Saturday, 23rd November 2024

ಹುಟ್ಟುತ್ತ ಯಾರೂ ಬಾಡಿಬಿಲ್ಡರುಗಳಲ್ಲ, ಅವರು ತಮ್ಮನ್ನು ರೂಪಿಸಿಕೊಂಡವರು !

ನೂರೆಂಟು ವಿಶ್ವ

ಮೊನ್ನೆ ನಾನು ಜರ್ಮನಿಯ ಮ್ಯೂನಿಕ್ ನಿಂದ ಸಿಂಗಾಪುರಕ್ಕೆ ವಿಮಾನದಲ್ಲಿ ಪ್ರಯಾಣಿಸುವಾಗ, ನನ್ನ ಪಕ್ಕದಲ್ಲಿ ೩೫-೩೮ ವರ್ಷದ ಹೆಂಗಸೊಬ್ಬಳು ಕುಳಿತಿದ್ದಳು. ಅವಳ ಪಕ್ಕದಲ್ಲಿ ೪-೫ ವರ್ಷದ ಒಬ್ಬಳು ಮಗಳು ಮತ್ತು ೭-೮ ವರ್ಷದ ಒಬ್ಬ ಮಗ ಕುಳಿತಿದ್ದ. ಆಕೆ ನೋಡಲು ಸುಂದರವಾಗಿದ್ದಳು. ಅದಕ್ಕಿಂತ ಮುಖ್ಯವಾಗಿ ಆಕೆ ಜೀರೋಫಿಗರ್ ಮೇಂಟೇನ್ ಮಾಡಿದ್ದಳು. ಅವಳನ್ನು ನೋಡಿದ ಯಾರಿಗಾದರೂ ಅವಳು ೨ ಮಕ್ಕಳ ತಾಯಿ ಎಂದು ಗೊತ್ತಾಗುತ್ತಿರಲಿಲ್ಲ.

ಅವಳ ಪಕ್ಕದಲ್ಲಿ ಮಕ್ಕಳು ಇರದಿದ್ದರೆ, ನನಗಂತೂ ಆ ಸಂದೇಹ ಬರುತ್ತಿರಲಿಲ್ಲ. ಅವಳ ಫಿಟ್ನೆಸ್ ಅಷ್ಟೊಂದು ಕರಾರುವಾಕ್ಕಾಗಿತ್ತು. ಅವಳನ್ನು ಒಮ್ಮೆ ನೋಡಿದವರು, ದೃಷ್ಟಿಯನ್ನು ಬೇರೆಡೆ ಹಾಯಿಸಲು ಸಾಧ್ಯವೇ ಇರಲಿಲ್ಲ. ಅವಳ ಇಡೀ ಮೈಮಾಟದಲ್ಲಿ ಸಣ್ಣ ದೋಷವೂ ಇರಲಿಲ್ಲ. ಅಯಾಚಿತವಾಗಿ ನನ್ನ ಮನಸ್ಸಿನಲ್ಲಿ ‘ಜನ್ಮ ಜನ್ಮದ ಅನುಬಂಧ’ ಸಿನಿಮಾದ ‘ಯಾವ ಶಿಲ್ಪಿ ಕಂಡ ಕನಸು ನೀನು..’ ಎಂಬ ಹಾಡು ಹಾದುಹೋಯಿತು. ಹೇಗಿದ್ದರೂ ಹನ್ನೊಂದುವರೆ ಗಂಟೆಗಳ ವಿಮಾನ ಪ್ರಯಾಣ, ನಂತರ ಅವಳನ್ನು ಮಾತಾಡಿಸಿದರಾಯಿತು ಎಂದು ನನ್ನ ಪಾಡಿಗೆ ಪುಸ್ತಕದಲ್ಲಿ ಮುಳುಗಿ ಹೋದೆ.

ವಿಮಾನ ಮೋಡವನ್ನು ಸೀಳಿಕೊಂಡು ಸುಮಾರು 35000 ಅಡಿ ಎತ್ತರದಲ್ಲಿ ಸಮಮಟ್ಟವನ್ನು ಕಾಪಾಡಿಕೊಂಡು ಹಾರುತ್ತಿದ್ದಾಗ, ಆಕೆಯೇ ನನ್ನನ್ನು ಮಾತಾಡಿಸಿದಳು. ‘ಅಭ್ಯಂತರ ಇಲ್ಲ ಅಂದ್ರೆ ನೀವು ಓದುತ್ತಿರುವ ಪುಸ್ತಕವನ್ನು ನೋಡಬಹುದಾ?’ ಎಂದು ಕೇಳಿದಳು. ನಾನು ಕೊಟ್ಟೆ. ಅವಳು ಅದನ್ನು ಸಿನಿಮಾ ಟ್ರೇಲರ್ ಥರ ಪುಟಗಳನ್ನು ಸರಿಸಿ ನೋಡಿ, ‘ಈ ಪುಸ್ತಕ ಸೊಗಸಾಗಿರುವಂತಿದೆ. ನನಗೆ ಈ ಪುಸ್ತಕ ಬರೆದವರು ಆದರ್ಶ. ನಾನು ಅವರ
ಬಹಳ ದೊಡ್ಡ -ನ್. ನಾನು ಗಂಡಸಾಗಿದ್ದಿದ್ದರೆ ಅವರ ಹಾಗೆ ಬಾಡಿ ಬಿಲ್ಡ್ ಮಾಡುತ್ತಿದ್ದೆ’ ಎಂದು ಹೇಳಿ ವಾಪಸ್ ಕೊಟ್ಟಳು. ಅಷ್ಟು ಹೇಳಿ ಅವಳೇ ‘ಐಸ್ ಬ್ರೇಕ್’ ಮಾಡಿ, ನನ್ನ ಕೆಲಸವನ್ನು ಕಮ್ಮಿ ಮಾಡಿದ್ದಳು.

