ದರಿಂದ ಸಂತೋಷ್ ಅವರು ಅಮಿತ್ ಶಾ ಅವರ ಸಂದೇಶವನ್ನು ಹೊತ್ತುಕೊಂಡೇ ಕರ್ನಾಟಕಕ್ಕೆ ಆಗಮಿಸಿದ್ದರು.

ಸಭೆಯಲ್ಲಿ ಅವರೇ, ‘ಈ ಸಮಯದಲ್ಲಿ ಪಕ್ಷ ಸಂಘಟನೆ ನಿಮ್ಮಿಂದ ಸಾಧ್ಯವಿಲ್ಲ’ ಎನ್ನುವ ಸಂದೇಶವನ್ನು ವಿಜಯೇಂದ್ರ ಅವರಿಗೆ ನೀಡಿದ್ದಾರೆ ಎಂದರೆ ಅದು ಬಹುತೇಕ ಪಕ್ಷದ ವರಿಷ್ಠರ ಮಾತು ಎನ್ನುವುದು ಸ್ಪಷ್ಟ. ಆದ್ದರಿಂದ ಒಡೆದ ಮನೆ ಎನ್ನುವ ಮಾತು ವಿಜಯೇಂದ್ರ ಹಾಗೂ ಅವರೊಂದಿಗೆ ಇರುವ ನಾಯಕರಿಗೆ ಆತಂಕ ಮೂಡಿಸಿದೆ.

ಹಾಗೆ ನೋಡಿದರೆ, ವರ್ಷದ ಹಿಂದೆ ಅಽಕಾರ ಸ್ವೀಕರಿಸಿರುವ ವಿಜಯೇಂದ್ರ ವಿರುದ್ಧವೇಕೆ ಈ ಪ್ರಮಾಣದ ವಿರೋಧ
ಎನ್ನುವ ಪ್ರಶ್ನೆಗಳು ಮೂಡುತ್ತವೆ. ಈಗ ವಿಜಯೇಂದ್ರ ಅವರನ್ನು ವಿರೋಽಸುತ್ತಿರುವ ಬಹುತೇಕ ನಾಯಕರಿಗೆ
ಇಂದಿನ ಸಿಟ್ಟಿಲ್ಲ. ಬದಲಿಗೆ ಈ ಹಿಂದೆ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ, ಪಕ್ಷದ ರಾಜ್ಯಾಧ್ಯಕ್ಷ ರಾಗಿದ್ದಾಗ, ವಿಜಯೇಂದ್ರ ಅವರ ಹಸ್ತಕ್ಷೇಪದ ಬಗ್ಗೆಯೇ ಬಹುತೇಕ ಬಿಜೆಪಿಗರು ಕಿಡಿಕಾರಿದ್ದರು. ಆದರೆ ಯಡಿಯೂರಪ್ಪ ಮುಖ ನೋಡಿಕೊಂಡು ಎಲ್ಲವನ್ನೂ ‘ಸಂಭಾಳಿಸಿ’ಕೊಂಡು ಹೋಗುತ್ತಿದ್ದರು.

ಮುಖ್ಯಮಂತ್ರಿ ಸ್ಥಾನದಿಂದ ಯಡಿಯೂರಪ್ಪ ಇಳಿದ ಬಳಿಕ ವಿಜಯೇಂದ್ರ ಅವರನ್ನು ಸೈಡ್‌ಲೈನ್ ಮಾಡಲು
ವ್ಯವಸ್ಥಿತ ಪ್ಲಾನ್‌ವೊಂದನ್ನು ಸಿದ್ಧಪಡಿಸಲಾಗಿತ್ತು. ಆದರೂ, ಅವರನ್ನು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದ ಮೇಲೆ ‘ಯುವ- ಲಿಂಗಾಯತ’ ಎನ್ನುವ ಕಾರಣಕ್ಕೆ ಕೂರಿಸಿದ್ದು ಬಹುತೇಕ ಬಿಜೆಪಿಗರ ಕಣ್ಣು ಕೆಂಪಾಗುವಂತೆ ಮಾಡಿತ್ತು ಎಂದರೆ ತಪ್ಪಾಗುವುದಿಲ್ಲ. ರಾಜ್ಯಾಧ್ಯಕ್ಷರಾಗುವ ವೇಳೆಗೆ ಎಲ್ಲವೂ ಸರಿಯಿಲ್ಲ ಎನ್ನುವುದು ವಿಜಯೇಂದ್ರ ಗಮನಕ್ಕೆ ಬಂದರೂ, ತಂದೆಯ ರೀತಿಯಲ್ಲಿ ಎಲ್ಲವನ್ನೂ ಗೆಲ್ಲಬಹುದು ಎನ್ನುವ ಹುಂಬ ತೀರ್ಮಾನಗಳು, ಪಕ್ಷದ ಹಿರಿಯ ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೇ ನೇರ ದೆಹಲಿ ನಾಯಕರ ಸಂಪರ್ಕ, ಬಿಜೆಪಿಯಲ್ಲಿನ ಇಂದಿನ ಈ ಸ್ಥಿತಿಗೆ ಕಾರಣವಾಗಿದೆ.

