Saturday, 21st September 2024

Ranjith H Ashwath Column: ಸೈನಿಕ, ದಳದ ನಡುವೆ ಕಮಲ ಪಡೆ !

ಅಶ್ವತ್ಥಕಟ್ಟೆ

ರಂಜಿತ್‌ ಎಚ್.ಅಶ್ವತ್ಥ

ಕರ್ನಾಟಕದಲ್ಲಿ ಸದ್ಯ ರಾಜಕೀಯ ‘ಬಿರುಸಾಗಿ’ ನಡೆಯುತ್ತಿದೆ. ಒಂದೆಡೆ ಮುಡಾ ನಿವೇಶನ ಹಂಚಿಕೆ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿಗರ ಕಾನೂನಾತ್ಮಕ, ರಾಜಕೀಯ ಹೋರಾಟಗಳು ತೀವ್ರ ಸ್ವರೂಪದಲ್ಲಿ
ನಡೆಯುತ್ತಿದ್ದರೆ, ಇನ್ನೊಂದೆಡೆ ಘೋಷಣೆಯೇ ಆಗದ ಉಪಚುನಾವಣೆಗಾಗಿ ದೆಹಲಿಯಲ್ಲಿ ‘ಬಿಸಿ-ಬಿಸಿ’ ಚರ್ಚೆ ನಡೆಯುತ್ತಿದೆ. ಈ ಚರ್ಚೆಯಲ್ಲಿ ಒಂದೆಡೆ ‘ಸೈನಿಕ’ನಿದ್ದರೆ ಮತ್ತೊಂದೆಡೆ ದಳದ ರಾಜಕೀಯ ದಾಳಗಳು ಉರುಳುತ್ತಿವೆ. ಈ ಎರಡರ ನಡುವೆ ಕಮಲ ಪಡೆ ಇಕ್ಕಟ್ಟಿಗೆ ಸಿಲುಕಿ, ‘ಮುಂದೇನು?’ ಎನ್ನುವ ಪ್ರಶ್ನೆಯನ್ನು ಮುಂದಿಟ್ಟುಕೊಂಡು ಕೂತಿದೆ.

ಲೋಕಸಭಾ ಚುನಾವಣೆಯಲ್ಲಿ ಕುಮಾರಸ್ವಾಮಿ ಗೆಲುವು ಸಾಧಿಸಿದ ಬಳಿಕ ಚನ್ನಪಟ್ಟಣ ಕ್ಷೇತ್ರಕ್ಕೆ ರಾಜೀನಾಮೆ ನೀಡಿ ದೆಹಲಿಗೆ ಹಾರಿದ್ದಾರೆ. ಇದೀಗ ಈ ಕ್ಷೇತ್ರಕ್ಕೆ ಉಪಚುನಾವಣೆ ನಡೆಯಬೇಕಿದೆ. ಉಪಚುನಾವಣೆ ನಡೆಯುವುದು ಯಾವಾಗ ಎನ್ನುವ ಸ್ಪಷ್ಟತೆಯಿಲ್ಲದಿದ್ದರೂ, ಕುಮಾರಸ್ವಾಮಿ ಅವರು ರಾಜೀನಾಮೆ ನೀಡಿದ ದಿನದಿಂದಲೂ ರಾಜ್ಯ ರಾಜಕೀಯದ ಗಮನವನ್ನು ಈ ಕ್ಷೇತ್ರ ಸೆಳೆದಿರುವುದು ಸತ್ಯ. ಚನ್ನಪಟ್ಟಣ ಮಾದರಿ ಯಲ್ಲಿಯೇ ಶಿಗ್ಗಾವಿ ಹಾಗೂ ಸಂಡೂರು ಕ್ಷೇತ್ರಕ್ಕೂ ಉಪಚುನಾವಣೆ ನಡೆಯಲಿದೆ. ಆದರೆ ಈ ಎರಡೂ ಕ್ಷೇತ್ರಕ್ಕಿಂತ ಚನ್ನಪಟ್ಟಣ ಸುದ್ದಿಯ ಕೇಂದ್ರಬಿಂದುವಾಗಿದೆ.

