Sunday, 15th December 2024

ಸಂತೋಷಜೀ ರಾಣಿಹುಳುವಾಗಿದ್ದಿದ್ದರೆ, ಶೆಟ್ಟರ್‌ ಕಾಂಗ್ರೆಸ್ ಸೇರುತ್ತಿರಲಿಲ್ಲ !

ನೂರೆಂಟು ವಿಶ್ವ

vbhat@me.com

‘ಕಳೆದ ಎರಡು ತಿಂಗಳಿನಿಂದ ನಾನೂ (ಪ್ರಗತಿಪರ?!) ಜೇನು ಕೃಷಿಕ. ನಮ್ಮ ಮನೆಯಲ್ಲಿ ಐದು ಜೇನು ಡಬ್ಬಗಳನ್ನು ಇಟ್ಟಿದ್ದೇನೆ. ಸದ್ಯದಲ್ಲಿಯೇ ಇನ್ನಷ್ಟು ಡಬ್ಬಗಳನ್ನು ಹೆಚ್ಚಿಸಲಿದ್ದೇನೆ. ಮೊದಲ ಬಾರಿಗೆ ಜೇನು ತುಪ್ಪವನ್ನು ತೆಗೆದು ಸವಿದ ಸಂತಸ. ಅಂತೂ ಜೇನು ಸಾಕಿದ್ದು ಸಾರ್ಥಕವಾಯಿತು!’ ಎಂದು ಮೊನ್ನೆ ಫೇಸ್ ಬುಕ್‌ನಲ್ಲಿ ಬರೆದಿದ್ದೆ.

ಆ ಪೈಕಿ ತೀರ್ಥಹಳ್ಳಿಯಿಂದ ಸಂಧ್ಯಾ ಎನ್ನುವವರು, ‘ಭಟ್ರೇ, ನಿಮಗೆ ಇದ್ದಕ್ಕಿದ್ದಂತೆ ಜೇನು ಹುಳುಗಳ ಮೇಲೆ ಮಮತೆ ಬರಲು ಕಾರಣವೇನು? ಜೇನುತುಪ್ಪ ಬೇಕೆಂದೆನಿಸಿದರೆ, ಜೇನನ್ನೇ ಸಾಕಬೇಕಿಲ್ಲ. ಆದರೂ ನೀವು ಜೇನು ಸಾಕಲು ನಿರ್ಧರಿಸಿದ್ದೇಕೆ? ನಿಮ್ಮಲ್ಲಿ ಜೇನು ಕೃಷಿ ಅಥವಾ ಸಾಕಾಣಿಗೆ ಬಗ್ಗೆ ಹಠಾತ್ ಆಸಕ್ತಿ ಮೂಡಲು ಕಾರಣವೇನು?’ ಎಂದು ನನಗೆ ವಾಟ್ಸಾಪ್ ಮೆಸೇಜ್ ಮಾಡಿದ್ದರು. ಜೇನು ಸಾಕಾಣಿಕೆ ಬಗ್ಗೆ ಆಸಕ್ತಿ ನನಗೆ ಹಠಾತ್ ಮೂಡಿದ್ದಲ್ಲ.

ಬಾಲ್ಯದಿಂದಲೂ ನನಗೆ ಅವುಗಳ ಬಗ್ಗೆ ಅತೀವ ಆಸಕ್ತಿಯಿತ್ತು. ಮಲೆನಾಡಿನಲ್ಲಿ ಹುಟ್ಟಿ-ಬೆಳೆದ ನನಗೆ ಜೇನಿನ ವಿಸ್ಮಯ ಲೋಕದ ಬಗ್ಗೆ ಬೆರಗು ಮೊದಲಿ ನಿಂದಲೂ ಇತ್ತು. ಆದರೆ ನಾನು ಜೇನಿನ ಬಗ್ಗೆ ಹೆಚ್ಚು ಕೇಳಿದ್ದು, ತಿಳಿದುಕೊಂಡಿದ್ದು ಕಾಡಿನಲ್ಲಿ ಅಲ್ಲ, ಜೇನು ಪೆಟ್ಟಿಗೆಯ ಮುಂದಲ್ಲ, ಜೇನು ಸಾಕಾಣಿಕಾ ಕೇಂದ್ರದಲ್ಲಲ್ಲ, ಜೇನು ಕೃಷಿಕರಿಂದಲ್ಲ, ಜೇನು ಪರಿಣತರಿಂದಲ್ಲ… ಇವರಾರಿಂದಲೂ ಅಲ್ಲವೇ ಅಲ್ಲ.

