Sunday, 24th November 2024

ಇಂಥವರು ಬಾಯಿಬಿಟ್ಟರೆ ಬಣ್ಣಗೇಡು

ಹಂಪಿ ಎಕ್ಸ್’ಪ್ರೆಸ್

1336hampiexpress1509@gmail.com

ನಿಜಕ್ಕೂ ನಾಗರಿಕರ ಮತ್ತು ದೇಶದ ಭವಿಷ್ಯದ ಕಾಳಜಿಯಿದ್ದರೆ ಆರ್ಥಿಕತೆಯ ಯಂತ್ರವನ್ನು ಸರಿಯಾಗಿ ಗಮನಿಸಿ ವಸ್ತುಗಳ ಬೆಲೆಯನ್ನು ಇಳಿಸಲಿ. ಉಚಿತ ಕೊಡುವುದಕ್ಕಿಂತ ದುಡಿಯುವ ಕೈಗಳಿಗೆ ಉದ್ಯೋಗ ಸೃಷ್ಟಿಸಲಿ, ಎರಡು ಮಕ್ಕಳನ್ನು ಹೊಂದಿದವರಿಗೆ ಸಂಪೂರ್ಣ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ನೀಡುವಂತಾಗಲಿ.

ನಾಟಕವೊಂದರಲ್ಲಿ ನಟ ಧೀರೇಂದ್ರಗೋಪಾಲ್ ಪಾತ್ರಕ್ಕೆ ನಾಗಮಂಗಲ ಕಿಟ್ಟಿ ಪ್ರಶ್ನೆ ಕೇಳುತ್ತಾರೆ ‘ವಿಧಾನಸೌಧದ ಮುಂದೆ ಅಂಬೇಡ್ಕರ್ ಅವರು ಕೈಎತ್ತಿ ತೋರಿಸುತ್ತಿರುವುದರ ಅರ್ಥವೇನು?’ ಎಂದು. ಆಗ ಧೀರೇಂದ್ರಗೋಪಾಲ್ ನಾನು ಬರೆದಿರುವ ಸಂವಿಧಾನದ ಪುಸ್ತಕಾನ ನನ್ನ ಕೈಯ ಕೊಟ್ಟು, ಉರಿಯುವ ಬಿಸಿಲಿನಲ್ಲಿ ಸುರಿಯುವ ಮಳೆಯಲ್ಲಿ ನಿಲ್ಲಿಸಿ ಸಾರಾಯಿ ಅಂಗಡಿ ಮುಂದೆ ಕಚ್ಚಾಡುವ ನಾಯಿಯಗಳ ಹಾಗೆ ಕಚ್ಚಾಡ್ತಿದ್ದಿರ ಸೂ..ಮಕ್ಳಾ..! ಎಂದು ಉಗಿಯುತ್ತಿದ್ದಾರೆ ಎಂದು ಉತ್ತರಿಸುತ್ತಾರೆ.

ರಾಜಕೀಯ ವಿಡಂಬನಾತ್ಮಕ ನಾಟಕದ ಈ ದೃಶ್ಯಕ್ಕೆ ದೃಷ್ಟಾಂತವಾಗಿ ಮೊನ್ನೆ ಬಾಯಿ ‘ಹರಿ’ಪ್ರಸಾದ್ ಎಂಬ ಮನುಷ್ಯ ಹೊಸಪೇಟೆಯ ವೇದಿಕೆಯಲ್ಲಿ ಆಡಿದ ‘ವೇಶ್ಯೆ’ ಮಾತುಗಳು. ತಾನು ಪಕ್ಷದಲ್ಲಿ ಹಿರಿಯ, ನಲವತ್ತು ವರ್ಷಗಳ ಅನುಭವವಿರುವವನು, ದೆಹಲಿ ಮಟ್ಟದ ರಾಜಕಾರಣಿ ಎಂದೆ ಹೇಳಿಕೊಳ್ಳುವ ಹರಿಪ್ರಸಾದ್ ಎಸ್.ಎಂ. ಕೃಷ್ಣ, ಬಂಗಾರಪ್ಪ, ಎ. ಕೆ.ಆಂಟನಿ, ಪ್ರಣವ್ ಮುಖರ್ಜಿ ಅಂಥವರ ಜತೆಗಿದ್ದು ಕಲಿತದ್ದು ಇಂಥ ವ್ಯಕ್ತಿತ್ವಾನಾ? ಹೋಗಲಿ, ಇಷ್ಟೊಂದು ಅನುಭವವಿರುವ ಹರಿಪ್ರಸಾದ್‌ಗೆ ನೆಟ್ಟಗೆ ಒಂದು ಚುನಾವಣೆ ಎದುರಿಸಿ ಜನರ ವಿಶ್ವಾಸ ಗಳಿಸಿ ಗೆದ್ದ ಇತಿಹಾಸವಿದೆಯೇ ಎಂದು ನೋಡಿದರೆ ಅಂಥ ಯೋಗ್ಯತೆಯನ್ನೂ ಸಿದ್ಧಿಸಿಕೊಂಡಿಲ್ಲ.

