Friday, 20th September 2024

ಈಗ ಬಾಂಗ್ಲಾದೇಶದಲ್ಲಿ ಭಾರತ ಬಹಿಷ್ಕರಿಸಿ ಕೂಗು !

ಸಂಗತ

ಡಾ.ವಿಜಯ್ ದರಡಾ

ಚೀನಾದ ಷಡ್ಯಂತ್ರಕಾರಿ ರಾಜತಾಂತ್ರಿಕತೆ ಇನ್ನೂ ಯಶಸ್ವಿಯಾಗಿಲ್ಲದೆ ಇರಬಹುದು. ಆದರೆ ಇದಕ್ಕೆ ಭಾರತದ ತಿರುಗೇಟು ಮಾತ್ರ ಅತ್ಯವಶ್ಯಕ. ಶ್ರೀಲಂಕಾ, ನೇಪಾಳ, ಮಾಲ್ಡೀವ್ಸ್‌ನಲ್ಲಿ ಏನು ಮಾಡಿದೆಯೋ ಅದನ್ನೇ ಈಗ ಬಾಂಗ್ಲಾದೇಶದಲ್ಲೂ ಮಾಡಲು ಚೀನಾ ಹವಣಿಸುತ್ತಿದೆ.

ಕಳೆದ ತಿಂಗಳು ಇದ್ದಕ್ಕಿದ್ದಂತೆ ಬಾಂಗ್ಲಾದೇಶದಲ್ಲಿ ಇಂಡಿಯಾ ಔಟ್ ಘೋಷಣೆಗಳು ಕೇಳಿಬಂದವು. ಸಹಜವಾಗಿಯೇ ಅದನ್ನು ಕೇಳಿ ಎಲ್ಲರಿಗೂ ಆಶ್ಚರ್ಯವಾಯಿತು. ಹೇಳಿ ಕೇಳಿ ಬಾಂಗ್ಲಾದೇಶ ಭಾರತದ ಸ್ನೇಹಿತ ರಾಷ್ಟ್ರ. ಮೇಲಾಗಿ ತುಂಬಾ ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರ. ಅಲ್ಲಿ ಇಂತಹದ್ದೊಂದು ಘೋಷಣೆ ಕೇಳಿಬಂದಿದ್ದು ಏಕೆ ಎಂದು ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟುಕೊಂಡರು.

ಇತ್ತೀಚೆಗೆ ಮಾಲ್ಡೀವ್ಸ್‌ನಲ್ಲೂ ‘ಭಾರತೀಯರೇ, ನಮ್ಮ ದೇಶ ಬಿಟ್ಟು ಹೋಗಿ’ ಎಂಬ ಘೋಷಣೆಗಳು ಮೊಳಗಿದ್ದವು. ಅಲ್ಲಿನ ಅಧ್ಯಕ್ಷ ಮೊಹಮದ್ ಮುಯಿಝು ಹಟಕ್ಕೆ ಬಿದ್ದು ಭಾರತದ ಸೇನಾಪಡೆಯನ್ನು ತಮ್ಮ ದೇಶದಿಂದ ಹೊರಕ್ಕೆ ಕಳುಹಿಸುತ್ತಿದ್ದಾರೆ. ಈಗ
ಬಾಂಗ್ಲಾದೇಶದಲ್ಲಿ ‘ಭಾರತ ಔಟ್’ ಕೂಗು ಎದ್ದಿದ್ದು ಹೇಗೆ ಮತ್ತು ಯಾವಾಗ? ಇದೊಂದು ಅನಿರೀಕ್ಷಿತ ಬೆಳವಣಿಗೆ. ಇದರ ಮೂಲ ಮತ್ತು ಉದ್ದೇಶವು ಸಾಕಷ್ಟು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಇದು ಬಾಂಗ್ಲಾದೇಶದೊಳಗೇ ಇರುವ ಅಲ್ಲಿನ ಪ್ರತಿಪಕ್ಷಗಳ ಮಸಲತ್ತೇ ಅಥವಾ ಇದರ ಹಿಂದೆ ಚೀನಾ ತನ್ನ ಕಳ್ಳಾಟ ಆಡುತ್ತಿದ್ದೆಯೇ? ಚೀನಾದ ಚಟುವಟಿಕೆಗಳನ್ನು ಹತ್ತಿರದಿಂದ ಗಮನಿಸುತ್ತಿರುವ ವಿದೇಶಾಂಗ ತಜ್ಞರ ಪ್ರಕಾರ ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಈ ಬೆಳವಣಿಗೆಯ ಹಿಂದೆ ಚೀನಾದ ಸಕ್ರಿಯ ಪಾತ್ರವಿದೆ.

