ರಾಜಕಾರಣ
ಸಿದ್ದಾರ್ಥ ವಾಡೆನ್ನವರ
೨೦೧೫ರಲ್ಲಿ ಪ್ರಕಟಿಸಿದಂತೆ ಬಿಜೆಪಿ ನೋಂದಾಯಿತ ಸದಸ್ಯರ ಸಂಖ್ಯೆ ಜಗತ್ತಿನ ಅತೀ ದೊಡ್ಡ ಪಕ್ಷವಾದ ‘ಕಮ್ಯೂನಿಸ್ಟ್ ಪಾರ್ಟಿ ಆಪ್ ಚೀನಾ’ದ ಸದಸ್ಯರ ಸಂಖ್ಯೆಯನ್ನು ಮೀರಿಸಿತ್ತು. ಅಂದಿನಿಂದ ಇಂದಿನವರೆಗೆ ಬಿಜೆಪಿ ಅಧಿಕೃತವಾಗಿ ಜಗತ್ತಿನ ಅತಿ ದೊಡ್ಡ ಪಕ್ಷವಾಗಿ ಗುರುತಿಸಿಕೊಂಡಿದೆ. ಅಧಿಕೃತ ಸದಸ್ಯರ ಸಂಖ್ಯೆ ೧೮ ಕೋಟಿಗೂ ಅಽಕ ಇದ್ದಾರೆ. ಇಂದು ಲೋಕಸಭೆಯಲ್ಲಿ ೩೦೩ ಬಿಜೆಪಿ ಸಂಸದರಿದ್ದಾರೆ. ಅಂದರೆ ಶೇ.೫೫ರಷ್ಟು ಸಂಸದರು ಬಿಜೆಪಿಯವರೇ ಇದ್ದಾರೆ. ನಾಲ್ಕು ದಶಕಗಳಲ್ಲಿ ಬಿಜೆಪಿ ಇಷ್ಟು ಎತ್ತರದ ಸ್ಥಾನಕ್ಕೆ ತಲುಪಿದ್ದು ಹೇಗೆ? ರಾಷ್ಟ್ರ್ರ ನಾಯಕ ಶಾಮ್ ಪ್ರಸಾದ್ ಮುಖರ್ಜಿಯವರು ‘ದಿ ಕಾನ್‌ಸ್ಟಂಟಿಯೆಂಟ್ ಅಸೆಂಬ್ಲಿ ಆಪ್ ಇಂಡಿಯಾ’ ಸದಸ್ಯರಾಗಿ ಅಲ್ಲದೇ ನೆಹರು ಪ್ರಥಮ ಮಂತ್ರಿಮಂಡಳದ ಸದಸ್ಯರಾಗೂ ಕೆಲಸ ಮಾಡಿದರು.
೧೯೫೦ ‘ಡೆಲ್ಲಿ ಫ್ಯಾಕ್ಟ್’ ವಿರೋಧಿಸುವುದರೊಂದಿಗೆ ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ೧೯೫೧ರಲ್ಲಿ ‘ಭಾರತೀಯ ಜನಸಂಘ’ ಅನ್ನುವ ಹೊಸ ಪಕ್ಷ ಸ್ಥಾಪಿಸಿದರು. ಅದರ ಮೊದಲ ಅಧ್ಯಕ್ಷರಾಗಿ ಪಕ್ಷ ಸಂಘಟನೆಗೆ ಮುಂದಾದರು. ಭಾರತೀಯರ ಸಂಸ್ಕೃತಿಕ ಸ್ಥಾನಮಾನ ಕಾಪಾಡುವುದು, ನೆಹರು ಮತ್ತು ಕಾಂಗ್ರೆಸ್‌ನ ಮುಸ್ಲಿಂ ತುಷ್ಟಿಕರಣ ನೀತಿ ವಿರೋಧಿಸುವುದರ ಜತೆಗೆ ಜಮ್ಮು-ಕಾಶ್ಮೀರವನ್ನು ಭಾರತದೊಂದಿಗೆ ಸಂಪೂರ್ಣವಾಗಿ ವಿಲೀನ ಮಾಡುವುದು ಪಕ್ಷದ ಮೂಲ ಉದ್ದೇಶ.
೧೯೫೧-೫೨ರಲ್ಲಿ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾದವು. ಭಾರತೀಯ ಜನಸಂಘ ಕೇವಲ ಮೂರು ಸ್ಥಾನಗಳಲ್ಲಿ ಜಯ ಸಾಧಿಸಿತು. ಪಕ್ಷವನ್ನು ಗಟ್ಟಿಗೊಳಿಸುವ ಕಾರ್ಯ ಮುಂದು ವರಿಯಿತು. ಈ ಮದ್ಯೆ ಪಕ್ಷದ ಅಧ್ಯಕ್ಷ ಶಾಮ್ ಪ್ರಸಾದ್ ಮುಖರ್ಜಿಯವರು ಸಂಶಯಾಸ್ಪದವಾಗಿ ಮೃತಪಟ್ಟರು. ಈ ಸಂದರ್ಭದಲ್ಲಿ ಆರ್‌ಎಸ್‌ಎಸ್‌ನ ಚಿಂತಕರಾದ ಪಂಡಿತ್ ದೀನದಯಾಳ ಉಪಾ ಧ್ಯಾಯ ಅವರು ಪಕ್ಷಕ್ಕೆ ಒಂದು ಹೊಸ ರೂಪ ನೀಡಿದರು.
