Sunday, 15th December 2024

ಚುನಾವಣಾ ಸೋಲಿನಲ್ಲಿ ಸಂತೋಷ್ ಪಾಲೆಷ್ಟು, ಅವರೇ ಹೇಳಲಿ !

ನೂರೆಂಟು ವಿಶ್ವ

vbhat@me.com

ಬೆಂಗಳೂರಿನ ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿಯ ಕಾರ್ಯಾಲಯ ‘ಜಗನ್ನಾಥ ಭವನ’ದಂದು ಬೈಠಕ್. ಅಂದು ಬೈಠಕ್ ತೆಗೆದುಕೊಂಡವರು ಈಗಿನ ರಾಜ್ಯ ಸಂಘಟನಾ ಕಾರ್ಯದರ್ಶಿಗಿಂತ ಹಿಂದಿದ್ದವರು ಮತ್ತು ಅದೇ ಹುದ್ದೆಯಲ್ಲಿದ್ದ ಬಿ.ಎಲ್.ಸಂತೋಷ ನಂತರ ಬಂದವರು. ಅವರ ಹೆಸರು ಅರುಣಕುಮಾರ. ಅಂದು ಪಕ್ಷದ ಪದಾಧಿಕಾರಿಗಳು, ಶಾಸಕರು, ಹಿರಿಯ ನಾಯಕರು ಸೇರಿದ್ದರು. ಸಭೆಯಲ್ಲಿದ್ದ ಹಿರಿಯ ನಾಯಕರೊಬ್ಬರು ಬಳಲಿರಬೇಕು ಅಥವಾ ಅರುಣ ಕುಮಾರ ಬೈಠಕ್ ನಡೆಸುತ್ತಿದ್ದ ವೈಖರಿಗೆ ನಿರುತ್ಸಾಹಿಯಾಗಿರಬೇಕು, ಸಹಜವಾಗಿ ಆಕಳಿಸಿದರು.

ಗಮನಿಸಿದ ಅರುಣಕುಮಾರ, ‘ರೀ, ಎದ್ದು ನಿಲ್ರೀ. ಬೈಠಕ್‌ನಲ್ಲಿ ಆಕಳಿಸುತ್ತೀರಾ?’ ಎಂದು ದಬಾ ಯಿಸಿದರು. ಪಾಪ, ಆ ನಾಯಕರಿಗೆ ಹೇಗೆ ಪ್ರತಿಕ್ರಿಯಿಸಬೇಕೋ ಗೊತ್ತಾಗಲಿಲ್ಲ. ಅವರು ಅಲ್ಲಿಯೇ ಮುದುಡಿ ಕುಳಿತರು. ಆದರೆ ಮಹಾಶಯ ಅರು ಣಕುಮಾರ ಕೇಳಬೇಕಲ್ಲ, ‘ರೀ, ನಿಮಗೆ ಹೇಳಿದ್ದು, ಮೇಲೆ ಏಳ್ರಿ, ಹೋಗಿ ಮುಖ ತೊಳೆದುಕೊಂಡು ಬನ್ನಿ’ ಎಂದರು. ಆಗಲೂ ಆ ಆಕಳಿಸಿದ ನಾಯಕರು ಸುಮ್ಮನಿದ್ದರು. ‘ಆಯ್ತು, ಬೈಠಕ್ ಮುಂದುವರಿಸಿ, ಇನ್ನು ಆಕಳಿಸುವುದಿಲ್ಲ’ ಎಂಬಂತೆ ಅವರು ತಮ್ಮ ಗೊಣಗಿಕೊಂಡರು.

ಆಸಾಮಿ ಬಿಡಬೇಕಲ್ಲ. ‘ಏಳ್ರಿ ಸ್ವಾಮಿ, ಎದ್ದು ಹೋಗಿ ಮುಖ ತೊಳೆದುಕೊಂಡು ಬನ್ನಿ, ನೀವು ಮುಖ ತೊಳೆದುಕೊಂಡು ಬರೋ ತನಕ, ನಾನು ಬೈಠಕ್ ಮುಂದುವರಿಸುವುದಿಲ್ಲ. ಎದ್ದು ಹೋಗ್ರಿ’ ಎಂದು ಏರಿದ ದನಿಯಲ್ಲಿ ಗದರಿದರು. ಆಗ ಅನ್ಯ ಮಾರ್ಗವಿಲ್ಲದೇ, ಆಕಳಿಸಿದ ನಾಯಕರು ಎದ್ದು ಹೋಗಿ, ಮುಖ ತೊಳೆದುಕೊಂಡು ಬಂದರು. ಅಲ್ಲಿದ್ದವರೆಲ್ಲ ‘ಆಕಳಿಸಿದ ನಾಯಕ ಸುಮ್ಮನೆ ಆದೇಶ ಪಾಲಿಸಿದ್ದು ಆಶ್ಚರ್ಯ. ಸಂಘಟನಾ ಕಾರ್ಯದರ್ಶಿ ಮಾತಿಗೆ ಮರುಮಾತಾಡಿ ಮಂಗಳಾರತಿ ಮಾಡಲಿಲ್ಲವಲ್ಲ?’ ಎಂದು ಅಂದುಕೊಂಡರು.