ದುರದೃಷ್ಟವಶಾತ್, ಚೀನಾದ ಈ ರಾಜತಾಂತ್ರಿಕ ಷಡ್ಯಂತ್ರವು ಈವರೆಗೆ ಬಾಂಗ್ಲಾದೇಶದಲ್ಲಿ ಫಲ ನೀಡಿಲ್ಲ. ಏಕೆಂದರೆ, ಭಾರತ ತುಂಬಾ ಚಾಕಚಕ್ಯತೆಯಿಂದ ಬಾಂಗ್ಲಾದೇಶದ ಜತೆಗಿನ ಸಂಬಂಧವನ್ನು ನಿಭಾಯಿಸುತ್ತಿದೆ. ಅಷ್ಟೇಕೆ, ಚೀನಾದ ಕುತಂತ್ರಗಳಿಗೆ
ಬಲಿಯಾದ ನಮ್ಮ ಬಹುತೇಕ ಎಲ್ಲಾ ನೆರೆರಾಷ್ಟ್ರಗಳಿಗೂ ತಾವು ನಂಬಬಹುದಾದ ಏಕೈಕ ರಾಷ್ಟ್ರವೆಂದರೆ ಭಾರತ ಎಂಬುದು ಬಹಳ ಚೆನ್ನಾಗಿ ಗೊತ್ತಿದೆ.

ಬಾಂಗ್ಲಾದೇಶದಲ್ಲಿ ಬಾಂಗ್ಲಾದೇಶ್ ನ್ಯಾಷನಲಿಸ್ಟ್ ಪಾರ್ಟಿ (ಬಿಎನ್‌ಪಿ) ಪ್ರಮುಖ ವಿರೋಧ ಪಕ್ಷವಾಗಿದೆ. ಆ ಪಕ್ಷಕ್ಕೆ ಆಡಳಿತಾ ರೂಢ ಅವಾಮಿ ಲೀಗ್ ಪಕ್ಷವನ್ನು ಭಾರತ ಬೆಂಬಲಿಸುತ್ತಿದೆ ಎಂಬ ಶಂಕೆಯಿದೆ. ಇಷ್ಟಕ್ಕೂ ಬಾಂಗ್ಲಾದೇಶದ ಪ್ರಧಾನಿ ಶೇಖ್ ಹಸೀನಾ ಜತೆ ಭಾರತಕ್ಕೆ ಆಪ್ತವಾದ ಸಂಬಂಧವಿರುವುದು ನಿಜ. ಆಕೆಯೇ ಆಡಳಿತಾರೂಢ ಅವಾಮಿ ಲೀಗ್ ಪಕ್ಷದ ಮುಖ್ಯಸ್ಥೆ. ಅವರ ನಾಯಕತ್ವದಲ್ಲಿ ಬಾಂಗ್ಲಾದೇಶವು ಕಳೆದ ಹಲವು ವರ್ಷಗಳಿಂದ ಸಾಕಷ್ಟು ಅಭಿವೃದ್ಧಿ ಕಾಣುತ್ತಿದೆ. ಅವರು ಭಯೋತ್ಪಾ ದನೆಗೆ ಶೂನ್ಯ ಸಹಿಷ್ಣುತೆ ನೀತಿ ಅಳವಡಿಸಿಕೊಂಡಿದ್ದಾರೆ. ಅದರಿಂದಾಗಿ ಇಸ್ಲಾಮಿಕ್ ಸ್ಟೇಟ್ (ಐಸಿಸ್), ಅಲ್ ಖೈದಾದ ಸಹೋದರ
ಹಿಜ್ಬ್ ಉತ್-ತಹ್ರೀರ್ (ಎಚ್‌ಯುಟಿ), ಜಮಾತ್ ಉಲ್ ಮುಜಾಹಿದ್ದೀನ್ ಬಾಂಗ್ಲಾದೇಶ್ ಮತ್ತು ಅನ್ಸರುಲ್ಲಾ ಬಾಂಗ್ಲಾ ಟೀಮ್‌ ನಂತಹ ಭಯೋತ್ಪಾದಕ ಸಂಘಟನೆಗಳು ಆ ದೇಶದಲ್ಲಿ ತಲೆಯೆತ್ತಿ ನಿಲ್ಲುವುದಕ್ಕಾಗುತ್ತಿಲ್ಲ. ಅವು ಯಾವುದೇ ಚಟುವಟಿಕೆ ನಡೆಸದಂತೆ ಶೇಖ್ ಹಸೀನಾ ಕಾಲು-ಬಾಲ ಕತ್ತರಿಸಿ ಹಾಕಿದ್ದಾರೆ.

