ಮೂರ್ತಿಪೂಜೆ
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಬದಲು ಇಡೀ ರಾಜ್ಯ ಸುತ್ತಿ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಅಂತ ಸಿದ್ಧರಾಮಯ್ಯ ಅವರಿಗೆ ಆಪ್ತರು ಸಲಹೆ ನೀಡತೊಡಗಿದ್ದಾರೆ. ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸುವ ಆಸಕ್ತಿ ಕಳೆದುಕೊಂಡಿರುವ ಸಿದ್ಧರಾಮಯ್ಯ ಮುಂದೇನು? ಎಂಬ ವಿಷಯದಲ್ಲಿ ಈವರೆಗೆ ಒಂದು ತೀರ್ಮಾನಕ್ಕೆ ಬಂದಿಲ್ಲ.
ಇತ್ತೀಚೆಗೆ ಕೋಲಾರಕ್ಕೆ ಹೋಗಿ ಅಲ್ಲಿನ ಮೂಡ್ ಪರೀಕ್ಷಿಸಿರುವ ಸಿದ್ಧರಾ ಮಯ್ಯ ಅವರ ಮನಸ್ಸಿಗೆ ಕಸಿವಿಸಿಯಾಗಿದೆಯಂತೆ. ಆದರೆ ರಮೇಶ್ ಕುಮಾರ್ ನೇತೃತ್ವದ ಕೋಲಾರ ಜಿಲ್ಲೆಯ ನಿಯೋಗದ ಒತ್ತಾಯ ಮುಂದು ವರಿದಿರುವುದರಿಂದ ಸಧ್ಯದಲ್ಲೇ ತೀರ್ಮಾನ ತೆಗೆದುಕೊಳ್ಳುತ್ತೇನೆ ಅಂತ ಭರವಸೆ ಕೊಟ್ಟಿದ್ದಾರೆ. ಹೀಗೆ ಸಿದ್ಧರಾಮಯ್ಯ ಬಹಿರಂಗವಾಗಿ ಮಾತನಾಡ ದಿದ್ದರೂ ಅವರ ಅತ್ಯಾಪ್ತರ ಬಳಗ ಮಾತ್ರ,ಅದಾಗಲೇ ಅಪಸ್ವರ ಎತ್ತಿದೆ. ನೀವು ಸ್ಪರ್ಧಿಸುವುದಿದ್ದರೆ ವರುಣಾ ಕ್ಷೇತ್ರದಿಂದಲೇ ಸ್ಪರ್ಧಿಸಿ. ಯಾಕೆಂದರೆ ಇದೇ ನಿಮಗೆ ಸೇಫೆಸ್ಟ್ ಕ್ಷೇತ್ರ. ಕೋಲಾರ ಅಲ್ಲ. ಇವತ್ತು ಆ ಜಿಲ್ಲೆಯ ನಾಯಕರೆಲ್ಲ ಸೇರಿ, ಗೆಲ್ಲುಸ್ತೀವಿ ಅನ್ನಬಹುದು. ಆದರೆ ಅವರೇನೇ ಹೇಳಿದರೂ ಪರಿಸ್ಥಿತಿ ಅಷ್ಟು ಸರಳವಾಗಿಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ಪಕ್ಷದಲ್ಲಿರುವ ಹಲವು ನಾಯಕರಿಗೆ ನೀವು ಗೆಲ್ಲುವುದು ಬೇಕಿಲ್ಲ. ಹೀಗಾಗಿ ದಲಿತ ವರ್ಗದ, ಎಡಗೈ, ಬಲಗೈ ಮತಗಳು ನಿರೀಕ್ಷಿಸಿದಂತೆ ನಿಮ್ಮ ಕೈ ಹಿಡಿಯುವುದಿಲ್ಲ. ಶ್ರೀನಿವಾಸಗೌಡರನ್ನು ಜೆಡಿಎಸ್ ನಿಂದ ಕರೆತಂದಿರಿ ಎಂಬ ಕಾರಣಕ್ಕಾಗಿ ಒಕ್ಕಲಿಗರು ಸಾಲಿಡ್ಡಾಗಿ ನಿಮ್ಮನ್ನು ಬೆಂಬಲಿಸುವುದಿಲ್ಲ. ಇನ್ನು ಮುಸ್ಲಿಮರು ಕಾಂಗ್ರೆಸ್ ಜತೆ ಸಾಲಿಡ್ಡಾಗಿ ನಿಲ್ಲುವ
ಲಕ್ಷಣವಿದೆಯಾದರೂ ಜೆಡಿಎಸ್ ಪಕ್ಷದಿಂದ, ಟೆರರ್ ಮುಸ್ಲಿಂ ಲೀಡರು ಓವೈಸಿ ಅವರ ಪಕ್ಷದಿಂದ ಒಬ್ಬೊಬ್ಬರು ಮುಸ್ಲಿಂ ಕ್ಯಾಂಡಿಡೇಟುಗಳು ಕಣಕ್ಕಿಳಿದರೆ ಏಳೆಂಟು ಸಾವಿರ ಮುಸ್ಲಿಂ ಮತಗಳು ಆ ಕಡೆ ಹೋಗಬಹುದು.
