Thursday, 19th September 2024

ಮಾನವ ಸ್ವಭಾವದ ಕಪ್ಪು- ಬಿಳುಪಿನ ಅನಾವರಣ ದೀಪಾವಳಿ

ಸಕಾಲಿಕ
ಡಾ.ನಾ.ಸೋಮೇಶ್ವರ

ದೀಪಾವಳಿಯು ಭಾರತೀಯರ ದೊಡ್ಡ ಹಬ್ಬ. ದೀಪಾವಳಿಯಷ್ಟು ವಿಶಿಷ್ಟವಾದ ಹಬ್ಬ ಮತ್ತೊಂದಿಲ್ಲ. ಇಡೀ ಭಾರತಾದ್ಯಂತ ಎಲ್ಲ ರಾಜ್ಯಗಳಲ್ಲಿ, ಒಂದಲ್ಲ ಒಂದು ರೀತಿಯಿಂದ, ಜನರು ಆಚರಿಸುವ ಹಬ್ಬ ದೀಪಾವಳಿ. ಹಿಂದುಗಳು, ಜೈನರು, ಬೌದ್ಧರು,
ಸಿಖ್ಖರು ತಮ್ಮದೇ ಆದ ಕಾರಣಗಳಿಗಾಗಿ ಆಚರಿಸುವ ಹಬ್ಬ ದೀಪಾವಳಿ. ರಾಮಾಯಣ, ಮಹಾಭಾರತ ಕಾಲಗಳಿಂದ ನಿರಂತರ ವಾಗಿ ಆಚರಣೆ ಯಾಗುತ್ತಿರುವ ಹಬ್ಬ ದೀಪಾವಳಿ.

ಹಿಂದುಗಳ ಬಹುಪಾಲು ದೇವತೆಗಳು – ರಾಮ, ಸೀತೆ, ಕೃಷ್ಣ, ಸತ್ಯಭಾಮಾ, ವಿಷ್ಣು, ಲಕ್ಷ್ಮೀ, ದುರ್ಗೆ, ಕಾಳಿ, ಧನ್ವಂತರಿ,
ವಿಶ್ವಕರ್ಮ, ಕುಬೇರ, ಯಮ, ಬಲಿಚಕ್ರವರ್ತಿ ಮುಂತಾದ ದೇವತೆಗಳ ಆರಾಧನೆ ಯಾಗುವ ಏಕೈಕ ಹಬ್ಬವೆಂದರೆ ದೀಪಾವಳಿ. ಕರ್ನಾಟಕ ಗ್ರಾಮೀಣ ಪ್ರದೇಶದಲ್ಲಿರುವ ರೈತರಿಗಂತೂ ದೀಪಾವಳಿ ಯು ವರ್ಷದ ಬಹು ದೊಡ್ಡ ಹಬ್ಬ!

ನವರಾತ್ರಿಯ 10 ದಿನಗಳನ್ನು ಬಿಟ್ಟರೆ, ಐದು ದಿನಗಳ ಆಚರಣೆಯಾಗುವ ಸುದೀರ್ಘ ಹಬ್ಬವೆಂದರೆ ದೀಪಾವಳಿ. ದೀಪಾವಳಿಯು, ಮೊನ್ನೆೆ ಮೊನ್ನೆೆಯವರಿಗೆ ಹಿಂದು ರಾಷ್ಟ್ರವಾಗಿದ್ದ ನೇಪಾಳದ ರಾಷ್ಟ್ರೀಯ ಹಬ್ಬವಾಗಿತ್ತು. ಫಿಜಿ, ಗಯಾನ, ಮಲೇಷ್ಯಾ, ಮಾರೀಶಿಯಸ್, ಮಯನ್ಮಾರ್, ಸಿಂಗಪುರ್, ಶ್ರೀಲಂಕಾ, ಸುರೀನಾಮ್, ಟ್ರಿನಿಡಾಡ್, ಟೊಬಾಗೊ ಮುಂತಾದ ದೇಶಗಳಲ್ಲಿ ದೀಪಾವಳಿಯು ಬಹಳ ಪ್ರಸಿದ್ಧವಾದ ಹಬ್ಬ. ಕೆಲವು ದೇಶಗಳಂತು ದೀಪಾವಳಿಯಂದು ಸಾರ್ವತ್ರಿಕ ರಜೆಯನ್ನು ಘೋಷಿಸುವು ದುಂಟು.

