Thursday, 12th December 2024

ಬಿಜೆಪಿ ಗೆಲ್ಲಿಸಿದ್ದು ಮತದಾರ, ಕಾರ್ಯಕರ್ತ ಅಲ್ಲ!

ವಿಶ್ಲೇಷಣೆ

ಡಾ.ಜಗದೀಶ ಮಾನೆ

ಕಳೆದ ನಾಲ್ಕೈದು ದಿನಗಳ ಹಿಂದೆ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ. ಸಮ್ಮಿಶ್ರ ಸರಕಾರ ರಚನೆಗೆ ಈ ಫಲಿತಾಂಶ ನಾಂದಿ ಹಾಡಿದೆ.
ಕಳೆದ ಎರಡು ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಾಡಿರುವಂತಹ ಅಭೂತಪೂರ್ವ ಸಾಧನೆಗೆ ಮತದಾರ ಕೊಂಚ ಬ್ರೇಕ್ ಹಾಕಿದ್ದಾನೆ. ಅತಿಯಾದ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಮರ್ಮಾಘಾತವಾಗಿದೆ. ೪೦೦ರ ಗುರಿಯನ್ನು ಇಟ್ಟುಕೊಂಡಿದ್ದ ಬಿಜೆಪಿಗೆ ಸರಳ ಬಹುಮತಕ್ಕೂ ಸಾಧ್ಯವಾಗದಂತಹ
ಪರಿಸ್ಥಿತಿ ನಿರ್ಮಾಣವಾಗಿದೆ. ಈ ದೇಶದಲ್ಲಿ ನರೇಂದ್ರ ಮೋದಿ ಅವರು ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದರೂ ಕೂಡ ಮತದಾರ ಬಿಜೆಪಿ ಯನ್ನು ಈ ಹಂತಕ್ಕೆ ತಂದು ನಿಲ್ಲಿಸಿದ್ದು ಯಾಕೆ ಅಂತ ಅವಲೋಕನ ಮಾಡಿಕೊಳ್ಳವ ಸಮಯವಿದು.

ಬಿಜೆಪಿಗೆ ಕಳಶಪ್ರಾಯದಂತಿದ್ದ ಉತ್ತರ ಪ್ರದೇಶದಲ್ಲಿ ದೊಡ್ಡ ಹಿನ್ನಡೆಯಾಗಿದೆ. ಉತ್ತರ ಪ್ರದೇಶದ ಆದಿಯಾಗಿ ರಾಜಸ್ಥಾನ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ ಮುಂತಾದ ಕಡೆಗಳಲ್ಲಿ ಬಿಜೆಪಿಯ ಸೋಲಿಗೆ ಹಲವು ಕಾರಣಗಳಿದೆ. ಬಿಜೆಪಿ ಹಾಗೂ ಮೋದಿಯನ್ನು ಸೋಲಿಸಿದ್ದು ವಿಪಕ್ಷಗಳಿಗಿಂತ ಹೆಚ್ಚಾಗಿ ಬಿಜೆಪಿಯ ಕೆಲ ನಾಯಕರ ನಾಲಿಗೆಗಳೇ ಕಾರಣ ಎನ್ನುವುದರಲ್ಲಿ ಎರಡು ಮಾತಿಲ್ಲ. ಕಳೆದ ಹತ್ತು ವರ್ಷದ ಮೋದಿಯವರ ಆಡಳಿತದಲ್ಲಿ ಅಭಿವೃದ್ಧಿ ವಿಚಾರದಗಲಿ, ಭ್ರಷ್ಟಾಚಾರದ ವಿಚಾರದಲ್ಲಿಯಾಗಲಿ ಮೋದಿ ಅವರ ವಿರುದ್ಧ ಮಾತನಾಡುವುದಕ್ಕೆ ಪಕ್ಷಗಳ ಬಳಿ ಯಾವುದೇ ಅಸಗಳಿರಲಿಲ್ಲ.

