Sunday, 15th December 2024

ಕುರೂಪಿ ಹೆಣ್ಣಿನ ಪಟ್ಟ ಹೊತ್ತು ಬದುಕಿದವಳು

ಶಿಶಿರ ಕಾಲ

shishirh@gmail.com

ದೇಹಸಹಜ ಸೌಂದರ್ಯವೆನ್ನುವುದು ಪರ್ಫೆಕ್ಷನ್‌ನ ಒಂದು ಹಂಬಲ. ಇದೇ ಪರಿಪೂರ್ಣತೆಯೆಂದು ನಮಗೆ ನಾವೇ ನಂಬಿ ಕೊಂಡು ಅದರಲ್ಲಿ ಹೊಂದುತ್ತದೆಯೇ ಅಥವಾ ಇಲ್ಲವೇ ಎಂದು ಹೋಲಿಸಿ ನಿರ್ಧರಿಸುವ ಒಂದು ಪರಿಪಾಠ. ಅದು ಮನುಷ್ಯ ಸಹಜ ಸ್ವಭಾವ. ಸುಂದರ ಹೂವು ಕಂಡರೆ ಇಷ್ಟವಾಗುವಂತೆ ದೇಹ ಸೌಂದರ್ಯ ನೋಡಿ ಇಷ್ಟಪಡುವುದು.

ಆಕೆಯ ಬದುಕೇ ಒಂದು ಕಾದಂಬರಿ. ಹೆಸರು ಮೇರಿ ಆನ್ ಬೇವನ್. 1874ರಲ್ಲಿ ಇಂಗ್ಲೆಂಡಿನಲ್ಲಿ ಹುಟ್ಟಿದ ಮೇರಿ ರಾಜಕುಮಾರಿಯೋ ಅಥವಾ ಇನ್ನೊಂದೋ ಆಗಿದ್ದವಳಲ್ಲ. ಚಂದದ ಮುಖದ, ಕಾಜುಗಣ್ಣಿನ, ರಸ್ತೆಯಲ್ಲಿ ನಡೆದು ಹೋಗುತ್ತಿದ್ದರೆ ಒಂದು ಕ್ಷಣ ನಿಂತು ನೋಡಬೇಕೆನ್ನಿಸುವಷ್ಟು ಸುಂದರಿ.

ಅಂಥವಳು ಮುಂದೆ ಜಗತ್ತಿನ ಅತ್ಯಂತ ಕುರೂಪಿ ಎನ್ನುವ ಬಿರುದನ್ನು ಪಡೆಯುತ್ತಾಳೆ. ಅದಕ್ಕಿಂತ ಮೊದಲು ಒಂದು ಅಫಿಡವಿಟ್ಟು. ಮನುಷ್ಯರಾಗಿ ನಾವು ಇಂದಿನ ನಮ್ಮ ವೈಚಾರಿಕ ಪ್ರಬುದ್ಧತೆಗೆ ಬಂದು ಮುಟ್ಟುವುದಕ್ಕಿಂತ ಮೊದಲು ಎಂತೆಂಥz ಹಂತವನ್ನು ದಾಟಿದ್ದೇವೆ. ಇತಿಹಾಸದ ಅರಿವು ಈ ಕಾರಣಕ್ಕೆ ಮುಖ್ಯವಾಗುತ್ತದೆಯೆನ್ನುವುದು ನನ್ನ ಗಟ್ಟಿನಂಬಿಕೆ. ಇತಿಹಾಸ ವೆಂದಾಕ್ಷಣ ಅದು ಕೇವಲ ರಾಜ-ರಾಜರುಗಳ ಬಡಿದಾಟದ್ದೇ ಆಗಿರಬೇಕೆಂದಿಲ್ಲ. ಅಥವಾ ಜಗತ್ತಿನ ದಿಕ್ಕು-ದೆಸೆ ಬದಲಿಸಿ ತನ್ನನ್ನು ದಾಖಲಿಸಿಕೊಂಡ ಘಟನೆಯೇ ಆಗಿರಬೇಕೆಂದೇನೂ ಇಲ್ಲ.

ಮಹಾಭಾರತ, ರಾಮಾಯಣಗಳ ಉಪಘಟನೆಗಳನ್ನೇ ತೆಗೆದುಕೊಳ್ಳಿ. ಕೆಲವೊಮ್ಮೆ ಈ ಮಹಾಕಾವ್ಯಗಳ ಮೂಲಹರಿವಿಗಿಂತ ಈ ಉಪಘಟನೆಗಳು ಹೆಚ್ಚು ಆಪ್ತವಾಗಿ ಜೀವನವನ್ನು ಬದಲಿಸಿದ್ದಿದೆ. ಹಾಗಾಗಿ ಇತಿಹಾಸವನ್ನು ತೀರಾ ಪಠ್ಯ ವ್ಯವಹಾರವಾಗಿ ಓದಿಕೊಂಡರೆ ಕ್ರಮೇಣ ಅಪಥ್ಯವಾಗುತ್ತದೆ. ಇವಳದು ಅಂತಹ ಉಪಕಥೆಯಾದ ಬದುಕು. ಮದುವೆಯಾದ ಕೆಲವು ವರ್ಷಗಳಲ್ಲಿ ಮೇರಿ ಮಕ್ಕಳನ್ನು ಪಡೆಯುತ್ತಾಳೆ.