ಕಾರ್ತಿಕ ಮಾಸ: ದೀಪಾವಳಿಯನ್ನು ಪ್ರತಿವರ್ಷ ಕಾರ್ತಿಕ ಮಾಸದಲ್ಲಿ ಆಚರಿಸುವ ಪದ್ಧತಿ ಬೆಳೆದುಬಂದಿದೆ. ಅಶ್ವಯುಜ ಕೃಷ್ಣ ತ್ರಯೋದಶಿಯಂದು ಆರಂಭವಾಗುವ ಹಬ್ಬ, ಕಾರ್ತಿಕ ಶುಕ್ಲ ದ್ವಿತೀಯದವರೆಗೆ ಮುಂದುವರಿಯುತ್ತದೆ. ಈ ಐದು ದಿನಗಳ ಕಾಲ ಒಂದಲ್ಲ ಒಂದು ದೇವತೆಯ ಆರಾಧನೆಯು ನಡೆಯುತ್ತದೆ. ಇಲ್ಲವೇ ಒಂದಲ್ಲ ಒಂದು ಸಾಮಾಜಿಕ ಮಹತ್ವವನ್ನು ಪಡೆದಿರುತ್ತದೆ.
ನಮ್ಮ ಭಾರತದಲ್ಲಿ ಪ್ರತಿವರ್ಷ ಸುಮಾರು ಜೂನ್ 21ರ ಹೊತ್ತಿಗೆ ಅತ್ಯಂತ ಸುದೀರ್ಘ ಹಗಲು ಕಂಡುಬರುತ್ತದೆ. ನಂತರ ಕ್ರಮೇಣ ಹಗಲಿನ ಅವಧಿಯು ಕಡಿಮೆಯಾಗುತ್ತಾ ಹೋಗುತ್ತದೆ. ಇರುಳಿನ ಅವಧಿಯು ಹೆಚ್ಚುತ್ತಾ ಹೋಗುತ್ತದೆ.

ಹಾಗಾಗಿ ಕಾರ್ತಿಕ ಮಾಸದ (ಅಕ್ಟೋಬರ್-ನವೆಂಬರ್) ಹೊತ್ತಿಗೆ ಇರುಳಿನ ಅವಧಿಯು ಸಾಕಷ್ಟು ಅಧಿಕವಾಗಿರುತ್ತದೆ. ಆದರೆ
ಚಳಿಯು ಇನ್ನೂ ಪೂರ್ಣವಾಗಿ ಆವರಿಸಿರುವುದಿಲ್ಲ. ಹಾಗಾಗಿ ಮನುಷ್ಯನು ಇರುಳನ್ನು ಮನೆಯ ಒಳಗೆ ಇದ್ದು ಕಳೆಯುವು ದಕ್ಕಿಂತ, ಹೊರಗೆ ಇದ್ದು ಕಳೆಯುವ ಸಾಧ್ಯತೆಯು ಅಧಿಕವಾಗಿರುತ್ತದೆ. ಈ ಹಿನ್ನೆಲೆಯಲ್ಲಿ ಕತ್ತಲನ್ನು ಕಳೆಯುವ ದೀಪಗಳನ್ನು ಹೊರಗೆ ಹಚ್ಚುವ ಪದ್ಧತಿಯು ಆರಂಭವಾಗಿರಬಹುದು. ರಾವಣ ಮತ್ತು ನರಕಾಸುರರ ಕಾಟದಿಂದ ಜನರನ್ನು ಮುಕ್ತಗೊಳಿಸಿದ ಹಿನ್ನೆೆಲೆಯಲ್ಲಿ ಜನಸಾಮಾನ್ಯರು ದೀಪಗಳನ್ನು ಹಚ್ಚಿ ಸಂಭ್ರಮಿಸಿದ್ದರೆ ಅದು ಅತಿಶಯೋಕ್ತಿಯಾಗಿರಲಾರದು. ಅಧರ್ಮದ ಮೇಲೆ ಧರ್ಮದ ಜಯದ ಸಂಕೇತ, ದುಷ್ಟಶಕ್ತಿಯ ಮೇಲೆ ಶಿಷ್ಟ ಶಕ್ತಿಯ ಜಯ, ಅಜ್ಞಾನವನ್ನು ಕಳೆದು ಸುಜ್ಞಾನವನ್ನು ಗಳಿಸುವ ಸಂಕೇತ ಎಂದು ದೀಪಾವಳಿಯನ್ನು ಆಚರಿಸಲು ಆರಂಭಿಸಿರಬಹುದು.

