Thursday, 12th December 2024

ಬಿಜೆಪಿ ನಾಯಕರು ತೋರುತ್ತಿರುವ ಈ ಮೌನವ ತಾಳೆವು

ವಿಶ್ಲೇಷಣೆ

ರಮಾನಂದ ಶರ್ಮಾ

ಚುನಾವಣೆಯಲ್ಲಿ ಸೋಲು ಗೆಲುವು ಸಾಮಾನ್ಯ. ಸೋತವರು ಕಂಬಳಿ ಹೊದ್ದು ಮಲಗದೇ, ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ… ಎಂದು ಹಾಡುತ್ತ ಮುನ್ನುಗ್ಗಲು ದಾರಿಯನ್ನು ಹುಡುಕಲು ಧಾವಿಸುತ್ತಾರೆ. ತಪ್ಪಿದ ದಾರಿ ಹುಡುಕಿ, ಎಲ್ಲಿ ಜಾರಿದ್ದೇವೆ ಎಂದು ತಿರುಗಿ ನೋಡುತ್ತಾರೆ.

ಹಾಗೆಯೇ ತಮ್ಮ ಓಟಕ್ಕೆ ಯಾರು ಅಡಚಣೆ ಉಂಟು ಮಾಡಿದ್ದಾರೆ, ಯಾವುದು ಅಡೆತಡೆ ಯನ್ನೊಡ್ಡಿದೆ ಎಂಬುದನ್ನು ವಿಶ್ಲೇಷಿಸು ತ್ತಾರೆ. ಈ ನಿಟ್ಟಿನಲ್ಲಿ ಮುಂದೆ ಇಡುವ ಹೆಜ್ಜೆಗಳ ಬಗೆಗೆ ಸುದೀರ್ಘವಾಗಿ ಚಿಂತಿಸುತ್ತಾರೆ. ಸೋಲನ್ನು ಗೆಲುವಿನ ಸೋಪಾನವನ್ನಾಗಿ ಮಾಡಿ ಕೊಳ್ಳುವ ಬಗೆಗೆ ತಲೆಕೆಡಿಸಿಕೊಳ್ಳುತ್ತಾರೆ. ಆದರೆ, ವಿಧಾನಸಭಾ ಚುನಾವಣೆಯಲ್ಲಿ ಗೆಲುವು ತನ್ನದೇ ಎಂದು ಅತಿಯಾದ ಅತ್ಮವಿಶ್ವಾಸದಲ್ಲಿದ್ದ ಭಾರತೀಯ ಜನತಾ (ಭಾಜಪ), ಸೋಲಿನ ನಂತರ ನಾಳೆ ಇಲ್ಲ, ಇದು ದಾರಿಯ ಕೊನೆ ನಿಲ್ದಾಣ, ಮುಂದೆ ರಸ್ತೆಯೇ ಇಲ್ಲವೆನ್ನುವಂತೆ ಪರಿತಪಿಸುತ್ತಿದೆ.

ಇಡೀ ಪಕ್ಷ ಇಂದು ಗೊಂದಲದ ಗೂಡಾಗಿದೆ. ಮಕ್ಕಳು ಅಡುವ ಹಾವು-ಏಣಿ ಅಟದಲ್ಲಿ ಹಾವಿನ ಬಾಯಿಗೆ ಸಿಲುಕಿ ದಿಢೀರ್ ಎಂದು ಪಾತಾಳಕ್ಕಿಳಿದಂತೆ ಇದೆ. ರಾಜಕಾರಣದಲ್ಲಿ ಬಹುಷಃ ಎಲ್ಲ ಪಕ್ಷವೂ ಇಂಥಹ ಸ್ಥಿತಿಯನ್ನು ಅನುಭವಿಸುವುದು ತೀರಾ ಸಾಮಾನ್ಯ. ಆದರೆ, ಭಾಜಪ ಈ ನಿಟ್ಟಿನಲ್ಲಿ ಇನ್ನೂ ಹತ್ತಡಿ ಕೆಳಗೆ ಇಳಿದಂತೆ ಇದೆ. ಚುನಾವಣೆ ಮುಗಿದು ತಿಂಗಳು ಕಳೆಯುವ ತನಕ ಪಕ್ಷದಲ್ಲಿ ಸೂತಕದ ಕಳೆ ಇತ್ತು. ಅಲ್ಲಲ್ಲಿ ಒಂದೆರಡು ಪಿಸು ಮಾತಿನ ಪ್ರತಿಕ್ರಿಯೆ ಬಿಟ್ಟರೆ ಎಲ್ಲರೂ ತುಟಿಗೆ ದಪ್ಪನೆಯ ಸೊಲೋ ಟೇಪ್ ಹಚ್ಚಿದ ವರಂತೆ ಇದ್ದರು. ಗ್ಯಾರಂಟಿ ಯೋಜನೆಗಳಿಂದ ಕಾಂಗ್ರೆಸ್ ಗದ್ದುಗೆ ಹಿಡಿಯಿತು ಎಂದು ಕೆಲವರು ಕೆಲವು ದಿನ ದಿನ ಅರೋಪ ಮಾಡಿದರು.