ಆದರೆ ಕೆಲ ಬಿಜೆಪಿ ನಾಯಕರೇ ಜಾತಿಯ ಬಗ್ಗೆ, ಸಂವಿಧಾನ ಬದಲಾವಣೆಯ ಮಾತಿನ ಅಸವನ್ನು ವಿಪಕ್ಷಗಳಿಗೆ ಕೊಟ್ಟಿದ್ದರು. ಅದರಲ್ಲೂ ಉತ್ತರ ಪ್ರದೇಶದಲ್ಲಿ ಬಿಜೆಪಿ ರಾಮ ಮಂದಿರದ ಲೋಕಾರ್ಪಣೆ ಮಾಡಿದೆ. ಅಲ್ಲಿ ಸಾಕಷ್ಟು ಹೂಡಿಕೆಗಳು ಬಂದವು. ಇದರಿಂದ ಉದ್ಯೋಗಾವಕಾಶಗಳು ಕೂಡ ಹೆಚ್ಚಾದವು. ಅಲ್ಲದೆ ನೂತನ ರೈಲು ನಿಲ್ದಾಣ, ವಿಮಾನ ನಿಲ್ದಾಣಗಳ ನಿರ್ಮಾಣ, ವಾರಣಾಸಿಯ ಅಭಿವೃದ್ಧಿ, ಕಾಶಿ ಮಥುರಾಗಳು ಕೂಡ ಮುನ್ನೆಲೆಗೆ ಬಂದಿದ್ದವು. ಈ ಎಲ್ಲಾ ಅಭಿವೃದ್ಧಿ ಕಾರ್ಯಗಳಾಗಿದ್ದವು. ರಾಮ ಮಂದಿರ ನಿರ್ಮಾಣವಾದ ಅಯೋಧ್ಯೆ ವ್ಯಾಪ್ತಿಯಲ್ಲಿ ಬರುವ ಫೈಜಾಬಾದ್ ಕ್ಷೇತ್ರ ದಲ್ಲೂ ಬಿಜೆಪಿ ಹೀನಾಯವಾಗಿ ಸೋತಿತ್ತು.

ಉತ್ತರ ಪ್ರದೇಶದಲ್ಲಿ ಬಿಜೆಪಿಯ ಸಂಸದ ಹಾಗೂ ಕೇಂದ್ರದಲ್ಲಿ ಮಂತ್ರಿ ಆಗಿದ್ದ ‘ಪುರುಷೋತ್ತಮ ರೂಪಾಲ’ ಕೂಡಾ ಭಾಷಣ ಒಂದರಲ್ಲಿ ‘ಠಾಕೂರ್- ರಜಪೂತ’ರ ಬಗ್ಗೆ ಕೇವಲವಾಗಿ ಮಾತನಾಡಿದರು. ವಿದೇಶಿಗರು ಮತ್ತು ಬ್ರಿಟಿಷರು ನಮ್ಮ ರಾಜರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದಾಗ ಅದನ್ನು ನಮ್ಮ ರಾಜರು ಎದುರಿಸುವುದನ್ನು ಬಿಟ್ಟು ಅವರ ಜೊತೆ ಕೈಜೋಡಿಸುತ್ತಿದ್ದರು. ನಮ್ಮ ಹೆಣ್ಣು ಮಕ್ಕಳನ್ನು ಅವರಿಗೆ ಕೊಟ್ಟು ವಿವಾಹ ಮಾಡಿಸಿ ಸಂಬಂಧ ಬೆಳೆಸಿದರು. ಅವರ ಈ ಹೇಳಿಕೆ ರಜಪೂತ್ ಸಮುದಾಯದವರ ಆತ್ಮಾಭಿಮಾನಕ್ಕೆ ಧಕ್ಕೆ ಉಂಟಾಗುವಂತೆ ಮಾಡಿತು.

