Friday, 13th December 2024

ಮೋದಿ ಪಡೆಗೆ ಸಿಗಲಿದೆ ಬೊಮ್ಮಾಯಿ ಗಿಫ್ಟು

ಮೂರ್ತಿಪೂಜೆ

ಮುಂದಿನ ತಿಂಗಳು ಕರ್ನಾಟಕಕ್ಕೆ ದಂಡೆತ್ತಿ ಬರುತ್ತಿರುವ ಮೋದಿ ನೇತೃತ್ವದ ಸೈನ್ಯಕ್ಕೆ ಗಿಫ್ಟ್ ಕೊಡಲು ಸಿಎಂ ಬೊಮ್ಮಾಯಿ ಸಜ್ಜಾಗುತ್ತಿದ್ದಾರೆ. ಯಡಿಯೂರಪ್ಪ ಅವರನ್ನು ಪದಚ್ಯುತಗೊಳಿಸಿ,ತಮ್ಮನ್ನು ಪಟ್ಟದ ಮೇಲೆ ತಂದು ಕೂರಿಸಿದ ವರಿಷ್ಟರ ಲೆಕ್ಕಾಚಾರ ಬೊಮ್ಮಾಯಿ ಅವರಿಗೆ ಗೊತ್ತಿಲ್ಲದ್ದೇ ನಲ್ಲ. ಗದ್ದುಗೆಯ ಮೇಲೆ ಬಂದು ಕೂತ ತಾವು ವರಿಷ್ಟರ ಅಣತಿಯಂತೆ ಸ್ಟೇಜ್ ಮ್ಯಾನೇಜ್ ಮಾಡುವುದಷ್ಟೇ ಮುಖ್ಯ ಎಂಬುದು ಅವರಿಗೆ ಮನನವಾಗಿತ್ತು.

ಹೀಗೆ ಅಧಿಕಾರ ಹಿಡಿದು ಒಂದು ವರ್ಷ ಮೂರು ತಿಂಗಳು ಕಳೆದ ಬೊಮ್ಮಾಯಿ ಚೆನ್ನಾಗಿಯೇ ಸ್ಟೇಜ್ ಮ್ಯಾನೇಜ್ ಮಾಡಿದ್ದಾರೆ.
ವೈಯಕ್ತಿಕ ವರ್ಚಸ್ಸಿನಿಂದ ಅವರು ಮಾಸ್ ಲೀಡರ್ ಆಗಿ ಹೊರಹೊಮ್ಮದೇ ಇರಬಹುದು. ಆದರೆ ವರಿಷ್ಟರ ಅಣತಿಯಂತೆ ನಡೆದುಕೊಳ್ಳುವ ವಿಷಯದಲ್ಲಿ ಎಲ್ಲೂ ತಪ್ಪಿಲ್ಲ. ಅವರು ಅಧಿಕಾರಕ್ಕೆ ಬಂದ ನಂತರ ರಾಜ್ಯ ಬಿಜೆಪಿಯಲ್ಲಿ ಏನೇ ಗೊಂದಲಗಳು ಏಳಲಿ, ಆದರೆ ಆ ಗೊಂದಲಗಳಿಗೆ ಕಿಡಿ ತಾಗಿಸುವ ಬದಲು ತಣ್ಣೀರು ಸುರಿಯುವ ವಿಷಯದಲ್ಲಿ ಬೊಮ್ಮಾಯಿ ಮಾಸ್ಟರ್ ಆಗಿ ಹೊರಹೊಮ್ಮಿದ್ದಾರೆ.

