Sunday, 15th December 2024

ಪುಸ್ತಕದಂಥ ಆತ್ಮಸಂಗಾತಿ ಮತ್ತೊಂದಿಲ್ಲ, ಅದು ಪ್ರೇಯಸಿಯ ಬಿಸಿಯುಸಿರು !

ಇದೇ ಅಂತರಂಗ ಸುದ್ದಿ

ವಿಶ್ವೇಶ್ವರ ಭಟ್

vbhat@me.com

ನಾನು ಈ ವರ್ಷದಿಂದ ಪ್ರತಿ ತಿಂಗಳೂ ನಾನು ಓದಿದ, ನನಗೆ ಇಷ್ಟವಾದ ಪುಸ್ತಕಗಳ ಪಟ್ಟಿಯನ್ನು ಕೊಡಬೇಕು ಎಂದು ನಿರ್ಧರಿಸಿದ್ದೇನೆ. ಹೊಸ ವರ್ಷಕ್ಕೆ ನನ್ನ ಓದುಗರಿಗೆ ಒಂದು ಹಿತವಾಗಬಹುದಾದ ಭರವಸೆಯಿದು.

ಪ್ರತಿ ವರ್ಷದ ಕೊನೆಯಲ್ಲಿ, ಕೆಲವು ಪತ್ರಿಕೆಗಳು ಆ ವರ್ಷ ಹೊರಬಂದ ಪುಸ್ತಕಗಳ ಬಗ್ಗೆ ಗಣ್ಯರಿಂದ ಲೇಖನ ಬರೆಯಿಸುತ್ತವೆ. ತಾವು ಓದಿದ ಪ್ರಮುಖ ಮತ್ತು ಮಹತ್ವದ ಪುಸ್ತಕಗಳ ಬಗ್ಗೆ ಆ ಗಣ್ಯರು ತಮ್ಮ ಅಭಿಪ್ರಾಯ ಬರೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಇದು ಒಂದು ಸಂಪ್ರದಾಯವೇ ಆಗಿವೆ. ‘ನ್ಯೂಯಾರ್ಕ್ ಟೈಮ್ಸ’ ನಂಥ ಪತ್ರಿಕೆ ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಮುಂತಾದವರಿಗೆ ಹೇರಳ ಹಣ ಕೊಟ್ಟು, ಅವರು ಮೆಚ್ಚಿದ ಪುಸ್ತಕಗಳ ಪಟ್ಟಿಯನ್ನು ಕೊಡುತ್ತವೆ.

‘ನ್ಯೂಯಾರ್ಕ್ ಟೈಮ್ಸ’ ಪತ್ರಿಕೆ ಜತೆಗೆ ಜಗತ್ತಿನ ಪ್ರಮುಖ ಪ್ರಕಾಶಕರು ಇದಕ್ಕೆ ಕೈಜೋಡಿಸಿರುತ್ತಾರೆ. ಪುಸ್ತಕ ವೊಂದರ ಮೇಲೆ New York Times Best Seller ಎಂದು ಪ್ರಕಟಿಸಲು, ಆ ಪತ್ರಿಕೆ ಇಂತಿಷ್ಟು ಹಣ ಎಂದು ನಿಗದಿಪಡಿಸುವುದು ಬೇರೆ ಮಾತು. ಈ ವರ್ಷ ಓದಿನ ದೃಷ್ಟಿಯಿಂದ, ನನಗೆ ಮಹತ್ವಪೂರ್ಣ ವರ್ಷ. ಮಹತ್ವದ್ದೆನಿಸಿದ ಯಾವ ಕನ್ನಡ ಮತ್ತು ಇಂಗ್ಲಿಷ್ ಪುಸ್ತಕವನ್ನೂ ನಾನು ಓದದೇ ಬಿಟ್ಟಿಲ್ಲ. ಕೆಲವು ಪುಸ್ತಕಗಳು ನನ್ನ ಬರುವಿಕೆಗೆ ಕಾಯುತ್ತಿವೆ. ಅವನ್ನು ಓದಲು ಸಾಧ್ಯವಾಗಿಲ್ಲ. ಆದರೆ ಅವು ನನ್ನ ಟೇಬಲ್ ಏರಿ ಕುಳಿತಿವೆ. ಕಾಕರ್ ಸ್ಪೇನಿಯಲ್ ನಾಯಿಯಂತೆ ಕೆಲವು ಪುಸ್ತಕಗಳು ನಮಗೆ ತಾಕುತ್ತಿರಬೇಕು, ಅವು ಮೈ ಹೊಸೆಯು ತ್ತಿರಬೇಕು. ಅವನ್ನು ಸಂಪೂರ್ಣ ಓದಿ ಪಕ್ಕಕ್ಕಿಡಬಾರದು.