ಜತೆಗೆ ೧೯೬೭ರವರೆಗೆ ಭಾರತೀಯ ಜನಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದರು. ದೇಶದಲ್ಲಿ ಪಕ್ಷವನ್ನು ತಳಮಟ್ಟದಿಂದ ಗಟ್ಟಿಯಾಗಿ ಸಂಘಟನೆ ಮಾಡಿದರು. ಈ ನಿಟ್ಟಿನಲ್ಲಿ ಅಗತ್ಯ ಶ್ರಮ ಪಟ್ಟು ಭವಿಷ್ಯದಲ್ಲಿ ಬಿಜೆಪಿ ಜನ್ಮತಾಳಲು ಕಾರಣಿಭೂತರಾದರು. ೧೯೬೭ರ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯ ಜನಸಂಘ ೩೫ ಸ್ಥಾನಗಳಲ್ಲಿ ಜಯ ಸಾಧಿಸಿ ದೇಶದ ಮೂರನೇ ಅತಿ ದೊಡ್ಡ ಪಕ್ಷವಾಗಿ ಗುರುತಿಸಿ ಕೊಂಡಿತು.
ಹಿಂದಿ ಮಾತನಾಡುವ ಪ್ರದೇಶಗಳಲ್ಲಿ ಕಾಂಗ್ರೆಸ್‌ಯೇತರ ಪ್ರಾದೇಶಿಕ ಪಕ್ಷಗಳೊಂದಿಗೆ ಸೇರಿ ಮಧ್ಯಪ್ರದೇಶ, ಉತ್ತರಪ್ರದೇಶ ಮತ್ತು ಬಿಹಾರ್ ರಾಜ್ಯಗಳಲ್ಲಿ ಹೊಂದಾಣಿಕೆಯೊಂದಿಗೆ ಅಧಿಕಾರ ಪಡೆಯಲಾಯಿತು. ಈ ಸಮಯದಲ್ಲಿಯೇ ಯುವ ನಾಯಕರಾದ ಅಟಲ್ ಬಿಹಾರಿ ವಾಜಪೇಯಿ ಮತ್ತು ಲಾಲ್ ಕೃಷ್ಣ ಆಡ್ವಾಣಿಯವರು ಪಕ್ಷದಲ್ಲಿ ಮುನ್ನೆಲೆಗೆ ಬಂದರು. ೧೯೬೮ರಲ್ಲಿ ಪಕ್ಷದ ಅಧ್ಯಕ್ಷ ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರೂ ಅನುಮಾನಾಸ್ಪದವಾಗಿ ಮೃಪಟ್ಟರು. ತರುವಾಯ, ಇವರ ಸ್ಥಾನವನ್ನು ಅಟಲ್ ಬಿಹಾರಿ ವಾಜಪೇಯಿ ತುಂಬಿದರು.
ಸಮಾನ ನಾಗರಿಕ ಸಂಹಿತೆ, ಗೋಹತ್ಯೆ ನಿಷೇಧದ ಜತೆಗೆ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನ ರದ್ದುಗೊಳಿಸುವುದು ಪಕ್ಷದ ಮುಖ್ಯ ಉದ್ದೇಶಗಳಾಗಿ ಮಾರ್ಪಟ್ಟವು. ಮುಂದೆ, ೧೯೭೫ರಲ್ಲಿ ಅಂದಿನ ಪ್ರಧಾನಿ ಇಂದಿರಾಗಾಂಧಿ, ದೇಶದಲ್ಲಿ ‘ತುರ್ತು ಪರಿಸ್ಥಿತಿ’ ಜಾರಿಗೊಳಿಸಿದರು. ಭಾರತೀಯ ಜನಸಂಘ ನಾನಾ ಪಕ್ಷಗಳೊಂದಿಗೆ ಸೇರಿ ತುರ್ತುಪರಿಸ್ಥಿತಿ ವಿರೋಧಿ ಆಂದೋಲನ ಮಾಡಿತು. ಆ ಸಮಯದಲ್ಲಿ ಕಾಂಗ್ರೆಸ್ ಸರಕಾರ ಜನಸಂಘದ ಸಾವಿರಾರು ಕಾರ್ಯಕರ್ತರನ್ನು ಜೈಲಿಗೆ ಹಾಕಿತು. ೧೯೭೭ರಲ್ಲಿ ತುರ್ತು ಪರಿಸ್ಥಿತಿ ಹಿಂಪಡೆಯಲಾಯಿತು.
ಹೊಸ ಸಾರ್ವತ್ರಿಕ ಚುನಾವಣೆಗಳು ಘೋಷಣೆಯಾದವು. ಆ ಸಮಯದಲ್ಲಿ ಭಾರತೀಯ ಜನಸಂಘ ಮತ್ತು ಮೂರು ರಾಜಕೀಯ ಪಕ್ಷಗಳಾದ ಸೋಶಿ ಯಲಿಸ್ಟ್ ಪಾರ್ಟಿ ಆಫ್ ಇಂಡಿಯಾ, ಇಂಡಿಯನ್ ನ್ಯಾಶನಲ್ ಕಾಂಗ್ರೆಸ್(೦) ಮತ್ತು ಭಾರತೀಯ ಲೋಕದಳ ಸೇರಿ ಹೊಸ ರಾಜಕೀಯ ಪಕ್ಷ
ಸ್ಥಾಪಿಸಲಾಯಿತು. ಆ ಪಕ್ಷದ ಹೆಸರು ಜನತಾ ಪಕ್ಷ. ಈ ಎಲ್ಲ ಪಕ್ಷಗಳ ಉದ್ದೇಶ ಒಂದೇ- ಇಂದಿರಾಗಾಂಽಯವರ ಕಾಂಗ್ರೆಸ್ ಅನ್ನು ಸೋಲಿಸುವುದು. ಯಾರೂ ಕಲ್ಪನೆ ಮಾಡಿಕೊಳ್ಳಲಾಗದ ರೀತಿಯಲ್ಲಿ ಚುನಾವಣಾ ಫಲಿತಾಂಶಗಳು ಬಂದವು.