ಆದರೆ ಅರುಣಕುಮಾರ ಮಾತ್ರ ಇಲ್ಲಿ ನನ್ನ ಆದೇಶವೇ ಅಂತಿಮ ಎಂದು ಬೀಗಿದ. ಬೈಠಕ್‌ನಲ್ಲಿ ಕುಳಿತಿದ್ದವರೆಲ್ಲ, ‘ಯಾಕೋ ಈ ವಯ್ಯನದು ಅತಿಯಾಯ್ತು. ತೀರಾ ಹುಚ್ ಮಂಗ್ಯಾನ ಥರ ವರ್ತಿಸುತ್ತಿದ್ದಾನೆ. ಈತನನ್ನು ಬಿಡಬಾರದು’ ಎಂದು ಬೈಠಕ್ ನಂತರ ಮಾತಾಡಿಕೊಂಡರು. ಸಂಘದ
ಪ್ರತಿನಿಽ ಮತ್ತು ಬಿ.ಎಲ.ಸಂತೋಷ ಮನುಷ್ಯ ಎಂದು ಸುಮ್ಮನಾದರು.

ಅರುಣಕುಮಾರ ಬಿಜೆಪಿ ಕಾರ್ಯಾಲಯದಲ್ಲಿದ್ದರೆ ‘ಶ್ಶ್, ದೂರ್ವಾಸನ ಮುನಿ ಜಪಕ್ಕೆ ಕುಳಿತಿzರೆ, ಸದ್ದು..’ ಎಂದು ಕಾರ್ಯಕರ್ತರು, ಶಾಸಕರು, ನಾಯಕರೆಲ್ಲ ಮುಸಿಮುಸಿ ನಕ್ಕು ಹೊಸ್ತಿಲು ತುಳಿಯದೇ ‘ಜೈ ಜಗನ್ನಾಥ’ ಎಂದು ಹೊರಟು ಹೋಗುತ್ತಿದ್ದರು. ಅದೇನಾದರೂ ಈ ಅರುಣ ಕುಮಾರನಿಗೆ ಗೊತ್ತಾದರೆ, ತಪ್ಪಿಸಿಕೊಂಡ ಜೇಬುಗಳ್ಳನನ್ನು ಪ್ಯಾದೆ ಹೋಗಿ ಹಿಡಿದುಕೊಂಡು ಬರುತ್ತಾನಲ್ಲ, ಆ ರೀತಿ ಕರೆಸುತ್ತಿದ್ದ. ನಂತರ ಅರ್ಧ ಗಂಟೆ ಅರುಣರಾಗ ಮತ್ತು ಸಹಸ್ರಾರ್ಚನೆ! ಆತ ಮಾತಾಡುವಾಗ ಮಧ್ಯೆ ಮಾತಾಡಬಾರದು. ಯಾರಾದರೂ ಮರು ಮಾತಾಡಿದರೆ, ‘ನೀನೇನು
ಎಲ್ಲ ಗೊತ್ತಿರುವ ಬ್ರಹಸ್ಪತಿನಾ? ಸುಮ್ನೆ ಕುಳಿತುಕೋ. ಸಾಕು ಮಾಡು ನಿನ್ನ ಪ್ರವಚನ’ ಎಂದು ಕನಿಷ್ಠ ಗೌರವವನ್ನೂ ಕೊಡದೇ ಹತ್ತಿಕ್ಕುತ್ತಿದ್ದ.

ಹೀಗಾಗಿ ಯಾರೂ ಮಾತಾಡುತ್ತಿರಲಿಲ್ಲ. ಎಲ್ಲರೂ ಜೀ.. ಜೀ.. ಎಂದು ತಲೆ ತಗ್ಗಿಸಿ, ಬೆನ್ನು ಬಾಗಿಸಿ ತೆಪ್ಪಗೆ ಅಮಿಕೊಂಡಿರುತ್ತಿದ್ದರು. ತನ್ನ ಮುಂದೆ ಐವತ್ತು ಮಂದಿ ಕಾರ್ಯಕರ್ತರು ಕುಳಿತುಕೊಂಡಿದ್ದರೂ, ಒಬ್ಬನೇ ಡ್ರೈ ಫ್ರುಟ್ಸ್ ಮೆಲ್ಲುತ್ತಾ, ಪಕ್ಕದಲ್ಲಿದ್ದವರಿಗೆ ಸೌಜನ್ಯಕ್ಕೂ ಬೇಕಾ ಎಂದು ಕೇಳದೇ,
ಒಬ್ಬನೇ ತಿನ್ನುತ್ತಾ, ಅಸಹ್ಯವಾಗಿ ಎಲ್ಲರನ್ನೂ ಅಪಹಾಸ್ಯ ಮಾಡುತ್ತಾ, ಮನಸೋ ಇಚ್ಛೆ ಬರೋಬ್ಬರಿ ನಾಲ್ಕು ವರ್ಷ ಈ ಅರುಣಕುಮಾರ ಕಾರುಬಾರು ನಡೆಸಿದ. ಈತ ಎಲ್ಲಿಂದ ವಕ್ಕರಿಸಿದ ಎಂದು ಅವರ ಪಕ್ಷದವರೇ ಹಣೆಹಣೆ ಬಡಿದು ಕೊಂಡರು.