ದೀಪಾವಳಿ ಹಬ್ಬವು ಅಶ್ವಯುಜ ಕೃಷ್ಣ ತ್ರಯೋದಶಿಯಂದು, ಅಂದರೆ 13ನೆಯ ದಿನವನ್ನು ‘ಧನತ್ರಯೋದಶಿ’ ಎಂದು ಆಚರಿಸು ತ್ತೇವೆ. ಉತ್ತರಭಾರತದವರು ಈ ದಿನವನ್ನು ‘ದಾಂತೇರ’ ಎನ್ನುವ ಹೆಸರಿನಲ್ಲಿ ಆಚರಿಸುವರು. ಅಶ್ವಯುಜ ಕೃಷ್ಣ ಚತುರ್ದಶಿ ಯನ್ನು, ಅಂದರೆ 14ನೆಯ ದಿನವನ್ನು ನರಕ ಚತುರ್ದಶಿ ಎನ್ನುವ ಹೆಸರಿನಲ್ಲಿ ಆಚರಿಸುತ್ತೇವೆ. 15 ದಿನ ಅಶ್ವಯುಜ ಕೃಷ್ಣ ಅಮಾವಾಸ್ಯೆ. ಈ ದಿನದಂದು ದೀಪಾವಳಿಯನ್ನು ಆಚರಿಸುವರು. ಕಾರ್ತಿಕ ಶುಕ್ಲಪಕ್ಷವು ಪಾಡ್ಯ ಅಥವ ಪ್ರತಿಪದವು ಅಮಾವಾಸ್ಯೆ ಮುಗಿದ ಮರುದಿನ ಆರಂಭವಾಗುತ್ತದೆ. ಬಲಿ ಚಕ್ರವರ್ತಿಯು ಭೂಮಿಗೆ ಬರುವ ದಿನ. ಹಾಗಾಗಿ ಬಲಿಪಾಡ್ಯಮಿ ಎನ್ನುವ ಹೆಸರಿ ನಲ್ಲಿ ಈ ದಿನವನ್ನು ವಿಜೃಂಭಣೆಯಿಂದ ಆಚರಿಸುತ್ತೇವೆ. ಬಿದಿಗೆಯ ದಿನವನ್ನು ಉತ್ತರ ಭಾರತದಲ್ಲಿ ‘ಭಾಯಿ ದೂಜ್’ ಎಂದು ಆಚರಿಸಿದರೆ, ನಮ್ಮಲ್ಲಿ ಈ ದಿನವನ್ನು ವಿಶ್ವಕರ್ಮ ಪೂಜೆ ಎಂದು ಆಚರಿಸುವುದುಂಟು. ಇದು ದೀಪಾವಳಿ ಹಬ್ಬದ ಐದು ದಿನಗಳ ಸಂಕ್ಷಿಪ್ತ ಪರಿಚಯ.

ಸಂಭ್ರಮ: ದೀಪಾವಳಿ ಎಂದರೆ ದೀಪಗಳ ಜೊತೆಯಲ್ಲಿ ಪಟಾಕಿಯನ್ನು ಹಚ್ಚಿ ಸಂಭ್ರಮಿಸುವ ಹಬ್ಬ. ಅಭ್ಯಂಗನವನ್ನು ಮಾಡಿ, ಹೊಸ ಬಟ್ಟೆ ಧರಿಸಿ, ಕಜ್ಜಾಯ ಇಲ್ಲವೇ ಹೋಳಿಗೆಯನ್ನು ತಿಂದು ಪಟಾಕಿಯನ್ನು ಹಚ್ಚಿ ಗೆಳೆಯರೊಡನೆ ಸಂಭ್ರಮಿಸುವುದು ಹುಡುಗರಿಗೆ ಬಹಳ ಇಷ್ಟ. ನವದಂಪತಿಗಳು ಸಾಮಾನ್ಯವಾಗಿ ಮೊದಲ ದೀಪಾವಳಿ ಯನ್ನು ಹೆಂಡತಿಯ ಮನೆಯಲ್ಲಿ (ಮಾವನ ಮನೆಯಲ್ಲಿ) ಆಚರಿಸುವ ಸಂಪ್ರದಾಯವಿದೆ. ಅಳಿಯ ಮತ್ತು ಮಗಳಿಗೆ ಹೊಸ ಬಟ್ಟೆ, ಹೊಸ ಒಡವೆಗಳನ್ನು ನೀಡಿ ಗೌರವಿಸುವ ಪದ್ಧತಿಯಿದೆ ಎಲ್ಲೆಡೆ ಕಂಡುಬರುತ್ತದೆ. ಹಾಗಾಗಿ ನವದಂಪತಿಗಳು ದೀಪದ ಬೆಳಕಿನಲ್ಲಿ ಸಂಭ್ರಮಿಸುತ್ತಿದ್ದರೆ, ಇನ್ನೂ ಮದುವೆ ಯಾಗದ ನಲ್ಲ – ನಲ್ಲೆಯರ ಮತಾಪಿನ ಹೊನಲಿನಲ್ಲಿ ಕೆಂಪಡರಿದ ಮುಖವನ್ನು ಪರಸ್ಪರ ನೋಡಿ ಸುಖಿಸುತ್ತಿದ್ದರೆ, ಹಬ್ಬ ಎಷ್ಟು ಬೇಗ ಕಳೆದುಹೋಯಿತಲ್ಲ ಎಂದು ಅವರಿಗೆ ಅನಿಸುವುದು ಸಹಜ.

