Thursday, 12th December 2024

ಈತನ ಹೆಸರಿನಲ್ಲೇ ಕಾರ್‌ ಇದ್ದರೂ…

ವಿದೇಶವಾಸಿ

dhyapaa@gmail.com

ತನ್ನ ಹೆಸರಿನಲ್ಲೇ ‘ಕಾರ್’ ಇದ್ದರೂ ತಾನೇ ಕಟ್ಟಿದ, ವಿಶ್ವದಾದ್ಯಂತ ಹೆಸರು ಮಾಡಿದ ಸಾಮ್ರಾಜ್ಯವನ್ನು ಅನುಭವಿಸಲಾಗದೆ ಹೊರ ನಡೆದ ಕಾರ್ಲ್ ರಾಪ್. ಕೆಲವೊಮ್ಮೆ ನಾವು ನೆಟ್ಟ ಗಿಡದ -ಲ ನಮಗೆ ಸಿಗುವುದಿಲ್ಲ. ಅದು ಮುಂದಿನ ತಲೆಮಾರಿನ ಸ್ವತ್ತಾಗುತ್ತದೆ, ಅವರು ಅನುಭವಿಸುತ್ತಾರೆ.

ಕಾರ್… ಕಾರ್… ಕಾರ್… ಕಾರ್…  ಎಲ್ನೋಡಿ ಕಾರ್… ಸುಮಾರು ಹದಿನಾಲ್ಕು ದಶಕಗಳ ಹಿಂದೆ ಮೊದಲ ಬಾರಿ ಇಂಥದ್ದೊಂದು ವಾಹನ ಕಂಡುಹಿಡಿ ದಾಗ, ಯಾರೂ ಇದನ್ನು ಊಹಿಸಿರಲಿಕ್ಕಿಲ್ಲ. ಮುಂದೊಂದು ದಿನ ‘ಕಾರು’ ಎನ್ನುವ ಈ ವಾಹನ ಅನಿವಾರ್ಯಗಳ ಪಟ್ಟಿಗೆ ಸೇರಿಕೊಳ್ಳುತ್ತದೆ
ಅಥವಾ ಕೊನೆ ಪಕ್ಷ ಗೌರವದ ಸಂಕೇತವಾಗುತ್ತದೆ ಎಂದು ಭಾವಿಸಿರಲಿಕ್ಕಿಲ್ಲ. ಮೊದಲು ಮೂರು ಚಕ್ರದಿಂದ ಆರಂಭವಾದ ಈ ವಾಹನ ಇಂದು ಗಂಟೆಗೆ
ಮುನ್ನೂರ ಮೂವತ್ಮೂರು ಮೈಲು ವೇಗದಲ್ಲಿ ಚಲಿಸುತ್ತದೆ ಎಂದರೆ ನಂಬಲೇಬೇಕು.

ಕಳೆದ ಅಕ್ಟೋಬರ್‌ನಲ್ಲಿ ಜರ್ಮನಿಯ ಬಿಯರ್ ಫೆಸ್ಟಿವಲ್ ಮುಗಿಸಿದಾಗ, ನಮ್ಮ ಮುಂದೆ ಎರಡು ಆಯ್ಕೆಗಳಿದ್ದವು. ಮೊದಲನೆಯದು, ಸ್ಟುಟ್‌ಗಾರ್ಟ್
ನಗರದಲ್ಲಿರುವ ಮರ್ಸಿಡೀಸ್-ಬೆಂಜ್ ಮ್ಯೂಜಿ ಯಂಗೆ ಹೋಗುವುದು, ಎರಡನೆಯದು, ಮ್ಯೂನಿಕ್ ನಗರದಲ್ಲಿರುವ ಬಿಎಮ್‌ಡಬ್ಲ್ಯೂ ಮ್ಯೂಸಿಯಂಗೆ
ಹೋಗುವುದು. ನಮ್ಮ ಆಯ್ಕೆ ಎರಡನೆಯದಾಗಿತ್ತು. ಅದಕ್ಕೆ ಎರಡು ಕಾರಣಗಳಿದ್ದವು. ಮೊದಲನೆಯದು, ಬವೇರಿಯನ್ ಪ್ರಾಂತ್ಯದಲ್ಲಿರುವ ಮ್ಯೂನಿಕ್ ನಗರ ಅಕ್ಟೋಬರ್ ಫೆಸ್ಟ್ ನಡೆಯುವ ಸ್ಥಳಕ್ಕೆ ಸಮೀಪದಲ್ಲಿ ದ್ದರೆ, ಎರಡನೆಯದು, ಬಿಎಮ್‌ಡಬ್ಲ್ಯೂ ಕಾರುಗಳು ನಮ್ಮ ಹೃದಯಕ್ಕೆ ಹತ್ತಿರವಾಗಿದ್ದವು.