ನಾನು ಅವಳ ಹೆಸರು, ದೇಶವನ್ನು ಕೇಳಿದೆ. ತಾನು ಜರ್ಮನಿಯವಳೆಂದೂ, ತನ್ನ ಹೆಸರು ಎಮಿಲಿಯಾ ಎಂದೂ ಹೇಳಿದಳು. ನಾನು ಅವಳ ಹತ್ತಿರ, ‘ನೀವು ತಪ್ಪು ಭಾವಿಸುವು ದಿಲ್ಲ ಅಂದ್ರೆ ಒಂದು ವೈಯಕ್ತಿಕ (ಪರ್ಸನಲ್) ಪ್ರಶ್ನೆ ಕೇಳಬಹುದಾ?’ ಎಂದು ಕೇಳಿದೆ. ಆಕೆ ತುಸು ಉತ್ಸಾಹದಿಂದ, ‘ಪರವಾಗಿಲ್ಲ, ನೀವು ನನ್ನ ಆಸ್ತಿಯೊಂದನ್ನು ಬಿಟ್ಟು ಬೇರೇ ನನ್ನಾದರೂ ಕೇಳಬಹುದು’ ಎಂದು ಹೇಳಿ ನಕ್ಕಳು. ನಾನು ನೇರವಾಗಿ, ‘ನನಗೆ ಉತ್ತಮ ಅಂಗರಚನೆಯನ್ನು ಕಾಪಾಡಿಕೊಂಡವರನ್ನು ಕಂಡರೆ ವಿಶೇಷ ಅಭಿಮಾನ. ಅವರ ಬಗ್ಗೆ ನನ್ನ ಮನಸ್ಸಿನಲ್ಲಿ ಹತ್ತಾರು ಪ್ರಶ್ನೆಗಳನ್ನು ಏಳುತ್ತವೆ. ಅವರಿಗೆ ಮನಸ್ಸಿನಲ್ಲಿಯೇ ಅಭಿನಂದನೆಗಳನ್ನು ಹೇಳುತ್ತೇನೆ. ನಿಮ್ಮನ್ನು ಮೊದಲು ನೋಡಿದಾಗಲೂ ನನಗೆ ನಿಮ್ಮ ಬಗ್ಗೆ ಅಭಿಮಾನ, ಗೌರವ ಮೂಡಿತು’
ಎಂದೆ.

ಎಮಿಲಿಯಾ ನಾಚಿ ನೀರಾಗಿ, ‘ಥ್ಯಾಂಕ್ಯೂ’ ಎಂದು ಮೂರ್ನಾಲ್ಕು ಸಲ ಹೇಳಿದಳು. ನಾನು ಮಾತು ಮುಂದುವರಿಸಿದೆ- ‘ನಾನು ಹೇಳಬೇಕೆಂದಿದ್ದು ಇದಲ್ಲ. ನೀವು ಇಷ್ಟು ಅದ್ಭುತವಾದ ಫಿಟ್ನೆಸ್ ಕಾಪಾಡಿಕೊಂಡಿದ್ದೀರಲ್ಲ, ಇದನ್ನು ಹೇಗೆ ಸಾಧಿಸಿಕೊಂಡಿದ್ದೀರಿ? ಇದಕ್ಕಾಗಿ ಪ್ರತಿದಿನ ಎಷ್ಟು ಹೊತ್ತು
ಜಿಮ್‌ನಲ್ಲಿ ‘ತಪಸ್ಸು’ ಮಾಡುತ್ತೀರಿ? ಹೊಟ್ಟೆಯನ್ನು ಹೇಗೆ ಕಟ್ಟಿಕೊಂಡಿದ್ದೀರಿ? ಬಾಯಿರುಚಿಯನ್ನು ಹೇಗೆ ನಿಯಂತ್ರಿಸಿಕೊಂಡಿದ್ದೀರಿ?’ ಎಂದು ಕೇಳಿದೆ. ಆಕೆಗೆ ತನ್ನ ಫಿಟ್ನೆಸ್ ಬಗ್ಗೆ ಕೇಳಿದ್ದು ಸಂತಸವಾಗಿರಬೇಕು. ‘ನೀವು ನನ್ನ ಫಿಟ್ನೆಸ್ ಗಮನಿಸಿದ್ದು ಸಂತೋಷ, ಥ್ಯಾಂಕ್ಯೂ’ ಎಂದಳು.