ದೀಪಗಳ ಸಾಲು: ‘ದೀಪಾವಳಿ’ ಎನ್ನುವ ಹೆಸರು ಎರಡು ಶಬ್ದಗಳಿಂದ ರೂಪುಗೊಂಡಿದೆ. ದೀಪ ಮಾತು ಆವಳಿ. ದೀಪ ಎಂದರೆ ನಮಗೆಲ್ಲ ತಿಳಿದಿರುವ ಹಾಗೆ ಹಣತೆ. ಆವಳಿ ಎಂದರೆ ಸಾಲು. ಹಾಗಾಗಿ ದೀಪಾವಳಿ ಎಂದರೆ ಸಾಲು ಸಾಲು ದೀಪಗಳನ್ನು ಬೆಳಗುವ ಹಬ್ಬ. ದೀಪಾವಳಿಯನ್ನು ಉತ್ತರ ಭಾರತದವರು ದಿವಾಳಿ ಎಂದು ಕರೆದರೆ ನಮ್ಮ ಕನ್ನಡಿಗರು ದೀವಳಿಗೆ ಅಥವ ದೀಪೋತ್ಸವ ಎನ್ನುವರು. ಇಂಗ್ಲಿಷಿನಲ್ಲಿ ಹಿಂದಿಯವರ ಅನುಕರಣೆಯಂತೆ ‘ದಿವಾಳಿ’ಯಾಗಿ ಬಿಟ್ಟಿದೆ.

ನಮ್ಮ ಪ್ರಾಚೀನ ಭಾರತೀಯ ಸಾಹಿತ್ಯದಲ್ಲಿ ದೀಪಾವಳಿಯ ಉಲ್ಲೇಖವಿದೆ. 7ನೆಯ ಶತಮಾನದ ಹರ್ಷ ಚಕ್ರವರ್ತಿಯು ತನ್ನ ‘ನಾಗನಂದ’ ನಾಟಕದಲ್ಲಿ ದೀಪಾವಳಿಯ ವೈಭವವನ್ನು ವರ್ಣಿಸಿ, ದೀಪಾವಳಿಯನ್ನು ‘ದೀಪಪ್ರತಿಪದೋತ್ಸವ’ ಎಂದು ಕರೆದಿರುವನು. ಪ್ರತಿಪದ ಎಂದರೆ ಪಾಡ್ಯದ ಪರ್ಯಾಯ ಪದ.

ರಾಜಶೇಖರನು 9ನೆಯ ಶತಮಾನದಲ್ಲಿ ರಚಿಸಿದ ‘ಕಾವ್ಯಮೀಮಾಂಸೆ’ಯಲ್ಲಿ ದೀಪಾವಳಿಯನ್ನು ‘ದೀಪಮಾಲಿಕ’ ಎಂದು ಕರೆದಿರುವನು. ಮನೆ ಮನೆಗಳು, ಬೀದಿ ಬೀದಿಗಳು, ಮಾರುಕಟ್ಟೆ ಮುಂತಾದ ಸಾರ್ವಜನಿಕ ಸ್ಥಳಗಳು ದೀಪಗಳಿಂದ ಬೆಳಗುವು ದನ್ನು ವರ್ಣಿಸಿರುವನು. ದೀಪಾವಳಿ ಹಬ್ಬದ ಆಚರಣೆಯ ಬಗ್ಗೆ, ಅಂದು ಭಾರತಕ್ಕೆ ಬಂದು ವಿದೇಶಿ ಪ್ರವಾಸಿಗರು ಸೊಗಸಾದ ದಾಖಲೆಯನ್ನು ಉಳಿಸಿರುವರು. 11ನೆಯ ಶತಮಾನದಲ್ಲಿ ಪರ್ಶಿಯ ದೇಶದ ಪ್ರವಾಸಿ ಹಾಗೂ ಇತಿಹಾಸಕಾರ ಅಲ್-ಬಿರೂನಿ ಭಾರತಕ್ಕೆ ಬಂದಿದ್ದ. ಕಾರ್ತಿಕ ಮಾಸದಲ್ಲಿ ಹಿಂದುಗಳು ಬಲು ಸಂಭ್ರಮದ ಆಚರಿಸುವ ಹಬ್ಬವನ್ನು ನೋಡಿ, ಅದರ ವಿವರಣೆಗಳನ್ನು ಬರೆದ.

ವೆನಿಸ್ ದೇಶದ ವ್ಯಾಪಾರಿ ಮತ್ತು ಪ್ರವಾಸಿ ನಿಕೋಲೋದ ಕೊಂಟಿ. 15ನೆಯ ಶತಮಾನದಲ್ಲಿ ಭಾರತೀಯರು ಆಚರಿಸುತ್ತಿದ್ದ
ದೀಪಾವಳಿಯ ವಿವರಗಳನ್ನು ದಾಖಲಿಸಿದ. ಹೊಸ ಬಟ್ಟೆ ಧರಿಸಿ, ದೀಪಗಳನ್ನು ಹಚ್ಚಿ, ಹಾಡಿ, ಕುಣಿದು ನಲಿಯುವ ಭಾರತೀಯರ
ಜೀವನ ಸಂಭ್ರಮವನ್ನು ಹೊಗಳಿದ. ಪೋರ್ಚುಗೀಸ್ ಪ್ರವಾಸಿ ಡೊಂಗೋ ಪೇಸ್. ಈತನು 16ನೆಯ ಶತಮಾನದ ಜಯನಗರ
ಸಾಮ್ರಾಜ್ಯಕ್ಕೆ ಭೇಟಿಯನ್ನಿತ್ತ. ಹಿಂದುಗಳು ತಮ್ಮ ಮನೆ, ಬೀದಿ, ದೇವಾಲಯಗಳನ್ನು ದೀಪಗಳಿಂದ ಅಲಂಕರಿಸುವ ಬಗ್ಗೆ ವಿಸ್ತತ ವಾಗಿ ತನ್ನ ಕಥನದಲ್ಲಿ ವಿವರಿಸಿದ.