ತುಂಬ ದೂರ ಹೋಗಿ ನೋಡುವುದೇನು? ಸಚಿವ ಸಂಪುಟ ವಿಸ್ತರಣೆ ಯಾ ಪುನಾರಚನೆಯ ಎಪಿಸೋಡನ್ನು ನೋಡಿದರೂ ಸಾಕು, ಇದು ಸ್ಪಷ್ಟವಾಗುತ್ತದೆ. ಅವರು ಅಽಕಾರಕ್ಕೆ ಬಂದ ಶುರುವಿನಲ್ಲಿ ಬಿಟ್ಟರೆ ತದನಂತರದ ದಿನಗಳಲ್ಲಿ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಆಗಲೇಬೇಕು ಎಂಬ ಕೂಗು ಕೇಳುತ್ತಲೇ ಬಂತು. ಇಂತಹ ಕೂಗು ಕೇಳಿ ಬಂದಾಗಲೆಲ್ಲ ಬೊಮ್ಮಾಯಿ
ವಿಚಲಿತರಾಗಬಹುದಿತ್ತು. ಆದರೆ ಯಾವತ್ತೂ ವಿಚಲಿತರಾಗದ ಬೊಮ್ಮಾಯಿ, ಇಂತಹ ಕೂಗು ಕೇಳಿ ಬಂದಾಗಲೆಲ್ಲ ದೆಹಲಿಯ ವಿಮಾನ ಹತ್ತಿದರು.

ಹೀಗೆ ದೆಹಲಿಗೆ ಹೋದವರು ಪಕ್ಷದ ಐರನ್ ಮ್ಯಾನ್ ಅಮಿತ್ ಷಾ ಅವರನ್ನೋ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜಗತ್ ಪ್ರಕಾಶ್ ನಡ್ಡಾ ಅವರನ್ನು ಭೇಟಿ ಮಾಡಿ ಹೂವಿನ ಬೊಕೆ ಕೊಟ್ಟು ಬರುತ್ತಿದ್ದರು. ಹೀಗವರು ಹೋಗಿ ಬಂದರು ಎಂದರೆ ಸಚಿವ ಪದವಿ
ಆಕಾಂಕ್ಷಿಗಳ ಕಿವಿಯ ಮೇಲೆ ಲಾಲ್ ಭಾಗೋ, ಕಬ್ಬನ್ ಪಾರ್ಕೋ ಕೂರುವುದು ಗ್ಯಾರಂಟಿಯಾಗಿ ಹೋಯಿತು. ಯೇ, ನಿಮ್ಮ ವಿಷಯದಲ್ಲಿ ಎಲ್ಲ ಕ್ಲಿಯರ್ ಆಗಿದೆ. ಇಂತಹ ಡೇಟಿಗೆ ಕ್ಯಾಬಿನೆಟ್ ವಿಸ್ತರಿಸುತ್ತೇವೆ ಅಂತ ಅವರು ಡೇಟು ಕೊಡುತ್ತಿದ್ದ ರೀತಿಗೇ ಆಕಾಂಕ್ಷಿಗಳು ಫಿದಾ.

ಆದರೆ ಹೀಗವರು ಕೊಟ್ಟ ಒಂದು ಡೇಟಿನಲ್ಲೂ ಸಂಪುಟ ವಿಸ್ತರಣೆ ಇಲ್ಲವೇ ಪುನಾರಚನೆ ಆಗಿಲ್ಲ,ಆ ಮಾತು ಬೇರೆ. ಆದರೆ ಅವರ ಡೇಟಿನ ಹೊಡೆತಕ್ಕೆ ಈಗ ಬಿಜೆಪಿಯ ಬಹುತೇಕ ಶಾಸಕರು ಮುಖ ಕೊಡುತ್ತಿಲ್ಲ. ಬದಲಿಗೆ ಮಂತ್ರಿ ಪದವಿಯ
ಗೊಡವೆ ಬಿಟ್ಟು ಮುಂದಿನ ಚುನಾವಣೆಯ ಕಡೆ ಗಮನ ಹರಿಸಿದ್ದಾರೆ. ಇದ್ದುದರಲ್ಲಿ ಈಶ್ವರಪ್ಪ,ರಮೇಶ್ ಜಾರಕಿಹೊಳಿ ಮತ್ತು
ಸಿ.ಪಿ.ಯೋಗೀಶ್ವರ್ ಸವರಿಗೆ ಮಂತ್ರಿಗಳಾಗುವ ಆಸೆ ಇದೆ. ಆದರೆ ಈ ಕನಸು ಈಡೇರುತ್ತದೆ ಎಂಬ ವಿಷಯದಲ್ಲಿ ಅವರಿಗೂ ನಂಬಿಕೆ ಹೋಗಿದೆ.