ಇನ್ನು ಕೆಲವರು ಈ ಯೋಜನೆಗಳನ್ನು ವಾಚಾಮಗೋಚರ ಟೀಕಿಸಿ ದರು ಮತ್ತು ಲೇವಡಿ ಮಾಡಿದರು. ಈ ಯೋಜನೆಗಳು
ಹೇಗೆ ಹಾದಿ ತಪ್ಪುತ್ತವೆ ಎಂದು ವಿವರಿಸಲು ಯತ್ನಿಸಿದರು. ಅರಂಭಿಕ ಗೊಂದಲದ ನಂತರ ಶಕ್ತಿ ಯೋಜನೆ ಹೊಂಡ ಮತ್ತು ತಿರುವುಗಳನ್ನು ದಾಟುತ್ತಾ ಸದ್ಯದ ಮಟ್ಟಿಗೆ ನಡೆ ಯುತ್ತಿದೆ. ಅನ್ನ ಭಾಗ್ಯಕ್ಕೆ ಕಲ್ಲುಹಾಕಲು ಪ್ರಯತ್ನಿಸಿದರೂ, ಸಿದ್ದು ಹೇಗೋ ಮ್ಯಾನೇಜ್ ಮಾಡುವಂತಿದೆ. ಅನ್ನಭಾಗ್ಯಕ್ಕೆ ಕೇಂದ್ರ ಸರಕಾರ ಹಾಕಿದ ಕಲ್ಲನ್ನು ಮುಂದಿನ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸರಕಾರ ಕನ್ನಡಿಗರಿಗೆ ಅನ್ನ ನೀಡಲಿಲ್ಲ ಎಂದು ದೊಡ್ಡ ಪ್ರಮಾಣದಲ್ಲಿ ಶಬ್ದ ಮಾಡಿಸಿದ್ದು ಚುನಾವಣಾ ಲಾಭವನ್ನು ಗಳಿಸುವುದನ್ನು ಅಲ್ಲಗೆಳೆಯಲಾಗದು.

Read E-Paper click here

ರಾಜಕೀಯವೇ ಹಾಗೆ: ಇಲ್ಲಿ ಮೌನ ಅಲ್ಪಾಯುಷಿ. ಅದು ಹೆಚ್ಚುಕಾಲ ನೆಲೆ ನಿಲ್ಲುವುದಿಲ್ಲ. ಅದಕ್ಕೆ ವೇದಿಕೆ ದೊರೆತ ಕ್ಷಣ, ಅವಕಾಶ ಸಿಕ್ಕಿದ ತಕ್ಷಣ ಮೌನ ಮುರಿಯುತ್ತದೆ, ಭಾವನೆಗಳು, ಆಕ್ರೋಶಗಳು, ಸಿಟ್ಟು- ಸಿಡುಕುಗಳು, ಬೇಗುದಿಗಳೂ, ಅಸಹನೆಗಳು, ಮತ್ಸರಗಳೂ ಸ್ಫೋಗೊಳ್ಳುತ್ತವೆ. ದ್ವೇಷ ಹೊರಬರುತ್ತದೆ. ಜಿ ಮಟ್ಟದ ಆತ್ಮಾವಲೋಕನ ಸಭೆ ಇದಕ್ಕೊಂದು ವೇದಿಕೆ ನೀಡಿದ್ದು, ಈ ವೇದಿಕೆಯಲ್ಲಿ, ಸಭೆಯ ನಂತರ ಮತ್ತು ಸಭೆಯ ಪೂರ್ವದಲ್ಲಿ ಅರೋಪಗಳು ಮತ್ತು ಪ್ರತ್ಯಾರೋಪಗಳು ಪ್ರವಾಹದಂತೆ
ಹರಿದಿವೆ ಮತ್ತು ದಿನಾಲೂ ಹೊಸ ರೂಪ ಪಡೆದು ಹರಿವು ನಿಲ್ಲದಂತೆ ಮುಂದುವರೆಯುತ್ತಿದೆ.

