Saturday, 7th September 2024

ಕುರಿಮರಿಯ ರಕ್ತವನ್ನು ಮನುಷ್ಯರಿಗೆ ನೀಡಿದರು !

ಹಿಂದಿರುಗಿ ನೋಡಿದಾಗ

ಮೊಘಲ್ ಸಾಮ್ರಾಜ್ಯದ ಷಹನ್‌ಶಾ ಷಹಜಾನನ ಮಡದಿ ಅರ್ಜುಮಂದ್ ಬಾನು ಬೇಗಮ್ (೧೫೯೩-೧೬೩೧) ಅತ್ಯಂತ ರೂಪಸಿ. ಆಕೆಯು ಅರಮನೆಯ ನೆಚ್ಚಿನ ಆಭರಣ ಎಂಬ ಅಭಿದಾನಕ್ಕೆ ಪಾತ್ರಳಾಗಿ ಮುಮ್ತಾಜ್ ಮಹಲ್ ಎಂಬ ಬಿರುದನ್ನು ಪಡೆದಳು. ೧೪ನೆಯ ಪ್ರಸವ. ವಿಪರೀತ ರಕ್ತ ಸ್ರಾವವಾಯಿತು. ಆ ರಕ್ತಸ್ರಾವದ ಘಾತವನ್ನು ತಾಳಿಕೊಳ್ಳಲಾಗದೆ ಮುಮ್ತಾಜ್ ಮಹಲ್ ತೀರಿಕೊಂಡಳು. ಆಕೆಗಾಗಿ, ಆಕೆಯ ಹೆಸರಿನಲ್ಲಿ ತಾಜ್ ಮಹಲ್ ಎನ್ನುವ ಸುಂದರ
ಸಮಾಧಿಯನ್ನು ಷಹಜಹಾನ್ ನಿರ್ಮಿಸಿದ ಎನ್ನುತ್ತದೆ ಇತಿಹಾಸ.

ಇತಿಹಾಸದಲ್ಲಿ ಪ್ರಸವೋತ್ತರ ರಕ್ತಸ್ರಾವದಿಂದ ಮರಣಿಸಿದವರಲ್ಲಿ ಮುಮ್ತಾಜ್ ಮೊದಲನೆಯವಳೂ ಅಲ್ಲ, ಕೊನೆಯವಳೂ ಅಲ್ಲ! ಮಾನವ ಜನಾಂಗವು ರೂಪುಗೊಂಡ ದಿನದಿಂದ ಹಿಡಿದು, ಇಂದಿನವರೆಗೂ ಅನೇಕ ತಾಯಂದಿರು ಪ್ರಸವಾವಧಿಯ ಅಥವ ಪ್ರಸವೋತ್ತರ ರಕ್ತಸ್ರಾವದಿಂದ ಸಾಯುವುದು ಸರ್ವಸಾಮಾನ್ಯವಾಗಿರುವ ವಿಚಾರವಾಗಿದೆ. ಇಂದೂ ಸಹ ತಾಯಂದಿರು ಮರಣಿಸುತ್ತಿರುವರಾದರೂ ಅಂತಹವರ ಸಂಖ್ಯೆಯು ಗಣನೀಯವಾಗಿ ಕಡಿಮೆಯಾಗಿದೆ. ಅದಕ್ಕೆ ಕಾರಣ ರಕ್ತ ಪೂರಣ ಅಥವ ಬ್ಲಡ್ ಟ್ರಾನ್ಸ್ ಫ್ಯೂಶನ್! ಒಬ್ಬ ಆರೋಗ್ಯವಂತನ ಶರೀರದಲ್ಲಿರುವ ರಕ್ತವನ್ನು ನಿಗದಿತ ಪ್ರಮಾಣದಲ್ಲಿ ಸಂಗ್ರಹಿಸಿ, ಅದನ್ನು ಅಗತ್ಯ ಇರುವವರ ದೇಹಕ್ಕೆ ಪೂರೈಸುವ ಪ್ರಕ್ರಿಯೆಯೇ ರಕ್ತಪೂರಣ.