ರಾಜ್ಯಸಭಾ ಸದಸ್ಯ, ವಿಧಾನ ಪರಿಷತ್ ಸದಸ್ಯ ಆಗಿರುವುದೇ ಹೆಚ್ಚುಗಾರಿಕೆ. ನಾಲ್ಕು ದಶಕಗಳ ರಾಜ್ಯ ಮತ್ತು ದೆಹಲಿ ಲೆವೆಲ್ಲಿನ ರಾಜಕಾರಣಿ,
ಇವರ ಪಾಲಿನ ‘ಚಿಲ್ಟು’ ‘ಚಡ್ಡಿ’, ರಾಜಕಾರಣದಲ್ಲಿ ಕಣ್ಣುಬಿಟ್ಟಿರುವ ತೇಜಸ್ವಿ ಸೂರ್ಯ ಎದುರು ಸೋತವರು ಎಂಥ ಆತ್ಮಾವಲೋಕನ ಮಾಡಿಕೊಳ್ಳ
ಬೇಕು ಹೇಳಿ? ಅದು ಬಿಟ್ಟು ಬಾಯಿ ಬಿಟ್ಟರೆ ಬಣ್ಣಗೇಡು ಎಂಬಂತೆ ವರ್ತಿಸಿದರೆ ಪ್ರಜೆಗಳ ದೃಷ್ಠಿಯಲ್ಲಿ ಇಂಥವರ ಪಾತ್ರವೇನೆಂಬುದು ನಿಖರವಾ ಗುತ್ತದಷ್ಟೇ.

ಆಯ್ತು ಬಿಡಿ, ರಾಜ್ಯ ರಾಜಕಾರಣದಲ್ಲಿ ತಾನು ‘ಮಹಾಪತಿವ್ರತೆ’ ಎಂದು ಹೇಳಿಕೊಳ್ಳುವ ಯೋಗ್ಯತೆಯಂತೂ ಯಾರಿಗೂ ಇಲ್ಲ. ವೇಶ್ಯೆ ಎಂದಾದರೂ ಹೇಳಿಕೊಂಡು ಮಜಾ ಮಾಡಲಿ. ಇಷ್ಟಕ್ಕೂ ಇಂಥವರ ಇಷ್ಟೊಂದು ಆಕ್ರೋಶ, ‘ಖೋಜಾ’ರೋಷ, ಪೌರುಷ ಪರಾಕ್ರಮ ಇವುಗಳೆ ಯಾರಿಗಾಗಿ? ದೇಶದ ಭವಿಷ್ಯ ಭದ್ರತೆ ಪ್ರಜಾಪ್ರಭುತ್ವದ ಪೂಜ್ಯತೆಗೆ, ನಾಗರಿಕರ ಉದ್ಧಾರಕ್ಕಾಗಿಯೇ ಎಂದು ನೋಡಿದರೆ ಅದ್ಯಾವುದೂ ಇವರಿಗಿಲ್ಲ. ‘ಬಾರದಾ ಹೆಣ್ಣಿಂಗೆ ಹೋರುವನು ಕಡುಹೆಡ್ಡ, ದೂರದ ಹೆಣಕೆ ನರಿಕೂಗಿ ನೆಗೆದು ಬಾಯಾರಿ ಸತ್ತಂತೆ ಸರ್ವಜ್ಞ‘ ಎಂಬಂತೆ ಒಬ್ಬಬ್ಬರೂ ಒಬ್ಬೊಬ್ಬರ ವಿರುದ್ಧ, ಇನ್ನೊಬ್ಬರಿಗೆ ಚಮಚಾಗಿರಿ ಗುಲಾಮಗಿರಿ ಮಾಡುವುದು, ಬಕೇಟು ಹಿಡಿಯುವುದು ಇದೇ ಆಗಿಬಿಟ್ಟಿದೆ.