ಈ ಮಧ್ಯೆ ಬಿಜೆಪಿಯಿಂದ ವರ್ತೂರು ಪ್ರಕಾಶ್ ಸ್ಪರ್ಧಿಸುವುದರಿಂದ ಕುರುಬರ ಮತ ಬ್ಯಾಂಕಿನಲ್ಲಿ ಗೊಂದಲ ಶುರುವಾಗುತ್ತದೆ. ಇಷ್ಟೆಲ್ಲ ಕಿರಿಕಿರಿಗಳ ಮಧ್ಯೆ ಸ್ಪರ್ಧಿಸುವ ಬದಲು ವರುಣಾ ಕ್ಷೇತ್ರದಿಂದ ಸ್ಪರ್ಧಿಸುವುದು ಬೆಟರ್. ಮುಂದೆ ಅಧಿಕಾರಕ್ಕೆ ಬಂದ ಮೇಲೆ ನಿಮ್ಮ ಪುತ್ರ ಯತೀಂದ್ರ ಅವರನ್ನು ಎಮ್ಮೆಲ್ಸಿ ಮಾಡಬಹುದು ಎಂಬುದು ಈ ಆಪ್ತರ ವರಾತ. ಇವರಲ್ಲೇ ಕೆಲವರು, ನೀವು ದೇವರಾಜ ಅರಸರ ದಾರಿಯಲ್ಲಿ ನಡೆಯುವುದು ಪಕ್ಷದ ಹಿತದೃಷ್ಡಿಯಿಂದ ಒಳ್ಳೆಯದು ಎನ್ನುತ್ತಿದ್ದಾರೆ. ಅಂದ ಹಾಗೆ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾದ ನಂತರ ಇಲ್ಲಿ ಇಂದಿರಾ ಗಾಂಧಿ ಬಣಕ್ಕೆ ದೇವರಾಜ ಅರಸು ಅಧ್ಯಕ್ಷ ರಾಗಿದ್ದರು. 1972ರ ವಿಧಾನಸಭಾ ಚುನಾವಣೆ ಘೋಷಣೆಯಾದಾಗ ಅರಸರ ಅಕ್ಕ ಪಕ್ಕ ಘಟಾನುಘಟಿ ನಾಯಕರ ಕೊರತೆಯಿತ್ತು.
ಇಂತಹ ಕಾಲದಲ್ಲಿ ತಾವು ಚುನಾವಣಾ ಕಣಕ್ಕಿಳಿಯುವುದಕ್ಕಿಂತ ಇಡೀ ರಾಜ್ಯ ಸುತ್ತುವುದು ಅನಿವಾರ್ಯ ಅಂತ ಅರಸರು ಯೋಚಿಸಿದರು ಹೀಗಾಗಿ ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಕರಿಯಪ್ಪ ಗೌಡರನ್ನು ಕಣಕ್ಕಿಳಿಸಿ ತಾವು ಇಡೀ ರಾಜ್ಯ ಸುತ್ತಿದರು. ಅವರ ಈ ಯೋಚನೆ ದೊಡ್ಡ ಮಟ್ಟದ ಫಲ ನೀಡಿತು. ಇಂದಿರಾ ನೇತೃತ್ವದ ಬಣ ಸ್ವಯಂ ಬಲದ ಮೇಲೆ ಅಧಿಕಾರಕ್ಕೆ ಬಂತು. ಹೀಗೆ ಅವತ್ತು ಅರಸರು ಏನು ಮಾಡಿದರೋ? ಇವತ್ತು ನೀವೂ ಅದನ್ನೇ ಮಾಡಿ. ಇದರಿಂದ ನಿಮಗೂ ಅನುಕೂಲ. ಪಕ್ಷಕ್ಕೂ ಅನುಕೂಲ ಎಂಬುದು ಈ ಆಪ್ತರ ಸಲಹೆ. ಹೀಗಾಗಿ ಸಿದ್ಧರಾಮಯ್ಯ ಅವರ ಇವತ್ತಿನ ಮನಃಸ್ಥಿತಿ ವರುಣಾ ಕ್ಷೇತ್ರದ ಮೇಲೆ ಇಲ್ಲವೇ ಕಣಕ್ಕೇ ಇಳಿಯದೆ ರಾಜ್ಯ ಸುತ್ತುವುದರ ಕಡೆ ವಾಲಿಕೊಂಡಿದೆ.