ಲಿನ್ ಯುತಂಗ್ ಬರೆದ The Art Of Living  ಕಳೆದ ಆರು ತಿಂಗಳಿನಿಂದ ನನ್ನ ಟೇಬಲ್ ಮೇಲಿದೆ. ಆ ಪುಸ್ತಕವನ್ನು ಬೇಗನೆ ಓದಿ ಮುಗಿಸಲು ನನಗೆ ಯಾಕೋ ಮನಸ್ಸಾಗುತ್ತಿಲ್ಲ. ಆ ಪುಸ್ತಕವನ್ನು ಆಗಾಗ ಮೈದಡವುತ್ತಿರಬೇಕು ಎನಿಸುತ್ತದೆ. ಹಾಗಂತ ಆತ ಬರೆದ The Wisdom Of China ವನ್ನು  ಯಾವತ್ತೋ ಓದಿ ಮುಗಿಸಿದ್ದೆ. ಇದೊಂದು ವಿಚಿತ್ರ ಮನಃಸ್ಥಿತಿ. ಇದು ನನ್ನನ್ನು ಮಾತ್ರ ಕಾಡುವ ಸಮಸ್ಯೆಯಾ ಅಥವಾ ಸೊಗಸಾ ಗೊತ್ತಿಲ್ಲ. ಕೆಲವು ಪುಸ್ತಕ ಗಳನ್ನು ಪದೇ ಪದೆ ಓದಬೇಕೆನಿಸುತ್ತದೆ.

ಮಾಸ್ತಿ ವೆಂಕಟೇಶ ಅಯ್ಯಂಗಾರ್ ಬರೆದ ‘ಚಿಕವೀರ ರಾಜೇಂದ್ರ’ವನ್ನು ನಾನು ಈ ವರ್ಷ ಮೂರನೇ ಸಲ ಓದಿ ಮುಗಿಸಿದೆ. ಹಾಗೆ ಡಾ.ಎಸ್.ಎಲ್.ಭೈರಪ್ಪನವರ
‘ಭಿತ್ತಿ’ಯನ್ನು ಎರಡನೇ ಸಲ ಮುಗಿಸಿದೆ. ಕೆಲವು ಪುಸ್ತಕಗಳ ಮರು ಓದು ಖುಷಿ ಕೊಡುತ್ತವೆ. ಪುಸ್ತಕದಲ್ಲಿರುವ ವಿಷಯ ಬದಲಾಗುವುದಿಲ್ಲ. ನಮ್ಮ ಗ್ರಹಿಕೆ ಕಾಲ
ಕಾಲಕ್ಕೆ ಬದಲಾಗುವುದರಿಂದ, ಹಿಂದೊಮ್ಮೆ ಓದಿದ ಪುಸ್ತಕ, ಈಗ ನಮಗೆ ವಿಭಿನ್ನ ಅನುಭವವಾಗಿ ಮುಖಾಮುಖಿಯಾಗುತ್ತದೆ. ಇದು ಒಂಥರಾ ನಾವು ಹುಟ್ಟಿದ
ಊರಿಗೆ ಬಹಳ ವರ್ಷಗಳ ನಂತರ ಭೇಟಿ ಕೊಟ್ಟ ಹಾಗೆ.

ಆಗಾಗ ಕೆಲವು ಕೃತಿಗಳ ಮರು ಓದನ್ನು ನಮ್ಮ ಓದಿನ ಸೊಗಸಿನ ಒಟ್ಟಂದವನ್ನು ಹೆಚ್ಚಿಸಿಕೊಳ್ಳುವ ದೃಷ್ಟಿಯಿಂದ ಮಾಡುತ್ತಿರಬೇಕು. ಇದಕ್ಕೆ Revisiting ಅಂತಾರೆ. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ, ವೈಎನ್ಕೆ ಬರೆದ ‘ಯೂಜಿ ಅಲ್ಲ,  ಗುರೂಜಿ’ ಓದಿ ಕೆಲ ದಿನ ಡಿಸ್ಟರ್ಬ್ ಆಗಿದ್ದೆ. ‘ನೀವು ಡಿಸ್ಟರ್ಬ್ ಆಗಿದ್ದೀರಿ ಅಂದ್ರೆ, ನಿಮಗೆ ಯೂಜಿ ಅರ್ಥವಾಗಿದ್ದಾನೆ ಅಥವಾ ಸ್ವಲ್ಪವೂ ಅರ್ಥವಾಗಿಲ್ಲ ಎಂದರ್ಥ’ ಎಂದು ಹೇಳಿ ವೈಎನ್ಕೆ ಮತ್ತಷ್ಟು ಡಿಸ್ಟರ್ಬ್ ಮಾಡಿದ್ದರು. ಆದರೆ ಇತ್ತೀಚೆಗೆ ಅದನ್ನು ಮತ್ತೆ ಓದಿದಾಗ, ಯಾಕೋ ತುಸು ಬೋರಾಯಿತು. ಮುಂದುವರಿದ ವಿಜ್ಞಾನ ಮತ್ತು ತಂತ್ರಜ್ಞಾನದ ಬೆಳಕಿನಲ್ಲಿ, ಮನಸ್ಸಿನ ತರಂಗಗಳ ಪಡಿಯಚ್ಚು ಸೆರೆ ಹಿಡಿಯುವ ಆವಿಷ್ಕಾರಗಳ ಚಬುಕಿನಲ್ಲಿ ಯೂಜಿ ಹೇಳಿದ್ದು ತುಸು ಪೇಲವ ಎಂದೆನಿಸಿತು.