ಕೆಲವರಂತೂ ಈ ಅರುಣಕುಮಾರನನ್ನು ‘ಕಿರುಕುಳಕುಮಾರ’ ಎಂದೇ ಜರೆಯುತ್ತಿದ್ದರು. ಈತ ಬಿ.ಎಲ್.ಸಂತೋಷ ಮನುಷ್ಯ ಎಂಬ ಒಂದೇ ಒಂದು ಕಾರಣಕ್ಕೆ ಈತನ ಅಪಸವ್ಯಗಳನ್ನೆಲಾ ಸಹಿಸಿಕೊಂಡರು. ನಾಲ್ಕು ವರ್ಷ ಈ ಅರುಣಕುಮಾರ ಪರಪ್ಪನ ಅಗ್ರಹಾರದ ಜೈಲರ್ ಥರಾ ಎಲ್ಲರನ್ನೂ ಹಣ್ಣುಗಾಯಿ ನೀರುಗಾಯಿ ಮಾಡಿಬಿಟ್ಟ. ಆತನ ಬೈಠಕ್ ಅಂದ್ರೆ ಬಿಜೆಪಿ ಕಾರ್ಯಕರ್ತರು, ಪದಾಧಿಕಾರಿಗಳು ತಲೆತಲೆ ಚಚ್ಚಿಕೊಳ್ಳುತ್ತಿದರು. ‘ಬೆರಣಿಯನ್ನಾದರೂ ತಟ್ಟಬಹುದು, ಆದರೆ ಈ ಮುಂಡೇಗಂಡನ ಬೈಠಕ್ ಅಂದ್ರೆ ಶಗಣಿ ಮೇಲೆ ಕುಳಿತ ಅನುಭವವಾಗುತ್ತದಲ್ಲ’ ಎಂದು ಮುಖ ಕಿವುಚಿಕೊಳ್ಳುತ್ತಿದ್ದರು.

ಉತ್ತರ ಕರ್ನಾಟಕದ ನಾಯಕರೊಬ್ಬರು (ಅವರ ಕೋರಿಕೆ ಮೇರೆಗೆ ಹೆಸರು ಪ್ರಸ್ತಾಪಿಸಿಲ್ಲ) ‘ಅದೇನಾಗುತ್ತೋ ನೋಡೋಣ, ನಾನು ಈ
ಅರುಣಕುಮಾರನ ಮುಖದ ಮೇಲೆ ಐದು ಬೆರಳು ಕಾಣಿಸೋ ಹಾಗೆ ಬೆರಣಿ ತಟ್ಟದೇ ಬಿಡುವುದಿಲ್ಲ’ ಎಂದು ಶಪಥ ತೊಟ್ಟು, ಕೊನೆಗೆ ಬಿ.ಎಲ್.ಸಂತೋಷ ಭಯದಿಂದ ಸುಮ್ಮನಾಗಿದ್ದರು. ಅಂದರೆ ರಾಜ್ಯ ಸಂಘಟನಾ ಕಾರ್ಯದರ್ಶಿ ಬಿಜೆಪಿಯನ್ನು ಯಾವ ಮಟ್ಟಕ್ಕೆ ಕೊಂಡೊಯ್ದಿದ್ದ ಮತ್ತು ಆತನಿದ್ದಾಗ ಪಕ್ಷ ಅದೆಂಥ ಸ್ಥಿತಿ ತಲುಪಿತ್ತು ಎಂಬುದನ್ನು ಊಹಿಸಬಹುದು. ಅರುಣಕುಮಾರ ಬಗ್ಗೆ ಪ್ರತಿಯೊಬ್ಬರದೂ ಒಂದೊಂದು ಕತೆ,
ಒಂದೊಂದು ಅನುಭವ. ಬೆನ್ನಿಗೆ ಬಿ.ಎಲ್.ಸಂತೋಷ ಇದ್ದಾರೆ ಎಂಬ ಅಭಯ, ಈ ಅರುಣಕುಮಾರನಿಗೆ ‘ಶ್ರೀಕವಚ’ವಾಗಿತ್ತು. ಕೆಲವೊಮ್ಮೆ ಅರುಣಕುಮಾರ ಮಾತಾಡಿದರೆ ಅದು ಬಿ.ಎಲ.ಸಂತೋಷ ಮಾತಾಡಿದಂತೆ ಕೇಳಿಸುತಿತ್ತು.

ಕೆಲವೊಮ್ಮೆ ಆತ ಅವರನ್ನು ಅನುಸರಿಸುತ್ತಿದ್ದ ಮತ್ತು ಅನುಕರಿಸುತ್ತಿದ್ದ. ಸಂತೋಷ ಹೇಳಿದರೆ ಕಾರ್ಯಕರ್ತರು ಕೇಳುತ್ತಿದ್ದರು. ಆದರೆ ಈ ಅರುಣ ನನ್ನು ಸಹಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ರಾಜ್ಯ ಬಿಜೆಪಿ ಕಾರ್ಯಾಲಯವನ್ನು ಆತ ತನ್ನ ಆಡೊಂಬಲ ಮಾಡಿಕೊಂಡುಬಿಟ್ಟ. ಆತನಿಗೆ ಹಿರಿಯರು, ಅನುಭವಿಗಳು, ಮಂತ್ರಿಗಳು ಎಂಬ ವ್ಯತ್ಯಾಸವಿರಲಿಲ್ಲ. ಯಡಿಯೂರಪ್ಪನವರು ಅಧ್ಯಕ್ಷರಾಗಿದ್ದಾಗಲೂ ಕೆಲ ಕಾಲ ಈತ ಸಂಘಟನಾ ಕಾರ್ಯದರ್ಶಿ ಹುzಯಲ್ಲಿದ್ದ. ಸಂದರ್ಭ ಸಿಕ್ಕಾಗಲೆಲ್ಲ ಅವರಿಗೂ ‘ಬೌದ್ಧಿಕ್’ ಕೊಡಲು ಹೋಗುತ್ತಿದ್ದ.