ತಲೆಬಿಸಿಯಿಲ್ಲದ ಸಂಸಾರ. ಅದೊಂದು ಕೆಟ್ಟಗಳಿಗೆಯಲ್ಲಿ ಪತಿ ಥಾಮಸ್ ಸಾವಿಗೀಡಾಗುತ್ತಾನೆ. ಒಮ್ಮೆಲೇ ಜಗತ್ತು ತಲೆಕೆಳಗಾಗುತ್ತದೆ. ನಾಲ್ಕು ಮಕ್ಕಳಿಗೆ ಒಂದು ಹೊತ್ತು ಊಟ ಕೊಡಿಸಲೂ ಆಗದ ಸ್ಥಿತಿ. ಅದೇ ಸಮಯದಲ್ಲಿ ಆಕೆಗೊಂದು ರೋಗ ಕಾಣಿಸಿಕೊಳ್ಳುತ್ತದೆ- ಅಕ್ರೋಮೆಗಲಿ (Acromegaly). ಬೆಳವಣಿಗೆಯ ಹಾರ್ಮೋನುಗಳ ಅಪರಾ ತಪರಾ ಸ್ರವಿಸು ವಿಕೆಯಿಂದ ಆಕೆಯ ಮುಖ, ಅಂಗಾಂಗಗಳು ಅಸಮಾನುಪಾತದಲ್ಲಿ ವಯಸ್ಸಲ್ಲದ ವಯಸ್ಸಿನಲ್ಲಿ ಬೆಳೆಯಲು ಶುರುವಾಗುತ್ತವೆ.

ನೋಡನೋಡುತ್ತಿದ್ದಂತೆ ಆಕೆಯ ದೇಹ, ಮುಖ, ಕೈಕಾಲುಗಳು ವಿಕಾರವಾಗಿ ಬೆಳೆದು ಆಕೆಯ ಸ್ನೇಹಿತರೇ ಗುರುತಿಸದಂತಹ ಸ್ಥಿತಿಗೆ ತಲುಪಿ ಬಿಡುತ್ತಾಳೆ. ಆ ಕಾಲದಲ್ಲಿ ಇಂಗ್ಲೆಂಡಿನಲ್ಲಿ ಸೌಂದರ್ಯವೆಂದರೆ ಸಣ್ಣ ನಡುವಿರಬೇಕು, ಬೊಜ್ಜಿಲ್ಲದ ದೇಹ ಚಿಕ್ಕಗಾತ್ರದ ಗೌನಿನಲ್ಲಿ ಹಿಡಿಸಬೇಕು ಇತ್ಯಾದಿ. ಅಲ್ಲಿನ ಜಾತ್ರೆಯೊಂದರಲ್ಲಿ ಅತ್ಯಂತ ಕುರೂಪಿ ಹೆಣ್ಣಿನ ಸ್ಪರ್ಧೆಯೊಂದಿರುತ್ತದೆ. ಬದುಕು ಅವಳನ್ನು ಅದರಲ್ಲಿ ಭಾಗವಹಿಸುವಂತೆ ಮಾಡುತ್ತದೆ ಮತ್ತು ಆಕೆ ಗೆದ್ದು ಒಂದಿಷ್ಟು ಹಣವೂ ಬರುತ್ತದೆ.

ಆಕೆಯ ಫೋಟೋ ಪೇಪರಿನಲ್ಲಿ ‘ಅತ್ಯಂತ ಕುರೂಪಿ ಹೆಣ್ಣು’ ಎಂದು ಪ್ರಕಟವಾಗುತ್ತದೆ. ಆ ಪೇಪರ್ ಅನ್ನು ಓದಿದ ಅಮೆರಿಕದ ಒಬ್ಬ ಏಜೆಂಟ್ ಆಕೆಯನ್ನು ಸಂಪರ್ಕಿಸಿ ಅಲ್ಲಿನ ಅಮ್ಯೂಸ್ಮೆಂಟ್ ಪಾರ್ಕೊಂದರ ‘ಫ್ರೀಕ್ ಶೋ’ ಒಂದಕ್ಕೆ ಸೇರಿಕೊಳ್ಳಲು ಆಹ್ವಾನಿಸುತ್ತಾನೆ. ಆಕೆ ಅಮೆರಿಕಕ್ಕೆ ಮಕ್ಕಳನ್ನು ಕರೆದುಕೊಂಡು ಹೊರಟುಬಿಡುತ್ತಾಳೆ. ಅಲ್ಲಿ ಆಕೆಗೊಂದು ವಿಚಿತ್ರ ವೃತ್ತಿ. ಫ್ರೀಕ್ ಶೋನಲ್ಲಿ ಒಂದು ಕಡೆ, ಕತ್ತಲಲ್ಲಿ, ಮೂಲೆಯ ಮರೆಯಲ್ಲಿ ಕೂತಿರಬೇಕು. ಅಲ್ಲಿ ಹೆದರಿಕೆ ಹುಟ್ಟುವ ಹತ್ತಾರು ವಿಕಾರ ಆಕೃತಿಗಳನ್ನು ವೀಕ್ಷಕರು ಹಾದುಹೋಗಬೇಕು. ಅದನ್ನು ದುಡ್ಡು ಕೊಟ್ಟು ನೋಡಲು ಬಂದ ಮಕ್ಕಳು, ಪಾಲಕರು, ಹೆದರಿ ಥ್ರಿಲ್ ಅನುಭವಿಸುವುದು.

