Sunday, 10th November 2024

ಬಿಜೆಪಿಗೆ ಮತಗಳು ‘ಮೀಸಲು’ ಆದೀತೇ ?

ಅಶ್ವತ್ಥಕಟ್ಟೆ

ranjith.hoskere@gmail.com

ಸಮೀಕ್ಷೆಗಳಲ್ಲಿ ಎಲ್ಲ ಬಿಜೆಪಿಗೆ ವಿರುದ್ಧವಾಗಿ ವರದಿಗಳು ಬಂದರೂ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಪ್ರಯತ್ನದಲ್ಲಿ ತೊಡಗಿದ್ದರು. ಇದೀಗ
ಮೀಸಲನ್ನು ಮರುಹಂಚಿಕೆ ಮಾಡಿದ ಬಳಿಕ, ಹಳೇ ಮೈಸೂರು ಭಾಗದಲ್ಲಿ ಕನಿಷ್ಠ ಮತಗಳಾದರೂ ಬಿಜೆಪಿಯ ತೆಕ್ಕೆ ಬೀಳುವುದು ನಿಶ್ಚಿತ.

ರಾಜಕೀಯದಲ್ಲಿ ತಂತ್ರಕ್ಕೆ ಪ್ರತಿತಂತ್ರ.. ಪಟ್ಟಗೆ ಪ್ರತಿಪಟ್ಟು ಹಾಕುವುದು ನಿರಂತರ ಪ್ರಕ್ರಿಯೆ. ಅದರಲ್ಲಿಯೂ ಚುನಾವಣಾ ಸಮಯದಲ್ಲಿ ಮತದಾರರ ಬಳಿ ಸೈ ಎನಿಸಿಕೊಳ್ಳಲು ಹತ್ತು ಹಲವು ರೀತಿಯ ಪಟ್ಟುಗಳನ್ನು ಎಲ್ಲ ರಾಜಕೀಯ ಪಕ್ಷಗಳು ಹಾಕುತ್ತವೆ. ಆದರೆ ಕೆಲವೊಮ್ಮೆ ಈ ರೀತಿ ಹಾಕುವ ಪಟ್ಟು ಫಲಪ್ರದವಾದರೆ, ಕೆಲವೊಮ್ಮೆ ಉಲ್ಟಾ ಹೊಡೆಯುವ ಸಾಧ್ಯತೆಗಳಿರುತ್ತದೆ. ಈ ಎರಡನ್ನು ಮೀರಿ, ಕೆಲವು ಸಲ ರಾಜಕೀಯ ಪಕ್ಷಗಳು ಹಾಕುವ ಪಟ್ಟುಗಳಿಂದ ತಪ್ಪಿಸಿಕೊಳ್ಳಲು ಪ್ರತಿಪಕ್ಷಗಳು ಹಾಕುವ ಪ್ರತಿತಂತ್ರಗಳು, ಇನ್ನಷ್ಟು ಇಕ್ಕಟ್ಟಿಗೆ ಸಿಲುಕಿಸುವ ಸಾಧ್ಯತೆಗಳೇ ಹೆಚ್ಚಿರುತ್ತದೆ.

