Sunday, 15th December 2024

’ಅಜಿತ್ ದೋವಲ್‌’ರ ತಾಳ್ಮೆಯ ’ಬ್ಲಾಕ್ ಥಂಡರ್‌’

ವೀಕೆಂಡ್ ವಿತ್‌ ಮೋಹನ್‌

camohanbn@gmail.com

1971ರ ಚುನಾವಣೆಯಲ್ಲಿ ಇಂದಿರಾ ಗಾಂಧಿ ಸ್ಪರ್ಧಿಸಿದ್ದ ಕ್ಷೇತ್ರದಲ್ಲಿ ನಡೆದ ಚುನಾವಣಾ ಅಕ್ರಮದ ಕುರಿತು 1975 ರಲ್ಲಿ ಅಲಹಾ ಬಾದ್ ಹೈಕೋರ್ಟ್ ತೀರ್ಪು ನೀಡಿದಾಗ ಸರ್ವಾಧಿಕಾರಿಯಾಗಿದ್ದ ಇಂದಿರಾ ಗಾಂಧಿ ಸಂವಿಧಾನವನ್ನು ತನ್ನ ಸ್ವಾರ್ಥಕ್ಕೆ ತಿದ್ದುಪಡಿ ಮಾಡಿ ದೇಶದಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕರಾಳ ಇತಿಹಾಸ ನಿಮಗೆ ತಿಳಿದಿದೆ.

ಆ ಸಂದರ್ಭದಲ್ಲಿ ತನ್ನ ಎದುರು ನಿಂತ ವಿರೋಧಿಗಳನ್ನು ಮಟ್ಟ ಹಾಕಲು ಒಂದೊಂದು ರಾಜ್ಯದಲ್ಲಿ ಒಂದೊಂದು ತಂತ್ರಗಾರಿಕೆ ಯನ್ನು ಅವರು ಹೆಣೆದಿದ್ದರು. ಕೇಂದ್ರದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿದ ಇಂದಿರಾ ಗಾಂಧಿ ತನಗಿಷ್ಟ ಬಂದಂತೆ ಆಡಳಿತ ನಡೆಸಿದ ಕರಾಳ ಇತಿಹಾಸದ ಕಾಲವದು. ಅಂದು ಅಸ್ತಿತ್ವದಲ್ಲಿದ್ದ R-AW ಸಂಸ್ಥೆಯನ್ನು ಬಳಸಿಕೊಂಡು ದೇಶದಾ ದ್ಯಂತ ಹಲವು ಸಮಸ್ಯೆಗಳ ಸೃಷ್ಟಿಗೆ ಕಾರಣರಾಗಿದ್ದರು.

ಸರಕಾರಿ ಸಂಸ್ಥೆಗಳ ಮೂಲಕ ಪಂಜಾಬಿನಲ್ಲಿದ್ದ ವಿರೋಧ ಪಕ್ಷವನ್ನು ಮಟ್ಟಹಾಕಲು ಕಾಂಗ್ರೆಸ್ ಪಕ್ಷ ’ಬಿಂದ್ರನ್ ವಾಲಾ’ನೆಂಬ ಉಗ್ರನನ್ನು ಪೋಷಿಸುತ್ತಿತ್ತು. ತನ್ನ ವಿರುದ್ಧ ಮಾತನಾಡುವವರ ವಿರುದ್ಧ ನಿಲ್ಲಲು ಈತನನ್ನು ಬಳಸಿಕೊಂಡ ಇಂದಿರಾಗಾಂಧಿಗೆ ಮುಂದೊಂದು ದಿನ ಈತನೇ ತನ್ನ ಪ್ರಾಣಕ್ಕೆ ಸಂಚಕಾರ ತರುತ್ತಾನೆಂಬ ದೂರದೃಷ್ಟಿ ಯಿರಲಿಲ್ಲ. ಕಾಂಗ್ರೆಸ್ಸಿನ ಮುಖ್ಯಮಂತ್ರಿ ದೇವರಾಜ್ ಅರಸ್ ಅವಧಿಯಲ್ಲಿ ಇಂದಿರೆಯ ಹೆಸರಿನಲ್ಲಿ ಸ್ಥಾಪಿಸಿದ ‘ಬ್ರಿಗೇಡ್’ನ ನೇತೃತ್ವ ವಹಿಸಿದ್ದ ಡಾನ್ ‘ಜೈರಾಜ್’ ಹೇಗೆ ಸರಕಾರಕ್ಕೆ ಸೆಡ್ಡು ಹೊಡೆದು ನಿಂತನೋ ಪಂಜಾಬಿನಲ್ಲಿ ‘ಬಿಂದ್ರನ್ ವಾಲಾ’ ನೋಡ ನೋಡುತ್ತಲೇ ಇಂದಿರೆಯ ವಿರುದ್ಧ ಸೆಟೆದು ನಿಂತ.