ಏಕೋ-ಏನೋ, ಮೊದಲಿನಿಂದಲೂ ನನಗೆ ಬಿಎಮ್‌ಡಬ್ಲ್ಯೂ ಎಂದರೆ ಏನೋ ಮೋಹ… ಏಕೋ ದಾಹ… ಅದರ ಅರ್ಥ ಮೊತ್ತ ಮೊದಲು ಕಾರು ತಯಾರಿಸಿ, ಪೇಟೆಂಟ್ ಪಡೆದ ಮರ್ಸಿಡೀಸ್-ಬೆಂಜ್ ಕಾರು ನಿಷ್ಪ್ರಯೋಜಕ ಎಂದಲ್ಲ. ಮರ್ಸಿಡೀಸ್ ಕಾರಿನ ಉಗಮ, ಬೆಳವಣಿಗೆ ಸಾಮಾನ್ಯವಾದದ್ದಲ್ಲ. ಮಾವಿನ ಹಣ್ಣೂ ಸಿಹಿ, ಹಲಸಿನ ಹಣ್ಣೂ ಸಿಹಿ. ಕೆಲವರಿಗೆ ಮಾವು ಇಷ್ಟವಾದರೆ ಇನ್ನು ಕೆಲವರಿಗೆ ಹಲಸು ಇಷ್ಟವಾಗುತ್ತದೆ. ಮಲ್ಲಿಗೆಯೂ ಕಂಪು ಬೀರುತ್ತದೆ, ಸಂಪಿಗೆಯೂ ಪರಿಮಳ ಪಸರಿಸುತ್ತದೆ. ಆದರೂ ಒಬ್ಬೊಬ್ಬರಿಗೆ ಒಂದೊಂದು ಇಷ್ಟವಾಗುತ್ತದಲ್ಲ, ಹಾಗೆ. ಹಾಗಿಲ್ಲದಿದ್ದರೆ ಇಂದು ವಿಶ್ವದಾದ್ಯಂತ ಅರವತ್ತಕ್ಕೂ ಹೆಚ್ಚು ಕಂಪನಿಯ ಕಾರುಗಳು ರಸ್ತೆಯ ಮೇಲೆ ಓಡಾಡುತ್ತಿರಲಿಲ್ಲ.

ಬಿಎಮ್‌ಡಬ್ಲ್ಯೂ ಇನ್ನೂರ ಐವತ್ತು ಬಿಲಿಯನ್ ಯುರೋ ಆದಾಯ ಮತ್ತು ಆಸ್ತಿ ಹೊಂದಿದ ಸಂಸ್ಥೆಯಾಗಿ ಬೆಳೆಯುತ್ತಿರಲಿಲ್ಲ. ಮ್ಯೂನಿಕ್ ನಗರದ ಓಲಂಪಿಯಾ ಪಾರ್ಕ್ ಮೆಟ್ರೊ ನಿಲ್ದಾಣದಿಂದ ಹೊರಬರುತ್ತಿದ್ದಂತೆ ನಿಮಗೆ ಆಕಾಶವನ್ನು ಅಪ್ಪಿ ನಿಂತ ಕಟ್ಟಡವೊಂದು ಕಾಣುತ್ತದೆ. ಮೆಟ್ರೋ ನಿಲ್ದಾಣದಿಂದ ನಾಲ್ಕು ನೂರು ಹೆಜ್ಜೆ ನಡೆದರೆ, ವಿಶ್ವದ ಅಗ್ರಮಾನ್ಯ ಕಾರು ಕಂಪನಿಗಳಲ್ಲೊಂದಾದ ಬಿಎಮ್‌ಡಬ್ಲ್ಯೂ ಸಂಸ್ಥೆಯ ಪ್ರಧಾನ ಕಚೇರಿ,
ಬಿಎಮ್‌ಡಬ್ಲ್ಯೂ ಹಾಗೂ ಮಿನಿ ಕೂಪರ್ ಮ್ಯೂಸಿಯಂ ಸಿಗುತ್ತದೆ. ಒಳಗೆ ಹೊಕ್ಕರೆ ಎರಡು ಅಂತಸ್ತಿನ ವಿಶಾಲವಾದ ಕಾರು ಮತ್ತು ಬೈಕ್ ಲೋಕ.