ಇದುವರೆಗಿನ ಇತಿಹಾಸದಲ್ಲಿ ಮಂತ್ರಿ ಮಂಡಲ ವಿಸ್ತರಣೆ ಯಾ ಪುನಾರಚನೆಯ ವಿಷಯದಲ್ಲಿ ಮುಖ್ಯಮಂತ್ರಿಗಳಾದ
ಬಹುತೇಕರು ಬಂಡಾಯದ ಬಿಸಿ ಅನುಭವಿಸಿದ್ದಾರೆ. ಆದರೆ ಬೊಮ್ಮಾಯಿ ಮಾತ್ರ ಅದರ ಸಣ್ಣ ಬಿಸಿಯನ್ನೂ ಅನುಭವಿಸಿಲ್ಲ. ಮತ್ತದು ಸರಕಾರವನ್ನು ಮುಜುಗರಕ್ಕೆ ಸಿಲುಕಿಸುವ ಪರಿಸ್ಥಿತಿಯನ್ನೂ ತಂದುಕೊಂಡಿಲ್ಲ. ಹೀಗೆ ಪಕ್ಷ ಮತ್ತು ಸರಕಾರದಲ್ಲಿ ಗೊಂದಲವಾಗದಂತೆ ನೋಡಿಕೊಳ್ಳುವುದೇ ಬೊಮ್ಮಾಯಿ ಅವರಿಗಿದ್ದ ಟಾರ್ಗೆಟ್ಟು. ಈ ಟಾರ್ಗೆಟ್ ತಲುಪುವಲ್ಲಿ ಅವರು ಯಶಸ್ವಿಯಾಗಿದ್ದಾರೆ.

ಅಷ್ಟೇ ಅಲ್ಲ, ಡಿಸೆಂಬರ್ ಎರಡನೇ ವಾರದ ಹೊತ್ತಿಗೆ ಕರ್ನಾಟಕಕ್ಕೆ ದಂಡೆತ್ತಿ ಬರಲಿರುವ ಮೋದಿ ಟೀಮಿನ ಕೈಗೆ ತಮ್ಮ ಕೈಲಿರುವ ಬೇಟನ್ ಒಪ್ಪಿಸಲು ಸಜ್ಜಾಗಿದ್ದಾರೆ.
**
ಅಂದ ಹಾಗೆ ಗುಜರಾತ್ ಮತ್ತು ಹಿಮಾಚಲ ಪ್ರದೇಶ ರಾಜ್ಯಗಳ ವಿಧಾನಸಭಾ ಚುನಾವಣೆ ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಪಡೆ ಕರ್ನಾಟಕಕ್ಕೆ ದಂಡೆತ್ತಿ ಬರಲಿದೆ. ಹೀಗೆ ಬರುವ ಅದು ರಾಜ್ಯ ಬಿಜೆಪಿಯ ವಾರ್ ರೂಮನ್ನು
ಸಂಪೂರ್ಣವಾಗಿ ತನ್ನ ನಿಯಂತ್ರಣಕ್ಕೆ ತೆಗೆದುಕೊಂಡು ವಿಧಾನಸಭಾ ಚುನಾವಣೆ ಎದುರಿಸಲು ಅಗತ್ಯವಾದ ಯುದ್ಧ
ನೀತಿಗಳನ್ನು ರೂಪಿಸಲಿದೆ.