ಆಶ್ಚರ್ಯವಾಗಬಹುದು, ಆದರೆ ನಾನು ಜೇನುಗಳ ಬಗ್ಗೆ ಹೆಚ್ಚು ಕೇಳಿದ್ದು ಮ್ಯಾನೇಜ್ಮೆಂಟ್ ಕ್ಲಾಸುಗಳಲ್ಲಿ ಮತ್ತು ಅವುಗಳ
ಕುರಿತು ಹೆಚ್ಚು ಓದಿದ್ದು ಕಾರ್ಪೊರೇಟ್ ಪುಸ್ತಕಗಳಲ್ಲಿ. ಯಾವ ಮ್ಯಾನೇಜ್ಮೆಂಟ್ ಗುರುವೂ ಜೇನುಗಳ ಬಗ್ಗೆ ಮಾತಾಡದೇ
ಟೀಮ್ ವರ್ಕ್ ಮಹತ್ವವನ್ನು ಬಣ್ಣಿಸಲಾರ. ಹೀಗಾಗಿ ಹೊಲ- ಗದ್ದೆ, ಕಾಡಿನಲ್ಲಿ ಕೆಲಸ ಮಾಡುವ ಕೃಷಿಕರಿಗಿಂತ, ಏರ್ ಕಂಡಿಷ ರೂಮಿನಲ್ಲಿ ಕುಳಿತು ಕೆಲಸ ಮಾಡುವವರಿಂದಲೇ ಜೇನುಗಳ ಬಗ್ಗೆ ಹೆಚ್ಚು ಕೇಳಿದ್ದೇನೆ. ಈ ಜಗತ್ತಿನಲ್ಲಿ ಜೇನುಗಳ ಬಗ್ಗೆ ಹೆಚ್ಚು ಮಾತಾಡಿರುವವರು ಮತ್ತು ಬರೆದವರು ಜೇನು ಕೃಷಿಕರಲ್ಲ, ಮ್ಯಾನೇಜ್ಮೆಂಟ್ ಗುರುಗಳು.

ನೀವು ಪೀಟರ್ ಡ್ರಕರ್ ಹೆಸರನ್ನು ಕೇಳಿರಬಹುದು. ಆಸ್ಟ್ರಿಯನ್-ಅಮೆರಿಕನ್ ಮ್ಯಾನೇಜ್ಮೆಂಟ್ ಗುರುವಾದ ಡ್ರಕರ್‌ನ ಸಿದ್ಧಾಂತಗಳು ಆಧುನಿಕ ಬಿಜಿನೆಸ್ ಕಾರ್ಪೊರೇಷನ್‌ನ ವಾಸ್ತವಿಕ ಅಡಿಗಲ್ಲುಗಳು ಎಂದು ಭಾವಿಸಲಾಗಿದೆ. ಆಧುನಿಕ ಮ್ಯಾನೇಜ್ಮೆಂಟ್ ಸಂಸ್ಥಾಪಕ ಎಂದು ಕರೆಯಿಸಿಕೊಳ್ಳುವ ಡ್ರಕರ್‌ನ ಯಾವುದೇ ಉಪನ್ಯಾಸವನ್ನು ಕೇಳಿ, ಆತ ಜೇನ್ನೊಣಗಳ ಬಗ್ಗೆ ಕನಿಷ್ಠ ಹತ್ತಾದರೂ ದೃಷ್ಟಾಂತಗಳನ್ನು ಹೇಳಿರುತ್ತಾನೆ.

ಒಂದು ಮ್ಯಾನೇಜ್ಮೆಂಟ್ ಕ್ಲಾಸಿನಲ್ಲಿ ಡ್ರಕರ್ ಬೋರ್ಡಿನ ಮೇಲೆ, Be positive, Be thankful, Be cool, but
most of all Be kind ಎಂದು ಬರೆಯುತ್ತಾನೆ. ಸಭಿಕರೆಲ್ಲ ಅದನ್ನು ನೋಡಿ, ಆ ವಾಕ್ಯದಲ್ಲಿ ಅದೇನು ಮಹಾನ್ ಸಂಗತಿ
ಇದೆ ಎಂಬಂತೆ ನೋಡುತ್ತಾರೆ. ಆಗ ಡ್ರಕರ್, Be ಎಂದು ಬರೆದಿರುವ ಕಡೆಯಲ್ಲ Bee ಎಂದು ಬರೆಯಿರಿ (Bee positive, Bee thankful, Bee cool, but most of all Bee kind) ಎನ್ನುತ್ತಾನೆ. ಅಲ್ಲಿ ಸೇರಿದವರಿಂದ ‘ಒಹ್’ ಎಂಬ ಉದ್ಗಾರ. ಡ್ರಕರ್ ಯಾವತ್ತೂ ಹೇಳುತ್ತಿದ್ದ ಮತ್ತೊಂದು ಮಾತೆಂದರೆ, Management is doing things right; leadership is doing the right things. But the bees are managers par excellance. ಈ ಜಗತ್ತಿನಲ್ಲಿ ಮಹಾನ್ ಬದಲಾವಣೆ ಮಾಡಲು ನಾನೊಬ್ಬ ಸಣ್ಣ ವ್ಯಕ್ತಿ ಎಂದು ಅಸಹಾಯಕತೆ ವ್ಯಕ್ತಪಡಿಸುವವರಿಗೆ ಡ್ರಕರ್, Anyone who thinks they’re too small to make a difference, has never met the honey bee ಎಂದು ಹೇಳುತ್ತಿದ್ದ.