ರಕ್ತವು ಜೀವದ್ರವ. ರಕ್ತವು ನಮ್ಮ ದೇಹದ ಪ್ರತಿಯೊಂದು ಜೀವಕೋಶಕ್ಕೆ ಅಗತ್ಯವಾದ ಗ್ಲೂಕೋಸ್ ಮತ್ತು ಆಕ್ಸಿಜನ್ ನನ್ನು ಪೂರೈಸುತ್ತದೆ. ಹಾಗೆಯೇ ಜೀವಕೋಶಗಳ ದೈನಂದಿನ ಕೆಲಸಕಾರ್ಯಗಳಿಗೆ, ಬೆಳವಣಿಗೆಗೆ ಹಾಗೂ ಪುನರುತ್ಪಾದನಾ ಕಾರ್ಯಗಳಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸು
ತ್ತದೆ. ಹಾಗೆಯೇ ಜೀವಕೋಶಗಳು ವಿಸರ್ಜಿಸುವ ತ್ಯಾಜ್ಯಗಳನ್ನು ಕ್ಲುಪ್ತವಾಗಿ ವಿಲೇವಾರಿ ಮಾಡಲು ನೆರವಾಗುತ್ತದೆ. ಹಾಗಾಗಿ ನಮ್ಮ ಶರೀರದಲ್ಲಿರುವ ರಕ್ತದ ೪೦% ಹೆಚ್ಚು ಭಾಗವು ನಷ್ಟವಾದರೆ ವ್ಯಕ್ತಿಯು ಸಾಯುವ ಸಾಧ್ಯತೆಯಿರುತ್ತದೆ. ಈ ಹಿನ್ನೆಲೆಯಲ್ಲಿ ಅಪಘಾತಗಳು, ಪ್ರಸವ ಹಾಗೂ ಕೆಲವು ಶಸ್ತ್ರ ಚಿಕಿತ್ಸೆಗಳಲ್ಲಿ, ರಕ್ತಪೂರಣವನ್ನು ಸಕಾಲದಲ್ಲಿ ಮಾಡುವುದರಿಂದ ಜೀವವನ್ನು ಉಳಿಸಲು ಸಾಧ್ಯವಾಗುತ್ತದೆ.

ಮನುಕುಲದ ಇತಿಹಾಸದಲ್ಲಿ ರಕ್ತಪೂರಣವು ಬೆಳೆದುಬಂದ ದಾರಿಯು ಕುತೂಹಲಕರವೂ ಹಾಗೂ ರೋಚಕವೂ ಆಗಿದೆ. ಜಗತ್ತಿನಲ್ಲಿ ಯಾರು ಮೊತ್ತಮೊದಲ ರಕ್ತಪೂರಣವನ್ನು ಯಶಸ್ವಿಯಾಗಿ ಮಾಡಿದರು ಎನ್ನುವುದು ನಮಗೆ ತಿಳಿದು ಬಂದಿಲ್ಲ. ಆದರೆ ಲಭ್ಯ ದಾಖಲೆಗಳು ಮಧ್ಯಯುಗದ
ಇಂಕಾ ನಾಗರಿಕತೆಯತ್ತ ಬೆರಳು ಮಾಡುತ್ತವೆ. ೧೬ನೆಯ ಶತಮಾನದ ಆರಂಭದಲ್ಲಿ ಯೂರೋಪ್ ಖಂಡದ ಪೋರ್ಚುಗೀಸರು, ಸ್ಪೇಯಿನಿಗರು, ಬ್ರಿಟೀಷರು, ಫ್ರೆಂಚರು ಹಾಗೂ ಡಚ್ಚರು, ಯೂರೋಪ್ ಖಂಡವನ್ನು ತೊರೆದು ವಿಶ್ವದ ಇತರ ಭೂಖಂಡಗಳನ್ನು ಹುಡುಕಲು ಹೊರಟರು.

ಹಾಗೆ ಹೊರಟ ಕೆಲವು ಸ್ಪೇಯಿನಿಗರು ಇಂಕಾ ಸಾಮ್ರಾಜ್ಯವನ್ನು ತಲುಪಿದರು. ಇಂದಿನ ದಕ್ಷಿಣ ಅಮೆರಿಕದ ಯೂಕಡರ್ ಮತ್ತು ಚಿಲಿ ಪ್ರಾಂತ್ಯಗಳಲ್ಲಿ ಅಂದಿನ ಇಂಕಾ ಸಾಮ್ರಾಜ್ಯವು ಹರಡಿತ್ತು. ಇಲ್ಲಿನ ವೈದ್ಯರು ರಕ್ತಪೂರಣವನ್ನು ಯಶಸ್ವಿಯಾಗಿ ಮಾಡುತ್ತಿದ್ದರು ಎಂದು ಸ್ಪೇಯ್ನ್ ವ್ಯಾಪಾರಿಗಳು ದಾಖಲಿಸಿರುವುದುಂಟು. ಇದ್ದರೂ ಇರಬಹುದು. ಇಂಕಾ ಸಾಮ್ರಾಜ್ಯದಲ್ಲಿ ವಾಸ ಮಾಡುತ್ತಿದ್ದವರ ರಕ್ತದ ಗುಂಪು ಒ ಆಗಿತ್ತು. ಹಾಗಾಗಿ ಒಬ್ಬರ ರಕ್ತವನ್ನು ಮತ್ತೊಬ್ಬರಿಗೆ ನಿಜಕ್ಕೂ ಪೂರಣವನ್ನು ಮಾಡಿದ್ದರೆ, ಅದು ಯಶಸ್ವಿಯಾಗುವ ಸಾಧ್ಯತೆಯು ಹೆಚ್ಚಿತ್ತು. ಈ ಬಗ್ಗೆ ಹೇಳಿಕೆಗಳು ಇವೆಯೋ ಹೊರತು ನಿಖರ ದಾಖಲೆಗಳು ದೊರೆತಿಲ್ಲ.

