Wednesday, 18th September 2024

ಬಿಜೆಪಿಯ ಸಂತೋಷಕ್ಕೆ ಮುಸುಕು

ಮೂರ್ತಿಪೂಜೆ

ಕರ್ನಾಟಕದಲ್ಲಿ ಬಿ.ಎಲ್. ಸಂತೋಷ್ ಅವರು ಪಕ್ಷವನ್ನು ತಳಮಟ್ಟದಿಂದ ಮೇಲ್ಮಟ್ಟದವರೆಗೆ ಸಂಘಟಿಸಿದ್ದರು. ಸಮರ್ಪಣಾ ಭಾವದ ಯೋಧರ ಪಡೆ ಮೇಲೆದ್ದು ನಿಂತಿತ್ತು. ಅವರು ಸಜ್ಜುಗೊಳಿಸಿದ ‘ಪೇಜ್ ಪ್ರಮುಖರ ಪಡೆ’ ಮೊದಲಾದವು ಚುನಾವಣೆ ಬಂತೆಂದರೆ ಸಕ್ರಿಯ ವಾಗಿ ಫೀಲ್ಡಿಗಿಳಿಯುತ್ತಿದ್ದವು.

ಮೊನ್ನೆ ಶನಿವಾರ ರಾತ್ರಿ ಪಕ್ಷದ ಹಿರಿಯ ನಾಯಕರೊಬ್ಬರಿಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಫೋನು ಮಾಡಿದ್ದಾರೆ. ‘ಲೋಕಸಭಾ ಚುನಾವಣೆ ಯಲ್ಲಿ ಕರ್ನಾಟಕದಿಂದ ನಾವು ಎಷ್ಟು ಸ್ಥಾನಗಳನ್ನು ಗೆಲ್ಲಬಹುದು?’ ಅಂತ ಈ ಸಂದರ್ಭದಲ್ಲಿ ಅವರು ಕೇಳಿದರಂತೆ. ಅಂದ ಹಾಗೆ, ಶನಿವಾರ ರಾಜ್ಯ ಬಿಜೆಪಿಯ ಹಿರಿಯ ನಾಯಕರಿಗೆ ನಡ್ಡಾ ಫೋನು ಮಾಡಲು ಒಂದು ಕಾರಣವಿತ್ತು. ಅದೆಂದರೆ ಅವತ್ತೇ ರಾಜ್ಯದಲ್ಲಿ ಪಕ್ಷದ ಪ್ರಮುಖರು ಆತ್ಮಾವಲೋಕನ ಸಭೆ ನಡೆಸಿದ್ದರು.

ಈ ಸಭೆಯಲ್ಲಿ ಮಾತನಾಡಿದ ಹಲವರು, ‘ಈ ಚುನಾವಣೆ ಯಲ್ಲಿ ನಾವು ಇಪ್ಪತ್ತೈದು ಸೀಟುಗಳನ್ನು ಗೆಲ್ಲುವುದು ಕಷ್ಟ’ ಎಂದು ಹೇಳಿದ್ದಾರೆ. ಹೀಗೆ ಆ ಸಭೆಯಲ್ಲಿ ನಾಯಕರಾಡಿದ ಮಾತುಗಳ ವಿವರ ಪಡೆದ ನಡ್ಡಾ ಅವರು, ಈ ನಾಯಕರಿಗೆ ಫೋನು ಮಾಡಿ ವಿವರ ಕೇಳಿದ್ದಾರೆ. ‘೨೦೧೯ರ ಚುನಾವಣೆಗೆ ಹೋಲಿಸಿದರೆ ಈ ಸಲ ನಮಗೆ ಸ್ವಲ್ಪ ಕಡಿಮೆ ಸೀಟು ಬರುತ್ತದೆ ಎನ್ನುತ್ತಿದ್ದಾರಲ್ಲ? ಇದಕ್ಕೇನು ಕಾರಣ? ಪಕ್ಷದ ಆಂತರಿಕ ಭಿನ್ನಾಭಿಪ್ರಾಯ ಇದಕ್ಕೆ ಕಾರಣವೇ? ಪ್ರಜ್ವಲ್ ರೇವಣ್ಣ ಅವರ ಲೈಂಗಿಕ ಹಗರಣದ ಪೆನ್ ಡ್ರೈವ್ ಬಹಿರಂಗವಾಗಿದ್ದರ ಎಫೆಕ್ಟ್ ಇದಾಗಿ ದೆಯೇ? ಅಥವಾ ಇನ್ನೇನು ಕಾರಣಗಳು ಇದಕ್ಕೆ ಜತೆಯಾಗಿವೆ?’ ಎಂಬುದು ನಡ್ಡಾ ಅವರ ಪ್ರಶ್ನೆ.