ಕಾಂಗ್ರೆಸ್ ಯೇತರ ಹೊಸ ಸರಕಾರ ಅಸ್ತಿತ್ವಕ್ಕೆ ಬಂದು, ಪ್ರಧಾನ ಮಂತ್ರಿಯಾಗಿ ಮುರಾರ್ಜಿ ದೇಸಾಯಿಯವರು ಆಯ್ಕೆಯಾದರು. ಈ ಸರಕಾರ ದಲ್ಲಿ ಅತಿ ಹೆಚ್ಚು ಪಾಲು ಜನಸಂಘದವರೇ ಇದ್ದರು. ಜನ ಸಂಘದವರು ೯೩ ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ದರು. ಜನ ಸಂಘದ ನಾಯಕ ಅಟಲ್ ಬಿಹಾರಿ ವಾಜಪೇಯಿ ಅವರನ್ನು ವಿದೇಶಾಂಗ ಸಚಿವರನ್ನಾಗಿ, ಆಡ್ವಾಣಿಯವರನ್ನು ಮಾಹಿತಿ ಮತ್ತು ಪ್ರಸಾರ ಸಚಿವರನ್ನಾಗಿ ನೇಮಿಸಲಾಯಿತು.
ಆದರೆ, ಪಕ್ಷಗಳ ಮಧ್ಯೆ ಸಮನ್ವಯದ ಕೊರತೆ ಇತ್ತು. ಕಾರಣ ಈ ಎಲ್ಲ ಪಕ್ಷಗಳ ಸಿದ್ಧಾಂತಗಳು ಬೇರೆ ಬೇರೆಯಾಗಿದ್ದವು. ಎಲ್ಲ ಪಕ್ಷಗಳ ಮಧ್ಯೆ ಒಂದು ಪಕ್ಷ, ದ್ವಿ ಸದಸ್ಯ ಇರಬಾರದು ಎಂಬ ಪ್ರಸ್ತಾವನೆ ಬಂತು. ಆ ವಿಚಾರಕ್ಕೆ ಆರ್‌ಎಸ್‌ಎಸ್ ಮತ್ತು ಭಾರತೀಯ ಜನಸಂಘ ವಿರೋಧ ವ್ಯಕ್ತಪಡಿಸಿದವು. ಈ ಮಧ್ಯೆ, ಕೇಲವರು ಜನತಾ ಪಕ್ಷದಿಂದ ಹೊರ ಬಂದು ಜಾತ್ಯತೀತ ಜನತಾ ಪಾರ್ಟಿ ರಚನೆ ಮಾಡಿದರು. ಇದರಿಂದ ಮುರಾರ್ಜಿ ಸರಕಾರ
ಪತನವಾಯಿತು. ಮುಂದೆ ೧೯೮೦ರಲ್ಲಿ ಸರ್ವತ್ರಿಕ ಚುನಾವಣೆಯಲ್ಲಿ ಜನತಾ ಪಕ್ಷ ಯಶಸ್ಸು ಕಾಣಲಿಲ್ಲ, ಕೇವಲ ೩೧ ಸ್ಥಾನಗಳಲ್ಲಿ ಜಯ ಸಾಽಸಿತು. ಏಪ್ರಿಲ್ ೧೯೮೦ರಲ್ಲಿ ರಾಷ್ಟ್ರೀಯ ಪಕ್ಷಗಳ ಕಾರ್ಯಕಾರಣಿ ನಡೆಯಿತು.
ದ್ವಿ ಸದಸ್ಯ ವ್ಯವಸ್ಥೆ ನಿಲ್ಲಿಸಲು ನಿರ್ಧಾರ ಆಯಿತು. ಜನ ಸಂಘದ ಸದಸ್ಯರಿಗೆ ಎರಡೇ ಆಯ್ಕೆಗಳಿದ್ದವು-ಒಂದು ಜನತಾ ಪಕ್ಷದ ಜತೆಗೆ ಇರಬೇಕು,
ಇಲ್ಲವೇ ಆರ್‌ಎಸ್‌ಎಸ್ ಜತೆಗೆ ಇರಬೇಕು. ಈ ಸಮಯದಲ್ಲಿ ಜನಸಂಘದ ಸದಸ್ಯರು ಜನತಾ ಪಕ್ಷ ಬಿಡಲು ನಿರ್ಧರಿಸಿದರು. ಕೊನೆಗೆ ೧೯೮೦, ಏಪ್ರಿಲ್ ೬ರಂದು ಆರ್‌ಎಸ್‌ಎಸ್ ಬೆಂಬಲದೊಂದಿಗೆ ಜನಸಂಘದ ಸದಸ್ಯರೆಲ್ಲ ಸೇರಿ ‘ಭಾರತೀಯ ಜನತಾ ಪಾರ್ಟಿ’ ಸ್ಥಾಪಿಸಿದರು. ಹೀಗೆ ದೇಶದ ಒಳಿತಿಗಾಗಿ, ಜನರು ಕಲ್ಯಾಣಕ್ಕಾಗಿ ಒಂದು ಉತ್ತಮ ಪಕ್ಷದ ಜನನವಾಯಿತು.