ಹೌದು, ಲೋಕಸಭಾ ಚುನಾವಣೆ ಮುಗಿಸಿ ಬೇರೆ ರಾಜ್ಯಗಳ ಚುನಾವಣೆಯಲ್ಲಿ ನಿರತರಾಗಿರುವ ಬಿಜೆಪಿ ನಾಯಕರಿಗೆ ಚುನಾವಣೆಯೇ ಘೋಷಣೆಯಾಗದ ಕರ್ನಾಟಕದ ಉಪಚುನಾವಣೆಯ ಕಾವು ತೀವ್ರ ಬಿಸಿ ಮುಟ್ಟಿಸು ತ್ತಿದೆ. ಅದರಲ್ಲಿಯೂ ಚನ್ನಪಟ್ಟಣದ ಟಿಕೆಟ್ ವಿಷಯವು ಈಗಾಗಲೇ ಚರ್ಚೆ ಮೀರಿ ವಾಕ್ಸಮರ, ಎಚ್ಚರಿಕೆಯವರೆಗೂ ಬಂದು ನಿಂತಿದೆ. ಉಪಚುನಾವಣೆ ಘೋಷಣೆಯಾದ ಬಳಿಕ ನೋಡಿಕೊಳ್ಳೋಣ ಎನ್ನುವ ಮನಸ್ಥಿತಿಯಲ್ಲಿದ್ದ ಕೇಂದ್ರ ಬಿಜೆಪಿ ನಾಯಕರ ಮುಂದೆ ಸಿ.ಪಿ. ಯೋಗೇಶ್ವರ್ ‘ಸರಣಿ ಪರೇಡ್’ ನಡೆಸಿ ತಮ್ಮ ಶಕ್ತಿ ಪ್ರದರ್ಶನ ಮಾಡಲು ಪ್ರಯತ್ನಿಸಿದ್ದಾರೆ. ಇನ್ನೊಂದೆಡೆ ನಡೆಯಲಿರುವ ಮೂರು ಉಪ ಚುನಾವಣೆಗಳಲ್ಲಿ ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಯಾರಿಗೆ ಟಿಕೆಟ್ ನೀಡಿದರೂ ನನಗೆ ಸಂಬಂಧವಿಲ್ಲ, ಆದರೆ ಚನ್ನಪಟ್ಟಣ ಟಿಕೆಟ್ ಮಾತ್ರ ಜೆಡಿಎಸ್‌ಗೇ ನೀಡಬೇಕು ಎನ್ನುವ ಸ್ಪಷ್ಟ ಸಂದೇಶವನ್ನು ಕುಮಾರಸ್ವಾಮಿ ಈಗಾಗಲೇ ನೀಡಿ ದ್ದಾರೆ. ಈ ವಿಷಯದಲ್ಲಿ ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಇಬ್ಬರೂ ತಮ್ಮ ಪಟ್ಟನ್ನು ಸಡಿಲಿಸದೇ ಇರುವುದು ಸ್ಪಷ್ಟ. ಇದೇ ಈಗ ಬಿಜೆಪಿ ನಾಯಕರಿಗೆ ಬಹುದೊಡ್ಡ ತಲೆನೋವಾಗಿದೆ.

