Wednesday, 9th October 2024

ಗೂಳಿ ಹೊಂಡಕ್ಕೆ ಬಿದ್ದಾಗ ಆಳಿಗೊಂದು ಕಲ್ಲು !

ಕದನ ಕುತೂಹಲ

ರಮಾನಂದ ಶರ್ಮಾ

ಮಳೆ ನಿಂತರೂ ಹನಿಬೀಳುವುದು ನಿಲ್ಲಲಿಲ್ಲ ಎಂಬ ಗಾದೆಯ ಅರ್ಥ ತಿಳಿಯದವರು ಬಿಜೆಪಿಯ ಕರ್ನಾಟಕ ಘಟಕದಲ್ಲಿನ ಆಗುಹೋಗುಗಳನ್ನು ಗಮನಿಸಬೇಕು. ಚುನಾವಣೆ ಮುಗಿದು ಗದ್ದುಗೆ ಕಳೆದುಕೊಂಡು ತಿಂಗಳಾದರೂ, ಸೋಲಿಗೆ ಹೊಣೆಗಾರರನ್ನು ಹುಡುಕುವ ನಿಟ್ಟಿನಲ್ಲಿ ಆರೋಪ- ಪ್ರತ್ಯಾರೋಪಗಳು ಎಲ್ಲಾ ದಿಕ್ಕಿನಿಂದಲೂ ತೂರಿಬರುತ್ತಿವೆ.

ಮೊದಲ ಒಂದೆರಡು ವಾರ ಗರಬಡಿದವರಂತೆ ತೆಪ್ಪಗಿದ್ದು, ಈಗ ಒಬ್ಬೊಬ್ಬರೇ ತುಟಿಬಿಚ್ಚುತ್ತಿದ್ದಾರೆ. ಹೊಂದಾಣಿಕೆ ರಾಜಕೀಯದಿಂದ, ತಮ್ಮವರೇ ತಮಗೆ ಕೊಟ್ಟ ಒಳ ಏಟಿನಿಂದ, ಬೆನ್ನಿಗೆ ಇರಿದ ಚೂರಿಯಿಂದಾಗಿ ತಮಗೆ ಸೋಲಾಯಿತು ಎಂದು ಹಿರಿಯ ನಾಯಕರಾದ ಸಿ.ಟಿ. ರವಿ ಮತ್ತು ಪ್ರತಾಪ ಸಿಂಹ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಪ್ರತಾಪ ಸಿಂಹ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಯಡಿಯೂರಪ್ಪನವರ ನಂತರ ಬಂದವರು ಏನು ಮಾಡಿದರು ಎಂದು ಬೊಮ್ಮಾಯಿ ಯವರನ್ನು ಪರೋಕ್ಷ ವಾಗಿ ತರಾಟೆಗೆ ತೆಗೆದುಕೊಂಡಿ ದ್ದಾರೆ ಮತ್ತು ಪಕ್ಷದ ಕಾರ್ಯಕರ್ತರು ಸತ್ತಾಗ ಏನೂ ಮಾಡಿಲ್ಲ ಎಂದು ದೂಷಿಸಿದ್ದಾರೆ. ಮೈಸೂರಿನ ಕಾರ್ಯಕ್ರಮವೊಂದರಲ್ಲಿ ಬೊಮ್ಮಾಯಿಯವರು ವೇದಿಕೆಯ ಮೇಲೆಯೇ ಪ್ರತಾಪ ಸಿಂಹರನ್ನು ತರಾಟೆಗೆ ತೆಗೆದುಕೊಂಡ ಮೇಲೆ, ಅವರಿಬ್ಬರ ಮಧ್ಯ ಶೀತಲ ಯುದ್ಧವಿತ್ತು ಎಂಬ ಪಿಸುಮಾತು ರಾಜಕೀಯ ವಲಯದಲ್ಲಿ ಕೇಳಿಬರುತ್ತಿರುವುದು ಬೇರೆ ಮಾತು.