ಈತನ ಪ್ರತ್ಯೇಕ ಖಲಿಸ್ತಾನಿ ದೇಶದ ಹೋರಾಟಕ್ಕೆ ಪಾಕಿಸ್ತಾನದ ಬೆಂಬಲವೂ ಸಿಕ್ಕಿತ್ತು. ಈತನ ಪ್ರತ್ಯೇಕತಾವಾದದ ಉಪಟಳ
ಪಂಜಾಬಿನಾದ್ಯಂತ ಹಬ್ಬಿತ್ತು. ಅಲ್ಲಿ ಈತನ ವಿರುದ್ಧ ನಿಂತ ಮತ್ತೊಂದು ದೊಡ್ಡ ಗುಂಪೂ ಇತ್ತು. ತಾನೇ ಪೋಷಿಸಿದ ’ಬಿಂದ್ರನ್ ವಾಲಾ’ನನ್ನು ಮುಗಿಸಿಯೇ ತೀರಬೇಕೆಂಬ ನಿರ್ಧಾರಕ್ಕೆ ಇಂದಿರಾ ಗಾಂಧಿ ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆಗೆ ಕೈ ಹಾಕಿದ್ದರು. ಆದರೆ ಮಂದಿರವೊಂದರಲ್ಲಿ ಈತನನ್ನು ಮುಗಿಸಲು ಆ ಮಟ್ಟದ ಕಾರ್ಯಾಚರಣೆ ಬೇಕಿತ್ತಾ ಎಂಬ ಪ್ರಶ್ನೆ, 1986ರಲ್ಲಿ ನಡೆದ ’ಆಪರೇಷನ್ ಬ್ಲಾಕ್ ಥಂಡರ್’ ನಂತರ ಮೂಡತೊಡಗಿತ್ತು.

1984ರಲ್ಲಿ ನಡೆದ ‘ಆಪರೇಷನ್ ಬ್ಲೂ ಸ್ಟಾರ್’ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಭಾರತೀಯ ಸೇನೆ ಹಾಗೂ ವಿಶೇಷ ಕಾರ್ಯಾಚರಣೆ ಪಡೆ. ಭಾರತೀಯ ಬೇಹುಗಾರಿಕಾ ಸಂಸ್ಥೆ ಈ ಕಾರ್ಯಾಚರಣೆ ನಡೆಸಲು ಅನುಮತಿ ನೀಡಿರಲಿಲ್ಲ, ಒಳಗಿದ್ದ ಉಗ್ರರ ಸರಿಯಾದ ಮಾಹಿತಿ ಇಲ್ಲದ ಕಾರಣ ಸೈನಿಕರಿಗೆ ಕಠಿಣ ಕಾರ್ಯಾಚರಣೆ ಇದಾಗಿತ್ತು. ಉಗ್ರರ ಆಯುಧಗಳ ಬಗ್ಗೆ ಸರಿಯಾದ
ಮಾಹಿತಿಯಿರಲಿಲ್ಲ, ಉಗ್ರರನ್ನು ಸರಿಯಾಗಿ ಅಂದಾಜಿಸದ ಪಂಜಾಬ್ ಪೊಲೀಸರು ಸಂಪೂರ್ಣ ಮಾಹಿತಿ ಕಲೆ ಹಾಕಿರಲಿಲ್ಲ.