ಈ ಗೊಂದಲ ನಿವಾರಿಸುವ ಉದ್ದೇಶದಿಂದಲೇ ಪ್ರಲ್ಹಾದ ಜೋಶಿ ಅವರ ನಿವಾಸದಲ್ಲಿ ಕೆಲ ದಿನಗಳ ಹಿಂದೆ ‘ಸಂಧಾನ’ ಸಭೆಯನ್ನು ನಡೆಸಲಾಗಿತ್ತು. ಈ ಸಭೆಯಲ್ಲಿ ಕುಮಾರಸ್ವಾಮಿ ಹಾಗೂ ಸಿ.ಪಿ. ಯೋಗೇಶ್ವರ್ ಇಬ್ಬರೂ ಮುಖಾಮುಖಿಯಾಗಿ, ತಮ್ಮ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು. ಈ ಅಭಿಪ್ರಾಯ ಹಂಚಿಕೆ ವೇಳೆಯೂ ಒಬ್ಬರಿಗೊಬ್ಬರು ಏರಿದ ಧ್ವನಿಯಲ್ಲಿ ಮಾತನಾಡಿರುವುದು, ಮೈತ್ರಿಯಲ್ಲಿ ಎಲ್ಲವೂ ಸರಿ ಯಾಗಿಲ್ಲ ಎನ್ನುವುದನ್ನು ಸ್ಪಷ್ಟಪಡಿಸಿದೆ. ಸೂಕ್ಷ್ಮ ವಾಗಿ ಗಮನಿಸಿದರೆ, ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಅವರ ನಡುವಿನ ಈ ಗುದ್ದಾಟದ ಬಗ್ಗೆ ಮೈತ್ರಿಗೂ ಮೊದಲೇ ಬಿಜೆಪಿ ನಾಯಕರಿಗೆ ಅರಿವಿತ್ತು. ಆದರೆ ಕೇಂದ್ರ ದಲ್ಲಿ ಅಽಕಾರಕ್ಕೆ ಬಂದರೆ, ಎಲ್ಲವನ್ನೂ ಸರಿಪಡಿಸುತ್ತೇವೆ ಎನ್ನುವ ಭರವಸೆಯೊಂದಿಗೆ ರಾಜ್ಯ ನಾಯಕರನ್ನು ಮ್ಯಾನೇಜ್ ಮಾಡಿದ್ದರು. ಆದರೀಗ ಇನ್ನುಳಿದ ವಿಷಯದಲ್ಲಿ ಹೇಗೋ ಸಂಭಾಳಿಸಿಕೊಂಡು ಹೋಗುತ್ತಿದ್ದರೂ, ಚನ್ನಪಟ್ಟಣ ವಿಷಯದಲ್ಲಿ ಮಾತ್ರ ಏನೂ ಮಾಡಲಾಗದ ಸ್ಥಿತಿಗೆ ಬಿಜೆಪಿ ವರಿಷ್ಠರು ತಲುಪಿದ್ದಾರೆ ಎಂದರೆ ತಪ್ಪಾಗುವುದಿಲ್ಲ.

ಆದರೆ ಲೋಕಸಭಾ ಚುನಾವಣೆಯಲ್ಲಿ ಈ ಇಬ್ಬರೂ ನಾಯಕರು ಎಲ್ಲವನ್ನೂ ಹ್ಯಾಂಡಲ್ ಮಾಡಿದ್ದರಿಂದ ಉಪಚುನಾವಣೆಯಲ್ಲಿಯೂ ಈ ಇಬ್ಬರನ್ನು ಸಮಾಧಾನ ಪಡಿಸಬಹುದು. ಅದರಲ್ಲಿಯೂ ಕೇಂದ್ರ ಸಚಿವ ಸ್ಥಾನ ನೀಡಿರುವುದರಿಂದ ಕುಮಾರಸ್ವಾಮಿ ಅವರನ್ನು ಹ್ಯಾಂಡಲ್ ಮಾಡಬಹುದು ಎನ್ನುವ ಲೆಕ್ಕಾಚಾರದಲ್ಲಿ ಬಿಜೆಪಿಗರು ಇದ್ದರು. ಆದರೆ ರಾಜ್ಯ ರಾಜಕೀಯದ ಮೇಲಿನ ಹಿಡಿತವನ್ನು ಕಳೆದುಕೊಳ್ಳಲು ಕುಮಾರ ಸ್ವಾಮಿ ಸಿದ್ಧವಿಲ್ಲದಿರುವುದು ಇಂದಿನ ಈ ಸಮಸ್ಯೆಗೆ ಕಾರಣವಾಗಿದೆ.