ಒಬ್ಬರ ರಕ್ತವನ್ನು ಅಗತ್ಯವಿರುವ ಮತ್ತೊಬ್ಬರಿಗೆ ನೀಡಬಹುದು ಎಂಬ ಪರಿಕಲ್ಪನೆಯು ಯೂರೋಪಿಯನ್ ವೈದ್ಯರಲ್ಲಿ ಬರಲು ಮುಖ್ಯ ಕಾರಣ ವಿಲಿಯಂ ಹಾರ್ವೆ (೧೫೭೮- ೧೬೫೭). ವಿಲಿಯಂ ಹಾರ್ವೆ ಇಂಗ್ಲಿಷ್ ವೈದ್ಯ. ಹೃದಯ ಪರಿಚಲನೆಯನ್ನು ವಿವರಿಸಿದವನು. ಇವನ ಡಿ ಮೋಟು
ಕಾರ್ಟಿಸ್ ಗ್ರಂಥವು ೧೬೨೮ರಲ್ಲಿ ಪ್ರಕಟವಾಯಿತು. ಹೃದಯ, ಧಮನಿ ಮತ್ತು ಸಿರೆಗಳ ಪರಿಚಯವು ನಿಖರವಾಗಿ ಎಲ್ಲರಿಗೂ ಲಭಿಸಿತು. ಈ ಹಿನ್ನೆಲೆಯಲ್ಲಿ ರಕ್ತ ಪೂರಣವನ್ನು ಮಾಡುವ ಮೊದಲ ಸಾಹಸವನ್ನು ರಾಯಲ್ ಸೊಸೈಟಿಯ ಇಂಗ್ಲಿಷ್ ವೈದ್ಯ ರಿಚರ್ಡ್ ಲೋವರ್ (೧೬೩೧-೧೬೯೧) ಕೈಗೊಂಡ. ಇವನು ರಕ್ತಪೂರಣ ಹಾಗೂ ಹೃದಯ-ಶ್ವಾಸ ಕೋಶಗಳ ಪರಿಚಲನೆಯ ಬಗ್ಗೆ ವಿಸ್ತೃತವಾಗಿ ತನ್ನ ಟ್ರಾಕ್ಟಸ್ ಡಿ ಕಾರ್ಡೆ ಪುಸ್ತಕದಲ್ಲಿ ಬರೆದ.

೧೯೬೫ರ ಫೆಬ್ರವರಿಯಲ್ಲಿ ಪ್ರಾಣಿಗಳ ಮೇಲೆ ಒಂದು ಪ್ರಯೋಗವನ್ನು ಮಾಡಿದ. ಅದನ್ನು ಅವನ ಮಾತುಗಳಲ್ಲಿಯೇ ಕೇಳೋಣ ‘ಮಧ್ಯಮ ಗಾತ್ರದ ಒಂದು ನಾಯಿಯನ್ನು ಆರಿಸಿಕೊಂಡೆ. ಅದರ ಕಂಠಸಿರೆಯನ್ನು (ಜೂಗುಲಾರ್ ವೇಯ್ನ್) ಕೊಯ್ದೆ. ಅದರ ಮೂಲಕ ಆ ನಾಯಿಯಲ್ಲಿದ್ದ ಎಲ್ಲ ರಕ್ತವನ್ನು ಹೊರಹರಿಸಿದೆ. ಈಗ ಆ ನಾಯಿಯ ಶಕ್ತಿಯು ಪೂರ್ಣ ಉಡುಗಿತ್ತು. ಇನ್ನೊಂದು ದೊಡ್ಡ ಗಾತ್ರದ ಮ್ಯಾಸ್ಟಿ- ನಾಯಿಯ ರಕ್ತವನ್ನು ಸಂಗ್ರಹಿಸಿದೆ. ಅದನ್ನು ಮೊದಲ ನಾಯಿಯ ಕಂಠ ಧಮನಿಯ (ಸರ್ವೈಕಲ್ ಆರ್ಟರಿ) ಮೂಲಕ ಪೂರೈಸಿದೆ.