ಇಷ್ಟಕ್ಕೂ ಈಗ ಇದು ಯಾವ ರೀತಿ ಪ್ರಸ್ತುತ ಎನಿಸಬಹುದು. ಆದರೆ ಕರ್ನಾಟಕದಲ್ಲಿ ಚುನಾವಣೆ ಘೋಷಣೆಯಾಗಲು ಕೆಲವೇ ದಿನಗಳು ಬಾಕಿಯಿರು ವಾಗ, ಯಾವುದೇ ಕ್ಷಣದಲ್ಲಾದರೂ ಚುನಾ ವಣಾ ದಿನಾಂಕದೊಂದಿಗೆ, ನೀತಿ ಸಂಹಿತೆ ಜಾರಿಯಾಗುವ ಸಾಧ್ಯತೆಯಿದೆ. ಹೀಗಿರುವಾಗ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರ ಬಹುತೇಕ ತಮ್ಮ ಸಚಿವ ಸಂಪುಟದ ಕೊನೆಯ ಸಭೆಯಲ್ಲಿ, ಮೀಸಲು ಎನ್ನುವ ಬ್ರಹ್ಮಾಸ್ತ್ರವನ್ನು ಹೂಡಿದೆ. ಬೆಳಗಾವಿ ಕಲಾಪದ ಅವಧಿಯಲ್ಲಿಯೇ, ಒಕ್ಕಲಿಗ ಹಾಗೂ ಲಿಂಗಾಯತರಿಗೆ ಮೀಸಲನ್ನು ಘೋಷಿಸಲಾಗಿತ್ತು. ಅದಕ್ಕೂ ಮೊದಲು ಪರಿಶಿಷ್ಟ ಜಾತಿ, ಪಂಗಡದವರ ಹಲವು ವರ್ಷದ ಬೇಡಿಕೆಯಾಗಿದ್ದ ಮೀಸಲು ಹೆಚ್ಚಳಕ್ಕೂ ಒಪ್ಪಿಗೆ ನೀಡಲಾಗಿತ್ತು. ಈ ಎರಡೂ ಕಾಂಗ್ರೆಸ್ ಕೊಂಚ ಹಿನ್ನಡೆಯಾದರೂ, ‘ಜಾರಿಗೊಳಿಸಿಲ್ಲ’ ಎನ್ನುವ ನೆಪದಲ್ಲಿ ಬಿಜೆಪಿ ವಿರುದ್ಧ ಪ್ರತ್ಯಾಸವನ್ನು ಸಿದ್ಧಪಡಿಸಿಕೊಂಡಿತ್ತು.

ಆದರೆ ಚುನಾವಣೆಗೆ ಕೆಲವೇ ದಿನ ಬಾಕಿಯಿರುವಾಗ, ಅಂದರೆ ಕಳೆದ ಶುಕ್ರವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ, ರಾಜ್ಯ ಸರಕಾರ ಒಕ್ಕಲಿಗರಿಗೆ, ಲಿಂಗಾಯತರಿಗೆ ಮೀಸಲು ನೀಡುವುದಷ್ಟೇ ಅಲ್ಲದೇ, ಒಳ ಮೀಸಲನ್ನು ಜಾರಿಗೊಳಿಸುವ ತೀರ್ಮಾನಕ್ಕೆ ಅನುಮೋದನೆ ನೀಡಿದೆ. ಇನ್ನು ಈ ರೀತಿ ಮೀಸಲು ಹೆಚ್ಚಿಸುವುದರಿಂದ, ಆಗುವ ಹೆಚ್ಚುವರಿ ಮೀಸಲನ್ನು ತಗ್ಗಿಸುವ ಉದ್ದೇಶದಿಂದ, ಮುಸ್ಲಿಮರ ಮೀಸಲನ್ನು ೨ಬಿಯಿಂದ ಹಿಂಪಡೆಯಲಾಗಿದೆ.
ಆದರೆ ಅವರನ್ನು ಆರ್ಥಿಕ ಹಿಂದುಳಿದ ವರ್ಗಗಳ ಮೀಸಲು ಪಟ್ಟಿಯಲ್ಲಿ ಸೇರಿಸುವ ಮೂಲಕ, ಬಹುದೊಡ್ಡ ಶಾಕ್ ಅನ್ನು ಪ್ರತಿಪಕ್ಷ ಕಾಂಗ್ರೆಸ್ ನೀಡಿದೆ.
ಈ ರೀತಿಯ ತೀರ್ಮಾನ ಕೈಗೊಳ್ಳುವ ಮೊದಲು ಕಾಂಗ್ರೆಸ್ ನಾಯಕರು, ಮೀಸಲನ್ನು ಘೋಷಿಸುವುದಲ್ಲ ಕೇಂದ್ರಕ್ಕೆ ಶಿಫಾರಸು ಮಾಡಬೇಕು ಎನ್ನುವ ಬೇಡಿಕೆಯನ್ನು ಮುಂದಿಟ್ಟುಕೊಂಡು ರಾಜಭವನ ಚಲೋ ನಡೆಸಲು ಸಜ್ಜಾಗಿದ್ದಾಗ, ಒಂದು ದಿನದ ಮೊದಲೇ, ಕೇಂದ್ರಕ್ಕೆ ಶಿಫಾರಸು ಮಾಡಿ ಕಾಂಗ್ರೆಸ್‌ನ ಒಂದು ಅಸದ ಪ್ರಖರತೆಯನ್ನು ಕಡಿತಗೊಳಿಸಿದಸ್ದರು.