ರಾಜ್ಯದ ಕಾದ್ಸ್‌ಗೆ ಸಿದ್ದರಾಮಯ್ಯ ಡಿ.ಕೆ. ಶಿವಕುಮಾರ್, ಮಲ್ಲಿಕಾರ್ಜುನ ಖರ್ಗೆ ಈ ಮಂದಿಯ ಪ್ರತಿಷ್ಠೆಯಷ್ಟೆ. ದೆಹಲಿಯಲ್ಲಿ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಗಾಂಧಿ ಮಾತ್ರವೇ ಮೂಲಮಂತ್ರ. ಬಿಜೆಪಿಯಲ್ಲಿ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ. ಜೆಡಿಎಸ್‌ನಲ್ಲಿ ಒಂದೇ
ಒಂದು ಕುಟುಂಬಕ್ಕಷ್ಟೇ ಇಡೀ ರಾಜ್ಯದ ರಾಜಕಾರಣ ಪುರಾಣ. ಅಷ್ಟೇ! ಇನ್ನೇನಿರಲು ಸಾಧ್ಯ? ಜತೆಗೊಂದಿಷ್ಟು ಮಾಡಲು ಕೆಲಸವಿಲ್ಲದ ಕಾವಿಧಾರಿ ಗಳು. ಇಲ್ಲಿ ಸಿದ್ದರಾಮಯ್ಯ ಅಥವಾ ಡಿಕೆಶಿ ಮುಖ್ಯಮಂತ್ರಿಯಾಗಬೇಕು, ದೆಹಲಿಯಲ್ಲಿ ಮಹಾಪುರುಷ ರಾಹುಲ್‌ಗಾಂಧಿ ಪ್ರಧಾನಿಯಾಗಬೇಕು.

ಜೆಡಿಎಸ್‌ನಲ್ಲಿ ಕುಟುಂಬದವರೆಲ್ಲರೂ ವಿಧಾನಸೌಧದಲ್ಲಿ ಆಳಬೇಕು. ಇದರ ಹೊರತು ಇಂಥವರಿಂದ ಇನ್ನಾವ ಸ್ಖಲನವೂ ಸದ್ಯಕ್ಕೆ ಕಾಣುತ್ತಿಲ್ಲ. ಇಷ್ಟುಮಾತ್ರ ಸುಖಕ್ಕೆ ತೀಟೆ ತೆವಲಿಗೆ ಏನೆ ವರಸೆಗಳು ನಾಟಕಗಳು ಹೊಲಸು ಮಾತುಗಳು ತಂತ್ರ ಕುಂತ್ರಗಳು ವಿP ಕಣ್ಣೀರುಗಳು ನಿಂದನೆ ಆರೋಪ ಬೈಗುಳ ಥು.. ಇವರ ಜನ್ಮಕ್ಕೆ..!