ಹೀಗಾಗಿ ಈ ಭಯೋತ್ಪಾದಕ ಸಂಘಟನೆಗಳು ಮತ್ತು ಪ್ರತಿಪಕ್ಷಗಳಿಗೆ ಸಹಜವಾಗಿಯೇ ಶೇಖ್ ಹಸೀನಾ ಮೇಲೆ ಸಾಕಷ್ಟು ಸಿಟ್ಟಿದೆ. ಅವರ ಈ ಸಿಟ್ಟೇ ಚೀನಾಕ್ಕೆ ವರದಾನವಾಗಿ ಪರಿಣಮಿಸಿದೆ. ದೇಶದೊಳಗಿನ ಆಂತರಿಕ ವಿರೋಧವನ್ನು ಬಳಸಿಕೊಂಡು ಚೀನಾ ತನ್ನ ಬೇಳೆ ಬೇಯಿಸಿಕೊಳ್ಳಲು ಹವಣಿಸುತ್ತಿದೆ. ಇದರ ಪರಿಣಾಮವೇ ಬಾಂಗ್ಲಾದೇಶದಲ್ಲಿ ಎದ್ದಿರುವ ಭಾರತವನ್ನು ಬಹಿಷ್ಕರಿಸಿ ಎಂಬ ಕೂಗು. ಸದ್ಯಕ್ಕಿದು ಆ ದೇಶದ ಸಾಮಾಜಿಕ ಜಾಲತಾಣಗಳಲ್ಲಿ ಅನುರಣಿಸುತ್ತಿದೆ. ಬಾಂಗ್ಲಾದೇಶದಲ್ಲಿ ಭಾರತದ ಉತ್ಪನ್ನ ಗಳನ್ನು ಬಹಿಷ್ಕರಿಸಬೇಕು ಎಂಬ ವಾದಗಳು ಮತ್ತು ಚರ್ಚೆಗಳು ವಿವಿಧ ವೇದಿಕೆಗಳಲ್ಲಿ ನಡೆಯುತ್ತಿವೆ.