ಇದು ಯೂಜಿ ಕೃತಿಯ ತಪ್ಪಲ್ಲ. ನಮ್ಮ ಓದಿಗೆ ಕಾಲ ಒದಗಿಸಿದ ಮೆದು ಅಥವಾ ಮೆತ್ತನೆಯ ಪ್ರಭಾವವಿದು. ಹಾಗೆ ಯಾವ ಭಯ, ಸಂಕೋಚ, ಭಿಡೆ ಇಲ್ಲದೇ ಆತ್ಮಚರಿತ್ರೆ ಬರೆದವರಲ್ಲಿ ಅಗ್ರಗಣ್ಯನಾದವನು ಸೇಂಟ್ ಅಗಸ್ಟಿನ್. ಆತನ The Confessions of Saint Augustine ಓದಿದರೆ, ಸತ್ಯವನ್ನೂ ಇಷ್ಟೆಲ್ಲ ಕ್ರೂರವಾಗಿ, ಅಮಾನವೀಯವಾಗಿ ಹೇಳಬಾರದಿತ್ತು ಎಂದೆನಿಸುತ್ತದೆ. ತನ್ನ ಜೀವನದಲ್ಲಿ ಮಾಡಿದ ತಪ್ಪುಗಳನ್ನು ಅತಿಯೆನಿಸುವಷ್ಟು ಒಪ್ಪಿಕೊಳ್ಳುತ್ತಾನೆ, ತಾನು
ಎಂದೂ ಮಾಡಿರದ ತಪ್ಪುಗಳನ್ನೂ ಒಪ್ಪಿಕೊಳ್ಳುತ್ತಿರಬಹುದಾ ಎಂಬ ಸಂದೇಹ ಬರುವಷ್ಟು.‘ಮನುಷ್ಯನಿಗೆ ಸಾಧ್ಯವಾಗುವ ಎಲ್ಲ ಪಾಪಗಳನ್ನೂ ನಾನು ನಾಚಿಕೆ, ಮಾನ-ಮರ್ಯಾದೆ ಬಿಟ್ಟು ಮಾಡಿದ್ದೇನೆ.

ನಾನು ಮಾಡದಿರುವ ಯಾವ ಪಾಪವೂ ಉಳಿದಿಲ್ಲ. ನನಗೆ ಅವನ್ನೆಲ್ಲ ಹೇಳಿಕೊಳ್ಳಲು ಸ್ವಲ್ಪವೂ ಮುಜುಗರವಾಗುವುದಿಲ್ಲ’ ಎಂದು ಸೇಂಟ್ ಅಗಸ್ಟಿನ್ ಹೇಳಿ ಕೊಳ್ಳುತ್ತಾನೆ. ಅಂದರೆ ತಾನು ಮಾಡಿದ ಮಹಾಪರಾಧಗಳನ್ನು ಹೇಳಿಕೊಳ್ಳುವುದರಲ್ಲಿಯೇ ಆತ ಸಂತಸವನ್ನು ಕಾಣುತ್ತಾ ಹೋಗುತ್ತಾನೆ. ಸುಮಾರು ಹದಿ ಮೂರು ವರ್ಷಗಳ ಹಿಂದೆ, ಈ ಕೃತಿಯನ್ನು ಓದಿz. ಆದರೆ ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ಓದಿದಾಗ, ನನ್ನ ಮೇಲಾದ ಪರಿಣಾಮವೇ ಬೇರೆ. ಮನುಷ್ಯ ಮತ್ತಷ್ಟು ಅಂತರಮುಖಿಯಾಗಿ, ಬದುಕು, ಸಂಬಂಧ, ಒಡನಾಟ, ಮೈತ್ರಿ, ಸಾವುಗಳ ಅರ್ಥ-ವ್ಯಾಖ್ಯಾನಗಳು ಇದ್ದಕ್ಕಿದ್ದಂತೆ ಪದಕೋಶದಲ್ಲಿ ಚೆಪಿಲ್ಲಿಯಾ ದಂತೆನಿಸಿ, ಮುಗ್ಗರಿಸಿದಂತಾಗಿತ್ತು.