ಉತ್ತರ ಪ್ರದೇಶದಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿರುವ ಮತ್ತು ಬಿಜೆಪಿಯದ್ದೇ ಮತ ಬ್ಯಾಂಕ್ ಆಗಿರುವ ಠಾಕೂರ್ ಸಮುದಾಯ ಮತದಾನದಿಂದ
ದೂರ ಉಳಿಯಿತು. ಇದು ಗಾಯದ ಮೇಲೆ ಬರೆ ಎಳೆದಂತಾಯಿತು. ಈ ಅಂಶ ಮೊದಲು ಮತ್ತು ಎರಡನೆಯ ಹಂತದ ಚುನಾವಣೆಯ ಬಳಿಕ ಬಿಜೆಪಿಗೆ ಅರ್ಥ ಆಯಿತು. ರಜಪೂತರ ಪ್ರಾಬಲ್ಯ ಇರುವ ಕ್ಷೇತ್ರದಲ್ಲಿ ಮತದಾನ ಬಹಳಷ್ಟು ಕಡಿಮೆಯಾಗಿತ್ತು.

ಇನ್ನು ಪಶ್ಚಿಮ ಬಂಗಾಳದಲ್ಲಿ ಈ ಬಾರಿ ಬಿಜೆಪಿ ೨೮ರಿಂದ ೩೦ ಕ್ಷೇತ್ರಗಳಲ್ಲಿ ಗೆದ್ದೇ ಗೆಲ್ಲುತ್ತದೆ ಅಂತ ಎಲ್ಲರೂ ಭಾವಿಸಿದ್ದರು. ಇದರ ನಡುವೆ ಮಮತಾ ಬ್ಯಾನರ್ಜಿ ಮಾತ್ರ ಬಹಳ ದೊಡ್ಡ ಗೇಮ್ ಪ್ಲಾನ್ ಮಾಡಿದ್ದರು. ಅವರು ಆರಂಭದಲ್ಲಿ ಇಂಡಿಕೂಟದ ಜೊತೆಗಿದ್ದರು. ಬಳಿಕ ಅಲ್ಲಿಂದ ಹೊರ ಬರುತ್ತಾರೆ. ಆದರೆ ಇದು ಬಿಜೆಪಿಗರಿಗೆ ಮಾತ್ರ ಅರ್ಥ ಆಯ್ತೋ ಇಲ್ಲವೋ ಗೊತ್ತಿಲ್ಲ. ಆದರೆ ಇದು ಮಮತಾರ ದೊಡ್ಡ ಲಾಜಿಕ್! ಒಂದು ವೇಳೆ ಮಮತಾ ಇಂಡಿಕೂಟ ದಲ್ಲಿ ಇದ್ದಿದ್ದೇ ಆದರೆ ಕಾಂಗ್ರೆಸ್ ಹಾಗೂ ಎಡ ಪಕ್ಷಗಳಲ್ಲಿರುವ ಮತಗಳು ಅದು ಮಮತಾ ವಿರೋಧಿ ಮತಗಳು, ಅವು ಬಿಜೆಪಿಗೆ ಶಿಫ್ಟ್  ಆಗುತ್ತಿತ್ತು. ಅದನ್ನು ತಡೆಯೋದಕ್ಕಾಗಿ ಆ ಕೂಟದಿಂದ ಮಮತಾ ಹೊರಬಂದರು.