ಆಕೆಗೆ ಮಾತ್ರ ಯಾವುದೇ ಮೇಕಪ್ ಬೇಕಾಗಿರಲಿಲ್ಲ. ಕೆಲ ದಿನಗಳಲ್ಲೇ ಈ ಫ್ರೀಕ್ ಶೋ ಆಕೆಯ ಕಾರಣದಿಂದ ನ್ಯೂಯಾರ್ಕ್‌ ನಲ್ಲಿ ಬಹಳ ಜನಪ್ರಿಯವಾಯಿತು. ಆಕೆಗೆ ಯಥೇಚ್ಛ ಸಂಪತ್ತನ್ನೂ ತಂದುಕೊಟ್ಟಿತು. ಕುರೂಪದಿಂದಲೇ ಆಕೆಗೆ ದುಡಿಮೆಯೆಂದು ಮೇಲ್ನೋಟಕ್ಕೆ ಅನ್ನಿಸಿದರೂ ಆಕೆಯ ಕೆಲಸ ಸಾಧಾರಣದವರಿಗೆ ಜೀರ್ಣಿಸಿಕೊಳ್ಳಲಾಗುವಂಥದ್ದಲ್ಲ. ದೇಹ ಸೌಂದರ್ಯದ ವಿಷಯ ಬಂದಾಗಲೆಲ್ಲ ನನಗೆ ಮೇರಿ ಆನ್ ನೆನಪಾಗುತ್ತಾಳೆ.

The World’s ugliest woman ಎಂಬ ಆ ಪಟ್ಟವನ್ನು, ಅದರ ಜನಪ್ರಿಯತೆಯನ್ನು ಅವಳು ಅದು ಹೇಗೆ ಜೀರ್ಣಿಸಿ ಕೊಂಡಳು? ಜನರು ತನ್ನನ್ನು ನೋಡಿ ಹೆದರುತ್ತಿದ್ದುದನ್ನು ಆಕೆ ಹೇಗೆ ಸಹಿಸಿಕೊಂಡು ಖಿನ್ನತೆಗೊಳಗಾಗದೆ, ಕೇವಲ ಬದುಕಿನ ಅನಿವಾರ್ಯತೆಯನ್ನು ಒಪ್ಪಿಕೊಂಡಳು? ಇದು ನನಗಂತೂ ಯಾವತ್ತೂ ಕಲ್ಪಿಸಿಕೊಳ್ಳಲಾಗುವುದಿಲ್ಲ. ನಂತರದಲ್ಲಾದ ಆಕೆಯ ನೂರೆಂಟು ಸಂದರ್ಶನ ಗಳಲ್ಲಿ ಎದುರಾದದ್ದು ಇದೇ ಪ್ರಶ್ನೆ. ಅದಕ್ಕೆ ಆಕೆ ಶಾಂತವಾಗೇ ಉತ್ತರಿಸಿದ್ದಳು.

ದೇಹಸಹಜ ಸೌಂದರ್ಯವೆನ್ನುವುದು ಪರ್ಫೆಕ್ಷನ್‌ನ ಒಂದು ಹಂಬಲ. ಇದೇ ಪರಿಪೂರ್ಣತೆಯೆಂದು ನಮಗೆ ನಾವೇ ನಂಬಿ ಕೊಂಡು ಅದರಲ್ಲಿ ಹೊಂದುತ್ತದೆಯೇ ಅಥವಾ ಇಲ್ಲವೇ ಎಂದು ಹೋಲಿಸಿ ನಿರ್ಧರಿಸುವ ಒಂದು ಪರಿಪಾಠ. ಅದು ಮನುಷ್ಯ ಸಹಜ ಸ್ವಭಾವ. ಸುಂದರ ಹೂವು ಕಂಡರೆ ಇಷ್ಟವಾಗುವಂತೆ ದೇಹಸೌಂದರ್ಯ ನೋಡಿ ಇಷ್ಟಪಡುವುದು. ಈ ಹಂಬಲದಲ್ಲಿ ಪರಿಪೂರ್ಣತೆ ಸಾಪೇಕ್ಷವಾಗಿರುವು ದರಿಂದ ಇದು ಇತಿಹಾಸದುದ್ದಕ್ಕೂ ಹೀಗೆಯೇ ಇರಲಿಕ್ಕಿಲ್ಲ ಅಲ್ಲವೇ? ಏಕೆಂದರೆ ಸಮಾಜದ ರುಚಿ ಬದಲಾಗುತ್ತಿರುತ್ತದೆ.