ಸಾವು ಕೊನೆಕೊನೆಗೆ ಬರೀ ಸಂಖ್ಯೆಯಂತೆ ಚರಿಸಲಾರಂಭಿಸಿದಾಗ, ಅಗಸ್ಟಿನ್ ಹೇಳಿದ ಪಾಪಗಳ ಪಟ್ಟಿಯೂ ಉತ್ಪ್ರೇಕ್ಷೆಯ ಪರಾಕಾಷ್ಠೆಯಂತೆ ಭಾಸವಾಗುತ್ತಿತ್ತು.
ಸಾಮಾನ್ಯವಾಗಿ ಎಲ್ಲರೂ ತಮ್ಮ ಒಳ್ಳೆಯತನಗಳನ್ನು, ಪರಾಕ್ರಮಗಳನ್ನು ಅತಿಶಯವಾಗಿ ಬಣ್ಣಿಸಿಕೊಳ್ಳುತ್ತಾರೆ. ಆದರೆ ಅಗಸ್ಟಿನ್ ತನ್ನ ಪಾಪಕಾರ್ಯಗಳನ್ನು ಹಾಗೆ ಬಣ್ಣಿಸಿಕೊಂಡಿದ್ದ. ಆದರೆ ಕೊನೆಯಲ್ಲಿ ಆತ ಹೇಳುವ, ‘ಪಾಪಗಳನ್ನು ಮಾಡದೇ ಜೀವಾತ್ಮ – ಪರಮಾತ್ಮ ಅರ್ಥವಾಗುವುದಿಲ್ಲ. ಪಾಪ ಮಾಡದ ನೀನು ಹೇಗೆ ಸಂತನಾಗುತ್ತೀಯ? ಬದುಕಿನ ಕ್ರೌರ್ಯ ಅರ್ಥವಾಗಬೇಕಾದರೆ, ಪಾಪ ಮಾಡಬೇಕು. ಆಗಲೇ ನೀನು ಬದುಕನ್ನು ಜೀವನದಾಚೆ ವಿಸ್ತರಿಸುವುದನ್ನು ನೋಡಬಹುದು. ಜೀವಿಯನ್ನು ಹಿಂಸಿಸಿ ದಾಗಲೇ ಜೀವದ ಮಹತ್ವ ಗೊತ್ತಾಗುತ್ತದೆ’ ಎಂಬ ಮಾತುಗಳು, ಮಾತಿಗೆ ಅಡ್ಡಿಯಾಗುವ ತುಟಿಯ ಬಿರುಕಿನಂತೆ ಅಡಸಲು ಎನಿಸುತ್ತದೆ.

ಇದೇ ಕಾರಣಕ್ಕೆ The Confessions of Saint Augustine  ನ್ನು ಮಹಾಸುಳ್ಳುಗಳಿಂದ ಕೂಡಿದ ಅತ್ಯುತ್ಕೃಷ್ಟ ಕೃತಿ ಎಂದು ಹೇಳುವವರಿದ್ದಾರೆ. ಇದು ಹೊಗಳಿಕೆಯಾ, ತೆಗಳಿಕೆಯಾ ಎಂಬ ಫರಕ್ಕು ಗೊತ್ತಾಗದಷ್ಟು ನಮ್ಮನ್ನು ಒಂದರಳಗೊಂದು ಕಟ್ಟಿ ಹಾಕುತ್ತದೆ. ಗಾಂಧೀಜಿಯವರ My Experiments
With Truth ಈ ಮಾತನ್ನು ನೆನಪಿಸುವ ಕೃತಿ. ಗಾಂಧೀಜಿ ಕೂಡ ಈ ಕೃತಿಯಲ್ಲಿ ತಮ್ಮ ಪ್ರಮಾದಗಳನ್ನೇ ಆತ್ಮರತಿಯನ್ನಾಗಿ ಮಾಡಿಕೊಂಡು, ಅದಕ್ಕೆ ಪ್ರಯೋಗ ಎಂದು ಹೇಳಿ ಆ ಪ್ರಮಾದಗಳನ್ನೇ ಮುಚ್ಚಿಕೊಂಡರು ಎಂಬ ವಾದವೂ ಇದೆ.

ಕಾರಣ ಯಾರೂ ಸತ್ಯದ ಜತೆಗೆ ಪ್ರಯೋಗ ಮಾಡುವುದಿಲ್ಲ. ಹಾಗೆ ಹೇಳುವುದು ಹುಡುಗಾಟಿಕೆ. ಸತ್ಯ ಯಾವತ್ತೂ ಸತ್ಯವೇ. ಅದನ್ನು ಶೋಧಿಸಬಹುದೇ ಹೊರತು, ಪ್ರಯೋಗಕ್ಕೆ ಒಳಪಡಿಸುವಂಥದ್ದಲ್ಲ. ಗಾಂಧೀಜಿ ಅವರ ಈ ಕೃತಿಯ ಬಗ್ಗೆ ಸಾಹಿತ್ಯ ವಿಮರ್ಶಕರಲ್ಲದ ಓಶೋ ಅವರ ವಿಮರ್ಶೆ ಓದಿದ ಬಳಿಕ, ನನ್ನ
ಗ್ರಹಿಕೆಯೂ ಬದಲಾಯಿತು. ಓಶೋ ಒಂದೆಡೆ My Experiments With Truth ಬಗ್ಗೆ ಹೇಳಿದ್ದಾರೆ – ‘ಗಾಂಧೀಜಿ ಒಬ್ಬ ಪ್ರಾಮಾಣಿಕ ಮತ್ತು ಒಳ್ಳೆಯ
ಮನುಷ್ಯ. ಅವರಿಗೆ ಧ್ಯಾನ, ಅಧ್ಯಾತ್ಮ ಗೊತ್ತಿರಲಿಲ್ಲ.