ಆರಂಭದಲ್ಲಿ ಆ ಕೂಟ ಸೇರಿದ್ದು ಯಾಕೆ ಅಂದ್ರೆ, ಒಂದು ವೇಳೆ ಈ ಕೂಟ ಸೇರದಿದ್ದರೆ ಮಮತಾರನ್ನು ಬಿಜೆಪಿಯ ಬಿ ಟೀಮ್ ಅಂತ ಕರೆಯಲಾಗುತ್ತಿತ್ತು. ಹಾಗಾದಾಗ ಮುಸ್ಲಿಂ ಮತದಾರರು ಬೇಸರಗೊಂಡು ಮಮತಾ ಅವರಿಗೆ ಮತ ನೀಡುತ್ತಿರಲಿಲ್ಲ ಬದಲಾಗಿ ಅವು ಬೇರೆ ಪಕ್ಷಕ್ಕೆ ಮತ ಹಾಕುವ ಸಾಧ್ಯತೆ ಇತ್ತು. ಹಾಗಾಗಿ ಈ ಎಲ್ಲ ಲೆಕ್ಕಾಚಾರಗಳೊಂದಿಗೆ ಮಮತಾ ಮುಸ್ಲಿಂ ಹಾಗೂ ದಲಿತ ಮತಗಳು ತನಗೆ ಸಿಕ್ಕು ವಿರೋಧಿ ಮತಗಳು ಮಾತ್ರ ಬೇರೆ ಪಕ್ಷಗಳಿಗೆ ಹೋಗದೆ ಅವು ಕಾಂಗ್ರೆಸ್ ಪಕ್ಷದ ಉಳಿಯಬೇಕು ಅಂತ ಗೇಮ್ ಪ್ಲಾನ್ ಮಾಡುವ ಮೂಲಕ ಅತ್ಯುತ್ತಮವಾಗಿ ಚುನಾವಣೆಯನ್ನು ಎದುರಿಸಿದ್ದರ
ಪರಿಣಾಮವಾಗಿ ಅಲ್ಲಿ ಬಿಜೆಪಿಗೆ ಸೋಲಾಯಿತು.

ಮಹಾರಾಷ್ಟ್ರದಲ್ಲಿ ಕಳೆದ ಬಾರಿ ಬಿಜೆಪಿ ಹಾಗೂ ಶಿವಸೇನೆ ೪೨ ಸ್ಥಾನಗಳಲ್ಲಿ ಗೆದ್ದಿದ್ದರು. ಈ ಬಾರಿ ಅಲ್ಲಿ ಶಿವಸೇನೆ ಒಡೆದಿತ್ತು. ಆದರೂ ಕೂಡಾ ಇದು ಅಲ್ಲಿನ ಜನರಿಗೆ ಏನೂ ಅನಿಸಿರಲಿಲ್ಲ. ಆದರೆ ಅಲ್ಲಿ ಅಮಿತ್ ಶಾ ಅವರು ದೊಡ್ಡ ತಪ್ಪು ಮಾಡಿದ್ದರು. ಎನ್‌ಸಿಪಿಯ ಅಜಿತ್ ಪವಾರ್ ಅನ್ನು ಕರೆತಂದಿ
ದ್ದರು. ಮಹಾರಾಷ್ಟ್ರದ ಸ್ಥಳೀಯ ಬಿಜೆಪಿಗರಲ್ಲಿ ಮತ್ತು ಅಜಿತ್ ಪವಾರಲ್ಲಿ ದೊಡ್ಡ ದ್ವೇಷದ ರಾಜಕಾರಣವಿದೆ. ಅಂತಹ ಅಜಿತ್ ಪವಾರನ್ನು ಬಿಜೆಪಿಗೆ ಕರೆದ ಅಮಿತ್ ಶಾ ಅವರನ್ನು ಉಪಮುಖ್ಯಮಂತ್ರಿ ಮಾಡಿದ್ದಲ್ಲದೆ ಅವರೊಂದಿಗೆ ಸೀಟು ಶೇರಿಂಗ್ ಕೂಡಾ ಮಾಡಿದ್ದರು ಇದು ಮಹಾರಾಷ್ಟ್ರದಲ್ಲಿ
ಬಿಜೆಪಿಯ ಕಾರ್ಯಕರ್ತರು ಹಾಗೂ ಮತದಾರರನ್ನು ಮುನಿಸಿಕೊಳ್ಳುವಂತೆ ಮಾಡಿತ್ತು.