ಇದಾದ ಮೂರು ದಿನಕ್ಕೆ ನಡೆದ ಸಚಿವ ಸಂಪುಟ ಸಭೆಯಲ್ಲಿ, ಮೀಸಲು ವಿಷಯದಲ್ಲಿ ಕೈಗೊಂಡ ತೀರ್ಮಾನ ಕಾಂಗ್ರೆಸ್‌ಗೆ ‘ಅತ್ತ ಧರಿ, ಇತ್ತ ಪುಲಿ’ ಎನ್ನುವ ಪರಿಸ್ಥಿತಿಯನ್ನು ನಿರ್ಮಾಣ ಮಾಡುವಂತೆ ಮಾಡಿದೆ. ಏಕೆಂದರೆ, ಇದೀಗ ಒಕ್ಕಲಿಗ, ಲಿಂಗಾಯತ ಹಾಗೂ ದಲಿತರಿಗೆ ನೀಡಿರುವ ಒಳ
ಮೀಸಲನ್ನು ವಿರೋಧಿಸಿದರೆ ಈ ಸಮುದಾಯಗಳು ಕಾಂಗ್ರೆಸ್‌ನಿಂದ ದೂರಾಗುತ್ತದೆ. ಹಾಗೆಂದು, ಸ್ವಾಗತಿಸಿದರೆ ೨ಬಿ ಮೀಸಲನ್ನು ಕಳೆದುಕೊಂಡಿ ರುವ ಕಾಂಗ್ರೆಸ್‌ನ ಬಹುದೊಡ್ಡ ಮತಬ್ಯಾಂಕ್ ಆಗಿರುವ ಮುಸ್ಲಿಮರು ದೂರಾಗುವುದು ನಿಶ್ಚಿತ.

ಹಾಗೇ ನೋಡಿದರೆ ಬಿಜೆಪಿ ಮೀಸಲನ್ನು ಘೋಷಿಸಿದ್ದು, ಸಂಪುಟದಲ್ಲಿ ಅನುಮೋದನೆ ನೀಡಿದ್ದೂ ಇದೇ ಕಾರಣಕ್ಕಾಗಿ ಎಂದರೆ ತಪ್ಪಾಗುವುದಿಲ್ಲ. ಇದೀಗ ಒಕ್ಕಲಿಗ ಹಾಗೂ ಲಿಂಗಾಯತರಿಗೆ ‘ಭಿಕ್ಷೆ ನೀಡಿದಂತೆ ಶೇಕಡವಾರು ಮೀಸಲು’ ನೀಡಲಾಗಿದೆ ಎನ್ನುವ ಆರೋಪವನ್ನು ಕೆಪಿಸಿಸಿ ಅಧ್ಯಕ್ಷ
ಡಿ.ಕೆ.ಶಿವಕುಮಾರ್ ಮಾಡಿದ್ದಾರೆ. ಆದರೆ ಈ ಎರಡು ಸಮುದಾಯದ ಮೀಸಲು ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದ್ದ ಬಹುತೇಕ ನಾಯಕರ ಪ್ರಕಾರ, ಈಗ ಕೊಟ್ಟಿರುವ ಮೀಸಲು ಗರಿಷ್ಠ ಪ್ರಮಾಣದ್ದು. ಆದ್ದರಿಂದ ಮೇಲ್ನೋಟಕ್ಕೆ ವಿರೋಧಿಸಿದರೂ, ಬಹುತೇಕರು ಮೀಸಲಿನ ಸಿಹಿಯನ್ನು ಅನುಭವಿಸುತ್ತಿದ್ದಾರೆ. ಇನ್ನು ಮೀಸಲು ಪಟ್ಟಿಯಿಂದ ಹೊರ ಬಂದಿರುವ ಮುಸ್ಲಿಮರ ವೋಟುಗಳನ್ನು ಮೊದಲಿನಿಂದಲೂ ಬಿಜೆಪಿ ಹೆಚ್ಚು ನಂಬಿಕೊಂಡಿರಲಿಲ್ಲ.