ಆಕೆ ಮುಂದೆ ಏನು ಹೇಳಬಹುದು ಎಂಬ ಬಗ್ಗೆ ನಾನು ತೀರಾ ಉತ್ಸುಕನಾಗಿದ್ದೆ. ‘ಪ್ರತಿದಿನ ನಾನು ಕನಿಷ್ಠ ೨ ಗಂಟೆ ವ್ಯಾಯಾಮ ಮಾಡುತ್ತೇನೆ. I got 101 problems, but I am going to the gym to ignore all of them. Life has its ups and downs and I call them squats.. ನಾಲಗೆ ಹೇಳಿದ್ದೆಲ್ಲವನ್ನೂ ಸೇವಿಸುವುದಿಲ್ಲ. ಹೊಟ್ಟೆಗೆ ಎಷ್ಟು ಬೇಕೋ ಅಷ್ಟನ್ನೇ ಸೇವಿಸುತ್ತೇನೆ. ಹಾಗಂತ ಹಸಿವನ್ನು ಕಟ್ಟಿಕೊಳ್ಳುವುದಿಲ್ಲ. ಅನೇಕರು ತಮ್ಮ ದೇಹಕ್ಕೆ ಅಗತ್ಯವಿಲ್ಲದ್ದನ್ನು ಸೇವಿಸಿ ಬೊಜ್ಜು ಬರಿಸಿಕೊಳ್ಳುತ್ತಾರೆ. ಆಹಾರ ಸೇವಿಸುವಾಗ ನಾಲಗೆ ಹೇಳುವುದನ್ನು ಕೇಳುತ್ತಾರೆ, ದೇಹವನ್ನು ಕಡೆಗಣಿಸುತ್ತಾರೆ.

ಎಲ್ಲರೂ ತಮಗೆ ಅಗತ್ಯವಾಗಿದ್ದಕ್ಕಿಂತ ಹೆಚ್ಚು ಸೇವಿಸುತ್ತಾರೆ’ ಎಂದು ಹೇಳಿ ನಕ್ಕಳು. ‘ನನ್ನ ದೃಷ್ಟಿಯಲ್ಲಿ ಫಿಟ್ನೆಸ್ ಅಂದ್ರೆ ನಮ್ಮ ದೇಹಕ್ಕೆ ನಾವು
ನೀಡುವ ಅತಿದೊಡ್ಡ ಗೌರವ. ಫಿಟ್ನೆಸ್ ಅಂದ್ರೆ ನಮ್ಮ ದೇಹವನ್ನು ಪ್ರೀತಿಸುವುದು. ನಾವು ಬದುಕುವುದು, ಜೀವಿಸುವುದು ನಮ್ಮ ದೇಹದೊಳಗೆ. ನಮ್ಮ ಪಾಲಿಗೆ ಅದು ಪಂಚತಾರಾ ಹೋಟೆಲ್ ಇದ್ದಂತೆ. ನಾವು ಜೀವಿಸುವ ಜಾಗ ಸುಂದರ ಮತ್ತು ಚೆಂದವಾಗಿರಬೇಕು. ನಮ್ಮ ದೇಹ ಚೆನ್ನಾಗಿದ್ದರೆ, ನಮ್ಮ
ಮನಸ್ಸು ಚೆನ್ನಾಗಿರುತ್ತದೆ. ಆಗ ನಮ್ಮ ಬದುಕು ಸೊಗಸಾಗಿರುತ್ತದೆ. ಎಲ್ಲರೂ ಕಷ್ಟಪಟ್ಟು ದುಡಿಯುತ್ತಾರೆ. ೩ ಜನ್ಮಕ್ಕೆ ಮಿಗುವಷ್ಟು ಸಂಪಾದಿಸುತ್ತಾರೆ. ಆದರೆ ತಮ್ಮ ದೇಹವನ್ನು ನಿರ್ಲಕ್ಷಿಸುತ್ತಾರೆ. ಇದರಿಂದ ಏನನ್ನು ಸಾಧಿಸಿದಂತಾಯಿತು? ನಮ್ಮ ದೇಹ ನಮಗೆ ಖುಷಿಕೊಡಬೇಕು. ನಮ್ಮನ್ನು ನೋಡಿದ ಇತರರೂ ಖುಷಿಪಡಬೇಕು. ಆ ರೀತಿ ನಮ್ಮ ಫಿಟ್ನೆಸ್ ಇರಬೇಕು.

I sweat, I sparkle. ನಮಗಿರುವ ಬಹುದೊಡ್ಡ ಆಸ್ತಿ ಅಂದ್ರೆ ನಮ್ಮ ದೇಹ. ನಾವು ಹೇಗೆ ಕಾಣಬೇಕು ಅಂತ ನಿರ್ಧರಿಸಿದರೆ ಆ ರೀತಿ ಕಾಣಲು ಸಾಧ್ಯ. ಅದಕ್ಕೆ ನಮ್ಮ ದೇಹವನ್ನು ಆ ರೀತಿ ರೂಪಿಸಿಕೊಳ್ಳಲು ಸಾಧ್ಯ. ಕನ್ನಡಿ ಮುಂದೆ ಬೆತ್ತಲಾಗಿ ನಿಂತಾಗ ನಾವು ಹೇಗೆ ಕಾಣುತ್ತೇವೆ ಎಂಬುದು
ಮುಖ್ಯ. ನಮಗೆ ನಮ್ಮ ದೇಹ ಎಂದೂ ಕುರೂಪ, ಅಸಹ್ಯ ಎನಿಸಬಾರದು. ಒಂದು ವೇಳೆ ಹಾಗೆ ಅನಿಸಿದರೆ, ಅದನ್ನು ಸುಂದರವಾಗಿ ತಕ್ಷಣ ಪರಿವರ್ತಿಸಿಕೊಳ್ಳಲು ಪ್ರಯತ್ನಿಸಬೇಕು. ಅದು ಖಂಡಿತ ಸಾಧ್ಯವಿದೆ. ಆದರೆ ಗಟ್ಟಿ ಮನಸ್ಸು ಮಾಡಬೇಕು. ನಮ್ಮ ದೇಹ ನಮಗೆ ಸಂತಸದ ಆಗರವಾಗಬೇಕು.