ಇದು ಬಿಜೆಪಿ ಹೇಳುವುದೊಂದು ಮಾಡುವುದೊಂದು ಅಂತ ಅನೇಕರು ಬಿಜೆಪಿಗೆ ಮತ ಹಾಕಲಿಲ್ಲ. ಅಲ್ಲಿ ಬಿಜೆಪಿಗೆ ದೊಡ್ಡ ಹೊಡೆತ ಆಯಿತು. ಇನ್ನು ರಾಜಸ್ಥಾನದಲ್ಲಿ ಅತ್ಯಂತ ಪ್ರಮುಖವಾದ ಕ್ಷತ್ರೀಯ ಸಮುದಾಯದ ವಸುಂಧರಾರಾಜೆ ಅವರನ್ನು ಹೊರಗಿಟ್ಟು ಬ್ರಾಹ್ಮಣ ಸಮುದಾಯ ದವರನ್ನು ಸಿಎಂ ಮಾಡಿದ್ದು, ರಾಜ ಸ್ಥಾನದಲ್ಲಿ ಸ್ವಲ್ಪ ಹೊಡೆತ ಆಗಿದೆ. ರಜಪೂತ ಸಮುದಾಯದ ವಿರುದ್ಧ ಬಿಜೆಪಿ ಮುಖಂಡ ಪುರುಷೋತ್ತಮ ರೂಪಾಲರ ಹೇಳಿಕೆ ಮತ್ತೊಂದೆಡೆ ಮುಖ್ಯಮಂತ್ರಿ ಬದಲಾಯಿಸಿದ್ದು ರಾಜಸ್ಥಾನದ ಮತದಾರರು ಬಿಜೆಪಿಯ ಮೇಲೆ ಮುನಿಸು ಹೆಚ್ಚಾಗಿತ್ತು.

ಬಳಿಕ ನರೇಂದ್ರ ಮೋದಿ ಅವರು ಈ ಎಲ್ಲ ತಪ್ಪು ಗಳನ್ನು ಕಂಟ್ರೋಲ್ ಮಾಡುವ ಸಾಕಷ್ಟು ಪ್ರಯತ್ನ ಮಾಡಿದರೂ ಸಾಧ್ಯವಾಗಲಿಲ್ಲ. ಉತ್ತರ ಪ್ರದೇಶದ ಅನೇಕ ಕ್ಷೇತ್ರಗಳಲ್ಲೂ ಮತದಾನ ಕಡಿಮೆಯಾಗಿದೆ. ಬಿಜೆಪಿಯ ಗಟ್ಟಿ ಮತದಾರರೇ ಮತಗಟ್ಟೆಗಳಿಗೆ ಬರಲಿಲ್ಲ. ಪರಿಣಾಮ ವಾರಣಾಸಿಯಲ್ಲಿ ನರೇಂದ್ರ
ಮೋದಿ ಅವರಿಗೂ ಬಹಳಷ್ಟು ಟಫ್ ಆಯ್ತು. ಅಲ್ಲಿನ ಬಹಳಷ್ಟು ಬಿಜೆಪಿ ಕಾರ್ಯಕರ್ತರಲ್ಲಿ ನಿರುತ್ಸಾಹವೇ ತುಂಬಿತ್ತು. ಬಹು ಮುಖ್ಯವಾಗಿ ಬಿಜೆಪಿ ದೊಡ್ಡ ದೊಡ್ಡ ಟಾರ್ಗೆಟ್‌ಗಳನ್ನು ಇಟ್ಟುಕೊಂಡಾಗಲೆಲ್ಲ ಹಿನ್ನಡೆಯನ್ನು ಸಾಧಿಸಿದ ಚಿತ್ರಣ ನಮ್ಮ ಕಣ್ಮುಂದೆ.