ಹೀಗೆ ಕರ್ನಾಟಕಕ್ಕೆ ಬರಲಿರುವ ಅದಕ್ಕೆ ಪಾಸಿಟಿವ್ ಮೆಸೇಜ್ ಕೊಡಬೇಕಲ್ಲ? ಅದಕ್ಕೀಗ ಬೊಮ್ಮಾಯಿ ಸಜ್ಜಾಗಿ ಕುಳಿತಿದ್ದಾರೆ.
ತಮ್ಮ ಹಿಂದಿರುವ ಪಡೆಯ ಮೂಲಕ ಇತ್ತೀಚೆಗೆ ಅವರು ಮಾಡಿಸಿದ ಸರ್ವೇ, ಒಂದು ವಿಷಯವನ್ನು ಸ್ಪಷ್ಟವಾಗಿ ಹೇಳಿದೆ ಯಂತೆ. ಈ ದೇಶಕ್ಕೆ ಮೋದಿಯವರು ಬೇಕೇ ಬೇಕು. ಅವರು ಬೇಕೆಂದರೆ ಕರ್ನಾಟಕದಲ್ಲೂ ಬಿಜೆಪಿ ಮರಳಿ ಅಧಿಕಾರ
ಹಿಡಿಯಬೇಕು ಎಂಬುದು ಸರ್ವೆಯಲ್ಲಿ ಉತ್ತರಿಸಿದ ಬಹುತೇಕರ ಮಾತಂತೆ.

ಹಿಂದು ಪದದ ಅರ್ಥ ಅಶ್ಲೀಲವಾಗಿದೆ ಅಂತ ಕಾಂಗ್ರೆಸ್ ನಾಯಕ ಸತೀಶ್ ಜಾರಕಿಹೊಳಿ ಹೇಳಿದ ಮೇಲೆ ಮುಂಬೈ-ಕರ್ನಾಟಕ ಭಾಗದಲ್ಲಿ ಈ ಅಭಿಪ್ರಾಯ ದಟ್ಟವಾಗಿದೆ ಎಂಬುದು ಬೊಮ್ಮಾಯಿ ಅವರ ಪರ್ಸನಲ್ ಟೀಮಿನ ರಿಪೋರ್ಟು. ಅಂದ ಹಾಗೆ ಈ ರಿಪೋರ್ಟು ಮೋದಿಯವರನ್ನು ಸಂತೃಪ್ತಿಗೊಳಿಸುವುದು ನಿಜ.ಯಾಕೆಂದರೆ ದೇಶದ ಯಾವುದೇ ಭಾಗದಲ್ಲಿ ಬೇರೆ ಅಲೆಗಳಿ ಗಿಂತ ಹೆಚ್ಚಾಗಿ ತಮ್ಮ ಪರವಾದ ಅಲೆ ಏಳಬೇಕು ಅಂತ ಅವರು ಬಯಸುತ್ತಾರೆ.

ಈ ಹಿಂದೆ ಯಡಿಯೂರಪ್ಪ ಇದ್ದಾಗ, ಕರ್ನಾಟಕದಲ್ಲಿಮೋದಿ ಅಲೆಗಿಂತ ಯಡಿಯೂರಪ್ಪ ಬಲೆ ಮುಖ್ಯ ಎಂಬ ಮಾತು ಕೇಳಿ ಬರುತ್ತಿತ್ತು. ಮತ್ತು ಅಂತಹ ಮಾತು ಕೇಳಿ ಬಂದಾಗಲೆಲ್ಲ ನರೇಂದ್ರ ಮೋದಿ ಕುದಿಯುತ್ತಿದ್ದರು. ಆದರೆ ಈಗ ಬೊಮ್ಮಾಯಿ ಕೈಲಿರುವ ರಿಪೋರ್ಟು, ಕರ್ನಾಟಕದಲ್ಲಿ ಪಕ್ಷ ಮೋದಿಯವರ ನಾಮಬಲದಿಂದ ಗೆಲ್ಲಲಿದೆ. ಗೆದ್ದು ಅಧಿಕಾರ ಹಿಡಿಯಲಿದೆ
ಅಂತ ಹೇಳಿದೆ.