ತೀರಾ ಆತುರದಲ್ಲಿ ರಾಜಕೀಯ ನಿರ್ಧಾರ ತೆಗೆದುಕೊಂಡ ಇಂದಿರಾ ಗಾಂಧಿಗೆ ಕಾರ್ಯಾಚರಣೆ ಮುಗಿಸಬೇಕಿತ್ತಷ್ಟೆ. ತಯಾರಿಯ ಕಳಪೆ ಮಟ್ಟ ಎಷ್ಟಿತ್ತೆಂದರೆ ವಿಶೇಷ ಪಡೆ ಬಳಸಿದ ಗ್ಯಾಸ್ ತುಂಬಿದ ಬಲೂನುಗಳು ಬ್ಲಾಸ್ಟ್ ಆಗಲಿಲ್ಲ, ಬಲೂನುಗಳ ತಯಾರಿಕಾ ಅವಽಯೇ ಮುಗಿದು ಹೋಗಿತ್ತು. ಅತ್ತ ಸ್ವರ್ಣಮಂದಿರದ ಕಲ್ಯಾಣಿಯೊಳಗೆ ಈಜಿಕೊಂಡು ಉಗ್ರರ ಅಡಗುತಾಣದ ಬಳಿ ಹೋಗಲು ನಿರ್ಧರಿಸಿದ ವಿಶೇಷ ಪಡೆ, ಅಡಗುತಾಣದ ಬಳಿ ತಲುಪಿದ ಕೂಡಲೇ ಯಾರೋ ವಿದ್ಯುತ್ ದೀಪಗಳನ್ನು ಸ್ವಿಚ್ ಆನ್
ಮಾಡಿಬಿಟ್ಟರು.

ಬಿಳಿಯ ಮಾರ್ಬಲ್ ನಿಂದ ಕಟ್ಟಿದ್ದ ದೇವಸ್ಥಾನವಾಗಿದ್ದರಿಂದ ದೀಪದ ಬೆಳಕಿಗೆ ವಿಶೇಷ ಪಡೆಯ ಸೈನಿಕರು ಉಗ್ರರಿಗೆ ಅನಾ ಯಾಸವಾದ ಟಾರ್ಗೆಟ್ ಆಗಿಬಿಟ್ಟರು. ಹಲವು ಸೈನಿಕರಿಗೆ ಗುಂಡೇಟು ಬಿದ್ದವು, ಹಲವರ ಪ್ರಾಣ ಹಾನಿಯಾಯಿತು. ಸರಿಯಾದ ಯೋಜನೆ ಯಿಲ್ಲದ ಕಾರಣ ಕಾರ್ಯಾಚರಣೆ ಪ್ರಾರಂಭದಲ್ಲಿಯೇ ವಿಫಲವಾಗುವ ಲಕ್ಷಣ ಕಾಣುತ್ತಿತ್ತು. ಸೈನಿಕರು ಒಳನುಗ್ಗಿ ಕೊನೆಗೆ ಉಗ್ರರನ್ನು ಸದೆ ಬಡೆದರು. ಆದರೆ ಇಂದಿರೆಯ ಆತುರದ ನಿರ್ಧಾರ ಹಾಗೂ ಕರಾರುವಕ್ಕಾದ ಯೋಜನೆಯಿಲ್ಲದ ಕಾರಣ ‘ಗೋಲ್ಡನ್ ಟೆಂಪಲ್’ನಲ್ಲಿ ರಕ್ತದ ಕೋಡಿ ಹರಿಯಿತು.