ಹೊಂದಾಣಿಕೆ ರಾಜಕೀಯದ ಬಗೆಗೆ ಚರ್ಚೆ ಮತ್ತು ಅಕ್ರೋಶ ಮುಂದುವರಿಯುತ್ತಿರುವಂತೆ ಈ ಚುನಾವಣೆಯಲ್ಲಿ ನಯವಾಗಿ ಟಿಕೆಟ್ ನಿರಾಕರಿಸಲ್ಪಟ್ಟ ಮತ್ತು ತಮ್ಮ ಪುತ್ರನಿಗೂ ಟಿಕೆಟ್ ಕೊಡಿಸಲಾರದ ಈಶ್ಚರಪ್ಪನವರು ಭಾಜಪದ ಇಂದಿನ ಪರಿಸ್ಥಿತಿಗೆ ಮುಂಬೈಮಿತ್ರ ಮಂಡಳಿಯನ್ನು ನೇರವಾಗಿ ಹೆಸರಿಸದೇ, ಕಾಂಗ್ರೆಸ್ ಪಕ್ಷದಿಂದ ಬಂದ ವಲಿಸಿಗರೇ ಕಾರಣ ಎಂದು ಹೇಳಿ ಹೊಸ ವಿವಾದವನ್ನು ಹುಟ್ಟು ಹಾಕಿದ್ದಾರೆ. ಇದು ವಲಸಿಗರನ್ನು ಮುಖ್ಯವಾಗಿ ಬಿ.ಸಿ.ಪಾಟೀಲರನ್ನು ಕೆರಳಿಸಿದೆ.

ಆಪರೇಷನ್ ಕಮಲ ಮಾಡಿ ಭಾಜಪದ ನೈತಿಕ ತಳಪಾಯಕ್ಕೆ ಗುದ್ದಲಿ ಹಾಕಿ ಆಧಿಕಾರ ಹಿಡಿಯುವಾಗ ಮುಂದಾಗುವ ಅಂದಿನ ಮಂತ್ರವಾಗಿದ್ದು, ಉಳಿದೆಲ್ಲವೂ ಗೌಣವಾಗಿತ್ತು. ಈಶ್ವರಪ್ಪನವರಿಗೆ ಮಂತ್ರಿ ಪದವಿ ದೊರಕಲು ಇವರೇ ಕಾರಣರಲ್ಲವೇ? ಅಂದು
ಕಾಣದ ಸೈದ್ಧಾಂತಿಕ ತತ್ತ್ವ ಮತ್ತು ಆದರ್ಶಗಳು ಇಂದು ಮುನ್ನೆಲೆಗೆ ಬಂದಿದ್ದೇಕೆ? ಅಕಸ್ಮಾತ್ ಭಾಜಪ ಅಧಿಕಾರಕ್ಕೆ ಬಂದು ಇವರಿಗೆ ಮಂತ್ರಿ ಪದವಿ ದೊರಕಿದ್ದರೆ, ಅವರಿಂದ ಇಂಥಹ ಅಭಿಪ್ರಾಯಗಳು ಬರುತ್ತಿತ್ತೇ? ಎಂದು ಕಾರ್ಯಕರ್ತರು ಕೇಳುತ್ತಿದ್ದಾರೆ.