ನಡ್ಡಾ ಅವರ ಮಾತು ಕೇಳಿದ ಈ ನಾಯಕರು ನೇರವಾಗಿಯೇ ತಮ್ಮ ಭಾವನೆಯನ್ನು ತೋಡಿಕೊಂಡಿದ್ದಾರೆ. ‘ಸರ್, ಇದರಲ್ಲಿ ಮುಚ್ಚಿಡುವಂಥದ್ದು ಏನೂ ಇಲ್ಲ. ಇನ್ ಫ್ಯಾಕ್ಟ್, ಪ್ರಜ್ವಲ್ ರೇವಣ್ಣ ಎಪಿಸೋಡಿನಿಂದ ನಮಗೆ ಹೇಳಿಕೊಳ್ಳುವಂಥ ಡ್ಯಾಮೇಜ್ ಆಗಿಲ್ಲ. ಯಾಕೆಂದರೆ ಆ ಪೆನ್ ಡ್ರೈವ್ ಹಗರಣ ದೊಡ್ಡ ಸುದ್ದಿಯಾಗುವ ಮುನ್ನವೇ ಹಳೆ ಮೈಸೂರು ಭಾಗದ ಕ್ಷೇತ್ರಗಳಲ್ಲಿ ಚುನಾವಣೆ ಮುಗಿದು ಹೋಗಿತ್ತು. ಎರಡನೇ ಹಂತದ ಚುನಾವಣೆ ನಡೆದ ಕ್ಷೇತ್ರಗಳಲ್ಲಿ ಇದು ದೊಡ್ಡ ಚರ್ಚೆಯ ವಿಷಯವೇ ಆಗಿರಲಿಲ್ಲ. ನೇರವಾಗಿ ಹೇಳಬೇಕೆಂದರೆ ಕರ್ನಾಟಕದಲ್ಲಿ ಪಕ್ಷ ನಿರೀಕ್ಷಿಸಿದಷ್ಟು ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸದೆ ಇರುವುದಕ್ಕೆ ಪಕ್ಷದ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರನ್ನು ನಿರ್ಲಕ್ಷಿಸಿರುವುದೇ ಮುಖ್ಯ ಕಾರಣ.

ಕರ್ನಾಟಕದಲ್ಲಿ ಅವರು ಪಕ್ಷವನ್ನು ಯಾವ ರೀತಿ ಸಂಘಟಿಸಿದ್ದರು ಎಂದರೆ ತಳಮಟ್ಟದಿಂದ ಮೇಲ್ಮಟ್ಟದವರೆಗೆ ಅಸಂಖ್ಯಾತ ಯೋಧರ ಪಡೆ ಮೇಲೆದ್ದು ನಿಂತಿತ್ತು. ಬೂತ್ ಮಟ್ಟದಲ್ಲಿ ಅವರು ರೆಡಿ ಮಾಡಿದ ‘ಪೇಜ್ ಪ್ರಮುಖರ ಪಡೆ’ ಇರಬಹುದು, ಐದು ಬೂತ್‌ಗಳಿಗೆ ಒಂದರಂತೆ ಸಜ್ಜಾಗಿದ್ದ ‘ಶಕ್ತಿ ಕೇಂದ್ರ’ ಇರಬಹುದು, ಅದರ ಮುಂದಿನ ಭಾಗವಾದ ‘ಮಹಾಶಕ್ತಿ ಕೇಂದ್ರ’ವಿರಬಹುದು ಅಥವಾ ಮಂಡಲ್ ಕಮಿಟಿಗಳಿರಬಹುದು. ಒಟ್ಟಿನಲ್ಲಿ ಈ ಸೈನ್ಯ ಚುನಾವಣೆಯಲ್ಲಿ ಸಕ್ರಿಯವಾಗಿ ಫೀಲ್ಡಿಗಿಳಿಯುತ್ತಿತ್ತು. ಪ್ರತಿಯೊಬ್ಬ ಮತದಾರನನ್ನು ಕನಿಷ್ಠ ಮೂರು ಬಾರಿ ಸಂಪರ್ಕಿಸುತ್ತಿತ್ತು.