ಕೈ ಪಾಳೆಯಕ್ಕೆ ಕಸಿವಿಸಿ
ಅಂದ ಹಾಗೆ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸುವ ಇಚ್ಚೆಯುಳ್ಳವರು ಅರ್ಜಿ ಹಾಕಿ ಅಂತ ಹೇಳಿದ ಕೈ ನಾಯಕರಿಗೆ ಕಸಿವಿಸಿ ಶುರುವಾಗಿದೆ. ಯಾಕೆಂದರೆ ಇರುವ 224 ಕ್ಷೇತ್ರಗಳಲ್ಲಿ ಸ್ಪರ್ಧಿಸಲು ಹತ್ತತ್ತಿರ 1400 ಜನ ಅರ್ಜಿ ಹಾಕಿದ್ದಾರೆ. ಈ ಪೈಕಿ ಹಾಲಿ ಶಾಸಕರಿಗೆ ಟಿಕೆಟ್ ನಿರಾಕರಿಸುವುದು ಕಷ್ಟ.
ಹೀಗಾಗಿ ಬಾಕಿ ಉಳಿದ ಕ್ಷೇತ್ರಗಳಿಗೆ ಹತ್ತತ್ತಿರ 1300 ಮಂದಿ ಟಿಕೆಟ್ ಆಕಾಂಕ್ಷಿಗಳು ಉಳಿಯುತ್ತಾರೆ. ಈ ಪೈಕಿ 150 ರಷ್ಟು ಜನರಿಗೆ ಟಿಕೇಟ್ ಸಿಕ್ಕರೆ ಉಳಿದವರು ನಿರಾಶರಾಗುತ್ತಾರೆ. ಹೀಗೆ ನಿರಾಶರಾದವರ ಪೈಕಿ ಹಲವರು ಬಂಡಾಯ ಏಳುವ, ಬೇರೆ ಪಕ್ಷದ ಕಡೆ ಹೋಗುವ ಸಾಧ್ಯತೆ ಜಾಸ್ತಿ. ಆದರೆ ಈ ನಿರಾಶರ ಪಡೆಯನ್ನು ಅಚ್ಚಾ ಅಚ್ಚಾ ಮಾಡಿ ಹಿಡಿದಿಟ್ಟುಕೊಳ್ಳುವುದೇ ಕೈ ಪಾಳೆಯಕ್ಕೆ ಸವಾಲು. ಅಂದ ಹಾಗೆ ಟಿಕೆಟ್ ಹಂಚಿಕೆ ಕೆಲಸವನ್ನು ಬೇಗ ಮುಗಿಸಿದರೆ ಭುಗಿಲೇಳುವ ಬಂಡಾಯಕ್ಕೆ ಬ್ರೇಕ್ ಹಾಕುವ, ಇಲ್ಲವೇ ಕೌಂಟರ್ ಕೊಡುವ ಕೆಲಸ ಸಾಧ್ಯ. ಆದರೆ ಟಿಕೆಟ್ ಹಂಚಿಕೆ ಕೆಲಸ ಇನ್ನೆರಡು, ಮೂರು ತಿಂಗಳ ಕಾಲ ಮುಂದುವರಿದರೆ ಕೈ ಪಾಳೆಯ ಪಶ್ಚಾತ್ತಾಪಪಡುವ ಸ್ಥಿತಿ ಬರಬಹುದು ಎಂಬುದು ಈಗ ಚರ್ಚೆಯಲ್ಲಿರುವ ವಿಷಯ. ಆದರೆ ಈ ವಿಷಯದಲ್ಲಿ ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ. ಶಿವಕುಮಾರ್ ಮತ್ತು ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಅವರ ಪಾತ್ರ ನಿರ್ಣಾಯಕ.
