Thursday, 12th December 2024

ಬಿಜೆಪಿ ಅಂದ್ರೆ ಫೈಯರ್‌ ಅಂದ್ಕೊಂಡ್ರಾ? ಫ್ಲವರು…ಕಿವಿ ಮೇಲೆ

ತುಂಟರಗಾಳಿ

ಸಿನಿಗನ್ನಡ

ಯುವ ನಟರು ಚಿತ್ರರಂಗಕ್ಕೆ ಬರ್ತಾ ಇರಬೇಕು ಆಗಲೇ ಹಳೆಯ ತಳಿ ಮತ್ತು ಹೊಸ ತಲೆಗಳ ಸಂಗಮದಲ್ಲಿ ಇಂಡಸ್ಟ್ರಿ ಉದ್ಧಾರ ಆಗುತ್ತೆ ಅನ್ನೋ ಮಾತು ಯಾವಾಗಲೂ ಚಾಲ್ತಿಯಲ್ಲಿರುತ್ತೆ. ಆದ್ರೆ, ಈಗ ಚಂದನವನದಲ್ಲಿ ಯುವನಟ ಮತ್ತು ಯುವ ಅನ್ನೋ ನಟ ಎರಡರದ್ದೂ ಭರ್ಜರಿ ಆಗಮನ ಆಗಿದೆ. ರಾಜ್ ಕುಮಾರ್ ಕುಟುಂಬದ ಇನ್ನೊಂದು ಕುಡಿ ಗುರು ರಾಜ್ ಕುಮಾರ್ ಅರ್ಥಾತ್ ಯುವರಾಜ್ ಕುಮಾರ್ ಅವರ ಮೊದಲ ಚಿತ್ರ ಅನೌ ಆಗಿದೆ. ಈ ಮೊದಲು ರಾಘವೇಂದ್ರ ರಾಜ್ ಕುಮಾರ್ ಅವರ ಮೊದಲ ಪುತ್ರ ವಿನಯ್ ಚಿತ್ರರಂಗದಲ್ಲಿ ಇದ್ದರೂ ಅದೇನೋ ರಾಘವೇಂದ್ರ ರಾಜ್ ಕುಮಾರ್ ಅವರ ಎರಡನೇ ಪುತ್ರ ಯುವರಾಜ್ ಕುಮಾರ್ ಅವರ ಸಿನಿಮಾ ಎಂಟ್ರಿ ಬಗ್ಗೆ ಸ್ಯಾಂಡಲ್‌ ವುಡ್‌ನಲ್ಲಿ ಭಾರೀ ನಿರೀಕ್ಷೆ ಮತ್ತು ಎಕ್ಸೈಟ್‌ಮೆಂಟ್ ಇತ್ತು.

ಯುವ ರಾಜ್ ಕುಮಾರ್ ಯಾವಾಗ ಚಿತ್ರರಂಗಕ್ಕೆ ಬರ್ತಾರೆ ಅನ್ನೋ ಕುತೂಹಲ ಎಲ್ಲರಿಗೂ ಇತ್ತು. ಕೇವಲ ಒಬ್ಬ ನಟನಾಗಿ ಅಲ್ಲದೆ, ತಮ್ಮ ವೈಯಕ್ತಿಕ ವರ್ಚಸ್ಸು ಮತ್ತು ನಡವಳಿಕೆಗಳಿಂದ ಈಗಾಗಲೇ ಯುವರಾಜ್ ಕುಮಾರ್, ಡಾ. ರಾಜ್ ಕುಮಾರ್ ಅವರ ಅಭಿಮಾನಿಗಳಲ್ಲಿ ಇನ್ನಿಲ್ಲದ ನಿರೀಕ್ಷೆ ಮತ್ತು ಭರವಸೆ ಹುಟ್ಟು ಹಾಕಿದ್ದಾರೆ. ಇವನು ತಾತನಿಗೆ ತಕ್ಕ ಮೊಮ್ಮಗ ಅಂತಲೂ, ಪುನೀತ್ ಅವರ ಹೆಸರು ಉಳಿಸುವ ಮಗ ಅಂತಲೂ ಅಭಿಮಾನಿಗಳು ಮಾತಾಡಿಕೊಳ್ಳುತ್ತಿದ್ದರು. ಈಗ ಅವರೆಲ್ಲರ ನಿರೀಕ್ಷೆಗೆ ಫಲ ಸಿಕ್ಕಿದೆ.