ದೊಡ್ಡ ನಾಯಿಯ ರಕ್ತವು ಮಧ್ಯಮ ಗಾತ್ರದ ನಾಯಿಯ ಒಡಲನ್ನು ತುಂಬಿತು. ಆನಂತರ ಈ ನಾಯಿಯ ಕಂಠಧಮನಿ ಮತ್ತು ಕಂಠಸಿರೆಗಳನ್ನು ಹೊಲಿದೆ. ದೊಡ್ಡ ನಾಯಿಯ ರಕ್ತವನ್ನು ದಾನವನ್ನಾಗಿ ಪಡೆದ ಈ ಮಧ್ಯಮ ಗಾತ್ರದ ನಾಯಿಯು ಚೇತರಿಸಿಕೊಂಡಿತು ಹಾಗೂ ಆರಾಮವಾಗಿತ್ತು’
ಎಂದು ದಾಖಲಿಸಿದ. ಹೀಗೆ ಜಗತ್ತಿನ ಮೊದಲ ಪ್ರಾಣಿ- ಪ್ರಾಣಿ ರಕ್ತ ಪೂರಣವನ್ನು ಯಶಸ್ವಿಯಾಗಿ ನೆರವೇರಿಸಿದ. ರಾಯಲ್ ಸೊಸೈಟಿಯ ಅಧ್ಯಕ್ಷನಾಗಿದ್ದ ವಿಖ್ಯಾತ ವಿಜ್ಞಾನಿ ರಾಬರ್ಟ್ ಬಾಯ್ಲ್ (೧೬೨೭-೧೬೯೧) ರಿಚರ್ಡ್ ಲೋವರ್ ನನ್ನು ಆಹ್ವಾನಿಸಿದ. ರಾಯಲ್ ಸೊಸೈಟಿಯ ಸದಸ್ಯರ ಮುಂದೆ ಈ ಪ್ರಯೋಗವನ್ನು ಪುನರಾವರ್ತಿಸುವಂತೆ ಕೇಳಿದ. ಅದೇ ವರ್ಷ ಡಿಸೆಂಬರ್ ತಿಂಗಳಿನಲ್ಲಿ ಲೋವರ್ ಪ್ರಾಣಿ-ಪ್ರಾಣಿ ರಕ್ತಪೂರಣ ಪ್ರಯೋಗವನ್ನು ಯಶಸ್ವಿ
ಯಾಗಿ ಮಾಡಿ ತೋರಿಸಿದ.

ರಿಚರ್ಡ್ ಲೋವರನ ಯಶಸ್ವೀ ಪ್ರಯೋಗವು ಫ್ರೆಂಚರನ್ನು ಕೆರಳಿಸಿತು. ಯಾವಾಗಲೂ ಬ್ರಿಟನ್ ಮತ್ತು ಫ್ರಾನ್ಸ್ ನಡುವೆ ತಿಕ್ಕಾಟ ಇದ್ದೇ ಇತ್ತು. ಅದು ರಾಜಕೀಯ ವನ್ನು ಮೀರಿ ಸಾಮಾಜಿಕ, ವೈಜ್ಞಾನಿಕ ಹಾಗೂ ವೈದ್ಯಕೀಯ ಕ್ಷೇತ್ರಗಳನ್ನೂ ಕಾಡಿದ್ದು ನಿಜಕ್ಕೂ ಒಂದು ದುರಂತ. ಫ್ರಾನ್ಸ್ ದೇಶದ ಅರಸ ಲೂಯಿ-೧೪. ಆತನ ಖಾಸಗೀ ವೈದ್ಯ ಡಾ.ಜೀನ್ ಬ್ಯಾಪ್ಟಿಸ್ಟ್ ಡೆನಿಸ್ (೧೬೩೫-೧೭೦೪) ಬ್ರಿಟೀಷರು ಪ್ರಾಣಿಯಿಂದ ಪ್ರಾಣಿಗೆ ರಕ್ತಪೂರಣವನ್ನು ಯಶಸ್ವಿ ಯಾಗಿ ಮಾಡಿದ್ದು ಅವರ ಹೊಟ್ಟೆಯನ್ನು ಉರಿಸಿತು. ಡೆನಿಸ್, ತಾನು ಬ್ರಿಟೀಷರಿಗಿಂತಲೂ ಒಂದು ಕೈ ಮೇಲೆನಿಸುವ ಪ್ರಯೋಗವನ್ನು ಮಾಡಬೇಕೆಂದು ನಿರ್ಧರಿಸಿದ.