ಇಂಥ ಅವೆಷ್ಟು ಅರುಣನನ್ನು ಅವರು ಆಪೋಷಣ ತೆಗೆದುಕೊಂಡವರೋ? ಅವರಿಗೂ ಈತ ತನ್ನ ಬುದ್ಧಿಯನ್ನು ತೋರಿಸುವ ಅವಕಾಶದಿಂದ ವಂಚಿತನಾಗುತ್ತಿರಲಿಲ್ಲ. ಆದರೆ ಅವರು ಚರೈವೇತಿ.. ಚರೈವೇತಿ.. ಎಂದು ಮುಂದೆ ಸಾಗುತ್ತಿದ್ದರು. ಅರುಣಕುಮಾರ ಇರುವಷ್ಟು ದಿನ ಪಕ್ಷದ ಸಂಘಟನೆಯನ್ನು ಸತ್ಯಾನಾಶ ಮಾಡಿಬಿಟ್ಟ. ಚುನಾವಣೆಗೆ ಇನ್ನು ಆರೆಂಟು ತಿಂಗಳುಗಳು ಇರುವಾಗ ಅರುಣನ ಬಿಜೆಪಿ ಋಣ ತೀರಿತು. ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯ ಅತ್ಯಂತ ಕಳಪೆ ಸಾಧನೆಯ ಮೂಲಬೇರು ಎಲ್ಲಿ ಹುದುಗಿದೆ ಎಂಬುದನ್ನು ಅಗೆಯುತ್ತಾ ಹೋದರೆ, ಅರುಣಕುಮಾರನಂಥ ಬೊಡ್ಡೆ, ಬೊಗಟೆಗಳು ಸಿಗುತ್ತವೆ. ಹಾಗಾದರೆ ಸಂತೋಷ ಅವರಿಗೆ ಇವೆಲ್ಲ ಗೊತ್ತಿರಲಿಲ್ಲವಾ? ‘ಏನ್ಸಾರ್? ಅಮಾಯ
ಕರಂತೆ ವರ್ತಿಸಬೇಡಿ.

ಸಂತೋಷ ಅವರೇ ಬಿಜೆಪಿಯಲ್ಲಿ ಮೂಡಿದ ಅರುಣೋದಯ’ ಎಂದು ಬಿಜೆಪಿ ಕಟ್ಟಾ ಕಾರ್ಯಕರ್ತರೇ ಹೇಳಿಕೊಂಡು ಕಿಂಡಲ್ ಮಾಡುತ್ತಿದ್ದುದನ್ನು ಕೇಳಿದ್ದೇನೆ. ಅದು ನಿಜವೂ ಇದ್ದಿರಬಹುದು. ಒಂದು ರಾಜಕೀಯ ಪಕ್ಷದ ವ್ಯವಸ್ಥೆಯನ್ನು ಒಬ್ಬ ವ್ಯಕ್ತಿ ತನ್ನ ಕಪಿಮುಷ್ಟಿಗೆ ತೆಗೆದುಕೊಳ್ಳುವುದು ಅಷ್ಟು ಸುಲಭವಲ್ಲ. ಅದಕ್ಕೆ ಯಾರದ್ದೇ ಆಶೀರ್ವಾದ, ನಿರ್ದೇಶನ, ನೇರ ಕುಮ್ಮಕ್ಕು ಇರಲೇಬೇಕು. ಇಲ್ಲದಿದ್ದರೆ ಯಾರೂ ಇಷ್ಟು ವಕ್ರವಕ್ರವಾಗಿ, ತಲೆಯಲ್ಲಿ ಕಿಡ್ನಿ ಮೂಡಿದವರಂತೆ ವರ್ತಿಸುವುದಿಲ್ಲ.

ಯಡಿಯೂರಪ್ಪನವರು ಅಧ್ಯಕ್ಷ ಪದವಿಯಿಂದ ಇಳಿದ ನಂತರವಂತೂ, ‘ಜಗನ್ನಾಥ ಭವನ’ ರಾಜಕೀಯ ಪಕ್ಷದ ಆಫೀಸು ಅಂತ ಅನಿಸುತ್ತಲೇ
ಇರಲಿಲ್ಲ. ನಂತರ ನಳಿನ್ ಕುಮಾರ ಕಟೀಲ್ ಪಕ್ಷದ ಅಧ್ಯಕ್ಷರಾಗಿ ಬಂದ ಬಳಿಕ ಪಕ್ಷ ಮತ್ತಷ್ಟು ಬಳಲಿ ಬೆಂಡಾಗಿ ಹೋಯಿತು. ಅಧ್ಯಕ್ಷರಾಗಿ ನಿರ್ಧಾರ ತೆಗೆದುಕೊಳ್ಳಬೇಕಾಗಿ ಬಂದಾಗ ಅವರು ಯಾವತ್ತೂ ಬೇರೆಯವರತ್ತ ನೋಡುತ್ತಿದ್ದರು. ಸಣ್ಣ ಪುಟ್ಟ ತೀರ್ಮಾನಗಳನ್ನು ಸುರರು, ಸುರಾನಾರು ತೆಗೆದುಕೊಳ್ಳಲಾರಂಭಿಸಿದರು. ಪಕ್ಷದ ಅಧಿಕೇಂದ್ರ ಅಧ್ಯಕ್ಷರಲ್ಲ ಎಂಬುದು ಬೂತ್ ಮಟ್ಟದ ಕಾರ್ಯಕರ್ತನಿಗೂ ಗೊತ್ತಾಗುವಂತಾಯಿತು.