‘ಡಾ. ಸುಧಾಕರ್ ತಾವು ಸೋತದ್ದಲ್ಲದೆ, ನನ್ನನ್ನೂ ಸೋಲಿಸಿದರು’ ಎಂದು ಎಂಟಿಬಿ ನಾಗರಾಜ್ ನೇರವಾಗಿ ಆರೋಪಿಸಿ ಕಿಡಿಕಾರಿದ್ದರ ಜತೆಗೆ, ಬೊಮ್ಮಾಯಿಯವರು ತಮಗೆ ಅನ್ಯಾಯ ಮಾಡಿದರು ಎಂದೂ ಕೊರಗಿದ್ದಾರೆ. ಸೋಮಣ್ಣನವರು ತಮಗೆ ಎರಡು ಕಡೆ ಸ್ಪರ್ಧಿಸಲು ಹೇಳಿ ತಮ್ಮ ರಾಜಕೀಯ ಜೀವನವನ್ನು ಬಲಿಪಡೆಯಲಾಯಿತು ಎನ್ನುವ ಮೂಲಕ ನಿರ್ದಿಷ್ಟ ವ್ಯಕ್ತಿಯ ಹೆಸರು ಹೇಳದೆ ಗೊಣಗಿದ್ದಾರೆ. ವಿಚಿತ್ರವೆಂದರೆ, ಅಽಕಾರದಲ್ಲಿದ್ದಾಗ ಇವರೆಲ್ಲ ಮೌನವಾಗಿ, ಪಕ್ಷದ ಶಿಸ್ತಿನ ಹೆಸರಿನಲ್ಲಿ ಅಥವಾ ಇನ್ನಾವುದೋ ಕಾರಣಕ್ಕೆ ತುಟಿಪಿಟಿಕ್ಕೆನ್ನದೆ ಇದ್ದು, ಈಗ ‘ಗೂಳಿ ಹೊಂಡಕ್ಕೆ ಬಿದ್ದಾಗ ಆಳಿಗೊಂದು ಕಲ್ಲು’ ಎನ್ನುವಂತೆ ಮನಸೋ ಇಚ್ಛೆ ಕಲ್ಲುಹೊಡೆಯುತ್ತಿದ್ದಾರೆ! ಈ ಕಲ್ಲೆಸೆತ ಈಗಷ್ಟೇ ಆರಂಭವಾಗಿದ್ದು, ಮುಂದಿನ ದಿನಗಳಲ್ಲಿ ತೀವ್ರವಾಗುವ ಎಲ್ಲ ಲಕ್ಷಣಗಳೂ ಕಾಣುತ್ತಿವೆ.

‘ಈಗ ಕಾಣುತ್ತಿರುವುದು ಕೇವಲ ಟ್ರೇಲರ್; ಮೇನ್ ಪಿಕ್ಚರ್ ಅಭಿ ಬಾಕಿ ಹೈ’ ಎಂದು ವಿಶ್ಲೇಷಕರು ಹೇಳುತ್ತಿದ್ದಾರೆ. ಬಿಜೆಪಿ ಸೋತು ಸುಣ್ಣವಾಗಿ ತಿಂಗಳಾದರೂ, ರಾಜ್ಯಘಟಕದ ಅಧ್ಯಕ್ಷರನ್ನು ಇನ್ನೂ ಹೆಸರಿಸಿಲ್ಲ ಮತ್ತು ವಿರೋಧ ಪಕ್ಷದ ನಾಯಕರನ್ನು ಅಂತಿಮಗೊಳಿಸಿಲ್ಲ. ಪಕ್ಷದ ಸೋಲಿನ ಕಾರಣವನ್ನು ಅಧಿಕೃತವಾಗಿ ಪ್ರಕಟಿಸಿಲ್ಲ. ಅದರ ನಾಯಕರು ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಸ್ಕೀಮ್‌ಗಳನ್ನು ನಿರಂತರವಾಗಿ ಟೀಕಿಸುತ್ತಾ, ತಮ್ಮ ಅಸ್ತಿತ್ವವನ್ನು ತೋರಿಸುತ್ತಿದ್ದಾರೆ ಅಷ್ಟೇ. ವಿಪರ್ಯಾಸವೆಂದರೆ, ಪಕ್ಷ ಧಿಕಾರದಲ್ಲಿದ್ದಾಗ ಪ್ರತಿದಿನ ಮತ್ತು ಪ್ರತಿ ಹಂತದಲ್ಲಿ ದೆಹಲಿಯಿಂದ ವರಿಷ್ಠರು ಮಾರ್ಗದರ್ಶನ ಮಾಡುತ್ತಿದ್ದರು, ರಾಜ್ಯ ಘಟಕದವರು ‘ವರಿಷ್ಠರ ಮಾತೇ ಅಂತಿಮ’ ಎಂಬ ಏಕರಾಗವನ್ನು ಹಾಡುತ್ತಿದ್ದರು; ಸೋಲಿನ ನಂತರ
ವರಿಷ್ಠರ ಹಿತವಚನಗಳು, ಸಲಹೆ-ಸೂಚನೆಗಳ ಸುದ್ದಿಯೇ ಇರಲಿಲ್ಲ.

