Wednesday, 17th July 2024

ಬಿಜೆಪಿಗೆ ಸವಾಲುಗಳು ಹೊಸತಲ್ಲ

ಅಭಿಮತ

ಆದರ್ಶ್‌ ಶೆಟ್ಟಿ ಉಪ್ಪಿನಂಗಡಿ

ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರೆಸ್ಸೆಸ್) ಅಂಗಭಾಗಗಳಲ್ಲೊಂದಾಗಿದ್ದ, ದೀನ್ ದಯಾಳ್ ಉಪಾಧ್ಯಾಯ ಹಾಗೂ ಶ್ಯಾಮಾಪ್ರಸಾದ್ ಮುಖರ್ಜಿಯವರ ಮುಂದಾಳತ್ವದಲ್ಲಿ ದೀಪದ ಚಿಹ್ನೆಯಡಿ ಅಂಬೆಗಾಲಿಡುತ್ತಾ ಸಾಗಿದ ‘ಭಾರತೀಯ ಜನಸಂಘ’, ಅಂದಿನ ಘಟಾನುಘಟಿ ಕಾಂಗ್ರೆಸ್‌ನ ಅಬ್ಬರದ ಆಳ್ವಿಕೆಯ ಮಧ್ಯೆ ಆಗ ತಾನೇ ಅಸ್ತಿತ್ವಕ್ಕೆ ಹೆಣಗಾಡುತ್ತಿದ್ದ ಸಮಯವದು.

ತ್ಯಾಗ, ಸಮರ್ಪಣೆ, ಬಲಿದಾನ, ಸಂಘಟನೆ ವಿಚಾರಧಾರೆ, ಸಿದ್ಧಾಂತದ ನೆರಳಿನಡಿಯಲ್ಲಿ ಹಾಗೂ ಸಾಕಷ್ಟು ಸವಾಲಿನ ಮಧ್ಯೆ ಪಕ್ಷವನ್ನು ಸಂಘಟಿಸುವುದು ಅಂದು ಅಷ್ಟು ಸುಲಭದ ಮಾತಾಗಿರಲಿಲ್ಲ. ಜನಸಂಘದ ಬಳಿಕ ಹುಟ್ಟಿದ ಭಾರತೀಯ ಜನತಾ ಪಕ್ಷದ ನೊಗವನ್ನು ಅಂದು ಸಂಘದ ಪ್ರಚಾರಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಹಾಗೂ ಎಲ್.ಕೆ. ಆಡ್ವಾಣಿಯವರ ಹೆಗಲಿಗೇರಿಸಿತ್ತು ಆರೆಸ್ಸೆಸ್. ಕಾಶ್ಮೀರದಿಂದ ಕನ್ಯಾಕುಮಾರಿ ಯವರೆಗೆ ವ್ಯಾಪಿಸಿದ್ದ ಅಂದಿನ ಬಲಾಢ್ಯ ಕಾಂಗ್ರೆಸ್‌ನ ಎದುರು ಪಾದಯಾತ್ರೆ, ರಥಯಾತ್ರೆ, ಜೈಲ್‌ಭರೋ ಸೇರಿದಂತೆ ವಿವಿಧ ಹೋರಾಟಗಳ ಮೂಲಕ ಪಕ್ಷವನ್ನು ಸಂಘಟಿಸಿ ಬೆಳೆಸಿದ ವಾಜಪೇಯಿ-ಆಡ್ವಾಣಿ ಎಂಬ ಜೋಡೆತ್ತುಗಳಿಗೆ ಲಕ್ಷಾಂತರ ಕಾರ್ಯಕರ್ತರು ಸಾಥ್ ನೀಡಿದ್ದರು.