ಅದು ಫಿಟ್ನೆಸ್‌ನಲ್ಲಿದೆ’ ಎಂದಳು. ನಾನು ಅವಳ ಕಣ್ಣುಗಳನ್ನು ದಿಟ್ಟಿಸಿ ನೋಡುತ್ತಿದ್ದೆ. I sweat, I sparkle ಎಂಬ ಆಕೆಯ ಮಾತು ಅವಳ ಮುಖ ದಲ್ಲಿ ಜಮಾ ಆಗಿತ್ತು. ಆಕೆ ಮಿರಮಿರ ಮಿಂಚುತ್ತಿದ್ದಳು. ಅವಳ ದವಡೆ ಅಲಗು (Jawline) ದಂತದಲ್ಲಿ ಕೆತ್ತಿದಂತಿತ್ತು. ನಿರಂತರ ವ್ಯಾಯಾಮ ಮಾಡುವವರಿಗೆ ಮಾತ್ರ ಅಂಥ ಸಿದ್ಧಿ ಸಾಧ್ಯ. ಹಾಗಂತ ಅವಳದು ಪಕ್ಕೆಲುಬು ಕಾಣುವ ಪೀಚು ಅಥವಾ ‘ಕಾಷ್ಠ ಸೌಂದರ್ಯ’ವಾಗಿರಲಿಲ್ಲ. ಆದರೆ ಅಂಗಸೌಷ್ಠವದಲ್ಲಿ ಆಕೆ ಹಾಲಿವುಡ್ ಅಥವಾ ಬಾಲಿವುಡ್‌ನ ಯಾವ ನಟಿಗೂ ಕಮ್ಮಿಯಿರಲಿಲ್ಲ. ತನ್ನ ದೇಹದ ಬಗ್ಗೆ ಆಕೆಗೆ ಅಪರಿಮಿತ ಮೋಹ, ಬದ್ಧತೆ ಮತ್ತು ನಿಷ್ಠೆ ಇರುವುದು ಢಾಳಾಗಿ ಕಾಣುತ್ತಿತ್ತು. ಯಾರಾದರೂ ಅವಳ ಬಗ್ಗೆ ಅಭಿಮಾನಪಡುವ ರೀತಿಯಲ್ಲಿ ಅವಳು ಫಿಟ್ನೆಸ್ ಕಾಪಾಡಿಕೊಂಡಿದ್ದಳು.
‘I do not stop exercising because I grow old – I grow old because I stop exercising’ ಎಂಬ ಆಕೆಯ ಮಾತುಗಳು ನನ್ನಲ್ಲಿ ಗಿರಕಿ ಹೊಡೆಯುತ್ತಿದ್ದವು.

‘ನಮ್ಮ ಫಿಟ್ನೆಸ್ ನ್ನು ನಾವೇ ಕಾಪಾಡಿಕೊಳ್ಳಬೇಕು. ನೀವು ಎಷ್ಟೇ ಶ್ರೀಮಂತರಾಗಿರಬಹುದು, ನಿಮ್ಮ ಫಿಟ್ನೆಸ್‌ನ್ನು ನೀವೇ ಕಾಪಾಡಿಕೊಳ್ಳಬೇಕು.
ಎಷ್ಟೇ ಹಣ ಕೊಟ್ಟರೂ ನಿಮಗಾಗಿ ಈ ಕೆಲಸವನ್ನು ಬೇರೆಯವರು ಮಾಡಲು ಸಾಧ್ಯವಿಲ್ಲ. ಕೋಟ್ಯಂತರ ರುಪಾಯಿ ಹಣ ವನ್ನು ಕ್ಷಣಾರ್ಧದಲ್ಲಿ ಕರಗಿಸಬಹುದು. ಆದರೆ ಈ ಕ್ಷಣದಲ್ಲಿ ತಿಂದಿದ್ದನ್ನು ಕರಗಿಸುವುದು ಸುಲಭವಲ್ಲ. ಕೋಟಿ ಕೊಟ್ಟರೂ ಬೊಜ್ಜನ್ನು ಕರಗಿಸುವುದು ಕಷ್ಟ. ಅಷ್ಟಕ್ಕೂ ಅದನ್ನು ನೀವೇ ಕರಗಿಸಬೇಕು. ಈ ವಿಷಯದಲ್ಲಿ ನಿಮಗೆ ಯಾರೂ ನೆರವಾಗಲಾರರು.