ಆದರೆ, ನಮ್ಮ ತಕ್ಕಡಿಯಲ್ಲಿ ಸೌಂದರ್ಯವನ್ನು ಮೇಲಕ್ಕೆತ್ತುವ ಭರದಲ್ಲಿ, ಸುಂದರವಲ್ಲ ಎನಿಸಿದ್ದನ್ನು ಕೀಳಾಗಿ, ಅಪಥ್ಯದಂತೆ
ಕಂಡರೆ ಮಾತ್ರ ಸಮಸ್ಯೆ ಎದುರಾಗುತ್ತದೆ. ಸೌಂದರ್ಯೋಪಾಸನೆಯ ಪ್ರಜ್ಞೆಗೆ ಭಾಷೆಗಿಂತ ಹಿಂದಿನ ಇತಿಹಾಸವಿದೆ.
ಆದರೆ ಇದು ನಿರಂತರ ಬದಲಾಗುತ್ತಲೇ ಬಂದಿದೆ. ಆ ಕಾರಣಕ್ಕೆ ಒಬ್ಬ ವ್ಯಕ್ತಿ ಇಂದು ಸುಂದರವೆನ್ನಿಸಿದರೆ, ನೂರು ವರ್ಷದ ನಂತರ ಆತನ ಫೋಟೋ ನೋಡಿ ಅಷ್ಟೇ ಚಂದವೆನಿಸದಿರಬಹುದು.

ತೀರಾ ಹಿಂದಕ್ಕೆ ಬೇಡ, 19ನೇ ಶತಮಾನದ ಜಪಾನಿಗೆ ಹೋಗೋಣ. ಅಲ್ಲಿನ ಅಂದಿನ ಸೌಂದರ್ಯಪ್ರಜ್ಞೆಯ ಬಗ್ಗೆ ಓದಿದಾಗ ಆಶ್ಚರ್ಯವಾಗಿತ್ತು. ಸುಂದರ ಬಿಳಿಹಲ್ಲು ಇಂದು ಮುಖಕ್ಕೆ ಶೋಭೆಯಲ್ಲವೇ? ಆ ಕಾಲದಲ್ಲಿ ಜಪಾನಿನ ಹೆಂಗಸರು ಹಲ್ಲಿಗೆ ಕಪ್ಪು ಪೇಂಟ್ ಮಾಡಿಕೊಳ್ಳುತ್ತಿದ್ದರು. ಅದು ಅಂದಿನ ಸೌಂದರ್ಯವಾಗಿತ್ತು. ಬಿಳಿಚರ್ಮವೆಂದರೆ ಸೌಂದರ್ಯ ಎನ್ನುವುದು ಇಂದಿಗೂ
ಉಳಿದುಕೊಂಡಿದೆ. ತೀರಾ ರೇಸಿಸ್ಟ್ ಇದ್ದ ಕಾಲದಲ್ಲಂತೂ ಕಪ್ಪೆಂದರೆ ಶಾಪ, ಸುಂದರವಲ್ಲ. ಬಿಳಿಯದು ಮಾತ್ರ ಶ್ರೇಷ್ಠ
ಎನ್ನುವುದು ಯುರೋಪಿಯನ್ನರು ಸೃಷ್ಟಿಸಿದ್ದು. ಅದು ಕೆಲಕಾಲದಿಂದ ನಡೆದುಕೊಂಡು ಬಂದ ಸೌಂದರ್ಯಮಾಪಕ.

1970ರವರೆಗೆ ‘ಮಿಸ್ ವಲ್ಡ’ ಪಟ್ಟವನ್ನು ಕಪ್ಪುಚರ್ಮದವರು ಗೆಲ್ಲಲಿಕ್ಕೇ ಆಗಲಿಲ್ಲ. ಅದು ಕೂಡ ಕಪ್ಪು ವರ್ಣೀಯರಿಗೆ ಮಿಸ್
ವಲ್ಡನಲ್ಲಿ ಭಾಗವಹಿಸಲು ಅವಕಾಶಕೊಟ್ಟ 50 ವರ್ಷದ ನಂತರ ಮೊದಲ ಬಾರಿ ಜೆನ್ನಿಫರ್ ಹೋಸ್ಟೆನ್ ಮಿಸ್ ವರ್ಲ್ಡ್
ಆದದ್ದು. ಹಾಗನ್ನುವುದಕ್ಕಿಂತ, ಕಪ್ಪನ್ನು ಸುಂದರವೆಂದು ಈ ಜಗತ್ತಿನ ಒಂದು ವ್ಯವಸ್ಥೆ ಒಪ್ಪಿಕೊಂಡದ್ದು. ಕೊರಿಯಾದಲ್ಲಿ 100 ವರ್ಷದ ಹಿಂದೆ ದೇಹವನ್ನು ಯಾವುದೇ ರೀತಿ ಮಾರ್ಪಡಿಸುವುದು ಅಪರಾಧವೆನ್ನುವ ಭಾವನೆಯಿತ್ತು. ಅದು ದೇವರಿಗೆ ನಾವು ಮಾಡುವ ಅವಮಾನವೆನ್ನುವ ನಂಬಿಕೆ ಇತ್ತು. ಕೊರಿಯಾದವರನ್ನು ನೆನಪಿಸಿಕೊಳ್ಳಿ.