ಯುವ ರಾಜ್ ಕುಮಾರ್ ಅಭಿನಯದ ಯುವ ಸಿನಿಮಾದ ಟೀಸರ್ ಬಿಡುಗಡೆ ಆಗಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಂದಹಾಗೆ, ಈ ಟೀಸರ್‌ನಲ್ಲಿ ಯುವ ಕೂತಿರೋ ಬೈಕ್ ನಂಬರ್ ೧೪೪ ಆಗಿದೆ. ಅದು ಅಪ್ಪು ಬಳಸುತ್ತಿದ್ದ ಕಾರಿನ ಸಂಖ್ಯೆ ಅನ್ನೋದು ಎಲ್ಲರಿಗೂ ಗೊತ್ತು. ಆದರೆ, ಅದರ ಜೊತೆಗೆ, ಈಗ ಯುವ ಟೀಸರ್ ಬಿಡುಗಡೆ ಆದಮೇಲೆ, ಅದರ ಅಬ್ಬರ ನೋಡಿ, ಈ ಅಣ್ಣಾವ್ರ ಕುಟುಂಬದ ಕುಡಿ ಅದೇನು ಕಡಿದು ಗುಡ್ಡ ಹಾಕುತ್ತೆ ಅಂತ ಆಡಿಕೊಳ್ಳುತ್ತಿದವರ ಗ್ಯಾಂಗ್‌ನಲ್ಲೂ ಸೆಕ್ಷನ್ ೧೪೪ ಜಾರಿ ಆಗಿದೆ ಅನ್ನೋದು ಕಾಕತಾಳೀಯ.

ಲೂಸ್ ಟಾಕ್
ಕೆ. ಎಲ್. ರಾಹುಲ್ (ಕಾಲ್ಪನಿಕ ಸಂದರ್ಶನ)
ಏನ್ ಸಾರ್, ನಿಮ್ಮನ್ನ ಟೀಮಿಂದ ಬಿಟ್ಟ ತಕ್ಷಣ ಇಂಡಿಯಾ ಮ್ಯಾಚ್ ಸೋತುಬಿಡ್ತಲ್ಲ?
-ಈಗೇನು? ಆಡಿ ಗೆಲ್ಲಿಸುವವನು ರೂಢಿಯೊಳಗುತ್ತಮನು, ಆಡದೇ ಗೆಲ್ಲಿಸುವವನು ಮಧ್ಯಮನು, ಅಧಮ ತಾನಾಡದೇ ಸೋಲಿಸುವವನು ಸರ್ವಜ್ಞ ಅಂತಿದ್ದೀರಾ?

ಅಯ್ಯೋ, ನಾನೆಲ್ಲಿ ಹಂಗೇಳಿದೆ, ನೀವು ರನ್ ಹೊಡಿದೇ ಇದ್ರೂ ಇಂಡಿಯಾಗೆ ಲಕ್ಕಿ ಚಾರ್ಮ್ ಅಂತ ಜನ ಮಾತಾಡ್ತಾ ಇದ್ದಾರೆ, ಅದಕ್ಕೇ ಹೇಳಿದೆ
-ನೀವ್ ಹಿಂಗೇ ಆಡ್ಕೊತಾ ಇದ್ರೆ, ನಾನ್ ಆಡೋದೇ ಬಿಟ್ಟುಬಿಡ್ತೀನಿ ಅಷ್ಟೇ..

ಅಯ್ಯೋ, ಈಗೇನ್ ಮಹಾ ಆಡ್ತಾ ಇದ್ದೀರ ಅನ್ನೋ ಥರ ಹೇಳ್ತಿದ್ದೀರಲ್ಲ
-ನಾನ್ ಆಡ್ತಾ ಇಲ್ಲ ಅಂತ ಹಿಂಗೇ ಕಾಲೆಳಿತಾ ಇರಿ, ಒಂದಿನ ಇಂಡಿಯಾ ಟೀಮ್‌ಗೆ ನಾನು, ‘ನಾನ್ ಪ್ಲೇಯಿಂಗ್ ಕ್ಯಾಪ್ಟನ್’ ಆದ್ರೂ ಆಗ್ತೀನಿ.