ಡಾ.ಭೀಮರಾವ್ ರಾಮ್‌ಜೀ ಅಂಬೇಡ್ಕರ್ ಅವರು ಕಟ್ಟಿದ ಪ್ರಜಾಪ್ರಭುತ್ವಕ್ಕೆ ಈ ದರಿದ್ರ ರಾಜಕಾರಣಿಗಳು ಮಾಡುತ್ತಿರುವ ದ್ರೋಹ, ತರುತ್ತಿರುವ
ಕಳಂಕವನ್ನು ನೋಡುತ್ತಿದ್ದರೆ ಒಂದೊಮ್ಮೆ ಇಂಥವರ ಕೈಗೆ ಅಧಿಕಾರವೇನಾದರು ಸಿಕ್ಕಿದ್ದೇ ಆದಲ್ಲಿ ಪುಟ್ಟಣ್ಣ ನವರ ನಾಗರಹಾವು ಸಿನಿಮಾದ ‘ಅಲಮೇಲು’ ಪಾತ್ರಕ್ಕೆ ಬಂದ ಗತಿ ನಮ್ಮ ಪ್ರಜಾಪ್ರಭುತ್ವಕ್ಕೆ ಬರುತ್ತದೆಂದರೆ ಅತಿಶಯೋಕ್ತಿಯಲ್ಲ. ಹೀಗೆ ಎಲ್ಲಾ ಪಕ್ಷಗಳೂ ಪ್ರಜಾಪ್ರಭುತ್ವವನ್ನು ‘ಹಾಳೂ’ವುದಕ್ಕೆ, ಅನುಭವಿಸುವುದಕ್ಕೆ ಹಪಾಪಿಸುತ್ತಿರುವುದನ್ನು ನೋಡಿದರೆ ಪ್ರಜ್ಞಾವಂತರಲ್ಲಿ ಹೇಸಿಗೆ ಹುಟ್ಟಿಸುತ್ತಿದೆ. ಇಂದು ಗ್ರಾಮ
ಪಂಚಾಯಿತಿ ಸದಸ್ಯನಾಗಲು ಒಂದು ಕೋಟಿಯಷ್ಟು ಖರ್ಚು ಮಾಡಬೇಕಾದ ಅನಿವಾರ್ಯತೆಯಲ್ಲಿದ್ದಾನೆ.

ಒಂದು ವಿಧಾನಸಭೆ ಚುನಾವಣೆಯ ಸಾವಿರಾರು ಕೋಟಿಯಲ್ಲಿ ನಡೆಯುತ್ತದೆ. ಲೋಕಸಭೆ ಚುನಾವಣೆಯೆಂಬುದು ಭ್ರಷ್ಟಾಚಾರ ಮತ್ತು ಅನೈತಿಕತೆ ಗಳ ಮೇಳದಂತೆ ಆಗಿಹೋಗಿತ್ತು. ಮೊದಲೆ ಚುನಾವಣೆಗೆ ಪ್ರಜಾಪ್ರಭುತ್ವದ ಸುಧಾರಣೆ, ಪ್ರಗತಿ, ಅಭಿವೃದ್ಧಿ, ನಾಗರಿಕರ ಅಭ್ಯುದಯದ ವಿಷಯಗಳ ಚಿಂತನೆ ಒಬ್ಬರಿಗಿಂತ ಒಬ್ಬರ ಉತ್ತಮ ವಿಚಾರ, ಆಯವ್ಯಯದ ಎಚ್ಚರಿಕೆಯ ಯೋಜನೆಗಳ ಭರವಸೆಗಳ ಆರೋಗ್ಯಕರ ಪೈಪೋಟಿಗಳಿದ್ದವು.
ಆದರೀಗ ಹರಿಪ್ರಸಾದ್ ಹೇಳುವಂತೆ ಪ್ರಜಾ ಪ್ರಭುತ್ವವನ್ನು ವೇಶ್ಯೆಯಂತೆ ಭಾವಿಸಿ ದಿಢೀರ್ ‘ರೇಟ್‘ ಫಿಕ್ಸ್ ಮಾಡಿದಂತೆ ‘ಉಚಿತ’ ಆಮಿಷಗಳನ್ನು ಘೋಷಿಸಿಬಿಡುತ್ತಿದ್ದಾರೆ.

ಇದರ ಹೆಡ್ಡಾಫೀಸಿನಂತಿರುವ ತಮಿಳುನಾಡು ಪಕ್ಷಗಳು, ದೆಹಲಿಯ ಪೊರಕೆ ಪಕ್ಷ ಉಚಿತ ಸೌಲಭ್ಯಗಳನ್ನು ಘೋಷಿಸಿ ಸಾಲದ ಸುಳಿಯಲ್ಲಿ ಸಿಲುಕಿವೆ. ಈ ರಾಜ್ಯಗಳೇನಾದರೂ ಸ್ವತಂತ್ರ ದೇಶಗಳಾಗಿದಿದ್ದರೆ ಇಷ್ಟೊತ್ತಿಗೆ ತಿರುಪೆ ದೇಶಗಳಾಗಿ ಬಿಡುತ್ತಿದ್ದವು. ಇವರ ಸಾಲಗಳ ಪಾಪಗಳೆಲ್ಲವೂ ದೇಶದ
ಆರ್ಥಿಕತೆಯೊಂದಿಗೆ ಬೆರೆತಿರುವುದರಿಂದ ಇನ್ನೂ ಪುಗಸಟ್ಟೆ ಭಾಗ್ಯಗಳನ್ನು ನೀಡುತ್ತಲೇ ಇವೆ. ಒಂದು ಚುನಾವಣೆಗಾಗಿ, ಒಂದು ಅಧಿಕಾರಕ್ಕಾಗಿ
ಇಷ್ಟೆ ನಾಟಕ ಕಚ್ಚಾಟ ಕೆಸೆರೆರಚಾಟ ಮಾಡುವ ಬದಲು ಪ್ರತಿಯೊಬ್ಬ ನಾಯಕನೂ ಚುನಾವಣೆಯ ನಾಮಪತ್ರದಲ್ಲಿ ತೋರಿಸುವ ಮತ್ತು ಬೇನಾಮಿ
ಆಸ್ತಿ ವಿವರಗಳನ್ನು ಸಾರ್ವಜನಿಕರಿಗೆ ಒಪ್ಪಿಸಿ ಸಮಾಜದ ಉದ್ಧಾರಕ್ಕೆ ವಿನಿಯೋಗಿಸಲಿ.