ಕಾರ್ಯಾಚರಣೆಯ ಸೇಡು ತೀರಿಸಿಕೊಳ್ಳಲು ಉಗ್ರರು ಇಂದಿರಾ ಗಾಂಧಿಯವರನ್ನು ಹತ್ಯೆಗೈದರು. ನಂತರ ಪಂಜಾಬಿನಲ್ಲಿ ಸಿಖ್ಖರ ನರಮೇಧಗಳಾದವು, ಖಲಿಸ್ತಾನಿಗಳ ಉಪಟಳ ಮತ್ತಷ್ಟು ಹೆಚ್ಚಿತು. ಆಪರೇಷನ್ ಬ್ಲೂ ಸ್ಟಾರ್ ಆದ ನಂತರ ‘ಗೋಲ್ಡನ್ ಟೆಂಪಲ್’ ಖಾಲಿಸ್ತಾನಿ ಉಗ್ರರಿಗೆ ಸುರಕ್ಷಿತ ಅಡಗುತಾಣವಾಯಿತು. ಇಡೀ ರಾಜ್ಯದಲ್ಲಿ ಎಲ್ಲೇ ಉಗ್ರ ಚಟುವಟಿಕೆ ನಡೆದರೂ, ಖಾಲಿಸ್ತಾನಿ ಬೆಂಬಲಿಗರು ಅಲ್ಲಿ ಆಶ್ರಯ ಪಡೆಯುವ ಮೂಲಕ ಪೊಲೀಸರಿಗೆ ತಲೆ ನೋವಾಗುತ್ತಿದ್ದರು.

ಸರಕಾರವು ಮತ್ತೊಮ್ಮೆ ಅಲ್ಲಿ ಕಾರ್ಯಾಚರಣೆ ನಡೆಸುವುದಿಲ್ಲವೆಂಬ ಆತ್ಮವಿಶ್ವಾಸ ಉಗ್ರರಿಗಿತ್ತು. ತಾಯಿ ಮಾಡಿದ ಆತುರದ ತಪ್ಪನ್ನು ಮಾಡಲು ‘ರಾಜೀವ್ ಗಾಂಧಿ’ ಸಿದ್ಧವಿರಲಿಲ್ಲ. ಖಾಲಿಸ್ತಾನಿಗಳಿಗೆ ಪಾಕಿಸ್ತಾನದಿಂದ ಆಯುಧಗಳು ಸರಬರಾಜಾಗು ತ್ತಿದ್ದವು. ಪಂಜಾಬಿನ ಹಲವು ಯುವಕರು ಉಗ್ರರಾಗಿ ಬದಲಾಗುತ್ತಿದ್ದರು. ಸಿಖ್ಖರ ಪವಿತ್ರ ದೇವಸ್ಥಾನ ‘ಗೋಲ್ಡನ್ ಟೆಂಪಲ್’ಗೆ
ಹೋಗಲು ಜನ ಹೆದರುವ ಪರಿಸ್ಥಿತಿಯಿತ್ತು. ಹೇಗಾದರೂ ಉಗ್ರರನ್ನು ಆ ಮಂದಿರದಿಂದ ದೂರವಿಡಬೇಕೆಂಬ ನಿರ್ಧಾರಕ್ಕೆ ಬರಲೇಬೇಕಿತ್ತು. ಆದರೆ ಹಿಂದೆ ನಡೆಸಿದ ರೀತಿಯಲ್ಲಿ ರಕ್ತಸಿಕ್ತ ಕಾರ್ಯಾಚರಣೆ ನಡೆಸಲು ಸಾಧ್ಯವಿರಲಿಲ್ಲ.

ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಮೇಲೆ ಒತ್ತಡವಿತ್ತು. ದೇಶವಿರೋಧಿ ಕಮ್ಯುನಿಸ್ಟರು ಖಾಲಿಸ್ತಾನಿ ಉಗ್ರರಿಗೆ ಬೆಂಬಲ ವಾಗಿ ನಿಂತು ಮತ್ತಷ್ಟು ಪೋಷಿಸಿದರು. ಇವೆಲ್ಲಾ ಚಟುವಟಿಕೆಗಳು ನಡೆಯುತ್ತಿರುವ ಸಂದರ್ಭದಲ್ಲಿ, 1986ರ ಏಪ್ರಿಲ್ ತಿಂಗಳಲ್ಲಿ ಖಾಲಿಸ್ತಾನಿ ಉಗ್ರರ ದೊಡ್ಡ ಪಡೆಯೊಂದು ’ಗೋಲ್ಡನ್ ಟೆಂಪಲ್’ ನಲ್ಲಿ ಅಡಗಿಕೊಂಡಿತ್ತು. ಈ ಬಾರಿಯ ಕಾರ್ಯಾಚರಣೆಯನ್ನು ರಕ್ತದ ಕಲೆಗಳಿಲ್ಲದೇ ನಡೆಸಬೇಕಿತ್ತು.

