ಮೂರ್ತಿಪೂಜೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕಿರಿ ಕಿರಿ ಮಾಡಿಕೊಂಡಿದ್ದಾರಂತೆ! ನೋಡ ನೋಡುತ್ತಿದ್ದಂತೆಯೇ ರಾಜ್ಯ ಸರಕಾರದ ಮೇಲೆ ಬಿ.ಎಲ್. ಸಂತೋಷ್ ಸಂಪೂರ್ಣ ನಿಯಂತ್ರಣ ಸಾಧಿಸಿಕೊಂಡಿದ್ದು ಮುಖ್ಯಮಂತ್ರಿಗಳಿಗೆ ಸ್ವಲ್ಪ ಕಿರಿಕಿರಿ ಉಂಟುಮಾಡುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿಗಳ ಕಚೇರಿಗೆ ಬರುವ ಕಡತಗಳ ಪೈಕಿ ಸಂತೋಷ್ ಇಚ್ಚಿಸುವ ಕಡತಗಳಿಗೆ ಮಾತ್ರ ಮುಕ್ತಿ ಸಿಗುತ್ತಿದೆ ಎಂಬುದೇ ಅವರಿಗೆ ಸರಕಾರದ ಮೇಲಿರುವ ಹಿಡಿತಕ್ಕೆ ಸಾಕ್ಷಿ.
ಅಂದ ಹಾಗೆ ಈ ವಿಷಯದಲ್ಲಿ ಬಿ.ಎಲ್. ಸಂತೋಷ್ ಅವರಿಗೆ, ಮುಖ್ಯಮಂತ್ರಿಗಳಿಗೆ ಯಾವ ಕಡತಗಳು ಬರಬೇಕು? ಮತ್ತು ಯಾವುದಕ್ಕೆ ಅವರ ಅಂಕಿತ ಪಡೆಯಬೇಕು? ಎಂಬ ವಿಷಯಗಳ ಕುರಿತು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಅವರು ಸಲಹೆ ನೀಡುತ್ತಿದ್ದಾರೆ. ಹೀಗಾಗಿ ಬೊಮ್ಮಾಯಿ ತಮಗೆ ಒಪ್ಪಿಗೆಯಾದ ಕಡತಗಳಿಗೂ ಸಹಿ ಹಾಕಲಾಗುತ್ತಿಲ್ಲ. ಅವರೀಗ ಪಂಜರದೊಳಗಿನ ಸಿಎಂ ಎಂಬುದು ಹಲ ಶಾಸಕರ ಮಾತು. ಹಾಗಂತ ವಿಧಾನಸಭೆಯ ಮೊಗಸಾಲೆಯಲ್ಲಿ ಮಾತನಾಡುತ್ತಿರುವ ಬಿಜೆಪಿಯ ಹಲ ಶಾಸಕರಿಗೆ ತಮ್ಮ ಕ್ಷೇತ್ರದ ಕೆಲಸಗಳು ಪೆಂಡಿಂಗ್ ಆಗುತ್ತಿವೆ ಎಂಬುದು ದೊಡ್ಡ ಚಿಂತೆ. ಕಳೆದ ಅಧಿವೇಶನದ ಸಂದರ್ಭದಲ್ಲಿ ಸಿಎಂ ಬೊಮ್ಮಾಯಿ ಅವರು ಎಲ್ಲ ಶಾಸಕರಿಗೆ ತಲಾ ೫೦ಲಕ್ಷ ರುಪಾಯಿಗಳ ನಿಧಿ ಕೊಡಲು ಯೋಚಿಸಿದ್ದರಂತೆ.