ಆದರೆ ಕರ್ನಾಟಕದಲ್ಲಿ ಪಕ್ಷ ಯಡಿಯೂರಪ್ಪ ಮತ್ತವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಹಿಡಿತಕ್ಕೆ ಹೋದ ಮೇಲೆ ಬಿ. ಎಲ್.ಸಂತೋಷ್ ಕಷ್ಟಪಟ್ಟು ಕಟ್ಟಿದ ಸೈನ್ಯವನ್ನು ನಿರ್ಲಕ್ಷಿಸಿದರು. ಹೀಗಾಗಿ ಕರ್ನಾಟಕದಲ್ಲಿ ಸಂಘಪರಿವಾರದ ಬಹುತೇಕ ಕಾರ್ಯಕರ್ತರು ಫೀಲ್ಡಿಗಿಳಿಯದೆ ತಟಸ್ಥರಾದರು. ಪರಿಣಾಮವಾಗಿ ಈ ಸಲ ಕರ್ನಾಟಕದ ಎಲ್ಲ ಲೋಕಸಭಾ ಕ್ಷೇತ್ರಗಳ ಫಲಿತಾಂಶದಲ್ಲಿ ಅದರ ಎಫೆಕ್ಟು ಕಾಣುತ್ತದೆ. ಇದರರ್ಥ, ಎಲ್ಲ ಕಡೆ ನಮಗೆ ಫುಲ್ಲು ಡ್ಯಾಮೇಜು ಆಗಿದೆ ಅಂತಲ್ಲ. ಆದರೆ ಕಳೆದ ಸಲ ಅಲ್ಪ ಅಂತರದಲ್ಲಿ ಗೆದ್ದ ಬಹುತೇಕ ಲೋಕಸಭಾ ಕ್ಷೇತ್ರಗಳನ್ನು ಈ ಸಲ ಕಾಂಗ್ರೆಸ್ ಪಕ್ಷ ನಮ್ಮಿಂದ ಕಿತ್ತುಕೊಳ್ಳಲಿದೆ.

ಅದೇ ರೀತಿ ದೊಡ್ಡ ಅಂತರದಲ್ಲಿ ಗೆಲುವು ಸಾಧಿಸಿದ್ದ ಕ್ಷೇತ್ರಗಳಲ್ಲಿ ಈ ಸಲ ಗೆದ್ದರೂ ಲೀಡಿನ ಪ್ರಮಾಣ ಕಡಿಮೆಯಾಗಲಿದೆ’ ಎಂದು ಈ ನಾಯಕರು ಜೆ.ಪಿ.ನಡ್ಡಾ ಅವರಿಗೆ ಸ್ಪಷ್ಟವಾಗಿ ಹೇಳಿದ್ದಾರೆ. ಅವರು ಹೇಳಿದ್ದನ್ನು ಕೇಳಿದ ನಡ್ಡಾ ಅವರು, ‘ಹಾಗಾದರೆ ದೇವೇಗೌಡರ ನೇತೃತ್ವದ ಜಾತ್ಯತೀತ ಜನತಾ ದಳದ ಜತೆ ಮಾಡಿಕೊಂಡ ಮೈತ್ರಿ ನಮಗೆ ಪ್ಲಸ್ ಆಗಲಿಲ್ಲವೇ?’ ಅಂತ ಕೇಳಿದ್ದಾರೆ. ಅದಕ್ಕುತ್ತರಿಸಿದ ಈ ನಾಯಕರು, ‘ಆಗಿದೆ ಸರ್, ಪ್ಲಸ್ ಆಗಿದೆ. ಇವತ್ತು ನಾವು ಫಿಫ್ಟಿ-ಫಿಫ್ಟಿ ಗೆಲುವಿನ ಛಾನ್ಸು ಇದೆ ಅಂತ ಯಾವ ಕ್ಷೇತ್ರಗಳನ್ನು ಗುರುತಿಸಿದ್ದೇವೋ? ಅಲ್ಲಿ ನಾವು ಆ ಲೆವೆಲ್ಲಿನಲ್ಲಿದ್ದರೆ, ಅಕಸ್ಮಾತ್ ಗೆಲುವು ಸಾಧಿಸಿದರೆ ಅದಕ್ಕೆ ಜಾತ್ಯತೀತ ಜನತಾದಳದ ಬೆಂಬಲವೇ ಮುಖ್ಯ ಕಾರಣ. ತುಂಬ ದೂರ ಹೋಗಿ ನೋಡುವುದೇನು? ಇವತ್ತು ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರು ಸ್ಪರ್ಧಿಸಿದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಗೆಲುವಿನ ಆಸೆ ಕಾಣುತ್ತಿದ್ದರೆ ಅದರಲ್ಲಿ ಜಾತ್ಯತೀತ ಜನತಾದಳದ ಪಾತ್ರವೂ ಇದೆ’ ಎಂದಿದ್ದಾರೆ.