ಅವಮಾನ, ಜೈಲುವಾಸ, ಟೀಕೆ-ಟಿಪ್ಪಣಿ, ಲಾಠಿಯೇಟು ಎಲ್ಲವನ್ನೂ ಅನುಭವಿಸಿದ ಅಂದಿನ ಹಿರಿಯ ನಾಯಕರ ಪರಿಶ್ರಮದ ಫಲವಾಗಿ ಪಕ್ಷವು ಲೋಕಸಭೆಯಲ್ಲಿ ಅಂದು ಎರಡು ಸ್ಥಾನಗಳನ್ನಷ್ಟೇ ಗಳಿಸಲು ಶಕ್ಯವಾಗಿತ್ತು. ಪಕ್ಷದ ಹಿನ್ನಡೆಯ ಕುರಿತಾಗಿ ರಾಜಕೀಯ ಎದುರಾಳಿಗಳಿಂದ ಹೊಮ್ಮಿದ ಟೀಕೆ-ಕುಹಕಗಳಿಗೆ ಪ್ರತಿಯಾಗಿ ವಾಜಪೇಯಿಯವರು ಬಿಜೆಪಿಯ ರಾಷ್ಟ್ರೀಯ ಅಧಿವೇಶನದಲ್ಲಿ, ‘ಕತ್ತಲು ನಿವಾರಣೆಯಾಗುತ್ತೆ, ಸೂರ್ಯ ಪ್ರಕಾಶಿಸುತ್ತಾನೆ, ಕಮಲ ಅರಳುತ್ತೆ’ ಎಂದು ಬಿಜೆಪಿಯ ಕುರಿತಾಗಿ ಹೇಳಿದ್ದ ಭರವಸೆಯ ಮಾತುಗಳಿಂದು ಅಕ್ಷರಶಃ ನಿಜವಾಗಿವೆ.

ಕೇಂದ್ರದಲ್ಲಿ ಬಿಜೆಪಿಯು ವಾಜಪೇಯಿ-ಆಡ್ವಾಣಿ ಸಾರಥ್ಯದಲ್ಲಿ ಸಾಗುತ್ತಿದ್ದರೆ, ಇತ್ತ ಕರ್ನಾಟಕದಲ್ಲಿ ಪಕ್ಷದ ಹೊಣೆಯನ್ನು ಮೊತ್ತಮೊದಲು ಹೊತ್ತವರು ಸಂಘದ ಪ್ರಚಾ ರಕರಾಗಿದ್ದ ಜಗನ್ನಾಥ ಜೋಷಿಯವರು. ಅಂದಿನ ಕಾಂಗ್ರೆಸ್, ಜನತಾ ಪಕ್ಷಗಳ ಪ್ರಾಬಲ್ಯದೆದುರು, ಆಧುನಿಕ ಸೌಲಭ್ಯ-ಸಲಕರಣೆ-ಸಂಪನ್ಮೂಲಗಳಿಲ್ಲ ದೆಯೇ ಶೂನ್ಯದಿಂದ ಶುರುವಾದ ಸಂಘಟನೆ, ತನ್ನ ಸಿದ್ಧಾಂತ, ವೈಚಾರಿಕತೆ, ತ್ಯಾಗ, ಸಮರ್ಪಣಾ ಮನೋಭಾವದಿಂದಾಗಿಯೇ ಮುನ್ನೆಲೆಗೆ ಬಂತು. ಆದರೆ
ಬಿಜೆಪಿಗೆ ಅಂದು ವಿಧಾನಸಭೆಯಲ್ಲಿ ದಕ್ಕಿದ್ದು ಎರಡೇ ಸ್ಥಾನ ಗಳು (ಶಿಕಾರಿಪುರದಿಂದ ಬಿ.ಎಸ್. ಯಡಿಯೂರಪ್ಪ ಮತ್ತು ಬೆಳ್ತಂಗಡಿಯಿಂದ ಕೆ. ವಸಂತ ಬಂಗೇರ). ಆದರೆ ಪಕ್ಷವೀಗ ಯಾವುದೇ ಕುಟುಂಬದ ಪ್ರಭಾವ, ಹಣದ ಬಲವಿಲ್ಲದೆ ರಾಷ್ಟ್ರವ್ಯಾಪಿಯಾಗಿ ಮೈದಳೆದು ಬೇರುಬಿಟ್ಟಿದೆ.