ಬಿಜೆಪಿ, ಜನಸಂಘದ ಸಿದ್ಧಾಂತಗಳೊಂದಿಗೆ ಹೆಜ್ಜೆ ಇಡತೊಡಗಿತು. ಅಟಲ್ ಬಿಹಾರಿ ವಾಜಪೇಯಿ ಬಿಜೆಪಿ ನಾಯಕರಾಗಿ ಹೊರಹೊಮ್ಮಿದರು. ಮೊದಮೊದಲು ಕಟ್ಟಾ ಹಿಂದುತ್ವವಾದಿ ಆಗಿದ್ದ ಬಿಜೆಪಿ, ಮುಂದೆ ಜನ ಸಂಘದ ಸಿದ್ಧಾಂತಗಳ ಜತೆಗೆ ಗಾಂಧಿವಾದ, ಸಮಾಜವಾದ ಸಿದ್ಧಾಂತ ಗಳೊಂದಿಗೆ ಹೆಜ್ಜೆಯಿಟ್ಟಿತು. ೧೯೮೪ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯೊಂದಿಗೆ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಕೇವಲ ೨ ಸ್ಥಾನ ಗಳಲ್ಲಿ ಜಯ ಸಾದಿಸಿತು. ಆ ಎರಡು ಸಂಸದರಲ್ಲಿ ಆಡ್ವಾಣಿ ಮತ್ತು ವಾಜಪೇಯಿ ಇಬ್ಬರೂ ಇರಲಿಲ್ಲ. ಬಿಜೆಪಿ ತನ್ನ ವ್ಯವಸ್ಥೆಯಲ್ಲಿ ಸ್ವಲ್ಪಮಟ್ಟಿಗೆ ಬದಲಾವಣೆ ತಂದಿತು. ಆಡ್ವಾಣಿಯವರು ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾದರು.
ಪಕ್ಷ ಮತ್ತೆ ಆರ್‌ಎಸ್ ಎಸ್ ಮತ್ತು ಭಾರತೀಯ ಜನಸಂಘದ ರಾಷ್ಟ್ರೀಯವಾದ ಸಿದ್ಧಾಂತಗಳೊಂದಿಗೆ ಸಂಘಟನೆಗೆ ಮುಂದಾಯಿತು. ಈ ಮದ್ಯೆ
ವಿಶ್ವ ಹಿಂದೂ ಪರಿಷತ್ ನೇತೃತ್ವದಲ್ಲಿ ಬಾಬರಿ ಮಸೀದಿ ಮತ್ತು ರಾಮ ಜನ್ಮಭೂಮಿ ಆಂದೋಲನ ಆರಂಭವಾಗಿತ್ತು. ಹಿಂದುತ್ವ ವಾದ ಸಿದ್ಧಾಂತ ದೊಂದಿಗೆ ಆಡ್ವಾಣಿ ನೇತೃತ್ವದಲ್ಲಿ ಈ ಆಂದೋಲನಕ್ಕೆ ವೇಗ ನೀಡಲಾಯಿತು. ಬಿಜೆಪಿ ರಾಮ ಜನ್ಮಭೂಮಿ ವಿಷಯವನ್ನು ತನ್ನ ಪ್ರಣಾಳಿಕೆಯ ಭಾಗವಾಗಿ ಸ್ವೀಕರಿಸಿತು. ಇದಕ್ಕೆ ಜನರ ಬೆಂಬಲ ದೊರಕಿತು. ಪರಿಣಾಮ, ೧೯೮೯ರ ಚುನಾವಣೆಯಲ್ಲಿ ಬಿಜೆಪಿಯ ೮೯ ಸಂಸದರು ಆಯ್ಕೆ ಯಾದರು.
ಈ ವಿಜಯದ ಸಂತೋಷದೊಂದಿಗೆ ವಿಪಿ ಸಿಂಗ್ ಜತೆಗೂಡಿ ಸರಕಾರ ರಚಿಸಲು ಪಕ್ಷ ಮುಂದಾಯಿತು. ‘ರಾಮಜನ್ಮ ಭೂಮಿ ಆಂದೋಲನ’ದ ಮೂಲಕ ಬಿಜೆಪಿ ರಾಷ್ಟ್ರದ ಪ್ರಮುಖ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿತ್ತು. ಉದ್ದೇಶ ಒಂದೇ, ದೇಶದ ಹಿಂದೂಗಳನ್ನು ಒಂದುಗೂಡಿಸು ವುದು, ಬಲಿಷ್ಠ ರಾಷ್ಟ್ರ್ರ ನಿರ್ಮಾಣ ಮಾಡುವುದು. ೧೯೯೦ರ ವೇಳೆಗೆ ದೇಶದೆಲ್ಲೆಡೆ ಆಡ್ವಾಣಿ ಮತ್ತು ಅಟಲ್ ಹೆಸರು ಪ್ರತಿ ಭಾರತೀಯರಲ್ಲಿ ಚರ್ಚೆಗೆ ಬಂತು. ೧೯೯೦ರ ಸೆಪ್ಟೆಂಬರ್‌ನಲ್ಲಿ ಆಡ್ವಾಣಿಯವರ ನೇತೃತ್ವದಲ್ಲಿ ರಾಮಮಂದಿರ ನಿರ್ಮಾಣದ ಗುರಿಯೊಂದಿಗೆ ಗುಜರಾತಿನ ಸೋಮನಾಥ ಮಂದಿರದಿಂದ ಅಯೋಧ್ಯೆವರೆಗೆ ರಥಯಾತ್ರೆ ಯೋಜನೆ ರೂಪಿಸಲಾಯಿತು.