‘ಏನ್ ಆಟ ಆಡ್ತಾ ಇದ್ದೀರಾ?’, ಓಹ್ ಸಾರಿ, ನೀವ್ ಆಡ್ತಾ ಇಲ್ಲ ಅಲ್ವಾ. ಹೋಗ್ಲಿ ಅಶ್ವಿನ್, ಜಡೇಜಾ, ಅಕ್ಷರ್ ಪಟೇಲ್ ಅವ್ರೇ ನಿಮಗಿಂತ ಚೆನ್ನಾಗಿ ಬ್ಯಾಟಿಂಗ್ ಮಾಡ್ತಾ ಇzರಲ್ಲ ಅದಕ್ಕೇನ್ ಹೇಳ್ತೀರಾ?
-ರೀ, ಆಡೋ ಮಕ್ಕಳಿಗೂ ಗೊತ್ತು ಅವರು ಆಲ್ ರೌಂಡರ್ಸ್ ಅಂತ. ನಾನು ಬ್ಯಾಟ್ಸ ಮನ್ ಅಲ್ವಾ, ಅದಕ್ಕೇ ನನ್ನ ಮೇಲೆ ಆಡಲೇಬೇಕು ಅಂತ ಪ್ರೆಷರ್ ಜಾಸ್ತಿ ಇರುತ್ತೆ ಕಣ್ರೀ.

ಆದ್ರೂ, ಹಿಂಗೇ ಸರಿಯಾಗಿ ಆಡದೇ ಇದ್ರೆ ನಿಮ್ಮನ್ನ ಟೀಮಿಂದ ತೆಗೆದು ಮನೆಗೆ ಕಳಿಸ್ತಾರೆ ಅಂತ ಭಯ ಇಲ್ವಾ?
-ಆಡಿಸಿ ನೋಡು, ಬೀಳಿಸಿ ನೋಡು, ಮನೆಗೆ ಹೋಗದು ಅಂತ ನನ್ನ ಮೇಲೆ ನಂಬಿಕೆ ಇದೆ.

ನೆಟ್ ಪಿಕ್ಸ್
ಖೇಮು ಖೇಮುಶ್ರೀ ಯಾವುದೋ ವಿಷಯಕ್ಕೆ ಮುನಿಸಿಕೊಂಡು ಮನೆಯಲ್ಲಿ ದೊಡ್ಡ ಜಗಳ ಆಗಿತ್ತು. ಖೇಮು ಕೂಡಾ ಅವತ್ತು ತುಂಬಾ ಸಿಟ್ಟಲ್ಲಿದ್ದ. ಹಂಗಾಗಿ ಖೇಮುಶ್ರೀಯನ್ನು ಬಾಯಿಗೆ ಬಂದಂತೆ ಬಯ್ದ. ಖೇಮುಶ್ರೀ ಏನೂ ಕಡಿಮೆ ಇರಲಿಲ್ಲ. ಗಂಡನ ಮೇಲೆ ತಿರುಗಿ ಬಿದ್ದು ಅವನನ್ನು ಎಲ್ಲ ರೀತಿಯಲ್ಲೂ ಹೀಯಾಳಿಸಿದ್ದಳು. ಅದಕ್ಕೆ ಖೇಮುಗೆ ಸಿಕ್ಕಾಪಟ್ಟೆ ಬೇಜಾರಾಗಿ ಎದ್ದು ಗಾಡಿ ತಗೊಂಡು ಹೊರಗೆ ಹೋದ. ಹೋದ್ರೆ ಹೋಗ್ಲಿ ಅಂತ ಖೇಮುಶ್ರೀ ಸುಮ್ಮನಾದಳು. ಆದರೆ, ಎಷ್ಟೊತ್ತಾದರೂ ಖೇಮು ವಾಪಸ್ ಬರಲಿಲ್ಲ. ಊಟದ ಟೈಮಿಗೆ ಬರ್ತಾನೆ ಅಂತ ಕಾದು ಕೂತಿದ್ದ ಖೇಮುಶ್ರೀಗೆ
ಕೊಂಚ ಗಾಬರಿ ಆಯ್ತು . ಹಂಗಾಗಿ ಗಂಡನಿಗೆ ಕಾಲ್ ಮಾಡಿದಳು.