ರಾಜ್ಯ ಘಟಕದವರು ಬಾಯಿಗೆ ಸೆಲೋಟೇಪ್ ಅಂಟಿಸಿಕೊಂಡು ಜಾಣಮೌನ ಧರಿಸಿದಂತೆ ಕಾಣುತ್ತಿತ್ತು. ಈಗ ಒಬ್ಬೊಬ್ಬರಾಗಿ ಸೋಲಿನ ಬಗ್ಗೆ ಮಾತನಾಡುತ್ತಿದ್ದು ಬೊಮ್ಮಾಯಿಯವರನ್ನು ಪರೋಕ್ಷವಾಗಿ ಟಾರ್ಗೆಟ್ ಮಾಡಲಾಗುತ್ತಿದೆ, ‘ಅಧಿಕಾರದಲ್ಲಿ ಇದ್ದವರೇ ಹೊಣೆ ಹೊರಬೇಕು’ ಎಂದು ಹೇಳಲಾಗುತ್ತಿದೆ. ಅಧಿಕಾರವನ್ನು ಅನುಭವಿಸುವಾಗ ಎಲ್ಲಾ ನ್ಯೂನತೆ, ತಪ್ಪುಗಳನ್ನು ನೋಡಿಯೂ ಸುಮ್ಮನಿದ್ದವರು, ಈಗ ‘ಹಾಗೆ ಮಾಡಬೇ ಕಾಗಿತ್ತು, ಹೀಗೆ ಮಾಡಬೇಕಾಗಿತ್ತು’ ಎಂದೆಲ್ಲಾ ಕೊರೆಯುತ್ತಿದ್ದಾರೆ ಮತ್ತು ‘ಇದರಿಂದಲೇ ಹೀಗಾಯಿತು’ ಎಂದು ಪ್ರತಿಕ್ರಿಯಿಸುತ್ತಿದ್ದಾರೆ.

ವಿಪರ್ಯಾಸವೆಂದರೆ, ಈ ದುರಂತಕ್ಕೆ ಪಕ್ಷದ ದೆಹಲಿ ವರಿಷ್ಠರನ್ನು ಯಾರೂ ಹೊಣೆಗಾರರನ್ನಾಗಿಸುತ್ತಿಲ್ಲ. ‘ಸತ್ಯವನ್ನು ಹೇಳಿದರೆ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಕೈಬಿಟ್ಟರೆ?’ ಎನ್ನುವ ಭಯವಿರಬೇಕು! ಸೋಲೇ ಹಾಗೆ. ಸದಾ ವಿಜಯದ ಹಾದಿಯಲ್ಲಿದ್ದು, ‘ಅದು ನಮ್ಮದೇ’ ಎನ್ನುವ ಅತ್ಯುತ್ಸಾಹದಲ್ಲಿರುವಾಗ ಸೋಲು ಅಪ್ಪಳಿಸಿದರೆ ಮುಂದಿನ ದಾರಿ ಮಸುಕಾಗಿ ‘ದಾರಿ ಕಾಣದಾಗಿದೆ ರಾಘವೇಂದ್ರನೇ…’ ಎಂದು ಹಾಡು ವಂತಾಗುತ್ತದೆ. ಇದು ಬಿಜೆಪಿಯ ಸದ್ಯದ ಪರಿಸ್ಥಿತಿ ಯಾಗಿದ್ದು, ಆಗಿರುವ ತಪ್ಪನ್ನು ‘ಹೊಂದಾಣಿಕೆ’ ರಾಜಕಾರಣದ ಮೇಲೆ ಹೊರಿಸಲಾಗುತ್ತಿದೆ. ವಾಸ್ತವದಲ್ಲಿ ಹೊಂದಾಣಿಕೆ ರಾಜಕಾರಣ ಹೊಸ ಬೆಳವಣಿಗೆಯೇನಲ್ಲ. ಅದು ಈ ದೇಶದಲ್ಲಿ ಹಿಂದೆಯೂ ಇತ್ತು, ಈಗಲೂ ಇದೆ, ಮುಂದೆಯೂ ಇರುತ್ತದೆ.