ಆದ್ದರಿಂದ ಬಿಜೆಪಿಯ ದೆಹಲಿ ನಾಯಕರಿಗೆ ಸದ್ಯ ‘ಅತ್ತ ದರಿ-ಇತ್ತ ಪುಲಿ’ ಎಂಬಂಥ ಸ್ಥಿತಿ ಎದುರಾಗಿದೆ. ಮೈತ್ರಿ ಧರ್ಮ ಪಾಲಿಸುವುದಕ್ಕೆ ಜೆಡಿಎಸ್ ಈ ಕ್ಷೇತ್ರವನ್ನು ಬಿಟ್ಟುಕೊಟ್ಟರೆ, ಸಿ.ಪಿ. ಯೋಗೇಶ್ವರ್ ಪಕ್ಷವನ್ನು ತ್ಯಜಿಸುವುದು ಖಚಿತವಾಗಿದೆ. ಕೇವಲ ಯೋಗೇಶ್ವರ್ ಪಕ್ಷ ತೊರೆದರೆ ಕಷ್ಟವಿಲ್ಲ. ಆದರೆ ಪಕ್ಷ ನಿಷ್ಠರಿಗೆ ಟಿಕೆಟ್ ಕೊಟ್ಟಿಲ್ಲ ಎನ್ನುವ ಸಂದೇಶವನ್ನು ನೀಡಿ, ಬಿಜೆಪಿಗೆ ಆ ಭಾಗದಲ್ಲಿರುವ ‘ಅಲ್ಪಸ್ವಲ್ಪ’ ಸಂಘಟನೆಯೊಂದಿಗೆ ಬಿಜೆಪಿ ತೊರೆದರೆ ಪಕ್ಷಕ್ಕೆ ಬಹುದೊಡ್ಡ ಸಮಸ್ಯೆಯಾಗಲಿದೆ. ಯೋಗೇಶ್ವರ್ ಆರಂಭದಲ್ಲಿ ಬಂಡಾಯದ ಎಚ್ಚರಿಕೆ ನೀಡಿದರೂ, ಬಳಿಕ ಬಿಎಸ್‌ಪಿ ಎನ್ನುವ ಹೆಸರನ್ನು ತೇಲಿಬಿಟ್ಟಿದ್ದಾರೆ. ಬಿಎಸ್ ಪಿಯಿಂದ ಸ್ಪರ್ಧಿಸಿದರೆ, ಸಿ.ಪಿ. ಯೋಗೇಶ್ವರ್ ಅವರಿಗೆ ಇರಬಹುದಾದ ಸಾಂಪ್ರದಾಯಿಕ ಮತಗಳು, ಜೆಡಿಎಸ್ ನಿಂದ ಅಂತರ ಕಾಯ್ದುಕೊಂಡಿರುವ ತಟಸ್ಥ ಮತಗಳು ಹಾಗೂ ಬಿಎಸ್‌ಪಿ ಜತೆ ಇರಬಹುದಾದ ದಲಿತ ಮತಗಳು ಒಂದಾಗಲಿದೆ. ಈ ಎಲ್ಲ ಮತಗಳು ಸೇರುವುದರಿಂದ ಯೋಗೇಶ್ವರ್ ಗೆಲುವು ಸಾಧ್ಯವಾಗದಿದ್ದರೂ, ಮೈತ್ರಿ ಅಭ್ಯರ್ಥಿಗೆ ಸೋಲಿನ ರುಚಿ ತೋರಿಸಲು ಸಾಕಾಗುತ್ತದೆ ಎನ್ನುವುದು ಬಿಜೆಪಿಯ ಆತಂಕವಾಗಿದೆ.