ಮೊದಲೆರಡು ಸಲ, ಖೇಮು ಕಾಲ್ ರಿಸೀವ್ ಮಾಡಲಿಲ್ಲ. ಆಮೇಲೆ ಮೂರ್ನಾಲ್ಕು ಸಲ ಆದ್ಮೆಲೆ ಕಾಲ್ ತೆಗೆದು ಖೇಮು ಏನು? ಅಂದ. ಸದ್ಯ ಅಂತ ಸಮಾಧಾನ ಪಟ್ಟುಕೊಂಡ ಖೇಮುಶ್ರೀ ಎಲ್ಲಿದ್ದೀರಾ? ಅಂತ ಕೇಳಿದಳು. ಅದಕ್ಕೆ ಖೇಮು ಸ್ವಲ್ಪ ಎಮೋಷನಲ್ ಆಗಿ ಮಾತನಾಡತೊಡಗಿದ ‘ನಿಂಗೆ ನೆನಪಿದೆಯಾ, ೫ ವರುಷದ ಹಿಂದೆ ಸಿಟಿ ಸೆಂಟರ್ ಅಲ್ಲಿರೋ ಜ್ಯೂವೆಲ್ಲರ್ಸ್ ಒಂದಕ್ಕೆ ಹೋಗಿದ್ವಿ ಅಲ್ಲಿ ನಿಂಗೊಂದು ಡೈಮಂಡ್ ನೆಕ್ಲೇಸ್ ತುಂಬಾ ಇಷ್ಟ ಆಗಿತ್ತು’. ಖೇಮುಶ್ರೀ ಎಕ್ಸೈಟ್ ಆಗಿ ಹೌದು, ಹೌದು ಅಂದ್ಳು. ಖೇಮು  ದುವರಿಸಿದ ‘ಆದ್ರೆ ಅವತ್ತು ನನ್ನತ್ರ ದುಡ್ಡಿರಲಿಲ್ಲ. ಮುಂದೊಂದು ದಿನ ಏನೇ
ಆಗ್ಲಿ ಆ ನೆಕ್ಲೇಸ್‌ನ ನಾನು ನಿಂಗೆ ಕೊಡಿಸೇ ಕೊಡಿಸ್ತೀನಿ ಅಂತ ಹೇಳಿದ್ದೆ’.

ಖೇಮುಶ್ರೀ ಇನ್ನೂ ಎಕ್ಸೈಟ್ ಆಗಿ ‘ಹೌದು, ಹೌದು, ನಿಜ ಕಣ್ರೀ, ತುಂಬಾ ಚೆನ್ನಾಗಿ ನೆನಪಿದೆ’ ಅಂದ್ಳು. ಮುಂದುವರಿಸಿದ ಖೇಮು ಕೇಳಿದ ‘ಆ ಜ್ಯೂವೆಲ್ಲರಿ ಮುಂದಿರೋ ಮಶ್ ಬಾರಲ್ಲಿ ಕುಂತು ಕುಡಿತಾ ಇದ್ದೀನಿ. ಏನ್ ಕಾಲ್ ಮಾಡಿದ್ದು?’.

ಲೈನ್ ಮ್ಯಾನ್

ಚುನಾವಣೆ ಹತ್ರ ಬಂದಮೇಲೆ ಬಿಜೆಪಿ ಸರಕಾರ ಬಿಟ್ಟಿ ಆಫರ್ ಗಳ ಮಳೆ ಸುರಿಸ್ತಿದೆ

-ಬಿಜೆಪಿ ಅಂದ್ರೆ ಫಾರ್ ಅಂದ್ಕೊಂಡ್ರಾ? ಫ್ಲವರ್ರ‍ು..ಕಮಲ, ಕಿವಿ ಮೇಲೆ.