ಆದ್ದರಿಂದ ಈಗಲೂ, ಹೆಚ್ಚೇನು ನಷ್ಟವಾಗುವುದಿಲ್ಲ ಎನ್ನುವ ಮನಃಸ್ಥಿತಿಯಲ್ಲಿ ಬಿಜೆಪಿಗರು ಇದ್ದಾರೆ. ಈ ಪ್ರಬಲ ಅಸವನ್ನು ಬತ್ತಳಿಕೆಯಲ್ಲಿ ಇಟ್ಟು ಕೊಂಡಿದ್ದ ಕಾರಣಕ್ಕಾಗಿಯೇ, ಸಮೀಕ್ಷೆಗಳಲ್ಲಿ ಎಲ್ಲ ಬಿಜೆಪಿಗೆ ವಿರುದ್ಧವಾಗಿ ವರದಿಗಳು ಬಂದರೂ ಹೆಚ್ಚು ತಲೆಕೆಡಿಸಿಕೊಳ್ಳದೇ ತಮ್ಮ ಪ್ರಯತ್ನದಲ್ಲಿ ತೊಡಗಿದ್ದರು. ಇದೀಗ ಮೀಸಲನ್ನು ಮರು ಹಂಚಿಕೆ ಮಾಡಿದ ಬಳಿಕ, ಹಳೇ ಮೈಸೂರು ಭಾಗದಲ್ಲಿ ಕನಿಷ್ಠ ಮತಗಳಾದರೂ ಬಿಜೆಪಿಯ ತೆಕ್ಕೆ ಬೀಳುವುದು ನಿಶ್ಚಿತ.

ಇದರೊಂದಿಗೆ ಬಹುದೊಡ್ಡ ಪ್ರಮಾಣದಲ್ಲಿ ಮತಗಳು ಆಚೀಚೆಯಾಗುವುದು, ಪರಿಶಿಷ್ಟ ಜಾತಿಗೆ ನೀಡಿರುವ ಒಳ ಮೀಸಲು ವಿಷಯದಲ್ಲಿ. ಹಲವು ದಶಕಗಳ ಬೇಡಿಕೆಯಾಗಿದ್ದ ಇದನ್ನು, ಚುನಾವಣಾ ಹೊಸ್ತಿಲಲ್ಲಿ ಬಿಜೆಪಿ ಸರಕಾರ ಮಾಡಿರುವುದರಿಂದ ಸಹಜವಾಗಿಯೇ ಒಂದು ಗುಂಪು
ಬಿಜೆಪಿ ಯತ್ತ ವಾಲಲಿದೆ. ಈ ಲೆಕ್ಕಾಚಾರ ತಿಳಿಯುತ್ತಿದ್ದಂತೆ ಕಾಂಗ್ರೆಸ್ ನಾಯಕರು ಮೀಸಲು ನೀಡಿರುವುದನ್ನು ವಿರೋಧಿಸಿ ಭಾನುವಾರ ಜಂಟಿ
ಸುದ್ದಿಗೋಷ್ಠಿ ನಡೆಸಿದರು. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ರಣದೀಪ್ ಸಿಂಗ್ ಸುರ್ಜೇವಾಲ ಮೂವರು, ಮೀಸಲು
ನೀಡಿರುವುದನ್ನೇ ವಿರೋಧಿಸಿದರು!

ಅವೈಜ್ಞಾನಿಕ ಮೀಸಲು ಎಂದು ಜರಿದ ಕಾಂಗ್ರೆಸ್ ನಾಯಕರು, ವಿರೋಧಿಸುವ ಭರದಲ್ಲಿ ‘ಕಾಂಗ್ರೆಸ್ ಸರಕಾರ ಅಧಿಕಾರಕ್ಕೆ ಬಂದರೆ, ಈ
ಮೀಸಲನ್ನು ರದ್ದುಗೊಳಿಸುತ್ತೇವೆ’ ಎನ್ನುವ ಮಾತುಗಳನ್ನು ಆಡಿದ್ದಾರೆ. ಅಂದರೆ, ದಶಕಗಳ ಬೇಡಿಕೆಯಾಗಿದ್ದ ಪರಿಶಿಷ್ಟ ಜಾತಿಯ ಒಳಮೀಸಲು, ಒಕ್ಕಲಿಗ, ಲಿಂಗಾಯತರಿಗೆ ನೀಡಿರುವ ಮೀಸಲನ್ನು ಹಿಂಪಡೆದು, ಮುಸ್ಲಿಮರಿಗೆ ಪುನಃ ಮೀಸಲನ್ನು ನೀಡುತ್ತೇವೆ ಎನ್ನುವ ಭರವಸೆಯನ್ನು
ನೀಡಿದ್ದಾರೆ.

