Thursday, 12th December 2024

ಪುಸ್ತಕಗಳು ದೇಶದ ಸಂಸ್ಕೃತಿಯ ಪ್ರತೀಕವೂ ಹೌದು !

ಅವಲೋಕನ

ಎಲ್‌.ಪಿ.ಕುಲಕರ್ಣಿ

ನಿಮ್ಮ ಬಳಿ 2 ರುಪಾಯಿಗಳಿದ್ದರೆ ಒಂದು ರುಪಾಯಿಯನ್ನು ಆಹಾರಕ್ಕಾಗಿ ಬಳಸಿ. ಉಳಿದ ಇನ್ನೊಂದು ರುಪಾಯಿಯನ್ನು
ಪುಸ್ತಕಕ್ಕಾಗಿ ಬಳಸಿ. ಆಹಾರವು ನಿಮ್ಮನ್ನು ಜೀವಂತವಾಗಿರುವಂತೆ ಮಾಡುತ್ತದೆ. ಪುಸ್ತಕವು ಹೇಗೆ ಜೀವಿಸಬಹುದೆಂದು ಕಲಿಸುತ್ತದೆ…..!

ಭಾರತ ರತ್ನ ಡಾ.ಬಿ.ಆರ್.ಅಂಬೇಡ್ಕರ್ ಅವರು ಹೇಳಿದ ಈ ಮೇಲಿನ ಸಾಲುಗಳು ಎಷ್ಟು ಅರ್ಥಗರ್ಭಿತವಲ್ಲವೇ!, ಪುಸ್ತಕಗಳು ಕೇವಲ ನಿರ್ಜೀವ ವಸ್ತುಗಳಲ್ಲ. ಬದಲಾಗಿ ವ್ಯಕ್ತಿಯ ವ್ಯಕ್ತಿತ್ವವನ್ನು ಶ್ರೇಷ್ಠ ಮಟ್ಟಕ್ಕೆ ಒಯ್ಯುವ ಜೀವ ಸೆಲೆಗಳು. ಮೈಮೇಲೆ ಹರಿದ
ಬಟ್ಟೆಯಿದ್ದರೂ ಪರವಾಗಿ. ಆದರೆ ಕೈಯ್ಯಂದು ಪುಸ್ತಕವಿರಲಿ. ಎಂಬ ಮಾತು ಪುಸ್ತಕದ ಮಹತ್ವವನ್ನು ಸಾರುತ್ತದೆ.

ಜ್ಞಾನಕ್ಕೆ ಸಾಧನವೇ ಈ ಪುಸ್ತಕಗಳು. ಏಪ್ರಿಲ್ – 23ನ್ನು ಪ್ರತಿ ವರ್ಷ ಜಗತ್ತಿನಾದ್ಯಂತ ನೂರಕ್ಕೂ ಹೆಚ್ಚು ರಾಷ್ಟ್ರಗಳಲ್ಲಿ ‘ವಿಶ್ವ ಪುಸ್ತಕ ಮತ್ತು ಗ್ರಂಥ ಸ್ವಾಮ್ಯ ದಿನ’ ವೆಂದು ಆಚರಿಸಿಕೊಂಡು ಬರಲಾಗುತ್ತಿದೆ. ವಿಶ್ವ ಸಂಸ್ಥೆಯ ಶೈಕ್ಷಣಿಕ; ವೈಜ್ಞಾನಿಕ ಮತ್ತು ಸಾಂಸ್ಕೃತಿಕ ಆಯೋಗ (UNESCO) 1995 ರಲ್ಲಿ ಪ್ರಥಮ ಬಾರಿಗೆ ಓದುವಿಕೆ ; ಪ್ರಕಾಶನ ಮತ್ತು ಕೃತಿಸ್ವಾಮ್ಯಗಳ ಬಗ್ಗೆ ಪ್ರಚಾರ ಮತ್ತು ಅರಿವು ಮೂಡಿಸಲು ಈ ‘ವಿಶ್ವ ಪುಸ್ತಕ ಮತ್ತು ಗ್ರಂಥಸ್ವಾಮ್ಯ ದಿನ’ ವೆಂಬ ವಿನೂತನ ಕಾರ್ಯಕ್ರಮವನ್ನು ಹಮ್ಮಿ ಕೊಂಡಿತು.