ವಿಧಾನಸಭೆ ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಶಾಸಕರಿಗೆ ಐವತ್ತು ಲಕ್ಷ ರುಪಾಯಿ ಕ್ಷೇತ್ರಾಭಿವೃದ್ದಿ ನಿಧಿ ಒದಗಿಸಿದರೆ ಅವರಿಗೆ ಬಲ ತುಂಬಿದಂತಾಗುತ್ತದೆ ಎಂಬುದು ಬೊಮ್ಮಾಯಿಯವರ ಲೆಕ್ಕಾಚಾರ. ಅವರ ಲೆಕ್ಕಾ ಚಾರಕ್ಕೆ ಮತ್ತೊಂದು ಕಾರಣವೂ ಇತ್ತು. ಅದು ಏರುತ್ತಿದ್ದ ತೆರಿಗೆ ಪ್ರಮಾಣ. ವಿವಿಧ ಮೂಲಗಳಿಂದ ರಾಜ್ಯ ಸರಕಾರ ಸಂಗ್ರಹಿಸುವ ತೆರಿಗೆ ಪ್ರಮಾಣ ಈ ಬಾರಿ ಹೆಚ್ಚಾಗಿದೆ. ಆದರೆ, ರಾಜ್ಯ ಸರಕಾರ ಸಂಗ್ರಹಿಸುವ ಸ್ವಂತದ ತೆರಿಗೆ ಹೆಚ್ಚಾದರೂ ಕೇಂದ್ರದಿಂದ ಬರುವ ಅನುದಾನದ ಪ್ರಮಾಣ ಕಡಿಮೆಯಾಗಿದೆ. ಹೀಗಾಗಿ ಬಜೆಟ್‌ನ್ನು ತೂಗಿ ಸುವ ಅನಿವಾರ್ಯತೆಗೆ ಒಳಗಾದ ಬೊಮ್ಮಾಯಿ, ಶಾಸಕರಿಗೆ ಐವತ್ತು ಲಕ್ಷ ರೂಪಾಯಿ ನಿಧಿ ಕೊಡಲು ಹಿಂಜರಿದರು.
ಹೋಗಲಿ, ಈಗ ಶಾಸಕರ ಕೆಲಸಗಳನ್ನಾದರೂ ಮಾಡಿ ಕೊಡೋಣ ಎಂದರೆ ಮುಖ್ಯಮಂತ್ರಿಗಳ ಕಚೇರಿಯ ಮೇಲೆ ಬಿ.ಎಲ.ಸಂತೋಷ್ ಹಿಡಿತ ಸಾಧಿಸಿ
ದ್ದಾರೆ. ಸಚಿವ ಡಾ.ಕೆ.ಸುಧಾಕರ್ ಅವರ ಸಲಹೆ ಪಡೆದು ಅವರು ಏನು ಸೂಚಿಸುತ್ತಾರೋ? ಬೊಮ್ಮಾಯಿ ಅದನ್ನು ಪಾಲಿಸುವ ಸ್ಥಿತಿ ಇದೆ. ಹಾಗೆ ನೋಡಿದರೆ ಇಂತಹ ಪರಿಸ್ಥಿತಿ ಎದುರಾಗುತ್ತದೆ ಅಂತ ಬೊಮ್ಮಾಯಿ ಅವರೂ ಊಹಿಸಿರಲಿಲ್ಲ. ಗುಜರಾತ್ ವಿಧಾನಸಭೆಯ ಚುನಾವಣೆಗಳು ಮುಗಿದ ನಂತರ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಷಾ ಜೋಡಿ ಕರ್ನಾಟಕಕ್ಕೆ ದಂಡೆತ್ತಿ ಬರುತ್ತದೆ. ಪಕ್ಷ ಹಾಗೂ ಸರಕಾರದ ಮೇಲೆ ಸಂಪೂರ್ಣ
ನಿಯಂತ್ರಣ ಸಾಧಿಸುತ್ತದೆ. ಆ ಸಂದರ್ಭದಲ್ಲಿ ಈ ಜೋಡಿ ನೀಡುವ ಸೂಚನೆಗಳನ್ನು ಪಾಲಿಸಿದರೆ ಸಾಕು ಎಂಬುದು ಅವರ ಲೆಕ್ಕಾಚಾರವಾಗಿತ್ತು.
ಆದರೆ ಎರಡು ತಿಂಗಳು ಕಳೆದರೂ ಮೋದಿ-ಷಾ ಜೋಡಿ ಕರ್ನಾಟಕದಲ್ಲಿ ಪಕ್ಷ ಮತ್ತು ಸರಕಾರವನ್ನು ನಿಯಂತ್ರಣಕ್ಕೆ ತೆಗೆದುಕೊಂಡಿಲ್ಲ. ಏಕೆಂದರೆ, ಗುಜರಾತ್ ಸೇರಿದಂತೆ ಉತ್ತರದ ರಾಜ್ಯಗಳ ಬಗ್ಗೆ ಅವರಿಗೆ ಒಂದು ಚಿತ್ರಣವಿದೆ. ಅದರೆ ಅದೇ ಚಿತ್ರಣ ಕರ್ನಾಟಕದ ಬಗೆಗಿಲ್ಲ. ಹೀಗಾಗಿ ಅವರು ಸಂತೋಷ್ ಅವರನ್ನು ನೆಚ್ಚಿಕೊಳ್ಳುವ ಸ್ಥಿತಿ ಇದೆ. ಇದನ್ನು ಬಲ್ಲ ಸಂತೋಷ್ ಅವರು ನಿರ್ಮಲ್ ಕುಮಾರ್ ಸುರಾನಾ ಅವರ ಮೂಲಕ ಪಕ್ಷ ಮತ್ತು ಡಾ.ಕೆ.ಸುಧಾಕರ್ ಮೂಲಕ ಸರಕಾರ ಚಲಿಸುವಂತೆ ಮಾಡಿದ್ದಾರೆ.