ಉದಾಹರಣೆಗೆ ಸೋನಿಯಾಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕ ಗಾಂಧಿ, ಪಿ. ಚಿದಂಬರಂ, ಡಿಕೆಶಿ, ಖರ್ಗೆ, ಚಾರ್ಜ್, ಹ್ಯಾರೀಸ್, ಪರಮೇಶ್ವರ್,
ಕಬಡ್ಡಿಬಾಬು, ಎಂಟಿಬಿ ನಾಗರಾಜು, ಯಡಿಯೂರಪ್ಪ, ಡಾ.ಅಶ್ವತ್ಥನಾರಾಯಣ್, ನಿರಾಣಿ, ಜನಾರ್ದನ ರೆಡ್ಡಿ, ಕುಮಾರಣ್ಣ, ರೇವಣ್ಣ ಹೀಗೆ ಅನೇಕರ ಒಡೆತನದಲ್ಲಿರುವ ಆಸ್ತಿಗಳಾಗಲಿ, ಮಾಲುಗಳು, ಮೈನಿಂಗು, ಭಂಗಲೆಗಳು, ಅಪಾಟ್ ಮೆಂಟುಗಳು, ಬಾರುಗಳು-ಕ್ಲಬ್-ಪಬ್ಬು, ರೆಸಾರ್ಟ್‌ಗಳು, ಐಷಾರಾಮಿ ಹೋಟೆಲ್‌ಗಳು, ವಿದೇಶದಲ್ಲಿರುವ ಆಸ್ತಿಗಳನ್ನು ಸಾರ್ವಜನಿಕರ ಮುಂದೆ ಬಹಿರಂಗಪಡಿಸಿ ಬೇಕಿದ್ದರೆ ಪ್ರಧಾನಿ ಮೋದಿಯವರಿಂದಲೂ ಅದೇನು ಆಸ್ತಿಗಳಿವೆಯೋ ‘ಕಿತ್ತು’ ಕೊಳ್ಳಲಿ.