Your body can handle almost anything, you simply need to convince your mind. ಅಷ್ಟಕ್ಕೂ Fitness is a journey, not a race, or a sprint. ಬಹಳ ಜನ ಜಿಮ್ ಕನಸು ಕಾಣುತ್ತಾರೆ. ಆದರೆ ಆ ಕನಸು ನನಸಾಗುವುದೇ ಇಲ್ಲ. ಎಲ್ಲರಿಗೂ ಫಿಟ್ನೆಸ್ ಕಾಪಾಡಿಕೊಳ್ಳ ಬೇಕು ಎಂಬ ಹಂಬಲವಿರುತ್ತದೆ. ಆದರೆ ತಮಗೆ ಏನೇನೋ ಸಬೂಬು ಹೇಳಿ ಜಿಮ್‌ಗೆ ಹೋಗುವುದಿಲ್ಲ. Excuses don’t burn calories. Pushups do ಎಂಬ ಆಕೆಯ ಮಾತು ಪದೇ ಪದೆ ನನ್ನಲ್ಲಿ ಡಿಕ್ಕಿ ಹೊಡೆಯುತ್ತಿದ್ದವು.

ಅಷ್ಟಕ್ಕೂ ಅಂದು ನಾನು ವಿಮಾನದಲ್ಲಿ ಓದುತ್ತಿದ್ದ ಪುಸ್ತಕ- Be Useful: Seven Tools For Life. ಅದನ್ನು ಬರೆದವನು ಪ್ರಸಿದ್ಧ ಹಾಲಿವುಡ್ ನಟ ಮತ್ತು ಕೆಲವು ಕಾಲ ರಾಜಕಾರಣಿಯೂ ಆಗಿದ್ದ ಅರ್ನಾಲ್ಡ್ ಶ್ವರ್ಜನೆಗರ್ (ನಾವು ಅವನ ಹೆಸರನ್ನು ಸರಿಯಾಗಿ ಉಚ್ಚರಿಸಲಾಗದೇ ಅರ್ನಾಲ್ಡ್
ಶಿವಾಜಿನಗರ್ ಎಂದು ಹೇಳಿ ತಮಾಷೆ ಮಾಡುತ್ತಿದ್ದುದು ಬೇರೆ). ಜಗತ್ತಿನ ಯಾವ ದೇಶಕ್ಕೆ ಹೋದರೂ ಅರ್ನಾಲ್ಡ್ ಪೋಸ್ಟರ್ ಅಥವಾ ಚಿತ್ರಗಳಿಲ್ಲದ ಜಿಮ್‌ಗಳನ್ನು ನೋಡುವುದು ಸಾಧ್ಯವೇ ಇಲ್ಲ. ಎಲ್ಲ ಜಿಮ್‌ಗಳಲ್ಲೂ ಆತನ ಫೋಟೋ ಇರಲೇಬೇಕು. ಅವೆಷ್ಟೋ ಜಿಮ್‌ಗಳು ಆತನ ಹೆಸರಿನಲ್ಲಿವೆ.
‘ಗೋಲ್ಡ್ ಜಿಮ್’ ಆತನದೇ ಕೂಸು. ಬಾಡಿ ಬಿಲ್ಡಿಂಗ್ ವಿಷಯ ಬಂದರೆ ಅರ್ನಾಲ್ಡ್ ಕೂಡ ಅಯಾಚಿತವಾಗಿ ಬಂದೇ ಬರುತ್ತಾನೆ.

ಇಂದಿಗೂ ಬಾಡಿ ಬಿಲ್ಡ್ ಮಾಡುವವರ ಬಹುದೊಡ್ಡ ಆದರ್ಶ ಅಂದ್ರೆ ಅರ್ನಾಲ್ಡ್! ಆತ ಅಮೆರಿಕಕ್ಕೆ ಬಂದಾಗ, (ಆತ ಮೂಲತಃ ಆಸ್ಟ್ರಿಯದವ) ಎಲ್ಲರೂ ಆತನನ್ನು ದುರದುರ ನೋಡುತ್ತಿದ್ದರಂತೆ. ಹೆಂಗಸರು, ಮುದುಕಿಯರು ಹಿಂತಿರುಗಿ ಪದೇ ಪದೆ ದಿಟ್ಟಿಸುತ್ತಿದ್ದರಂತೆ. ‘ಅಮೆರಿಕದಲ್ಲಿ ಯಾರಿಗೂ
ಬಾಡಿ ಬಿಲ್ಡಿಂಗ್ ಬಗ್ಗೆ ಸರಿಯಾದ ಕಲ್ಪನೆಯೇ ಇರಲಿಲ್ಲ. ನನ್ನನ್ನು ಬೇರೆ ಗ್ರಹದಿಂದ ಬಂದ ವ್ಯಕ್ತಿಯಂತೆ ನೋಡುತ್ತಿದ್ದರು. ನನ್ನ ಜತೆ ಯಾರೂ
ಮಾತಾಡುತ್ತಿರಲಿಲ್ಲ. ಎಲ್ಲರೂ ನನ್ನ ದೇಹವನ್ನು ನೋಡುತ್ತಾ ನಿಂತುಬಿಡುತ್ತಿದ್ದರು. ಇದರಿಂದ ನನಗೆ ಬಹಳ ಮುಜುಗರ ಆಗುತ್ತಿತ್ತು. ಎಲ್ಲರೂ
ನನ್ನನ್ನು ತದೇಕಚಿತ್ತದಿಂದ ನೋಡುತ್ತಿದ್ದರೆ ಒಳಗೊಳಗೇ ಸಂತಸ ಮತ್ತು ಸಂಕೋಚ ಏಕಕಾಲಕ್ಕೆ ಆಗುತ್ತಿತ್ತು.