ಜೀವನದಲ್ಲಿ ನಿಮ್ಮ ರೋಲ್ ಮಾಡೆಲ್ (ಆದರ್ಶ) ಯಾರು ಅಂತ ಯಾರಾದರೂ ಕೇಳಿದರೆ ನಾನು ನಿನ್ನಂದೇಹವಾಗಿ
ಹೇಳೋದು ಜೇನು ಹುಳುಗಳು ಅಂತ. ಅವುಗಳಿಗಿಂತ ಉತ್ತಮವಾದವರು ಸಿಗಲು ಸಾಧ್ಯವೇ ಇಲ್ಲ. ಒಂದು ವೇಳೆ ಅಂಥವರು ಸಿಕ್ಕರೆ, ಅವರೂ ಜೇನುಹುಳುಗಳಿಂದ ಪ್ರಭಾವಿತರಾದವರೇ. ಹೀಗಾಗಿ ಅತ್ಯುತ್ತಮ ವ್ಯಕ್ತಿತ್ವ ವಿಕಸನ ಗುರುಗಳಿಗೂ
ಜೇನ್ನೊಣವೇ ಆದರ್ಶ. ನೀವು ಜೇನ್ನೊಣಗಳನ್ನು ಒಂದು ಗಂಟೆ ದಿಟ್ಟಿಸಿದ್ದೇ ಆದಲ್ಲಿ, ಏನಿಲ್ಲವೆಂದರೂ ಕನಿಷ್ಠ ಹತ್ತು ಜೀವನ ಪಾಠಗಳನ್ನು, ಕಾರ್ಪೊರೇಟ್ ನೀತಿಗಳನ್ನು ಕಲಿಯಬಹುದು.

ನಾನು ಜೇನ್ನೊಣಗಳನ್ನು ಸಾಕಿದ್ದು ಅದರ ತುಪ್ಪವನ್ನು ಸೇವಿಸಲಿಕ್ಕಲ್ಲ. ಬೇಸರ ಬಂದಾಗ ಅದರ ಗೂಡಿನ ಮುಂದೆ ನಿಂತು ಅವುಗಳನ್ನು ತದೇಕಚಿತ್ತದಿಂದ ನೋಡುತ್ತಾ, ಅಗತ್ಯ ಪ್ರೇರಣೆಯನ್ನು ಪಡೆಯುವುದಕ್ಕಾಗಿ ಮತ್ತು ಜೀವನ ಪಾಠವನ್ನು ಕಲಿಯುವುದಕ್ಕಾಗಿ.

ಜೇನುಹುಳುಗಳಿಗೆ ರಜಾ, ವಿಶ್ರಾಂತಿ, ರಿಲ್ಯಾಕ್ಸ್ ನಲ್ಲಿ ನಂಬಿಕೆಯೇ ಇಲ್ಲ. ಅದಕ್ಕೆ ತಲೆನೋವು, ಗಂಟಲುನೋವು, ಹೆರಿಗೆ
ಬೇನೆ ಯಾವವೂ ಬರುವುದಿಲ್ಲ. ಹೀಗಾಗಿ ಸಿಕ್ ಲೀವ್, ಸಿಎಲ್, ಪಿಎಲ್, ಎಂಎಲ್ (ಮೆಟರ್ನಿಟಿ ಲೀವ್) ಹೀಗೆ ಯಾವುದನ್ನೂ ಹಾಕುವುದಿಲ್ಲ. ಗಡಿಯಾರ ನೋಡಿ ಕೆಲಸ ಮಾಡುವುದಿಲ್ಲ. ಬೆಳಗ್ಗೆ ಆರರಿಂದ ಸಾಯಂಕಾಲ ಆರರವರೆಗೆ ನಿರಂತರ ಕೆಲಸ, ವಾರದ ದಿನ, ವರ್ಷದ ಮುನ್ನೂರೈವತ್ತು ದಿನವೂ ಹೀಗೆಯೇ. ಕೆಲಸ ಕದ್ದು ಗೊತ್ತೇ ಇಲ್ಲ. ಇಂದು ಯಾವ ಕೆಲಸ ಮಾಡಬೇಕು ಎಂಬುದನ್ನು ಯಾರೂ ಹೇಳಬೇಕಿಲ್ಲ.

ಕೆಲಸ ಮಾಡುತ್ತಿದೆಯಾ, ಇಲ್ಲವಾ ಎಂಬುದನ್ನು ಯಾರೂ ಉಸ್ತುವಾರಿ ಮಾಡಬೇಕಿಲ್ಲ, ಕಣ್ಗಾವಲು ಇಡಬೇಕಿಲ್ಲ. ಅಟೆಂಡೆ ಬುಕ್ ಅಗತ್ಯವಿಲ್ಲ . ಅದಕ್ಕೆ ಗೊತ್ತಿರೋದು ಅದೊಂದೇ ಕೆಲಸ. ಹೂವಿನ ಮಕರಂದವನ್ನು ಹೀರಿ ತುಪ್ಪ ಮಾಡುವುದು. ಆ ತುಪ್ಪದಲ್ಲಿ ಒಂದಂಶವನ್ನು ಮಾತ್ರ ತಾನಿಟ್ಟುಕೊಂಡು ಉಳಿದುದನ್ನೆಲ್ಲ ಬೇರೆಯವರಿಗೆ ಕೊಡುವುದು. (ಇದನ್ನು ಯಾವ ಪುಣ್ಯಾತ್ಮ ಲೆಕ್ಕ ಹಾಕಿದನೋ ಗೊತ್ತಿಲ್ಲ, ಅರ್ಧ ಕೆಜಿ ಜೇನು ತುಪ್ಪ ತಯಾರಿಸಲು, ಮುನ್ನೂರು ಹುಳುಗಳು, ೮೮ ಸಾವಿರ ಕಿ.ಮೀ. ಪ್ರಯಾಣ ಮಾಡಿ, ಹತ್ತು ಲಕ್ಷ ಹೂವುಗಳ ಮೇಲೆ ಕುಳಿತು, ಮಕರಂದ ಹೀರಿ, ಗೂಡಿಗೆ ತರಬೇಕಂತೆ.) ಪ್ರಾಯಶಃ ಇಂಥ ನಿರಂತರ ಕರ್ಮಯೋಗಿ, ಕಾಯಕಜೀವಿ ಮತ್ತು ಪರೋಪಕಾರಿ ಮನೋಭಾವವಿರುವವರು ಈ ಜಗತ್ತಿನಲ್ಲಿ ಮತ್ತೊಬ್ಬರು ಸಿಗಲಾರರು.