ಕಾಂಗ್ರೆಸ್ ನಾಯಕರ ಈ ಹೇಳಿಕೆಯಿಂದ ದಲಿತ, ಒಕ್ಕಲಿಗ ಹಾಗೂ ಲಿಂಗಾಯತ ಮತಗಳು, ಪಕ್ಷದಿಂದ ದೂರಾಗುವ ಆತಂಕವೇ ಹೆಚ್ಚಾಗಿದೆ. ಮುಸ್ಲಿಮರನ್ನು ಓಲೈಸಿಕೊಳ್ಳಲು, ಕಾಂಗ್ರೆಸ್‌ನ ಮತ್ತೊಂದು ಪ್ರಬಲ ಮತಬ್ಯಾಂಕ್‌ಗಳನ್ನು ಕಳೆದುಕೊಳ್ಳುವ ಎಡವಟ್ಟಿಗೆ ಮುಂದಾಗಿದೆ. ಸೂಕ್ಷ್ಮವಾಗಿ ಗಮನಿಸಿದರೆ, ಮುಸ್ಲಿಮರಿಂದ ಮತಗಳನ್ನು ಹಿಂಪಡೆದಿದ್ದರಿಂದ ಬಿಜೆಪಿಗೆ ಹೆಚ್ಚು ನಷ್ಟವಾಗುವ ಬದಲು ‘ಮತಗಳ ಕ್ರೋಡೀಕರಣ’ವಾಗಿದೆ. ಆದ್ದರಿಂದ ಸರಕಾರದ ಈ ತೀರ್ಮಾನವನ್ನು ಕಾಂಗ್ರೆಸ್ ವಿರೋಧಿಸದೇ ಹೋಗಿದ್ದರೆ, ಸಹಜವಾಗಿಯೇ ಈ ಗುಂಪು ಎಸ್‌ಡಿಪಿಐ ಪಕ್ಷದತ್ತ ವಾಲುತ್ತಿತ್ತು. ಅದನ್ನು ತಡೆಯುವ ಸಲುವಾಗಿ, ಮೀಸಲು ರದ್ದುಗೊಳಿಸುವ ಹೇಳಿಕೆಯನ್ನು ರಾಜ್ಯ ನಾಯಕರು ನೀಡಿದ್ದಾರೆ.

ಆದರೆ ಮುಸ್ಲಿಮರನ್ನು ಓಲೈಸಲು ನೀಡಿದ್ದ ಹೇಳಿಕೆ ಮುಸ್ಲಿಮರ ಮೇಲೆ ಪ್ರಭಾವ ಬೀರುವ ಮೊದಲೇ, ಮೀಸಲನ್ನು ಪಡೆದ ಸಮುದಾಯಗಳ
ಮೇಲೆ ಬೀರಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ದಶಕಗಳ ಹೋರಾಟದಿಂದ ಸಿಕ್ಕಿರುವ ಮೀಸಲು ಕೈತಪ್ಪಿ ಹೋಗುವ ಆತಂಕದಲ್ಲಿ, ಈ ಸಮುದಾಯಗಳಿರುವುದರಿಂದ ಸಹಜವಾಗಿಯೇ ಈ ಸಮುದಾಯದ ಗರಿಷ್ಠ ಮತಗಳು ಬಿಜೆಪಿಯತ್ತ ವಾಲುತ್ತದೆ. ಈ ಕಾರಣಕ್ಕಾಗಿಯೇ ಮೀಸಲು
ಘೋಷಣೆಯಾಗುತ್ತಿದ್ದಂತೆ, ಕಾಂಗ್ರೆಸ್ ನಾಯಕರು ಸ್ವಾಗತಿಸಬೇಕೋ? ವಿರೋಧಿಸಬೇಕೋ ಎನ್ನುವ ಗೊಂದಲಕ್ಕೆ ಸಿಲುಕಿದ್ದು.

ಆದರೆ ಈ ಇಡೀ ಪ್ರಕ್ರಿಯೆಯಲ್ಲಿ ನೇರ ಲಾಭವನ್ನು ಬಿಜೆಪಿ ಪಡೆಯುವಲ್ಲಿ ಯಶಸ್ವಿಯಾಗಿದೆ. ಬಿ.ಎಸ್. ಯಡಿಯೂರಪ್ಪ ಅವರನ್ನು ಸಕ್ರಿಯ ರಾಜಕಾರಣದಿಂದ ಸೈಡ್‌ಲೈನ್ ಮಾಡುತ್ತಿದ್ದಂತೆ, ಲಿಂಗಾಯತ ಸಮುದಾಯದ ಬಿಜೆಪಿಯಿಂದ ದೂರಾಗಿದೆ ಎನ್ನುವ ಆರೋಪಗಳಿದ್ದವು. ಇನ್ನು ದಲಿತ ಸಮುದಾಯದ ಎಡಗೈ ಸಮುದಾಯ ಬಿಜೆಪಿ ಪರವಾಗಿದ್ದರೂ, ಬಲಗೈ ಸಮುದಾಯ ಬಿಜೆಪಿಯೊಂದಿಗೆ ಹೆಚ್ಚು ಗುರುತಿಸಿಕೊಂಡಿರಲಿಲ್ಲ.