ಬಾಡಿಬಿಲ್ಡಿಂಗ್ ಎನ್ನುವುದು ಆ ದಿನಗಳಲ್ಲಿ ಅಮೆರಿಕದಂಥ ದೇಶದ ಪ್ರಜೆಗಳಿಗೂ ಕಲ್ಚರಲ್ ಷಾಕ್ ನೀಡುವ ಸಂಗತಿಯಾಗಿತ್ತು’ ಎಂದು ಅರ್ನಾಲ್ಡ್
ಬರೆಯುತ್ತಾನೆ. ‘ವಾವ್! ಆತನ ಸ್ನಾಯುಗಳನ್ನು, ಮಾಂಸಖಂಡಗಳನ್ನು ನೋಡು, ಆತನ ಬಾಹುಗಳು ಅವೆಷ್ಟು ದಷ್ಟ-ಪುಷ್ಟವಾಗಿವೆ. ಈತ ಮನುಷ್ಯರನ್ನು ತಿಂದು ಈ ರೀತಿ ಆಗಿರಬಹುದಾ? ಪ್ರಾಯಶಃ ಈತ ಫುಟ್ಬಾಲ್ ಆಟಗಾರ ಆಗಿರಬೇಕು.. ಇಲ್ಲವೇ ರೆಸ್ಲರ್ ಆಗಿರಬಹುದು ಅಥವಾ ಶ್ರೀಮಂತರ ಬಾಡಿಗಾರ್ಡ್ ಅಥವಾ ಬೌನ್ಸರ್ ಆಗಿರಬಹುದು ಎಂದು ನನ್ನನ್ನು ನೋಡಿ ತಮ್ಮಷ್ಟಕ್ಕೆ ಮಾತಾಡಿಕೊಳ್ಳುತ್ತಿದ್ದರು. ಆದರೆ ನಾನು ಅವರಿಗೆ
ನಾನೊಬ್ಬ ಬಾಡಿಬಿಲ್ಡರ್ ಎಂದು ಅಭಿಮಾನದಿಂದ ಹೇಳುತ್ತಿದ್ದೆ.

ಆದರೆ ಅವರಿಗೆ ನಂಬಿಕೆ ಬರುತ್ತಿರಲಿಲ್ಲ. ನೀವು ಕೂಡ ನನ್ನಂತೆ ಆಗಬಹುದು. ಅದರಲ್ಲೇನೂ ಹೆಚ್ಚುಗಾರಿಕೆ ಇಲ್ಲ. ನೀವು ನನ್ನ ಹಾಗೆ ವ್ಯಾಯಾಮ ಮಾಡಿಲ್ಲ, ಆದರೆ ನಾನು ಮಾಡಿದ್ದೇನೆ, ಅಷ್ಟೇ ವ್ಯತ್ಯಾಸ ಎಂದು ಹೇಳುತ್ತಿದ್ದೆ. ಆದರೂ ಅವರು ಈ ಜನ್ಮದಲ್ಲಿ ನಿಮ್ಮಂತೆ ಆಗುವುದು ಸಾಧ್ಯವಿಲ್ಲ ಬಿಡಿ ಎಂದು ಹೇಳಿ ಹೋಗುತ್ತಿದ್ದರು. ಆಗಲೂ ಈಗಲೂ ಜನ ನನ್ನಂಥ ಉಕ್ಕಿನ ದೇಹವಿರುವವರನ್ನು ನೋಡಿ ಅಚ್ಚರಿಪಡುತ್ತಾರೆ. ತಮಗಿದು ಸಾಧ್ಯವೇ ಇಲ್ಲ ಎಂದು ಭಾವಿಸುತ್ತಾರೆ. ಯಾರು ಬೇಕಾದರೂ ನನ್ನ ಹಾಗೆ ಫಿಟ್ನೆಸ್ ಗಳಿಸಿಕೊಳ್ಳಬಹುದು ಎಂದು ಯೋಚಿಸುವುದೇ ಇಲ್ಲ.