ಜೇನುಹುಳುಗಳು ನಮ್ಮ ಪ್ರಕೃತಿಯ ಅದ್ಭುತ ಟೀಮ್ ಪ್ಲೇಯರುಗಳು. ಅವು ಮಾಡುವ ಪ್ರತಿಯೊಂದು ಕೆಲಸದಲ್ಲೂ
ಮತ್ತೊಬ್ಬರಿಗೆ ಸಹಕರಿಸುತ್ತವೆ. ಒಂದು ಜೇನುಗೂಡಿನಲ್ಲಿ ಐವತ್ತು ಸಾವಿರ ಹುಳುಗಳಿದ್ದರೆ, ಅದು ತನಗಿಂತ ಹೆಚ್ಚಾಗಿ ತನ್ನ
ಗೂಡಿನ ರಕ್ಷಣೆಯ ಬಗ್ಗೆ ಕಾಳಜಿ ವಹಿಸುತ್ತದೆ. ಒಂದು ಹುಳು ಕಷ್ಟದಲ್ಲಿದ್ದರೆ ಉಳಿದವು ಆ ಕೆಲಸಕ್ಕೆ ಮುಂದಾಗುತ್ತವೆ. ಒಂದು
ಹುಳು ಇಡೀ ಗೂಡಿನ ಹುಳುಗಳಿಗಾಗಿ, ಇಡೀ ಗೂಡಿನಲ್ಲಿರುವ ಹುಳುಗಳೆಲ್ಲ ಒಂದು ಹುಳದ ಹಿತಾಸಕ್ತಿಗಾಗಿ ಶ್ರಮಿಸುತ್ತವೆ.
ಒಂದು ಸಂಘಟಿತ ತಂಡ ಹೇಗೆ ಕೆಲಸ ಮಾಡಬೇಕು ಎಂಬುದಕ್ಕೆ ಜೇನುಹುಳುಗಳು ಮಾದರಿ. ಯಾವ ಕಾರಣಕ್ಕೂ ಅವು ತಮ್ಮ ಗೂಡಿನಲ್ಲಿರುವ ಹುಳುಗಳ ವಿರುದ್ಧ ಕೆಲಸ ಮಾಡಲಿಕ್ಕಿಲ್ಲ. ಅವುಗಳಿಗೆ ವಿಶ್ವಾಸದ್ರೋಹ ಮಾಡಿ ಗೊತ್ತಿಲ್ಲ. ತಾವು ಸತ್ತಾದರೂ ತಮ್ಮ ಗೂಡಿನಲ್ಲಿಇರುವ ಹುಳುಗಳ ರಕ್ಷಣೆ ಮಾಡುತ್ತವೆ.

‘ಒಗ್ಗಟ್ಟಿನಲ್ಲಿ ಬಲವಿದೆ’ ಎಂಬ ಮಾತು ಅವುಗಳನ್ನು ನೋಡಿಯೇ ಹೇಳಿದ್ದು. ತನ್ನ ಜೀವಿತ ಅವಧಿಯಲ್ಲಿ ಒಂದು ಹುಳು ಹೆಚ್ಚೆಂದರೆ ಒಂದು ಟೇಬಲ್ ಸ್ಪೂನ್ ತುಪ್ಪವನ್ನು ತಯಾರಿಸಬಹುದು, ಒಂದು ಹನಿ ತುಪ್ಪಕ್ಕಾಗಿ ಹತ್ತಾರು ಮೈಲಿ ದೂರ ಹಾರಿ ಹೋಗಿ ಬರಬೇಕಾಗಬಹುದು, ಆದರೂ ಅದು ಕೆಲಸ ಮಾಡದೇ, ಒಂದು ಸಣ್ಣ ಹನಿಯನ್ನೂ ಸೇವಿಸಲಿಕ್ಕಿಲ್ಲ. ಜೇನು ಹುಳುಗಳು ಪರೋಪಕಾರಿಗಳು. ಅವು ಬೇರೆಯವರ ಒಳಿತಿಗಾಗಿ ಜೀವಿಸುತ್ತವೆ.