ದೆಹಲಿಯಿಂದ ಉತ್ತರಭಾರತವನ್ನು ಆಳಿದ ಸುಲ್ತಾನರು ಹಾಗೂ ಮೊಘಲರೂ ಸಹ ದೀಪಾವಳಿ ಆಚರಣೆಯ ಬಗ್ಗೆ ತಮ್ಮ ಬರಹಗಳಲ್ಲಿ ದಾಖಲಿಸಿರುವರು. ಅಕ್ಬರ್ ದೀಪಾವಳಿ ಹಬ್ಬವನ್ನು ಆಚರಿಸಲು ಪ್ರೋತ್ಸಾಹವನ್ನು ನೀಡುವುದರ ಜೊತೆಯಲ್ಲಿ ತಾನೂ ಭಾಗಿಯಾಗುತ್ತಿದ್ದ. ಆದರೆ ಔರಂಗೇಬ್, 1665ರ ಆಸುಪಾಸಿನಲ್ಲಿ ದೀಪಾವಳಿ, ಹೋಳಿ ಮುಂತಾದ ಹಿಂದು ಹಬ್ಬಗಳನ್ನು ಉಗ್ರವಾಗಿ ನಿಗ್ರಹಿಸಿದ. ಬ್ರಿಿಟೀಷರ ಅವಧಿಯಲ್ಲಿ ಸರ್ ವಿಲಿಯಂ ಜೋನ್‌ಸ್‌‌ನಂಥ ಕೆಲವು ವಿದ್ವಾಂಸರು ಹಿಂದುಗಳು ಐದು ದಿನಗಳ ಕಾಲ ಆಚರಿಸುವ ದೀಪಾವಳಿ ಹಬ್ಬವನ್ನು ಹಾಗೂ ಅದರ ಮಹತ್ವವನ್ನು ವಿವರವಾಗಿ ಬರೆದ. ಇವನು ಬಂಗಾಳದಲ್ಲಿದ್ದ ಕಾರಣ, ಈತನ ವಿವರಣೆಗಳಲ್ಲಿ ಬಂಗಾಳಿಗರ ಆಚರಣೆಯ ವಿವರಗಳು ಅಧಿಕವಾಗಿವೆ.

ಪ್ರಾಚೀನ: ದೀಪಾವಳಿಯ ಪ್ರಾಚೀನತೆಯನ್ನು ರಾಮಾಯಣದ ಕಾಲಕ್ಕೆ ಕೊಂಡೊಯ್ಯಬಹುದು. ರಾಮ, ಸೀತೆ, ಹನುಮಂತ ಮುಂತಾದವರೆಲ್ಲ ರಾವಣನನ್ನು ಕೊಂದು ಅಯೋಧ್ಯೆಗೆ ದೀಪಾವಳಿಯಂದು ಹಿಂದಿರುಗಿದರಂತೆ. ಹಾಗಾಗಿ ಅಯೋಧ್ಯೆಯ ವಾಸಿಗಳೆಲ್ಲ ರಾಮ ಸೀತೆಯರ ಆಗಮನವನ್ನು ಸ್ವಾಗತಿಸಲು ಸಾಲು ದೀಪಗಳನ್ನು ಹಚ್ಚಿದರಂತೆ. ಮಹಾಭಾರತ ಮತ್ತು ಭಾಗವತಗಳು ದೀಪಾವಳಿಯ ಬಗ್ಗೆ ಪ್ರಸ್ತಾಪಿಸುತ್ತವೆ.

ಕೃಷ್ಣ ಮತ್ತು ಸತ್ಯಭಾಮರಿಬ್ಬರು ಸೇರಿ ನರಕಾಸುರನನ್ನು ವಧೆ ಮಾಡಿದ ದಿನ ಕಾರ್ತಿಕ ಬಹುಳ ಚತುರ್ದಶಿಯಂತೆ. ಹಾಗಾಗಿ ಆ
ದಿನವನ್ನು ನರಕ ಚತುರ್ದಶಿ ಎನ್ನುವ ಹೆಸರಿನಲ್ಲಿ ಆಚರಿಸುವುದುಂಟು. 10ನೆಯ ಶತಮಾನದ ರಾಷ್ಟ್ರಕೂಟರ ಅರಸ ಮುಮ್ಮಡಿ ಕೃಷ್ಣನ (939-967) ತಾಮ್ರಶಾಸನದಲ್ಲಿ ದೀಪಾವಳಿಯನ್ನು ‘ದೀಪೋತ್ಸವ’ ಎಂದು ಕರೆಯಲಾಗಿದೆ.