ಅವರ ಕಣ್ಣುರೆಪ್ಪೆಯಲ್ಲಿ ನಮ್ಮಂತೆ ನೆರಿಗೆಯಿರುವುದಿಲ್ಲ. ಇತ್ತೀಚೆಗೆ ಅಲ್ಲಿ ಸೌಂದರ್ಯವೆಂದರೆ ರೆಪ್ಪೆಯಲ್ಲಿ ನೆರಿಗೆಯಿರಬೇಕು ಎಂಬ ಹೊಸ ಟ್ರೆಂಡ್ ಶುರುವಾಯಿತು ನೋಡಿ. ಅದು ಹೇಗೆ, ಯಾಕಾಗಿ ಕೊರಿಯನ್ನರಿಗೆ ಹೀಗನ್ನಿಸಿತೋ ಗೊತ್ತಿಲ್ಲ. ಸೌಂದರ್ಯಮಾಪಕಕ್ಕೆ ಇಂಥದ್ದೇ ವ್ಯಾಖ್ಯಾನದ ಹಂಗಿಲ್ಲವಲ್ಲ. ಇಂದು ಕೊರಿಯಾದಲ್ಲಿ ರೆಪ್ಪೆಯ ಸರ್ಜರಿ 1.2 ಶತಕೋಟಿ
ಡಾಲರಿನ ವ್ಯವಹಾರ. ರೆಪ್ಪೆಯ ಪ್ಲಾಸ್ಟಿಕ್ ಸರ್ಜರಿ ಒಂದು ವಯಸ್ಸಿಗೆ ಬಂದಾಕ್ಷಣ ಪಾಲಕರೇ ಮಾಡಿಸಿಬಿಡುವ ಒಂದು
ರಿವಾಜು.

ಚೀನಾದಲ್ಲಿ 15ನೇ ಶತಮಾನದಿಂದೀಚೆಗೆ ವಿಚಿತ್ರವೆನ್ನಿಸುವ ಒಂದು ಸೌಂದರ್ಯ ವ್ಯಾಖ್ಯಾನ ಹುಟ್ಟಿಕೊಂಡಿತು. ಹೆಣ್ಣಿನ
ಕಾಲನ್ನು ಮುರಿದು ಗಟ್ಟಿಯಾಗಿ ಬಳ್ಳಿಯಿಂದ ಕಟ್ಟಿ ಅದಕ್ಕೆ ಕಮಲದ ಹೂವಿನ ರೂಪಕೊಡುವುದು. ಕಮಲ ಚಂದವೇ, ಆದರೆ ಕಾಲು ಕಮಲದಂತೆ ಬದಲಿಸಿಕೊಂಡರೆ? ಅದೊಂದು ತೀರಾ ಲಾಜಿಕ್ ಇಲ್ಲದ್ದು ಅನ್ನಿಸಬಹುದು. ಆದರೆ ಹಾಗೆ ದೇಹ ಮಾರ್ಪಡಿಸಿಕೊಳ್ಳುವ, ಅದುವೇ ಸೌಂದರ್ಯವೆನ್ನುವ ಕೆಲಸ ಇತಿಹಾಸ ದುದ್ದಕ್ಕೂ ಇದೆ (ಭಾರತದಲ್ಲಿ ಇದ್ದಂತಿಲ್ಲವೆನ್ನುವುದು ಇಲ್ಲಿನ ದೇಗುಲಗಳ ಶಿಲ್ಪಗಳಿಂದ ತಿಳಿಯುತ್ತದೆ).

ಕಾಲನ್ನು ಸೊಟ್ಟಪಟ್ಟವಾಗಿಸುವ ಈ ರೂಢಿಯ ನಿಷೇಧಕ್ಕೆ ಮಂಚು ಎಂಬ ರಾಜ 17ನೇ ಶತಮಾನದಲ್ಲಿ ಮುಂದಾದಾಗ ಗಲಾಟೆ ನಡೆದವು. ಸೊಟ್ಟಕಾಲಿನ ಮಹಿಳೆಯರಿಗೆ ವಿಶೇಷ ರೀತಿಯ ಬೂಟುಗಳಿದ್ದವು. ಇಂಥ ಪದ್ಧತಿ 20ನೇ ಶತಮಾನ ದವರೆಗೂ ಮುಂದುವರಿದುಕೊಂಡು ಬಂದಿತ್ತು ಇತ್ತೀಚೆಗೆ ನಟಿಯೊಬ್ಬಳು ಕಪ್ಪು ದಪ್ಪ ದೇಹದ ಡೈರೆಕ್ಟರ್ ಒಬ್ಬನನ್ನು ಮದುವೆ ಯಾದಾಗ ಸೋಷಿಯಲ್ ಮೀಡಿಯಾ ದಲ್ಲಿ ತೀರಾ ಹೀಯಾಳಿಕೆಯ ಕಮೆಂಟುಗಳಿಗೆ ಗುರಿಯಾಗ ಬೇಕಾಯಿತು. ದುಡ್ಡಿಗೋಸ್ಕರ ಮದುವೆಯಾಗಿದ್ದು ಎಂದೆಲ್ಲ ಮಾತು ಬಂತು.