ಪಂಜಾಬಿನ ಪೊಲೀಸರು ಹಿಂದಿನ ಕಾರ್ಯಾಚರಣೆಯಲ್ಲಿ ನಡೆದ ಪ್ರಮಾದಗಳನ್ನು ಇಲ್ಲಿ ಮಾಡುವಂತಿರಲಿಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದು ಭಾರತದ ಜೇಮ್ಸ್ ಬಾಂಡ್ ‘ಅಜಿತ್ ದೋವಲ್’. 1984ರ ಆಪರೇಷನ್ ಬ್ಲೂ ಸ್ಟಾರ್ ಸಂದರ್ಭದಲ್ಲಿ ದೋವಲ್ ಪಾಕಿಸ್ತಾನದಲ್ಲಿದ್ದರು. ಬಹುಶಃ ಅವರು ಅಂದು ಭಾರತದಲ್ಲಿದ್ದಿದ್ದರೆ ಇಂದಿರಾ ಗಾಂಧಿಯವರ ಪ್ರಾಣ ಉಳಿಯುತ್ತಿತ್ತು. ’ಅಜಿತ್ ದೋವಲ್’ ಒಂದು ಕಾರ್ಯಾಚರಣೆಯ ಪರಿಯನ್ನು ಮತ್ತೊಂದಕ್ಕೆ
ಬಳಸಿಕೊಳ್ಳುವುದು ತೀರಾ ವಿರಳ. ಈ ಬಾರಿಯ ಕಾರ್ಯಾಚರಣೆಯನ್ನು ತನ್ನ ಬುದ್ಧಿಶಕ್ತಿಯ ಮೂಲಕ ನಡೆಸುವ ಬಲೆ ಯೊಂದನ್ನು ದೋವಲ್ ಹೆಣೆದಿದ್ದರು.

ಉಗ್ರರ ಸಂಪೂರ್ಣ ಮಾಹಿತಿ ಪಡೆದ ದೋವಲ್, ಅವರ ಗುಂಪಿನಲ್ಲಿರುವ ಪ್ರಮುಖ ನಾಯಕರ ಆಯುಧಗಳ ಮಾಹಿತಿಯನ್ನು ಕಲೆ ಹಾಕಿದರು. ಸಂಪೂರ್ಣ ಮಾಹಿತಿ ದೊರೆತ ನಂತರವಷ್ಟೇ ದೋವಲ್ ’NSG’ ಪಡೆಯನ್ನು ಅಮೃತಸರಕ್ಕೆ ಕರೆಸಿದರು.
ಹೊರಗಡೆ ಇದ್ದ ಉಗ್ರರ ಸಂಬಂಧಿಗಳು, ಸ್ನೇಹಿತರನ್ನು ಭೇಟಿ ಮಾಡಿ ಬಹಳಷ್ಟು ಮಾಹಿತಿ ಸಂಗ್ರಹಿಸಿದ ದೋವಲ್ ಕರಾರು ವಕ್ಕಾದ ಯೋಜನೆಯೊಂದನ್ನು ತಯಾರಿ ಮಾಡಿದರು.