ಆದರೀಗ ಲಿಂಗಾಯತರಿಗೆ ಮೀಸಲು ನೀಡುವ ಮೂಲಕ, ಲಿಂಗಾಯತರ ಪರವಾದ ಪಕ್ಷ ಎನ್ನುವ ಸಂದೇಶದೊಂದಿಗೆ ಮತ ಬ್ಯಾಂಕ್ ಗಟ್ಟಿಗೊಳಿಸಿ ಕೊಂಡಿದೆ. ಇದೇ ರೀತಿ ಒಳ ಮೀಸಲಿನ ಮೂಲಕ ‘ಬೋನಸ್’ ಮತಗಳನ್ನು ಪಡೆಯುವುಲ್ಲಿ ಯಶಸ್ವಿಯಾಗಿದೆ. ರಾಜ್ಯ ಸರಕಾರದ ಈ ಒಂದು ನಿರ್ಧಾರದಿಂದ ಕಳೆದೊಂದು ತಿಂಗಳ ಹಿಂದಿದ್ದ ರಾಜಕೀಯ ಲೆಕ್ಕಾಚಾರ, ಇದೀಗ ಬದಲಾಗುತ್ತಿದೆ. ಈ ಹಿಂದಿನ ಸಮೀಕ್ಷಾ ವರದಿಗಳಿಗೂ, ಈಗಿನ ಸಮೀಕ್ಷೆಗಳ ವರದಿಗಳು ಬದಲಾಗುತ್ತಿದೆ. ಹಾಗೇ ನೋಡಿದರೆ, ಮೀಸಲೆಂಬ ಜೇನುಗೂಡಿಗೆ ಕೈಹಾಕುವ ಹಿಂದೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ತಂತ್ರಗಾರಿಕೆಗಿಂತ, ಕೇಂದ್ರದ ಗೃಹ ಸಚಿವ ಅಮಿತ್ ಶಾ ಅವರ ಯೋಚನೆಯೇ ಪ್ರಮುಖ ಪಾತ್ರವಹಿಸಿದೆ ಎಂದರೆ ತಪ್ಪಾಗುವುದಿಲ್ಲ.

‘ಮೀಸಲು’ ಎನ್ನುವ ಅಸದ ಮೂಲಕ ಬಿಜೆಪಿ ಸರಕಾರ ಚುನಾವಣಾ ಘೋಷಣೆಗೆ ಕೆಲವೇ ದಿನಗಳು ಬಾಕಿಯಿರುವಾಗ ಕಾಂಗ್ರೆಸ್ ಹಾಗೂ ಜೆಡಿಎಸ್‌ಗೆ
ಬಹುದೊಡ್ಡ ಶಾಕ್ ನೀಡಿದೆ. ಕೊನೆಕ್ಷಣದಲ್ಲಿ ಮೀಸಲು ಅಸವನ್ನು ಕಾಂಗ್ರೆಸ್ ನಿರೀಕ್ಷಿಸಿದ್ದರೂ, ಒಳ ಮೀಸಲಿನ ಜೇನುಗೂಡಿಗೆ ಕೈಹಾಕುವ ಸಾಹಸಕ್ಕೆ ಬಿಜೆಪಿ ಮುಂದಾಗಲಿದೆ ಎನ್ನುವುದನ್ನು ಎಣಿಸಿರಲಿಲ್ಲ. ಈ ‘ಅಚ್ಚರಿ’ಯ ತೀರ್ಮಾನವನ್ನು ಕಾಂಗ್ರೆಸ್ ಯಾವ ರೀತಿ ಎದುರಿಸಲಿದೆ ಎನ್ನುವುದೇ ಈಗಿರುವ ಯಕ್ಷಪ್ರಶ್ನೆ.