ಕೊನೆಗೆ ಪ್ರಾಣಿಯ ರಕ್ತವನ್ನು ಮನುಷ್ಯನಿಗೆ ಪೂರಣ ಮಾಡುವ ಪ್ರಯೋಗವನ್ನು ಕೈಗೊಂಡ. ಈ ಪ್ರಯೋಗವನ್ನು ಜೂನ್ ೧೫, ೧೬೬೭ರಂದು ನಡೆಸಿದ. ೧೫ ವರ್ಷದ ಹುಡುಗ. ಅವನಿಗೆ ೨ ತಿಂಗಳಿನಿಂದ ಜ್ವರವು ಬಿಟ್ಟು ಬಿಟ್ಟು ಬರುತ್ತಿತ್ತು. ಹಾಗಾಗಿ ಸ್ಥಳೀಯ ಕ್ಷೌರಿಕ-ಶಸ್ತ್ರವೈದ್ಯನೊಬ್ಬ ಜ್ವರವು ಕಡಿಮೆಯಾಗುತ್ತೆ ಎಂದು ಹೇಳಿ ಆ ಹುಡುಗನಿಗೆ ೨೦ ಬಾರಿ ಜಿಗಣೆಯನ್ನು ಕಚ್ಚಿಸಿದ. ಸಾಕಷ್ಟು ರಕ್ತವಿಮೋಚನೆಯನ್ನು ಮಾಡಿದ. ಜ್ವರ ಕಡಿಮೆ
ಯಾಗಲಿಲ್ಲ. ಆದರೆ ಹುಡುಗ ತೀರಾ ಬಳಲಿಹೋಗಿದ್ದ. ಜ್ವರವು ಮಾತ್ರ ಲವಲೇಶವೂ ಕಡಿಮೆಯಾಗಿರಲಿಲ್ಲ. ಡೆನಿಸ್ ಅವನನ್ನು ಕರೆತಂದ. ಪಾಲ್ ಎಮರಿಜ಼್ ಎಂಬ ಕ್ಷೌರಿಕನ- ಶಸ್ತ್ರವೈದ್ಯನ (ಬಾರ್ಬರ್-ಸರ್ಜನ್) ನೆರವನ್ನು ಪಡೆದ.

ಒಂದು ಕುರಿಮರಿಯ ದೇಹದಿಂದ ೧೨ ಔನ್ಸ್ (೩೫೪ ಎಂ. ಎಲ್) ರಕ್ತವನ್ನು ಹೊರತೆಗೆದ. ಅದನ್ನು ಹುಡುಗನ ದೇಹದೊಳಗೆ ಪೂರಣವನ್ನು ಮಾಡಿದ. ಹುಡುಗನು ಅದೃಷ್ಟವ ಶಾತ್ ಬದುಕಿದ. ಎರಡನೆಯ ಪ್ರಯೋಗದಲ್ಲಿ ಓರ್ವ ಕೂಲಿಕಾರನಿಗೆ ಹೀಗೆಯೇ ಕುರಿಮರಿಯ ರಕ್ತವನ್ನು ಪೂರೈಸಿದ. ಅವನೂ ಹೇಗೋ ಬದುಕಿಕೊಂಡ. ಡೆನಿಸ್‌ನ ಮೂರನೆಯ ರೋಗಿ, ಸ್ವೀಡಿಶ್ ಶ್ರೀಮಂತ ರಾಜಕಾರಣಿ ಗುಸ್ತಾವ್ ಬಾಂಡ್ (೧೬೨೦-೧೬೬೭). ಅವನಿಗೆ ಎರಡು ಸಲ ಕುರಿ ಮರಿಯ ರಕ್ತವನ್ನು ಪೂರೈಸಿದ. ಎರಡನೆಯ ಸಲ ರಕ್ತವನ್ನು ಕೊಡುವಾಗ ಬಾಂಡ್ ಮರಣಿಸಿದ.

ಆಂಟಾಯಿನ್ ಮೌರಾಯ್ ಎಂಬ ಹುಚ್ಚನು ಪ್ಯಾರಿಸ್ ನಗರದಲ್ಲಿ ಓಡಾಡುತ್ತಿದ್ದ. ಪ್ರಾಣಿಗಳಲ್ಲಿ ಕುರಿಮರಿಯು ಅತ್ಯಂತ ಮುಗ್ಧವಾದ ಪ್ರಾಣಿ. ಹಾಗಾಗಿ ಅದರ ರಕ್ತವೂ ಅತ್ಯಂತ ಮುಗ್ಧ. ಇಂತಹ ಮುಗ್ಧ ಪ್ರಾಣಿಯ ರಕ್ತವು ಪರಮಪವಿತ್ರ ಎಂಬ ನಂಬಿಕೆಯಿತ್ತು. ಹಾಗಾಗಿ ಡೆನಿಸ್ ಆ ಹುಚ್ಚನನ್ನು ಹಿಡಿದು
ತಂದು ರಕ್ತ ಅವನಿಗೆ ಕುರಿಮರಿಯ ರಕವನ್ನು ಪೂರಣ ಮಾಡಿದ. ಮೂರು-ನಾಲ್ಕು ಸಲ ಮಾಡಿದ. ಆದರೆ ನಾಲ್ಕನೆಯ ಪ್ರಯತ್ನದಲ್ಲಿ ಅವನು ಸತ್ತ. ಡೆನಿಸ್ ಮಾಡಿದ ರಕ್ತಪೂರಣದಿಂದಲೇ ಆತ ಸತ್ತ ಎಂದು ಆತನ ಹೆಂಡತಿ ಮೊಕದ್ದಮೆ ಹೂಡಿದಳು. ವಿಚಾರಣೆಯಲ್ಲಿ ಆತ ಶಂಖ ಪಾಷಾಣದ ವಿಷ ಪ್ರಾಶನದಿಂದ ಸತ್ತಿರುವುದಾಗಿ ಋಜು ವಾತಾಯಿತು.