ಕೇಂದ್ರದಲ್ಲಿ ಎರಡಂಕಿಯಲ್ಲಿದ್ದ ಪಕ್ಷವಿಂದು ಮುನ್ನೂರರ ಗಡಿಯನ್ನು ದಾಟಿದ್ದು, ಅದರ ಹಿಂದೆ ಸಾವಿರಾರು ಹಿರಿ-ಕಿರಿಯ ದೇವದುರ್ಲಭ ಕಾರ್ಯಕರ್ತರ ಸಂಘಟನಾತ್ಮಕ ದುಡಿಮೆ, ಪರಿಶ್ರಮ, ತ್ಯಾಗ ಅಡಗಿದೆಯೆಂದರೆ ತಪ್ಪಾಗಲಾರದು. ಪಕ್ಷವು ಹಲವಾರು ವರ್ಷಗಳ ಕಾಲ ಕೇವಲ ಪ್ರತಿಪಕ್ಷ ಸ್ಥಾನಕ್ಕೆ ತೃಪ್ತಿಪಟ್ಟು ಕೊಂಡಿದ್ದೂ ಇದೆ. ತಮಿಳುನಾಡು, ಕೇರಳ ಸೇರಿದಂತೆ ಕೆಲ ರಾಜ್ಯಗಳಲ್ಲಿ ಪಕ್ಷಕ್ಕೆ ಇನ್ನೂ ಎರಡಂಕಿಯನ್ನು ದಾಟಲಾಗಿಲ್ಲ. ಅಲ್ಲೂ ಸಾಕಷ್ಟು ಸವಾಲಿದೆ. ಆದರೂ
ಕಾರ್ಯಕರ್ತರು ಧೃತಿಗೆಡದೆ ಪಕ್ಷ ಸಂಘಟನೆಗಾಗಿ ಬೆವರು ಬಸಿಯುತ್ತಲೇ ಇದ್ದಾರೆ.

ಪಕ್ಷದ ಪಾಲಿಗೆ ದಕ್ಷಿಣ ಭಾರತದ ಹೆಬ್ಬಾಗಿಲು ಎನಿಸಿದ್ದ ಕರ್ನಾಟಕದಲ್ಲಿ ಬಿಜೆಪಿಗೆ ಅಽಕಾರ ಅನುಭವಿಸುವ ಅವಕಾಶವು ಸ್ಥಾನಗಳ ಅಲ್ಪಕೊರತೆಯಿಂದಾಗಿ ೨-೩ ಬಾರಿ ಕೈತಪ್ಪಿದ್ದರೂ ‘ಆಪರೇಷನ್ ಕಮಲ’ದ ಮೂಲಕ ಅದನ್ನು ಸರಿದೂಗಿಸಿ ಅಽಕಾರ ಪಡೆಯಲಾಗಿತ್ತು. ಆದರೆ ಈ ಸಂದರ್ಭದಲ್ಲಿ ಭುಗಿಲೆದ್ದ ಆಂತರಿಕ ಭಿನ್ನಮತ, ರೆಸಾರ್ಟ್ ರಾಜಕೀಯದಂಥ ಬೆಳವಣಿಗೆಗಳು ಪಕ್ಷದ ಇಮೇಜಿಗೆ ಮಸಿ ಬಳಿದಿದ್ದವು. ತರುವಾಯ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಅಸ್ತಿತ್ವಕ್ಕೆ ಬಂತು. ತದನಂತರ ಬಹುಮತ ಪಡೆದು ಐದು ವರ್ಷ ಅಽಕಾರ ನಡೆಸುವ ಅವಕಾಶ ಬಿಜೆಪಿಗೆ ಲಭಿಸಿತ್ತು. ಆದರೆ ಕಳೆದ ಮೇ ತಿಂಗಳಲ್ಲಿ ನಡೆದ ರಾಜ್ಯ
ವಿಧಾನಸಭಾ ಚುನಾವಣೆಯಲ್ಲಿ ಕೇವಲ ೬೦ ಸ್ಥಾನಗಳಿಗೆ ಬಿಜೆಪಿ ತೃಪ್ತಿಪಟ್ಟುಕೊಳ್ಳಬೇಕಾಯಿತು.