ಈ ಸ್ಪೋರ್ಟ್ಸ್ ಬೈಕ್‌ಗಳನ್ನ ನೋಡಿದಾಗ ಅನ್ನಿಸಿದ್ದು

-ಇಂಥ ಗಾಡಿಗಳನ್ನ ಅದೆಂಗ್ ಓಡಿಸ್ತಾರೋ ಏನೋಪ್ಪ. ಸೀಟ್ ಮೇಲೆ ಕೂತವರ ಕೈ ಹ್ಯಾಂಡಲ್‌ವರೆಗೂ ಹೋಗ್ಬೇಕು ಅಂದ್ರೆ ಓಲಾ, ಊಬರ್ ಬುಕ್ ಮಾಡ್ಬೇಕಾಗುತ್ತೆ..

ಬಿಜೆಪಿ ಸರಕಾರ ರಾತ್ರೋ ರಾತ್ರಿ ೬೦೦೦ ಕೋಟಿ ಟೆಂಡರ್ ಕರೆದು ಹಗಲು ದರೋಡೆ ಮಾಡ್ತಿದೆ..
-ಅಲ್ಪನಿಗೆ ಅಧಿಕಾರ ಸಿಕ್ರೆ, ಅರ್ಧರಾತ್ರಿಲಿ ಟೆಂಡರ್ ಕರೆದ್ನಂತೆ.

ಒನ್ ಡೇ ಮ್ಯಾಚಲ್ಲಿ ಸೆಂಚುರಿ ಮೇಲೆ ಸೆಂಚುರಿ ಹೊಡೆದು ಟೆ ಮ್ಯಾಚಲ್ಲಿ ಚೀಪ್ ಆಗಿ ಔಟಾಗ್ತಿರೋ ಶುಭ್ ಮನ್‌ಗೆ ಹೇಳೋ ಮಾತು
– ಎವ್ವೆರಿ ಡೇ ಈಸ್ ನಾಟ್ ಒನ್ ಡೇ

ಲೈಫಲ್ಲಿ ಏನೂ ಸಾಧನೆ ಮಾಡಿರದ ತಮ್ಮ ಮಕ್ಕಳನ್ನ ಬಾಲಿವುಡ್ ಮಂದಿ ಹೆಂಗೆ ಬಯ್ತಾರೆ?
-ಆ ಹೀರೋನ ನೋಡಿ ಕಲ್ತ್ಕೋ, ನಿನ್ ವಯಸ್ಸಿಗೆ ಮೂರ್ ಮೂರ್ ಮದ್ವೆ ಆಗಿದ್ದ ಅವ್ನು

ಹಂಗಾದ್ರೆ ಸಲ್ಮಾನ್ ಖಾನ್ ಕಥೆ?
-ಅವ್ನಿಗೆ ಅವ್ನ್ ಅಪ್ಪ ಅಮ್ಮನೇ ಬಯ್ತಾರೆ, ‘ನಿನ್ ಜೊತೆಗಿದ್ದ ಹುಡಿಗೀರಿಗೆ’ ಮದ್ವೆ ಆಗಿ ಮಕ್ಕಳಾಯ್ತು, ನಿಂದ್ಯಾವಾಗ್ಲೋ?

ಕಿವಿ ಚುಚ್ಚುವವರ ಕೆಲಸಕ್ಕೆ ಏನಂತಾರೆ?
-ಇಯರ್‌ರಿಂಗ್ ಏಯ್ಡ

ಡಿಕ್ಷನರಿಗೆ ಇನ್ನೊಂದು ಹೆಸರು
-‘ಅರ್ಥ’ ಶಾಸ್ತ್ರ

ಅಮೆರಿಕಾಕ್ಕೆ ಸಂಬಂಧ ಪಟ್ಟ ಸುದ್ದಿ
-‘ಸ್ಟೇಟ್ಸ್’ ಲೆವೆಲ್ ಸುದ್ದಿ

ಹಾಸಿಗೆಯಲ್ಲಿ ಕಕ್ಕ ಮಾಡಿಕೊಳ್ಳೋ ಪುಟ್ಟ ಮಗನನ್ನು ಏನಂತಾರೆ?
-‘ಮಲ’ ಮಗ