12ನೆಯ ಶತಮಾನದ ಸಂಸ್ಕೃತ ಕನ್ನಡ ಭಾಷೆಗಳ ಮಿಶ್ರ ಸಿಂಧ ಶಾಸನವು ಧಾರವಾಡ ಈಶ್ವರ ದೇವಾಲಯದಲ್ಲಿದೆ. ಇದು
ದೀಪಾವಳಿಯು ಒಂದು ಪವಿತ್ರವಾದ ಹಬ್ಬ ಎನ್ನುತ್ತದೆ. 13ನೆಯ ಶತಮಾನದ ಕೇರಳದ ರಾಜ ರವಿವರ್ಮನ್ ಸಂಗ್ರಾಮ ಧೀರನು ರಂಗನಾಥ ದೇವಾಲಯದಲ್ಲಿ ಕೆತ್ತಿಸಿರುವ ಸಂಸ್ಕೃತ ಶಾಸನದಲ್ಲಿ ದೀಪಾವಳಿಯನ್ನು ‘ದೀಪೋತ್ಸವಮ್’ ಎನ್ನುವ ಹೆಸರಿನಲ್ಲಿ ಆಚರಿಸುತ್ತಿದ್ದ ಬಗ್ಗೆ ಉಲ್ಲೇಖವಿದೆ. ಜೊತೆಗೆ ದೀಪಾವಳಿ ಹಬ್ಬವನ್ನು ಇಳಾ, ಕಾರ್ತವೀರ್ಯ, ಸಗರ, ಇಂದ್ರ ಮುಂತಾದವರು, ರಂಗನಾಥನೊಡನೆ ಲಕ್ಷ್ಮೀಯನ್ನು ಆರಾಧಿಸಿದ ಬಗ್ಗೆ ವಿವರಗಳು ರಂಗನಾಥ ದೇವಾಲಯದಲ್ಲಿ ವಿವರಿಸುತ್ತದೆ.

10ನೆಯ ಶತಮಾನದ ಸೌಂದತ್ತಿ ಜೈನ ಶಾಸನವು ಜಿನೇಂದ್ರನ ದೀಪವನ್ನು ಉರಿಸಲು ಅಗತ್ಯವಾದ ಎಣ್ಣೆಗಾಗಿ ಉಂಬಳಿಯನ್ನು ಬಿಟ್ಟ ಬಗ್ಗೆ ಪ್ರಸ್ತಾಪಿಸುತ್ತದೆ. ದೀಪಾವಳಿಯ ಹಬ್ಬವನ್ನು ದೀಪೋತ್ಸವ ಎಂದು ಕರೆಯುತ್ತದೆ. ೀಗೆ ದೀಪಾವಳಿ ಹಬ್ಬದ ಉತ್ಸವವು ಅನಾದಿಕಾಲದಿಂದಲೂ ಭಾರತದಲ್ಲಿ ಆಚರಣೆಯಲ್ಲಿದೆ.

ತ್ರಯೋದಶಿ: ದೀಪಾವಳಿಯ ತ್ರಯೋದಶಿಯಂದು ಸಮುದ್ರಮಂಥನವು ನಡೆಯಿತು ಎನ್ನುತ್ತವೆ ಭಾಗವತ, ವಿಷ್ಣುಪುರಾಣ ಮತ್ತು ಮಹಾಭಾರತ. ದೇವತೆಗಳು ಹಾಗೂ ರಾಕ್ಷಸರ ನಡುವೆ ಅನಿವಾರ್ಯವಾಗಿ ಸದಾ ಯುದ್ಧವು ನಡೆಯುತ್ತಲೇ ಇರುತ್ತದೆ. ದೇವತೆಗಳ ಕಡೆ ಸಾವು ನೋವುಗಳಾಗದಂತಿರಲು ಎಲ್ಲರೂ ಅಮೃತವನ್ನು ಕುಡಿದು ಅಮರರಾಗುವ ಯೋಜನೆಯನ್ನು ಹಾಕಿ ಕೊಳ್ಳುತ್ತಾರೆ. ಅಮೃತವು ಕ್ಷೀರಸಮುದ್ರದ ತಳದಲ್ಲಿರುತ್ತದೆ. ಅಮೃತವನ್ನು ಹೊರತೆಗೆಯಬೇಕಾದರೆ ಸಮುದ್ರವನ್ನು ಕಡೆಯ ಬೇಕಾಗುತ್ತದೆ. ಹಾಗಾಗಿ ದೇವತೆಗಳು ಉಪಾಯದಿಂದ ರಾಕ್ಷಸರನ್ನು ಸಾಗರ ಮಥನಕ್ಕೆ ಆಹ್ವಾನಿಸುತ್ತಾರೆ. ಮಂದರ ಪರ್ವತವನ್ನು ಕಡೆಗೋಲನ್ನಾಗಿ ಮಾಡಿಕೊಂಡು, ವಾಸುಕಿಯನ್ನು ಹಗ್ಗವನ್ನಾಗಿ ಮಾಡಿಕೊಂಡು, ಸ್ಥಿರತೆಗಾಗಿ ಮಂದರವನ್ನು ಕೂರ್ಮ ಅಥವ ಕಚ್ಛಪ ರೂಪಿ (ಆಮೆ) ವಿಷ್ಣುವಿನ ಬೆನ್ನ ಮೇಲಿಟ್ಟು ಸಾಗರ ಮಂಥನವನ್ನು ಮಾಡುತ್ತಾರೆ. ಆ ಮಂಥನದಲ್ಲಿ ಮೊದಲು ಹುಟ್ಟುವ ಹಾಲಾಹಲವನ್ನು ಶಿವನು ಕುಡಿದು ವಿಷಕಂಠನಾಗುತ್ತಾಾನೆ. ನಂತರ ಸಮುದ್ರದಿಂದ 14 ರತ್ನಪ್ರಾಯ ವಸ್ತುಗಳು ಹೊರಬರುತ್ತವೆ. ಮೊದಲು ಲಕ್ಷ್ಮೀಯು ಹೊರಬರುತ್ತಾಳೆ. ನಂತರ ಅಪ್ಸರೆಯರು ಪ್ರತ್ಯಕ್ಷರಾಗುತ್ತಾರೆ.