ಒಳ್ಳೆಯದನ್ನು ಮಾಡುವುದು ಮತ್ತು ಒಳ್ಳೆಯತನವನ್ನು ಮೆರೆಯುವುದು ಅವುಗಳ ಜೀವದ ಮಿಳಿತವಾಗಿದೆ. ತನಗೇನೋ ಲಾಭವಿದೆ, ಮುಂದೆ ಲಾಭವಾಗುತ್ತದೆ ಎಂಬ ಆಸೆಯಿಂದ ಅವು ಹೂವುಗಳಿಗೆ ಪರಾಗಸ್ಪರ್ಶ (pollination) ಮಾಡುವು ದಿಲ್ಲ. ಅಷ್ಟೇ ಅಲ್ಲ, ತಾನು ತಯಾರಿಸಿದ ತುಪ್ಪವನ್ನೆ ತಾನೇ ಕುಡಿಯುವುದಿಲ್ಲ. ಇದು ಗೊತ್ತಿದ್ದರೂ, ಅದು ಹೆಚ್ಚುವರಿ ತುಪ್ಪ ವನ್ನು ತಯಾರಿಸದೇ ಇರುವುದಿಲ್ಲ. ಸಾಯುವ ಕೊನೆ ಕ್ಷಣದ ತನಕ ಅದು ಪರಾಗಸ್ಪರ್ಶಕ್ಕೆ ನೆರವಾಗುತ್ತದೆ ಮತ್ತು ತನ್ನ ಗೂಡಿನ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಲೇ ಇರುತ್ತದೆ.

ಜೇನುಹುಳುಗಳು life cycleನ್ನು ನಿಯಂತ್ರಿಸದೇ ಇರಬಹುದು, ಆದರೆ ಅವುಗಳ ದಯಾಪರತೆಯ ಲಾಭವನ್ನು ಪ್ರಕೃತಿ ಒಂದಿಂದು ರೀತಿಯಲ್ಲಿ ಪಡೆಯುತ್ತದೆ. ಅವುಗಳಿಗೆ ಒಳ್ಳೆಯದನ್ನು ಮಾಡುವುದು ಮತ್ತು ಸಿಹಿಯನ್ನು ನೀಡುವುದರ ಹೊರತಾಗಿ ಮತ್ತೇನೂ ಗೊತ್ತಿಲ್ಲ. ಜೇನ್ನೊಣಗಳು ಏಕಕಾಲಕ್ಕೆ ಹಲವು ಕೆಲಸ(Multitask) ಗಳನ್ನು ಮಾಡುವುದಿಲ್ಲ. ಅವು ಸದಾ ಏಕಾಗ್ರ ಚಿತ್ತ. ಅವುಗಳ ಗಮನವೆಲ್ಲ ಒಂದೇ ಕಡೆಗೆ. ಗೂಡಿನಲ್ಲಿ ನಲವತ್ತು-ಐವತ್ತು ಸಾವಿರ ಹುಳುಗಳಿದ್ದರೂ, ಒಂದೊಂದಕ್ಕೆ ಬೇರೆ ಬೇರೆ ನಿರ್ದಿಷ್ಟ ಜವಾಬ್ದಾರಿಗಳಿದ್ದರೂ, ಅವು ತಮಗೆವಹಿಸಿದ ಕೆಲಸದ ಹೊರತಾಗಿ ಬೇರೇನನ್ನೂ ಮಾಡುವುದಿಲ್ಲ. ಬೇರೆಯ ವರ ಕೆಲಸಗಳಲ್ಲಿ ‘ಕೊಂಬು’ ತೋರಿಸುವುದಿಲ್ಲ.

ತಾನಾಯಿತು, ತನ್ನ ಕೆಲಸವಾಯಿತು, ಅಷ್ಟೇ. ಹೀಗಾಗಿ ಅವುಗಳ ಕೆಲಸದಲ್ಲಿ ಹಿನ್ನಡೆ ಎಂಬುದೇ ಇಲ್ಲ. ತನಗೆ ವಹಿಸಿದ ಕೆಲಸ ವನ್ನು ಮಾಡದೇ ಇರುವುದು, ಕೆಲಸ ಮಾಡದೇ ಕಳ್ಳ ಬೀಳುವುದು, ಕೆಲಸ ಕದಿಯುವುದು ಗೊತ್ತೇ ಇಲ್ಲ. ಗೂಡಿನಲ್ಲಿರುವ ಎಲ್ಲಾ ಹುಳುಗಳೂ ಹೊರಗೆ ಹೋಗುವುದಿಲ್ಲ. ಕೆಲವು ಹುಳುಗಳಿಗೆ ಒಳಗಿದ್ದು ಗೂಡಿನ ನಿರ್ವಹಣೆ ಮಾಡಬೇಕಾಗುತ್ತದೆ. ಅವು ಎಂದೂ ಕೆಲಸಗಳನ್ನು ಬದಲಿಸಿಕೊಳ್ಳುವುದಿಲ್ಲ.

ಹುಳುಗಳ ಸಂಖ್ಯೆ ಹೆಚ್ಚಾದರೆ, ಆಹಾರ ದಾಸ್ತಾನು ಮಾಡಿಕೊಳ್ಳಲು ಜಾಗ ಬೇಕಾದರೆ ಅಥವಾ ಗೂಡನ್ನು ವಿಸ್ತರಿಸಬೇಕಾಗಿ
ಬಂದರೆ ಮಾತ್ರ ಅವು ಗೂಡನ್ನು ವಿಸ್ತರಿಸುತ್ತವೆ. ಹವಾಮಾನದ ವೈಪರೀತ್ಯಗಳಿಂದ ಆಹಾರ ಅಭಾವ ತಲೆದೋರಿದರೆ, ನೈಸರ್ಗಿಕ ವಿಪತ್ತಿನ ಸುಳಿವು ಸಿಕ್ಕರೆ, ಅದಕ್ಕೆ ಅನುಗುಣವಾಗಿ ಅವು ತಮ್ಮ ಗೂಡಿನ ನಿರ್ವಹಣೆಗೆ ಕಾರ್ಯಪ್ರವೃತ್ತವಾಗುತ್ತವೆ. ಹಾಸಿಗೆಯಿದ್ದಷ್ಟು ಕಾಲುಚಾಚು, ತನಗೆ ಸಂಬಂಧಪಡದ ವಿಚಾರದಲ್ಲಿ ತಲೆ ಹಾಕಬೇಡ ಎಂಬ ಮಾತು ಅವುಗಳಿಗೆ ನೂರಕ್ಕೆ ನೂರು ಅನ್ವಯ.