ಆದ್ದರಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಾವು ನಿಂತ ಜಾಗದ ಅಸಹಾಯಕರಾಗಿದ್ದಾರೆ. ಪರಮೇಶ್ವರ್‌ಗೆ ಜೆಡಿಎಸ್ ಗಾಳ? ಚುನಾವಣೆಗಳು ಹತ್ತಿರವಾಗುತ್ತಿದ್ದಂತೆಯೇ ಜೆಡಿಎಸ್ ನಾಯಕರು ಮಾಯಾಜಾಲ ಹರಡತೊಡಗಿದ್ದಾರೆ. ಚುನಾವಣೆಯಲ್ಲಿ ಐವತ್ತರಿಂದ ಅರವತ್ತರಷ್ಟು ಸೀಟುಗಳನ್ನು ಗೆಲ್ಲಲು ಹವಣಿಸುತ್ತಿರುವ ಜೆಡಿಎಸ್ ನಾಯಕರು ಈಗ ಮಾಜಿ ಉಪಮುಖ್ಯಮಂತ್ರಿ, ಕಾಂಗ್ರೆಸ್ ನಾಯಕ ಡಾ.ಜಿ.ಪರಮೇಶ್ವರ್ ಅವರಿಗೆ ಗಾಳ ಹಾಕಿದ್ದಾ ರಂತೆ.
‘ಕಾಂಗ್ರೆಸ್‌ನಲ್ಲಿದ್ದರೆ ಈ ಸಲ ನಿಮಗಾಗುವ ಪ್ರಯೋಜನ ಏನೂ ಇಲ್ಲ. ಹೀಗಾಗಿ ನಮ್ಮ ಪಕ್ಷಕ್ಕೆ ಬನ್ನಿ. ಹೇಗಿದ್ದರೂ ನಮ್ಮ ಪಕ್ಷದ ಸುಧಾಕರಲಾಲ್ ಅವರೇ ನಿಮಗೆ ಸಮೀಪ ಸ್ಪರ್ಧಿ. ಇವತ್ತು ನೀವೇ ನಮ್ಮ ಪಕ್ಷಕ್ಕೆ ಬಂದು ಸ್ಪರ್ಧಿಸಿದರೆ ಚುನಾವಣೆಯಲ್ಲಿ ನಿರಾಯಾಸವಾಗಿ ಗೆಲ್ಲುತ್ತೀರಿ. ಗ್ಯಾರಂಟಿ ಉಪಮುಖ್ಯ ಮಂತ್ರಿಯಾಗುತ್ತೀರಿ’ ಅಂತ ಕುಮಾರಸ್ವಾಮಿ ಯವರು ಪರಮೇಶ್ವರ್ ಅವರಿಗೆ ಹೇಳಿದ್ದಾರಂತೆ. ಪರಮೇಶ್ವರ್ ಪಕ್ಷಕ್ಕೆ ಬಂದರೆ ದಲಿತ ಮತ ಬ್ಯಾಂಕ್‌ನ ಬೆಂಬಲ ಸಿಗುತ್ತದೆ ಎಂಬುದು ಕುಮಾರಸ್ವಾಮಿ ಯೋಚನೆ. ಹಳೆ ಮೈಸೂರು ಭಾಗದಲ್ಲಿ ಒಕ್ಕಲಿಗ, ದಲಿತ ಮತ ಬ್ಯಾಂಕ್ ಡೆಡ್ಲಿ ಕಾಂಬಿನೇಷನ್ ಎಂಬುದು ನಿಜ. ಆದರೆ ಈ ಪ್ರಸ್ತಾಪಕ್ಕೆ ಡಾ.