ನಮ್ಮನ್ನು ಅತಿಮಾನುಷರಂತೆ ನೋಡುತ್ತಾರೆ. ಇಂದಿಗೂ ಬಹುತೇಕ ಹೋಟೆಲುಗಳಲ್ಲಿ ನನ್ನ ದೇಹದ ಉದ್ದಕ್ಕೆ ಸರಿ ಹೊಂದುವ ಮಂಚ ಇರುವುದಿಲ್ಲ. ಬಾಡಿಬಿಲ್ಡಿಂಗ್ ಎನ್ನುವುದು ಇಂದಿಗೂ ಸಹಜ ಕ್ರಿಯೆ ಎಂದು ಅನಿಸಿಕೊಂಡಿಲ್ಲ. ಕೆಲವರು ನನ್ನನ್ನು ನೋಡಿ ಈತನಿಗೆ ತಿನ್ನುವುದು ಮತ್ತು ವ್ಯಾಯಾಮ ಮಾಡುವುದನ್ನು ಬಿಟ್ಟರೆ ಮತ್ತೇನೂ ಗೊತ್ತಿರಲಿಕ್ಕಿಲ್ಲ ಎಂದು ಅಪಹಾಸ್ಯ ಮಾಡುತ್ತಾರೆ. ಆದರೆ ದೇಹವನ್ನು ಪುನರ್ ರಚಿಸಿಕೊಳ್ಳುವುದು ಅದೆಷ್ಟು ಕಠಿಣ ಎಂದು ಯೋಚಿಸುವುದಿಲ್ಲ. ನಾನು ಬಿಲ್ ಗೇಟ್ಸ್, ವಾರನ್ ಬಫೆಟ್ ಅವರ ಹಾಗೆ ಶ್ರೀಮಂತನಾಗಬಹುದು. ಆದರೆ ಅವರಿಗೆ ನನ್ನ ಹಾಗೆ ಬಾಡಿಬಿಲ್ಡ್ ಮಾಡಲು ಈ ಜನ್ಮದಲ್ಲಿ ಸಾಧ್ಯವಿಲ್ಲ, ಚಾಲೆಂಜ್!’ ಎಂದು ಅರ್ನಾಲ್ಡ್ ಹೇಳುತ್ತಾನೆ.

೨೦-೩೦ ವರ್ಷಗಳ ಹಿಂದೆ, ಬಾಡಿಬಿಲ್ಡಿಂಗ್ ಕೂಡ ಒಂದು ಉದ್ಯೋಗವಾಗಬಹುದು ಎಂಬ ಕಲ್ಪನೆ ಇರಲಿಲ್ಲ. ಶ್ರೀಮಂತರು, ಮೇಲ್ವರ್ಗದವರು ಮಾತ್ರ ಜಿಮ್‌ಗೆ ಹೋಗುತ್ತಿದ್ದರು. ಒಳ್ಳೆಯ ಬಾಡಿಬಿಲ್ಡ್ ಮಾಡಿದರೆ ಒಳ್ಳೆಯ ಕೆಲಸ ಸಿಗುವುದಿಲ್ಲ ಎಂದು ಹೇಳುತ್ತಿದ್ದ ಕಾಲವೂ ಇತ್ತು. ಇಂದಿಗೂ
ಉತ್ತಮ ಬಾಡಿಬಿಲ್ಡ್ ಮಾಡಿದವರಿಗೆ ಉತ್ತಮ ಕೆಲಸ ಕೊಡುವುದಿಲ್ಲ. ಅದಕ್ಕಾಗಿ ಎಷ್ಟೋ ಒಳ್ಳೆಯ ಬಾಡಿಬಿಲ್ಡರುಗಳು ಬಾರುಗಳಲ್ಲಿ ಬೌನ್ಸರ್ ಆಗಿ ಕೆಲಸಕ್ಕೆ ಸೇರಿಕೊಳ್ಳುತ್ತಾರೆ ಅಥವಾ ಶ್ರೀಮಂತರ ಬಾಡಿಗಾರ್ಡ್ ಆಗುತ್ತಾರೆ. ಅಂಥ ಬಾಡಿ ಬಿಲ್ಡ್ ಮಾಡಲು ಅವರೆಷ್ಟು ಪರಿಶ್ರಮ ಹಾಕಿರಬಹುದು, ದೇಹವನ್ನು ದಂಡಿಸಿ, ಅವೆಷ್ಟು ನೋವನ್ನು ತಿಂದಿರಬಹುದು ಎಂದು ಯೋಚಿಸುವುದೇ ಇಲ್ಲ.

ನೀನೇನು ತಿಂತೀಯಾ ಎಂದು ಕೇಳುವವರಿಗೆ, ‘ನಾನು ದೇಹ ದಂಡಿಸಿ ನೋವನ್ನು ತಿನ್ನುತ್ತೇನೆ. ಬೆವರನ್ನು ಸುರಿಸಿ, ಅದನ್ನು ಹಿಡಿದು ಕುಡಿಯುತ್ತೇನೆ, ಅದಕ್ಕಾಗಿ ನಾನು ಹೀಗಿದ್ದೇನೆ’ ಎಂದು ವ್ಯಂಗ್ಯಮಿಶ್ರಿತ ತಿಳಿಹಾಸ್ಯ ದಲ್ಲಿ ಹೇಳುತ್ತೇನೆ. ಜಗತ್ತಿನಲ್ಲಿಯೇ ಅತಿ ಕಷ್ಟದ ಕೆಲಸವೆಂದರೆ ವರ್ಕೌಟ್ ಮಾಡುವುದು. Seಛಿ ಟ್ಞ್ಝqs ಚಿZb ಡಿಟ್ಟhಟ್ಠಠಿ ಜಿo ಠಿeಛಿ ಟ್ಞಛಿ qsಟ್ಠ bಜಿb’ಠಿ bಟ. ಬಾಡಿಬಿಲ್ಡರ್ ತನ್ನ ದೇಹವನ್ನು ಕೆತ್ತಿಕೊಳ್ಳುವ ಶಿಲ್ಪಿ. ಟ್ಠ್ಟ ಚಿಟbqs
eಛಿZo ಛಿqಛ್ಟಿqsಠಿeಜ್ಞಿಜ qsಟ್ಠ್ಟ ಞಜ್ಞಿb oZqso, oಠಿZqs mಟoಜಿಠಿಜಿqಛಿ. ಟ್ಠ Zಛಿ ಟ್ಞಛಿ ಡಿಟ್ಟhಟ್ಠಠಿ ZಡಿZqs ಟಞ Z  ಜಟಟb ಞಟಟb. ಹೀಗಾಗಿ ಇಂದಿಗೂ ಬಾಡಿಬಿಲ್ಡರ್ ಕಂಡರೆ ನಾನು ಮನಸ್ಸಿನಲ್ಲಿ ನಮಿಸುತ್ತೇನೆ.