ನಿಜ, ಬಿಎಮ್‌ಡಬ್ಲ್ಯೂ ಸಂಸ್ಥೆ ಪ್ರತಿ ವರ್ಷ ಇಪ್ಪತ್ನಾಲ್ಕು ಲಕ್ಷ ಕಾರು ಉತ್ಪಾದಿಸುವುದರ ಜತೆಗೆ ಎರಡು ಲಕ್ಷಕ್ಕೂ ಹೆಚ್ಚು ಮೋಟರ್‌ಬೈಕ್ ತಯಾರಿಸುತ್ತದೆ. ಸಂಸ್ಥೆಯ ಇತಿಹಾಸದಿಂದ ಹಿಡಿದು, ಆವಿಷ್ಕಾರಗಳ, ಹೊಸ ವಾಹನದ ಕುರಿತಾದ ಸಾಕ್ಷ್ಯಚಿತ್ರಗಳನ್ನು ಇಲ್ಲಿ ಪ್ರದರ್ಶಿಸಲಾಗುತ್ತದೆ. ಬಿಎಮ್‌ಡಬ್ಲ್ಯೂ ಮತ್ತು ಮಿನಿ ಕೂಪರ್ ಸಂಸ್ಥೆಯ ವಿಶೇಷಾತಿವಿಶೇಷ ಕಾರು-ಬೈಕುಗಳು ಇಲ್ಲಿ ರಾಜಮರ್ಯಾದೆಯಲ್ಲಿ ಕುಳಿತಿವೆ. ಅಲ್ಲಿಯ ವೈಭವ ವರ್ಣಿಸುವುದು ಕಷ್ಟ, ಅದನ್ನು ನೋಡಿಯೇ ಅನುಭವಿಸಬೇಕು. ಅಷ್ಟಕ್ಕೂ ಬಿಎಮ್‌ಡಬ್ಲ್ಯೂ ಕಾರು ತಯಾರಿಸಲೆಂದೇ ಹುಟ್ಟಿಕೊಂಡ ಸಂಸ್ಥೆಯಲ್ಲ. ಆರಂಭದ ದಿನಗಳಲ್ಲಿ ಸಂಸ್ಥೆ ವಿಮಾನದಲ್ಲಿ ಬಳಸುವ ಯಂತ್ರಗಳು ಮತ್ತು ಉಪಕರಣಗಳನ್ನು ತಯಾರಿಸುತ್ತಿತ್ತು.

ಆಗ ಸಂಸ್ಥೆಯ ಹೆಸರು ರಾಪ್ ಮೊತೋಹೆನ್ ವಾಕ್ ಎಂದಾಗಿತ್ತು. ಜರ್ಮನ್ ಭಾಷೆಯಲ್ಲಿ Zmm Iಟಠಿಛ್ಟಿಛ್ಞಿಡಿಛ್ಟಿhಛಿ ಎಂದರೆ ಇಂಗ್ಲಿಷ್‌ನಲ್ಲಿ Zmm Iಟಠಿಛ್ಟಿ ಡಿಟ್ಟho ಎಂಬ ಅರ್ಥ. ಅದರ ಜನ್ಮದಾತ ಕಾರ್ಲ್ ರಾಪ್. ಮೂಲತಃ ಜರ್ಮನ್ ಪ್ರಜೆಯಾದ ಕಾರ್ಲ್ ಫ್ರೆಡ್ರಿಕ್ ರಾಪ್ ವೃತ್ತಿಯಲ್ಲಿ ಎಂಜಿನಿಯರ್. ಶಿಕ್ಷಣ ಮುಗಿಸಿದ ನಂತರ ‘ಝಪ್’ ಎಂಜಿನಿಯರಿಂಗ್ ಕಂಪನಿಯಲ್ಲಿ ಕೆಲಸಕ್ಕೆ ಸೇರಿಕೊಂಡರು. ಜತೆಗೆ ಡೈಮ್ಲರ್ ಮೋಟರ್ಸ್ ಕಾರ್ಪೊರೇಷನ್ ಸಂಸ್ಥೆಯಲ್ಲಿ ತಾಂತ್ರಿಕ ವಿನ್ಯಾಸಗಾರರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದರು. ಡೈಮ್ಲರ್ ಮೋಟರ್ಸ್ ಅಂದರೆ ಬಹಳಷ್ಟು ಜನರಿಗೆ ಬೇಗ ಅರ್ಥವಾಗಲಿಕ್ಕಿಲ್ಲ, ಮರ್ಸಿಡೀಸ್ ಎಂದರೆ ಅರ್ಥವಾದೀತು.

ಮರ್ಸಿಡೀಸ್ ವಾಹನಗಳನ್ನು ತಯಾರಿಸುವ ಸಂಸ್ಥೆಯ ಹೆಸರು ಡೈಮ್ಲರ್. ಆ ಸಂಸ್ಥೆಯಲ್ಲಿ ಕಾರ್ಲ್ ಸುಮಾರು ಮೂರು ವರ್ಷ ಕೆಲಸ ಮಾಡಿದ್ದರು.
ನಂತರ, ವಿಮಾನದ ಎಂಜಿನ್ ತಯಾರಿಸುವ ‘-ಗ್ ವರ್ಕ್ ಡಚ್‌ಲ್ಯಾಂಡ್’ ಸೇರಿಕೊಂಡು, ಒಂದು ಶಾಖೆಯ ಮುಖ್ಯಸ್ಥರಾದರು. ಆ ಸಂದರ್ಭದಲ್ಲಿ
ಅವರು ಸ್ವತಃ ಆಪರೇಷನ್ ಮ್ಯಾನೇಜರ್ ಆಗಿಯೂ ಕೆಲಸ ಮಾಡುತ್ತಿದ್ದರು. ಅವರು ವಿನ್ಯಾಸಗೊಳಿಸಿ ನಿರ್ಮಿಸಿದ ಏರೋ ಎಂಜಿನ್ ಹೊತ್ತ ವಿಮಾನಗಳು ಬರ್ಲಿನ್‌ನಲ್ಲಿ ನಡೆಯುತ್ತಿದ್ದ ಏರ್ ಶೋನಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡಿದ್ದವು.