ರಾಜಕಾರಣ, ರಾಜಕೀಯ ಪಕ್ಷ ಎಂದರೆ ನಿಂತ ನೀರಲ್ಲ. ದೇಶದ ರಾಜಕಾರಣದ ಇತಿಹಾಸದಲ್ಲಿ ವಿವಿಧ ಪಕ್ಷಗಳು ಅನೇಕ ಸಲ ಏರಿಳಿತವನ್ನು ಕಂಡಿದ್ದಿದೆ. ಕರ್ನಾಟಕದಲ್ಲೂ ಬಿಜೆಪಿ ವಿಷಯದಲ್ಲಿ ಹೀಗಾಗಿದೆ. ಆದರೆ ರಾಜ್ಯದಲ್ಲಿ ಬಿಜೆಪಿ ಸೋತಿದೆಯೇ ವಿನಾ ಸತ್ತಿಲ್ಲ. ಇತ್ತೀಚಿನ ವಿಧಾನಸಭಾ ಚುನಾವಣಾ ಫಲಿತಾಂಶದ
ಬಳಿಕ, ಸ್ಥಾನಗಳಿಕೆಯಲ್ಲಿ ವಿಫಲವಾಗಿದ್ದಕ್ಕೆ ಬಿಜೆಪಿ ಭಾರಿ ಟೀಕೆ-ಟಿಪ್ಪಣಿಗಳನ್ನು ಕೇಳಬೇಕಾಗಿ ಬಂತು. ಕೆಲ ಸ್ವಪಕ್ಷೀಯರೇ ಕೇಂದ್ರ ಮತ್ತು ರಾಜ್ಯದ ಹಿರಿಯ-ಕಿರಿಯ ನಾಯಕರನ್ನು ವಾಚಾಮಗೋಚರವಾಗಿ ನಿಂದಿಸಿದ್ದೂ ಆಯಿತು. ಪಕ್ಷದಲ್ಲಿ ೨-೩ ಬಾರಿ ಅಧಿಕಾರ ಅನುಭವಿಸಿದವರು, ಟಿಕೆಟ್ ಸಿಗದವರು ಹೀಗೆ ಸಾಕಷ್ಟು ಮಂದಿ ಸಿಕ್ಕ ಸಿಕ್ಕ ಮಾಧ್ಯಮದ ಮುಂದೆ ಪಕ್ಷವನ್ನು ಹೀಗಳೆದರು.

ಪಕ್ಷದ ನಾಯಕರ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಟ್ರೋಲ್ ಗಳಾದವು. ಆದರೆ ಇಲ್ಲೊಂದು ಸಂಗತಿಯನ್ನು ಗಮನಿಸಬೇಕು. ಕರ್ನಾಟಕದಲ್ಲಿ ಈ ಬಾರಿ ಬಿಜೆಪಿಗೆ ಸ್ಥಾನಗಳು ಕಡಿಮೆ ಯಾಗಿರಬಹುದು; ಪಕ್ಷದ ಹಿರಿಯ ನಾಯಕರೆನಿಸಿಕೊಂಡವರ ಹೊಂದಾಣಿಕೆ ರಾಜಕಾರಣ, ಒಳ ಆಟಗಳು ಕೂಡ ಕೆಲವು ಕಡೆ
ಪಕ್ಷದ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದೂ ಇದೆ. ಪಕ್ಷದಲ್ಲಿ ಅಧಿಕಾರ ಅನುಭವಿಸಿದ ಕೆಲವರ ಅಧಿಕಾರದಾಹ, ಹಣದಾಹ, ಕಾರ್ಯಕರ್ತರ ಬಗೆಗಿನ ನಿರ್ಲಕ್ಷ್ಯವೂ ಇದಕ್ಕೊಂದು ಕಾರಣವೆನ್ನಬಹುದು. ಆದರೆ ಪಕ್ಷದ ಮತಗಳಿಕೆಯ ಪ್ರಮಾಣ ಯಥಾಸ್ಥಿತಿಯಲ್ಲಿದೆ.