ಆತನ ಪರಿಶ್ರಮ, ಛಲ, ನಿಷ್ಠೆಗೆ ಮನಸ್ಸಿನಲ್ಲಿಯೇ ಸಲಾಮು ಹಾಕುತ್ತೇನೆ. ಆತ ನನಗೆ ಒಬ್ಬ ವಿಜ್ಞಾನಿ, ವಿದ್ವಾಂಸ, ಮೇಧಾವಿಗಿಂತ ದೊಡ್ಡವನಾಗಿ ಕಾಣುತ್ತಾನೆ. ಈ ಜಗತ್ತಿನಲ್ಲಿ ವಿಜ್ಞಾನಿ, ವಿದ್ವಾಂಸ, ಮೇಧಾವಿಗಳು ಸಾಕಷ್ಟಿದ್ದಾರೆ. ಆದರೆ ಅವರಿಗೆ ಹೋಲಿಸಿದರೆ ಬಾಡಿಬಿಲ್ಡರ್ ಗಳು ತೀರಾ ಕಮ್ಮಿ. ಹೀಗೆಂದು ಅರ್ನಾಲ್ಡ್ ಆ ಕೃತಿಯಲ್ಲಿ ಬರೆಯುತ್ತಾನೆ. ನಾನೂ ಸತತ ಮೂರೂವರೆ ವರ್ಷಗಳ ಕಾಲ ಜಿಮ್‌ಗೆ ಹೋದವನು. ನನ್ನ ಮನಸ್ಸು ಹೇಳಿದಂತೆ ದೇಹವನ್ನೂ ಕೇಳುವಂತೆ ಮಾಡಿದವನು. ನನಗೆ ಅರ್ನಾಲ್ಡ್ ಹೇಳಿದ್ದು ಆಪ್ತವಾಗಿ ಕೇಳಿಸುತ್ತದೆ.

ನಾನು ಆತ ಹೇಳುವುದನ್ನು ನೂರಕ್ಕೆ ನೂರು ಒಪ್ಪುತ್ತೇನೆ. ಇಂದಿಗೂ ಜ್ಞಾನಿಗಳನ್ನು ಕಂಡಾಗ ಕಾಲಿಗೆರಗುವಂತೆ, ಉತ್ತಮ ಬಾಡಿಬಿಲ್ಡ್ ಮಾಡಿದವರನ್ನು, ಅವರು ಗಂಡಸಾಗಿರಲಿ, ಹೆಂಗಸಾಗಿರಲಿ, ಗೌರವದಿಂದ ಕಾಣುತ್ತೇನೆ. ಸಾಧ್ಯವಾದರೆ ನನ್ನ ಪ್ರಶಂಸೆಯನ್ನು ಅವರಿಗೆ ಖುದ್ದಾಗಿ ತಲುಪಿಸುತ್ತೇನೆ, ಹೇಳುತ್ತೇನೆ. ತನ್ನ ದೇಹದೊಳಗೆ ಅದ್ಭುತ ಲೋಕವನ್ನು ನಿರ್ಮಿಸಿಕೊಂಡ ಅವರ ಸಾಧನೆಯನ್ನು ಮನಸಾರೆ ಮೆಚ್ಚುತ್ತೇನೆ. ಅವರು ಹರಿಸಿರುವ ಬೆವರ ಕೋಡಿಯನ್ನು ಕಣ್ಮುಂದೆ ತಂದುಕೊಂಡು ವಿಸ್ಮಯಪಡುತ್ತೇನೆ. ಎರಡು ಮಕ್ಕಳ ತಾಯಿ ಎಮಿಲಿಯಾ ಮತ್ತು ತನ್ನ ೭೬ನೇ
ವಯಸ್ಸಿನಲ್ಲೂ ೨ ಗಂಟೆ ಗರಡಿಮನೆಯಲ್ಲಿ ಕಳೆಯುವ ಅರ್ನಾಲ್ಡ್ ನನ್ನಲ್ಲಿ ಬದುಕಿನ ಹೊಸ ಹುಮ್ಮಸ್ಸನ್ನು ಅರಳಿಸುತ್ತಾರೆ. ಹಾಂ.. Bodybuilders are made, not born!