ಬದುಕಿನುದ್ದಕ್ಕೂ ಅವರು ಪ್ರಯೋಗ ಮಾಡುತ್ತ ಹೋದರು. ಆದರೆ ಏನೂ ಸಾಧಿಸಲಿಲ್ಲ. ಅವರು ಜ್ಞಾನಿಯಾಗಿಯೂ ಸಾಯಲಿಲ್ಲ. ಮೊದಲು ಹೇಗಿದ್ದರೋ ಹಾಗೇ ಇದ್ದರು, ಅಜ್ಞಾನಿಯಾಗಿ. ಅವರ ಪ್ರಾಮಾಣಿತೆ, ಶ್ರದ್ಧೆ, ನಂಬಿಕೆಯನ್ನು ಪ್ರಶ್ನಿಸಲಾಗುವುದಿಲ್ಲ. ಆದರೆ ತಾನು ಪ್ರಾಮಾಣಿಕ ಎಂಬ ಅಂತರಂಗದೊಳಗಿದ್ದ ಪ್ರದರ್ಶನ ಮಾಡಿಕೊಳ್ಳುವ ಗುಣವೇ ಅವರಿಗೆ ಅಡ್ಡಗೋಡೆಯಾಗಿತ್ತು. ಅವರು ಇನ್ನೂ ಏನೆಲ್ಲ ಸಾಧಿಸಬಹುದಿತ್ತು. ಆದರೆ ಅವರು ತಮ್ಮ ಸುತ್ತ ಅನೇಕ ಸಣ್ಣ-ದೊಡ್ಡ ಬೇಲಿ ಗಳನ್ನು ಕಟ್ಟಿಕೊಂಡಿದ್ದರು.

ಕಾಲೇಜು ದಿನಗಳಲ್ಲಿ ಓದಿದ My Experiments With Truth  ಕೃತಿಯನ್ನು ಈಗ ಓದಲು ಆಗುವುದಿಲ್ಲ. ಆದರ್ಶವನ್ನು ಗಾಜಿನ ಕಪಾಟಿನಲ್ಲಿಟ್ಟು ನೋಡಿ ದರೇ ಹೆಚ್ಚು ಚೆಂದ.’ ಕೆಲವು ದಿನಗಳ ಹಿಂದೆ ನಾನು ರಸ್ಕಿನ್ ಬಾಂಡ್ ಬರೆದ Its a Wonderful Life  ಪುಸ್ತಕವನ್ನು ಓದುತ್ತಿದ್ದೆ. ಪ್ರತಿದಿನ ನಾವು
ಅನುಭವಿಸುವ ಸಣ್ಣ ಸಣ್ಣ ಅನುಭವವನ್ನು ರಸ್ಕಿನ್ ಬಾಂಡ್, ಒಂದು ಮಹಾ ಅನುಭೂತಿಯಾಗಿಸಿzರೆ. ಒಬ್ಬ ಬರಹಗಾರನ ಸೂಕ್ಷ್ಮ ಸಂವೇದನೆ, ಕಾಳಜಿ, ಕರುಣೆ, ಕಕ್ಕುಲಾತಿ, ಮಮತೆಯನ್ನು ಹೇಳುವ ಕೃತಿಯಿದು. ‘ಲೇಖಕನಾದವನು ಬರೀ ಬುದ್ಧಿವಂತ ನಾದರೆ ಸಾಲದು. ಆತ ಮುಗ್ಧನಾಗಿರಬೇಕು. ಇದು ಸಂವೇದನೆ
ಯಷ್ಟೇ ಮುಖ್ಯ. ತನ್ನ ಕೋಮಲ ಭಾವವನ್ನು ಆತ ಪೊರೆಯ ಬೇಕು. ಲೇಖಕನಾದವನು ಎಂದೂ ಕುತೂಹಲ ಭಾವವನ್ನು ಕಳೆದುಕೊಳ್ಳಬಾರದು.

ಹೂವನ್ನು ನೋಡಿ ಅದರ ಪಕಳೆಗಳನ್ನು ಮೈದಡವಬೇಕು. ಅಲ್ಲಿನ ಮಕರಂದ ಎಲ್ಲಿ ಶೇಖರವಾಗಿದೆ ಎಂಬುದನ್ನು ಶೋಽಸಬೇಕು. ಆಗ ಲೇಖಕ ಹಕ್ಕಿ ಯಾಗು ತ್ತಾನೆ, ಜೇನುಹುಳು ಆಗುತ್ತಾನೆ, ದುಂಬಿಯಾಗುತ್ತಾನೆ, ಕವಿಯಾಗುತ್ತಾನೆ, ಅಧ್ಯಾತ್ಮಗ್ರಾಹಿ ಆಗುತ್ತಾನೆ’ ಎನ್ನುವ ರಸ್ಕಿನ್ ಬಾಂಡ್, ‘ಮೌನದ ಶಬ್ದ’ ಎಂಬ ಬಗ್ಗೆ ಸಣ್ಣ ಟಿಪ್ಪಣಿ ಬರೆಯುತ್ತಾರೆ – ರಸ್ತೆಯಲ್ಲಿ ವಾಹನುಗಳ ಹಾರ್ನ್‌ಗಳ ಸದ್ದು. ಕೆಲ ಹೊತ್ತಿನ ನಂತರ ಅದಕ್ಕೆ ಹೊಂದಿಕೊಳ್ಳುತ್ತೀರಿ. ಬೈಕುಗಳ ಕರ್ಕಶ ಸಪ್ಪಳಕ್ಕೆ ನಿಧಾನವಾಗಿ ಹೊಂದಿಕೊಳ್ಳುತ್ತೀರಿ. ಆಂಬುಲನ್ಸ್ ಸೈರನ್ ಭೀತಿಯನ್ನು ಮೂಡಿಸುತ್ತದೆ.