ಹಾಗೆಂದ ಮಾತ್ರಕ್ಕೆ ಪಕ್ಷದ ಕಾರ್ಯಕರ್ತರಿಗೆ ‘ಪಕ್ಷ ನಿಷ್ಠೆಗೆ ಅವಕಾಶ’ ಎನ್ನುವ ಸಂದೇಶ ರವಾನಿಸುವ ಉದ್ದೇಶ ದಿಂದ ಬಿಜೆಪಿ ನಾಯಕರು, ಸಿ.ಪಿ. ಯೋಗೇಶ್ವರ್‌ಗೆ ಮಣೆ ಹಾಕುವ ತೀರ್ಮಾನಕ್ಕೆ ಬಂದರೆ, ನಿಶ್ಚಿತವಾಗಿ ಜೆಡಿಎಸ್ ಇದನ್ನು ವಿರೋಧಿಸಲಿದೆ. ಏಕೆಂದರೆ, ನಡೆಯಲಿರುವ ಮೂರು ಉಪಚುನಾವಣೆಯಲ್ಲಿ ಚನ್ನಪಟ್ಟಣ ಹೊರತು ಪಡಿಸಿ ಇನ್ಯಾವ ಕ್ಷೇತ್ರದಲ್ಲಿಯೂ ಜೆಡಿಎಸ್‌ಗೆ ಅಭ್ಯರ್ಥಿಯನ್ನು ನಿಲ್ಲಿಸುವಷ್ಟು ಸಂಘಟನಾ ಶಕ್ತಿಯಿಲ್ಲ. ಇದರೊಂದಿಗೆ ಕುಮಾರಸ್ವಾಮಿ ಅವರ ರಾಜೀನಾಮೆಯಿಂದಲೇ ತೆರವಾಗಿರುವ ಕ್ಷೇತ್ರವನ್ನು ಜೆಡಿಎಸ್ ಬಿಟ್ಟುಕೊಡದೇ, ಬಿಜೆಪಿಯೇ ಉಳಿಸಿಕೊಂಡರೆ ಮೈತ್ರಿಯಲ್ಲಿ ಸಣ್ಣ ಅಪಸ್ವರ ಮೂಡುವುದು ಸಹಜ. ಜೆಡಿಎಸ್‌ನ ಅಸಮಾಧಾನದಿಂದ ಎನ್‌ಡಿಎ ನೇತೃತ್ವದ ಸರಕಾರಕ್ಕೆ ಯಾವುದೇ ಸಮಸ್ಯೆಯಿಲ್ಲ ಎನ್ನುವುದು ನಿಜವಾದರೂ, ಬಿಜೆಪಿ ಮೈತ್ರಿಧರ್ಮ ಪಾಲಿಸುತ್ತಿಲ್ಲ ಎನ್ನುವ ‘ಕೆಟ್ಟ’ ಸಂದೇಶ ಮೈತ್ರಿಕೂಟದಲ್ಲಿ ಹೋದರೆ ಮುಂದಿನ ನಾಲ್ಕು ವರ್ಷ ಎಲ್ಲರನ್ನೂ ನಿಭಾಯಿಸಲು ಸಾಧ್ಯವೇ? ಎನ್ನುವ ಆತಂಕವೂ ದೆಹಲಿ ನಾಯಕರಲ್ಲಿದೆ.

ಹಾಗೆ ನೋಡಿದರೆ, ಉಪಚುನಾವಣೆ ಘೋಷಣೆಗೂ ಮೊದಲು ನಡೆಸಿರುವ ಸಮೀಕ್ಷೆಯಲ್ಲಿ ಚನ್ನಪಟ್ಟಣ, ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಬಿಜೆಪಿ, ಜೆಡಿಎಸ್‌ಗೆ ಹೇಳಿಕೊಳ್ಳುವ ಪೂರಕ ವಾತಾವರಣವಿಲ್ಲ ಎಂಬುದು ಬಯಲಾಗಿದೆ. ಉಪಚುನಾವಣೆಗಳಲ್ಲಿ ಸಾಮಾನ್ಯವಾಗಿ ಆಡಳಿತ ಪಕ್ಷಕ್ಕೆ ಇರುವಂತೆ ಈ ಬಾರಿಯೂ ಮೂರು ಕ್ಷೇತ್ರಗಳಲ್ಲಿಯೂ ಕಾಂಗ್ರೆಸ್‌ಗೆ ಪೂರಕ ವಾತಾವರಣವಿದೆ. ಆದರೆ ಚನ್ನಪಟ್ಟಣ, ಶಿಗ್ಗಾವಿ ಎರಡೂ ಕ್ಷೇತ್ರಗಳು ದೋಸ್ತಿಗಳ ಭದ್ರಕೋಟೆ ಎನಿಸಿಕೊಂಡಿವೆ. ಆದ್ದರಿಂದ ಸಂಡೂರಿನ ಸ್ಥಿತಿ ಏನೇ ಆದರೂ, ಈ ಎರಡೂ ಕ್ಷೇತ್ರದಲ್ಲಿ ‘ಟಫ್‌ ಫೈಟ್’ ಆದರೂ ನೀಡಬೇಕು ಎನ್ನುವುದು ಎರಡೂ ಪಕ್ಷದ ನಾಯಕರ ಲೆಕ್ಕಾಚಾರವಾಗಿದೆ. ಅದರಲ್ಲಿಯೂ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ ಹಾಗೂ ಯೋಗೇಶ್ವರ್ ಇಬ್ಬರ ಪ್ರಭಾವವಿದ್ದರೂ, ಸೋತರೆ ಮೈತ್ರಿಗೆ ಮುಜುಗರ ಎನ್ನುವುದು ಎರಡೂ ಪಕ್ಷದ ಮುಖಂಡರ ವಾದವಾಗಿದೆ.