ಅದನ್ನೆ ತಮ್ಮ ಪಕ್ಷಗಳ ನಿಧಿಯನ್ನಾಗಿ ಘೋಷಿಸಿ ಆ ಹಣದಲ್ಲಿ ಉಚಿತ ಭಾಗ್ಯಗಳು ಮಾತ್ರವಲ್ಲ ಒಂದೊಂದು ಊರನ್ನೇ ಉದ್ಧಾರ ಮಾಡಿಬಿಡ ಬಹುದು. ಎಷ್ಟು ರಾಜಕಾರಣಿಗಳು ವೈದ್ಯಕೀಯ-ವಿದ್ಯಾಸಂಸ್ಥೆಗಳನ್ನು ನಡೆಸುತ್ತಿದ್ದಾರೆ ಅಂಥವರೆಲ್ಲರೂ ತಮ್ಮ ಸಂಸ್ಥೆಗಳಲ್ಲಿ ಉಚಿತ ಸೇವೆ ಘೋಷಿಸುವ ‘ಗಂಡಸುತನ‘ ಇದೆಯೇ? ಪಕ್ಷ ಕ್ಷೇತ್ರ ಮತದಾರ ದೇಶ ರಾಜ್ಯ ಪ್ರಜಾಪ್ರಭುತ್ವ ಚುನಾವಣೆ ಗೆಲುವು ಅಧಿಕಾರ ಪದವಿ ಇವೇ ಇವರುಗಳ ಪರಮಗುರಿ ಕನಸು ಉಸಿರು ಬದುಕು ಆಗಿರುವಾಗ ಇವರು ಇಟ್ಟುಕೊಂಡಿರುವ ಸಾವಿರಾರು ಕೋಟಿ ಆಸ್ತಿಗಳು ಇನ್ನಾವ ಪುರುಷಾರ್ಥಕ್ಕೆ ಬೇಕು. ಸುಮ್ಮನೆ ಪಾದಯಾತ್ರೆ, ರಥಯಾತ್ರೆ, ಪಂಚರತ್ನ, ಪಂಚತಂತ್ರ, ಕುತಂತ್ರ, ಸದಾರಮೆ ನಾಟಕವಲ್ಲದೇ ಇಡಿ-ಐಟಿ ಇವೆಲ್ಲದಕ್ಕೂ ಪಿಂಡ ಬಿಟ್ಟು ತಮ್ಮ ಆಸ್ತಿಗಳನ್ನೆ ರಾಜ್ಯಕಟ್ಟುವ ಕೆಲಸಕ್ಕೆ ವಿನಿಯೋಗಿಸಿ ನೋಡಲಿ ಆಗ ಯಾವ ಪ್ರಚಾರವೂ ಚುನಾವಣೆಯೂ ಬೇಕಿಲ್ಲ.

ಜನರೇ ಇವರ ಪ್ರತಿಮೆಗಳನ್ನು ಬೀದಿ ಬೀದಿಗಳಲ್ಲಿ ನಿಲ್ಲಿಸಿ ಪೂಜಿಸುತ್ತಾರೆ. ಅದುಬಿಟ್ಟು ಪ್ರಜೆಗಳ ದುಡ್ಡಿನ ಉಚಿತಗಳನ್ನು ಘೋಷಿಸಿ ತೀಟೆ ತೀರಿಸಿಕೊಳ್ಳುವುದಕ್ಕೆ ಪ್ರಜಾಪ್ರಭುತ್ವವೆಂಬುದೇನು (ಹರಿಪ್ರಸಾದ್ ಭಾಷೆಯಲ್ಲಿ) ವೇಶ್ಯೆಯೇ? ಇಂಥ ಆರ್ಥಿಕ ಸಮತೋಲನತೆಯ ಕಡಿವಾಣ ವಿಲ್ಲದೇ ಹೊದ ಶ್ರೀಲಂಕಾ, ಪಾಕಿಸ್ತಾನ ಸ್ವಾಭಿಮಾನ ಕಳೆದುಕೊಂಡು ವಿಶ್ವಮಟ್ಟದಲ್ಲಿ ದರಿದ್ರ ದೇಶಗಳಾಗಿವೆ. ನಮ್ಮಲ್ಲಿ ಕರೋನಾ ಆಕ್ರಮಣದ
ಕಾಲದನಾದರೂ ಇಂಥ ಪುಗಸಟ್ಟೆ ಪಕ್ಷಗಳು ಪುಟಗೋಸಿ ಪಕ್ಷಗಳೇನಾದರೂ ಅಧಿಕಾರದಲ್ಲಿ ದ್ದಿದ್ದರೆ ಹರಿಪ್ರಸಾದ್ ಹೇಳಿದಂತೆ ನಮ್ಮ ದೇಶದ
ಪ್ರಜಾಪ್ರಭುತ್ವವನ್ನು ವೇಶ್ಯೆಯಂತೆ ಮಾಡಿಬಿಡುತ್ತಿದ್ದರೇನೋ !