ಅನವಶ್ಯಕವಾದ ಕೆಲಸಗಳಲ್ಲಿ ತೊಡಗಿ, ತಮ್ಮ ಶಕ್ತಿ, ಶ್ರಮವನ್ನು ಅವು ವ್ಯಯ ಮಾಡಿಕೊಳ್ಳುವುದಿಲ್ಲ. ಅಗತ್ಯಕ್ಕಿಂತ ಹೆಚ್ಚು
ಶೇಖರಣೆ ಮಾಡಿಕೊಳ್ಳುವ ವಾಂಛೆಯೂ ಅವುಗಳಿಗಿಲ್ಲ. ಜೇನುಹುಳುಗಳು ಯಾವ ವಾತಾವರಣ ಮತ್ತು ಪರಿಸರಕ್ಕಾದರೂ
ಹೊಂದಿಕೊಳ್ಳಬಲ್ಲವು. ಅವು ಸದಾ ವಿಕಸನ(ಛಿqಟ್ಝqಛಿ)ಗೊಳ್ಳುತ್ತಲೇ ಇರುತ್ತವೆ. ಕಾಡಿಲ್ಲದಿದ್ದರೆ, ಕಾಂಕ್ರೀಟ್ ಕಾಡಾದರೂ
ಆದೀತು. ಮರವಿಲ್ಲದಿದ್ದರೆ, ಗೋಡೆ! ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಹೋದರೂ, ಅಲ್ಲಿಗೆ ತಕ್ಷಣ ಹೊಂದಿ ಕೊಳ್ಳಬಲ್ಲವು. ಕೇವಲ ಹತ್ತು ನಿಮಿಷಗಳಲ್ಲಿ ಅವುಗಳಿಗೆ ತಾವು ಹೊಸ ತಾಣಕ್ಕೆ ಬಂದಿದ್ದೇವೆ ಎಂಬುದು ತಿಳಿಯುತ್ತದೆ. ಆ ಕ್ಷಣದಿಂದಲೇ ಅವು ಹೊಸ ಪರಿಸರಕ್ಕೆ ಹೊಂದಿಕೊಂಡುಬಿಡುತ್ತವೆ.

ಜೇನುಪೆಟ್ಟಿಗೆಯಲ್ಲಿರುವ ಹುಳುಗಳನ್ನು ಕತ್ತಲಾಗುತ್ತಿದ್ದಂತೆ (ಸಾಯಂಕಾಲ ಏಳು ಗಂಟೆಯ ನಂತರ) ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ, ಒಂದು ಊರಿಂದ ಮತ್ತೊಂದು ಊರಿಗೆ, ಬೆಳಗಾಗುವುದರೊಳಗೆ ಸ್ಥಳಾಂತರಿಸಬೇಕು. ಕೆಲಕ್ಷಣಗಳಲ್ಲಿ ತಾನು ಹೊಸ ಊರಿಗೆ ಬಂದಿದ್ದೇನೆ ಎಂಬುದು ಅವುಗಳಿಗೆ ಗೊತ್ತಾಗುತ್ತದೆ. ಹಾಗಂತ ಅವುಗಳ ವರ್ತನೆಯಲ್ಲಿ ಸ್ವಲ್ಪವೂ ಬದಲಾವಣೆ ಯಾಗುವುದಿಲ್ಲ. ಅಂದರೆ ಅವು ಬದಲಾವಣೆಗೆ ಬಹುಬೇಗ ಒಗ್ಗಿಕೊಳ್ಳುತ್ತವೆ. ಗಂಡನಮನೆಯಲ್ಲಿ ಹುಡುಗಿಯರಿಗೆ ಒಗ್ಗಿಕೊಳ್ಳಲು ವರ್ಷಗಟ್ಟಲೆ ಕಾಲಾವಕಾಶಬೇಕು, ಹಾಂ! ಪ್ರಾಯಶಃ ಸೈನಿಕರಾದವರು ಮಹಾದಂಡನಾಯಕನ ಆದೇಶವನ್ನು ಉಲ್ಲಂಘಿಸಬಹುದು.