ಚನ್ನಪಟ್ಟಣದಲ್ಲಿ ಇಬ್ಬರೂ ಸಮಾನ ಪ್ರಭಾವ ಹೊಂದಿರುವುದೇ ಮೈತ್ರಿಗೆ ಮುಳುವಾಗಿ, ಕಾಂಗ್ರೆಸ್ ಅಭ್ಯರ್ಥಿಗೆ ಲಾಭವಾಗುವುದೇ ಎನ್ನುವ ಅನುಮಾನಗಳು ಶುರುವಾಗಿವೆ. ಏಕೆಂದರೆ, ಉಪಚುನಾವಣೆ ಪರಿಸ್ಥಿತಿ ನಿರ್ಮಾಣವಾದ ದಿನದಿಂದಲೂ ಯೋಗೇಶ್ವರ್ ಹಾಗೂ ಕುಮಾರಸ್ವಾಮಿ ‘ಖುಷಿ’ಯಿಂದ ಕೂತು ಕಾರ್ಯಕರ್ತರೊಂದಿಗೆ ಸಭೆ ನಡೆಸಿಲ್ಲ. ಆದ್ದರಿಂದ ಕೊನೇ ಕ್ಷಣದಲ್ಲಿ ಯಾರಿಗೆ ಟಿಕೆಟ್ ನೀಡಿದರೂ, ಮತ್ತೊಂದು ಬಣ ತಟಸ್ಥವಾಗುವ ಅಥವಾ ಕಾಂಗ್ರೆಸ್‌ಗೆ ಬೆಂಬಲಿಸುವ ಸಾಧ್ಯತೆಯಿದೆ. ಈ ಎರಡರಲ್ಲಿ ಯಾವುದನ್ನೇ ಮಾಡಿದರೂ, ಅದರ ನೇರಲಾಭ ಕಾಂಗ್ರೆಸ್‌ಗೆ ಆಗಲಿದೆ. ಇದಕ್ಕೆ ಪೂರಕ ಎನ್ನುವ ರೀತಿಯಲ್ಲಿ ಈ ಬಾರಿ ಲೋಕಸಭಾ ಚುನಾವಣೆಯ ಫಲಿತಾಂಶ ಬಂದಿದೆ.

ಸಾಮಾನ್ಯವಾಗಿ ಚನ್ನಪಟ್ಟಣದಲ್ಲಿ ಕಾಂಗ್ರೆಸ್ ಮೂರನೇ ಸ್ಥಾನದಲ್ಲಿ ಇರುತ್ತಿತ್ತು. ಆದರೆ ೨೦೨೪ರ ಲೋಕಸಭಾ ಚುನಾವಣೆಯಲ್ಲಿ ಅದು ೮೫ ಸಾವಿರ ಮತಗಳನ್ನು ತೆಗೆದುಕೊಂಡಿದೆ. ವಿಧಾನಸಭಾ ಚುನಾವಣೆಗೆ ಈ ಪ್ರಮಾಣದಲ್ಲಿ ಮತ ಪಡೆದರೂ, ಎರಡನೇ ಸ್ಥಾನಕ್ಕೆ ಬರುವುದು ಖಚಿತ. ಇದರೊಂದಿಗೆ ರಾಜ್ಯದಲ್ಲಿ ಕಾಂಗ್ರೆಸ್ ಸರಕಾರವೇ ಇರುವುದರಿಂದ ಈ ಕ್ಷೇತ್ರವನ್ನು ಗೆದ್ದುಕೊಳ್ಳುವುದು ‘ಸುಲಭ’ ಎನ್ನುವುದು ಕಾಂಗ್ರೆಸ್ಸಿಗರ ಲೆಕ್ಕಾಚಾರವಾಗಿದೆ.