ಪಕ್ಷದ ಸಂಘಟನೆ ದೃಷ್ಟಿಯಿಂದ ರಾಜ್ಯ ಸಂಘಟನಾ ಕಾರ್ಯದರ್ಶಿಯಾಗಿ ಬಿ.ಎಲ.ಸಂತೋಷ ಮಾಡಿದ ಎಷ್ಟೋ ಒಳ್ಳೆಯ ಕೆಲಸಗಳು ಅರುಣ ಕುಮಾರನಿಂದ ಹಳ್ಳಹಿಡಿದವು ಎಂಬುದನ್ನು ಬಿಜೆಪಿಯ ಕಾರ್ಯಕರ್ತರು ಒಪ್ಪಿಕೊಳ್ಳುತ್ತಾರೆ. ಯಾವಾಗ ಸಂತೋಷ ಅವರು ರಾಷ್ಟ್ರೀಯ ಸಂಘಟನಾ
ಕಾರ್ಯದರ್ಶಿಯಾದರೋ, ದಿಲ್ಲಿಯಿಂದಲೇ ಪಕ್ಷವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಳ್ಳಲು ನಿರ್ಧರಿಸಿದ ಪರಿಣಾಮವಾಗಿ ಅವರ ಈ ದಾಹದಿಂದ ಅನೇಕ ತಪ್ಪುಗಳಾದವು. ಬಿಜೆಪಿ ಆರೆಸ್ಸೆಸ್ ಬಿ ಟೀಮ್ ಆಯಿತು.

ರಾಜಕೀಯ ಪಕ್ಷದಲ್ಲಿ ರಾಜಕಾರಣಿಗಳು ಎರಡನೆಯ ದರ್ಜೆಯವರಾದರು. ಕೆಲವೇ ಕೆಲವು ಆರೆಸ್ಸೆಸ್ ನಾಯಕರ ಮಾತುಗಳೇ ಅಂತಿಮ ಎನ್ನು
ವಂತಾಯಿತು. ಅವರು ಮಾತಾಡಲಾರಂಭಿಸಿದರೆ, ಬಿಜೆಪಿ ನಾಯಕರು ಮೂಕಪ್ರೇಕ್ಷಕರಂತೆ ಕೇಳಿಸಿಕೊಳ್ಳುವಂತಾಯಿತು. ನೇಮಕ, ಆಯ್ಕೆಗಳಲ್ಲಿ ಸಂಘದವರ ‘ಮಾತೇ ಮಹಾದೇವ’! ಅಪಾತ್ರರೆಲ್ಲ ಯಾವ್ಯಾವವೋ ಸ್ಥಾನಗಳನ್ನು ಹೊಡೆದುಕೊಂಡರು. ಕೋರ್ ಕಮಿಟಿಯಲ್ಲಿ ತೀರ್ಮಾನ ವಾಗುತ್ತಿದ್ದ ಹೆಸರುಗಳೇ ಒಂದು, ಅಂತಿಮವಾಗಿ ಅಖೈರುಗೊಳ್ಳುತ್ತಿದ್ದವುಗಳೇ ಇನ್ನೊಂದು.

ಪ್ರಿಂಟಿಂಗ್ ಪ್ರೆಸ್ ಇಟ್ಟುಕೊಂಡಿದ್ದ ಎಸ್ (ಸ್ಪಾ ನ್) ನಾರಾಯಣ ಅವರನ್ನು ರಾಜ್ಯಸಭಾ ಸದಸ್ಯರನ್ನಾಗಿ ನೇಮಕ ಮಾಡಿದಾಗ, ಯಡಿಯೂರಪ್ಪ,
ಈಶ್ವರಪ್ಪ, ಅಶೋಕ ಅವರಿಗೇ ಅವರು ಯಾರೆಂಬುದು ತಟ್ಟನೆ ಗೊತ್ತಾಗಲಿಲ್ಲ. ಬ್ರೇಕಿಂಗ್ ನ್ಯೂಸ್ ಮಾಡೋಣ ಅಂದ್ರೆ ಕನ್ನಡ ಟಿವಿ ಚಾನೆಲ್ಲುಗಳ ನಿರೂಪಕರಿಗೂ ‘ಸ್ಪ್ಯಾನ್’ ಹೆಸರು ಗೊತ್ತಿರಲಿಲ್ಲ. ಯಾವ ಪತ್ರಿಕಾ ಕಚೇರಿಗಳಲ್ಲೂ ಬಿ ಗಾತ್ರದ ಸ್ಪ್ಯಾನ್ ನಾರಾಯಣರ ಫೋಟೋ ಸಹ ಇರಲಿಲ್ಲ.
ಈರಣ್ಣ ಕಡಾಡಿ, ಅಶೋಕ ಗಸ್ತಿ (ಇವರು ನಂತರ ತೀರಿಕೊಂಡರು) ಮುಂತಾದ ಅನಾಮಧೇಯರೆಲ್ಲ ಸಂತೋಷ ಕಟಾಕ್ಷದಿಂದ ರಾಜ್ಯಸಭೆಗೆ ಹೋದರು.