ಅಂದಿನಿಂದ ಇಂದಿನವರೆಗೂ ಈ ವಿಶ್ವ ಪುಸ್ತಕ ದಿನಾಚರಣೆ ಎಲ್ಲ ದೇಶಗಳಲ್ಲಿ ಬಹಳ ವಿಶೇಷವಾಗಿ ಆಚರಿಸಿಕೊಂಡು ಬರಲಾಗು ತ್ತಿದೆ. ಪ್ರತಿ ವರ್ಷ ಯುನೆಸ್ಕೊ ಹಾಗೂ ಪ್ರಕಾಶಕರು – ಪುಸ್ತಕ ಮಾರಾಟಗಾರರು – ಗ್ರಂಥಾಲಯ ಈ ಮೂರೂ ಕ್ಷೇತ್ರಗಳನ್ನು ಪ್ರತಿನಿಧಿಸುವ ಅಂತಾರಾಷ್ಟ್ರೀಯ ಸಂಸ್ಥೆಗಳು ಸೇರಿ, ಏಪ್ರೀಲ್ –23ರಿಂದ ಆರಂಭವಾಗಿ ಒಂದು ವರ್ಷದ ಅವಧಿಗೆ ‘ವಿಶ್ವ ಪುಸ್ತಕ ರಾಜಧಾನಿ’ ಯೊಂದನ್ನು ಆರಿಸುತ್ತವೆ.

2019ರಲ್ಲಿ ಗ್ರೀಸ್‌ನ ಅಥೆನ್ಸ್ ನಗರವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. 2020ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್‌ನ ಶಾರ್ಜಾವನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು. 2021ನೇ ಸಾಲಿಗೆ, ಯುನೆಸ್ಕೋದ ಡೈರೆಕ್ಟರ್ ಜನರಲ್ ಆದಂಥ ಆಡ್ರಿಯಾ  ಅಝೊಲೆ (Audrey Azoulay) ಅವರು ಜಾರ್ಜಿಯಾದ ತಿಬಿಲಿಸಿ ((Tbilisi)’ ಪಟ್ಟಣವನ್ನು ಆಯ್ಕೆ ಮಾಡಿದ್ದಾರೆ. ಮೊಬೈಲ, ಅಂತರ್ಜಾಲ, ಕಂಪ್ಯೂಟರ್‌ಗಳ ಜತೆಗೆ ಫೇಸ್ ಬುಕ್, ವಾಟ್ಸಪ್ , ಟೆಲಿಗ್ರಾಂ, ಇನ್‌ಸ್ಟ್ರಾಗ್ರಾಂ, ಮುಂತಾದ ಸಾಮಾಜಿಕ ಜಾಲತಾಣ ಗಳು ಇಂದು ಪುಸ್ತಕ ಓದಲು ಮೀಸಲಿದ್ದ ಸಮಯವನ್ನು ಕಸಿದುಕೊಳ್ಳುತ್ತಿವೆಯೆಂದರೆ ತಪ್ಪಾಗಲಾರದು.

ಪುಸ್ತಕ ಓದುವುದಷ್ಟೆ ಅ, ದಿನ ಪತ್ರಿಕೆಗಳನ್ನು ಓದುವಷ್ಟು ಸಮಯವನ್ನು ಸಹ ಈ ಸೋಷಿಯಲ್ ಮೀಡಿಯಾಗಳೆಂಬ ಮಾಯಾಂಗನೆಯರು ನಮ್ಮನ್ನು ಮರುಳು ಮಾಡುತ್ತಿವೆ. ಇದರಿಂದ ಸುಲಭವಾಗಿ ಪುಸ್ತಕಗಳ ಕಡೆ ಜನರ ಗಮನ ಕಡಿಮೆ ಯಾಗುತ್ತಾ ಸಾಗುತ್ತಿದೆ. ತತ್ಪರಿಣಾಮವಾಗಿ ಇಂದು ಹಲವು ಪ್ರತಿಭಾನ್ವಿತ ಲೇಖಕರು ಪುಸ್ತಕ ಪ್ರಕಾಶಕರೂ ಸಹ ಪುಸ್ತಕ ಪ್ರಕಟಣೆಗೆ ಹಿಂದೇಟುಹಾಕುತ್ತಿದ್ದಾರೆ. ಒಂದು ವೇಳೆ ಪ್ರಕಟಿಸಿದರೂ ಅದನ್ನು ಕೊಂಡು ಓದುವವರ ಸಂಖ್ಯೆ ಕಡಿಮೆಯಾಗುತ್ತಿರುವುದರಿಂದ ಇಂದು ಪುಸ್ತಕ ಪ್ರಕಟಣೆ ಒಂದು ಸಾಹಸದ ಕೆಲಸವಾಗಿ ಮಾರ್ಪಟ್ಟಿದೆ.