ಇನ್ನು ಸಂಘಟನಾತ್ಮಕ ವಿಚಾರದಲ್ಲಿ ಪಕ್ಷವು ರಾಜ್ಯದಲ್ಲಿ ಸಾಕಷ್ಟು ಬಲಯುತವಾಗೇ ಇತ್ತು, ಆದರೂ ಈ ಸಲ ಬಿಜೆಪಿಗೆ ಕೊಂಚ ಹಿನ್ನಡೆಯಾಗಿದೆ. ದೇಶದ ಮಿಕ್ಕ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ರಾಜಕಾರಣದ ಶೈಲಿಯೇ ಭಿನ್ನ. ಇಲ್ಲಿನ ಕೆಲ ಜಿಲ್ಲೆಗಳಲ್ಲಿ ಜಾತಿ-ಸಮುದಾಯ, ಹಣಬಲದ ಆಮಿಷಗಳು ಕೂಡ ಹಿಂದಿ ನಿಂದಲೂ ಸಾಕಷ್ಟು ಕೆಲಸ ಮಾಡುತ್ತಾ ಬಂದಿವೆ. ಇಲ್ಲಿ ರಾಜಕೀಯ ಪಕ್ಷಗಳ ಸೈದ್ಧಾಂತಿಕ ವಿಚಾರಧಾರೆಗಳಿಗಿಂತ ಮಿಗಿಲಾದ ಇತರ ವಿಚಾರಗಳೂ
ಮುನ್ನೆಲೆಗೆ ಬರುವುದು, ಪಕ್ಷದೊಳಗಿನ ಕೆಲ ನಾಯಕರ ಕಾರ್ಯವೈಖರಿ, ರಾಜ್ಯ ಬಿಜೆಪಿ ಘಟಕದ ನಾಯಕರಿಗೆ ಸಂಘಟನಾತ್ಮಕ ವಿಚಾರದಲ್ಲಿ ಸೂಕ್ತ ಸಾಥ್ ದೊರಕದೆ ಇರುವುದು ಕೂಡ ಪಕ್ಷದ ಅಲ್ಪಹಿನ್ನಡೆಗೆ ಕಾರಣವೆನ್ನಬಹುದು.

ಬಿಜೆಪಿ ಹಲವು ಬಾರಿ ಮುಗ್ಗರಿಸಿದೆ, ಆರರಿಂದ ಮೂರಕ್ಕೆ ಇಳಿದಿದೆ, ಆದರೂ ಮತ್ತೆ ಮತ್ತೆ ಪುಟಿದೆದ್ದಿದೆ ಎಂಬುದನ್ನು ಮರೆಯಲಾಗದು. ಬಿಜೆಪಿಯು ಸಂಘಟ ನಾತ್ಮಕ ಹಿನ್ನೆಲೆಯಲ್ಲಿ ಬೆಳೆದಿರುವುದರಿಂದ ನಿರ್ದಿಷ್ಟ ‘ವ್ಯಕ್ತಿ’ ಎಂಬುದಿಲ್ಲಿ ನಗಣ್ಯ. ವ್ಯಕ್ತಿಯನ್ನು ಆಧರಿಸಿ ಪಕ್ಷ ಎಂದಿಗೂ ಮುಂದೆ ಸಾಗಿಲ್ಲ. ಸಾಮೂಹಿಕ ನಾಯಕತ್ವ, ರಾಷ್ಟ್ರೀಯತೆ, ಹಿಂದುತ್ವ, ವಿಶಿಷ್ಟ ಸೈದ್ಧಾಂತಿಕ ದೃಷ್ಟಿಕೋನ ಇವುಗಳ ಕಾರಣದಿಂದಾಗಿ ಬಿಜೆಪಿ ಇತರ ಪಕ್ಷಗಳಿಗಿಂತ ಭಿನ್ನವಾಗಿದೆ. ‘ಪಕ್ಷವು ಚುನಾವಣೆಯಲ್ಲಿ ಸೋತಿರಬಹುದು ಅಥವಾ ಸೋಲಬಹುದು; ಆದರೆ ಕಾರ್ಯಕರ್ತ ಎಂದಿಗೂ ಸೋಲುವುದಿಲ್ಲ’ ಎಂಬ ಬಿಜೆಪಿಯ ಹಿರಿಯ ನಾಯಕ ಅಟಲ್ ಬಿಹಾರಿ ವಾಜಪೇಯಿಯವರ ಮಾತುಗಳನ್ನು ಸಂಬಂಧಪಟ್ಟವರು ಮರೆಯದಿದ್ದರೆ ಒಳಿತು.

Leave a Reply

Your email address will not be published. Required fields are marked *

error: Content is protected !!