ಆದರೂ ನಾಲ್ಕು ವರ್ಷದ ನಂತರ ಕಂಪನಿ ದಿವಾಳಿ ಆಯಿತೆಂದು ಘೋಷಿಸಿ, ಷೇರುದಾರರ ನಿರ್ಣಯದಂತೆ ಕಂಪನಿಯ ಕದವನ್ನು ಮುಚ್ಚಲಾಯಿತು.
ಕೆಲವೊಮ್ಮೆ ಹಾಗೆ ಆಗುವುದಿದೆ, ಸಂಸ್ಥೆಯಲ್ಲಿ ಒಳ್ಳೆಯ ಕೆಲಸಗಾರರಿದ್ದರೂ, ಮಾರುಕಟ್ಟೆಯಲ್ಲಿ ಸಂಸ್ಥೆ ಹೆಸರು ಮಾಡಿದರೂ, ನಷ್ಟ ಅನುಭವಿಸಿದ ಉದಾಹರಣೆಗಳಿವೆ. ಹೆಸರಾಂತ ಕ್ರೀಡಾಪಟುಗಳನ್ನು ಹೊಂದಿದ ತಂಡವೂ ಒಮ್ಮೊಮ್ಮೆ ಸೋಲುತ್ತದಲ್ಲ, ಹಾಗೆ. ಕೈಯಲ್ಲಿ ಕೆಲಸವಿಲ್ಲದ ಕಾರ್ಲ್ ಬೇರೆ ಕಡೆ ಉದ್ಯೋಗಕ್ಕಾಗಿ ಹುಡುಕಾಡಲಿಲ್ಲ. ಜೂಲಿಯಸ್ ಆಸ್ಪಿಟ್ಜರ್‌ನನ್ನು ಜತೆಗೆ ಸೇರಿಸಿಕೊಂಡು, ಎರಡು ಲಕ್ಷ ಬಂಡವಾಳ ಹೂಡಿ ತನ್ನದೇ ಸಂಸ್ಥೆಯನ್ನು
ನಿರ್ಮಿಸಿದರು. ಅದಕ್ಕೆ ‘ರಾಪ್ ಮೋಟೋರೇನ್ ವರ್ಕ್’ ಎಂದು ಹೆಸರಿಟ್ಟರು. ತಮ್ಮ ಅನುಭವವನ್ನು ಬಳಸಿ ವಿಮಾನದ ಯಂತ್ರಗಳು, ಬಿಡಿಭಾಗಗಳು,
ಉಪಕರಣಗಳನ್ನು ತಯಾರಿಸಲು ಆರಂಭಿಸಿದರು.

ಅದರ ಜತೆಗೆ ಇತರೆ ವಾಹನಗಳಿಗೂ ಎಂಜಿನ್ ತಯಾರಿಸುತ್ತಿದ್ದರು. ಸಂಸ್ಥೆ ತಯಾರಿಸುತ್ತಿದ್ದ ಯಂತ್ರಗಳಿಗೆ ಬೇಡಿಕೆ ಹೇಗಿತ್ತು ಎಂದರೆ, ಆರಂಭಗೊಂಡ ಮೂರು ವರ್ಷದಲ್ಲಿಯೇ ಸಂಸ್ಥೆ ಮುನ್ನೂರ ಐವತ್ತಕ್ಕೂ ಅಧಿಕ ಜನರನ್ನು ಉದ್ಯೋಗಕ್ಕೆ ನೇಮಿಸಿಕೊಂಡಿತ್ತು. ಆ ದಿನಗಳಲ್ಲಿ ಹಲವಾರು ವಿಮಾನದ ಮೂಲ ಮಾದರಿಯನ್ನು ಸಂಸ್ಥೆಯಲ್ಲಿ ವಿನ್ಯಾಸಗೊಳಿಸಲಾಗಿತ್ತು. ಅದರಲ್ಲಿ ಕೆಲವು ಯಶಸ್ವಿಯಾದರೆ ಕೆಲವು ವಿ-ಲವೂ ಆದವು. ಆದರೆ ಸಂಸ್ಥೆಗೆ ಆಗಲೇ ಒಂದು ಹೆಸರಿತ್ತು. ಬೆಳೆಯುತ್ತಿರುವ ಸಂಸ್ಥೆಗೆ ಹಣ ಒದಗಿಸಲು ಕಷ್ಟವಾಗುತ್ತಿದ್ದುದರಿಂದ, ಸಾರ್ವಜನಿಕರಿಂದ ಹಣ ಸಂಗ್ರಹಿಸಲು ಷೇರು ಮಾರುಕಟ್ಟೆಯ ಮೊರೆಹೋಯಿತು. ಅಲ್ಲಿಂದ ಸಂಸ್ಥೆಯಲ್ಲಿ ಕಾರ್ಲ್ ಹಿಡಿತ ಸಡಿಲವಾಗತೊಡಗಿತು.