ಇಂತಹ ವಿಷಮ ಪರಿಸ್ಥಿತಿಯಿದ್ದರೂ ಕೆಲವು ಪ್ರಖ್ಯಾತ ಸಾಹಿತಿಗಳಾದ ಕುವೆಂಪು, ತೇಜಸ್ವಿ, ಚಂದ್ರಶೇಖರ ಕಂಬಾರ, ಎಸ್.ಎಲ್. ಭೈರಪ್ಪ, ಯಂಡಮೂರಿ ವೀರೇಂದ್ರನಾಥ, ಯತಿರಾಜ್ ವೀರಾಂಬುದಿ, ಎ.ಆರ್. ಮಣಿಕಾಂತ.. ಮತ್ತು ಪ್ರತಿಭಾನ್ವಿತ ಪತ್ರಕರ್ತ ರಾದ ವಿಶ್ವೇಶ್ವರ ಭಟ್, ಪ್ರತಾಪ್ ಸಿಂಹ, ರೋಹಿತ್ ಚಕ್ರತೀರ್ಥ ಇನ್ನೂ ಮುಂತಾದವರ ಪತ್ರಿಕಾ ಲೇಖನಗಳು ಮತ್ತು ಕೆಲವು ಪುಸ್ತಕಗಳು ಬಿಸಿದೋಸೆಯಂತೆ ಮಾರಾಟವಾಗಿ ಅಲ್ಪ ಸಮಯದ ಹಲವಾರು ಮುದ್ರಣಗಳನ್ನು ಕಂಡ ಉದಾಹರಣೆಗಳೂ ಇವೆ.

ಪುಸ್ತಕಗಳು ಜ್ಞಾನ ಬಂಡಾರಗಳಷ್ಟೇ ಅಲ್ಲ, ಒಂದು ದೇಶದ ಸಂಸ್ಕೃತಿಯ ಪ್ರತೀಕವೂ ಹೌದು!. ಇದಕ್ಕೆ ಸರಿಯಾದ ಉದಾಹರಣೆ ಗಳೆಂದರೆ ರಾಮಾಯಣ ಮತ್ತು ಮಹಾಭಾರತ. ಈ ಎರಡೂ ಮಹಾ ಕಾವ್ಯಗಳು ನಮ್ಮ ದೇಶದ ಸಂಸ್ಕೃತಿಯ ದ್ಯೋತಕವಾಗಿವೆ. ಮಹಾಭಾರತದ ಒಂದು ಭಾಗವಾದ ಕುರುಕ್ಷೇತ್ರ ಯುದ್ಧದಲ್ಲಿ ಹಿಂಜರಿಯುತ್ತಿರುವ ಅರ್ಜುನನಿಗೆ ಶ್ರೀಕೃಷ್ಣ ಪರಮಾತ್ಮ ಉಪದೇಶ ಮಾಡಿದ ಆ ಮಹಾನ್ ಸಾಲುಗಳೇ ‘ಭಗವದ್ಗೀತೆ’ ಯಾಗಿ ಜನ್ಮ ತಾಳಿದುದಲ್ಲದೇ, ಈಗ ನಮ್ಮ ದೇಶದ ಪವಿತ್ರ ಗ್ರಂಥವೂ ಆಗಿದೆ.

ಭಗವದ್ಗೀತೆ ಕೇವಲ ನಮ್ಮ ದೇಶಕ್ಕಷ್ಟೇ ಸೀಮಿತವಾಗಿಲ್ಲ. ಅದರೊಳಗಿನ ಸಾರವನ್ನು ಓದಿ ತಿಳಿದು ಅರ್ಥೈಸಿಕೊಂಡ ಸಾಕಷ್ಟು ವಿದೇಶಿ ಸಾಹಿತಿಗಳು, ವಿಜ್ಞಾನಿಗಳು ಕಾಣಸಿಗುತ್ತಾರೆ. ಪುಸ್ತಕಗಳನ್ನು ಇಂದಿನ ತಲೆಮಾರು ಓದುತ್ತದೆಯೇ, ಓದುತ್ತಿದ್ದರೆ ಎಷ್ಟರ ಮಟ್ಟಿಗೆ ಓದುತ್ತಿದೆ, ಪುಸ್ತಕದ ಓದು ಹೆಚ್ಚುತ್ತಿದೆಯೋ ಕಡಿಮೆಯಾಗುತ್ತಿದೆಯೋ ಎಂಬುದು ನಿರಂತರ ಚರ್ಚೆಯ ವಿಷಯ. ತನಿಖೆ ಮಾಡುತ್ತ ಹೋದರೆ ಎರಡೂ ಪಕ್ಷದ ಪರವಾದ ವಾದಗಳನ್ನು ಮಂಡಿಸಲು ಬೇಕಾದ ಸಾಕ್ಷ್ಯಗಳನ್ನು ಕಲೆಹಾಕುತ್ತ ಹೋಗ ಬಹುದು.