ಈ ರಥಯಾತ್ರೆಯೊಂದಿಗೆ ಭಾರತೀಯ ರಾಜಕಾರಣಕ್ಕೆ ಹೊಸ ರೂಪ ನೀಡಲು ಪಕ್ಷ ನಿರ್ಧರಿಸಿತು. ರಥಯಾತ್ರೆಯ ಸಮಯದಲ್ಲಿ ಆಡ್ವಾಣಿಯವರು ಸರಕಾರದ ವಿರುದ್ಧ ‘ಮುಸ್ಲಿಂ ತುಷ್ಟಿಕರಣ ಮತ್ತು ನಕಲಿ ಜಾತ್ಯತೀತವಾದ’ದ ಬಣ್ಣ ಬಯಲು ಮಾಡಿದರು. ಈ ವಿಚಾರ ಹಿಂದೂಗಳ ಭಾವನೆಗಳಲ್ಲಿ ಆಳವಾಗಿ ಬೇರೂರಲು ಅಡಿಪಾಯ ಹಾಕಿದರು. ಈ ಮಧ್ಯ ಬಿಹಾರದ ಲಾಲೂ ಪ್ರಸಾದ್ ಯಾದವ್ ಸರಕಾರ ರಥಯಾತ್ರೆಗೆ ಹಲವು ನಿಬಂಧನೆ ಗಳನ್ನು ಹೇರಲು ಆರಂಭಿಸಿತು. ಆದರೂ ಕಾರ್ಯಕರ್ತರು ಅಯೋಧ್ಯೆ ತಲುಪುವ ತಯಾರಿಯಲ್ಲಿದ್ದರು. ಉತ್ತರ ಪ್ರದೇಶದ ಮುಲಾಯಂ ಸಿಂಗ್ ಯಾದವ್ ಸರಕಾರ ಕಾರ್ಯಕರ್ತರನ್ನು ತಡೆಯಲು ಪ್ರಯತ್ನಿಸಿತು.
ಇದೆಲ್ಲದರ ಮಧ್ಯ ಕರಸೇವಕರು ಅಯೋಧ್ಯ ತಲುಪಿದರು. ಪ್ಯಾರಾ ಮಿಲಿಟರಿ ನಿಯೋಜಿಸಲಾಯಿತು. ಪ್ಯಾರಾ ಮಿಲಿಟರಿ ಮತ್ತು ಕರಸೇವಕರ ಮಧ್ಯ ಸಂಘರ್ಷ ನಡೆಯಿತು. ಉತ್ತರ ಪ್ರದೇಶದಲ್ಲಿ ದಂಗೆ, ಚಳವಳಿಗಳು ಆರಂಭವಾದವು. ಇದರೊಂದಿಗೆ ಬಿಜೆಪಿ ವಿಪಿ ಸಿಂಗ್ ಸರಕಾರಕ್ಕೆ ನೀಡಿದ ಬೆಂಬಲ ವಾಪಸ್ ಪಡೆಯಿತು. ಮುಂದೆ ೧೯೯೧ರಲ್ಲಿ ನಡೆದ ಚುನಾವಣೆಯಲ್ಲಿ ಬಿಜೆಪಿಗೆ ೧೨೦ ಸ್ಥಾನಗಳಲ್ಲಿ ಗೆಲುವು ಸಿಕ್ಕಿತು, ಜತೆಗೆ ಉತ್ತರ
ಪ್ರದೇಶದಲ್ಲಿ ಬಿಜೆಪಿ ಸರಕಾರ ಅಸ್ತಿತ್ವಕ್ಕೆ ಬಂತು.
೧೯೯೨ ಡಿಸೆಂಬರ್ ೬ರಂದು ಬಿಜೆಪಿ, ಆರ್‌ಎಸ್‌ಎಸ್ ಮತ್ತು ಪರಿವಾರದಿಂದ ಒಂದು ರ‍್ಯಾಲಿ ಆರಂಭ ಆಯಿತು. ಅದರಲ್ಲಿ ಬಿಜೆಪಿ, ಆರ್‌ಎಸ್‌ಎಸ್ ಮತ್ತು ವಿಶ್ವ ಹಿಂದೂ ಪರಿಷತ್ತಿನ ಲಕ್ಷಾಂತರ ಕಾರ್ಯಕರ್ತರು ಭಾಗವಹಿಸಿದರು. ಉತ್ತರ ಪ್ರದೇಶದ ಬಾಬರಿ ಮಸೀದಿಯ ಹತ್ತಿರ ಲಕ್ಷಾಂತರ ಕಾರ್ಯಕರ್ತರು ಜಮಾಯಿಸಿದರು. ಬಾಬರಿ ಮಸೀದಿ ನೆಲಸಮ ಆಯಿತು. ಇದರೊಂದಿಗೆ ದೇಶ ವಿದೇಶಗಳಲ್ಲಿ ಹಿಂದೂಗಳ ವಿರುದ್ಧ ದಂಗೆಗಳು ಆರಂಭವಾದವು. ಈ ಘಟನೆಯ ನಂತರ ವಿಶ್ವ ಹಿಂದೂ ಪರಿಷತ್ತಿಗೆ ನಿಬಂಧ ಹೇರಲಾಯಿತು. ಪ್ರಮುಖ ನಾಯಕರನ್ನು ಉಗ್ರವಾದ ಭಾಷಣದ ಆಧಾರದ ಮೇಲೆ ಬಂಧಿಸಲಾಯಿತು. ಈ ಘಟನೆ ಒಮ್ಮಿಂದೊಮ್ಮೆಲೆ ಆದದ್ದಲ್ಲ, ಇದು ಪೂರ್ವ ನಿಯೋಜಿತ ಎಂದು ವಿಶ್ಲೇಷಿಸಲಾಯಿತು.