ಆದರೆ ರಾಣಿ ಹುಳುವಿನ ಆದೇಶವನ್ನು ಗೂಡಿನಲ್ಲಿರುವ ನಲವತ್ತು-ಐವತ್ತು ಸಾವಿರ ಹುಳುಗಳು ಕಡ್ಡಾಯವಾಗಿ ಪಾಲಿಸುತ್ತವೆ. ಯಾವ ಕಾರಣಕ್ಕೂ ರಾಣಿಯ ಆದೇಶವನ್ನು ಉಪೇಕ್ಷಿಸುವುದಿಲ್ಲ. ಒಂದು ಜಾಗದಿಂದ ಮತ್ತೊಂದು ಜಾಗಕ್ಕೆ ಹಾರಿ ಹೋಗ ಬೇಕು ಎಂದು ರಾಣಿ ನಿರ್ಧರಿಸಿದರೆ, ಉಳಿದೆಲ್ಲವೂ ಮರು ಮಾತಿಲ್ಲದೇ ಅವಳನ್ನು ಹಿಂಬಾಲಿಸುತ್ತವೆ. ಹೈಕಮಾಂಡ್ ಆದೇಶವನ್ನಾ ದರೂ ನಾಯಕರು ಧಿಕ್ಕರಿಸಬಹುದು, ಹೈಕಮಾಂಡ್ ವಿರುದ್ಧ ಬಂಡಾಯದ ಬಾವುಟ ಹಾರಿಸಬಹುದು. ಆದರೆ ರಾಣಿಯ ಆದೇಶವನ್ನು ಉಲ್ಲಂಘಿಸುವ ಮಾತೇ ಇಲ್ಲ.

ಬಿಜೆಪಿಯ ಸಂತೋಷಜೀ ರಾಣಿಹುಳುವಾಗಿದ್ದರೆ, ಶೆಟ್ಟರ್ ಎಂಬ ಜೇನ್ನೊಣ ಯಾವ ಕಾರಣಕ್ಕೂ ರಾಣಿಯ ಆದೇಶವನ್ನು
ಽಕ್ಕರಿಸಿ, ಕಾಂಗ್ರೆಸ್ ಸೇರುತ್ತಿರಲಿಲ್ಲ. ಈ ರೀತಿಯ ಶಿಸ್ತು ಮತ್ತು ಆದೇಶಪಾಲನೆ ಮತ್ತೆಲ್ಲೂ ಕಾಣಲು ಸಾಧ್ಯವಿಲ್ಲ. ಹಾಗಂತ
ಜೇನು ಹುಳುಗಳು ತಮ್ಮದು ‘ಶಿಸ್ತಿನ ಪಕ್ಷ’ ಎಂದು ಹೇಳಿಕೊಳ್ಳುವುದಿಲ್ಲ! ಜೇನುಗೂಡಿನಲ್ಲಿ ಬ್ಯುರೋಕ್ರಸಿಗೆ ಆಸ್ಪದವೇ ಇಲ್ಲ. ಅಲ್ಲಿ ಯಾವ ಐಎಎಸ್, ಐಪಿಎಸ್ ಶ್ರೇಣಿಗಳಿಲ್ಲ. ರಾಣಿ ಹುಳವೇ ಸುಪ್ರೀಂ ಆದರೂ, ಅದು ಸಹ ಇನ್ನಿತರ ಹುಳುಗಳಂತೆ ಕಾರ್ಯತತ್ಪರ. ಅದು ತನ್ನನ್ನು ಗೂಡಿನ ‘ಪ್ರಧಾನ ಸೇವಕಿ’ ಎಂದೇ ಭಾವಿಸುತ್ತಾಳೆ!

ಜೇನು ಹುಳುಗಳು ಸಾಮಾಜಿಕ ಜಾಲತಾಣಗಳಿಗಿಂತ ಹೆಚ್ಚು ವೈರಲ. ಅಂದರೆ ಅವುಗಳಲ್ಲಿ ಕಮ್ಯುನಿಕೇಶನ್ ವ್ಯವಸ್ಥೆ ಇನ್ನೂ
ಚುರುಕು. ಪರಿಸರದಲ್ಲಿ ಚಿಕ್ಕ ಬದಲಾವಣೆಯಾದರೂ, ಕ್ಷಣಾರ್ಧದಲ್ಲಿ ಕಟ್ಟಕಡೆಯ ಹುಳಕ್ಕೂ ವಿಷಯ ತಲುಪಿರುತ್ತದೆ.
ತಮಗೆ ಬಂದ ಮೆಸೇಜುಗಳನ್ನು ಅವು ಇಟ್ಟುಕೊಳ್ಳುವುದಿಲ್ಲ. ತಮ್ಮ ವಾಟ್ಸಾಪ್ ಗ್ರುಪಿನಲ್ಲಿ ತತ್ ಕ್ಷಣದಲ್ಲಿ ಫಾರ್ವರ್ಡ್ ಮಾಡಿಬಿಡುತ್ತವೆ. ಅವುಗಳ ಮಧ್ಯೆ Communication Hole ಸೃಷ್ಟಿಯಾಗುವುದೇ ಇಲ್ಲ. ಒಂದು ತಾಣ ಬಿಟ್ಟು ಮತ್ತೊಂದು ತಾಣಕ್ಕೆ ಹಾರಿ ಹೋಗುವಾಗ, ರಾಣಿ ಹುಳುದ ಆದೇಶದಲ್ಲಿ ಬದಲಾವಣೆಯಾದರೆ, ಎಲ್ಲ ನಲವತ್ತು-ಐವತ್ತು ಸಾವಿರ ಹುಳುಗಳಿಗೆ ಹನ್ನೆರಡರಿಂದ ಹದಿನೈದು ಸೆಕೆಂಡಿನೊಳಗೆ ವಿಷಯ ರವಾನೆಯಾಗುತ್ತದೆ. ಗೂಡುಗಳ ಮೇಲೆ ಮನುಷ್ಯರಿಂದ ಅಥವಾ ಪ್ರಾಣಿಗಳಿಂದ ದಾಳಿಯಾದರೆ, ಎಲ್ಲ ಹುಳುಗಳೂ ಪ್ರತಿದಾಳಿಗೆ ಮುಂದಾಗುವುದಿಲ್ಲ.