ಮೊದಲನೆಯ ವಿಶ್ವಯುದ್ಧದ ಸಂದರ್ಭದಲ್ಲಿ ಸಂಸ್ಥೆ ಉಳಿದ ಎಲ್ಲ ಯಂತ್ರೋಪಕರಣಗಳ ನಿರ್ಮಾಣ ನಿಲ್ಲಿಸಿ ಕೇವಲ ಯುದ್ಧಕ್ಕೆ ಬಳಸುವ ವಿಮಾನಗಳ ಯಂತ್ರಗಳನ್ನು ಮಾತ್ರ ತಯಾರಿಸುತ್ತಿತ್ತು. ಆ ಸಂದರ್ಭದಲ್ಲಿ ಕೆಲವು ಯಂತ್ರಗಳ ಗುಣಮಟ್ಟ ಸರಿಯಾಗಿಲ್ಲ ಎಂಬ ಕಾರಣದಿಂದ ಕೆಲವು ದೇಶದ ಸೇನೆಗಳು ತಿರಸ್ಕರಿಸಿದರೆ, ಹಂಗೇರಿ, ಆಸ್ಟ್ರಿಯಾದಂಥ ದೇಶಗಳು ಸಂಸ್ಥೆ ತಯಾರಿಸಿದ ಯಂತ್ರಗಳನ್ನು ಖರೀದಿಸುತ್ತಿದ್ದವು. ಸಂಸ್ಥೆ ತಯಾರಿಸುತ್ತಿದ್ದ ನಾಲ್ಕು ಸಿಲಿಂಡರ್ ಯಂತ್ರಗಳು ಮತ್ತು ವಿ-೧೨ ಯಂತ್ರಗಳನ್ನು ವಿಯೆನ್ನಾದ ಆಸ್ಟ್ರೋ ಡೈಮ್ಲರ್ ಕಂಪನಿ ಖರೀದಿಸುತ್ತಿತ್ತು. ಆಸ್ಟ್ರೋ ಡೈಮ್ಲರ್ ಸಂಸ್ಥೆ
ಫ್ರಾನ್ಜ್ ಜೋಸೆಫ್ ಪಾಪ್‌ರನ್ನು ನಿರೀಕ್ಷಕರನ್ನಾಗಿ ಆಯೋಜಿಸಿತ್ತು. ಆಗ ಮ್ಯಾಕ್ಸ್ ಫ್ರಿಜ್ ಎಂಬ ಯಂತ್ರ ವಿನ್ಯಾಸಕಾರ ರಾಪ್ ಸಂಸ್ಥೆಯಲ್ಲಿ ಹೆಸರು
ಮಾಡುತ್ತಿದ್ದ.

ಮ್ಯಾಕ್ಸ್ ವಿನ್ಯಾಸಗೊಳಿಸಿದ ಯಂತ್ರ ಎಷ್ಟು ಜನಪ್ರಿಯವಾಗತೊಡಗಿತ್ತೆಂದರೆ, ಪ್ರಶ್ಯನ್ ಸೇನೆ ಆತ ವಿನ್ಯಾಸಗೊಳಿಸಿದ ಆರು ನೂರು ಯಂತ್ರಗಳನ್ನು
ಖರೀದಿಸಲು ಮುಂದಾಯಿತು. ಅದೇ ಸಂದರ್ಭದಲ್ಲಿ ಕಾರ್ಲ್ ರಾಪ್ ಆರೋಗ್ಯವೂ ಕೈ ಕೊಡುತ್ತಿತ್ತು, ಅವರಿಗೆ ಮೊದಲಿನಷ್ಟು ಬೇಡಿಕೆಯೂ ಇರಲಿಲ್ಲ. ಸಂಸ್ಥೆಯ ನಿರ್ದೇಶಕರು ಸಂಸ್ಥೆಯ ಹೆಸರನ್ನು ‘ಬಾಯೆಹಿಶ್ ಮೊತೋರೇನ್ ವಾಕ್’ (ಆZqsಛ್ಟಿಜಿoeಛಿ Iಟಠಿಟ್ಟಛ್ಞಿ Uಛ್ಟಿhಛಿ) ಎಂದು ಬದಲಾಯಿಸಿ ದರು. ಅದೇ ಮುಂದೆ ಆIU ಎಂದು ಹೆಸರಾಯಿತು. ಸಂಸ್ಥೆಯಲ್ಲಿ ಹಲವಾರು ಬದಲಾವಣೆಗಳನ್ನೂ ತರಲಾಯಿತು.