ಆದರೆ ಪ್ರಧಾನಿ ಶೇಖ್ ಹಸೀನಾ ಇದೆಲ್ಲ ಬಾಂಗ್ಲಾದೇಶದ ಮಾರುಕಟ್ಟೆಯಲ್ಲಿ ಅಸ್ಥಿರತೆ ಉಂಟುಮಾಡಲು ನಡೆಯುತ್ತಿರುವ ಕಿಡಿಗೇಡಿಗಳ ಆಟ, ಇದರ ಹಿಂದಿನ ನಿಜವಾದ ಉದ್ದೇಶವನ್ನು ಎಲ್ಲರೂ ಅರಿತುಕೊಳ್ಳಿ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಬಾಂಗ್ಲಾದೇಶದ ಮಾರುಕಟ್ಟೆ ಅಸ್ಥಿರವಾದರೆ ಅದರ ಲಾಭವನ್ನು ಚೀನಾ ಪಡೆದುಕೊಳ್ಳುತ್ತದೆ. ಅದರಲ್ಲಿ ಅನುಮಾನವೇ ಇಲ್ಲ. ಆಗ ಬಾಂಗ್ಲಾದೇಶ ಕೂಡ ಇನ್ನೊಂದು ಪಾಕಿಸ್ತಾನ, ಶ್ರೀಲಂಕಾ ಅಥವಾ ಈಗಿನ ಮಾಲ್ಡೀವ್ಸ್ ಆಗುತ್ತದೆ.

ಚೀನಾ ಎಂತಹ ಕುತಂತ್ರಿ ಅಂದರೆ, ನೇಪಾಳ ಮತ್ತು ಭಾರತದ ನಡುವೆಯಿದ್ದ ದೀರ್ಘಕಾಲದ ಉತ್ತಮ ಸಂಬಂಧಕ್ಕೆ ಅದು ಈಗಾಗಲೇ ಹುಳಿ ಹಿಂಡಿದೆ. ಮ್ಯಾನ್ಮಾರ್ ಮತ್ತು ಭೂತಾನ್ ದೇಶಗಳನ್ನೂ ಭಾರತದಿಂದ ದೂರಮಾಡಲು ಅದು ನಿರಂತರವಾಗಿ ಯತ್ನಿಸುತ್ತಿದೆ. ಆದರೆ ಈ ಎರಡು ದೇಶಗಳು ಭಾರತದ ಪರಮ ಸ್ನೇಹಿತ ರಾಷ್ಟ್ರಗಳು. ಹೀಗಾಗಿ ಅಲ್ಲಿ ಚೀನಾದ ಕಳ್ಳಾಟಕ್ಕೆ ಈವರೆಗೆ ಬೆಲೆ ಸಿಕ್ಕಿಲ್ಲ. ಈಗ ಚೀನಾ ತನ್ನ ದಾಳವನ್ನು ಬಾಂಗ್ಲಾದೇಶದಲ್ಲಿ ಉರುಳಿಸುತ್ತಿದೆ.

ಆ ದೇಶವನ್ನು ಭಾರತದಿಂದ ದೂರ ಮಾಡುವುದು ಚೀನಾದ ದುರುದ್ದೇಶ. ನಾವು ಭೂಗೋಳದ ನಕ್ಷೆಯನ್ನು ಗಮನಿಸಿದರೆ ನಮ್ಮ ಈಶಾನ್ಯ ರಾಜ್ಯಗಳು ಚೀನಾ ಆಕ್ರಮಿತ ಟಿಬೆಟ್ ಮತ್ತು ಬಾಂಗ್ಲಾದೇಶದ ನಡುವೆ ಇರುವುದು ಕಾಣಿಸುತ್ತದೆ. ಈ ರಾಜ್ಯಗಳಲ್ಲಿ ಅಸ್ಥಿರತೆ ಉಂಟು ಮಾಡಲು ಈಗಾಗಲೇ ಏನೆಲ್ಲಾ ಪ್ರಯತ್ನಗಳನ್ನು ಮಾಡಬಹುದೋ ಅದನ್ನೆಲ್ಲ ಚೀನಾ ಮಾಡುತ್ತಿದೆ. ಈ ರಾಜ್ಯಗಳಲ್ಲಿರುವ ಭಯೋತ್ಪಾದಕ ಸಂಘಟನೆಗಳಿಗೆ ಚೀನಾ ಅಕ್ರಮವಾಗಿ ಶಸ್ತ್ರಾಸ್ತ್ರಗಳನ್ನು ಹಾಗೂ ಮಾದಕ ವಸ್ತುಗಳನ್ನು ಪೂರೈಸುತ್ತಿದೆ. ಈಗ ಬಾಂಗ್ಲಾದೇಶ ಮತ್ತು ಭಾರತದ ಸಂಬಂಧವನ್ನು ಕೆಡಿಸಲು ಹೊರಟಿದೆ.