ಪುಸ್ತಕೋದ್ಯಮದಲ್ಲಿರುವವರು ಪುಸ್ತಕ ವ್ಯಾಪಾರ ಕಡಿಮೆಯಾಗಿದೆ ಎಂದೇ ಹೇಳುತ್ತಾರೆ; ಅದು ವಾಸ್ತವ. ಆದರೆ ಅದರಿಂದ,
ಓದು ಕಡಿಮೆಯಾಗಿದೆ ಎಂದು ಸಾಧಿಸಲಾಗುವುದಿಲ್ಲ. ಯಾಕೆಂದರೆ ಇಂದು ಪುಸ್ತಕ ಓದುತ್ತಿದ್ದೇನೆ ಎಂದು ಹೇಳಲು ಪುಸ್ತಕವೇ ಕೈಯಲ್ಲಿ ಇರಬೇಕೆಂದೇನಿಲ್ಲ. ಅದು ನಾನಾ ರೂಪಗಳಲ್ಲಿರಬಹುದು; ಕಿಂಡಲ, ಮೊಬೈಲ, ಸ್ಮಾರ್ಟ್ ಫೋನ್ ಗಳಲ್ಲಿ ಸಿಗುವ ಪಿಡಿಎಫ್ ಇತ್ಯಾದಿ.

ಕವಿತೆಗಳನ್ನು ಓದುವವರಿಲ್ಲ ಎಂಬುದು ಸುಳ್ಳು; ಫೇಸ್‌ಬುಕ್‌ನಲ್ಲಿ ಬರೆಯುತ್ತಿರುವ ಕನ್ನಡದ ಯುವಕವಿಗಳನ್ನು ಸಾಲಾಗಿ ನಿಲ್ಲಿಸಿದರೆ ಅದು ಐಲ್ಯಾಂಡಿನ ಜನಸಂಖ್ಯೆಗಿಂತ ಹೆಚ್ಚಾದೀತು!. ದೊಡ್ಡ ದೊಡ್ಡ ಕಾದಂಬರಿಗಳೂ ತುಣುಕು ತುಣುಕಾಗಿ
ವಾಟ್ಸಾಪ್‌ನಲ್ಲಿ ಧಾರಾವಾಹಿಯಾಗಿ ಬರುತ್ತವೆ. ನೀವು ಮೆಟ್ರೊದಲ್ಲಿ ಒಮ್ಮೆ ಪ್ರಯಾಣಿಸಿದರೆ, ಸುಮ್ಮನೆ ಕುಳಿತೋ ನಿಂತ ಕಂಬಕ್ಕೆ ಒರಗಿಯೋ ಪುಸ್ತಕ ಓದುತ್ತ ಇರುವ ಯುವಕ/ಯುವತಿಯರನ್ನು ಕಾಣಬಹುದು.

ಅಷ್ಟೆ ಅಲ್ಲ ಹುಲ್ಲು ಮೈದಾನದಲ್ಲಿ ತಮಗೆ ಇಷ್ಟವಾದ ಕಾದಂಬರಿಗಳನ್ನೋ, ವೈಚಾರಿಕ ಲೇಖನಗಳನ್ನೊಳಗೊಂಡ ಪುಸ್ತಕಗಳನ್ನೋ ಓದುವವರನ್ನೂ ಗಮನಿಸಬಹುದು. ಶಾಲಾ ಹಾಗೂ ಕಾಲೇಜು ವಿದ್ಯಾರ್ಥಿಗಳ ಆಪ್ತ ಸಂಗಾತಿ ಈ ಪುಸ್ತಕಗಳೇ ಆಗಿರುತ್ತವೆ. ಓದಿಗೆ ಲಿಂಗ ತಾರತಮ್ಯವಿಲ್ಲ, ವಯಸ್ಸಿನ ಭೇದವೂ ಇಲ್ಲ. ನಮ್ಮಲ್ಲಿ ಹೆಚ್ಚು ಪುಸ್ತಕಗಳನ್ನೋದುವ ಹಲವರನ್ನು ‘ಪುಸ್ತಕದ ಹುಳು’ ಎಂದು ಲೇವಡಿ ಮಾಡಿದ್ದೂ ಇದೆ.

ಇಂಥವರಿಗೆ ಪುಸ್ತಕ ಒಂದಿದ್ದರೆ ಸಾಕು ತಾವಿದ್ದ ಲೋಕವನ್ನೇ ಮರೆತು, ಅಷ್ಟರ ಮಟ್ಟಿಗೆ ಓದಿನಲ್ಲಿ ತಲ್ಲೀನರಾಗಿದ್ದು ಬಿಡುತ್ತಾರೆ. ಒಂದು ಅಂದಾಜಿನ ಸಮೀಕ್ಷೆಯ ಪ್ರಕಾರ ಯುವಕರಿಗಿಂತ ಯುವತಿಯರು ಹೆಚ್ಚಾಗಿ ಓದುವ ಹವ್ಯಾಸ ಬೆಳೆಸಿಕೊಂಡಿರುತ್ತಾರೆ.
ಸಾಮಾಜಿಕ ಕಾದಂಬರಿಗಳನ್ನು ಓದುವುದರಲ್ಲಿ ಯುವತಿಯರು ಎತ್ತಿದ ಕೈ. ಇದಷ್ಟೆ ಅ ಕವನ ಸಂಕಲನಗಳನ್ನು ಓದುವು ದರಲ್ಲಿಯೂ ಕೂಡ!.