ಅಪರೇಷನ್ ಕಮಲ ಮಾಡಿದಾಗ ಮತ್ತು ತನ್ಮೂಲಕ ಅವರೆಲ್ಲರನ್ನು ಮಂತ್ರಿ ಮಾಡಿದಾಗ, ಮೂಲ ಭಾಜಪದವರು ಯಾರೂ ಧ್ವನಿ ಎತ್ತಲಿಲ್ಲ. ಆಗ ಅಧಿಕಾರ ಪಕ್ಷದ ಕೈಗೆ ದೊರಕಿದ್ದರೆ ಸಾಕಾಗಿತ್ತು. ಈಶ್ವರಪ್ಪನವರೂ ಇದರ ಫಲಾನುಭವಿಗಳೇ ಅಗಿದ್ದರು. ಸುಮಾರು ನಾಲ್ಕು ದಶಕಗಳ ಕಾಲದ ರಾಜಕೀಯ ಅನುಭವ ಹೊಂದಿದ ಇವರು ಈ ಅಪರೇಷನ್ ಕಮಲದ ರಾಜಕೀಯ ಪರಿಣಾಮವನ್ನು ಊಹಿಸದಿರುವುದು ತೀರಾ ಆಶ್ಚರ್ಯ. ಹಾಗೆಯೇ ಭಾಜಪದ ರಾಜ್ಯಾದ್ಯಕ್ಷ ನಳಿನ್ ಕಟೀಲರ ಬಗೆಗೆ ಅಸಂತುಷ್ಟಿ ವ್ಯಕ್ತ ಮಾಡಿದ್ದಾರೆ.

ಅವರನ್ನು ಅದ್ಯಕ್ಷರನ್ನಾಗಿ ಮಾಡಿದಾಗ ಚಕಾರ ಎತ್ತದ ಈಶ್ವರಪ್ಪನವರು ಈಗ ಅವರ ನಿಯುಕ್ತಿ ಬಗೆಗೆ ಅಪಸ್ವರ ಎತ್ತಿದ್ದಾರೆ. ಹಾಗೆಯೆ ಕೆಲವರಿಗೆ ಟಿಕೆಟ್ ನಿರಾಕರಿಸಿದ್ದನ್ನು ಸರಿಯಲ್ಲವೆಂದು ಹೇಳಿದ್ದಾರೆ. ಅಂದು ವರಿಷ್ಠರು ನೀಡಿದ್ದನ್ನು ಪ್ರಸಾದ ಎಂದು
ಕೈಎತ್ತಿ, ಕಣ್ಣಮುಚ್ಚಿ ಸ್ವೀಕರಿಸಿ ಇಂದು ಅಡ್ಡರಾಗ ಎತ್ತಿದರೆ ಇಂಥ ಅಭಿಪ್ರಾಯಗಳಿಗೆ ಚಂದಾದಾರರು ದೊರಕುವುದು ಕಷ್ಟ. ಎಲ್ಲರೂ ಇದೇ ರೀತಿ ಯ ಕೌಂಟರ್‌ಹಾಕುತ್ತಾರೆ.

ಯತ್ನಾಳರು ಅವರ ನಿಯುಕ್ತಿ ಬಗೆಗೆ ಆರಂಭದಲ್ಲಿಯೇ ಸ್ವಲ್ಪ ವಿರೋದಿಸಿದ್ದರು. ಈಶ್ವರಪ್ಪನವರ ಆರೋಪದ ನಂತರ
ರೇಣುಕಾಚಾರ್ಯ ಕೂಡಾ ಧ್ವನಿ ಎತ್ತಿದ್ದಾರೆ. ನಳಿನ್ ಕಟೀಲರ ಅದ್ಯಕ್ಷತೆಯ ಬಗೆಗೆ ಈಶ್ವರಪ್ಪನವರ ಹೇಳಿಕೆಗೆ ಬೆಂಬಲ ನೀಡಿದ್ದಾರೆ ಮತ್ತು ಇನ್ನೂ ಮುಂದೆ ಹೋಗಿ ಶೆಟ್ಟರ್ ಮತ್ತು ಸವದಿಗೆ ಟಿಕೆಟ್ ನಿರಾಕರಿಸಿದ್ದು ಪಕ್ಷಕ್ಕೆ ಹೊಡೆತ ಕೊಟ್ಟಿದೆ ಎನ್ನುವ ರಾಗ ಎಳೆಯುತ್ತಿದ್ದಾರೆ. ಹಾಗೆಯೇ ಮೋದಿ ಸಭೆಗೆ ಜನಸೇರಿಸುವ ನಿಟ್ಟಿನಲ್ಲಿ ಉಸ್ತುವಾರಿ ಆಣ್ಣಾಮಲೈಯವರ ನಿರ್ದೇಶನವನ್ನು ಟೀಕಿಸಿದ್ದಾರೆ.