ಪಾಪ, ಅವರಾರೂ ತಮ್ಮನ್ನು ಅಲ್ಲಿಗೆ ಕಳಿಸಿ ಎಂದು ಬೇಡಿಕೊಂಡಿರಲಿಲ್ಲ. ಯಾರೋ ಮೇಲಕ್ಕೆ ಜಗ್ಗಿದರೆಂದು, ಜಗ್ಗೇಶ ಕೂಡ ರಾಜ್ಯಸಭಾ ಸದಸ್ಯರಾದರು. ಇದೇ ರೀತಿ ಬಿ.ಎಲ್.ಸಂತೋಷ ತಮಗೆ ನಿಷ್ಠರಾದವರ ಗುಂಪು ಕಟ್ಟಿಕೊಳ್ಳತೊಡಗಿದರು. ಅರುಣಕುಮಾರ ಸಂಘಟನಾ ಕಾರ್ಯದರ್ಶಿಯಾಗಿದ್ದಾಗ, ಅವರನ್ನು ಮುಂದಿಟ್ಟುಕೊಂಡು ಬಿ.ಎಲ್.ಸಂತೋಷ ರಾಜ್ಯದಲ್ಲಿ ಸಂಘಟನೆಯ ಹೆಸರಿನಲ್ಲಿ ತಮ್ಮ ಪಡೆಯನ್ನು ಇನ್ನಷ್ಟು ಗಟ್ಟಿ ಮಾಡಿಕೊಳ್ಳಲು ಪ್ರಯತ್ನಿಸಿದರು.

ತಮಗೆ ನಿಷ್ಠರಾದವರಿಗೆ ಮಾತ್ರ ಮರ್ಯಾದೆ, ಮಣೆ, ಅಗ್ರತಾಂಬೂಲ! ಅವರೇ ನಿಜವಾದ ಬಿಜೆಪಿಗಳೆಂಬಂತೆ ಬಿಂಬಿಸಲಾಯಿತು. ತಮ್ಮನ್ನು ಪ್ರಶ್ನಿಸುವವರು ಅಥವಾ ಒಪ್ಪಿಕೊಳ್ಳದವರನ್ನು ದೂರಸರಿಸುತ್ತ, ಕ್ರಮೇಣ ಅಸ್ಪೃಶ್ಯರಂತೆ ಕಾಣುತ್ತಾ ಹೋದರು. ಈ ಹಂತದಲ್ಲಿ ಹಲವರು ಮೂಲೆ
ಗುಂಪಾದರು. ಸಂತೋಷ ಅವರ ಪರಮ ಬಾಲಬಡುಕರೆಲ್ಲ ಏಕಾಏಕಿ ಮುನ್ನೆಲೆಗೆ ಬಂದುಬಿಟ್ಟರು. ಸ್ಪರ್ಧಿಸಿದ ಚುನಾವಣೆಗಳಲ್ಲ ದಯನೀಯವಾಗಿ ಸೋತ ‘ಜಲ್ಲಿಕಲ್ಲು’ ತುಳಸಿ ಮುನಿರಾಜ ಗೌಡ ಎಮ್ಮೆಲ್ಸಿಯಾದರು. ಅವರಲ್ಲಿ ಯಾವ ಮಹಾ ಯೋಗ್ಯತೆಯನ್ನು ಸಂತೋಷ ಅವರು ಕಂಡಿದ್ದರೋ ಆ ಕೇಶವನೇ ಬಲ್ಲ. ಒಕ್ಕಲಿಗ ಸಮುದಾಯದಲ್ಲಿ ಯೋಗ್ಯ‘ಶಿಲೆ’ಗಳಿದ್ದರೂ, ಅವನ್ನೆಲ್ಲ ಪಕ್ಕಕ್ಕಿಟ್ಟು ಜಲ್ಲಿಕಲ್ಲನ್ನೇ ಆಯ್ದುಕೊಂಡಿದ್ದು ಇಂದಿಗೂ ಅನೇಕರಿಗೆ ಯಕ್ಷಪ್ರಶ್ನೆ ಮತ್ತು ಲಕ್ಷಪ್ರಶ್ನೆ.

ಕಾರ್ಯಕರ್ತರು ಎಂಬ ಕಾರಣಕ್ಕೆ ಇಂಥ ಅಪಾತ್ರರನ್ನು ಆಯಕಟ್ಟಿನ ಜಾಗಕ್ಕೆ ಕುಳ್ಳಿರಿಸುತ್ತಿದ್ದ ಸಂತೋಷ ಅವರು, ಪಕ್ಷದಲ್ಲಿ ನಿಜಕ್ಕೂ ಕೆಲಸ ಮಾಡಿದ ಯೋಗ್ಯರನ್ನು ಮೂಲೆಗಂಪು ಮಾಡುವ ವ್ಯವಸ್ಥಿತ ಕುತಂತ್ರ ಮಾಡುವುದನ್ನು ಚಾಳಿ ಮಾಡಿಕೊಂಡರು. ಅದನ್ನೇ ‘ಕಾರ್ಯಕರ್ತ ಪ್ರಣೀತ
ಪಕ್ಷ ಸಂಘಟನೆ’ ಎಂದು ಭಾವಿಸಿದರು ಮತ್ತು ಬಿಂಬಿಸಿದರು. ಸಂತೋಷ ಅವರ ಯಾವ ನಿರ್ಧಾರದ ಹಿಂದೆಯೂ ರಾಜಕೀಯ ಲೆಕ್ಕಾಚಾರ ಅಥವಾ ಲಾಜಿಕ್ ಇರುವುದಿಲ್ಲ.