ಫ್ರಾನ್ಸಿನ ಡೆನಿಸ್ ಪ್ರಯೋಗವು ತನ್ನ ಪ್ರಯೋಗವವನ್ನು ಮುಗಿಸಿ ಸುಮಾರು ೬ ತಿಂಗಳು ಆಗುತ್ತಿರುವಂತೆಯೇ ರಿಚರ್ಡ್ ಲೋವರ್ ಸ್ಪರ್ಧೆಗಿಳಿದ. ಡೆನಿಸ್ ಮಾಡಿದಂತಹ ಪ್ರಯೋಗಗಳನ್ನು ತಾನೂ ಏಕೆ ಮಾಡಬಾರದು ಎಂದು ರಾಯಲ್ ಸೊಸೈಟಿಯ ಸದಸ್ಯರ ಮುಂದೆ ಅಹವಾಲನ್ನು ಸಲ್ಲಿಸಿದ. ಪ್ರಯೋಗ ವನ್ನು ಮಾಡಲು ಅನುಮತಿಯನ್ನು ಪಡೆದ. ಆರ್ಥರ್ ಕೋಗ ಎಂಬುವವನಿಗೆ ೨೦ ಶಿಲ್ಲಿಂಗ್ (೨೧೭ ಪೌಂಡ್. ಸುಮಾರು ರೂ.೨೨,೯೨೭.೪೦) ಹಣವನ್ನು ನೀಡಿ ಪ್ರಯೋಗದಲ್ಲಿ ಭಾಗಿಯಾಗಲು ಒಪ್ಪಿಸಿದ. ಕೆಲವು ಔನ್ಸ್ ಕುರಿಯ ರಕ್ತವನ್ನು ಸಿರಿಂಜಿನಲ್ಲಿ ಹೀರಿ, ಅದನ್ನು ಸಿರಿಂಜಿನ ಮೂಲಕವೇ ಕೋಗ ರಕ್ತನಾಳದೊಳಗೆ ಚುಚ್ಚಿದ.

ಕೋಗನಿಗೆ ಏನೂ ಆಗಲಿಲ್ಲ. ಅವನು ಆರಾಮವಾಗಿಯೇ ಇದ್ದ. ರಿಚರ್ಡ್ ಲೋವರ್ ರಕ್ತಪೂರಣವನ್ನು ಮಾಡಲು ತನ್ನದೇ ಆದ ಉಪಕರಣಗಳನ್ನು ರೂಪಿಸಿಕೊಂಡಿದ್ದ. ಅವರ ವೈದ್ಯಕೀಯ ವೃತ್ತಿಯು ಚೆನ್ನಾಗಿ ಕುದುರಿದ ಕಾರಣ, ವೈದ್ಯಕೀಯ ಸಂಶೋಧನಾ ಕ್ಷೇತ್ರವನ್ನು ಬಿಟ್ಟು ಪೂರ್ಣ ಪ್ರಮಾಣದ ವೈದ್ಯನಾದ. ಈ ವೇಳೆಗೆ ಬ್ರಿಟನ್ ಮತ್ತು ಫ್ರಾನ್ಸ್ ಸರಕಾರಗಳು ಪ್ರಾಣಿ-ಮನುಷ್ಯರ ರಕ್ತಪೂರ್ಣ ಅವೈಜ್ಞಾನಿಕ ಎಂದು ತೀರ್ಮಾನಿಸಿದವು. ಇಂತಹ ಅಸಹಜ ಪ್ರಯೋಗಗಳನ್ನು ೧೬೭೦ರಲ್ಲಿ ನಿರ್ಬಂಽಸಿದವು. ಇಲ್ಲಿ ಒಂದು ಪ್ರಶ್ನೆ ಏಳುತ್ತದೆ. ಕುರಿ ಮತ್ತು ಮನುಷ್ಯನ ರಕ್ತವು ಸಂಪೂರ್ಣ ಭಿನ್ನವಾದವು. ಕುರಿಯ ರಕ್ತವು ಮನುಷ್ಯನ ಶರೀರದೊಳಗೆ ಬಂದರೆ, ತಕ್ಷಣವೇ ರಾಸಾಯನಿಕ ಕ್ರಿಯೆ ಏರ್ಪಟ್ಟು, ರಕ್ತ ಉಂಡೆಗಟ್ಟಿ ಸಾಯುವುದು ಅನಿವಾರ್ಯ.