ಸೋಷಿಯಲ್ ಮೀಡಿಯಾ ಬಂದ ನಂತರವಂತೂ ‘ಬ್ಯೂಟಿ ಶೇಮಿಂಗ್’ ತೀರಾ ಸಾಮಾನ್ಯವೆಂದು ಒಪ್ಪಿಕೊಂಡು ಬಿಟ್ಟಂತಾಗಿದೆ. ಸೌಂದರ್ಯದಮಾಪಕ ಕೂಡ ತೀವ್ರವೇಗದಲ್ಲಿ, ಪ್ರತಿದಿನ ಬದಲಾಗುತ್ತಲೇ ಇರುವುದಕ್ಕೂ ಇದೇ ಕಾರಣ. ಸೋಷಿಯಲ್ ಮೀಡಿಯಾ ಸುಂದರ ದೇಹ ದವರಿಗೆ ಸಿಗುವ ವಿಶೇಷ ಒಲವು; ಲೋಕಲ್ ಜನಪ್ರಿಯತೆ ಅವರಿಗೊಂದು ಚಿಕ್ಕ ಕೋಡನ್ನು ಹುಟ್ಟುಹಾಕುತ್ತಿದೆ. ಆದರೆ ಅದು ಸಮಸ್ಯೆಯಲ್ಲ. ಹೇಗೆ ಬುದ್ಧಿವಂತರ ಬುದ್ಧಿಮತ್ತೆಯನ್ನು ಹೊಗಳಲೇಬೇಕೋ ಹಾಗೆ. ಆದರೆ ಅಲ್ಲೇ ಪಕ್ಕದಲ್ಲಿದ್ದ ಕಡಿಮೆ ಬುದ್ಧಿವಂತನನ್ನು ಸಂಪೂರ್ಣ ನಿರ್ಲಕ್ಷಿಸುವ, ಅವಮಾನಿಸುವ ಇನ್ಸೆನ್ಸಿಟಿವಿಟಿ ಒಪ್ಪುವಂಥ ದ್ದಲ್ಲ.

ಹಾಗೆಯೇ ಸೌಂದರ್ಯ ಕೂಡ. ಸೌಂದರ್ಯವನ್ನು ಹೊಗಳಲೇಬಾರದು, ಮೆಚ್ಚಲೇ ಬಾರದು ಎನ್ನುವುದು ಇಲ್ಲಿನ ವಾದವಲ್ಲ. ಬದಲಿಗೆ ಸೌಂದರ್ಯೋಪಾಸನೆಯಲ್ಲಿ ಇಂದಿನ ಸೌಂದರ್ಯ ವ್ಯಾಖ್ಯಾನಕ್ಕೆ ಹೊಂದದವರನ್ನು ನಿರ್ಲಕ್ಷಿಸಿ, ಕೆಳದರ್ಜೆಯಂತೆ ವ್ಯವಹರಿಸುವುದಿದೆಯಲ್ಲ ಅದು ಸಮಸ್ಯೆ. ಇದು ದೀರ್ಘಕಾಲ ಸಮಾಜ ಪರಿಗಣನೆಗೇ ತೆಗೆದುಕೊಳ್ಳದ ಒಂದು ವಿಚಾರ.
ಮನೆಯಲ್ಲಿ ಸುಂದರ ವ್ಯಕ್ತಿಯ ಬಗ್ಗೆ ಆಗೀಗ ಲೋಕಾರೂಢಿಯಾಗಿ ಮಾತನಾಡುವುದಿದೆ.