ಬಿಜೆಪಿ-ಜೆಡಿಎಸ್ ಮೈತ್ರಿ ಮಾಡಿಕೊಂಡ ಕ್ಷಣದಲ್ಲಿಯೇ ಈ ರೀತಿಯ ಗೊಂದಲಗಳು ಭವಿಷ್ಯದಲ್ಲಿ ಬರಲಿವೆ ಎನ್ನುವ ಮಾತುಗಳು ಕೇಳಿಬಂದಿದ್ದವು. ಆದರೆ ೨೦೧೪, ೨೦೧೯ರ ಚುನವಣೆಯಲ್ಲಿ ಬಿಜೆಪಿ ಸಾಧಿಸಿದ ‘ದಿಗ್ವಿಜಯ’ವನ್ನು ೨೦೨೪ರಲ್ಲಿಯೂ ಸಾಧಿಸಿದ್ದರೆ, ಜೆಡಿಎಸ್ ಪಕ್ಷದಿಂದ ಈ ಪ್ರಮಾಣದಲ್ಲಿ ಸಂದಿಗ್ಧ ಪರಿಸ್ಥಿತಿ ಎದುರಿಸಬೇಕಾದ ಅನಿವಾರ್ಯತೆಯಿರಲಿಲ್ಲ. ಆದರೀಗ ಎನ್‌ಡಿಎದ ಎಲ್ಲ ಪಕ್ಷಗಳನ್ನು ‘ವಿಶ್ವಾಸ’ಕ್ಕೆ ತೆಗೆದುಕೊಳ್ಳಬೇಕಿರುವುದರಿಂದ ಎಲ್ಲ ಪಕ್ಷಗಳಿಗೂ ಸಮಾನ ಗೌರವ ನೀಡುವ ಇಕ್ಕಟ್ಟಿಗೆ ಬಿಜೆಪಿ ನಾಯಕರು ಸಿಲುಕಿದ್ದಾರೆ. ಇದೇ ಕಾರಣಕ್ಕೆ ಬಿಜೆಪಿಗೆ ಸ್ಪಷ್ಟ ಬಹುಮತ ಬಾರದೇ, ಎನ್‌ಡಿಎ ಅಧಿಕಾರಕ್ಕೆ ಬರುತ್ತಿದ್ದಂತೆ,
ಮುಂದಿನ ಐದು ವರ್ಷಗಳ ಕಾಲ ಈ ರೀತಿಯ ಹಲವು ಇಕ್ಕಟ್ಟಿಗೆ ಬಿಜೆಪಿ ಸಿಲುಕಲಿದೆ ಎನ್ನುವ ಮಾತುಗಳನ್ನು ರಾಜಕೀಯ ವಿಶ್ಲೇಷಕರು ಹೇಳಿದ್ದು. ಇದರ ಮೊದಲ ಭಾಗವಾಗಿ, ಚನ್ನಪಟ್ಟಣ ಚುನವಣೆಯ ಟಿಕೆಟ್ ಹಂಚಿಕೆಯ ಗೊಂದಲ ಶುರುವಾಗಿದೆ.

ಇಷ್ಟು ದಿನ ‘ನನ್ನ ಮಾತೇ ಶಾಸನ’ ಎನ್ನುವ ರೀತಿಯಲ್ಲಿದ್ದ ಅಮಿತ್ ಶಾ ಹಾಗೂ ನರೇಂದ್ರ ಮೋದಿ ಅವರು ಈ ಹಂತದಲ್ಲಿ ಯಾವ ರೀತಿಯಲ್ಲಿ ಚೌಕಾಸಿ ನಡೆಸಲಿದ್ದಾರೆ ಎನ್ನುವ ಕುತೂಹಲವಿದೆ. ಮೈತ್ರಿಧರ್ಮ
ಪಾಲಿಸುವರೋ ಅಥವಾ ಪಕ್ಷದ ನಿಷ್ಠರಿಗೆ ಅವಕಾಶ ನೀಡುವರೋ ಎನ್ನುವುದಕ್ಕೆ ಕಾಲವೇ ಉತ್ತರಿಸಬೇಕಿದೆ.