ತನ್ನ ಪ್ರಾಣವನ್ನೇ ಪಣಕ್ಕಿಟ್ಟ ದೋವಲ್, ಕಾರ್ಯಾಚರಣೆಯಲ್ಲಿ ಖಾಲಿಸ್ತಾನಿ ಬೆಂಬಲಿಗನ ರೀತಿಯಲ್ಲಿ ವೇಷ ತೊಟ್ಟು ಗೋಲ್ಡನ್ ಟೆಂಪಲ್ ಪ್ರವೇಶಿಸಿದ್ದರು. ಒಳ ಪ್ರವೇಶಿಸಿದ ’ದೋವಲ್’ರನ್ನು ನಂಬಲು ಉಗ್ರರು ತಯಾರಿರಲಿಲ್ಲ. ತನ್ನ ಮುಂದೆಯೇ ಉಗ್ರರು ಅನುಮಾನ ಬಂದ ಹಲವರನ್ನು ಕೊಂದಿದ್ದನ್ನು ದೋವಲ್ ನೋಡಿದ್ದರು. ತನ್ನ ನೆತ್ತಿಯ ಮೇಲೆ ಉಗ್ರರು ’ಅಓ೪೭’ ಬಂದೂಕನ್ನು ಇಟ್ಟು ಅನುಮಾನ ವ್ಯಕ್ತಪಡಿಸಿದರೂ ಸಹ ದೋವಲ್ ತಾಳ್ಮೆಯಿಂದಿದ್ದರು.

ಒಳಗಿನ ಸಂಪೂರ್ಣ ಮಾಹಿತಿ ಕಲೆ ಹಾಕಿದ ದೋವಲ್ ಹಲವು ತೊಡಕುಗಳನ್ನು ಒಳಗಿನಿಂದಲೇ ಕುಳಿತು ನಿವಾರಿಸಿದ್ದರು. ಉಗ್ರರ ಮಾನಸಿಕತೆಯೊಂದಿಗೆ ಆಟವಾಡಿದ ದೋವಲ್, ಕಟ್ಟರ್‌ವಾದಿಗಳಲ್ಲದ ಹಲವರನ್ನು ತನ್ನ ಖೆಡ್ಡಾಕ್ಕೆ ಕೆಡವಿಕೊಂಡು ಶರಣಾಗತಿಯ ಮನಸ್ಥಿತಿಗೆ ತಳ್ಳುವಲ್ಲಿ ಯಶಸ್ವಿಯಾದರು. ಹೊರಗೆ ಜಮಾಯಿಸಿರುವ ಪಂಜಾಬ್ ಪೊಲೀಸರ ಆಕ್ರಮಣಕಾರಿ ಮನಸ್ಥಿತಿ, ಮತ್ತೊಮ್ಮೆ 1984ರ ಘಟನೆ ಪುನರಾವರ್ತನೆಯಾದರೆ ನೀವೆಲ್ಲರೂ ಸಾಯುತ್ತೀರಿ ಬದಲಾಗಿ ಶರಣಾಗತಿಯೊಂದೇ ಸೂಕ್ತ ಪರಿಹಾರವೆಂಬೆಲ್ಲಾ ಕಥೆಗಳನ್ನು ದೋವಲ್ ಉಗ್ರರಿಗೆ ಹೇಳುತ್ತಿದ್ದರು.