ಪುಣ್ಯಕ್ಕೆ ಮೋದಿ ಎಂಬ ‘ಬಡ ಪಾಯಿ’ ದೇಶವನ್ನಾಳುತ್ತಿರುವುದರಿಂದ ಚಪ್ಪಾಳೆ, ಘಂಟೆ, ತಟ್ಟೆ ಬಾರಿಸಿ, ದೀಪ ಬೆಳಗಿಸಿ ಸಕಾಲಕ್ಕೆ ವ್ಯಾಕ್ಸಿನ್ ಹುಟ್ಟುಹಾಕಿ ದೇಶದ ಜನರ ಮುಖದ ಮೇಲಿದ್ದ ಮಾಸ್ಕು ತೆಗೆಸಿzರೆ. ಇಲ್ಲದೇ ಹೋಗಿದ್ದರೆ ದೇಹಕ್ಕೆ ಬಟ್ಟೆ ಸುತ್ತಿ ದೇಶವನ್ನೇ ಸ್ಮಶಾಣ ಮಾಡಬೇಕಾ ಗಿತ್ತು. ಸಾರ್ವಜನಿಕರೇ ಕಟ್ಟುವ ತೆರೆಗೆ ಹಣದಲ್ಲಿ ಇವರ ಪೌರುಷವೆ ಬಿಟ್ಟಿ ಭಾಗ್ಯ, ಪುಗಸಟ್ಟೆ ಯೋಜನೆಗಳಿಗೆ ವ್ಯಯಿಸಿದರೆ ದೇಶದ ಭವಿಷ್ಯದ
ಗತಿಯೇನು? ಈಗಾಗಲೇ ಇಲ್ಲಿನ ಅನೇಕರ ಪಾಲಿನ ‘ಸ್ವರ್ಗವಾಗಿರುವ’ ಪಾಕಿಸ್ತಾನದಲ್ಲಿ ಒಂದೊಂದು ಚಪಾತಿಗೂ ನಾಯಿಪಾಡು ಗತಿಬಂದಿದೆ. ಅಂಥ ಸ್ಥಿತಿ ಭಾರತಕ್ಕೆ ಬಂದರೆ ಇಲ್ಲಿನ ರಾಜಕಾರಣಿಗಳೇ ಸೇರಿಕೊಂಡು ದೇಶವನ್ನು ಚೀನಾಕ್ಕೆ ತಲೆಹಿಡಿಯುವುದರಲ್ಲಿ ಆಶ್ಚರ್ಯವಿಲ್ಲ.

ಹೀಗಿರುವಾಗ ಜವಾಬ್ದಾರಿ ಇಲ್ಲದ ಮನೆಹಾಳು ಯೋಜನೆಗಳನ್ನು ಘೋಷಿಸಿ ದೇಶವನ್ನು ತಿರುಪೆ ಎತ್ತುವಂಥ ಸ್ಥಿತಿಗೆ ತರುವುದು ಹರಿಪ್ರಸಾದ್  ಭಾಷೆಯಲ್ಲಿ ಹೇಳಬೇಕೆಂದರೆ ಮಜಾ ಅನುಭವಿಸಿ ಜವಾಬ್ದಾರಿ ಇಲ್ಲದೆ ಎದ್ದು ಹೋದಂತೆ. ಆದ್ದರಿಂದ ನಮ್ಮ ನ್ಯಾಯಾಲಗಳು ಇಂಥ ಬೆಳವಣಿಗೆ ಗಳನ್ನು ಗಂಭೀರವಾಗಿ ಪರಿಗಣಿಸಿ ಉಚಿತಗಳನ್ನು ಘೋಷಿಸುವುದಕ್ಕೆ ಕಡಿವಾಣ ಹಾಕಬೇಕಿದೆ. ನಿಜಕ್ಕೂ ನಾಗರಿಕರ ಮತ್ತು ದೇಶದ ಭವಿಷ್ಯದ ಕಾಳಜಿಯಿದ್ದರೆ ಆರ್ಥಿಕತೆಯ ಯಂತ್ರವನ್ನು ಸರಿಯಾಗಿ ಗಮನಿಸಿ ವಸ್ತುಗಳ ಬೆಲೆಯನ್ನು ಇಳಿಸಲಿ. ಉಚಿತ ಕೊಡುವುದಕ್ಕಿಂತ ದುಡಿಯುವ
ಕೈಗಳಿಗೆ ಉದ್ಯೋಗ ಸೃಷ್ಟಿಸಲಿ, ಎರಡು ಮಕ್ಕಳನ್ನು ಹೊಂದಿದವರಿಗೆ ಸಂಪೂರ್ಣ ಉಚಿತ ಶಿಕ್ಷಣ, ಉಚಿತ ಆರೋಗ್ಯ ಸೇವೆ ನೀಡುವಂತಾಗಲಿ.
ಮಧ್ಯಮ ವರ್ಗದವರಲ್ಲಿ ಹೆಣ್ಣು ಹುಟ್ಟಿದರೆ ಸಂತಸ ಪಡುವಂತೆ ಅವರ ಸಂಪೂರ್ಣ ಶಿಕ್ಷಣ ಮತ್ತು ವಿವಾಹದ ಖರ್ಚಿನ ವೆಚ್ಚವನ್ನು ಹೊರಲು
ಯೋಜನೆ ತರಲಿ. ವಿದ್ಯಾರ್ಥಿಯೊಬ್ಬ ಪದವಿ ಮುಗಿಸಿದ ಕೂಡಲೇ ಆತನಿಗೆ ಉದ್ಯೋಗ ಖಾತ್ರಿಯಾಗುವಂಥ ವ್ಯವಸ್ಥೆ ಸೃಷ್ಟಿಯಾಗಲಿ.