ಐವತ್ತು ಅರವತ್ತರದ ದಶಕಗಳಲ್ಲಿ ಎಲ್ಲರ ಸಂಗಾತಿ ಈ ಪುಸ್ತಕಗಳೇ ಆಗಿದ್ದವು. ಅದರಲ್ಲಿಯೂ ಕಾದಂಬರಿ ಓದಿಗೆ ಹೆಚ್ಚು ಪ್ರಾಧಾನ್ಯತೆಯಿದ್ದ ಕಾಲವದು. ಆಗ ಮಾರುಕಟ್ಟೆಯಲ್ಲಿ ಬರುವ ಹಲವು ಥ್ರಿಲ್ ಕೊಡುವ ಕಾದಂಬರಿಗಳನ್ನು ಜನ ಇಷ್ಟ ಒಡುತ್ತಿದ್ದರು. ಹಾ! ಆಗಿನ ಕಾಲದಲ್ಲಿ ‘ಶರ ಪಂಜರ’, ‘ಸಿಪಾಯಿ ರಾಮು’ ಮುಂತಾದ ಚಲನ ಚಿತ್ರಗಳು ಕಾದಂಬರಿ ಆಧಾರಿತ ವಾಗಿದ್ದವು ಎಂಬುದು ಗೊತ್ತಿರಲಿ. ಸದ್ಯ ಈಗ ಮಾಹಿತಿ ತಂತ್ರಜ್ಞಾನ ವಲಯದಲ್ಲಿ ಆಗುತ್ತಿರುವ ಹೊಸ ಹೊಸ ಆವಿಷ್ಕಾರಗಳು ಪುಸ್ತಕ ಓದುವ ಸಂಸ್ಕೃತಿಗೆ ತಡೆಹಾಕಿದ್ದರೂ ನಮ್ಮಲ್ಲಿಯ ಓದುವ ಸಂಸ್ಕೃತಿ ಸಂಪೂರ್ಣವಾಗಿ ನಶಿಸಿ ಹೋಗದಿರುವುದು ಮಾತ್ರ ಸಮಾಧಾನಕರ ಸಂಗತಿ.

ಅದರಲ್ಲಿಯೂ ಭಾರತದಲ್ಲಿ ನಮ್ಮ ಕನ್ನಡ ಭಾಷೆಗೆ ಸಿಕ್ಕಷ್ಟು ಜ್ಞಾನಪೀಠ ಪುರಸ್ಕಾರಗಳು ಬೇರಾವ ಭಾಷೆಗೂ ಅಷ್ಟೊಂದು ಸಿಗದಿರುವುದು, ನಮ್ಮ ಭಾಷೆಯಲ್ಲಿರುವ ಸೊಗಡು. ಅತ್ಯಂತ ಪ್ರಾಚೀನ ಭಾಷೆಗಳಲ್ಲಿ ಒಂದಾಗಿರುವ ನಮ್ಮ ಕನ್ನಡ ಭಾಷೆ ಅತ್ಯಂತ ಸುಲಭ, ಸುಂದರ, ನವಿರಾದ ಭಾಷೆಯಾಗಿದೆ. ನಾವಷ್ಟೆ ಅಷ್ಟೇ ವಿದೇಶಿಗರೂ ಕನ್ನಡವನ್ನು ಮೆಚ್ಚಿ ತಂಡೋಪತಂಡ ವಾಗಿ ಪ್ರತಿ ವರ್ಷ ನಮ್ಮ ವಿಶ್ವ ವಿದ್ಯಾಲಯಗಳಲ್ಲಿ ಕನ್ನಡವನ್ನು ಕಲಿಯ ಬರುವವರ ಸಂಖ್ಯೆ ಕಡಿಮೆಯೇನಿಲ್ಲ.