ಕಾರ್ಯಾಚರಣೆಯ ಪ್ರಮುಖ ಭಾಗವಾಗಿ ನಾಲ್ವರು ’ಸ್ನೈಪರ್’ಗಳನ್ನು ಮಂದಿರದ ಪ್ರಮುಖ ಜಾಗಗಳಲ್ಲಿ ನಿಯೋಜಿಸಲಾಗಿತ್ತು. ಅಪ್ಪಿತಪ್ಪಿ ಉಗ್ರರು ಅಡಗುತಾಣದಿಂದ ಹೊರ ಬಂದರೆ ಅವರನ್ನು ಶೂಟ್ ಮಾಡಿ ಉಳಿದ ಉಗ್ರರಿಗೆ ಭಯ ಪಡಿಸುವ ತಂತ್ರ ಇದಾಗಿತ್ತು. ಗೊಂದಲಮಯ ಮನಸ್ಥಿತಿಯಿಂದಾಗಿ ಇಬ್ಬರು ಉಗ್ರರು ಹೊರಬಂದಾಗ ’ಸ್ನೈಪರ್’ಗಳು ಶೂಟ್ ಮಾಡಿದರು. ಇದನ್ನು ಕಂಡ ಇತರ ಉಗ್ರರು ಭಯಗೊಂಡು ತಮ್ಮಲ್ಲಿದ್ದ ’AK-47’ ಬಂದೂಕುಗಳನ್ನು ಬಳಸಲೇ ಇಲ್ಲ. ಸುಮಾರು ಘಂಟೆಗಳ
ಕಾಲ ಉಗ್ರರ ಮನಸ್ಥಿತಿಯೊಂದಿಗೆ ಆಟವಾಡಿದ ದೋವಲ್ ತನ್ನ ಕಾರ್ಯಾಚರಣೆಯಲ್ಲಿ ಸಂಪೂರ್ಣರಾಗಿ ಮಗ್ನರಾಗಿದ್ದರೇ ಹೊರತು, ತನ್ನ ಪ್ರಾಣದ ಬಗ್ಗೆ ಯೋಚಿಸಿರಲಿಲ್ಲ.

ತಾನು ಅಂದುಕೊಂಡಂತೆ ಉಗ್ರರ ಮನಸ್ಥಿತಿ ಬದಲಾಗುತ್ತಿರುವುದು ’ದೋವಲ್’ಗೆ ತಿಳಿಯಿತು. ಉಗ್ರರು ಅಡಗಿದ ತಾಣಗಳಲ್ಲಿ ಕುಡಿಯುವ ನೀರು, ಆಹಾರ ಪದಾರ್ಥಗಳು ಕಾಲಿಯಾಗಿದ್ದವು. ಇದನ್ನೇ ಬಳಸಿಕೊಂಡ ದೋವಲ್ ಉಗ್ರರನ್ನು ಮತ್ತಷ್ಟು ಮಾನಸಿಕವಾಗಿ ಕುಗ್ಗುವಂತೆ ಮಾಡಿದ್ದರು.’ಸ್ನೈಪರ್’ಗಳ ಭಯದಿಂದ ನೀರಿಗಾಗಿ ದೇವಸ್ಥಾನದ ಸುತ್ತಲಿನ ಕಲ್ಯಾಣಿಯ ಬಳಿ ಹೋಗಲು ಉಗ್ರರಿಗೆ ಸಾಧ್ಯವಾಗಲಿಲ್ಲ. ಉಗ್ರರ ಸಂಪೂರ್ಣ ಮನಸ್ಥಿತಿ ಹತೋಟಿಗೆ ತೆಗೆದುಕೊಂಡ ನಂತರ ದೋವಲ್ ಯಾವುದೊ
ನೆಪವೊಡ್ಡಿ ಹೊರಬಂದು, ಪೊಲೀಸ್ ಹಾಗೂ ಎನ್‌ಎಸ್‌ಜಿ ಕಮಾಂಡೋಗಳಿಗೆ ಸನ್ನದ್ಧರಾಗಲು ಹೇಳಿದರು.