ಇದರಲ್ಲಿ ಯಶಸ್ವಿಯಾದರೆ ಬಾಂಗ್ಲಾದೇಶ ತನ್ನ ತೆಕ್ಕೆಗೆ ಬಂದು ಬೀಳುತ್ತದೆ ಎಂಬ ಲೆಕ್ಕಾಚಾರ ಡ್ರ್ಯಾಗನ್ ದೇಶದ್ದು. ಅದೃಷ್ಟವ ಶಾತ್ ಶೇಖ್ ಹಸೀನಾ ಅವರಿಗೆ ಈ ಪರಿಸ್ಥಿತಿ ಚೆನ್ನಾಗಿಯೇ ಅರ್ಥವಾಗಿದೆ. ಅವರು ಚೀನಾದ ಎಲ್ಲಾ ಕಳ್ಳಾಟಗಳಿಗೂ ತಿರುಗೇಟು ನೀಡುತ್ತಿದ್ದಾರೆ. ಭಾರತವನ್ನು ಬಹಿಷ್ಕರಿಸಿ ಎಂದು ವಿರೋಧ ಪಕ್ಷಗಳು ಕೂಗೆಬ್ಬಿಸಿದಾಗ ಶೇಖ್ ಹಸೀನಾ ಎಲ್ಲಿಯವರೆಗೆ ಹೋಗಿ ಅದನ್ನು ಖಡಾಖಂಡಿತವಾಗಿ ವಿರೋಧಿಸಿದ್ದಾರೆ ಅಂದರೆ, ‘ನೀವು ನಿಮ್ಮ ಹೆಂಡತಿಯರ ಭಾರತೀಯ ಸೀರೆಗಳನ್ನು ಸುಟ್ಟು ಹಾಕಿದರೆ ಮಾತ್ರ ನಿಜವಾಗಿಯೂ ಭಾರತದ ಉತ್ಪನ್ನಗಳನ್ನು ಬಹಿಷ್ಕರಿಸಿದಂತೆ ಆಗುತ್ತದೆ’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಬಾಂಗ್ಲಾದೇಶದ ಪ್ರತಿಪಕ್ಷವಾದ ಬಿಎನ್‌ಪಿ ಯಾವಾಗಲೂ ಭಾರತ ವಿರೋಧಿ ನೀತಿಯನ್ನೇ ಅನುಸರಿಸುತ್ತಾ ಬಂದಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಪ್ರಧಾನಿ ನರೇಂದ್ರ ಮೋದಿಯವರು ಢಾಕಾಕ್ಕೆ ಭೇಟಿ ನೀಡಿದಾಗ ಅಲ್ಲಿ ನಡೆದ ಪ್ರತಿಭಟನೆಗಳು ಹಾಗೂ ಹಿಂಸಾಚಾರದಲ್ಲಿ ಬಿಎನ್‌ಪಿ ಸಕ್ರಿಯವಾಗಿ ಪಾಲ್ಗೊಂಡಿತ್ತು. ಬಾಂಗ್ಲಾದೇಶದ ಸ್ವಾತಂತ್ರ್ಯೋತ್ಸವದ ಸುವರ್ಣ ಮಹೋತ್ಸವಕ್ಕಾಗಿ ಮೋದಿ ಅಲ್ಲಿಗೆ ಭೇಟಿ ನೀಡಿದ್ದರು. ಬಾಂಗ್ಲಾದೇಶಕ್ಕೆ ಪಾಕಿಸ್ತಾನದಿಂದ ಸ್ವಾತಂತ್ರ್ಯ ಕೊಡಿಸಿದ್ದೇ ಭಾರತ ಎಂಬುದು ನೆನಪಿದೆ ಯಲ್ಲವೇ? ಆದರೆ ಬಿಎನ್‌ಪಿ ನಾಯಕಿ ಖಲೀದಾ ಜಿಯಾ ಭಾರತದ ವಿಷಯದಲ್ಲಿ ಡಬಲ್ ಗೇಮ್ ಆಡುತ್ತಿದ್ದಾರೆ. ಒಂದು ಕಡೆ ಅವರ ಪಕ್ಷವು ಭಾರತವನ್ನು ವಿರೋಧಿಸುತ್ತದೆ, ಇನ್ನೊಂದು ಕಡೆ ಅವರದೇ ಪಕ್ಷದ ಒಂದು ಬಣವು ಭಾರತದೊಂದಿಗೆ ಒಳ್ಳೆಯ ಸಂಬಂಧ ಹೊಂದಬೇಕು ಎಂದು ಪ್ರತಿಪಾದಿಸುತ್ತದೆ.