ಅದಕ್ಕೂ ಹೊಂದಿಕೊಳ್ಳುತ್ತೀರಿ. ಮನೆಯ ಕಿಟಕಿ ಬಳಿ ಕಾಗೆಯೊಂದು ‘ಕಾವ್ …ಕಾವ..’ ಎಂದು ಕೂಗುತ್ತದೆ. ಅಷ್ಟು ಹೊತ್ತು ಸುಮ್ಮನಿದ್ದ ನೀವು, ಕಾಗೆ ಕೂಗಿದ್ದಕ್ಕೆ, ‘ಅನಿಷ್ಟ, ಬೆಳಗ್ಗೆ ಬೆಳಗ್ಗೆಯೇ ಕೂಗುತ್ತಿದೆ, ತೊಲಗಾಚೆ’ ಎಂದು ಬೈಯುತ್ತೀರಿ. ನನಗೆ ದಿನವೂ ಅನೇಕ ಓದುಗರು, ‘ನೀವು ಯಾವ ಪುಸ್ತಕ ಓದುತ್ತಿದ್ದೀರಿ, ನಾನು ಯಾವ ಪುಸ್ತಕ ಓದಬೇಕು, ನಿಮಗೆ ಇಷ್ಟವಾದ ಪುಸ್ತಕಗಳ ಪಟ್ಟಿ ಕೊಡಿ… ’ ಎಂದು ಕೇಳುತ್ತಾರೆ.

ಇದು ಬಹಳ ಕಷ್ಟವಾದ ಕೆಲಸ. ‘ನಾನೊಂದು ಹುಡುಗಿಯನ್ನು ಪ್ರೀತಿಸಿದ್ದೇನೆ, ಅವಳ ಜತೆ ಮದುವೆ ಆಗಬೇಕೆಂದಿದ್ದೇನೆ. ನನ್ನ ಮದುವೆಗೆ ಸಹಕರಿಸಿ, ಸಹಾಯ ಮಾಡಿ’ ಅಂದರೆ ಅದನ್ನು ಪ್ರೀತಿಯಿಂದ ಮಾಡಬಹುದು. ಆದರೆ, ನಾನು ಮದುವೆ ಆಗಬೇಕೆಂದಿರುವೆ, ನನಗೊಂದು ಹುಡುಗಿಯನ್ನು ಹುಡುಕಿ ಕೊಡಿ ಅಂದರೆ ಅದು ಆಗದ ಕೆಲಸ. ಪುಸ್ತಕಗಳ ವಿಷಯದಲ್ಲೂ ಈ ಮಾತು ನಿಜ. ಬೇರೆಯವರಿಗೆ ಪುಸ್ತಕಗಳನ್ನು ಶಿಫಾರಸು ಮಾಡುವುದು ಕಷ್ಟ. ಆದರೂ ನಾನು ಈ ವರ್ಷದಿಂದ ಪ್ರತಿ ತಿಂಗಳೂ ನಾನು ಓದಿದ, ನನಗೆ ಇಷ್ಟವಾದ ಪುಸ್ತಕಗಳ ಪಟ್ಟಿಯನ್ನು ಕೊಡಬೇಕು ಎಂದು ನಿರ್ಧರಿಸಿದ್ದೇನೆ.

ಹೊಸ ವರ್ಷಕ್ಕೆ ನನ್ನ ಓದುಗರಿಗೆ ಒಂದು ಹಿತವಾಗಬಹುದಾದ ಭರವಸೆಯಿದು. ಪುಸ್ತಕಗಳಂಥ ಆತ್ಮ ಸಂಗಾತಿ ಮತ್ತೊಂದಿಲ್ಲ. ಪ್ರತಿ ಪುಸ್ತಕವೂ ಆಕಾಶದಲ್ಲಿ ಚದುರಿದ ನಕ್ಷತ್ರ. ಅನುದಿನವೂ ತಂಪೆರೆಯುವ ಪ್ರೇಯಸಿಯ ಬಿಸಿಯುಸಿರು. ಪ್ರತಿ ಪುಸ್ತಕವೂ ಮಾತಾಡುತ್ತದೆ. ಅದನ್ನು ಕೇಳಿಸಿಕೊಳ್ಳಬೇಕು.

ಮನಸ್ಸಿನ ನಿಯಂತ್ರಣ ಹೇಗೆ?