ಅಂದ ಹಾಗೆ ಈ ರಿಪೋರ್ಟು ಕರ್ನಾಟಕಕ್ಕೆ ದಂಡೆತ್ತಿ ಬರಲಿರುವ ಮೋದಿ ನೇತೃತ್ವದ ಪಡೆಗೆ ಬೂಸ್ಟರ್ ಡೋಸ್ ನಂತೆ ದಕ್ಕಲಿದೆ. ಅರ್ಥಾತ್, ರಾಜಕಾರಣದಲ್ಲಿ ತಮ್ಮ ಶಕ್ತಿಯ ಬಗ್ಗೆ ಬಿಲ್ಡಪ್ ಕೊಡುವುದಕ್ಕಿಂತ ತಮಗಿಂತ ದೊಡ್ಡವರ ಶಕ್ತಿಯ ಬಗ್ಗೆ ಬಿಲ್ಡಪ್ಪು ಕೊಡುವುದು ಯಾವತ್ತೂ ಕ್ಷೇಮ. ಈ ವಿಷಯದಲ್ಲಿ ಬಹುತೇಕ ನಾಯಕರು ಬೊಮ್ಮಾಯಿ ಅವರ ಮಾರ್ಗದರ್ಶನ ಪಡೆಯುವುದು ಬೆಸ್ಟು.
***

ಇದೇ ರೀತಿ ಕರ್ನಾಟಕಕ್ಕೆ ಬರುವ ಮೋದಿ ನೇತೃತ್ವದ ಪಡೆಗೆ ಬೊಮ್ಮಾಯಿ ಮತ್ತೊಂದು ಸಿಹಿ ಸುದ್ದಿ ಇಟ್ಟುಕೊಂಡಿದ್ದಾರೆ. ಅದೆಂದರೆ, ಭವಿಷ್ಯದ ಸಿಎಂ ಹುದ್ದೆಗಾಗಿ ರಾಜ್ಯ ಕಾಂಗ್ರೆಸ್ ನಲ್ಲಿ ನಡೆದಿರುವ ಸಂಘರ್ಷ. ಅಲ್ಲೀಗ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್,ಪ್ರತಿಪಕ್ಷ ನಾಯಕ ಸಿದ್ಧರಾಮಯ್ಯ ಮಾತ್ರವಲ್ಲ,ಮಾಜಿ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಸೇರಿದಂತೆ ಇನ್ನಷ್ಟು ನಾಯಕರು ಸಿಎಂ ಹುದ್ದೆಯ ಕನಸು ಕಾಣತೊಡಗಿದ್ದಾರೆ ಎಂಬುದು ಬೊಮ್ಮಾಯಿ ಕೈಲಿರುವ
ಮಾಹಿತಿ.

ಡಿಕೆಶಿ-ಸಿದ್ಧರಾಮಯ್ಯ ನಡುವಣ ಸಂಘರ್ಷದಲ್ಲಿ ಸಿಎಂ ಆಗುವ ಲಕ್ಕು ತಮಗೇ ಬರಬಹುದು ಅಂತ ಈ ನಾಯಕರು
ಭಾವಿಸಿರುವುದರಿಂದ ಹಲವರ ಕಾಲೆಳೆಯಲು ಅವರು ಮುಂದಾಗುತ್ತಾರೆ. ಹೀಗೆ ಪರಸ್ಪರರ ಕಾಲೆಳೆದುಕೊಳ್ಳುವ ಕೆಲಸ ವ್ಯಾಪಕವಾಗಿ ನಡೆದರೆ ಕಾಂಗ್ರೆಸ್ ಸೋಲು ನಿಶ್ಚಿತ ಎಂಬುದು ಬೊಮ್ಮಾಯಿ ಲೆಕ್ಕಾಚಾರ. ಈ ಮಧ್ಯೆ ಚುನಾವಣೆಯಲ್ಲಿ ಕಾಂಗ್ರೆಸ್ ಸೈನ್ಯವನ್ನು ಮುನ್ನಡೆಸುವ ಶಕ್ತಿ ಯಾರ್ಯಾರಲ್ಲಿದೆ ಅನ್ನುವುದು ಬೊಮ್ಮಾಯಿ ಅವರಿಗೆ ಚೆನ್ನಾಗಿ ಗೊತ್ತು. ಇಂತವರನ್ನು ಕಟ್ಟಿ ಹಾಕಿದರೆ, ಅವರ ಶಸಾಗಾರಕ್ಕೂ ಬೀಗ ಹಾಕಿದರೆ ತುಂಬ ಕ್ಯಾಂಡಿಡೇಟುಗಳು ಹಸಿವೆಯಿಂದ, ಅರೆ ಹೊಟ್ಟೆಯಿಂದ ನರಳಿ ಯುದ್ಧ ಭೂಮಿಯಲ್ಲಿ ಉದುರಿ ಬೀಳುತ್ತಾರೆ ಎಂಬುದು ಬೊಮ್ಮಾಯಿ ಯೋಚನೆ. ಈ ಯೋಚನೆಯ
ವಿವರವನ್ನು ಅವರು ಕರ್ನಾಟಕಕ್ಕೆ ಬರಲಿರುವ ಮೋದಿ ನೇತೃತ್ವದ ಸೈನ್ಯಕ್ಕೆ ನೀಡಲಿದ್ದಾರೆ.