ರಾತ್ರೋರಾತ್ರಿ ಪೊಲೀಸರು ಸುತ್ತುವರೆದಿದ್ದ ಜಾಗಗಳ ಬಳಿ ನಿಂತ ಕಮಾಂಡೋಗಳು ತುರ್ತು ಕಾರ್ಯಾಚರಣೆಗೆ ಸನ್ನದ್ಧರಾದರು. ಪಂಜಾಬ್ ಪೊಲೀಸಿನ ಹಿರಿಯ ಅಧಿಕಾರಿಯೊಬ್ಬರು ಮೈಕಿನೊಂದಿಗೆ ಜೋರಾಗಿ ಕೂಗುತ್ತ ಉಗ್ರರನ್ನು ಶರಣಾಗಲು ಹೇಳು ತ್ತಿದ್ದರು. ಸೇಫ್ ಪ್ಯಾಸೇಜ್ ಮೂಲಕ ಶರಣಾದರೆ ನಿಮಗೆ ತೊಂದರೆಯಾಗುವುದಿಲ್ಲವೆಂದು ಹೇಳಿ, ಉಗ್ರರು ಬರಬೇಕಿರುವ ಪ್ರತಿಯೊಂದು ದಾರಿಯನ್ನೂ ಸೂಕ್ಷ್ಮವಾಗಿ ಹೇಳುತ್ತಿದ್ದರು. ಕೆಲವು ಉಗ್ರರು ‘ಸೈನೆಡ್’ ನುಂಗಿ ಆತ್ಮಹತ್ಯೆ ಮಾಡಿಕೊಂಡರು, ನೋಡನೋಡುತ್ತಲೇ ದೇವಸ್ಥಾನದಿಂದ ಸುಮಾರು ೨೦೦ ಉಗ್ರರು ಹೊರಬಂದು ಪೊಲೀಸರಿಗೆ ತಮ್ಮ ಆಯುಧಗಳ ಸಮೇತ ಶರಣಾದರು.

ಇತಿಹಾಸದಲ್ಲಿ ಮೊಟ್ಟಮೊದಲ ಬಾರಿಗೆ ಕೇಂದ್ರ ಸರಕಾರ ‘ಮಿಲಿಟರಿ’ ಮಟ್ಟದ ’ಕೀರ್ತಿ ಚಕ್ರ’ ಪ್ರಶಸ್ತಿಯನ್ನು ಕಾರ್ಯಾಚರಣೆಯ ಸೂತ್ರಧಾರ ‘ಅಜಿತ್ ದೋವಲ್’ರಿಗೆ ನೀಡಿತ್ತು. ’ಆಪರೇಷನ್ ಬ್ಲೂ ಸ್ಟಾರ್’ ನಂತರ ಪಂಜಾಬಿನ ಜನ ಧೈರ್ಯದಿಂದ ಜೀವನ ನಡೆಸುವಂತಾಯಿತು. ಖಾಲಿಸ್ತಾನಿಗಳ ಉಪಟಳವೂ ಕಡಿಮೆಯಾಯಿತು. ಕಡಿಮೆ ಬಂದೂಕಿನ ಗುಂಡುಗಳನ್ನು ಬಳಸಿ ಕೇವಲ ಧೈರ್ಯ, ಬುದ್ಧಿವಂತಿಕೆಯ ಮೂಲಕ ಕಾರ್ಯಾಚರಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ’ಅಜಿತ್ ದೋವಲ್’ರ ಕಾರ್ಯ ದೇಶವೇ ಮೆಚ್ಚುವಂತದ್ದು.

ಕಾರ್ಯಾಚರಣೆಯ ನಂತರ ಗೋಲ್ಡನ್ ಟೆಂಪಲ್ ಶಾಂತವಾಯಿತು. ನಂತರ ಎಂದೂ ಸಹ ಅದು ಉಗ್ರರ ಅಡಗುತಾಣ ವಾಗಲಿಲ್ಲ. ತನ್ನ ಬುದ್ದಿವಂತಿಕೆಯಿಂದ ಹತ್ತಾರು ಕಾರ್ಯಾಚರಣೆಗಳನ್ನು ಮಾಡಿದ್ದ ದೋವಲ್ ಕಳೆದ ಎಂಟು ವರ್ಷಗಳಲ್ಲಿ ಭಯೋತ್ಪಾದಕ ಚಟುವಟಿಕೆಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿದ್ದಾರೆ. ಭಾರತದ ಜೇಮ್ಸ್ ಬಾಂಡ್ ‘ಅಜಿತ್ ದೋವಲ್’ ರನ್ನು ಯಾಕೆ ರಾಷ್ಟ್ರೀಯ ಭದ್ರತಾ ಸಲಹೆಗಾರರನ್ನಾಗಿ ಮಾಡಲಾಯಿತೆಂಬ ಪ್ರಶ್ನೆಗೆ ಉತ್ತರ ಸಿಕ್ಕಿರಬೇಕಲ್ಲ