ತನ್ನ ಗೆಲುವಿಗೆ ಮತ್ತು ತನಗಾಗದವರ ಸೋಲಿಗೆ, ತನ್ನ ಅಧಿಕಾರದ ಹಾದಿಯಲ್ಲಿ ಅಡಚಣೆ ಉಂಟುಮಾಡುವವರನ್ನು ತಡೆಯಲು ಪರಸ್ಪರರು
ಮಾಡಿಕೊಳ್ಳುವ ಒಪ್ಪಂದವೇ ಹೊಂದಾಣಿಕೆ ರಾಜಕಾರಣ. ಇದು ಕಣ್ಣಿಗೆ ಕಾಣುವುದಿಲ್ಲ, ಆದರೆ ಇದರ ನೋವನ್ನು ತಡೆಯಲಾಗುವುದಿಲ್ಲ. ಇದನ್ನು ಒಂದು ರೀತಿಯಲ್ಲಿ ಮೋಸದಾಟ ಅಥವಾ ಶಕುನಿಯಾಟ ಎಂದೂ ಹೇಳುತ್ತಾರೆ. ನಿತ್ಯಜೀವನದಲ್ಲಿ ಯಾರಾದರೂ ‘ರಾಜಕೀಯ ಮಾಡಿದರು’ ಎಂದರೆ, ‘ಮೋಸ ಮಾಡಿದರು’ ಎಂದೇ ಅರ್ಥ. ಮೋಸಕ್ಕಿರುವ ಗೌರವಾನ್ವಿತ ಹೆಸರೇ ರಾಜಕೀಯ!

ಅಂತೆಯೇ, ‘ಹೊಂದಾಣಿಕೆ ಮೋಸ’ ಎನ್ನದೆ ‘ಹೊಂದಾಣಿಕೆ ರಾಜಕೀಯ’ ಎಂದು ಹೇಳುತ್ತಾರೆ! ರಾಜಕೀಯದಲ್ಲಿ ಯಾರೂ ತಾವು ಅಸಮರ್ಥರು
ಎಂದು ಹೇಳುವುದಿಲ್ಲ ಮತ್ತು ಪೂರ್ತಿ ಹೊರಜಗತ್ತಿಗೆ ತಿಳಿದರೂ ಒಪ್ಪುವುದಿಲ್ಲ. ಎಲ್ಲರೂ ಮಂತ್ರಿಗಾದಿಗಾಗಿ, ಪ್ರಮುಖ ಹುದ್ದೆಗಳಿಗಾಗಿ ಕಾಯುತ್ತಲೇ ಇರುತ್ತಾರೆ. ಚುನಾವಣಾ ಸಮಯದಲ್ಲಿ ‘ಇವನು ಆಯ್ಕೆಯಾದರೆ ನನ್ನ ಕುರ್ಚಿಗೆ ಭಂಗ ತರಬಹುದು’ ಎಂದು ಸದಾ ಚಿಂತಿಸುತ್ತಲೇ ಇರುತ್ತಾರೆ. ಅಂತೆಯೇ ‘ಅವನನ್ನು’ ಕುರ್ಚಿಯಿಂದ ದೂರವಿಡಲು ಹೊಂದಾಣಿಕೆ ಮಾಡಿಕೊಳ್ಳುತ್ತಾರೆ. ಈ ಹೊಂದಾಣಿಕೆಯಲ್ಲಿ ಹಲವು ವಿಧ.