ಫ್ರಾನ್ಜ್ ಜೋಸೆಫ್ ಪಾಪ್ ವ್ಯವಸ್ಥಾಪಕ ನಿರ್ದೇಶಕರಾಗಿ ನೇಮಕಗೊಂಡರು. ಕಾರ್ಲ್ ರಾಪ್ ತಾವೇ ಹುಟ್ಟುಹಾಕಿದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕನ ಹುದ್ದೆಗೆ ರಾಜೀನಾಮೆ ನೀಡಿ ಹೊರನಡೆದರು. ಮೊದಲನೆಯ ವಿಶ್ವಮಹಾಯುದ್ಧ ಮುಗಿಯುವವರೆಗೂ ಸಂಸ್ಥೆ ವಿಮಾನದ ಯಂತ್ರಗ ಳನ್ನಷ್ಟೇ ತಯಾರಿಸುತ್ತಿತ್ತೇ ಹೊರತು ಉಳಿದ ಯಂತ್ರಗಳ ನಿರ್ಮಾಣವನ್ನು ಸ್ಥಗಿತಗೊಳಿಸಿತ್ತು. ಯುದ್ಧದ ನಂತರ ಸಂಸ್ಥೆ ಮೋಟರ್ ಬೈಕ್ ಯಂತ್ರಗಳು, ಕೃಷಿ ಯಂತ್ರೋಪಕರಣಗಳು, ಉಗಿಬಂಡಿ ಯಲ್ಲಿ ಬಳಸುವ ಬ್ರೇಕ್ ಇತ್ಯಾದಿಗಳನ್ನು ತಯಾರಿಸಲು ಆರಂಭಿಸಿತು. ಆದರೆ ಸಂಸ್ಥೆ ನಿರೀಕ್ಷೆಯ ಮಟ್ಟವನ್ನು ತಲುಪಲಿಲ್ಲ. ಸಂಸ್ಥೆ ದಿವಾಳಿಯ ಅಂಚಿಗೆ ಬಂದು ನಿಲ್ಲುವಂತಾಗಿತ್ತು. ಆದ್ದರಿಂದ ಸಂಸ್ಥೆಯ ಕೆಲವು ವಿಭಾಗಗಳನ್ನು ಬೇರೆ ಕಂಪನಿಗೆ ಮಾರಾಟ ಮಾಡಲಾಯಿತು. ಆಡಳಿತ ಮಂಡಳಿಗೆ ಕೆಲವು ಹೊಸಬರ ಸೇರ್ಪಡೆಯಾಯಿತು. ಸಂಸ್ಥೆ ಒಂದು ಮಟ್ಟಕ್ಕೆ ಬಂದು ನಿಲ್ಲುತ್ತಿದೆ ಎನ್ನುವಾಗ ಎರಡನೆಯ
ವಿಶ್ವಮಹಾಯುದ್ಧ ಆರಂಭವಾಯಿತು. ಎರಡನೆಯ ಮಹಾಯುದ್ಧ ಆರಂಭವಾಗುತ್ತಿದ್ದಂತೆ ಸಂಸ್ಥೆ ಪುನಃ ವಿಮಾನದ ಯಂತ್ರೋತ್ಪನ್ನದ ಕಡೆ ಗಮನ ಹರಿಸಿತು.

ಆಗ ಬೇಡಿಕೆ ಹೇಗಿತ್ತು ಎಂದರೆ, ಸಂಸ್ಥೆ ಮೂವತ್ತು ಸಾವಿರ ಏರೋ ಎಂಜಿನ್ ಮತ್ತು ಐದು ನೂರು ಜೆಟ್ ಎಂಜಿನ್ ತಯಾರಿಸಿತ್ತು. ಆದರೆ ಕೆಲಸಗಾರರ ಕೊರತೆಯಿತ್ತು. ಸುಮಾರು ಐವತ್ತು ಸಾವಿರ ಜನ ಜೀತದ ಆಳುಗಳಾಗಿ ದುಡಿದರು. ಅವರಲ್ಲಿ ಅರ್ಧದಷ್ಟು ಜನ ಸೆರೆಯಾಳುಗಳಾದರು. ಆಗ ಪೂರ್ವ ಜರ್ಮನಿಯಲ್ಲಿದ್ದ ಎರಡು ತಯಾರಿಕಾ ಘಟಕಗಳನ್ನು ರಷ್ಯಾ ವಶಪಡಿಸಿಕೊಂಡಿತ್ತು. ಪಶ್ಚಿಮ ಜರ್ಮನಿಯಲ್ಲಿದ್ದ ಕಾರ್ಖಾನೆಗಳ ಮೇಲೂ ಸಾಕಷ್ಟು  ಬಾಂಬ್ ಬಿದ್ದವು.