**
ಈ ಮಧ್ಯೆ ಪರಿಶಿಷ್ಟ ಜಾತಿ, ಪಂಗಡದ ಮೀಸಲಾತಿ ಹೆಚ್ಚಳ ಮಾಡಿದ ಬೆಳವಣಿಗೆ ಪಕ್ಷಕ್ಕೆ ಲಾಭದಾಯಕವಾಗಲಿದೆ ಎಂಬುದು ಬೊಮ್ಮಾಯಿ ವಿಶ್ವಾಸ. ಇದೇ ರೀತಿ ಲಿಂಗಾಯತ ಸಮುದಾಯದ ಅತಿ ದೊಡ್ಡ ವೋಟ್ ಬ್ಯಾಂಕ್ ಅನ್ನಿಸಿಕೊಂಡ ಪಂಚಮಸಾಲಿ ಗಳನ್ನು 2 ಎ ಪ್ರವರ್ಗಕ್ಕೆ ಸೇರಿಸಲು ಅವರು ಬಯಸಿದ್ದಾರೆ. ಹೀಗೆ ಬಯಸಿದವರು ಹಿರಿಯ ನಾಯಕ
ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ಕರೆಸಿ ಸಮಾಧಾನಪಡಿಸಿದ್ದಾರೆ. ಅಲ್ಲಿಗೆ ರಾಜ್ಯ ಬಿಜೆಪಿಯಲ್ಲಿದ್ದ ಏಕೈಕ ಬಂಡಾಯ ಕೂಡಾ ಟುಸ್ ಆಗಿದೆ.

ಇನ್ನು ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ ಮತ ಬ್ಯಾಂಕ್ ಮೇಲೆ ಪ್ರಭಾವ ಬೀರಲು ನಡೆಸಿರುವ ಕಾರ್ಯ ಒಂದೊಂದಾಗಿ ಫಲ ನೀಡುತ್ತಿವೆ ಎಂಬುದು ಬೊಮ್ಮಾಯಿ ನಂಬುಗೆ. ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಮಾಡಿದ ಬೆಳವಣಿಗೆ ಬಿಜೆಪಿಗೆ ಪ್ಲಸ್ ಆಗಲಿದೆ. ಅದೇ ರೀತಿ ಒಕ್ಕಲಿಗ ಪಾಕೇಟಿನಲ್ಲಿರುವ ಹಲ ಕಾಂಗ್ರೆಸ್ ನಾಯಕರು ಬಿಜೆಪಿಗೆ ಬರಲು ಅಣಿಯಾಗಿದ್ದಾರೆ ಎಂಬುದೂ ಬೊಮ್ಮಾಯಿ ಹರ್ಷಕ್ಕೆ ಮತ್ತೊಂದು ಕಾರಣ. ಹೀಗೆ ಒಂದರ ಹಿಂದೆ ಒಂದರಂತೆ ಪಾಸಿಟಿವ್ ಬೆಳವಣಿಗೆಗಳ ಪಟ್ಟಿ ಹಿಡಿದುಕೊಂಡ ಬೊಮ್ಮಾಯಿ ಈಗ ಮೋದಿ ಪಡೆ ಬರುವುದನ್ನೇ ಕಾಯುತ್ತಿದ್ದಾರೆ.