ಹೀಗೆ ಅವರಾಡಿದ ನೇರ ಮಾತುಗಳನ್ನು ಕೇಳಿದ ಜಗತ್ ಪ್ರಕಾಶ್ ನಡ್ಡಾ, ‘ನಮಗೆ ಕರ್ನಾಟಕದಿಂದ ಇಪ್ಪತ್ತೈದು ಸೀಟು ಸಿಕ್ಕರೆ ಅನುಕೂಲವಾಗುತ್ತಿತ್ತು, ನೋಡೋಣ’ ಅಂತ ಹೇಳಿ ಫೋನಿಟ್ಟರಂತೆ.

ಕಾಂಗ್ರೆಸ್ಸಿಗೆ ಹದಿನೇಳು ನಿಕ್ಕಿಯಂತೆ

ಈ ಮಧ್ಯೆ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷ ಹದಿನೇಳು ಸೀಟುಗಳನ್ನು ಗೆಲ್ಲುವುದು ಗ್ಯಾರಂಟಿ ಎಂಬ ರಿಪೋರ್ಟು ಡಿಸಿಎಂ ಡಿ.ಕೆ.ಶಿವಕು ಮಾರ್ ಅವರ ಕೈ ಸೇರಿದೆ. ಕಮಲ ಪಾಳಯ ನರೇಂದ್ರ ಮೋದಿ ಅಲೆಯನ್ನು ನೆಚ್ಚಿಕೊಂಡು ಇಪ್ಪತ್ತು ಪ್ಲಸ್ ಸೀಟುಗಳನ್ನು ಗೆಲ್ಲುವ ಮಾತಾಡುತ್ತಿದೆ ಯಾದರೂ ಡಿಕೆಶಿ ಮಾತ್ರ ಗ್ರೌಂಡ್ ರಿಪೋರ್ಟನ್ನು ನೆಚ್ಚಿಕೊಂಡಿ ದ್ದಾರೆ. ಅವರ ಪ್ರಕಾರ, ಉತ್ತರ ಕರ್ನಾಟಕದ ರಾಯಚೂರು, ಕೊಪ್ಪಳ, ಕಲಬುರ್ಗಿ, ಬಳ್ಳಾರಿ, ಬೆಳಗಾವಿ, ಚಿಕ್ಕೋಡಿಯಂಥ ಕ್ಷೇತ್ರಗಳು ಕೂಡಾ ನಿರಾ ಯಾಸವಾಗಿ ಕಾಂಗ್ರೆಸ್ ಪಾಲಾಗಲಿವೆ. ಹಳೆ ಮೈಸೂರು ಭಾಗದ ಬೆಂಗಳೂರು ಕೇಂದ್ರ, ಬೆಂಗಳೂರು ಗ್ರಾಮಾಂತರ, ಮೈಸೂರು, ಮಂಡ್ಯ, ಚಾಮರಾಜ ನಗರ ಮತ್ತಿತರ ಕಡೆ ಕಾಂಗ್ರೆಸ್ ಗೆಲುವು ಪಕ್ಕಾ. ಹೀಗೆ ಕಾಂಗ್ರೆಸ್ ಎಲ್ಲೆಲ್ಲಿ ಗೆಲುವು ಸಾಧಿಸುತ್ತದೆ ಎಂಬ ರಿಪೋರ್ಟು ಡಿಕೆಶಿಗೆ ಬಂದಿದೆಯೋ, ಅವೆಲ್ಲ ಪ್ರಾಕ್ಟಿಕಲ್ ಲೆಕ್ಕಾಚಾರಗಳನ್ನು ಆಧರಿಸಿವೆ ಎಂಬುದು ಅವರ ಆಪ್ತರ ಮಾತು.