ಇನ್ನು ಸಭೆಯಲ್ಲಿ ವಿಜಯೇಂದ್ರ ಮಾತನಾಡಲು ಶುರುಮಾಡಿ, ಕಳೆದೊಂದು ವರ್ಷದಲ್ಲಿ ಏನೆಲ್ಲ ಮಾಡಲಾಗಿದೆ ಎನ್ನುವ ಬಗ್ಗೆ ‘ಸವಿವರ’ವಾದ ಮಾಹಿತಿ ನೀಡಲು ಮುಂದಾದರು. ಇದರೊಂದಿಗೆ ಎಲ್ಲರನ್ನೂ ವಿಶ್ವಾಸಕ್ಕೆ ಪಡೆಯುವ ಮಾತುಗಳನ್ನು ಆಡಿದ್ದಾರೆ. ಆದರೆ ಈ ಎರಡನ್ನೂ ಮೀರಿ ಒಂದು ಹೆಜ್ಜೆ ಹಿಂದೆ ಹೋಗಿ, ಬಂಡಾಯ ಗುಂಪಿನ ಕೆಲವರನ್ನು ಪದಾಧಿಕಾರಿಗಳನ್ನಾಗಿ ಮಾಡಿಕೊಳ್ಳುವ ಆಫರ್ ನೀಡಿದ್ದಾರೆ. ಆದರೆ ಸಭೆಯಲ್ಲಿನ ಬಹುತೇಕ ನಾಯಕರು ವಿಜಯೇಂದ್ರ ನೀಡಿರುವ ಈ ಆಫರ್ ಅನ್ನು ಸಾರಸಗಟಾಗಿ ತಳ್ಳಿಹಾಕಿದ್ದಾರೆ.

ಅದರಲ್ಲಿಯೂ ಬಸನಗೌಡ ಪಾಟೀಲ್ ಯತ್ನಾಳ್, ಸಿದ್ದೇಶ್ವರ್, ಅರವಿಂದ ಲಿಂಬಾವಳಿ ಅಂಥವರಿಗೆ ಯಾವ ರೀತಿಯ ಪೋಸ್ಟ್ ನೀಡಲು ಸಾಧ್ಯ? ವಿಜಯೇಂದ್ರ ಅಽಕೃತವಾಗಿ ಬಿಜೆಪಿಯಲ್ಲಿ ಜವಾಬ್ದಾರಿ ವಹಿಸಿಕೊಳ್ಳುವ ದಶಕಗಳ ಮೊದಲೇ, ಈ ಎಲ್ಲರೂ ಆಯಕಟ್ಟಿನ ಸ್ಥಾನದಲ್ಲಿ ಪಕ್ಷಕ್ಕಾಗಿ ದುಡಿದಿದ್ದಾರೆ. ಅವರೀಗ ವಿಜಯೇಂದ್ರ ಕೆಳಗೆ ಕೆಲಸ ಮಾಡಲು ಸಾಧ್ಯವೇ? ಎನ್ನುವ ಪ್ರಶ್ನೆಯನ್ನು ಸಭೆಯಲ್ಲಿದ್ದ ಬಹುತೇಕ ನಾಯಕರು ಮುಂದಿಟ್ಟಿದ್ದಾರೆ. ಇದಕ್ಕೆ ಆಫರ್ ಕೊಟ್ಟ ವಿಜಯೇಂದ್ರ ಬಳಿಯೇ ಉತ್ತರವಿರಲಿಲ್ಲ.