ಇದರಿಂದ ಸುಧಾರಿಸಿಕೊಳ್ಳಲು ಹೆಚ್ಚು-ಕಮ್ಮಿ ಎಂಟು ವರ್ಷಗಳೇ ಬೇಕಾದವು. ಆದರೆ ಎರಡನೆಯ ಯುದ್ಧದ ಸಂದರ್ಭದಲ್ಲಿ ಸಂಸ್ಥೆ ತಯಾರಿಸುತ್ತಿದ್ದ
ಯಂತ್ರಗಳು ಸಾಕಷ್ಟು ಹೆಸರು ಮಾಡಿದ್ದವು. ಆ ಯಂತ್ರಗಳು ಅತಿ ಎತ್ತರದಲ್ಲಿ ಹಾರಾಡುವಾಗಲೂ ಉತ್ತಮ ಕ್ಷಮತೆ ಉಳ್ಳವುಗಳಾಗಿದ್ದು, ಕಡಿಮೆ ಇಂಧನ
ಬಳಸುತ್ತಿದ್ದವು. ಇದನ್ನೇ ಅಸವನ್ನಾಗಿಸಿಕೊಂಡು ಮುಂದುವರಿಯಲು ಸಂಸ್ಥೆ ನಿರ್ಧರಿಸಿತ್ತು. ಆದರೆ ಬಿಎಮ್‌ಡಬ್ಲ್ಯೂ ಪುನಃ ವೇಗವಾಗಿ ಓಡಲು ಒಂದು
ದಶಕವೇ ಹಿಡಿಯಿತು. ಸಂಸ್ಥೆ ಏನೇ ಮಾಡಿದರೂ, ಯಂತ್ರಗಳು, ವಾಹನಗಳು ಮೊದಲಿನಷ್ಟು ಮಾರಾಟವಾಗುತ್ತಿರಲಿಲ್ಲ. ಕಾರು ಮತ್ತು ಮೋಟರ್‌ಬೈಕ್ ಮಾರಾಟ ತೀರಾ ಕಮ್ಮಿಯಾಗಿತ್ತು. ಅರವತ್ತರ ದಶಕದಲ್ಲಿ ಸಂಸ್ಥೆ ಪುನಃ ದಿವಾಳಿಯ ಅಂಚಿಗೆ ಬಂದು ನಿಂತಿತ್ತು.

ಐಷಾರಾಮಿ ಕಾರುಗಳು ಮಾರಾಟವಾಗುತ್ತಿರಲಿಲ್ಲ, ಸಣ್ಣ ಕಾರುಗಳು ಮಾರಾಟವಾದರೂ ಅದರಲ್ಲಿ ಲಾಭಾಂಶ ತೀರಾ ಕಮ್ಮಿಯಾಗಿತ್ತು. ಮತ್ತೆ ಆಡಳಿತ
ಮಂಡಳಿಯ ಸದಸ್ಯರು, ನಿರ್ದೇಶಕರು ಬದಲಾದರು. ಆಗ ಸಂಸ್ಥೆಯ ಕೈ ಹಿಡಿದದ್ದು ’ಆIU೭೦೦’ ಮತ್ತು ‘ನ್ಯೂ ಕ್ಲಾಸ್’ ಮಾದರಿಯ ಕಾರುಗಳು. ಇವು
ಹೇಗೆ ಮಾರಾಟವಾದವು ಎಂದರೆ, ಎರಡೇ ವರ್ಷದಲ್ಲಿ ಸಂಸ್ಥೆ ಹೂಡಿಕೆದಾರರಿಗೆ ಲಾಭಾಂಶ ನೀಡುವ ಹಂತಕ್ಕೆ ಬಂದು ನಿಂತಿತ್ತು. ಇತ್ತೀಚೆಗೆ ತಯಾರಾಗುತ್ತಿರುವ ನ್ಯೂ ಕ್ಲಾಸ್ ಕಾರಿನ ಕುರಿತು ಒಂದು ಸಾಲು ಹೇಳಲೇಬೇಕು. ಈಗ ತಯಾರಿಸುತ್ತಿರುವ ಕಾರಿನಲ್ಲಿ ಸಂಸ್ಥೆ ಶೇಕಡಾ ಮೂವತ್ತರಷ್ಟು ತ್ಯಾಜ್ಯ ಮತ್ತು ಮರುಬಳಕೆಯ ವಸ್ತು ಗಳನ್ನು ಬಳಸುತ್ತಿದೆ. ಇದು ಸಂಸ್ಥೆ ಪರಿಸರಕ್ಕೆ ನೀಡು ತ್ತಿರುವ ಅತ್ಯುತ್ತಮ ಕೊಡುಗೆ ಎಂದರೆ ತಪ್ಪಲ್ಲ. ನನಗೆ ಇಲ್ಲಿ ವಿಶೇಷ ಎನಿಸುವುದು, ಸಂಸ್ಥೆಯನ್ನು ಆರಂಭಿಸಿದ ಮನುಷ್ಯ ಬಹಳ ದಿನ ಸಂಸ್ಥೆಯಲ್ಲಿ ನಿಲ್ಲಲಿಲ್ಲ. ಏನೇ ಅನಾರೋಗ್ಯವಿದ್ದರೂ ಅವರು
ಸಂಸ್ಥೆಯಿಂದ ಹೊರಗೆ ಹೋಗಬೇಕಾಗಿರಲಿಲ್ಲ.