ಆದರೆ ಈ ಪ್ರಯೋಗದಲ್ಲಿ ಕೆಲವರು ಹೇಗೆ ಬದುಕುಳಿದರು ಎನ್ನುವ ಪ್ರಶ್ನೆಯು ಏಳುತ್ತದೆ. ಇದಕ್ಕೆ ನಿಖರವಾದ ವಿವರಣೆ ದೊರೆತಿಲ್ಲ. ಕೆಲವು ಮನುಷ್ಯರ ದೇಹದಲ್ಲಿ ವೈರುಧ್ಯ ರಾಸಾಯನಿಕ ಕ್ರಿಯೆಗಳು ನಡೆಯಲು ಅಗತ್ಯವಾದಷ್ಟು ರಕ್ತವನ್ನು ಬಹುಶಃ ಪೂರೈಸಿರಲಿಲ್ಲ; ಆದರೆ ಅಧಿಕ ರಕ್ತವನ್ನು ಪಡೆದ
ವರು ಬಹುಶಃ ವೈರುಧ್ಯ ಕ್ರಿಯೆಗಳ ಕಾರಣ ಮರಣಿಸಿ ದರಬೇಕು ಎಂಬ ತರ್ಕವನ್ನಷ್ಟೇ ಮಂಡಿಸಿರುವರು. ರಕ್ತ ಪೂರಣ ಕ್ಷೇತ್ರದಲ್ಲಿ ಮುಂದಿನ  ಕ್ರಾಂತಿಕಾರಕ ಪ್ರಯೋಗವನ್ನು ಜೇಮ್ಸ್ ಬ್ಲಂಡೆಲ್ (೧೭೯೦-೧೮೭೮) ಕೈಗೊಂಡ. ೧೮೧೮. ಒಬ್ಬಾತನಿಗೆ ಜಠರ ಕ್ಯಾನ್ಸರ್ ಅಂತಿಮ ಘಟ್ಟದಲ್ಲಿತ್ತು. ಆತನಿಗೆ ಹಲವು ಸಲ ಮನುಷ್ಯರ ರಕ್ತವನ್ನು ಪೂರಣ ಮಾಡಿದ. ಆದರೆ ಈ ಬಗ್ಗೆ ಪ್ರಕಟಿಸಲು ಹೋಗಲಿಲ್ಲ.

ಈತ ವೃತ್ತಿಯಿಂದ ಸೀರೋಗ ಮತ್ತು ಪ್ರಸೂತಿ ತಂತ್ರ ವೈದ್ಯನಾಗಿದ್ದ. ಹಾಗಾಗಿ ಅನೇಕ ತಾಯಂದಿರು ಪ್ರಸವದಲ್ಲಿ ವಿಪರೀತ ರಕ್ತಸ್ರಾವದಿಂದ  ಸಾಯುವುದನ್ನು ಕಣ್ಣಾರೆ ನೋಡಿದ್ದ. ಅಂತಹವರಿಗೆ ರಕ್ತವನ್ನು ಪೂರೈಸಿದರೆ ಅವರು ಬದುಕುವುದು ಖಂಡಿತ ಎಂದು ಭಾವಿಸಿದ. ಆದರೆ ಕಳೆದ
೧೫೦ ವರ್ಷಗಳಿಂದ ಬ್ರಿಟನ್ನಿನಲ್ಲಿ ಪ್ರಾಣಿ-ಮನುಷ್ಯರ ರಕ್ತ ಪೂರಣ ಪ್ರಯೋಗಗಳು ಪೂರ್ಣ ನಿಂತಿದ್ದವು. ಹಾಗಾಗಿ ಬ್ಲಂಡೆಲ್ ಮನುಷ್ಯ-ಮನುಷ್ಯರ ನಡುವೆ ರಕ್ತಪೂರಣವನ್ನು ನಡೆಸಲು ನಿರ್ಧರಿಸಿದ. ಕದ್ದು ಮುಚ್ಚಿ ಮಾಡುವ ಬದಲು ಎಲ್ಲರ ಸಮ್ಮುಖದಲ್ಲಿಯೇ ಏಕೆ ಮಾಡಬಾರದು ಎಂದು ತರ್ಕಿಸಿದ.