ಆದರೆ ಬಿಎನ್ ಪಿಯಲ್ಲಿ ಯಾವಾಗಲೂ ಮೂಲಭೂತವಾದಿಗಳ ಮಾತೇ ನಡೆಯುತ್ತದೆ. ಏಕೆಂದರೆ ಅವರೇ ಅದರಲ್ಲಿ ಬಹುಸಂಖ್ಯಾತರು. ಆದರೆ ಇಂತಹದ್ದೊಂದು ಪರ-ವಿರೋಧದ ವ್ಯವಸ್ಥೆಯನ್ನು ಖಲೀದಾ ಜಿಯಾ ಅವರೇ ಮಾಡಿಟ್ಟಿದ್ದಾರೆ ಎಂದೂ ಹೇಳಲಾಗುತ್ತದೆ. ಅವರೇ ಈ ರಣತಂತ್ರದ ಹಿಂದಿನ ಮಾಸ್ಟರ್ ಮೈಂಡ್ ಎಂಬ ಶಂಕೆಯಿದೆ. ಹೀಗಾಗಿ ಖಲೀದಾ ಜಿಯಾ
ಮತ್ತು ಚೀನಾ ನಡುವೆ ಏನಾದರೂ ಅಕ್ರಮ ಒಪ್ಪಂದ ಏರ್ಪಟ್ಟಿದೆಯೇ ಎಂಬ ಅನುಮಾನಗಳು ಮೂಡಿವೆ! ಆದರೂ ಕಳೆದ ಚುನಾವಣೆಯ ಸಮಯದಲ್ಲಿ ಖಲೀದಾ ಜಿಯಾಗೆ ಚೀನಾ ಬೆಂಬಲ ನೀಡಲಿಲ್ಲ. ಏಕೆಂದರೆ ಆಕೆಗೆ ಅಮೆರಿಕ ಬೆಂಬಲ ನೀಡಿತ್ತು. ಆ ಕಾರಣಕ್ಕಾಗಿ ಚೀನಾ ತನ್ನ ಅಂತರ ಕಾಯ್ದುಕೊಂಡಿತ್ತು. ಅಥವಾ ಶೇಖ್ ಹಸೀನಾ ಅವರನ್ನೇ ತಮ್ಮತ್ತ ಸೆಳೆದುಕೊಂಡು ಲಾಭ ಮಾಡಿಕೊಳ್ಳುವ ಉದ್ದೇಶದಿಂದ ಖಲೀದಾ ಜಿಯಾರನ್ನು ಚೀನಾ ವಿರೋಧಿಸಿದ್ದರೂ ಇರಬಹುದು.