ಅವರು ದೊಡ್ಡ ಬಾಯಿ ಬಿಟ್ಟಿದ್ದು ಪಕ್ಷಕ್ಕೆ ಮುಜುಗರ ವಾಗುವಂಥ ಮತ್ತು ಕಸಿವಿಸಿಯಾಗುವಂಥ ಒಳಹೂರಣವನ್ನು ತೆಗೆದಿರಿಸಿzರೆ. ಅವರು ಹೊರಗೆಡಹಿದ ಅಂಶಗಳನ್ನು ಹಲವು ಧುರೀಣರು ಮತ್ತು ಕಾರ್ಯಕರ್ತರು ಸರಿ ಎನ್ನುತ್ತಿದ್ದಾರೆ. ರೈಲು, ಸ್ಟೇಷನ್ ಬಿಟ್ಟ ಮೇಲೆ ಟಿಕೆಟ್ ಪಡೆದ ಹಾಗೆ ಎನ್ನುವಂತೆ ಪ್ರತಿಯೊಬ್ಬರೂ ಪಕ್ಷಕ್ಕೆ ಮಾರ್ಮಿಕ ಪೆಟ್ಟು ಬಿದ್ದು ಮೇಲೆ ಏಳಲು ಹರಸಾಹಸ ಪಡುವಾಗ ಯೋಚಿಸುತ್ತಿzರೆ. ವರಿಷ್ಠರ ನಿಲುವನ್ನು ಭಾಜಪದ ರಾಜ್ಯ ಘಟಕದ ಹಿತದೃಷ್ಟಯಲ್ಲಿ ಪ್ರಶ್ನಿಸಿದ್ದರೆ ಇಂದು ಪಕ್ಷಕ್ಕೆ ಈ ಗತಿ ಬರುತ್ತಿರಲಿಲ್ಲ ಎನ್ನುವ ಕೆಲವು ಹಿತಾಸಕ್ತರ ಆಭಿಮತದಲ್ಲಿ ತೂಕವಿದೆ.

ತಮಗೆ ಏನು ಬೇಕು, ಏನು ಬೇಡ ಎಂಬುದನ್ನು ವರಿಷ್ಟರ ಎದುರಿಗೆ ಪ್ರತಿಪಾದಿಸಲಾಗದ ಇವರ ದೌರ್ಬಲ್ಯಕ್ಕೆ ಈಗ ಅವರು ಮರುಗುತ್ತಿzರೆ. ಹೊರಗೆ ಕಾಣದಿದ್ದರೂ ಪಕ್ಷ ಇಂದು ಒಡೆದ ಮನೆಯಾಗಿದೆ ಎಂದು ರಾಜಕೀಯ ವೀಕ್ಷಕರು, ಸುದ್ದಿ ವಾಹಿನಿಗಳು ಯುಟ್ಯೂಬ್ ಚಾನೆಲ್‌ಗಳು, ಮುದ್ರಣ ಮಾಧ್ಯಮಗಳು ಬೊಬ್ಬೆ ಹೊಡೆಯುತ್ತಿವೆ. ರಂಗು ರಂಗಿನ ಭಾಷೆಗಳಲ್ಲಿ ಆ ಪಕ್ಷದ ಬೆಳವಣಿಗೆಯನ್ನು ವಿಸ್ತೃತವಾಗಿ ಬಣ್ಣಿಸುತ್ತಿದ್ದಾರೆ ಮತ್ತು ಬರೆಯುತ್ತಿವೆ ಕೂಡಾ.