ಪರಮೇಶ್ವರ್ ಇನ್ನೂ ಗ್ರೀನ್ ಸಿಗ್ನಲ್ ನೀಡಿಲ್ಲ. ಕಾಂಗ್ರೆಸ್ ಮೂಲಗಳ ಪ್ರಕಾರ, ಜೆಡಿಎಸ್‌ನ ಸುಧಾಕರಲಾಲ್ ಅವರನ್ನೇ ಕೈ ಪಾಳೆಯಕ್ಕೆ ಸೆಳೆಯುವ ಯತ್ನಗಳು ನಡೆಯುತ್ತಿವೆ. ಆದರೆ ಅವರೂ ಈ ಕುರಿತು ಪ್ರತಿಕ್ರಿಯಿಸಿಲ್ಲವಂತೆ. ಉಳಿದಂತೆ ಜೆಡಿಎಸ್ ನಾಯಕರು ಕಾಂಗ್ರೆಸ್‌ನ ಸತೀಶ್ ಜಾರಕಿಹೊಳಿ ಅವರಿಗೂ ಗಾಳ ಹಾಕಿದ್ದಾರೆ. ಇತ್ತ ಬೆಂಗಳೂರಿನ ಶಿವಾಜಿ ನಗರ ಕ್ಷೇತ್ರದಿಂದ ಪಕ್ಷದ ಅಭ್ಯರ್ಥಿಯಾಗುವಂತೆ ಮಾಜಿ ಸಚಿವ ರೋಷನ್ ಬೇಗ್ ಅವರ ಪುತ್ರನಿಗೂ ಗಾಳ ಹಾಕಿದ್ದಾರೆ.
ನಿಮಗೆ ಕಾಂಗ್ರೆಸ್ ಪಕ್ಷದ ನಾಯಕರು ಅಡ್ಡಗಾಲು ಹಾಕಿದರು, ಬಿಜೆಪಿ ನಾಯಕರು ನಂಬಿಸಿ ಕೈ ಕೊಟ್ಟರು. ಈ ಕಹಿಯನ್ನು ತೊಡೆದುಕೊಳ್ಳಬೇಕೆಂದರೆ ನಿಮ್ಮ ಮಗನನ್ನು ಜೆಡಿಎಸ್ ಕ್ಯಾಂಡಿಡೇಟ್ ಮಾಡಿ. ಕಾಂಗ್ರೆಸ್ ನ ರಿಜ್ವಾನ್ ಆರ್ಷದ್ ಎದುರು ಗೆಲ್ಲಲು ಸಹಕರಿಸಿ ಎಂಬುದು ಕುಮಾರಸ್ವಾಮಿ ಪ್ರಪೋಸಲ್ಲು. ಈ ನಡುವೆ ಮೈಸೂರಿನ ನರಸಿಂಹರಾಜ ಕ್ಷೇತ್ರದ ಶಾಸಕ ತನ್ವೀರ್ ಸೇಠ್ ಜತೆ ಮಾತನಾಡಿದ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ: ‘ನೀವು ನಮ್ಮ ಪಕ್ಷಕ್ಕೆ ಬರುತ್ತೀರೋ? ಅಥವಾ ನಾನೇ ನಿಮ್ಮ ವಿರುದ್ಧ ಸ್ಪರ್ಧಿಸಲೋ’ ಅಂತ ಕೇಳಿದ್ದಾರಂತೆ.
‘ಮುಂದಿನ ಚುನಾವಣೆಯಲ್ಲಿ ನಿಮ್ಮನ್ನು ಮುಗಿಸಲು ಮೈಸೂರಿನ ಟಾಪ್ ಲೀಡರು ಪ್ರಯತ್ನಿಸುತ್ತಿದ್ದಾರೆ. ಹೀಗಾಗಿ ನೀವು ನಮ್ಮ ಕಡೆ ಬನ್ನಿ. ಗ್ಯಾರಂಟಿ ಗೆಲ್ಲುತ್ತೀರಿ. ಒಂದು ವೇಳೆ ಬರದಿದ್ದರೆ ನಾನೇ ನಿಮ್ಮೆದುರು ಸ್ಪರ್ಧಿಸುತ್ತೇನೆ’ ಅಂತ ಇಬ್ರಾಹಿಂ ಹೇಳಿದ್ದರಿಂದ ತನ್ವೀರ್ ಸೇಠ್ ಗೊಂದಲಕ್ಕೆ ಬಿದ್ದಿದ್ದಾರಂತೆ.