ಹೀಗಾಗಿ ಬಿಜೆಪಿ ಪಾಳಯದ ಲೆಕ್ಕಾಚಾರ ಏನೇ ಇರಲಿ, ಆದರೆ ಕಾಂಗ್ರೆಸ್ ಪಾಳಯದ ಆತ್ಮವಿಶ್ವಾಸ ಮಾತ್ರ ಎದ್ದು ಕಾಣುತ್ತಿದೆ.

ರೇಸಿನಲ್ಲಿ ಮತ್ತೆ ಖರ್ಗೆ ಕಾಣುತ್ತಿದ್ದಾರೆ

ಇನ್ನು ಲೋಕಸಭಾ ಚುನಾವಣೆಯ ಫಲಿತಾಂಶದ ದಿನ ಹತ್ತಿರವಾಗುತ್ತಿದ್ದಂತೆಯೇ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರು ಪುನಃ ರೇಸಿನಲ್ಲಿ ಕಾಣತೊಡಗಿದೆ. ಈ ಮುಂಚೆ ‘ಇಂಡಿಯ’ ಒಕ್ಕೂಟ ಮೇಲೆದ್ದು ನಿಂತ ಕಾಲದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಭವಿಷ್ಯದ ಪ್ರಧಾನಿ ಹುದ್ದೆಗೆ ಮಲ್ಲಿಕಾರ್ಜುನ ಖರ್ಗೆ ಅವರ ಹೆಸರನ್ನು ಸೂಚಿಸಿದ್ದರು. ಅವರು ಹೀಗೆ ಖರ್ಗೆ ಹೆಸರನ್ನು ಸೂಚಿಸು ತ್ತಿದ್ದಂತೆ ಮುನಿಸಿಕೊಂಡ ಬಿಹಾರದ ಮುಖ್ಯಮಂತ್ರಿ, ಸಂಯುಕ್ತ ಜನತಾದಳದ ನಾಯಕ ನಿತೀಶ್ ಕುಮಾರ್ ಒಕ್ಕೂಟದ ವಿರುದ್ಧ ತಿರುಗಿ ಬಿದ್ದರು. ಈ ಬೆಳವಣಿಗೆಯಾದ ತಕ್ಷಣ ಧ್ವನಿ ಎತ್ತಿದ ಖರ್ಗೆ ಅವರು, ‘ಪ್ರಧಾನಿ ಕ್ಯಾಂಡಿಡೇಟು ಯಾರು ಎಂಬುದು ಅತ್ಲಾಗಿರಲಿ, ಮೊದಲು ‘ಇಂಡಿಯ’ ಒಕ್ಕೂಟ ಒಗ್ಗೂಡಿ ಲೋಕಸಭಾ ಚುನಾವಣೆಯಲ್ಲಿ ಗೆಲ್ಲಲಿ’ ಅಂತ ಚರ್ಚೆಗೆ ಬ್ರೇಕ್ ಹಾಕಿದ್ದರು.

ಹೀಗೆ ಅವರು ಚರ್ಚೆಗೆ ಬ್ರೇಕ್ ಹಾಕಿದರೂ ‘ಇಂಡಿಯ’ ಒಕ್ಕೂಟದಲ್ಲಿ ಪ್ರಧಾನಿ ಹುದ್ದೆಗೆ ಮತ್ತೊಂದು ಹೆಸರು ಕೇಳಿಲ್ಲ. ಈ ಮಧ್ಯೆ ಭವಿಷ್ಯದ ಪ್ರಧಾನಿ ಹುದ್ದೆಯ ವಿಷಯದಲ್ಲಿ ಯಾವ ಆಸಕ್ತಿಯನ್ನೂ ತೋರದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, ಖರ್ಗೆ ಈ ದೇಶದ ಪ್ರಧಾನಿಯಾಗಲಿ ಎನ್ನುತ್ತಿದ್ದಾರಂತೆ. ಕುತೂಹಲದ ಸಂಗತಿ ಎಂದರೆ ಮೊನ್ನೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರಾಡಿದ ಒಂದು ಮಾತು ಮಲ್ಲಿಕಾ ರ್ಜುನ ಖರ್ಗೆ ಅವರ ಹೆಸರು ಪುನಃ ಮಿರಿಮಿರಿ ಮಿಂಚುವಂತೆ ಮಾಡಿದೆ. ಅರವಿಂದ ಕೇಜ್ರಿವಾಲ್ ಅವರ ಪ್ರಕಾರ, ಈ ವರ್ಷ ನರೇಂದ್ರ ಮೋದಿ ಅವರಿಗೆ ಎಪ್ಪತ್ತೈದು ವರ್ಷ ತುಂಬುತ್ತದೆ. ಅವರ ಪಕ್ಷದ ನಿಯಮಾವಳಿಯ ಪ್ರಕಾರ ಅವರು ಪ್ರಧಾನಿ ಹುದ್ದೆಯನ್ನು ತೊರೆಯಬೇಕಾಗುತ್ತದೆ. ಈ ಸಂದರ್ಭ ದಲ್ಲಿ ಅವರು ಅಮಿತ್ ಶಾ ಅವರನ್ನು ಪ್ರಧಾನಿ ಗಾದಿಯ ಮೇಲೆ ಕೂರಿಸುತ್ತಾರೆ.