ಚೀನಾಕ್ಕೆ ತಾನು ಮಿಲಿಟರಿ ಶಕ್ತಿಯಿಂದ ಭಾರತವನ್ನು ಮಣಿಸುವುದು ಸಾಧ್ಯವಿಲ್ಲ ಎಂಬುದು ಕೊನೆಗೂ ಮನವರಿಕೆಯಾಗಿದೆ. ಗಲ್ವಾನ್‌ನಲ್ಲಿ ಭಾರತ ನೀಡಿದ ಪ್ರಬಲ ತಿರುಗೇಟನ್ನು ಗಮನಿಸಿದ ಮೇಲೆ ಭಾರತದ ಶಕ್ತಿಯೇನು ಮತ್ತು ಗಡಿ ವಿವಾದಗಳ ವಿಷಯ ದಲ್ಲಿ ಭಾರತದ ಕಠಿಣ ನಿಲುವು ಏನು ಎಂಬುದು ಚೀನಾಕ್ಕೆ ಸ್ಪಷ್ಟವಾಗಿ ಅರಿವಿಗೆ ಬಂದಿದೆ. ಹೀಗಾಗಿ ಮಿಲಿಟರಿಯನ್ನು ಬಳಸಿಕೊಂಡು ಭಾರತದ ಮೇಲೆ ಸವಾರಿ ಮಾಡುವುದು ಸಾಧ್ಯವಿಲ್ಲ ಎಂದಮೇಲೆ ಬೇರೆ ಇನ್ನಾವುದಾದರೂ ದಾರಿ ಬಳಸಿ ಭಾರತವನ್ನು ದುರ್ಬಲಗೊಳಿಸಬೇಕು ಎಂದು ಚೀನಾ ಹೊರಟಿದೆ. ಆಗ ಅದಕ್ಕೆ ಕಾಣಿಸಿದ್ದೇ ಆರ್ಥಿಕ ರಣತಂತ್ರ. ಜಗತ್ತಿನ ಆರ್ಥಿಕ ಶಕ್ತಿಕೇಂದ್ರವಾಗಿ ಸದ್ಯ ಚೀನಾ ಇದೆ. ಭವಿಷ್ಯದಲ್ಲಿ ಆ ಸ್ಥಾನವನ್ನು ಭಾರತ ಆಕ್ರಮಿಸಿಕೊಳ್ಳುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

೧೯೭೮ರಲ್ಲಿ ಜಾಗತೀಕರಣಕ್ಕೆ ಚೀನಾ ತೆರೆದುಕೊಂಡ ಲಾಗಾಯ್ತಿನಿಂದಲೂ ಆ ದೇಶದ ಆರ್ಥಿಕಾಭಿವೃದ್ಧಿ ದರ ಶೇ.೯ರಷ್ಟು ಮಾತ್ರ ಇತ್ತು. ಕೋವಿಡ್ ಮಹಾಮಾರಿಯ ಸಮಯದಲ್ಲಿ ಅದು ಶೇ.೨.೨ಕ್ಕೆ ಕುಸಿದಿತ್ತು. ಕೋವಿಡ್ ನಂತರ ಕೆಲ ಸಮಯದಲ್ಲೇ ಚೀನಾದ
ಆರ್ಥಿಕತೆಯ ಬೆಳವಣಿಗೆ ದರ ಶೇ.೮ರ ಆಸುಪಾಸಿಗೆ ಬಂದು ತಲುಪಿದೆ. ಆದರೆ, ೨೦೨೩ರಲ್ಲಿ ಅದು ಒಟ್ಟಾರೆ ಕೇವಲ ಶೇ.೫.೨ರಷ್ಟು ಮಾತ್ರ ಅಭಿವೃದ್ಧಿ ಸಾಧಿಸಲು ಸಾಧ್ಯವಾಗಿದೆ. ಅದಕ್ಕೆ ಹೋಲಿಸಿದರೆ ಭಾರತದ ಆರ್ಥಿಕತೆ ೨೦೨೩ರಲ್ಲಿ ಶೇ.೭.೨ರಷ್ಟು ದರದಲ್ಲಿ ಅಭಿವೃದ್ಧಿ ಹೊಂದಿದೆ.