ಪಂಡಿತ್ ವಿಜಯಶಂಕರ ಮೆಹ್ತಾ ಅವರು ಮನಸ್ಸೆಂಬ ಹುಚ್ಚು ಕುದುರೆಯನ್ನು ಹೇಗೆ ನಿಯಂತ್ರಣದಲ್ಲಿಡಬೇಕು ಎಂಬುದನ್ನು ಸರಳವಾಗಿ ಹೇಳಿದ್ದಾರೆ. ಯಾವುದೇ ವ್ಯಾಧಿ ಮತ್ತು ಔಷಧದ ನಡುವಿನ ಯುದ್ಧಕ್ಕೆ ಪುರಾತನ ಇತಿಹಾಸವಿದೆ. ರೋಗದೊಂದಿಗೆ ವೈದ್ಯರಿಗಿಂತ ಹೆಚ್ಚು ಔಷಧಗಳು ಯುದ್ಧ ಮಾಡುತ್ತವೆ. ವೈದ್ಯನಲ್ಲಿರುವ ಬಹು ಮುಖ್ಯ ಅಸವೆಂದರೆ ಅದು ಔಷಧ. ಆದರೆ ಆ ರೋಗವೆಂಬುದು ಔಷಧವನ್ನೂ ಹೈರಾಣ ಮಾಡಿರುತ್ತದೆ. ಬಹುತೇಕ ಸಂದರ್ಭಗಳಲ್ಲಿ ಔಷಧ ಎಂಬುದು ನಿಮಿತ್ತ ಮಾತ್ರ. ಔಷಧ ಕೆಲಸ ಮಾಡುವಲ್ಲಿ ನಾಲ್ಕು ಹೆಜ್ಜೆಗಳಿವೆ. ಮೊದಲನೆಯದು, ಎಚ್ಚರ. ಎರಡನೆಯದು, ಔಷಧಕ್ಕೆ ಅದರದೇ ಆದ ಪ್ರಭಾವ ಬೀರುವ ಶಕ್ತಿ. ಮೂರನೆಯದು, ನೋವೇ ಔಷಧವಾಗಿ ಪರಿವರ್ತಿತವಾಗುವ ಬಗೆ. ನಾಲ್ಕನೆಯದು, ಪ್ರಾರ್ಥನೆಯೇ ಔಷಧವಾಗಿ ಪರಿಣಮಿಸುವುದು.

ಕೆಲವರ ದೇಹ ಪ್ರಕೃತಿಯೇ ಹಾಗಿರುತ್ತದೆ. ಅವರಿಗೆ ಬಹು ಬೇಗ ರೋಗ ಅಮರಿಕೊಳ್ಳುತ್ತದೆ. ನಮ್ಮ ದೇಹದ ಕ್ಷಮತೆಯ ಕುರಿತಾಗಿ ನಾವೇ ಮೌಲ್ಯಮಾಪನವನ್ನು ಆಗಿಂದಾಗ ಮಾಡಿ ಕೊಳ್ಳುತ್ತಿರಬೇಕು. ಇಲ್ಲಿ ನಮಗೆ ಅಧ್ಯಾತ್ಮಿಕ ದೃಷ್ಟಿಕೋನ ತುಂಬಾ ಅಗತ್ಯ. ಗುಂಪಿನಲ್ಲಿ ಸೇರುವುದಕ್ಕೆ ನಾವ್ಯಾಕೆ ಬಯಸುತ್ತೇವೆ ಎಂಬುದರ ಜತೆಗೆ ಗುಂಪಿನಲ್ಲಿರುವುದರಿಂದ ಏನು ಪ್ರಯೋಜನ ಎಂಬುದರ ಕುರಿತಾಗಿಯೂ ನಾವು ಚಿಂತನೆ ಮಾಡಬೇಕಿದೆ. ಗೀತೆಯ ಮೂರನೇ ಅಧ್ಯಾಯದಲ್ಲಿ ಶ್ರೀಕೃಷ್ಣ ಯುದ್ಧಸ್ವ ವಿಗತಜ್ವರಃ ಅಂತ ಹೇಳಿzನೆ. ಮನಸ್ಸಿಗೆ ಸಂತಾಪ ತಟ್ಟದ ರೀತಿಯಲ್ಲಿ ನಿನ್ನ ಕರ್ಮವನ್ನು ನೀನು ಮಾಡುತ್ತಿರು.

ವ್ಯಗ್ರತೆ, ಆಸಕ್ತಿ, ಮಮತೆ, ಚಿಂತೆ, ಕಾಮ, ಕ್ರೋಧ, ಅಧೈರ್ಯ ಇವೆಲ್ಲವೂ ಮನಸ್ಸಿನ ವ್ಯಾಽಗಳು. ಇವೆಲ್ಲವನ್ನೂ ಭಗವಂತ ಜ್ವರ ಎಂದು ಪರಿಗಣಿಸಿದ್ದಾನೆ.
ಈ ಸಂಗತಿಗಳು ನಿಮ್ಮ ಮನಸ್ಸನ್ನು ಆಕ್ರಮಿಸಿದ್ದರೆ ನೀವು ತೊಂದರೆಯನ್ನು ಆಹ್ವಾನಿಸುತ್ತಿದ್ದೀರಿ ಎಂದರ್ಥ. ಇವನ್ನೆಲ್ಲ ಪರಿಹರಿಸಬೇಕೆಂದರೆ, ಮೊದಲು ಮನಸ್ಸನ್ನು ನಿಯಂತ್ರಣ ದಲ್ಲಿಡಬೇಕು, ಅದಕ್ಕಿರುವ ಒಂದೇ ಒಂದು ಪರಿಹಾರ ಮಾರ್ಗವೆಂದರೆ ಅದು ಧ್ಯಾನ.