ಕಾಂಗ್ರೆಸ್‌ನ ಗ್ಯಾರಂಟಿಗಿಂತ ಭಾಜಪದ ಭಿನ್ನಮತ ಹೆಡ್ ಲೈನ್ ಆಗುತ್ತಿದೆ. ಕೈಗಾರಿಕಾ ಮಂತ್ರಿ ಎಂ.ಬಿ.ಪಾಟೀಲ್ ಅವರು ಅಲ್ಲಿ ಏನೂ ಸರಿಯಿಲ್ಲ, ಎಲ್ಲರೂ ನಮ್ಮ ಪಕ್ಷಕ್ಕೆ ಬರುತ್ತಾರೆ, ಅ ಪಕ್ಷ ದಲ್ಲಿ ಹಲವು ಹತ್ತು ಗುಂಪುಗಳಿವೆ, ಬಿಜಾಪುರ ಒಂದರಲ್ಲಿಯೇ
ಜಿಗಜಿಣಗಿ, ನಡಹಳ್ಳಿ ಮತ್ತು ಯತ್ನಾಳ ಎನ್ನುವ ಮೂರು ಗುಂಪುಗಳು ಇವೆ ಎಂದು ಮೂದಲಿಸಿzರೆ. ಯತ್ನಾಳ್ ಮತ್ತು ನಿರಾಣಿ ಸಂಬಂಧ ಎಣ್ಣೆ ಶೀಗೆಕಾಯಿಯಂತೆ ಅಗಿದೆಯಂತೆ. ಬೊಮ್ಮಾಯಿ- ಯತ್ನಾಳ ಸಂಬಂಧ ಕೂಡಾ ಹಳಿ ತಪ್ಪಿದೆಯಂತೆ. ಇತ್ತೀಚಿನ ವರದಿಗಳ ಪ್ರಕಾರ ಪಕ್ಷ ವಿರೋಽ ಹೇಳಿಕೆಗಳಿಗಾಗಿ ರೇಣುಕಾಚಾರ್ಯರಿಗೆ ಕಾರಣ ಕೇಳಿ ಪಕ್ಷವು ನೋಟಿಸು ನೀಡಿದೆ. ಅವರ ಈ ಹೋರಾಟದಲ್ಲಿ ಅವರು ಏಕಾಂಗಿಯಲ್ಲ ಎನ್ನುವ ಮಾತು ಕೇಳಿ ಬರುತ್ತಿದೆ.

ಮುಂದಿನ ದಿನಗಳಲ್ಲಿ ಅವರ ಹಿಂದೆ ಇನ್ನೂ ಕೆಲವರು ಬರಬಹುದು ಎನ್ನುವ ಆಭಿಪ್ರಾಯ ಇದೆ. ಚುನಾವಣಾ ಪ್ರಚಾರಕ್ಕೆ ಪ್ರಧಾನಿ ಮೋದಿಯವರು ಉತ್ತರ ಕನ್ನಡಜಿಗೆ ಭೇಟಿ ನೀಡಿದಾಗ ಸ್ಥಳೀಯ ಸಂಸದರು ಗೈರಾಗಿದ್ದರು, ಅವರಿಗೆ ಏಕೆ ಶಿಸ್ತಿನ ಕ್ರಮ ಇಲ್ಲ ಎಂದು ಕೆಲವರು ಕೇಳುತ್ತಿzರೆ. ಇತ್ತೀಚೆಗೆ ಬೊಮ್ಮಾಯಿಯವರು ದಾವಣಗೆರೆಯಲ್ಲಿ ತಮ್ಮ ಬೀಗರಾದ ಶಾಮನೂರು
ಶಿವಶಂಕರಪ್ಪನವರನ್ನು ಭೇಟಿಯಾದಾಗ ಅದಕ್ಕೆ ಹೊಂದಾಣಿಕೆ ರಾಜಕೀಯದ ಬಣ್ಣ ಕೊಟ್ಟು ದೊಡ್ಡ ವಿವಾದವಾಗಿತ್ತು. ಟಿವಿ
ಮಾಧ್ಯಮದಲ್ಲಂತೂ ಇದು ಲೀಡ್ ಸ್ಟೋರಿಯಾಗಿ ದಿನಗಟ್ಟಲೆ ಚರ್ಚೆಯಾದವು. ಕರ್ನಾಟಕ ರಾಜಕೀಯದಲ್ಲಿ ಏನೋ ಮಹತ್ವ ದ ರಾಜಕೀಯ ತಿರುವು ಸಂಭವಿಸಿದೆ ಎನ್ನುವ ರೀತಿಯಲ್ಲಿ ಇದನ್ನು ವರದಿ ಮಾಡಿದ್ದವು. ಸಂಘಟನಾ ಕಾರ್ಯದರ್ಶಿ ಸಿ.ಟಿ ರವಿ ಮತ್ತು ಮೈಸೂರು ಸಂಸದ ಪ್ರತಾಪ ಸಿಂಹ ಕೂಡಾ ಇತ್ತೀಚೆಗೆ ಭಾರೀ ಸುದ್ದಿಯಲ್ಲಿದ್ದಾರೆ.