ಕಾಮಧೇನು, ಕಲ್ಪವೃಕ್ಷ, ಐರಾವತ, ಉಚ್ಛೆೆ ಶ್ರವಸ್ಸು, ಕೌಸ್ತುಭ, ಪಾರಿಜಾತ, ಚಂದ್ರ, ಧನ್ವಂತರಿ, ಶಂಖ, ಅದಿತಿಯ ಕರ್ಣ ಕುಂಡಲಗಳು ಹೊರಬರುತ್ತವೆ. ಹಾಲಾಹಲದ ಜೊತೆಯಲ್ಲಿ ದರಿದ್ರ ದೇವತೆ ಜ್ಯೇಷ್ಠಾದೇವಿ ಹಾಗೂ ನಿದ್ರಾದೇವಿಯರೂ ಜನಿಸುತ್ತಾರೆ. ಹಾಗಾಗಿ ಕಾರ್ತಿಕ ಬಹುಳ ತ್ರಯೋದಶಿಯು ಮಹಾಲಕ್ಷ್ಮೀ, ಧನ್ವಂತರಿ ಮತ್ತು ಕಾಮಧೇನುಗಳ ಹುಟ್ಟಿದ ದಿನ.

ದೀಪಾವಳಿಯ ಹಬ್ಬ ಬರುತ್ತಿರುವಂತೆಯೇ, ಮನೆಯನ್ನೆಲ್ಲ ಸ್ವಚ್ಛಗೊಳಿಸಿ, ಸುಣ್ಣ ಬಣ್ಣ ಅಲಂಕರಿಸುತ್ತಾರೆ. ತ್ರಯೋದಶಿಯು
ಹಬ್ಬದ ಮೊದಲ ದಿನ. ಹಬ್ಬದ ಬೆಳಗ್ಗೆೆ ಮನೆಯ ಮುಂದೆ ಸಾರಿಸಿ ರಂಗವಲ್ಲಿಯನ್ನಿಟ್ಟು, ಮನೆಯ ಬಾಗಿಲನ್ನು ತಳಿರು ತೋರಣ
ಗಳಿಂದ ಸಿಂಗರಿಸುತ್ತಾರೆ. ಬೆಳಗಿನ ಹೊತ್ತಿನಲ್ಲಿಯೇ ಕಾಮಧೇನುವಿನ ಹಾಗೂ ಆಕೆಯ ಮಗಳಾದ ನಂದಿನಿಯ ಪೂಜೆಯನ್ನು ಸಾಂಕೇತಿಕವಾಗಿ ಹಸು – ಕರುಗಳ ಪೂಜೆಯೊಡನೆ ನಡೆಸುತ್ತಾರೆ.

ಗೋಮಾತೆ ಮತ್ತು ಅದರ ಕರುಗಳೆರಡನ್ನು ಪೂಜಿಸಿ ಗೋಗ್ರಾಸವನ್ನು ನೀಡಿ ಪಂಚಗವ್ಯವನ್ನು ಸೇವಿಸುತ್ತಾರೆ. ದನಗಳಿಗೆ ಅಭ್ಯಂಗನವನ್ನು ಮಾಡಿಸಿ, ಅಲಂಕರಿಸಿ, ಪೂಜಿಸಿ, ಸಂಜೆಯ ಹೊತ್ತು ಮೆರವಣಿಗೆಯನ್ನು ಮಾಡಿ, ಕಿಚ್ಚಿನಲ್ಲಿ ಹಾಯಿಸಿ ತಮ್ಮ ಭಕ್ತಿ ಮತ್ತು ಕೃತಜ್ಞತೆಯನ್ನು ವ್ಯಕ್ತಪಡಿಸುವ ಪದ್ಧತಿಯು ಭಾರತದ ಹಲವು ಕಡೆಯಲ್ಲಿ ಕಂಡುಬರುತ್ತದೆ.