ಪಕ್ಷದೊಳಗಿನ ಹೊಂದಾಣಿಕೆ ಒಂದಾದರೆ, ವಿರೋಧಿಗಳೊಡನೆ ಮಾಡಿಕೊಳ್ಳುವ ತಂತ್ರಗಾರಿಕೆ ಇನ್ನೊಂದು. ತನ್ನ ವಿರುದ್ಧ ದುರ್ಬಲ ಅಭ್ಯರ್ಥಿಯನ್ನು ಹಾಕಿಸಿಕೊಳ್ಳುವುದು ಮತ್ತು ಆಯ್ಕೆಯಾಗಿ ತನ್ನ ಕುರ್ಚಿಗೆ ತೊಡಕಾಗುವವರ ಎದುರಿಗೆ ಬಲಿಷ್ಠ ಅಭ್ಯರ್ಥಿ ಇರುವಂತೆ ವಿರೋಧಿಗಳೊಡನೆ ಕೈಕುಲು ಕುವುದು ಮತ್ತೊಂದು ಪರಿ. ಹಾಗೆಯೇ, ತನ್ನ ದಾರಿಗೆ ಅಡ್ಡ ಬರಬಹುದಾದವರಿಗೆ ಟಿಕೆಟ್ ಸಿಗದಂತೆ ನೋಡಿಕೊಳ್ಳುವುದು ಮಗದೊಂದು ವಿಧ. ಈ ನಿಟ್ಟಿನಲ್ಲಿ ರಾಜಕೀಯ ವಿಶ್ಲೇಷಕರು ಸೋಮಣ್ಣನವರ ಉದಾಹರಣೆ ಕೊಡುತ್ತಾರೆ. ಸದಾ ಬೆಂಗಳೂರಿನ ಗೋವಿಂದರಾಜ ನಗರದಿಂದ ಸುರಕ್ಷಿತವಾಗಿ ಆಯ್ಕೆಯಾಗುತ್ತಿದ್ದವರನ್ನು ಮೈಸೂರಿನ ವರುಣಾ ಕ್ಷೇತ್ರದಲ್ಲಿ ‘ಹೆಬ್ಬುಲಿ ಸಿದ್ದು’ ಎದುರು ಸ್ಪರ್ಧಿಸುವಂತೆ ಮಾಡಿದ್ದಲ್ಲದೆ, ಚಾಮರಾಜ ನಗರದಿಂದಲೂ ಕಣಕ್ಕಿಳಿಯವಂತೆ ಮಾಡಿ, ಎರಡೂ ಕಡೆ ಅವರು ಸೋತು ಸುಣ್ಣವಾಗುವಂತೆ ಮಾಡಿದ್ದು ‘ಹೊಂದಾಣಿಕೆ ರಾಜಕಾರಣ’ದ ಅತಿಕ್ರೂರ ಉದಾಹರಣೆ ಎನ್ನುತ್ತಾರೆ ವೀಕ್ಷಕರು.

ಅವರಿಗೆ ಎರಡು ಕಡೆ ಸ್ಪಽಸುವಂತೆ ಮಾಡಿದ ಹಿನ್ನೆಲೆ ಏನು? ಮುಂದಿನ ಲೋಕಸಭಾ ಚುನಾವಣೆ ಸಮಯದಲ್ಲಿ ಟಿಕೆಟ್ ನೀಡುವಾಗ, ‘ಇವರು ಎರಡೂ ಕಡೆ ಸೋತವರು’ ಎಂದು ಹಣೆಪಟ್ಟಿ ನೀಡಿದರೆ? ಇದರ ಅವಶ್ಯಕತೆ ಇತ್ತೇ? ಸೋಮಣ್ಣ ತಮ್ಮ ಸೋಲಿನ ನಂತರ ಈ ನಿಟ್ಟಿನಲ್ಲಿ ಕೆಲವರನ್ನು ಪರೋಕ್ಷವಾಗಿ ಹೆಸರಿಸಿದ್ದರು. ಅವರು ಹೀಗೆ ಪ್ರತಿಕ್ರಿಯಿಸುವಾಗ ಬೇರೆ ಯಾರೂ ಇನ್ನೂ ದನಿಯೆತ್ತಿರಲಿಲ್ಲ.