ಸರಿಯಾಗಿ ತಿಂದರೆ ನಾಲ್ಕು ತುತ್ತು ಅನ್ನ, ಇಲ್ಲದಿದ್ದರೆ ಬರಬಾರದ ದೊಡ್ಡ ರೋಗಗಳೆ ಬಂದು ಕಿಡ್ನಿ ಲಿವರ್ ಹೃದಯಕ್ಕೆ ವಕ್ಕರಿಸಿ ಲಕ್ವಾ
ಹೊಡೆದು ಸಾಯುವುದೇ ಹೆಚ್ಚು. ಅದಕ್ಕಾಗಿ ನೂರಾರು ಸಾವಿರಾರು ಕೋಟಿ ಆಸ್ತಿ ಮಾಡಿಕೊಳ್ಳುವುದಲ್ಲದೇ, ತಮ್ಮ ಪ್ರತಿಷ್ಠೆ ತೀಟೆ ತೆವಲಿಗೆ ಪ್ರಜೆಗಳ ತೆರಿಗೆ ಹಣಗಳೇ ಬೇಕೆ? ಅಣ್ಣಾವ್ರ ‘ಕಾಸಿದ್ರೆ ಕೈಲಾಸ’ ಚಿತ್ರದಲ್ಲಿ ಕೊಡುಗೈ ದಾನಿಗಾಗುವ ಅಂತಿಮ ದುಸ್ಥಿತಿಯನ್ನು ತೋರಿಸಲಾಗಿದೆ. ಹಾಗೆಯೇ ‘ಕಸ್ತೂರಿನಿವಾಸ‘ ಚಿತ್ರದಲ್ಲಿ ನಾಯಕ ಪಾತ್ರ ‘ಆಟ ಮುಗಿಸಿದ್ದನ್ನು’ ನೋಡಿದ್ದೇವೆ. ಬದಲಾವಣೆ ಏನೆಂದರೆ ಕಸ್ತೂರಿನಿವಾಸ ಚಿತ್ರದಲ್ಲಿ ದಾನ ಮಾಡಿ ಬೀದಿಗೆ ಬರುವ ಪಾತ್ರವಿದೆಯ ಅದನ್ನು ನಿಭಾಯಿಸುವುದು ರಾಜಕಾರಣಿಯಲ್ಲ ಸಾಕ್ಷಾತ್ ಮತದಾರ!

ನೆನಪಿರಲಿ!. ದೇಶಕ್ಕೆ ಬೇಕಿರುವುದು ‘ಕೈಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ..’ ಎಂದು ಬಂಗಾರದ ಮನುಷ್ಯ ಬಂದು ಊರನ್ನು ಉದ್ಧಾರ ಮಾಡಿ ಕೊನೆಗೆ ಬರಿಗೈಲಿ ಹೊರಡುವ ಮೋದಿಯಂಥ ನಾಯಕರು. ಅಂಥವರನ್ನು ಅರಸಿ ಅಧಿಕಾರ ನೀಡೋಣ. ಉಳಿದವರನ್ನು ಹರಿಪ್ರಸಾದ್
ಹೇಳುವಂತೆ ವೇಶ್ಯೆಯರಂತೆ, ಜೋಕರ್ ಐಟಂಗಳಂತೆ ‘ಇಟ್ಟು’ ಕೊಳ್ಳೋಣ !