ಮುಂದೆ ೨೦೦೯ರಲ್ಲಿ ಬಿಜೆಪಿಯ ಪ್ರಮುಖ ನಾಯಕರುಗಳಾದ ಆಡ್ವಾಣಿ, ವಾಜಪೇಯಿ, ಮುರಳಿ ಮನೋಹರ್ ಜೋಶಿ ಮತ್ತು ಇತರರನ್ನು ಬಾಬರಿ ಮಸೀದಿ ದ್ವಂಸಕ್ಕೆ ಕಾರಣ ಎಂದು ಪರಿಗಣಿಸಲಾಯಿತು. ಜತೆಗೆ ಉತ್ತರ ಪ್ರದೇಶದ ಕಲ್ಯಾಣ್ ಸಿಂಗ್ ಸರಕಾರದ ಪಾತ್ರವೂ ಇದೆ ಎಂದು ಪರಿಗಣಿಸ ಲಾಯಿತು. ಆದರೆ ೨೦೨೦ರಲ್ಲಿ ಈ ನಾಯಕರನ್ನು ಆರೋಪಿಗಳೆಂದು ಪರಿಗಣಿಸಲು ಆಗುವುದಿಲ್ಲ ಎಂದು ತೀರ್ಮಾನ ಆಯಿತು. ಈ ಘಟನೆಯನ್ನು ದೇಶದ ಇತಿಹಾಸದಲ್ಲಿ ಒಂದು ದೊಡ್ಡ ಆಂದೋಲನ ರೂಪದಲ್ಲಿ ನೋಡಲಾಯಿತು. ಜತೆಗೆ ಭಾರತದ ರಾಜಕೀಯ ದಿಕ್ಕೇ ಬದಲಾಯಿತು.
ಇವೆಲ್ಲದರ ನಡುವೆ, ೧೯೯೧ರಲ್ಲಿ ಬಿಜೆಪಿ ಅಧ್ಯಕ್ಷ ಮುರುಳಿ ಮನೋಹರ್ ಜೋಶಿ ನೇತೃತ್ವದಲ್ಲಿ ‘ಏಕತಾ ಯಾತ್ರೆ’ ಕೈಗೊಳ್ಳಲಾಯಿತು. ಡಿಸೆಂಬರ್ ೧೯೯೧ರಲ್ಲಿ ಕನ್ಯಾಕುಮಾರಿಯಿಂದ ಪ್ರಾರಂಭವಾಗಿ, ೨೬ ಜನವರಿ ೧೯೯೨ರಂದು ಶ್ರೀನಗರದ ಲಾಲ್ ಚೌಕಿ ನಲ್ಲಿ ತ್ರಿವರ್ಣ ಧ್ವಜ ಹಾರಿಸುವು ದರೊಂದಿಗೆ ಮುಕ್ತಾಯವಾಯಿತು. ಇಲ್ಲಿ ನೆನಪಿಡಬೇಕಾದ ಒಂದು ಮುಖ್ಯ ಅಂಶ ಏನೆಂದರೆ, ‘ರಾಮಜನ್ಮಭೂಮಿ ರಥಯಾತ್ರೆ ಮತ್ತು ಏಕತಾ
ಯಾತ್ರೆ’ಗಳಲ್ಲಿ ಒಂದು ಸಾಮ್ಯ ಇತ್ತು. ಈ ಎರಡು ಆಂದೋಲನಗಳ ನಡುವೆ ಭವಿಷ್ಯ ಭಾರತದ ನಾಯಕತ್ವ ನಿರ್ಮಾಣವಾಗಿತ್ತು. ಆ ನಾಯಕ ಬೇರೆ ಯಾರೂ ಅಲ್ಲ ಅದೇ ಈಗಿನ ಪ್ರಧಾನಿ ನರೇಂದ್ರ ದಾಮೋದರದಾಸ್ ಮೋದಿ! ಆ ಎರಡು ಆಂದೋಲನಗಳಲ್ಲಿ ನರೇಂದ್ರ ಮೋದಿ ಪ್ರಮುಖ ಪಾತ್ರವಹಿಸಿದ್ದರು. ಇದೇ ಸಮಯದಲ್ಲಿ ಕಾಂಗ್ರೆಸ್ ಮೊದಲಿನ ಕಾಂಗ್ರೆಸ್ ಆಗಿ ಉಳಿದಿರಲಿಲ್ಲ, ಹಲವು ಪಕ್ಷಗಳೊಂದಿಗೆ ಹೊಂದಾಣಿಕೆ ಮಾಡಿಕೊಂಡು ರಾಜಕಾರಣ ಮಾಡಲು ಆರಂಭಿಸಿತ್ತು. ಇದೇ ಸಮಯದಲ್ಲಿ ಬಿಜೆಪಿ, ಭಾರತದ ಎರಡನೇ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿತು. ಎನ್‌ಡಿಎಗೆ ವಿರುದ್ಧವಾಗಿ ಯುಪಿಎ ರಾಜಕಾರಣ ಆರಂಭವಾಯಿತು.