ಹೀಗೆ ಕೇಜ್ರಿವಾಲ್ ಹೇಳುತ್ತಿದ್ದಂತೆಯೇ ರಾಷ್ಟ್ರ ರಾಜಕಾರಣದಲ್ಲಿ ಇನ್ನಷ್ಟು ಕುತೂಹಲಕಾರಿ ವಿಷಯಗಳು ಚರ್ಚೆಗೆ ಬರತೊಡಗಿವೆ. ಅದರ ಪ್ರಕಾರ, ಬಿಜೆಪಿಯಲ್ಲಿ ಭವಿಷ್ಯದ ಪ್ರಧಾನಿ ಹುದ್ದೆಗೆ ನಾಲ್ಕು ಮಂದಿ ಆಕಾಂಕ್ಷಿಗಳಿದ್ದಾರೆ. ಅವರೆಂದರೆ ಯೋಗಿ ಅದಿತ್ಯನಾಥ್, ರಾಜನಾಥಸಿಂಗ್, ನಿತಿನ್ ಗಡ್ಕರಿ ಮತ್ತು ಅಮಿತ್ ಶಾ. ಈ ಪೈಕಿ ಯೋಗಿ ಆದಿತ್ಯ ನಾಥ್ ಅವರು ಮೋದಿಗೆ ಉತ್ತರಾಧಿಕಾರಿಯಾಗಲಿ ಅಂತ ಸಂಘಪರಿವಾರ ಬಯಸುತ್ತಿದೆ. ಒಂದು ವೇಳೆ
ಬಿಜೆಪಿ ಸ್ವಯಂಬಲದ ಮೇಲೆ ಅಧಿಕಾರ ಹಿಡಿಯದೆ ಮೈತ್ರಿಕೂಟದ ಬೆಂಬಲದಿಂದ ಅಧಿಕಾರ ಹಿಡಿಯುವ ಸ್ಥಿತಿ ಬಂದರೆ ನಿತಿನ್ ಗಡ್ಕರಿ ಹೆಸರು ರೇಸಿನಲ್ಲಿ ಕಾಣಿಸಿಕೊಳ್ಳುತ್ತದೆ. ಇದನ್ನೆಲ್ಲ ಬಲ್ಲ ಮೋದಿ ಈಗ ಇದ್ದಕ್ಕಿದ್ದಂತೆ ಅಮಿತ್ ಶಾ ಅವರಿಗೆ ಮಿತಿಮೀರಿದ ಆದ್ಯತೆ ಕೊಡತೊಡಗಿದ್ದಾರೆ.

ಇದು ಅಮಿತ್ ಶಾ ಅವರನ್ನು ಪ್ರಧಾನಿ ಹುದ್ದೆಗೆ ತರುವ ಪೂರ್ವ ಸಿದ್ಧತೆ ಎಂಬುದು ರಾಜಕೀಯ ವಲಯಗಳ ವ್ಯಾಖ್ಯಾನ. ಈ ಹಿನ್ನೆಲೆಯಲ್ಲಿಯೇ ಖರ್ಗೆ ಹೆಸರು ರಾಷ್ಟ್ರ ರಾಜಕಾರಣದ ಮುಂಚೂಣಿ ಸಾಲಿಗೆ ಬಂದಿದೆ. ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರಧಾನಿ ಹುದ್ದೆಗೆ ಇಬ್ಬರು ಬರಲಿದ್ದಾರೆ. ಅದರೆ ‘ಇಂಡಿಯ’ ಒಕ್ಕೂಟ ಅಧಿಕಾರ ಹಿಡಿದರೆ ಮಲ್ಲಿಕಾರ್ಜುನ ಖರ್ಗೆ ಒಬ್ಬರೇ ಪ್ರಧಾನಿ ಎಂಬುದು ಬಿಜೆಪಿಯೇತರ ಪಾಳಯದ ಮಾತು. ಸಹಜವಾಗಿಯೇ ಇದು ಎಲ್ಲರ
ಕುತೂಹಲ ಕೆರಳಿಸತೊಡಗಿದೆ.