ಶಿಸ್ತಿನ ಪಕ್ಷವಾಗಿರುವ ಬಿಜೆಪಿಯಲ್ಲಿ ಕೆಲವೇ ವರ್ಷಗಳ ಹಿಂದೆ ರಾಜ್ಯಾಧ್ಯಕ್ಷರ ವಿರುದ್ಧ ದೂರು ನೀಡುವುದು ಹೋಗಲಿ, ಬಹಿರಂಗವಾಗಿ ಟೀಕಿಸುವುದು ಬಹುದೊಡ್ಡ ಅಪರಾಧ ವಾಗಿತ್ತು. ಆದರೆ ಬದಲಾದ ಸನ್ನಿವೇಶದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷರ ಎದುರಲ್ಲಿಯೇ, ಅವರ ಕೆಳಗೆ ನೇಮಕವಾಗಿರುವ ಪದಾಧಿಕಾರಿಗಳೇ, ಸಂಘ-ಪರಿವಾರದವರ ಮುಂದೆ ರಾಜ್ಯಾಧ್ಯಕ್ಷರ ಸಮ್ಮುಖದಲ್ಲಿಯೇ ದೂರು ನೀಡುವ ಹಂತಕ್ಕೆ ಬಂದು ನಿಂತಿದೆ.

ರಾಜ್ಯ ಬಿಜೆಪಿಯಲ್ಲಿ ಕಳೆದೊಂದು ವರ್ಷದಿಂದ ಆಗುತ್ತಿದ್ದ ಅಸಮಾಧಾನ, ಬಂಡಾಯವೆಲ್ಲ ಒಂದೇ ಬಾರಿಗೆ ಪಕ್ಷದ
ಹಿರಿಯರ ಹಾಗೂ ಸಂಘ ಪರಿವಾರದ ಮುಂದೆ ಪ್ರಕಟವಾಗಿದೆ. ರಾಷ್ಟ್ರೀಯ ನಾಯಕರು ಇನ್ನಾದರೂ ಇದನ್ನು ಸರಿಪಡಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕಿದೆ. ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಲೇಬೇಕು ಎನ್ನುವ ಪಕ್ಷದ ಹಿರಿಯ ನಾಯಕರ ಆಗ್ರಹಕ್ಕೆ ಏಕಾಏಕಿ ಮಣೆ ಹಾಕಲು ಸಾಧ್ಯವಿಲ್ಲವಾದರೂ, ಸಭೆಯ ಬಳಿಕದ ಬೆಳವಣಿಗೆ, ಸಂಘಪರಿವಾರದವರ ‘ಬುದ್ಧಿವಾದ’ ಎಲ್ಲವನ್ನೂ ಸೂಕ್ಷ್ಮವಾಗಿ ಗಮನಿಸಿದರೆ, ರಾಜ್ಯ ಬಿಜೆಪಿಗೆ ಶೀಘ್ರದಲ್ಲಿಯೇ ಬಹುದೊಡ್ಡ ‘ಆಪರೇಷನ್’ ಆಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ. ಈ ಆಪರೇಷನ್ ಬದಲಾವಣೆಯ ರೀತಿಯಲ್ಲಿರುವುದೋ ಅಥವಾ ಸೇರ್ಪಡೆಯ ರೀತಿಯಲ್ಲಿರುವುದೋ ಎನ್ನುವ ಪ್ರಶ್ನೆಗೆ ಉತ್ತರವನ್ನು ಬಿಜೆಪಿಯ ದೆಹಲಿಯ ನಾಯಕರು ಮಾತ್ರ ನೀಡಲು ಸಾಧ್ಯ!

ಇದನ್ನೂ ಓದಿ: Ranjith H Ashwath Column: ಸೈನಿಕ, ದಳದ ನಡುವೆ ಕಮಲ ಪಡೆ !