ಒಂದು ವೇಳೆ ಇವರಿಬ್ಬರಲ್ಲಿ ಒಮ್ಮತ ಬಂದರೆ ಟಿಕೆಟ್ ಆಕಾಂಕ್ಷಿಗಳನ್ನು ಸುಧಾರಿಸುವುದು ಸುಲಭ. ಆದರೆ ಇದು ಸಾಧ್ಯವೇ? ಎಂಬ ವಿಷಯದಲ್ಲಿ ಎಲ್ಲರಿಗೂ ಅನುಮಾನವಿದೆ.
ಆರೆಸ್ಸೆಸ್ ಮತ್ತು ಬೊಮ್ಮಾಯಿ
ಅಂದ ಹಾಗೆ ಇತ್ತೀಚೆಗೆ ಕರ್ನಾಟಕದ ಆರೆಸ್ಸೆಸ್ ನಾಯಕರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರನ್ನು ಕರೆಸಿ
ಚರ್ಚಿಸಿದರು. ಆರೆಸ್ಸೆಸ್ ಮತ್ತು ಬೊಮ್ಮಾಯಿ ನಡುವಣ ಚರ್ಚೆಗೆ ಮರುದಿನ ರೆಕ್ಕೆಪುಕ್ಕ ಸೇರಿ ಮುಂದೇನು ಮಾಡಬೇಕು ಅಂತ ಬೊಮ್ಮಾಯಿ ಅವರಿಗೆ ಆರೆಸ್ಸೆಸ್ ಡೈರೆಕ್ಷನ್ನು ನೀಡಿದೆ ಎಂಬಂತೆ ಬಿಂಬಿತವಾಯಿತು. ಆದರೆ ವಾಸ್ತವದಲ್ಲಿ ಬೊಮ್ಮಾಯಿ ಅವರಿಗೆ ರಾಜ್ಯದ ಆರೆಸ್ಸೆಸ್ ಡೈರೆಕ್ಷನ್ನು ಕೊಡುವ ಅಗತ್ಯವೇ ಇಲ್ಲ.
ಯಾಕೆಂದರೆ ಬೊಮ್ಮಾಯಿ ಮುಖ್ಯಮಂತ್ರಿಯಾದ ನಂತರ ವಿಧಾನಸೌಧ ಮತ್ತು ವಿಕಾಸಸೌಧದ ಆಯಕಟ್ಟಿನ ಜಾಗಗಳಲ್ಲೆಲ್ಲ ಆರೆಸ್ಸೆಸ್ ಕಣ್ಣುಗಳ ಉಪಸ್ಥಿತಿ ಇದೆ. ಹೀಗಾಗಿ ಬೊಮ್ಮಾಯಿ ಇರಲಿ, ಅವರ ಸಂಪುಟದ ಸಹೋದ್ಯೋಗಿಗಳೇ ಇರಲಿ, ಆರೆಸ್ಸೆಸ್ ಕಣ್ಣು ತಪ್ಪಿಸಿ ಏನು ಮಾಡಲೂ ಸಾಧ್ಯವಿಲ್ಲ ಪದ್ಮಪತ್ರದ ಮೇಲಿನ ಜಲ ಬಿಂದುವಿನಂತಿರುವ ಬೊಮ್ಮಾಯಿ ಅವರಿಗೆ ಅದರ ಅಗ ತ್ಯವೂ ಇಲ್ಲ.
ಎಲ್ಲಕ್ಕಿಂತ ಮುಖ್ಯವಾಗಿ ತಾವಾಗಲೀ, ಸರ್ವೇ ಕಂಪನಿಗಳೇ ಆಗಲಿ,ರಾಜ್ಯದ ಸಂಘಪರಿವಾರವೇ ಇರಲಿ, ಚುನಾವಣೆಗೆ ಸಂಬಂಧಿಸಿದಂತೆ,ಅಭ್ಯರ್ಥಿಗಳಿಗೆ ಸಂಬಂಧಿಸಿದಂತೆ ಏನು ರಿಪೋರ್ಟು ಕೊಟ್ಟರೂ ಅಂತಿಮವಾಗಿ ಅದು ಮೋದಿ-ಶಾ ಕೋರ್ಟಿನಲ್ಲಿ ಫೈನಲೈಸ್ ಆಗುತ್ತದೆ. ಅದೇ ರೀತಿ ಈಗಾಗಲೇ ರಾಜ್ಯದ ತುಂಬೆಲ್ಲ ಹರಡಿಕೊಂಡಿರುವ ಮೋದಿ-ಶಾ ಪಡೆ ನೀಡುವ ವರದಿಯ ಜತೆ ಉಳಿದ ವರದಿಗಳು ಪರಿಶೀಲನೆಗೊಳಪಡುತ್ತವೆ.