ಧನ್ವಂತರಿಯು ದೇವತೆಗಳ ವೈದ್ಯ. ಒಂದು ಕೈಯಲ್ಲಿ ಅಮೃತಕುಂಭವನ್ನು, ಮತ್ತೊಂದು ಕೈಯಲ್ಲಿ ಆಯುರ್ವೇದ ಗ್ರಂಥವನ್ನು ಹಿಡಿದುಕೊಂಡು ಹುಟ್ಟಿದನಂತೆ. ಹಾಗಾಗಿ ಆಯುರ್ವೇದ ವೈದ್ಯರಿಗೆ ಈ ದಿನ ಶುಭದಿನ. ಧನ್ವಂತರಿಯ ಕೃಪೆಗಾಗಿ ಆಯುರ್ವೇದ ಪಂಡಿತರು ವಿಶೇಷ ಪೂಜೆ ಪುನಸ್ಕಾರಗಳನ್ನು ಹಾಗೂ ಯಜ್ಞವನ್ನು ಮಾಡುವರು. ಜನಸಾಮಾನ್ಯರು ತಮ್ಮ ಆರೋಗ್ಯ ಮತ್ತು ದೀರ್ಘಾಯಸ್ಸನ್ನು ನೀಡುವಂತೆ ಧನ್ವಂತರಿಯ ಆರಾಧನೆಯನ್ನು ಮಾಡುವರು.

ಸಾಮಾನ್ಯವಾಗಿ ಆರಾಧನೆಯನ್ನು ಸಂಜೆಯ ಹೊತ್ತಿನಲ್ಲಿ ನಡೆಸುವುದು ವಾಡಿಕೆ. ತಮಿಳು ನಾಡಿನ ಬ್ರಾಹ್ಮಣ ಸಮುದಾಯದ ಮಹಿಳೆಯರು ‘ಮರುಂದು’ ಎನ್ನುವ ವಿಶೇಷ ಆಯುರ್ವೇದ ಔಷಧವನ್ನು ತಯಾರು ಮಾಡುವರು. ಈ ಔಷಧವನ್ನು ನರಕ ಚತುರ್ದಶಿಯಂದು ಸೂರ್ಯೋದಯದ ಮೊದಲೇ ಸೇವಿಸುತ್ತಾರೆ. ಈ ಔಷಧವು ಮನುಷ್ಯನ ಶರೀರದಲ್ಲಿರುವ ತ್ರಿದೋಷಗಳ ನಡುವೆ ಸಮತೋಲನೆಯನ್ನು ಸ್ಥಾಪಿಸುತ್ತದೆ ಎಂದು ಅವರ ನಂಬಿಕೆ. ಈ ಔಷಧ ತಯಾರಿಕಾ ಜ್ಞಾನವನ್ನು ತಾಯಂದಿರು ತಮ್ಮ
ಹೆಣ್ಣುಮಕ್ಕಳು ಮತ್ತು ಸೊಸೆಯಂದಿಗೆ ಕಲಿಸುತ್ತಾರೆ. ಹಾಗಾಗಿ ‘ಮರುಂದು’ ಎನ್ನುವ ಔಷಧವನ್ನು ತಯಾರಿಸುವ ಗುಟ್ಟು
ಹೆಂಗಸರ ಮೂಲಕವೇ ಒಂದು ತಲೆಮಾರಿನಿಂದ ಮತ್ತೊಂದು ತಲೆಮಾರಿಗೆ ಹರಿದು ಬರುತ್ತಿದೆ.

ಲಕ್ಷ್ಮೀಯ ಹುಟ್ಟಿದ ದಿನವನ್ನು ಆಚರಿಸಲು ಈ ದಿನದಂದು ಹೊಸ ವಸ್ತುಗಳನ್ನು ಕೊಳ್ಳುವುದುಂಟು. ಮನೆಗೆ ಬೇಕಾದ
ಪಾತ್ರೆ ಪರಡಿಗಳನ್ನು ಕೊಳ್ಳುವುದರ ಜೊತೆಯಲ್ಲಿ ಚಿನ್ನ, ಬೆಳ್ಳಿಯ ಆಭರಣಗಳನ್ನು ವಿಶೇಷವಾಗಿ ಖರೀದಿ ಮಾಡುವುದುಂಟು.

(ಮುಂದುವರಿಯುತ್ತದೆ)

Leave a Reply

Your email address will not be published. Required fields are marked *