ಆರ್.ಅಶೋಕ್ ಅವರನ್ನೂ ಹೀಗೆಯೇ ಖೆಡ್ಡಾದಲ್ಲಿ ಸಿಕ್ಕಿಸಲಾಗಿತ್ತು; ಅದೃಷ್ಟವಶಾತ್ ಅವರು ಒಂದರಲ್ಲಿ ಸೋತರೂ ಮತ್ತೊಂದರಲ್ಲಿ ಗೆದ್ದು ರಾಜಕೀಯ ರಂಗದಲ್ಲಿ ಉಳಿದಿದ್ದಾರೆ. ಮುಖ್ಯಮಂತ್ರಿ ರೇಸ್‌ನಲ್ಲಿದ್ದ ಜೋಶಿಯವರಿಗೆ ಅಡ್ಡವಾಗದಿರಲಿ ಎಂದು ಜಗದೀಶ್ ಶೆಟ್ಟರ್‌ರನ್ನು ಹಳಿ ತಪ್ಪಿಸಲಾಯಿತು ಎನ್ನಲಾಗುತ್ತಿದ್ದು, ಎಚ್.ಡಿ. ಕುಮಾರಸ್ವಾಮಿಯವರ ‘ಬ್ರಾಹ್ಮಣ ಮುಖ್ಯಮಂತ್ರಿ’ ಊಹೆಗೆ ಇದು ಪುಷ್ಟಿನೀಡುವಂತಿದೆ. ಆರು ಬಾರಿಶಾಸಕರಾಗಿರುವ ಕಾಗೇರಿಯವರಿಗೆ ಟಿಕೆಟ್ ಕೊಡುವುದಾದರೆ, ಶೆಟ್ಟರ್ ಮಾಡಿದ ತಪ್ಪೇನು? ಎನ್ನುವ ಪ್ರಶ್ನೆಗೆ ಸಮರ್ಪಕ ಉತ್ತರ ದೊರಕುತ್ತಿಲ್ಲ.

ಇವು ಮೇಲ್ನೋಟಕ್ಕೆ ಕಾಣುವ ಹೊಂದಾಣಿಕೆ ರಾಜಕೀಯದ ಕೆಲವು ಸ್ಯಾಂಪಲ್ಲುಗಳು ಎನ್ನಬಹುದಾಗಿದ್ದು, ಸೂಕ್ಷ್ಮವಾಗಿ ಗಮನಿಸಿದರೆ ಮತ್ತಷ್ಟು ಉದಾಹರಣೆಗಳು ಸಿಗುವುದನ್ನು ಅಲ್ಲಗಳೆಯಲಾಗದು. ಅಂತೆಯೇ, ಹೊಂದಾಣಿಕೆ ರಾಜಕಾರಣದ ಆರೋಪವನ್ನು ಅಷ್ಟು ಸುಲಭವಾಗಿ ತಳ್ಳಿಹಾಕ ಲಾಗದು ಎಂಬುದು ರಾಜಕೀಯ ತಂತ್ರಗಾರಿಕೆಯನ್ನು ವಿಶೇಷ ಆಸಕ್ತಿಯಿಂದ ಗಮನಿಸುವವರ ಅಭಿಮತ. ಹೊಂದಾಣಿಕೆ ರಾಜಕಾರಣಕ್ಕೆ ಈ ದೇಶ ದಲ್ಲಿ ಸುದೀರ್ಘ ಇತಿಹಾಸವಿದೆ. ಎಲ್ಲಿಂದಲೋ ಬಂದ ಮೊಘಲರು ಈ ದೇಶವನ್ನು ಲೂಟಿ ಮಾಡಿದ್ದು, ಆಳಿದ್ದು, ನೂರಾರು ಸಂಖ್ಯೆಯಲ್ಲಿದ್ದ ನಮ್ಮ ಸಂಸ್ಥಾನಿಕರು ಆಡಿದ ಹೊಂದಾಣಿಕೆ ರಾಜಕೀಯದ ಆಟದ ಬಲದಿಂದಲೇ.