ಇದಕ್ಕಾಗಿ ಕನ್ನಡಿಗರಾದ ನಾವೆ ಹೆಮ್ಮೆ ಪಡುವಂತಾಗಿದೆ. ಒಂದು ಒಳ್ಳೆಯ ಪುಸ್ತಕ ನೂರು ಒಳ್ಳೆಯ ಸ್ನೇಹಿತರಿಗೆ ಸಮವೆಂದು ಹೇಳಿದ ಹಿರಿಯರ ಮಾತು ಸತ್ಯವೇ ಆಗಿದೆ. ನಮ್ಮ ಯೋಗ್ಯತೆಯನ್ನು ನಾವು ಓದುವ ಪುಸ್ತಕಗಳೇ ತಿಳಿಸಿಕೊಡುತ್ತವೆ. ಯಾವ
ಪುಸ್ತಕಗಳನ್ನು ಓದಬೇಕು, ಯಾವುದನ್ನು ಓದಬಾರದೆಂಬುದು ಓದುಗರ ವಿವೇಚನೆಗೆ ಬಿಟ್ಟಿದ್ದಾದರೂ ನಾವು ಸಾಧ್ಯವಾದಷ್ಟು ಒಳ್ಳೆಯ ವಿಚಾರಗಳನ್ನು ಹೊಂದಿರುವ ಪುಸ್ತಕಗಳನ್ನು ಓದುವ ಮೂಲಕ ನಮ್ಮ ಬದುಕನ್ನು ಉತ್ತಮಪಡಿಸಿಕೊಳ್ಳಬಹುದು.

ಅದಕ್ಕೆಂದೇ ನಮ್ಮ ದೇಶದ ಪ್ರಸಿದ್ಧ ಕವಿ, ದಾರ್ಶನಿಕ ಹಾಗೂ ನೊಬೆಲ್ ಪಾರಿತೋಷಕ ವಿಜೇತ ರವೀಂದ್ರ ನಾಥ ಠಾಕೂರ್’ ಜಗತ್ತು ಬೆಳಗಲು ಸೂರ್ಯ ಬೇಕು, ಬದುಕನ್ನು ಬೆಳಗಲು ಪುಸ್ತಕ ಬೇಕು’ ಎಂದು ಹೇಳಿದ್ದನ್ನು ನಾವಿಲ್ಲಿ ಸ್ಮರಿಸಬಹುದು.
ಭಾರತದಲ್ಲಿ ಪುಸ್ತಕ ಪ್ರೀತಿ ಕಾಯಿದೆಗೆ ಸಂಬಂಧಿಸಿದಂತೆ ಕಾರ್ಯನಿರ್ವಹಿಸಲು ಕೇಂದ್ರ ಮಾನವ ಸಂಪನ್ಮೂಲ ಇಲಾಖೆಯಡಿ ಪ್ರತ್ಯೇಕ ಸಮಿತಿಯಿದೆ. ಹಾಗೂ ಭಾರತ ಜ್ಞಾನ ಆಯೋಗದ ಜತೆಗೆ ಆಯಾ ರಾಜ್ಯಗಳ ಜ್ಞಾನ ಆಯೋಗಗಳು ದೇಶದ ನಾಡಿನ ಹಲವು ಬುದ್ಧಿ ಜೀವಿಗಳಿಂದ ರಚನೆಯಾಗಿ ದೇಶದ ಸಮಸ್ತ ಪ್ರಜೆಗಳಲ್ಲಿ ಜ್ಞಾನವನ್ನು ಹೆಚ್ಚಿಸಲು ಶ್ರಮವಹಿಸುತ್ತಿವೆ.

ರಾಜ್ಯಗಳಲ್ಲಿ ಗ್ರಂಥಸ್ವಾಮ್ಯ ಕೇಂದ್ರಗಳು ಮತ್ತು ಎಲ್ಲ ಸಮಿತಿಗಳಿರುತ್ತವೆ. ಕರ್ನಾಟಕದಲ್ಲಿ ಸಾರ್ವಜನಿಕ ಗ್ರಂಥಾಲಯ
ಇಲಾಖೆಯಡಿ ರಾಜ್ಯ ಕೇಂದ್ರ ಗ್ರಂಥಾಲಯವು ಗ್ರಂಥಸ್ವಾಮ್ಯ ಕೇಂದ್ರವಾಗಿದೆ. ಕನ್ನಡ ಪುಸ್ತಕ ಪ್ರಾಧಿಕಾರ, ಸಾರ್ವಜನಿಕ ಗ್ರಂಥಾಲಯ ಇಲಾಖೆ, ಸಾಹಿತ್ಯ ಅಕಾಡೆಮಿ, ಕರ್ನಾಟಕ ಲೇಖಕಿಯರ ಸಂಘ, ಕರ್ನಾಟಕ ಪ್ರಕಾಶಕರ ಸಂಘ, ಓದುವ ಬಳಗ
ಮುಂತಾದ ಸಂಸ್ಥೆಗಳು ಉಪನ್ಯಾಸ, ವಿಚಾರ ಸಂಕಿರಣ, ಹಿರಿಯ ಲೇಖಕರು ಮತ್ತು ಪ್ರಕಾಶಕರಿಗೆ ಗೌರವಾರ್ಪಣೆ, ಪುಸ್ತಕೋದ್ಯಮಕ್ಕೆ ಸಂಬಂಧಿಸಿದ ಸಂಗತಿಗಳನ್ನು ಕುರಿತು ಕಾರ್ಯಶಿಬಿರಗಳು, ಉಚಿತ ಪುಸ್ತಕ ವಿತರಣೆ, ಚರ್ಚಾಸ್ಪರ್ಧೆ, ಪ್ರಬಂಧ ಸ್ಪರ್ಧೆಗಳನ್ನು ಏರ್ಪಡಿಸುವ ಮೂಲಕ ಪುಸ್ತಕ ಪ್ರೀತಿಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿವೆ.