ಕೊಂಬಿ (Sting) ನಿಂದ ಕಡಿದರೆ ಸಾಯಬೇಕಾಗುತ್ತದೆ ಎಂಬುದು ಅವುಗಳಿಗೆ ಗೊತ್ತಿರುವುದರಿಂದ, ಎಲ್ಲವೂ ದಾಳಿಗೆ ಮುಂದಾಗುವುದಿಲ್ಲ. ಗೂಡಿನಲ್ಲಿರುವ ಜೇನುಗಳ ಡ್ಯೂಟಿ ಆಗಾಗ ಬದಲಾಗುತ್ತಿರುತ್ತವೆ. ಅವು ನರ್ಸ್‌ಗಳಾಗಿ, ಉಸ್ತುವಾರಿ ಗಳಾಗಿ, ಸ್ವಚ್ಛತಾ ಕಾರ್ಮಿಕರಾಗಿ, ಜೇನುರಟ್ಟಿ (Honeycomb)ನ ರಚನಾಕಾರರಾಗಿ, ನಿರ್ಮಾಣಕಾರರಾಗಿ, ಪರಾಗಕಣ ಗಳನ್ನು ಪ್ಯಾಕ್ ಮಾಡುವ ಕಾರ್ಮಿಕರಾಗಿ, ಜೇನುಗೂಡಿನ ರಕ್ಷಕಪಡೆಯಾಗಿ…ಹೀಗೆ ಬೇರೆ ಬೇರೆ ಜವಾಬ್ದಾರಿಗಳಲ್ಲಿ ಕೆಲಸ ಮಾಡಬೇಕಾಗುತ್ತದೆ.

ಈ ಡ್ಯೂಟಿ ಕಾಲಕಾಲಕ್ಕೆ ಬದಲಾಗುತ್ತಿರುತ್ತದೆ. ಯಾವ ಡ್ಯೂಟಿಗೆ ಹಾಕಿದರೂ ಇಲ್ಲ ಎನ್ನುವಂತಿಲ್ಲ.  ವರದಿಗಾರರಾದವರನ್ನು ಡೆಸ್ಕಿಗೆ ಹಾಕಿದರೆ ಬೇಸರಿಸಿಕೊಳ್ಳುತ್ತಾರೆ. ಆದರೆ ಕೆಲಸದ ವಿಷಯದಲ್ಲಿ ಜೇನುಗಳಿಗೆ ಬೇಸರವೇ ಇಲ್ಲ. ಅವು ಅನ್ಯ ಮನಸ್ಸಿ ನಿಂದ ಯಾವ ಕೆಲಸವನ್ನೂ ಮಾಡುವುದಿಲ್ಲ. ತಮ್ಮ ಕೆಲಸದಲ್ಲಿ ನೂರಕ್ಕೆ ನೂರು ಕಾರ್ಯಮಗ್ನ. ಪ್ರತಿದಿನ ಡ್ಯೂಟಿ ಬದಲಿಸಿ ದರೂ ಕಮಕ್ ಕಿಮಕ್ ಎನ್ನುವುದಿಲ್ಲ. ಜೇನು ಹುಳುಗಳು ಏನನ್ನೇ ಗೂಡಿಗೆ ತಂದರೂ ಅದು ಪರಿಶುದ್ಧ ವಾಗಿರುವಂತೆ ನೋಡಿಕೊಳ್ಳುತ್ತದೆ. ಅವುಗಳ ಆಯ್ಕೆಯ ‘ಶುದ್ಧ’ ತನ ಮಿಳಿತವಾಗಿದೆ. ಮಲಿನವಾದ ಯಾವ ಪದಾರ್ಥವನ್ನೂ ಅವು ಆಯ್ಕೆ ಮಾಡಿಕೊಳ್ಳುವುದೇ ಇಲ್ಲ. ಹೀಗಾಗಿ ಜೇನು ತುಪ್ಪ ಸಾವಿರ ವರ್ಷವಾದರೂ ಕೆಡುವುದಿಲ್ಲ.

ಜೇನಿಗಿಂತ ದೊಡ್ಡ ಗುರು, ವ್ಯಕ್ತಿತ್ವ ವಿಕಸನ ಗುರು, ಆಧ್ಯಾತ್ಮಿಕ ಗುರು, ಕಾಯಕಶ್ರೀ, ಬಾಸ್, ನಾಯಕ, ಸಂಗಾತಿ, ಸಜ್ಜನ, ಆತ್ಮಸಖ, ಪ್ರೇರಣಾದಾಯಿ, ಮಾರ್ಗದರ್ಶಕ ಮತ್ತೊಬ್ಬನಿಲ್ಲ. ದಿನದಲ್ಲಿ ಎರಡು ನಿಮಿಷ ಜೇನುಪೆಟ್ಟಿಗೆಯ ಮುಂದೆ ನಿಂತು ದಿಟ್ಟಿಸಿದರೆ, ಆ ದಿನಕ್ಕೆ ಬೇಕಾಗುವ ಪ್ರೇರಣೆ, ಬದುಕಿಗೆ ಬೇಕಾಗುವ ಲವಲವಿಕೆಯನ್ನು ಪಡೆಯಬಹುದು.

Bee Grateful. To Bees !