ಮೊದಲಿಂದ, ಕೊನೆಯ ತನಕ ತಮ್ಮ ಬಾಲಬಡುಕ ಆಗಿರಬೇಕು ಮತ್ತು ಸ್ಥಾನಕ್ಕೆ ಅಪಾತ್ರನಾಗಿರಬೇಕು ಎಂಬುದೇ ಅವರ ಮಾನದಂಡ. ಇದಕ್ಕೆ ಕಾರ್ಯಕರ್ತರನ್ನು ಬೆಳೆಸುವ ರೀತಿ ಎಂಬ ಸೋಗು ಬೇರೆ. ಸಂತೋಷ ಅವರು ಆಯ್ಕೆ ಮಾಡಿದ ಬಹುತೇಕ ವ್ಯಕ್ತಿ ಮತ್ತು ನೇಮಕಗಳು ಅಪ್ರಯೋ
ಜಕ, ನಿರರ್ಥಕ. ಅದರಿಂದ ಪಕ್ಷಕ್ಕೆ ದತ್ತು-ದಮಡಿ ಲಾಭವಾಗಿಲ್ಲ. ಜೆಡಿಎಸ್‌ನಿಂದ ಕೊಪ್ಪಳ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಠೇವಣಿ ಕಳೆದುಕೊಂಡು, ನಂತರ ಒಂದು ವರ್ಷದ ಹಿಂದೆ ಬಿಜೆಪಿ ಸೇರಿಸಿಕೊಂಡ ಹೇಮಲತಾ ನಾಯಕ ಎಂಬ ಅಪರಿಚಿತ ಮಹಿಳೆಯನ್ನು ಕೊಪ್ಪಳದಿಂದ ವಿಶೇಷ ಹೆಲಿಕಾಪ್ಟರನಲ್ಲಿ ಕರೆಯಿಸಿ, ನಂತರ ಜೀರೋ ಟ್ರಾಫಿಕ್‌ನಲ್ಲಿ ವಿಧಾನ ಸೌಧಕ್ಕೆ ಕಳುಹಿಸಿ, ಎಮ್ಮೆಲ್ಸಿ ಮಾಡಿದ ಉದ್ದೇಶದ ಹಿಂದಿನ ಲಾಜಿಕ್ ಇನ್ನೂ ಚಿದಂಬರ ರಹಸ್ಯವಾಗಿಯೇ ಉಳಿದಿದೆ.

ಸೋತ ಸವದಿಯನ್ನು ಉಪಮುಖ್ಯಮಂತ್ರಿ ಮಾಡಿದ ಸಂತೋಷ ಅವರ ತಂತ್ರ ಭಾರತ ರಾಜಕಾರಣದ ಎಲ್ಲ ಲಾಜಿಕ್‌ಗಳನ್ನು ಮೀರಿಸಿದ ಸೂಪರ್ ಡ್ಯೂಪರ್ ಮ್ಯಾಜಿಕ್! ಚಾಣಕ್ಯನೂ ಹಾಳುಬಾವಿಗೆ ಬಿದ್ದು ಸಾಯಬೇಕು ಅಂಥ ಅದ್ಭುತ ನಡೆ! ಇಂಥ ಯಡವಟ್ಟುಗಳು ಒಂದಾ, ಎರಡಾ? ಸಂತೋಷ ಕೃಪೆಯಿಂದ ರಾಜ್ಯಸಭಾ ಸದಸ್ಯರಾದವರಿಂದ, ಎಮ್ಮೆಲ್ಸಿಯಾದವರಿಂದ ಪಕ್ಷಕ್ಕೆ ಮೊನ್ನೆಯ ವಿಧಾನಸಭಾ ಚುನಾವಣೆಯಲ್ಲಿ ಏನಾದರೂ ಪ್ರಯೋಜನ ಆಯಿತಾ? ಉಹುಂ.. ಗೊತ್ತಿಲ್ಲ. ಗೊತ್ತಿದ್ದವರು ಹೇಳಬೇಕು.

ಇವರಾರಿಂದಲೂ ಹತ್ತು ವೋಟು ಬರಲಿಲ್ಲ. ಆ ಕೇಶವ ಪ್ರಸಾದ, ತಳವಾರ ಸಿದ್ದಣ್ಣ, ಶಾಂತಾರಾಮ ಸಿದ್ದಿ, ಪ್ರತಾಪಸಿಂಹ ನಾಯಕ, ಛಲವಾದಿ ನಾರಾಯಣಸ್ವಾಮಿ, ಜಲ್ಲಿಕಲ್ಲು ತುಳಸಿ ಮುಂತಾದವರಿಂದ ಏನು ಲಾಭವಾಯಿತು ಎಂಬುದನ್ನು ಸಂತೋಷ ಅವರೇ ಹೇಳಬೇಕು. ಬಿಜೆಪಿ ಕಾರ್ಯಕರ್ತರನ್ನು ಬೆಳೆಸಬೇಕು, ಪಕ್ಷ ನಿಷ್ಠರಿಗೆ ಮನ್ನಣೆ ನೀಡಬೇಕು ಎಂಬ ಸಂತೋಷ ಅವರ ವಾದ, ಹಠವನ್ನು ಒಪ್ಪಲೇಬೇಕು. ಆದರೆ ಆ ವಾದದಲ್ಲಿ ‘ತಮಗೆ ನಿಷ್ಠರಾದವರಿಗೆ ಮಾತ್ರ’ ಎಂಬ ಅಗೋಚರ ಷರತ್ತು ವಿಧಿಸಿರುವುದು ಮಾತ್ರ ಯಾರಿಗೂ ಗೊತ್ತೇ ಆಗುವುದಿಲ್ಲ.