ಶಿಕ್ಷಣ ತಜ್ಞರು ವಿದ್ಯಾರ್ಥಿಗಳಲ್ಲಿ ಎರಡು ಬಗೆಯ ಕಲಿಕೆಯುಳ್ಳವರನ್ನು ಗುರುತಿಸುತ್ತಾರೆ. ಕೆಲವರು ಕೇಳು ಕಲಿಕೆಯವರು. ಎಂದರೆ ಕೇಳಿ, ಅದನ್ನು ಮನಮುಟ್ಟುವಂತೆ ಆಲಿಸಿ ಕಲಿಯುವುದು ಅವರಿಗೆ ಸುಲಭ. ಇನ್ನು ಕೆಲವರು ದೃಶ್ಯ ಕಲಿಕೆಯವರು.
ಇಂಥವರು ಪುಸ್ತಕ ಓದುವುದನ್ನು ಹೆಚ್ಚಾಗಿ ಇಷ್ಟಪಡುತ್ತಾರೆ. ಅಂದರೆ, ಪುಸ್ತಕ ಓದಲು ಇಷ್ಟಪಡದ ವಿದ್ಯಾರ್ಥಿಗಳ ಮೇಲೆ ಓದನ್ನು ಹೇರುವುದೂ ಸರಿಯಲ್ಲ; ಯಾಕೆಂದರೆ ಆತನ ಕಲಿಕಾ ಪದ್ಧತಿ ಅದಲ್ಲವೇ ಅಲ್ಲ. ಆಗ ಇದಕ್ಕೆ ಸೂಕ್ತ ಬೇರೆ ರೀತಿಯ ಓದಿನ
ಮಾರ್ಗಗಳನ್ನು ಹುಡುಕಬೇಕಾಗುತ್ತದೆ. ಆಡಿಯೋ ಬುಕ್‌ಗಳು ಇಂಥಲ್ಲಿ ನೆರವಿಗೆ ಬರುತ್ತವೆ.

ಆದರೆ ಕನ್ನಡದಲ್ಲಿ ಇದು ಕೂಡ ಪ್ರಯೋಗ ಹಂತದಿಂದ ಮುಂದಕ್ಕೆ ಹೋಗಿಲ್ಲ. ಇತ್ತೀಚೆಗೆ ಮೈಲ್ಯಾಂಗ್ ಆಪ್ ನಲ್ಲಿ ಕನ್ನಡದ ಪ್ರಸಿದ್ಧ ಲೇಖಕರ ಕಾದಂಬರಿ, ಕಥೆಗಳು ಆಡಿಯೋ ರೂಪದಲ್ಲಿ ಬರುತ್ತಿರುವುದು ಓದುಗರು, ಕೇಳುಗರಲ್ಲಿ ಸಂತಸವನ್ನು ಮೂಡಿಸಿದೆ. ಓದು ಕೂಡ ಒಂದು ಬಗೆಯ ರಾಜಕೀಯ. ನಾವು ಯಾವ ಬಗೆಯ ಓದನ್ನು ಆಯ್ಕೆ ಮಾಡಿಕೊಳ್ಳುತ್ತೆವೆ ಎಂಬುದರ ಮೇಲೆ ನಮ್ಮ ಸಾಮಾಜಿಕ – ರಾಜಕೀಯ ನಿಲುವು ಪ್ರಜ್ಞೆಗಳು ನಿಂತಿವೆ.