ಹೀಗೆ ಬಂದ ಪಡೆ ಬೊಮ್ಮಾಯಿಯವರ ಕೆಲಸ ನೋಡಿ ಒಂದು ಸಲ ಗುಡ್ ಅಂದರೆ ಮುಗಿಯಿತು. ಸಿಎಂ ಹುದ್ದೆಯಲ್ಲಿ ಕುಳಿತು ಅವರು ಪಾಸಾದರು ಅಂತಲೇ ಲೆಕ್ಕ. ಕೊನೆಯ ಮಾತು: ಹೀಗೆ ಮೋದಿ ನೇತೃತ್ವದ ಪಡೆಗೆ ಗಿಫ್ಟ್ ನೀಡಲು ಮುಂದಾಗಿರುವ ಬೊಮ್ಮಾಯಿ ಅವರಿಗೂ ಒಂದು ಸಿಹಿ ಸುದ್ಧಿ ಕಾದಿದೆಯಂತೆ.

ಅದೆಂದರೆ ಮುಂದಿನ ವಿಧಾನಸಭಾ ಚುನಾವಣೆಯ ಉಸ್ತುವಾರಿಯನ್ನು ರಾಜ್ಯ ಬಿಜೆಪಿಯ ಹೊಸ ಜೋಡೆತ್ತುಗಳಿಗೆ ನೀಡಲು ವರಿಷ್ಟರು ಯೋಚಿಸಿದ್ದಾರೆ. ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮತ್ತು ಯಡಿಯೂರಪ್ಪ ಅವರ ಪುತ್ರ ಬಿ.ವೈ. ವಿಜಯೇಂದ್ರ ಅವರೇ ಈ ಜೋಡೆತ್ತುಗಳು. ಈ ಪೈಕಿ ವಿಜಯೇಂದ್ರ ಅವರಿಗೆ ಮುಂದಿನ ಚುನಾವಣೆಯಲ್ಲಿ ಪ್ರಾಮಿನೆನ್ಸು ಸಿಗಬೇಕು ಅಂತ ಬಯಸಿದವರಲ್ಲಿ ಬೊಮ್ಮಾಯಿ ಮುಖ್ಯರು. ಈ ಹಿಂದೆ ಅವರಿಗೆ ಎಮ್ಮೆಲ್ಸಿ ಟಿಕೇಟು, ಮಂತ್ರಿಗಿರಿ ಕೊಡಿಸಲು ಬೊಮ್ಮಾಯಿ ಪ್ರಯತ್ನಿಸಿದ್ದರು ಎಂಬುದು ರಹಸ್ಯವಲ್ಲ. ಆದರೆ ಅಂತಹ ಯಾವ ಪ್ರಯತ್ನಗಳಿಗೂ ಹೈಕಮಾಂಡ್
ಪ್ರಮುಖರು ಒಪ್ಪಿರಲಿಲ್ಲ.ಹೀಗಾಗಿ ಬೊಮ್ಮಾಯಿ ಸಾಕಷ್ಟು ಮುಜುಗರ ಅನುಭವಿಸಿದ್ದರು. ಆದರೆ ಈಗ ಸಿ.ಟಿ.ರವಿ- ಬಿ.ವೈ. ವಿಜಯೇಂದ್ರ ಅವರ ಕಾಂಬಿನೇಷನ್ ಸೆಟ್ಟಾಗುತ್ತಿರುವುದು ಬೊಮ್ಮಾಯಿ ಅವರಿಗೆ ಹರ್ಷ ತಂದಿದೆ.