ಹೊಸತಾಗಿ ಭೆಟ್ಟಿಯಾದ ವ್ಯಕ್ತಿ (ಹೆಣ್ಣಿರಲಿ, ಗಂಡಿರಲಿ) ಸುಂದರವಾಗಿದ್ದಾರೆ, ಎಷ್ಟು ಚಂದವಿದ್ದಾರೆ ಎನ್ನುವ ಮಾತುಕತೆ ಮನೆಗೆ ಬಂದ ನಂತರ ನಡೆಯುವುದಿದೆ. ಆದರೆ ಅಲ್ಲಿಯೇ ಇದ್ದ ಇನ್ನೊಬ್ಬರಿಗೆ ಅದು ಬೇರೆಯದೇ ರೀತಿಯಾಗಿ ತಾಕುವ ಸಾಧ್ಯತೆ ಯಿರುತ್ತದೆ. ಇದನ್ನು ಮೂರ್ಖತನವೆಂತಲೋ ಅಥವಾ ಇನ್ನೊಂದೆಂತಲೋ ಪರಿಭಾವಿಸುವುದು ತಪ್ಪು. ಪುರುಷ ವರ್ಗದಲ್ಲಿ ಹೆಂಡತಿಯ ‘ದೇಹವ್ಯಂಗ್ಯ’ (ಬಾಡಿ ಶೇಮಿಂಗ್) ಕೂಡ ಬಹುತೇಕ ಕುಟುಂಬದಲ್ಲಿ ಅರಿವಿಲ್ಲದೆ ನಡೆಯುತ್ತಿರುತ್ತದೆ. ಅದೆಷ್ಟೋ ಬಾರಿ ತಮಾಷೆಗೆ ದೇಹವ್ಯಂಗ್ಯ ಮಾಡುವ ಗಂಡ ಕಾಲ ಕಳೆದಂತೆ ತನಗರಿವಿಲ್ಲದೆಯೇ ಮಿತಿ ಮೀರಿರುತ್ತಾನೆ.

ತನ್ನದೇ ಹೆಂಡತಿಯ ಆತ್ಮಸ್ಥೈರ್ಯ ತಗ್ಗಿಸುವ ಕೆಲಸದಲ್ಲಿ ಅಯಾಚಿತವಾಗಿ ತೊಡಗಿಬಿಡುತ್ತಾನೆ. ಹಾಗಾದಾಗಲೆಲ್ಲ ಹೆಂಡತಿ ಸಣ್ಣಗೆ ನಕ್ಕುಬಿಡುವುದೇ ಜಾಸ್ತಿ. ಆದರೆ ಅವಳಲ್ಲಿ ಮೂಡುವ ವ್ಯಾಕುಲತೆ ಗಂಡನ ಅರಿವಿಗೆ ಬರುವುದಿಲ್ಲ. ಅಕ್ಕ ತಂಗಿಯ,
ಅಣ್ಣ ತಮ್ಮನ ಮೈಬಣ್ಣದಿಂದಾಗಿ ಉಂಟಾಗುವ ಒಂದು ಕಂದಕ, ಮನೆಯವರಿಗೆ ಅರ್ಥವೇ ಆಗದ ಅದೆಷ್ಟೋ ಕುಟುಂಬವನ್ನು ನೋಡಿದ್ದಿದೆ. ಸ್ಥೂಲಕಾಯದವನು ಪಂಕ್ತಿಯಲ್ಲಿ ಊಟಕ್ಕೆ ಕೂತಾಗ ಎಷ್ಟು ತಿನ್ನುತ್ತಾನೆ ಎಂಬುದನ್ನು ಪರರು ನೋಡುವುದು ಆತನ ಗ್ರಹಿಕೆಗೆ ಬಂದಾಗ ಮನಸ್ಸು ಖಿನ್ನವಾಗದೆ ಇರುವುದಿಲ್ಲ.

ಇತ್ತೀಚೆಗೆ ಈ ದೇಹವ್ಯಂಗ್ಯ ಮಿತಿ ಮೀರಿದೆ. ಫೋಟೋ ನೋಡಿ ದಪ್ಪ, ತುಂಬಾ ಸಪೂರ, ಎಮ್ಮೆಯಂತಿದ್ದೀಯ, ಇಂಗಾಲದ ಬಣ್ಣದವಳು ಇವೆಲ್ಲ ತಮಾಷೆಯೆಂದು ಕ್ರಮೇಣ ಒಪ್ಪಿಕೊಳ್ಳುವ ಧಾವಂತದಲ್ಲಿ ಇಂದಿನ ಸೋಷಿಯಲ್ ಮೀಡಿಯಾ ಇದೆ. ಇದು
ಅತಿಹೆಚ್ಚು ಕಾಡುವುದು ಹದಿಹರೆಯದವರನ್ನು. ಹೆಣ್ಣು ಗಂಡು ಭೇದವಿಲ್ಲದೆ ಇದು ಭಾದಿಸುತ್ತಿರುತ್ತದೆ ಯಾದರೂ, ಅತಿಹೆಚ್ಚು ಅನುಭವಿ ಸುವುದು ಹೆಣ್ಣೇ.