ಹೀಗೊಂದು ಚಿಂತನೆ
ಖ್ಯಾತ ಲೇಖಕಿ ರಾಂಡ್ ಬರ್ನ್ ಒಂದೆಡೆ ಆಕರ್ಷಣೆ ಸಹ ನಿಮ್ಮ ಪ್ರಗತಿಯ ಹಾದಿಯಲ್ಲಿ ಪ್ರತಿಕೂಲ ಪರಿಣಾಮ ಬೀರಬಹುದು ಎಂದು ಹೇಳುತ್ತಾಳೆ. ಜೀವನದಲ್ಲಿ ಸಾಕಷ್ಟು ದುಡ್ಡು ಸಂಪಾದಿಸಿ ಅವೆಲ್ಲವನ್ನೂ ಕಳೆದುಕೊಂಡು ಮತ್ತೆ ಕೆಲವೇ ವರ್ಷಗಳಲ್ಲಿ ಪುನಃ ಹಣವಂತರಾದ ಮಂದಿಯನ್ನು ನೀವು ನೋಡಿರಬಹುದು. ಹೀಗೇ ಕಾಗುತ್ತದೆ? ಅವರು ದುಡ್ಡಿನ ಬಗ್ಗೆಯೇ ಸಾಕಷ್ಟು ಗಮನ ಹರಿಸಿರುತ್ತಾರೆ. ಆ ಕಾರಣದಿಂದ ಇಂತಹ ಪ್ರಸಂಗ ಅವರಿಗೆದುರಾಗುತ್ತದೆ.

ಅವರು ಹಣಕಾಸಿನ ಬಗ್ಗೆಯೇ ಚಿಂತಿತರಾಗಿರುವ ಕಾರಣ ಮತ್ತೆ ಅದನ್ನು ಮರಳಿ ಪಡೆಯುವುದು ಸಾಧ್ಯವಾಗುತ್ತದೆ. ತಾವು ಮತ್ತೆ ಹಣಕಾಸಿನ ವಿಚಾರದಲ್ಲಿ ಪ್ರಬಲರಾಗುವ ತನಕ ಅವರೆಂದೂ ಹಣ ಕಳೆದುಕೊಳ್ಳುವ ಬಾಬತ್ತುಗಳಿಗೆ ಕೈಹಾಕುವುದಿಲ್ಲ. ಹಣ ಗಳಿಸುವುದು ಬಹಳ ಕಷ್ಟದ ಕೆಲಸ, ಅಂತೆಯೇ ಹಣವನ್ನು
ಕಳೆದುಕೊಳ್ಳುವುದು ನಿಮಿಷ ಮಾತ್ರದಲ್ಲಿ ಘಟಿಸಬಹುದಾದ ಕೆಲಸ.

ಒಮ್ಮೆ ಹಣ ಕಳೆದುಕೊಂಡ ನಂತರದಲ್ಲಿ ಅವರು ಜಾಗೃತರಾಗುತ್ತಾರೆ ಮತ್ತು ಸಕಾರಾತ್ಮಕ ಚಿಂತನೆಯೊಂದಿಗೆ ಮುನ್ನಡೆಯುವುದನ್ನು ಅಭ್ಯಾಸ ಮಾಡುತ್ತಾರೆ. ನಿಮಗೆ ವ್ಯಕ್ತಿಗತವಾಗಿ ಆಕರ್ಷಣೆಯುಂಟು ಮಾಡುವ ಯಾವುದೇ ಸಂಗತಿಯ ಕುರಿತು ಹೆಚ್ಚು ಆಲೋಚನೆಗೆ ತೊಡಗಿದರೆ ಅದರಿಂದ ಖುಷಿ ಸಿಗಲಾರದು. ನೀವೆಷ್ಟು ಹೆಚ್ಚು ಆಲೋಚನಾ ಮಗ್ನರಾಗುತ್ತೀರೋ ಅಷ್ಟೇ ಹೆಚ್ಚು ದುಃಖಕ್ಕೂ ಒಳಗಾಗುತ್ತೀರಿ. ನಿಮ್ಮ ವ್ಯಕ್ತಿಗತ ಆಕರ್ಷಣೆಯ ಯಾವುದೋ ಒಂದು ವಿಚಾರದತ್ತ
ನೀವು ಹೆಚ್ಚು ಮಗ್ನರಾದಾಗ ಅದು ನಿಮ್ಮನ್ನು ವಿಚಲಿತರಾಗುವಂತೆ ಮಾಡುತ್ತದೆ.

ಆನಂತರದಲ್ಲಿ ನಿಮ್ಮ ಮನಸ್ಸು ಅದೆಷ್ಟು ವಿಹ್ವಲವಾಗುತ್ತ ದೆಂದರೆ, ನಿಮ್ಮ ಮನಸ್ಸಿನಲ್ಲಿ ನಕಾರಾತ್ಮಕ ವಿಷಯಗಳೇ ಹೆಚ್ಚು ತುಂಬಿರುತ್ತವೆ ಮತ್ತು ನೀವು ಪ್ರಗತಿಯ ಪರಿಕ್ರಮದಲ್ಲಿ ಹಿಮ್ಮುಖ ನಡಿಗೆಯತ್ತ ನಿಮಗರಿವಿಲ್ಲದೇ ತೊಡಗಿರುತ್ತೀರಿ.