ವಿಜಯಪುರ ಸಂಸದ ಜಿಗಜಿಣಗಿ ಕೂಡಾ ಇತ್ತೀಚೆಗೆ ಸ್ವಲ್ಪ ಧ್ವನಿ ಏರಿಸಿದ್ದಾರೆ ಮತ್ತು ರಾಜ್ಯಾಧ್ಯಕ್ಷ ಪದವಿ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವ ವದಂತಿ ಇದೆ. ಮುಂದಿನ ಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡಲಾಗುವುದಿಲ್ಲ ಎನ್ನುವ ವದಂತಿಯನ್ನು ಅವರು ಬಹಳ ಗಂಭೀರವಾಗಿ ಪರಿಗಣಿಸಿದ್ದಾರೆ. ರಾಜ್ಯಾಧ್ಯಕ್ಷ ಪದವಿಗೆ ದಿನೇ ದಿನೇ ಅಕಾಂಕ್ಷಿಗಳು ಹೆಚ್ಚುತ್ತಿದ್ದು, ಮಾಜಿಮಂತ್ರಿ ಸೋಮಣ್ಣ ಕೂಡ ಟಾವೆಲ್ ಹಾಕಿದ್ದಾರೆ. ನಾಮಪತ್ರ ಸಲ್ಲಿಸಲು ಕೊನೆಯ ದಿನ ಬರುವವರೆಗೆ ಇನ್ನೆಷ್ಟು ಜನರು ಟಾವೆಲ್ ಹಾಕುತ್ತಾರೋ ತಿಳಿಯದು. ಪಕ್ಷ ಇಷ್ಟು ಅಯೋಮಯವಾಗಿದೆಯೆಂದರೆ, ಯಾರ ವಿರುದ್ಧ ಯಾರು ಕತ್ತಿ ಮಸೆಯುತ್ತಿದ್ದಾರೆ ಎಂದು ಹೇಳಲಾಗುತ್ತಿಲ್ಲ.

ಯತ್ನಾಳ ವರ್ಸಸ್ ನಿರಾಣಿ, ಈಶ್ವರಪ್ಪ ವರ್ಸಸ್ ಬಿ.ಸಿ ಪಾಟೀಲ, ಕಟೀಲ್ ವರ್ಸಸ್ ರೇಣು, ಈಶ್ವರಪ್ಪ ವರ್ಸಸ್ ಕಟೀಲ, ಸೋಮಣ್ಣ ವರ್ಸಸ್ ಯಡಿಯೂರಪ್ಪ ಮುಸುಕಿನ ಗುದ್ದಾಟದ ಮಾತು ಕೇಳಿ ಬರುತ್ತಿದ್ದು, ತೆರೆಯ ಹಿಂದೆ ಇನ್ನೆಷ್ಟು ಇವೆಯೋ? ಪಕ್ಷದಲ್ಲಿ ಕೆಲವರು ಪ್ರಹ್ಲಾದ ಜೋಷಿಯವರ ವಿರುದ್ಧ ಮೌನ ಬಂಡಾಯ ಎದ್ದಿದ್ದು, ಮುಂದಿನ ಸಂಸತ್ ಚುನಾವಣೆಯಲ್ಲಿ
ಅವರಿಗೆ ಟಿಕೆಟ್ ನೀಡಬಾರದೆಂದು ಅಭಿಯಾನ ಆರಂಭಿಸಿದ್ದಾರಂತೆ. ಜಗದೀಶ್ ಶೆಟ್ಟರ್‌ಗೆ ಅನ್ವಯಿಸಿದ ಮಾನದಂಡನ್ನೇ ಅವರಿಗೆ ಬಳಸಬೇಕು ಎಂದು ಒತ್ತಾಯಿಸುತ್ತಿzರಂತೆ. ಜಗದೀಶ್ ಶೆಟ್ಟರ್‌ಗೆ ಆದ ಅವಮಾನವನ್ನು ಅವರು ಗಂಭೀರವಾಗಿ ಪರಿಗಣಿಸಿದ್ದಾರಂತೆ.