ಹೀಗಾಗಿ ಸಂಘಟನೆಯಲ್ಲಿ ಲಾಗಾಯ್ತಿನಿಂದ ಬೆಳೆದು ಬಂದ, ಜಗದೀಶ ಶೆಟ್ಟರ್, ಅರವಿಂದ ಲಿಂಬಾವಳಿ, ರಾಮದಾಸ, ರಘುಪತಿ ಭಟ, ಅಂಗಾರ (ಈ ಸಾಲಿನಲ್ಲಿ ಅಶೋಕ ಮತ್ತು ಕಾಗೇರಿ ಹೆಗಡೆ ಕೂದಲೆಳೆ ಅಂತರದಲ್ಲಿ ಬಚಾವ್ ಆದರು ಬಿಡಿ) ಮುಂತಾದವರು ತಮಗೆ ನಿಷ್ಠರಲ್ಲ ಎಂಬ ಕಾರಣಕ್ಕೆ
ಟಿಕೆಟ್ ತಪ್ಪಿಸಿದರು. ಇಲ್ಲದಿದ್ದರೆ ಇವರಿಗೆ ಟಿಕೆಟ್ ನಿರಾಕರಿಸಲು ಯಾವ ಕಾರಣವೂ ಇರಲಿಲ್ಲ. ‘ಲಿಂಬಾವಳಿ ಬೇಡ, ಆದರೆ ಅವರ ಹೆಂಡತಿಗಾದರೆ ಓಕೆ’ ಅನ್ನೋದು ಯಾವ ಲಾಜಿಕ್? ಲಿಂಗಾಯತರನ್ನು ಮುಗಿಸಲು, ಲಕ್ಷ್ಮಣ ಸವದಿಗೆ ಟಿಕೆಟ್ ತಪ್ಪಿಸಿ ಆ ಅವಿವೇಕಿ ರಮೇಶ ಜಾರಕಿಹೊಳಿ ಮಾತು ಕೇಳಿ ಬೆಳಗಾವಿ, ಚಿಕ್ಕೋಡಿ ಜಿಗಳಲ್ಲಿ ಪಕ್ಷ ನೆಲಕಚ್ಚುವಂತಾಗಿದ್ದು ಸಹ ಇದರ ಮುಂದುವರಿದ ಭಾಗವೇ.

ಯಡಿಯೂರಪ್ಪನವರನ್ನು ‘ಆಟಕ್ಕುಂಟು ಲೆಕ್ಕಕ್ಕಿಲ್ಲ’ ಎಂದು ಲಘುವಾಗಿ ಬಗೆದಿದ್ದು, ವಿಜಯೇಂದ್ರ ಅವರಂಥ ಯುವ ಮುತ್ಸದ್ಧಿಯನ್ನು ಅವಕಾಶ ಸಿಕ್ಕಾಗಲೆಲ್ಲ ಚಿವುಟಲು ಪ್ರಯತ್ನಿಸ್ದದು ಕೂಡ ಆ ಪ್ರಹಸನದ ಸಶೇಷವೇ. ಒಂದು ಮಾತನ್ನು ಹೇಳಲೇಬೇಕು. ಸಂತೋಷ ಅವರು ಕರ್ನಾಟಕ ಬಿಜೆಪಿಯ ಸಂಘಟನೆಯ ಬಲಪಡಿಸುವ ಹೊಣೆ ಹೊತ್ತುಕೊಂಡು ಹದಿನೇಳು ವರ್ಷಗಳಿಗಿಂತ ಹೆಚ್ಚಾದವು. ಆ ಅವಧಿ ಸಣ್ಣದೇನೂ ಅಲ್ಲ. ರಾಜಕಾರಣದಲ್ಲಿ ಬಹು ದೀರ್ಘ ಅವಽಯೇ. ಈ ಅವಧಿಯಲ್ಲಿ ಬಿಜೆಪಿ ಒಂದು ಸಲವೂ ಸ್ವಂತ ಬಲದಿಂದ ಅಧಿಕಾರಕ್ಕೆ ಬರುವಷ್ಟು ಸ್ಥಾನ ಗಳಿಸಲಿಲ್ಲ. ಈ ಸಲವಂತೂ ಮೋದಿಯಿದ್ದೂ ದಯನೀಯವಾಗಿ ಸೋತಿತು. ಸಂಘಟನೆಯ ಜವಾಬ್ದಾರಿ, ನೇತೃತ್ವ, ತಂತ್ರ, ನಿರ್ಧಾರ, ನಿಯಂತ್ರಣವೆಲ್ಲ ತಮ್ಮದು, ಆದರೆ ಸೋಲಿಗೆ, ಶಾಪಕ್ಕೆ, ವಾತಕ್ಕೆ, ಅಪಸವ್ಯಗಳಿಗೆ ಮಾತ್ರ ಯಡಿಯೂರಪ್ಪನವರೋ, ಬೊಮ್ಮಾಯಿಯೋ ಕಾರಣ ಅಂದ್ರೆ ಹೇಗೆ? ಹಾಗಾದರೆ ಈ ಸಲದ ಪರಾಭವದಲ್ಲಿ ಸಂತೋಷ ಅವರ ಪಾಲು ಇಲ್ಲವಾ? ಅವರೇ ಹೇಳಲಿ.