ಹೀಗಾಗಿ ಇಲ್ಲಿಂದ ಯಾರೇ ವರದಿ ನೀಡಿದರೂ ಮೋದಿ-ಶಾ ಅದನ್ನು ಒಪ್ಪುತ್ತಾರೆಂದೇನೂ ಅಲ್ಲ. ಮೋದಿ-ಶಾ ಜೋಡಿ ಈ ವಿಷಯದಲ್ಲಿ ಎಷ್ಟು ಕಟ್ ಥ್ರೂಟ್ ಆಗಿದೆ ಎಂದರೆ ಗುಜರಾತ್ ನಲ್ಲಿ ನಡೆದ ಒಂದು ಬೆಳವಣಿಗೆಯೇ ಅದಕ್ಕೆ ಸಾಕ್ಷಿ. ಅಲ್ಲಿ ಪಕ್ಷದ ಹಾಲಿ ಶಾಸಕರ ಪೈಕಿ ಎಷ್ಟು ಜನರಿಗೆ ಟಿಕೆಟ್ ನಿರಾಕರಿಸಲಾಯಿತೋ? ಆ ಪೈಕಿ ಏಳು ಮಂದಿ ಖುದ್ದು ಅಮಿತ್ ಶಾ ಅವರ ಕಟ್ಟಾ ಅನುಯಾಯಿಗಳು.
ಆದರೆ ಟಿಕೆಟ್ ಕೊಟ್ಟರೆ ಇವರು ಗೆಲ್ಲುವುದಿಲ್ಲ ಎಂಬುದು ಕನ್ ಫರ್ಮ್ ಆಗಿದ್ದರಿಂದ ಮುಲಾಜೇ ನೋಡದೆ ಅವರಿಗೆ ಟಿಕೆಟ್ ತಪ್ಪಿಸಲಾಗಿದೆ. ಅರ್ಥಾತ್, ಕರ್ನಾಟಕಕ್ಕೆ ದಂಡೆತ್ತಿ ಬರಲಿರುವ ಮೋದಿ -ಶಾ ಟೀಮು ಬರೀ ರಾಜ್ಯ ಬಿಜೆಪಿ ಮಾತ್ರವಲ್ಲ, ಆರೆಸ್ಸೆಸ್ಸಿನ ವಾರ್ ರೂಂ ಅನ್ನೂ ನಿಯಂತ್ರಣಕ್ಕೆ ತೆಗೆದುಕೊಳ್ಳಲಿದೆ. ಹೀಗಾಗಿ ಬರಲಿರುವ ಆ ಟೀಮಿನ ಹಿಂದೆ ನಾವು ಹೇಗೆ ಕೆಲಸ ಮಾಡಬಹುದು ಅಂತ ಬೊಮ್ಮಾಯಿ ಆರೆಸ್ಸೆಸ್ ನಾಯಕರ ಜತೆ ಚರ್ಚಿಸಿ ಬಂದಿದ್ದಾರೆ.
ಎಂಭತ್ತು ಬಾಂಬರುಗಳು
ಮುಂದಿನ ಚುನಾವಣೆಗೆ ತಯಾರಿ ನಡೆಸುತ್ತಿರುವ ಎಲ್ಲ ರಾಜಕೀಯ ಪಕ್ಷಗಳಿಗೆ ಬಾಂಬರುಗಳ ಪಡೆ ಕುತೂಹಲ ಮೂಡಿಸಿದೆ. ಈ ಪಡೆಯಲ್ಲಿ ಕ್ಯಾಸಿನೋ ಮಾಲೀಕರು, ಕ್ರಿಕೆಟ್ ಬುಕ್ಕಿಂಗ್ ಡಾನುಗಳು ಸೇರಿದಂತೆ ದಿಢೀರ್ ಶ್ರೀಮಂತರಾದವರು ಇದ್ದಾರೆ. ಇಂತವರು ರಾಜ್ಯದ ಹಲ ಕ್ಷೇತ್ರಗಳಲ್ಲಿ ಹರಡಿಕೊಂಡು ಯಾವುದಾದರೂ ಪಕ್ಷದ ಟಿಕೆಟ್ ಗಿಟ್ಟಿಸಲು ಪೈಪೋಟಿ ನಡೆಸಿದ್ದಾರೆ. ದಿನ ಬೆಳಗಾದರೆ ಇವರು ತಾವಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಹಣದ ಹೊಳೆ ಹರಿಸತೊಡಗಿದ್ದಾರೆ.