ಯುವಕನೊಬ್ಬ ಗಾಂಧೀಜಿಯವರ ಮೈ ಎಕ್ಸ್ಪರಿಮೆಂಟ್ಸ್ ವಿಥ್ ಟ್ರೂಥ್’ ಅನ್ನು ಆಯ್ದುಕೊಳ್ಳಬಹುದು; ಅಥವಾ ಅಡಾಲ್ಫ್
ಹಿಟ್ಲರ್‌ನ ಮೈನ್ ಕಾಂ-, ಕ್ರೈಮ್ ನ್ಯೂಜ್ ಪತ್ರಿಕೆಗಳು, ಅಧ್ಯಾತ್ಮಿಕ ಪುಸ್ತಕಗಳನ್ನು ಕೂಡ ಆರಿಸಿಕೊಳ್ಳಬಹುದು. ಅಲ್ಲದೇ, ವಿಶ್ವೇಶ್ವರ ಭಟ್ಟರು ಬರೆದ ‘ಆವಿಷ್ಕಾರದ ಹರಿಕಾರ’, ರೋಹಿತ್ ಚಕ್ರತೀರ್ಥರು ಬರೆದ ‘ಮನಸುಗಳ ನಡುವೆ ಪುಷ್ಪಕ ವಿಮಾನ ’ ಎಂಬ ವೈeನಿಕ ಪುಸ್ತಕಗಳಿರಬಹುದು. ಆದರೆ ಆತ ಅದರಲ್ಲಿ ಯಾವುದನ್ನು ಮತ್ತೆ ಮತ್ತೆ ಓದುತ್ತಾನೆ, ಯಾಕೆ ಓದುತ್ತಾನೆ ಎಂಬುದರ ಮೇಲೆ ಆತ ಹೇಗೆ ರೂಪುಗೊಳ್ಳುತ್ತಾನೆ ಎಂಬುದು ನಿರ್ಧಾರವಾಗುತ್ತದೆ.

ಇಂಥ ಸಂದರ್ಭದಲ್ಲಿ ಓದು ಕೂಡ ಒಳ್ಳೆಯದೋ- ಕೆಟ್ಟದೋ ಎಂದು ನಿರ್ಧರಿಸುವುದೂ ಕಷ್ಟ. ಮನೆಯಲ್ಲಿ ಹಿರಿಯರೆ ಟಿ.ವಿ ಯಲ್ಲಿ ಬರುವ ಧಾರಾವಾಹಿಗಳನ್ನು ನೋಡುತ್ತಾ ಕುಳಿತರೆ ಮಕ್ಕಳು ಪುಸ್ತಕ ಹಿಡಿದು ಓದುತ್ತವೆಯೇ?!, ಇತಾನೆ!, ಆದಕಾರಣ ಮೊದಲು ಮನೆಯಲ್ಲಿನ ಹಿರಿಯರು ತಾವು ಪುಸ್ತಕ ಹಿಡಿದು ಓದುವುದನ್ನು ರೂಢಿಯಲ್ಲಿಟ್ಟು ಕೊಳ್ಳಬೇಕು. ಅಂದಾಗ ಮಾತ್ರ ಪುಸ್ತಕ ಓದುವ ಪ್ರವೃತ್ತಿ ಮಕ್ಕಳಲ್ಲಿ ಬರಲು ಸಾಧ್ಯ. ಅದಕ್ಕಾಗಿಯೆ ಹೇಳಿರುವುದು ’ ಮನೆಯೆ ಮೊದಲ ಪಾಠ ಶಾಲೆ, ಜನನಿ ತಾನೆ
ಮೊದಲ ಗುರುವು, ಜನನಿಯಿಂದ ಪಾಠ ಕಲಿತ ಜನರು ಧನ್ಯರು.’ ಎಂದು.

ಸದ್ಯ, ನಾವು ಎರಡು ವರ್ಷಗಳಿಂದ ಸತತವಾಗಿ ಕರೋನಾ ಮಹಾಮಾರಿಗೆ ಸಿಲುಕಿ ನರಳುತ್ತಿದ್ದೇವೆ. ಈ ವೈರಾಣುವಿನ ಕಾರಣ ದಿಂದ ಸರಿಯಾಗಿ ಶಾಲೆಗಳು ನಡೆಯುತ್ತಿಲ್ಲ. ಮನೆಯಲ್ಲಿ ಮೊಬೈಲಿನ ಎಲ್ಲ ಆನ್ ಲೈನ್ ಪಾಠ ಪ್ರವಚನಗಳು ನಡೆಯುತ್ತಿವೆ. ಕೆಲವರಿಗಂತೂ ಕಚೇರಿಗಳು ವರ್ಕ್ ಫ್ರಮ್ ಹೋಮ್ ಪದ್ಧತಿಯಲ್ಲಿ ಕಾರ್ಯ ನಿರ್ವಹಿಸಲು ಹೇಳಿವೆ. ಇಂತಹ ಸಂದರ್ಭವನ್ನು ನಾವು ಆನ್‌ಲೈನ್ ಮೂಲಕ ಬುಕ್ ಖರೀದಿಸಿ ಓದಲು ಬಳಸಿಕೊಳ್ಳಬಹುದಲ್ಲವೆ.