ಬಿಜೆಪಿ ನಾಯಕತ್ವ ವಾಜಪೇಯಿ ಅವರ ಕೈಯಲ್ಲಿತ್ತು. ಮೂರು ಸಲ ಪ್ರಧಾನಮಂತ್ರಿ ಆದರು, ಒಂದು ಸಲ ಪೂರ್ಣ ಪ್ರಮಾಣದ ಪ್ರಧಾನ
ಮಂತ್ರಿಯಾಗಿ ಆಡಳಿತ ನಡೆಸಿದರು. ೧೯೯೯ರಿಂದ ೨೦೦೪ ರವರೆಗೆ ಅಟಲ್ ಉತ್ತಮ ಆಡಳಿತ ನಡೆಸಿದರು. ಇಂತಹ ಆಡಳಿತ ದೇಶದಲ್ಲಿ ಹಿಂದೆಂದೂ ಕಂಡಿರಲಿಲ್ಲ. ಪಾಕಿಸ್ತಾನದೊಂದಿಗೆ ಸಂಬಂಧವೃದ್ಧಿಗಾಗಿ ಬಸ್ ಯಾತ್ರೆ ಆರಂಭಿಸಲಾಯಿತು, ಹೀಗಿದ್ದೂ ಪಾಕಿಸ್ತಾನ ಕಾರ್ಗಿಲ್ ಯುದ್ಧದ ಮೂಲಕ ಭಾರತಕ್ಕೆ ಮೋಸ ಮಾಡಲು ಆರಂಭಿಸಿತು.
ವಾಜಪೇಯಿ ನೇತೃತ್ವದಲ್ಲಿ ಪಾಕಿಸ್ತಾನವನ್ನು ಬಗ್ಗುಬಡಿದ ಭಾರತ ವಿಜಯಪತಾಕೆ ಹಾರಿಸಿತು. ಮತ್ತೆ ಸರಕಾರ ಬರಬಹುದೆಂಬ ಆಶಾಭಾವನೆ
ಇತ್ತು. ಆದರೆ ೨೦೦೪ರಲ್ಲಿ ಯುಪಿಎ ಅಽಕಾರ ಗದ್ದುಗೆ ಹಿಡಿಯಿತು. ಮುಂದೆ ೨೦೦೯ರಲ್ಲಿಯೂ ಯುಪಿಎ ಅಧಿಕಾರ ಮುಂದುವರಿಯಿತು. ಈ ಹಂತದಲ್ಲಿ ಬಿಜೆಪಿಗೆ ಹೊಸ ನಾಯಕತ್ವದ ಅಗತ್ಯವಿತ್ತು. ಯುಪಿಎ ಎರಡೇ ಅವಽಯಲ್ಲಿ ಹಲವು ಹಗರಣಗಳು ಜರುಗಿದವು. ಅಗತ್ಯ ವಸ್ತುಗಳ ಬೆಲೆಗಳು ಗಗನಕ್ಕೇರಿದ್ದವು. ಈ ಹಂತದಲ್ಲಿ ಜನರಿಗೆ ಮತ್ತು ದೇಶಕ್ಕೆ ಅಗತ್ಯವಿರುವ ನಾಯಕತ್ವ ಎರಡು ದಶಕಗಳ ಹಿಂದೆಯೇ ರೂಪಗೊಂಡಿತ್ತು. ಎಲ್ಲ ಜನುಜರಾತಿನತ್ತ ಮುಖ ಮಾಡಿದರು. ನರೇಂದ್ರ ಮೋದಿಯೇ ಸೂಕ್ತ ವ್ಯಕ್ತಿ ಎಂಬ ಭಾವನೆಯೊಂದಿಗೆ ಅವರ ಆಯ್ಕೆ ನಡೆಯಿತು.
ಪಕ್ಷದ ಆದೇಶದ ಮೇರೆಗೆ ನರೇಂದ್ರ ಮೋದಿ ದೆಹಲಿಯತ್ತ ಮುಖ ಮಾಡಿದರು. ೨೦೧೪ರ ಚುನಾವಣೆಗೆ ನಾಯಕರಾಗಿ ಆಯ್ಕೆಯಾದರು. ಎನ್‌ಡಿಎಗೆ ನರೇಂದ್ರ ಮೋದಿ ನೇತೃತ್ವ ಸಿಕ್ಕಾಗ ಎನ್‌ಡಿಎ ಇದ್ದದ್ದು ಬಿಜೆಪಿ ಆಗಿ ಪರಿವರ್ತನೆಯಾಯಿತು. ೨೦೧೪ರ ಸಾರ್ವತ್ರಿಕ ಚುನಾವಣೆಗೆ ಧುಮುಕಿದ ನರೇಂದ್ರ ಮೋದಿ ಬಿಜೆಪಿಗೆ ಐತಿಹಾಸಿಕ ಗೆಲುವು ತಂದುಕೊಟ್ಟರು. ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಽಕಾರ ಹಿಡಿಯುವ ಮಟ್ಟಿಗೆ ಬೆಳೆಯಿತು. ದೇಶದಲ್ಲಿ ಮೋದಿ ಯುಗ ಆರಂಭವಾಯಿತು. ಚುನಾವಣಾ ಚಾಣಕ್ಯ ಅಮಿತ್ ಶಾ ತಂತ್ರ ಫಲ ನೀಡಿತು. ವಿಧಾನಸಭಾ ಚುನಾವಣೆ ಇರಲಿ, ದೇಶದ ಸಂಸದರ ಚುನಾವಣೆ ಇರಲಿ, ಮೋದಿ-ಶಾ ರಣನೀತಿ ಅದ್ಭುತವಾಗಿತ್ತು.
ಬಹುತೇಕ ಚುನಾವಣೆಗಳಲ್ಲಿ ಗೆಲುವಿನ ನಗೆ ಬೀರಿದರು. ಇಷ್ಟೊತ್ತಿಗೆ ಬಿಜೆಪಿ ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿ ಗುರುತಿಸಿಕೊಂಡಿತು.