ಒಂದು ಕಾರ್ಯಕ್ರಮಕ್ಕಿಷ್ಟು, ದೇವಾಲಯಗಳ ಅಭಿವೃದ್ದಿಗಿಷ್ಟು, ಜತೆಗಿರುವವರ ದಿನಗೂಲಿ ಇಷ್ಟು ಅಂತ ಖರ್ಚು ಮಾಡು ತ್ತಿರುವ ಇವರು ಹಾಲಿ ಶಾಸಕರನೇಕರ ತಲೆ ಕೆಡಿಸಿದ್ದಾರೆ. ಯಾಕೆಂದರೆ ಇವರು ಗೆಲ್ಲುವುದು ಸುಲಭವಲ್ಲದೆ ಇರಬಹುದು. ಆದರೆ ಇವರು ಮಾಡುತ್ತಿರುವ ಖರ್ಚು ತಮ್ಮ ಹಿಂದಿರುವ ನಾಲ್ಕೈದು ಸಾವಿರ ವೋಟು ಕಸಿದು ತಮ್ಮನ್ನೇ ಮಲಗಿಸಿಬಿಟ್ಟರೇ? ಎಂಬುದು ಇವರ ಆತಂಕ.
ಪಕ್ಷ ಭೇದ ಮರೆತು ಎಲ್ಲ ಕಡೆ ಹರಡಿರುವ ಇವರು ಕರ್ನಾಟಕದ ರಾಜಕೀಯ ಚಿತ್ರವನ್ನು ಅಲ್ಲೋಲ ಕಲ್ಲೋಲ ಮಾಡಿದರೂ ಅಚ್ಚರಿ ಇಲ್ಲ. ಅಂದ ಹಾಗೆ ರಾಜ್ಯದಲ್ಲಿ ಇಂತವರ ಸಂಖ್ಯೆ ಸುಮಾರು ಎಂಭತ್ತರಷ್ಟಿದೆ ಎಂಬುದು ಸದ್ಯದ ಅಂದಾಜು. ಹಳೆ ಮೈಸೂರು ಈ ಬಾಂಬರುಗಳ ಪಡೆಯ ಮೂಲ ನೆಲೆ ಎಂಬುದು ರಹಸ್ಯವಲ್ಲ. ಮತ್ತು ಬೇರೆ ಬೇರೆ ಕಾರಣಗಳಿಗಾಗಿ ಎಲ್ಲ ರಾಜಕೀಯ ಪಕ್ಷಗಳು ಇಂತವರಿಗೆ ಟಾನಿಕ್ ಕೊಡುತ್ತಿರುವುದೂ ರಹಸ್ಯವಲ್ಲ.
೨೦೧ ರಲ್ಲಿ ಕುಮಾರಸ್ವಾಮಿ ನೇತೃತ್ವದ ಜೆಡಿಎಸ್ -ಕಾಂಗ್ರೆಸ್ ಸಮ್ಮಿಶ್ರ ಸರಕಾರವನ್ನು ಯಡಿಯೂರಪ್ಪ ಉರುಳಿಸಿದರಲ್ಲ? ಆ ಸಂದರ್ಭದಲ್ಲಿ ಈ ಬಾಂಬರುಗಳ ಪಡೆಯ ಕೆಲವರು ಕೈ ಜೋಡಿಸಿದ್ದರೆಂಬುದು ರಾಜಕೀಯ ವಲಯಗಳ ಗುಸು-ಗುಸು. ಅರ್ಥಾತ್, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅನುಸರಿಸಲಾಗುವ ರಣತಂತ್ರಗಳು ಸಾಂಪ್ರದಾಯಿಕ ಮಾದರಿಯ ಕ್ಯಾಂಡಿ ಡೇಟುಗಳಿಗೆ ದಿಕ್ಕು ತೋಚದಂತೆ ಮಾಡುವುದು ನಿಜ.