ನಿವೃತ್ತನಾಗುವ ವಯಸ್ಸೂ ಕಾರ್ಲ್‌ಗೆ ಆಗಿರಲಿಲ್ಲ. ಅವರು ರಾಜೀನಾಮೆ ನೀಡಿ ಹೊರನಡೆದರೂ ಸುಮಾರು ನಾಲ್ಕು ದಶಕ ಬದುಕಿ ಉಳಿದಿದ್ದರು. ಸಂಸ್ಥೆಯ ಏಳು-ಬೀಳುಗಳನ್ನು ನೋಡುತ್ತಿದ್ದರು. ಸಂಸ್ಥೆಯೂ ಅಷ್ಟೇ, ಕೆಲವು ಬಾರಿ ದಿವಾಳಿಯ ಅಂಚಿನಲ್ಲಿ ಬಂದು ಪುನಃ ಚಿಗುರೊಡೆದು ನಿಂತಿದೆ.
ಇನ್ನು ಕಥೆ ಮುಗಿದೇ ಹೋಯಿತು ಎನ್ನುವ ಹಂತದಲ್ಲಿದ್ದಾಗಲೂ ಪುನಃ ಸಶಕ್ತವಾಗಿ ನಿಂತ ಉದಾಹರಣೆಗಳಿವೆ. ಉಳಿದ ವಾಹನಗಳಿಗಿಂತಲೂ
ಬಿಎಮ್‌ಡಬ್ಲ್ಯೂ ವಾಹನಗಳು ಒಂದು ಹಿಡಿ ಹೆಚ್ಚು ಗಟ್ಟಿಯಾಗಿರಲು ಬಹುಶಃ ಇದೂ ಒಂದು ಕಾರಣವಿದ್ದೀತು! ಜತೆಗೆ, ಮತ್ತೆ ಮತ್ತೆ ಸೋತರೂ
ಪುನಃ ಗೆಲ್ಲುವುದು ಹೇಗೆ ಎನ್ನುವುದಕ್ಕೆ ಇದು ಒಂದು ಉತ್ತಮ ಉದಾಹರಣೆಯೂ ಆದೀತು!

ಆದರೆ, ಕಾರ್ಲ್ ರಾಪ್‌ನನ್ನು ನೆನೆಸಿಕೊಂಡರೆ ಮಾತ್ರ ಅಯ್ಯೋ ಅನಿಸುತ್ತದೆ. ತನ್ನ ಹೆಸರಿನಲ್ಲೇ ‘ಕಾರ್’ ಇದ್ದರೂ ತಾನೇ ಕಟ್ಟಿದ, ವಿಶ್ವದಾದ್ಯಂತ
ಹೆಸರು ಮಾಡಿದ ಸಾಮ್ರಾಜ್ಯವನ್ನು ಅನುಭವಿಸಲಾಗದೆ ಹೊರ ನಡೆದ. ಕೆಲವೊಮ್ಮೆ ನಾವು ನೆಟ್ಟಗಿಡದ ಫಲ ನಮಗೆ ಸಿಗುವುದಿಲ್ಲ. ಅದು ಮುಂದಿನ
ತಲೆಮಾರಿನ ಸ್ವತ್ತಾಗುತ್ತದೆ, ಅವರು ಅನುಭವಿಸುತ್ತಾರೆ. ಮೊದಲ ಬಾರಿ ಮಾವು, ಹಲಸಿನ ಗಿಡವನ್ನು ಕಸಿಮಾಡಿದ ಕೃಷಿಕ ಯಾರು, ಆತ ಅದರ ಫಲವನ್ನು ತಿಂದಿದ್ದಾನೋ ಇಲ್ಲವೋ ಗೊತ್ತಿಲ್ಲ, ಈಗ ನಾವು ಆಸ್ವಾದಿಸುತ್ತಿದ್ದೇವಲ್ಲ, ಹಾಗೆ. ಹಾಗೆಯೇ, ಯಾರೋ ಮಾಡಿದ ಕಾರಿನ ಅನ್ವೇಷಣೆ, ಇನ್ಯಾರೋ ಮಾಡಿದ ಸಾಹಸವನ್ನು ನಾವು ಆನಂದಿಸುತ್ತಿದ್ದೇವೆ.