ಪ್ರತಿ ಜಿಲ್ಲೆ, ನಗರ ಮತ್ತು ಪಟ್ಟಣಗಳಲ್ಲಿ ಪಕ್ಷದ ಅಂತರಿಕ ಭಿನ್ನಮತದ ಬಗೆಗೆ ಜೋರು ದ್ವನಿಯಲ್ಲಿ ಕೇಳಿ ಬರುತ್ತಿದೆ. ಹಾಗೆಯೇ ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸಂತೋಷ್ ಕೂಡಾ ಹಿಟ್ ಲಿಸ್ಟ್‌ನಲ್ಲಿ ಇದ್ದಂತೆ ಕಾಣುತ್ತದೆ. ಪಕ್ಷದ ಇಂದಿನ ಸ್ಥಿತಿಗೆ ಕೆಲವರು ಜೋಷಿ- ಸಂತೋಷ್‌ರನ್ನು ಟಾರ್ಗೆಟ್ ಮಾಡುತ್ತಿದ್ದಾರೆ.

ಚುನಾವಣೆ ಮುಗಿದು ಎರಡುತಿಂಗಳು ಸಮೀಪಿಸಿದರೂ ವಿರೋಧ ಪಕ್ಷದ ನಾಯಕನ ಆಯ್ಕೆಯಾಗಿಲ್ಲ. ರಾಜ್ಯಾಧ್ಯಕ್ಷರ ಆಯ್ಕೆ ಬಗೆಗೆ ಮಾತಿಲ್ಲ. ಅಧಿಕಾರ ಇದ್ದಾಗ ಬಹುತೇಕ ಇಲ್ಲಿಯೇ ಮೊಕ್ಕಾಂ ಮಾಡುತ್ತಿದ್ದ ರಾಜ್ಯ ಉಸ್ತುವಾರಿ ಅರುಣ್ ಸಿಂಗರ ಭೇಟಿ ಇಲ್ಲ. ವರಿಷ್ಠರಿಂದ ಸಲಹೆ-ಸೂಚನೆಗಳು ಇಲ್ಲ. ರಾಜ್ಯ ನಾಯಕರು ವರಿಷ್ಠರನ್ನು ಭೇಟಿಯಾಗಲು ದೆಹಲಿ ವಿಮಾನ ಹತ್ತುತ್ತಿಲ್ಲ.
ವರಿಷ್ಠರ ಮೌನ ಕಾರ್ಯಕರ್ತರಿಗೆ ದಿಗ್ಭ್ರಮೆ ಮೂಡಿಸಿದೆ. ಡಾ.ರಾಜಕುಮಾರ್ ಹಾಡಿದ ಈ ಮೌನವ ತಾಳೆನು ಹಾಡನ್ನು ನೆನಪಿಸಿಕೊಳ್ಳುತ್ತಿದ್ದಾರೆ.

ಶಿಸ್ತಿನ ಪಕ್ಷದ ಲೇಬಲ್ ಅಂಟಿಸಿಕೊಡಿರುವ ಪಕ್ಷವು ಅಶಿಸ್ತಿಗೆ ಬಲಿಯಾಗುತ್ತಿರುವುದು ಒಂದು ವಿಪರ್ಯಾಸ. ಅದು ಭಾಜಪೇತರ ಪಕ್ಷಗಳಿಗೆ ಲೇವಡಿ ಮಾಡಲು, ಟೀಕಿಸಲು ಬ್ರಹ್ಮಾಸ ನೀಡುತ್ತಿದೆ. ಈ ಬೆಳವಣಿಗೆ ಮುಂದಿನ ಲೋಕಸಭಾ ಚುನಾವಣಾ ಫಲಿತಾಂಶದ ಮೇಲೆ ಕರಿ ನೆರಳು ಬೀಳಿಸದಿರಲಿ ಎಂದು ಕಾರ್ಯಕರ್ತರು ಆಶಿಸುತ್ತಿದ್ದಾರೆ.