ಎಲ್ಲಾ ಅಡೆತಡೆಗಳ ನಡುವೆಯೂ ಭಾರತ ಹೀಗೆ ಶರವೇಗದಲ್ಲಿ ಆರ್ಥಿಕಾಭಿವೃದ್ಧಿ ಸಾಧಿಸುತ್ತಿರುವುದು ಚೀನಾವನ್ನು ಕಂಗೆಡಿಸಿದೆ. ‘ನಿಮಗೆ ಉದ್ದ ಗೆರೆ ಎಳೆಯಲು ಸಾಧ್ಯವಿಲ್ಲವಾದರೆ ಬೇರೆಯವರು ಎಳೆದ ಗೆರೆಯನ್ನು ಸ್ವಲ್ಪ ಅಳಿಸಿಬಿಡಿ’ ಎಂಬ ಗಾದೆಯೇ ಇದೆಯಲ್ಲವೇ? ಚೀನಾದ ರಣತಂತ್ರ ಕೂಡ ಇದೇ ಆಗಿದೆ. ಅದು ಭಾರತದ ಅಭಿವೃದ್ಧಿಯ ದಾರಿಯಲ್ಲಿ ಕಲ್ಲು ಮುಳ್ಳುಗಳನ್ನು ಎಸೆಯುತ್ತಿದೆ. ಎಷ್ಟು ಸಾಧ್ಯವೋ ಅಷ್ಟು ಅಡ್ಡಿಯುಂಟುಮಾಡಿ ಭಾರತದ ಪ್ರಗತಿಗೆ ತಣ್ಣೀರೆರಚಲು ಯತ್ನಿಸುತ್ತಿದೆ. ಈ ನೀತಿಯ ಅಂಗವಾಗಿಯೇ ನೆರೆರಾಷ್ಟ್ರಗಳಲ್ಲಿ ಭಾರತದ ಆರ್ಥಿಕ ಚಟುವಟಿಕೆಗಳನ್ನು ತಗ್ಗಿಸಲು ಷಡ್ಯಂತ್ರ ರೂಪಿಸಿದೆ. ಆದರೆ ಭಾರತಕ್ಕೆ ಚೀನಾದ ಈ ಕುತಂತ್ರಗಳ ಬಗ್ಗೆ ತಿಳಿದಿದೆ. ಇದಕ್ಕೆಲ್ಲ ಹೇಗೆ ತಿರುಗೇಟು ನೀಡಬೇಕು ಎಂಬುದೂ ಭಾರತಕ್ಕೆ ಗೊತ್ತಿದೆ.

ತನ್ನ ದಾರಿಯಲ್ಲಿ ಬರುವ ಎಲ್ಲಾ ಅಡೆತಡೆಗಳನ್ನೂ ಅನಾಮತ್ತಾಗಿ ಕಿತ್ತೆಸೆಯುವ ಸಾಮರ್ಥ್ಯ ಭಾರತಕ್ಕೆ ಇರುವುದರಿಂದ ನಮ್ಮ ಆರ್ಥಿಕಾಭಿವೃದ್ಧಿಯ ಓಟವನ್ನು ಯಾರೂ ತಡೆದು ನಿಲ್ಲಿಸಲು ಸಾಧ್ಯವಿಲ್ಲ. ಚೀನಾಕ್ಕೆ ಮತ್ತು ಅದರ ತಾಳಕ್ಕೆ ತಕ್ಕಂತೆ ಕುಣಿಯುವ ಎಲ್ಲರಿಗೂ ಇದು ತಿಳಿದಿರಲಿ.