ಸಿದ್ರಾಮಯ್ಯ ಸ್ಪರ್ಧಿಸಲಿ ಬಿಡ್ರಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗುತ್ತಿದ್ದಂತೆಯೇ ಜೆಡಿಎಸ್ ಅಧ್ಯಕ್ಷ ಸಿ.ಎಂ. ಇಬ್ರಾಹಿಂ ಎಚ್ಚರಿಕೆಯ ಮಾತನಾಡಿದ್ದರು.
ಅದು, ‘ಸಿದ್ರಾಮಯ್ಯ, ಯಾವ ಕಾರಣಕ್ಕೂ ನೀವು ಅಲ್ಲಿಂದ ಸ್ಪರ್ಧಿಸಬೇಡಿ. ಮೂರನೇ ಪ್ಲೇಸಿಗೆ ಹೋಗಿ ಬಿಡ್ತೀರಿ. ಕೋಲಾರದ ಪರಿಸ್ಥಿತಿ ನೀವಂದು ಕೊಂಡಂತೆ ಇಲ್ಲ’ ಎಂಬುದು ಇಬ್ರಾಹಿಂ ಮಾತು. ಒಂದಲ್ಲ, ಎರಡಲ್ಲ, ಹಲವು ಸಲ ಅವರು ಈ ಮಾತನ್ನು ಸಾರ್ವಜನಿಕ ಸಭೆಗಳಲ್ಲಿ ಪುನರುಚ್ಚರಿಸಿ ದ್ದರು. ಆದರೆ ಇಂತಹ ಮಾತುಗಳನ್ನಾಡಿದ ಸಿ.ಎಂ.ಇಬ್ರಾಹಿಂ ಅವರ ಬಳಿ ಮೊನ್ನೆ ಕೋಲಾರ ಜಿಯ ಹಿರಿಯ ಕಾಂಗ್ರೆಸ್ ನಾಯಕರೊಬ್ಬರು ತಕರಾರು ತೆಗೆದರಂತೆ.
ಹಾಗಂತಲೇ, ‘ಇದೇನು ಸಾರ್? ಸಿದ್ರಾಮಯ್ಯ ಬಂದು ನಿಲ್ಲಲಿ ಬಿಡಿ. ಬಂದು ಅನುಭವಿಸಲಿ. ನೀವೇಕೆ ಬೇಡ ಎಂದು ಹೇಳುತ್ತೀರಿ ಅನ್ನುತ್ತೀರಲ್ಲ? ಅಂತ ಇಬ್ರಾಹಿಂ ಕೇಳಿದರೆ, ಇವರು ನಿಲ್ತೀನಿ ಅಂದಿದ್ದಕ್ಕೆ ಪಕ್ಷದ ಮೂರೂ ಕಡೆಯಿಂದ ನಮಗೆ ಉಂಡೆ, ಚಕ್ಕುಲಿ ಬರಲು ಶುರುವಾಗಿದೆ. ನೀವೇಕೆ ಅದನ್ನು ತಪ್ಪಿಸುವ ಮಾತಾಡ್ತೀರಿ?’ ಎಂದರಂತೆ. ಅವರ ಮಾತು ಕೇಳಿ ಸಿ.ಎಂ.ಇಬ್ರಾಹಿಂ ಸ್ಟನ್ ಆದರಂತೆ. ಲಿಂಗಾಯತರಿಗೆ ಅರವತ್ತು ಸೀಟು ಬೇಕಂತೆ ಬಿಜೆಪಿ ಪಾಳೆಯದಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರ ಖದರು ನೆಲಕ್ಕಿಳಿಯುತ್ತಿದ್ದಂತೆಯೇ ಕೈ ಪಾಳೆಯದಲ್ಲಿ ಲಿಂಗಾಯತರ ಕಲರವ ಶುರುವಾಗಿದೆ.
ಮೊನ್ನೆ ಬೆಂಗಳೂರಿನಲ್ಲಿ ಸಭೆ ಸೇರಿದ ಕಾಂಗ್ರೆಸ್ಸಿನ ಲಿಂಗಾಯತ ನಾಯಕರು, ಈ ಸಲ ನಮ್ಮವರಿಗೆ ಅರವತ್ತು ಸೀಟು ಕೊಡಬೇಕು ಅಂತ ಹೈಕಮಾಂಡ್ ವರಿಷ್ಠರನ್ನು ಆಗ್ರಹಿಸಿದ್ದಾರೆ. ಯಡಿಯೂರಪ್ಪ ಬಿಜೆಪಿಯ ಸಿಎಂ ಕ್ಯಾಂಡಿಡೇಟ್ ಆಗಿರುವ ತನಕ ಲಿಂಗಾಯತ ಮತ ಬ್ಯಾಂಕ್ ಅಲುಗಾಡಲಿಲ್ಲ. ಅದರೆ ಈಗ ಯಡಿಯೂರಪ್ಪ ಬಿಜೆಪಿಯ ಸಿಎಂ ಕ್ಯಾಂಡಿಡೇಟ್ ಅಲ್ಲ,ಹೀಗಾಗಿ ಲಿಂಗಾಯತ ಸಮುದಾಯ ಸ್ಥಳೀಯವಾಗಿ ನಿರ್ಧಾರ ತೆಗೆದುಕೊಳ್ಳುತ್ತದೆ.