ಹುಚ್ಚುಖೋಡಿಯೆನ್ನಿ, ಪಕ್ವವಾಗದ ಮನಸ್ಸು ಅನ್ನಿ. ಅದು ಕೂಡ ಬದುಕಿನ ಒಂದು ಘಟ್ಟವೇ. ಅದನ್ನು ದಾಟಿಯೇ ಬರಬೇಕು. ಆದರೆ ಆ ಘಟ್ಟ ದಾಟುವಾಗ ಮನೆಯಲ್ಲೇ ಅದಕ್ಕೆ ಪೂರಕ ಸ್ಥಿತಿ ಇಲ್ಲದಿದ್ದರೆ ಹೇಗೆ? ದೇಹವ್ಯಂಗ್ಯ ಇಂದಿನ ಶಾಲೆಗಳಲ್ಲಿ ಅತಿಹೆಚ್ಚು. ಇದಕ್ಕೆ ಸೋಷಿಯಲ್ ಮೀಡಿಯಾ ನೇರಕಾರಣ. ಇದರಿಂದಾಗಿ ಇಂದಿನ ಹದಿಹರೆಯದವರಲ್ಲಿ ಆಹಾರ ಕ್ರಮಭಂಗ- Eating Disorder -ಹೆಚ್ಚಿದೆ. ಸುಮಾರು 2.5 ಕೋಟಿ ಹದಿಹರೆಯ ದವರು ಇಂದು ಅಮೆರಿಕದಲ್ಲಿ ಬಾಡಿ ಶೇಮಿಂಗ್‌ನಿಂದಾಗಿ ಆಹಾರ ಕ್ರಮಭಂಗದಿಂದ ಒದ್ದಾಡುತ್ತಿದ್ದಾರೆ.

ಭಾರತ ಮತ್ತು ಉಳಿದ ದೇಶಗಳಲ್ಲಿ ಇದರ ಹಾವಳಿ ಕಡಿಮೆಯೇನಿಲ್ಲ. ಸೌಂದರ್ಯದಿಂದಾಗಿ ಇಂದು ಖಿನ್ನತೆ, ಆತ್ಮಹತ್ಯೆ ಅಽಕವಾಗಿದೆ. ಇದಕ್ಕೆ ಅನೇಕ ಉದಾಹರಣೆ ನೀಡಬಹುದು. ಸಾಮಾನ್ಯವಾಗಿ ಫ್ಯಾಷನ್ ಇಂಡಸ್ಟ್ರಿ, ಗ್ಲಾಮರ್ ಜಗತ್ತಿನಲ್ಲಿದ್ದವ ರಲ್ಲಿ ಈ ದೇಹವ್ಯಂಗ್ಯ ಜಾಸ್ತಿ, ಅದನ್ನು ತಡೆದುಕೊಂಡಿರಬೇಕು. ಇಲ್ಲವಾದಲ್ಲಿ, ಖಿನ್ನರಾಗಿ ಆತ್ಮಹತ್ಯೆ ಮಾಡಿಕೊಂಡು
ಬಿಡುತ್ತಾರೆ. ಇವರಷ್ಟೇ ಅಲ್ಲ, ಅದೆಷ್ಟೋ ಹದಿಹರೆಯದವರು ಇದೇ ಕಾರಣಕ್ಕೆ ವಿಪರೀತ ಕೆಲಸಕ್ಕೆ ಕೈ ಹಾಕುವುದರ ಹಿಂದಿನ
ಕಾರಣ ಕುಟುಂಬದಾಚೆ ಸುದ್ದಿಯಾಗುವುದೇ ಇಲ್ಲ.

ಇದು ಓದಿ ಸುಮ್ಮನಾಗುವ ವಿಚಾರವಲ್ಲ. ನಿರಂತರ ತಲೆಯಲ್ಲಿಟ್ಟುಕೊಂಡು ಪ್ರತಿಕ್ಷಣ ವ್ಯವಹರಿಸುವಂಥದ್ದು. ಪ್ರತಿಯೊಬ್ಬರೂ ಬದುಕನ್ನು ಮೇರಿ ಆನ್‌ನಂತೆ ತೆಗೆದುಕೊಳ್ಳಲಾಗುವುದಿಲ್ಲ. ಕುರೂಪಿಯೆನ್ನುವ ಪಟ್ಟ ಹೊತ್ತು ಬದುಕುವುದು ಆಕೆಯಂತೆ ಎಲ್ಲರಿಗೂ ಸಾಧ್ಯವಾಗುವ ಮಾತಲ್ಲ. ಅದನ್ನು ಅಪೇಕ್ಷಿಸಲೂಬಾರದು. ಆಕೆಯಿದ್ದ ಕಾಲ, ಸ್ಥಿತಿಯೇ ಬೇರೆ. ಅದೆಲ್ಲವನ್ನು ಸಹಿಸಿಕೊಂಡೇ ಬದುಕು ಸವೆಸಿದ ಗಟ್ಟಿಗಿತ್ತಿ ಆಕೆ. ಹಾಗಂತ ಸೌಂದರ್ಯೋಪಾಸನೆ ತಪ್ಪಲ್ಲವೇ ಅಲ್ಲ. ಆದರೆ ಮನೆಯಲ್ಲಿ, ಸಾರ್ವಜನಿಕ ಸ್ಥಳದಲ್ಲಿ ಸೌಂದರ್ಯವನ್ನು ಹೊಗಳುವಾಗ ಒಂದಿಷ್ಟು ಸೂಕ್ಷ್ಮತೆಯನ್ನು ಅಳವಡಿಸಿಕೊಳ್ಳಬೇಕು. ಅದು ಈ ಹೊತ್ತಿನ ಅವಶ್ಯಕತೆ.