೨೦೧೯ರಲ್ಲಿ ದೇಶಕ್ಕೆ ಸಾರ್ವತ್ರಿಕ ಚುನಾವಣೆಗಳು ಘೋಷಣೆ ಯಾದವು. ಮೋದಿಯವರ ಅಭಿವೃದ್ಧಿ ಕೆಲಸಗಳು, ಅತ್ಯುತ್ತಮ ಆಡಳಿತದ ಜತೆಗೆ ಅಮಿತ್ ಶಾ ಅವರ ಚಾಣಕ್ಯ ತಂತ್ರದಿಂದ ೨೦೧೯ರಲ್ಲಿಯೂ ಬಿಜೆಪಿ ಜಯಭೇರಿ ಬಾರಿಸಿತು. ಬಿಜೆಪಿ ಯಿಂದ ೩೦೩ ಸಂಸದರು ಆಯ್ಕೆಯಾದರು. ಅಂದರೆ ಒಟ್ಟು ಸಂಸದರಲ್ಲಿ ಶೇ. ೫೫ ಸಂಸದರು ಬಿಜೆಪಿಯವರೇ ಆಗಿದ್ದರು.
ಎನ್‌ಡಿಎ ರೂಪದಲ್ಲಿ ೩೭೩ ಸಂಸದರ ಬೆಂಬಲದೊಂದಿಗೆ ನರೇಂದ್ರ ಮೋದಿಯವರು ಎರಡನೇ ಅವಽಗೆ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡುತ್ತಿದ್ದಾರೆ. ಬಹುತೇಕ ರಾಜ್ಯಗಳಲ್ಲಿ ಬಿಜೆಪಿ ಆಡಳಿತ ಮುಂದುವರಿದಿದೆ. ೨೦೧೪ರಲ್ಲಿ ಮತ್ತು ೨೦೧೯ ರಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದ ಜನ ಬರುವ ೨೦೨೪ರಲ್ಲಿಯೂ ಮತ್ತೆ ಅವರನ್ನೇ ಪ್ರಧಾನಿಯಾನ್ನಾಗಿ ನೋಡಲು ಕಾತರದಿಂದ ಕಾಯುತ್ತಿದ್ದಾರೆ.
‘ಆರ್‌ಎಸ್‌ಎಸ್ ಪರಿಶ್ರಮ, ಕಾರ್ಯಕರ್ತರ ಶಿಸ್ತುಬದ್ಧ ಅನುಷ್ಠಾನ, ಯೋಗ್ಯ ನಾಯಕತ್ವ, ಚುನಾವಣಾ ತಂತ್ರಗಾರಿಕೆ, ರಾಷ್ಟ್ರ ಮೊದಲು ಎಂಬ ಭಾವನೆಯ ಜತೆಗೆ ಶ್ರೇಷ್ಠ ನಾಯಕ ನರೇಂದ್ರ ಮೋದಿ, ಚುನಾವಣಾ ತಂತ್ರಗಾರ ಅಮಿತ್ ಶಾ, ಸಂಘ ಮತ್ತು ಪರಿವಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲು ಇರುವ ಸ್ವಯಂಸೇವಕರು, ಕಾರ್ಯಕರ್ತರ ಶಿಸ್ತುಬದ್ಧ ಶ್ರಮ’ ಇವುಗಳೇ ಬಿಜೆಪಿ ಕಾರ್ಯತಂತ್ರಗಳು!
ಶ್ಯಾಮ್ ಪ್ರಸಾದ್ ಮುಖರ್ಜಿ ಮತ್ತು ಪಂಡಿತ್ ದೀನದಯಾಳ್ ಉಪಾಧ್ಯಾಯ ಅವರ ರಾಷ್ಟ್ರ ಮೊದಲು ಚಿಂತನೆ, ಲಾಲ್ ಕೃಷ್ಣ ಆಡ್ವಾಣಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರ ಹಿಂದುತ್ವ ಮತ್ತು ದೇಶದ ಅಭಿವೃದ್ಧಿ ಮಂತ್ರಗಳು ಜತೆಗೆ ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರ ಚುನಾವಣಾ ರಣತಂತ್ರಗಳು ಬಿಜೆಪಿಯ ಕಾರ್ಯತಂತ್ರಗಳಾಗಿ ಪರಿವರ್ತಿಸಿಕೊಂಡ ಪರಿಣಾಮ ಬಿಜೆಪಿ ಜಗತ್ತಿನ ಅತೀ ದೊಡ್ಡ ಪಕ್ಷವಾಗಿ, ದೈತ್ಯ ಶಕ್ತಿಯಾಗಿ ಬೆಳೆಯಲು ಕಾರಣವಾಯಿತು. ಮುಂದಿನ ದಿನಗಳಲ್ಲಿ ಭಾರತ ಪರಮ ವೈಭವ ಕಾಣಲಿದೆ. ‘ದೇಶ ಮೊದಲು’ ವಿಚಾರ ಪ್ರತಿ
ಭಾರತೀಯನ ಮನದಲ್ಲಿ ಬೇರೂರಿದೆ. ಆರು ದಶಕಗಳವರೆಗೆ ಆಡಳಿತ ನಡೆಸಿದ ಕಾಂಗ್ರೆಸ್, ಇಂದು ಪ್ರತಿಪಕ್ಷದ ಸ್ಥಾನ ಪಡೆಯಲೂ ಯೋಗ್ಯತೆ ಇಲ್ಲದ ಪಕ್ಷವಾಗಿದೆ.