ಸಿದ್ದರಾಮಯ್ಯ-ಡಿಕೆಶಿ ಹತ್ತಿರವಾಗಿದ್ದಾರೆ

ಇನ್ನು ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆಶಿ ನಡುವೆ ಸಂಘರ್ಷ ಶುರುವಾಗಲಿದೆ ಎಂಬ ವಿರೋಧಿ ಪಾಳಯದ ನಿರೀಕ್ಷೆ ಮತ್ತೊಮ್ಮೆ ಹುಸಿಯಾಗಿದೆ.

ಅರ್ಥಾತ್, ಚುನಾವಣೆಯಲ್ಲಿ ತಮ್ಮ ಮಾತಿನಂತೆ ಪಕ್ಷ ಮುಂದುವರಿಯಬೇಕು ಅಂತ ಸಿದ್ದರಾಮಯ್ಯ-ಡಿಕೆಶಿ ಬಯಸುತ್ತಾರೆ. ಹಾಗಾದಾಗ ಸಹಜ ವಾಗಿಯೇ ಇಬ್ಬರ ಮಧ್ಯೆ ಸಂಘರ್ಷ ಶುರುವಾಗುತ್ತದೆ ಅಂತ ವಿರೋಧಿಗಳು ನಿರೀಕ್ಷಿಸಿದ್ದರು. ಅದರೆ ಕರ್ನಾಟಕದಲ್ಲಿ ಚುನಾವಣೆಗಳು ನಡೆದಾಗ ಸಿದ್ದರಾಮಯ್ಯ ಮತ್ತು ಡಿಕೆಶಿ ಒಮ್ಮನಸ್ಸಿನಿಂದ ಕೆಲಸ ಮಾಡಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಏನೇ ಹೆಜ್ಜೆ ಇಡುವ ಮುನ್ನ, ‘ಸಿಎಂ ಸಾಹೇಬ್ರನ್ನ ಒಂದು ಮಾತು ಕೇಳಿಬಿಡಿ’ ಅಂತ ಡಿಕೆಶಿ ಹೇಳುತ್ತಿದ್ದರಂತೆ. ಅದೇ ರೀತಿ ಏನೇ ಹೆಜ್ಜೆ ಇಡುವ ಮುನ್ನ ‘ಶಿವಕುಮಾರ್ ಅವರ ಗಮನಕ್ಕೆ ಇದನ್ನು ತರ್ರೀ’ ಅಂತ ಸಿದ್ದರಾಮಯ್ಯ ಹೇಳುತ್ತಿದ್ದರಂತೆ. ಸಾಲದೆಂಬಂತೆ ನಾಯಕತ್ವದ ಪ್ರಶ್ನೆ ಈ ಹಿಂದಿನಂತೆ ಮೇಲೇಳುತ್ತಿಲ್ಲ. ಕೇಳಿದರೆ, ‘ಅಯ್ಯೋ ನನ್ನ ಹಣೆಯಲ್ಲಿ ಬರೆದಿದ್ರೆ ನಾನು ಸಿಎಂ ಆಗ್ತೀನಿ. ಈಗ ಅ ಬಗ್ಗೆ ಯಾಕ್ರೀ ಮಾತಾಡಲಿ? ಈಗೇನಿದ್ರೂ ನಂದು ಪಕ್ಷ ಕಟ್ಟುವ ಕೆಲಸ ಅಷ್ಟೇ’ ಅಂತ ಡಿಕೆಶಿ ಹೇಳುತ್ತಾರಂತೆ.

ಪರಿಣಾಮ? ಸಿದ್ದರಾಮಯ್ಯ ಅವರ ಕ್ಯಾಂಪಿನಲ್ಲಾಗಲೀ, ಡಿಕೆಶಿ ಕ್ಯಾಂಪಿನಲ್ಲೇ ಆಗಲಿ, ಪರಸ್ಪರ ವಿರೋಧದ ಮಾತುಗಳು ಕೇಳಿಬರುತ್ತಿಲ್ಲ.

Leave a Reply

Your email address will not be published. Required fields are marked *