ಪಶ್ಚಿಮ ಬಂಗಾಳದ ೨೦೨೧ರ ಚುನಾವಣೆಯ ಸಂದರ್ಭದಲ್ಲಿ ಅಮಿತ್ ಶಾ ಬಿಜೆಪಿ ಈ ಬಾರಿ ೨೦೦ ಸ್ಥಾನ ಗೆಲ್ಲಲಿದೆ ಅಂತ ಹೇಳಿಕೆ ನೀಡಿದ್ದರು.
ಸಂದರ್ಭ ದಲ್ಲಿ ಕೂಡ ಬಿಜೆಪಿ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿತ್ತು. ಕಳೆದ ಬಾರಿ ಕರ್ನಾಟಕದ ವಿಧಾನಸಭಾ ಚುನಾವಣಾ ಸಂದರ್ಭದಲ್ಲಿ ಬಿಜೆಪಿ ೧೫೦ ಸೀಟುಗಳಲ್ಲಿ ಗೆದ್ದೇ ಗೆಲ್ಲುತ್ತೇವೆ ಅಂತ ಹೇಳುತ್ತಿದ್ದರು. ಆದರೆ ಕೊನೆಗೆ ಗೆದಿದ್ದು, ಕೇವಲ ೬೬ ಸ್ಥಾನ ಮಾತ್ರ. ಈ ದೊಡ್ಡ ದೊಡ್ಡ ಟಾರ್ಗೆಟ್‌ ಗಳು ಜನರಲ್ಲಿ ಗೊಂದಲ ಉಂಟುಮಾಡುತ್ತವೆ.

ಕರ್ನಾಟಕದ ೨೦೨೩ರ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬಿಜೆಪಿ ಒಂದಿಷ್ಟು ಹೊಸ ಪ್ರಯೋಗಗಳನ್ನು ಮಾಡಲು ಹೋಗಿ ಹೇಗೆ ಕೈ ಸುಟ್ಟು ಕೊಂಡಿತ್ತೋ ಈಗ ಲೋಕಸಭಾ ಚುನಾವಣೆಯಲ್ಲೂ ಅದೇ ರೀತಿಯ ಪ್ರಯೋಗ ಗಳನ್ನು ಮಾಡಿ ಅದೇ ರೀತಿಯ ಎಡವಟ್ಟುಗಳನ್ನು ಮಾಡಿಕೊಂಡಿದೆ. ಹಾಗಂತ ಎಲ್ಲದರಲ್ಲೂ ವಿ-ಲ ಆಗಿದೆ ಅಂತ ಅಲ್ಲ. ಕೆಲವೊಂದು ಪ್ಲಾನುಗಳು ಸಕ್ಸಸ್ ಕೂಡ ಆಗಿವೆ. ಆಂಧ್ರ ಪ್ರದೇಶದಲ್ಲಿ ಟಿಡಿಪಿಯೊಂದಿಗೆ ಬಿಹಾರ ದಲ್ಲಿ ನಿತೀಶ್ ರೊಂದಿಗೆ ಮೈತ್ರಿ ಮಾಡಿಕೊಂಡಿದ್ದು ಮತ್ತು ಒರಿಸ್ಸಾದಲ್ಲಿ ಮೈತ್ರಿ ಮಾಡಿಕೊಳ್ಳದೆ ಇದ್ದಿದ್ದು ಕೆಲವೊಂದಿಷ್ಟು ಲಾಭಗಳಾಗಿವೆ.

ಏನೇ ಆದರೂ ಕೂಡಾ ಈ ಚುನಾವಣೆಯಲ್ಲಿ ಬಿಜೆಪಿ ಯನ್ನು ಗೆಲ್ಲಿಸಿದ್ದು ಮತದಾರನೇ ಹೊರತು ಬಿಜೆಪಿಯ ನಾಯಕರು, ಕಾರ್ಯಕರ್ತರಲ್ಲ. ನಾಯಕ ಹಾಗೂ ಕಾರ್ಯ ಕರ್ತರು ಕೇವಲ ಮೋದಿ ಜಪದಲ್ಲಿಯೇ ತಲ್ಲೀನರಾಗಿ ಆಲಸಿ ಗಳಾಗಿದ್ದರು. ಮೇಲಿನ ಅಂಶಗಳು ದೇಶದಲ್ಲಿ ಬಿಜೆಪಿಗೆ ಹಿನ್ನಡೆ ಉಂಟು ಮಾಡಲು ಸಾಧ್ಯವಾಗಿದೆ.

(ಲೇಖಕರು: ರಾಜ್ಯಶಾಸ್ತ್ರ ಅಧ್ಯಾಪಕರು)