ಪೋರ್ಚುಗೀಸರು ಮತ್ತು ಇಂಗ್ಲಿಷರು ಈ ದೇಶವನ್ನು ಕೈವಶ ಮಾಡಿಕೊಂಡು ನೂರಾರು ವರ್ಷ ಆಳಿದ್ದರ ಹಿಂದೆ ಕೂಡ ನಮ್ಮ ರಾಜರುಗಳ ಹೊಂದಾಣಿಕೆ ರಾಜಕೀಯದ ನೀಚತನ ಎದ್ದುಕಾಣುತ್ತದೆ. ಇಂದು ದೊಡ್ಡದನಿಯಲ್ಲಿ ಚರ್ಚೆಯಾಗುತ್ತಿರುವ ಹೊಂದಾಣಿಕೆ ರಾಜಕಾರಣವು ಇದರ ಮುಂದಿನ ಭಾಗವಷ್ಟೇ. ಕ್ರಿಕೆಟ್‌ನಲ್ಲಿ ಇದನ್ನು ‘ಮ್ಯಾಚ್ ಫಿಕ್ಸಿಂಗ್’ ಎನ್ನುತ್ತಾರೆ. ಲಂಚ ಸಾಮ್ರಾಜ್ಯದಲ್ಲಿ ‘ಕ್ವಿಟ್ ಪ್ರೊ ಕ್ವೊ’ (ಟ್ಠಿಜಿಠಿ mಟ ಟ್ಠಿಟ) ಎನ್ನುತ್ತಾರೆ. ಇನ್ನೂ ಸರಳವಾಗಿ ಹೇಳುವುದಾದರೆ, ‘ಪರಸ್ಪರ ಸಹಾಯ’. ಶಾಲಾ ಮಕ್ಕಳ ಭಾಷೆಯಲ್ಲಿ ಹೇಳುವುದಾದರೆ ‘ಯಾರಿಗೂ ಹೇಳಬೇಡ’ ಆಟ!

ವಿಪರ್ಯಾಸವೆಂದರೆ, ಹೊಂದಾಣಿಕೆ ರಾಜಕೀಯದ ಆರೋಪ ಮಾಡಿದವರೆಲ್ಲರೂ ತಮ್ಮ ದರ್ಬಾರಿನ ಕಾಲಘಟ್ಟದಲ್ಲಿ ಇದರ ಚಂದಾದಾರರೇ, ಫಲಾನುಭವಿಗಳೇ. ಈಗ ಇವರು ಈ ಅಗೋಚರ ವ್ಯವಸ್ಥೆಯಲ್ಲಿ ‘ಕ್ಲೀನ್ ಬೌಲ್ಡ್’ ಆಗಿರುವುದರಿಂದ ‘ಇದೊಂದು ಮಹಾಪರಾಧ’ ಎಂದು ಬೊಬ್ಬೆಹಾಕುತ್ತಿದ್ದಾರೆ. ಹೊಂದಾಣಿಕೆ ರಾಜಕಾರಣದ ಆರೋಪಕ್ಕೆ ‘೪೦ ಪರ್ಸೆಂಟ್ ಕಮಿಷನ್’ ಆರೋಪದಂತೆ ಸಾಕ್ಷಿ-ಪುರಾವೆ, ದಾಖಲೆಗಳನ್ನು ಒದಗಿಸಲಾಗುವುದಿಲ್ಲ. ಇದು ಬಿಸಿಚರ್ಚೆಯ ವಿಷಯವಾಗಿ ಮಾಧ್ಯಮದಲ್ಲಿ ಕೆಲವು ದಿನ ಮಿಂಚಿ ಮಾಯವಾಗುತ್ತದೆ. ಇದು ಆರೋಪ ಮಾಡಿದವ ರಿಗೂ ಗೊತ್ತಿರುತ್ತದೆ. ಕೆಲವು ದಿನ ರಾಜಕೀಯದಲ್ಲಿ ಸಂಚಲನ ಮೂಡಿಸಲು ಮಾತ್ರ ಸೀಮಿತವಾಗಿರುತ್ತದೆ ಮತ್ತು ರಾಜಕೀಯದಲ್ಲಿ ಬೆನ್ನಹಿಂದೆ ನಡೆಯುವ ಕೆಲವು ಕರಾಳಕೃತ್ಯಗಳ ಬಗೆಗೆ ಜನರಿಗೆ ಮಾಹಿತಿ ದೊರಕುತ್ತದೆ. ಜನರೂ ‘ಅದು ಹೀಗಾ?’ ಎಂದು ಒಂದೆರಡು ದಿನ
ಮಾತಾಡಿ ಮರೆಯುತ್ತಾರೆ…!