ಓರ್ವ ಮಹಿಳೆಯು ಪ್ರಸವದಲ್ಲಿ ವಿಪರೀತ ರಕ್ತಸ್ರಾವಕ್ಕೆ ತುತ್ತಾಗಿದ್ದಳು. ಬ್ಲಂಡೆಲ್, ಆಕೆಯ ಗಂಡನ ಮುಂದೋಳಿಗೆ ಸಿರಿಂಜ್ ಚುಚ್ಚು ನಾಲ್ಕು ಔನ್ಸ್ (೧೧೮ ಎಂ.ಎಲ್) ರಕ್ತವನ್ನು ಹೊರತೆಗೆದ. ಅದನ್ನು ಹೆಂಡತಿಯ ಮುಂದೋಳಿನಲ್ಲಿರುವ ರಕ್ತನಾಳದ ಮೂಲಕ ಆಕೆಯ ದೇಹದೊಳಗೆ ಚುಚ್ಚಿದ. ಆಕೆಯು ಬದುಕಿಕೊಂಡಳು. ಆಕೆಯಲ್ಲಿ ಯಾವುದೇ ರೀತಿಯ ಅಡ್ಡ ಪರಿಣಾಮಗಳು ತಲೆದೋರಲಿಲ್ಲ. ೧೮೨೫-೧೮೩೦ರ ನಡುವೆ ಇದೇ ರೀತಿಯ ಮಾನವ-ಮಾನವ ರಕ್ತಪೂರಣ ಪ್ರಯೋಗಗಳನ್ನು ಹತ್ತು ಜನರ ಮೇಲೆ ಪ್ರಯೋಗಿಸಿದ. ಅವರಲ್ಲಿ ಐದು ಜನರಲ್ಲಿ ಯಾವುದೇ ರೀತಿಯ ಅಹಿತಕರ ಪರಿಣಾಮಗಳಾಗಲಿಲ್ಲ.

ಆದರೆ ಉಳಿದವರಲ್ಲಿ ಹಲವು ಸಮಸ್ಯೆಗಳು ತಲೆದೋರಿದವು. ಈ ಪ್ರಯೋಗಗಳ ವಿವರಗಳನ್ನು ಲ್ಯಾನ್ಸೆಟ್ ಪತ್ರಿಕೆಯಲ್ಲಿ ೧೮೨೯ರಲ್ಲಿ ಪ್ರಕಟಿಸಿದ. ರಕ್ತಪೂರಣವನ್ನು ಮಾಡಲೆಂದೇ ವಿಶೇಷ ಉಪಕರಣಗಳನ್ನು ರೂಪಿಸಿದ. ೧೮೪೦ರಲ್ಲಿ ಲಂಡನ್ನಿನ ಸೈಂಟ್ ಜಾರ್ಜ್ ಹಾಸ್ಪಿಟಲ್ ಮೆಡಿಕಲ್ ಸ್ಕೂಲಿನ ಓರ್ವ ಕುಸುಮ ರೋಗಿಗೆ (ಹೀಮೋಫೀಲಿಯ) ರಕ್ತಪೂರಣವನ್ನು ಯಶಸ್ವಿಯಾಗಿ ಮಾಡಿದ. ಆದರೆ ಒಂದು ಪ್ರಶ್ನೆಯು ಮಾತ್ರ ಹಾಗೇ ಉಳಿಯಿತು. ಜೇಮ್ಸ್ ಬ್ಲಂಡೆಲ್ ಮಾಡಿದ ೧೦ ರಕ್ತಪೂರಣಗಳಲ್ಲಿ ಐದು ಮಾತ್ರ ಯಶಸ್ವಿಯಾದವು! ಉಳಿದ ಐದು ವಿಫಲವಾದವು. ಯಾಕೆ ವಿಫಲವಾದವು ಎಂಬ ಪ್ರಶ್ನೆಗೆ ಜೇಮ್ಸ್ ಬ್ಲಂಡೆಲ್ ಮಾತ್ರವಲ್ಲ, ಸಮಕಾಲೀನ ಸಮಾಜದ ಯಾರ ಬಳಿಯೂ ಉತ್ತರವಿರಲಿಲ್ಲ. ಈ ಪ್ರಶ್ನೆಗೆ ಸೂಕ್ತ ಉತ್ತರವನ್ನು ನೀಡಲು ಕಾರ್ಲ್‌ ಲ್ಯಾಂಡ್ ಸ್ಟೀನರ್ ಹುಟ್ಟ ಬೇಕಾಯಿತು.

Leave a Reply

Your email address will not be published. Required fields are marked *

error: Content is protected !!