ಪರಿಸ್ಥಿತಿ ಹೀಗಿರುವಾಗ ಅದನ್ನು ನಾವೇ ಎನ್ ಕ್ಯಾಶ್ ಮಾಡಿಕೊಳ್ಳಬೇಕು. ಅರ್ಥಾತ್, ಲಿಂಗಾಯತ ಪ್ರಾಬಲ್ಯದ ಕ್ಷೇತ್ರಗಳಲ್ಲಿ ಲಿಂಗಾಯತರಿಗೇ ಟಿಕೆಟ್ ಕೊಡಬೇಕು ಎಂಬುದು ಈ ನಾಯಕರ ವಾದ. ಅಂದ ಹಾಗೆ ಈ ಸಭೆಯ ಶಕ್ತಿಯಾಗಿದ್ದವರು ಹಿರಿಯ ನಾಯಕರಾದ ಶಾಮನೂರು ಶಿವಶಂಕರಪ್ಪ, ಎಂ.ಬಿ.ಪಾಟೀಲ್ ಮತ್ತಿತರರು. ಈ ಪೈಕಿ ಎಂ.ಬಿ.ಪಾಟೀಲ್ ಅವರನ್ನು ಡಿಸಿಎಂ ಹುದ್ದೆಗೆ ತರುವ ಕನಸು ಸಿದ್ದರಾಮಯ್ಯ ಅವರಿಗಿದೆ.
ವಸ್ತುಸ್ಥಿತಿ ಎಂದರೆ, ಎಂ.ಬಿ.ಪಾಟೀಲರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ತಂದು ಕೂರಿಸಲು ಈ ಹಿಂದೆ ಸಿದ್ದರಾಮಯ್ಯ ಪ್ರಯತ್ನಿಸಿದ್ದರು. ‘ಯಡಿಯೂರಪ್ಪ ಅವರನ್ನು ಬಿಜೆಪಿ ನಿರ್ಲಕ್ಷಿಸುತ್ತದೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಅದೇ ಸಮುದಾಯದ ಎಂ.ಬಿ.ಪಾಟೀಲರನ್ನು ತಂದು ಕೂರಿಸಿದರೆ ೨೦೨೩ ರಲ್ಲಿ ಕಾಂಗ್ರೆಸ್ ಪಕ್ಷ ನೂರೈವತ್ತು ಸೀಟು ಗೆಲ್ಲುವುದು ಗ್ಯಾರಂಟಿ’ ಅಂತ ಸಿದ್ರಾಮಯ್ಯ ಮೇಡಂ ಸೋನಿಯಾ ಬಳಿ ಹೇಳಿದ್ದರಂತೆ.
ಅವತ್ತು ಸಿದ್ದರಾಮಯ್ಯನವರ ಈ ಪ್ರಯತ್ನ ಯಶಸ್ವಿ ಯಾಗಲಿಲ್ಲ. ಆದರೆ ಮುಂದಿನ ಚುನಾವಣೆಯ ನಂತರ ಎಂ. ಬಿ.ಪಾಟೀಲರನ್ನು ಡಿಸಿಎಂ ಹುzಗೆ ತಂದು ಕೂರಿಸುವ ಅವರ ಕನಸು ಈಗಲೂ ಅಸ್ತಿತ್ವದಲ್ಲಿದೆ. ಸಿದ್ದರಾಮಯ್ಯ ಅವರ ಈ ಕನಸಿಗೂ, ಮೊನ್ನೆ ನಡೆದ ಕಾಂಗ್ರೆಸ್ಸಿನ ಲಿಂಗಾಯತ ನಾಯಕರ ಸಭೆಗೂ ಸಂಬಂಧವಿದೆ ಎಂಬುದು ಕೈ ಪಾಳೆಯದ ಗುಸು-ಗುಸು.